mind 
ಧಾರ್ಮಿಕ

ಪ್ರತಿಯೊಂದು ಮನಸ್ಸಿಗೂ ಸೃಜಿಸುವ ಸಾಮರ್ಥ್ಯವಿದೆ

ಬಾಬುಪ್ರಸಾದ್​ ಮೋಡಿಸ್​
ಶ್ರೀವಸಿಷ್ಠರು ಚಿತ್ತವೆಂಬ ಆತಿವಾಹಿಕ ಶರೀರವನ್ನು ಕುರಿತು ಹೇಳುತ್ತಿದ್ದಾರೆ. ಆತಿವಾಹಿಕ ಶರೀರಕ್ಕೆ ಬ್ರಹ್ಮಾಂಡವನ್ನು ಸೃಜಿಸುವ ಸಾಮರ್ಥ್ಯವಿದೆ. ಅದು ಯಾವ ಜೀವಾತ್ಮನಿಗೆ ಸೇರಿದ್ದೋ, ಆ ಜೀವಾತ್ಮನ ಪೂರ್ವ ವಾಸನಾನುಸಾರಿ ಸ್ಪುರಣೆಯು ಯಾವುದನ್ನು ತನ್ನಲ್ಲಿ ತಂದುಕೊಳ್ಳುತ್ತದೆಯೋ, ಆತಿವಾಹಿಕ ಶರೀರವು ಅದೇ ಆಗುತ್ತದೆ. ಅಂದರೆ ಆತಿವಾಹಿಕ ಶರೀರವು ಅದನ್ನೇ ಸೃಜಿಸಿಕೊಳ್ಳುತ್ತದೆ.
ಚತುಮುಖ ಬ್ರಹ್ಮನೆಂಬ ಜೀವಾತ್ಮನ ಆತಿವಾಹಿಕ ಶರೀರವು ಬ್ರಹ್ಮಾಂಡವನ್ನೇ ಸೃಜಿಸುತ್ತದೆ. ಅದಕ್ಕೆ ಅವನ ಹಿಂದಿನ ವಾಸನಾನುಸಾರಿಯಾದ ಸ್ಪೂರ್ತಿಯೇ ಕಾರಣ. ಇಷ್ಟೊಂದು ಸಾಮರ್ಥ್ಯದ್ದರೂ ಚಿತ್ತವು ಸ್ಥೂಲರೂಪವನ್ನು ಧರಿಸಿಕೊಂಡಂತೆ ಇದ್ದುಕೊಂಡು ಪರತಂತ್ರವಾಗಿದೆ. ಅಂದರೆ ಸ್ಥೂಲ ಶರೀರಾಭಿಮಾನವನ್ನು ಬೆಳೆಸಿಕೊಂಡಿದ್ದರಿಂದ ಚಿತ್ತವು ತಾನೂ ಸ್ಥೂಲವೆಂಬಂತೆ ಆಗಿದೆ. ಯೋಗ-ಜ್ಞಾನಗಳ ಸಾಧನೆಯಿಲ್ಲದಿರು ವುದು ಇದಕ್ಕೆ ಕಾರಣ. ಹೀಗೆ ಸ್ಥೂಲವೆಂಬಂತೆ ಆಗಿದ್ದರಿಂದ ಚಿತ್ತಕ್ಕೆ ಮರಣಾನಂತರವೂ ಸೂಕ್ಷ್ಮರಂಧ್ರದಲ್ಲಿ ಪ್ರವೇಶಿಸಲು ಸಾಧ್ಯವಾಗ ದಂತಾಗಿದೆ. ಚಿತ್ತಕ್ಕೆ ಒಂದು ರೀತಿಯ ಪಾರತಂತ್ರ್ಯ ಬಂದಿದೆ. ತನ್ನ ಶಕ್ತಿಯು ಮುಚ್ಚಿಹೋದಾಗ ದೌರ್ಬಲ್ಯ ಆವರಿಸುತ್ತದೆ. ಇದೇ ಇಲ್ಲಿ ಬಂದಿರುವ ಪಾರತಂತ್ರ್ಯ.
ಆದರೆ ಚಿತ್ತದ ನಿಜವಾದ ಸಾಮರ್ಥ್ಯ ಪ್ರಕಟವಾದರೆ ಅದು ಸರ್ವಶಕ್ತವಾಗಿರುವುದು ಗೊತ್ತಾಗುತ್ತದೆ. ಅಲ್ಲದೇ ಚಿತ್ತವೇ ಸರ್ವಜಗತ್ತೂ ಆಗಿದೆ. ಚತುಮುಖ ಬ್ರಹ್ಮನೆಂಬ ಜೀವಾತ್ಮನ ಆತಿವಾಹಿಕ ಶರೀರದಲ್ಲಿ ಇದನ್ನು ನಾವು ಕಾಣುತ್ತೇವೆ. ಯೋಗ- ಜ್ಞಾನಗಳ ಸಾಧನೆಯ ಮೂಲಕ ತತ್ತ್ವಜ್ಞಾನವನ್ನು ಪಡೆದರೆ ಚಿತ್ತಕ್ಕೆ ಯಾವುದೇ ತಡೆ ಇರುವುದಿಲ್ಲ. ಮತ್ತು ಆಗ ಅದು ಸ್ವತಂತ್ರವಾಗುತ್ತದೆ. ಅಂದರೆ ಹಿಂದೆ ಹೇಳಿದಂತೆ ಪಾರತಂತ್ರ್ಯ ಅದಕ್ಕೆ ಇರುವುದಿಲ್ಲ.
ಈ ಹಂತದಲ್ಲಿ ಶ್ರೀರಾಮನ ಪ್ರಶ್ನೆ - ‘ಪೂಜ್ಯರೇ, ನನಗೆ ಈಗ ಬರುವ ಪ್ರಶ್ನೆ ಏನೆಂದರೆ ನಮ್ಮಲ್ಲಿ ಒಬ್ಬೊಬ್ಬರ ಚಿತ್ತಕ್ಕೂ ಇದೇ ರೀತಿ ಶಕ್ತಿ ಇದೆಯೇ? ಇಲ್ಲವೆ? ಒಬ್ಬೊಬ್ಬರ ಚಿತ್ತಕ್ಕೂ ಇಂತಹ ಶಕ್ತಿ ಇರುವುದಾದರೆ ಒಬ್ಬೊಬ್ಬರ ಚಿತ್ತವೂ ಒಂದೊಂದು ರೀತಿಯಲ್ಲಿ ಜಗತ್ತಿನ ಸೃಷ್ಟಿಮಾಡಬಹುದು. ಮತ್ತು ಹಾಗೆ ಸೃಷ್ಟಿಸಲ್ಪಟ್ಟ ಜಗತ್ತುಗಳೆಲ್ಲ ಇದ್ದದ್ದಾಗಿಯೇ ಅನುಭವಕ್ಕೆ ಬರಬೇಕಾಗುತ್ತದೆ. (ಸ್ವಪ್ನದಂತೆ ಕಲ್ಪನೆಯಾಗಿ ಅಲ್ಲ.) ಇನ್ನು ಪ್ರತಿಯೊಬ್ಬರ ಚಿತ್ತಕ್ಕೂ ಈ ರೀತಿಯ ಶಕ್ತಿ ಇಲ್ಲವೆಂದಾದರೆ ಚಿತ್ತದಿಂದಲೇ ಜಗತ್​ಸೃಷ್ಟಿ ಎಂಬ ಮಾತು ಕೈಬಿಟ್ಟು ಹೋಗುತ್ತದೆ. ಜಗತ್ತು ಚಿತ್ತದ ಹೊರತಾಗಿಯೇ ಸೃಷ್ಟಿಸಲ್ಪಟ್ಟಿದೆ ಎಂಬ ಮಾತು ಸಿದ್ಧವಾಗುತ್ತದೆ. ಈ ಮಾತು ಎಲ್ಲರ ಅನುಭವಕ್ಕೂ ಸರಿಹೋಗುತ್ತದೆ. ಅಲ್ಲದೇ ಜ್ಞಾನಸಾಧನೆಯಿಂದ ಚಿತ್ತದ ನಾಶವಾದರೂ ಜಗತ್ತು ಮೊದಲಿನಂತೆಯೇ ಮುಂದುವರಿಯುತ್ತದೆ ಎಂದಾಗುತ್ತದೆ. ಆದ್ದರಿಂದ ನಮ್ಮಲ್ಲಿ ಪ್ರತಿಯೊಬ್ಬರ ಚಿತ್ತಕ್ಕೂ ಹಿಂದೆ ಹೇಳಿದ ಶಕ್ತಿ ಇದೆಯೇ, ಇಲ್ಲವೇ?’
ಶ್ರೀವಸಿಷ್ಠರು ಇದಕ್ಕೆ ಉತ್ತರಿಸುತ್ತಿದ್ದಾರೆ - ‘ಶ್ರೀರಾಮ! ಪ್ರತ್ಯೇಕವಾದ ಚಿತ್ತಕ್ಕೂ ಹಿಂದೆ ಹೇಳಿದಂತೆ ಜಗತ್ತನ್ನು ಸೃಜಿಸುವ ಶಕ್ತಿ ಇದೆ. ಆದ್ದರಿಂದ ಜಗತ್ತಿನ ತೋರಿಕೆಯು ಬೇರೆ ಬೇರೆಯಾದ ಚಿತ್ತಗಳಿಂದ ಬೇರೆ ಬೇರೆಯಾಗಿಯೇ ಉದಯಿಸುತ್ತದೆ. (ಪ್ರತಿಚಿತ್ತಂ ಜಗದ್ಭ›ಮಃ) ಅಂದರೆ ಜಗತ್ತು ಸತ್ಯವೆಂಬ ಭ್ರಮೆಯು ಪ್ರತಿಯೊಂದು ಚಿತ್ತಕ್ಕೂ ಬೇರೆ ಬೇರೆಯಾಗಿಯೇ ಇದೆ. ಯಾರೋ ಒಬ್ಬನಿಗೆ ಒಂದು ಕ್ಷಣದಲ್ಲಿಯೇ ಜಗತ್ತಿನ ಸಮೂಹಗಳು ಉದಯಿಸುತ್ತವೆ ಮತ್ತು ನಾಶವಾಗುತ್ತವೆ. ಯಾರೋ ಇನ್ನೊಬ್ಬನಿಗೆ ಒಂದು ಕಲ್ಪದಷ್ಟು ದೀರ್ಘಕಾಲದಲ್ಲಿ ಜಗತ್ತುಗಳ ಸಮೂಹಗಳು ಉದಯಿಸುತ್ತವೆ ಮತ್ತು ನಾಶವಾಗುತ್ತವೆ. ಹಾಗಿದ್ದರೆ ಯಾರಿಗೆ ಕ್ಷಣಮಾತ್ರದಲ್ಲಿ ಆಗುತ್ತದೆ? ಮತ್ತು ಯಾರಿಗೆ ಕಲ್ಪದಷ್ಟು ಕಾಲದಲ್ಲಿ ಆಗುತ್ತದೆ? ಎಂದು ಕೇಳಬಹುದು. ಇದಕ್ಕೊಂದು ಕ್ರಮವಿದೆ. ಅದನ್ನು ಹೇಳುತ್ತೇನೆ ಕೇಳು. ಒಟ್ಟಾರೆ ಪ್ರತಿವ್ಯಕ್ತಿಯ ಚಿತ್ತಕ್ಕೂ ಜಗತ್ತನ್ನು ಸೃಜಿಸುವ ಸಾಮರ್ಥ್ಯು ಪ್ರತ್ಯೇಕವಾಗಿದೆ.’
‘ಹಾಗಿದ್ದರೆ ಮಹಾಪ್ರಳಯದ ಅನಂತರ ಪುನಃ ಸೃಷ್ಟಿಯಾಗುವುದೆಂದು ಅನೇಕರು ಹೇಳುತ್ತಾರೆ. ಈ ಮಾತು ಹೇಗೆ ಬಂತು? ಇದಕ್ಕೆ ಉತ್ತರ - ಸಮಷ್ಟಿ ಸೃಷ್ಟಿಯ ಬಗ್ಗೆ ಮತ್ತು ಸಮಷ್ಟಿ ಪ್ರಳಯದ ಬಗ್ಗೆ ಅನಂತರ ಹೇಳುತ್ತೇನೆ. ವ್ಯಷ್ಟಿಯ ಬಗ್ಗೆ ಮೊದಲು ಹೇಳುತ್ತೇನೆ. ಮೂರ್ಛಾವಸ್ಥೆಯಲ್ಲಿ ಅರ್ಧ ಮರಣ ಮತ್ತು ಅರ್ಧ ಜೀವನ ಇರುತ್ತದೆ. ಇದು ಎಲ್ಲರಿಗೂ ಅನುಭವದಲ್ಲಿದೆ. (‘ಮುಗ್ಧೇ ಅರ್ಧಸಂಪತ್ತಿಃ ಪರಿಶೇಷಾತ್ (ಬ್ರ.ಸೂ.3.2.10)ಎಂಬ ವೇದಾಂತ ಸೂತ್ರದಲ್ಲಿ ಇದನ್ನು ಹೇಳಿದ್ದಾರೆ.) ಅಂದರೆ ಮೂರ್ಛೆಯಲ್ಲಿ ವ್ಯಕ್ತಿಯು ಅರ್ಧ ಸತ್ತಿರುತ್ತಾನೆ. ಮೂರ್ಛಾವಸ್ಥೆಯಿಂದ ಹೊರಬಂದಾಗ ಹಿಂದಿನ ಸಂಗತಿಗಳೆಲ್ಲ ಮರೆತು ಹೋಗಿ, ಹೊಸದಾಗಿ ಎಲ್ಲವೂ ಆರಂಭವಾಗಬೇಕಾಗುವ ಸಂದರ್ಭಗಳುಂಟು. ಇದುವೇ ವ್ಯಷ್ಟಿಯಲ್ಲಿ ಹೊಸ ಸೃಷ್ಟಿಯಾಗುವುದಕ್ಕೆ ಉದಾಹರಣೆ. ಇದೇ ರೀತಿಯಲ್ಲಿ ಮರಣಾವಸ್ಥೆ ಬಂದು ಪುನಃ ಜನ್ಮ ಬಂದಾಗ ವ್ಯಷ್ಟಿಯಲ್ಲಿ ಹೊಸ ಸೃಷ್ಟಿಯಾಗುತ್ತದೆ. ಆದ್ದರಿಂದ ವ್ಯಷ್ಟಿ ಸೃಷ್ಟಿಯಲ್ಲಿ ಹಿಂದಿನ ಮರಣವೇ ಮಹಾಪ್ರಳಯ. ಮರಣಾವಸ್ಥೆಯೇ ಮಹಾಪ್ರಳಯವೆಂಬ ರಾತ್ರಿ ಎಂಬುದಾಗಿ ತಿಳಿ
ಈ ಮರಣವೆಂಬ ಮಹಾಪ್ರಳಯದ ಮುಕ್ತಾಯ (ಅಂದರೆ ಪುನರ್ಜನ್ಮ) ವಾಗುತ್ತಿದ್ದಂತೆಯೇ ಪ್ರತಿಯೊಬ್ಬನೂ ಬೇರೆ ಬೇರೆಯಾಗಿಯೇ ಸೃಷ್ಟಿಯನ್ನು ಮಾಡಿಕೊಳ್ಳುತ್ತಾನೆ. ಸ್ವಾಭಾವಿಕವಾದ ಅವಿದ್ಯೆಯಿಂದ ಉಂಟಾಗುವ ಸುಷುಪ್ತ್ಯವಸ್ಥೆ, ಸ್ವಪ್ನಾವಸ್ಥೆ ಮತ್ತು ಜಾಗ್ರದವಸ್ಥೆಗಳನ್ನು ತನಗೆ ತಾನೇ ಸೃಷ್ಟಿಸಿಕೊಳ್ಳುತ್ತಾನೆ. ಮತ್ತು ಆ ಮೂರು ಅವಸ್ಥೆಗಳಲ್ಲಿ ಉಂಟಾಗುವ ವಿಷಯ ಸಂಕಲ್ಪಗಳನ್ನು ಸೃಷ್ಟಿಸಿಕೊಳ್ಳುತ್ತಾನೆ. ಸುಷುಪ್ತ್ಯವಸ್ಥೆಯಲ್ಲಿ ಸುಖವನ್ನು ಕುರಿತಾದ ಸೂಕ್ಷ್ಮ ಸಂಕಲ್ಪವಿರುತ್ತದೆ. ಸ್ವಪ್ನಾವಸ್ಥೆ ಮತ್ತು ಜಾಗ್ರದವಸ್ಥೆಯಲ್ಲಿ ಇರುವ ದೃಶ್ಯ ಸಂಕಲ್ಪಗಳು ಎಲ್ಲರಿಗೂ ತಿಳಿದಿವೆ. ಐಂದ್ರಜಾಲಿಕನ ಮಾಯಾಜಾಲದಿಂದ ಚಿತ್ತಸಂಮೋಹಕ್ಕೆ ಒಳಗಾದವನು ಪರ್ವತಗಳನ್ನು ಮತ್ತು ಆ ಪರ್ವತಗಳಲ್ಲಿ ನಡೆಯುತ್ತಿರುವ ನೃತ್ಯಗಳನ್ನು ಸಂಕಲ್ಪಿಸುವಂತೆ, ಅವಿದ್ಯೆಯ ಸಂಮೋಹಕ್ಕೆ ಒಳಗಾದವನು ಜಾಗ್ರತ್, ಸ್ವಪ್ನ, ಸುಷುಪ್ತಿಗಳ ವಿಷಯ ಸಂಕಲ್ಪಗಳನ್ನು ತಾನೇ ಸೃಷ್ಟಿಸಿಕೊಳ್ಳುತ್ತಾನೆ. (‘ತಸ್ಯ ತ್ರಯ ಆವಸಥಾಃ ತ್ರಯಃ ಸ್ವಪ್ನಾಃ’ ಎಂಬಲ್ಲಿ ಉಪನಿಷತ್ತು ಇದನ್ನೇ ಹೇಳುತ್ತದೆ.)
ಹೀಗೆ ಪ್ರತಿವ್ಯಕ್ತಿ ಬೇರೆ ಬೇರೆಯಾಗಿ ಸೃಷ್ಟಿಯನ್ನು ಮಾಡಿಕೊಳ್ಳುವುದಾದರೆ ಒಬ್ಬೊಬ್ಬರ ಸೃಷ್ಟಿಯು ಒಂದೊಂದು ತೆರನಾಗಿ ಇರಬೇಕಾಗಿತ್ತಲ್ಲವೇ? ಈ ಪ್ರಶ್ನೆಗೆ ಮುಂದೆ ಉತ್ತರ ಕೊಡಲಿದ್ದಾರೆ. ಸಮಷ್ಟಿ ಸೃಷ್ಟಿ ಮತ್ತು ಪ್ರಳಯಗಳನ್ನು ಜೊತೆಗೆ ಅರ್ಥಮಾಡಿಕೊಂಡಾಗ ಈ ಪ್ರಶ್ನೆಗೆ ಉತ್ತರ ಸಿಗುತ್ತದೆ.
-ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಸ್ವರ್ಣವಲ್ಲೀ ಮಹಾಸಂಸ್ಥಾನ, ಸೋಂದಾ, ಶಿರಸಿ