May your mind be pure 
ಧಾರ್ಮಿಕ

ತನು ಮನ ಶುದ್ಧವಾಗಿರಲಿ

ಬಾಬುಪ್ರಸಾದ್​ ಮೋಡಿಸ್​
ಒಮ್ಮೆಒಬ್ಬ ಭಕ್ತ ಗುರುಗಳನ್ನು ಮನೆಗೆ ಕರೆದು ಪ್ರಸಾದ ಮಾಡಿಸಿದ್ದ. ಗುರುಗಳು ಪ್ರಸಾದ ಮಾಡಿ ರಾತ್ರಿ ಮಲಗುವರು. ಬೆಳಗಿನ ಜಾವ ಭಕ್ತರ ಮನೆಯಲ್ಲಿನ ಆಕಳನ್ನು ಗುರುಗಳೇ ಕದ್ದು ಒಯ್ಯುವರು. ಮರುದಿನ ಮುಂಜಾನೆ ಆ ಆಕಳನ್ನು ಭಕ್ತರ ಮನೆಗೆ ಹಿಂದಿರುಗಿಸಿ, ತಾನು ಹಾಗೇಕೆ ಮಾಡಿದೆ ಎಂಬುದನ್ನು ಭಕ್ತನಿಗೆ ಮನಗಾಣಿಸುವರು. ನೀನು ನಿನ್ನೆ ಅಡುಗೆ ಮಾಡಿಸಿದ ಸಾಮಗ್ರಿ ಎಲ್ಲಿ ತಂದಿರುವೆ? ಎಂದು ಕೇಳುವರು. ಆತ ಎಲ್ಲ ಸಾಮಾನುಗಳನ್ನು ಕದ್ದು ತಂದು ಅಡುಗೆ ಮಾಡಿಸಿರುವೆನು ಎಂದು ಉತ್ತರಿಸುವನು. ಆಗ, ಅಡುಗೆ ಮಾಡಲು ಸಾಮಗ್ರಿ ತಂದವರು ಒಳ್ಳೆಯ ರೀತಿಯಿಂದ ತರದಿದ್ದರೆ, ಶುದ್ಧ ಮನದಿಂದ ಅಡುಗೆ ಮಾಡದಿದ್ದರೆ ಅದು ಊಟ ಮಾಡಿದವರ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ತೋರಿಸಲು ಹೀಗೆ ಮಾಡಿದೆ ಎನ್ನುವರು.

ಅದಕ್ಕೆ ‘ತನು ಮನ ಧನ ಶುದ್ಧವಾಗಿರಿಸಿ ಸಾಮಾನು ತಂದು ದಾಸೋಹ ಮಾಡಬೇಕು. ಇದೆಲ್ಲವನ್ನು ಮತ್ತು ಆ ಭಕ್ತರ ಜೀವನ ಕ್ರಮವನ್ನು ವಿಚಾರಿಸದೆ ಆ ಮನೆಯಲ್ಲಿ ಹೋಗಿ ಲಿಂಗಾರ್ಚನೆಯ ಮಾಡುವ ಜಂಗಮಕ್ಕೆ ಏಳನೆಯ ಪಾತಕ ತಪ್ಪದು... ಕೂಡಲ ಸಂಗಮದೇವ’ ಎಂದು ಚೆನ್ನಬಸವಣ್ಣನವರು ತಿಳಿಸಿದ್ದಾರೆ.
ಅದಕ್ಕೆ ಉದಾಹರಣೆಯಾಗಿ ಬಸವಣ್ಣನವರು ಒಳ್ಳೆಯ ದಾರಿ ಬಿಟ್ಟು ಕೆಟ್ಟ ದಾರಿ ತುಳಿಯುವವರಿಗೆ ಚಾಟಿ ಏಟು ಕೊಡುತ್ತಾರೆ. ಇನ್ನೊಂದು ಕಡೆ ‘ಸುರೆಯ ಗಡಿಗಿಯ ಹೊರಗೆ ಬೂದಿಯ ಹುಸಿದರೇನು ಒಳಗೆ ಶುದ್ಧವಾಗದನ್ನಕ್ಕರಣ! ಎನ್ನುತ್ತಾರೆ. ನಾವು ಬೇಕಾದಷ್ಟು ಕಾಯಕ ದಾಸೋಹವ ಮಾಡಿದರೇನು, ತನು ಮನಗಳು ಶುದ್ಧವಿಲ್ಲದಿದ್ದರೆ? ಎನ್ನುವುದನ್ನು ಯೋಚಿಸಬೇಕು. ಸುರೆಯ ಗಡಿಗೆಯನ್ನು ಹೊರಗೆ ತೊಳೆದೆರೆ ಒಳಗಿನ ಹೊಲಸು ವಾಸನೆ ಹೋಗುವುದಿಲ್ಲ. ಅದಕ್ಕೆ ಅಂತರಂಗ ಬಹಿರಂಗ ಶುದ್ಧವಾಗಿ ತನು ಮನ ಧನ ಶುದ್ಧಿಯಿಂದ ಕಾಯಕ ದಾಸೋಹ ಮಾಡಿದರೆ ಅದು ಶಿವಶರಣರಿಗೆ ಪ್ರಿಯವಾಗುತ್ತದೆ.