Jesus  
ಧಾರ್ಮಿಕ

ಪ್ರೇಷಿತ ಶಿಷ್ಯರಿಗೆ ಯೇಸು ನೀಡಿದ ಆದೇಶ

ಬಾಬುಪ್ರಸಾದ್​ ಮೋಡಿಸ್​
ಆ ಆದೇಶ ಹೇಗಿತ್ತೆಂದರೆ: ‘ಪರಕೀಯರು ಹಾಗೂ ಸಮಾರಿಯದವರ ಬಳಿಗೆ ಹೋಗಲೇ ಬೇಡಿ.ಬದಲಾಗಿ, ತಪ್ಪಿಹೋದ ಕುರಿಗಳಿಂತಿರುವ ಇಸ್ರೇಲ್ ಜನರು ಬಾಳುತ್ತಿರುವಲ್ಲಿ ಹೋಗಿ. ಅವರಿಗೆಲ್ಲ ಸ್ವರ್ಗ ಸಾಮ್ರಾಜ್ಯ ಸಮೀಪಿಸಿದೆ ಎಂದು ಬೋಧಿಸಿ. ಅಷ್ಟು ಮಾಡಿದರೆ ಸಾಲದು, ನನ್ನ ನಾಮದಲ್ಲಿ ರೋಗಿಗಳನ್ನು ಗುಣಪಡಿಸಿರಿ, ಸತ್ತವರನ್ನು ಮತ್ತೆ ಬದುಕಿಸಿರಿ, ಕುಷ್ಠ ರೋಗಿಗಳನ್ನು ಸ್ವಸ್ಥಪಡಿಸುತ್ತ, ದೆವ್ವಗಳನ್ನು ಬಿಡಿಸಿರಿ. ನೀವು ಉಚಿತವಾಗಿ ಆ ಜನರಿಂದ ಏನಾದರೂ ಪಡೆದರೆ ಅದನ್ನು ಜನರಿಗೆ ಉಚಿತವಾಗಿಯೇ ಹಂಚಿರಿ.
ನಿಮ್ಮ ಜೇಬುಗಳಲ್ಲಿ ಚಿನ್ನ, ಬೆಳ್ಳಿ, ತಾಮ್ರವಾಗಲಿ, ಪ್ರಯಾಣಕ್ಕೆಂದು ಜೋಳಿಗೆಯನ್ನಾಗಲಿ, ಎರಡು ಅಂಗಿಗಳನ್ನಾಗಲಿ, ನಿಮ್ಮ ಕಾಲುಗಳುಗಳಿಗೆ ಪಾದರಕ್ಷೆಗಳನ್ನಾಗಲಿ ಅಥವಾ ಕೈಯಲ್ಲಿ ದಂಡವನ್ನಾಗಲಿ ಕೊಂಡೊಯ್ಯಬೇಡಿ. ಏಕೆಂದರೆ, ದುಡಿಮೆಗಾರನೇ ಜೀವನಾಧಾರಕ್ಕೆ ಬಾಧ್ಯಸ್ಥನಾಗುವನು.
ನೀವೊಂದು ಹಳ್ಳಿ ಅಥವ ಪಟ್ಟಣಕ್ಕೆ ಹೋದಾಗ, ಅಲ್ಲಿ ನಿಮ್ಮನ್ನು ಬರಮಾಡಿಕೊಳ್ಳಲು ಯೋಗ್ಯರು ಯಾರೆಂದು ಮೊದಲು ಅರಿತುಕೊಳ್ಳಿ. ಅಲ್ಲಿಂದ ಮುಂದೆ ಸಾಗುವವರೆಗೂ ಅವರಲ್ಲೇ ತಂಗಿರಿ. ನೀವು ಯಾವುದೇ ಮನೆಗೆ ಹೋದಾಗ, ಈ ಮನೆಗೆ ಶುಭವಾಗಲಿ ಎಂದು ಹರಸಿರಿ. ಆವರು ನಿಮ್ಮನ್ನು ಸ್ವಾಗತಿಸಿದಲ್ಲಿ ನಿಮ್ಮ ಆಶೀರ್ವಾದ ಅವರ ಮೇಲೆ ನೆಲಸಲಿ. ಇಲ್ಲದಿದ್ದಲ್ಲಿ ಅದು ನಿಮಗೇ ಹಿಂತಿರುಗಲಿ. ಯಾವುದೇ ಊರಾಗಲಿ, ಮನೆಯಾಗಲಿ ನಿಮ್ಮನ್ನು ಸ್ವಾಗತಿಸದಿದ್ದಲ್ಲಿ ಅಥವಾ ನಿಮ್ಮ ಮಾತಿಗೆ ಕಿವಿಗೊಡದಿದ್ದಲ್ಲಿ ಆ ಜಾಗ ಬಿಟ್ಟು ಮುಂದಕ್ಕೆ ಹೋಗಿ. ಹಾಗೆ ಹೋಗುವಾಗ, ನಿಮ್ಮ ಪಾದಗಳಿಗೆ ಅಂಟಿರುವ ಧೂಳನ್ನೂ ಝಾಡಿಸಿಬಿಡಿ. ಏಕೆಂದರೆ, ಅಂತಿಮ ತೀರ್ಪಿನ ದಿನ, ಅವರಿಗೆ ಯೋಗ್ಯ ತೀರ್ಪು ಲಭಿಸುತ್ತದೆ ಎಂದರು.