Akshaya Tritiya 
ಧಾರ್ಮಿಕ

ಪುಣ್ಯ ಸಂಗ್ರಹಣೆಗೆ ಮೀಸಲಾದ ಪವಿತ್ರ ದಿನ

ಗಣೇಶ ಭಟ್ಟ ಮಾಳ್ಕೋಡ
(ಲೇಖಕರು ಸಂಸ್ಕೃತ ಉಪನ್ಯಾಸಕರು)
ಬೇಸಿಗೆಯ ಪ್ರಖರವಾದ ಬೇಗೆ ಎಲ್ಲೆಲ್ಲೂ ವ್ಯಾಪಿಸಿರುವ ಸಮಯವಾದ ವೈಶಾಖ ಮಾಸದಲ್ಲಿ ಪರಶುರಾಮ ಜಯಂತಿ, ಶಂಕರ ಜಯಂತಿ, ನೃಸಿಂಹ ಜಯಂತಿ, ಕೂರ್ಮ ಜಯಂತಿ, ಶನೈಶ್ಚರ ಜಯಂತಿ ಮೊದಲಾದ ಧಾರ್ಮಿಕವಾಗಿ ಮಹತ್ವ ಪಡೆದ ಹಬ್ಬಗಳಲ್ಲಿ ಬಹು ಮುಖ್ಯವಾಗಿ ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯಾದಂದು ಆಚರಿಸಲ್ಪಡುವ ಹಬ್ಬವೇ ಅಕ್ಷಯ ತೃತೀಯಾ ಅಥವಾ ಅಕ್ಷಯ ತದಿಗೆ. ಅಕ್ಷಯ ತೃತೀಯೆ ಕೃತಯುಗದ ಆರಂಭದ ದಿನ. ವಿಷ್ಣುವಿನ ದಶಾವತಾರಗಳಲ್ಲಿ ಆರನೇ ಅವತಾರವಾದ ಜನ್ಮತಃ ಬ್ರಾಹ್ಮಣ ಹಾಗೂ ಕರ್ಮದಿಂದ ಕ್ಷತ್ರಿಯನಾದ ಪರಶುರಾಮರ ಅವತಾರವಾದ ದಿನ. ಅಂದರೆ ಪರಶುರಾಮ ಜಯಂತಿ. ಭಗೀರಥನ ಪ್ರಯತ್ನದಿಂದ ಗಂಗೆ ಭೂಮಿಗೆ ಬಂದ ದಿನ. ಸೂರ್ಯದೇವನು ಯುಧಿಷ್ಠಿರನಿಗೆ ಅಕ್ಷಯ ಪಾತ್ರೆ ನೀಡಿದ ದಿನ. ಹಿಂದೂ ಕೀರ್ತಿಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿದ ಛತ್ರಪತಿ ಶಿವಾಜಿ ಜನಿಸಿದ ದಿನವೂ ಹೌದು. ಕಲ್ಯಾಣಕ್ರಾಂತಿಯ ರೂವಾರಿ ಬಸವೇಶ್ವರರ ಜನ್ಮದಿನವೂ ಹೌದು. ಧಾರ್ಮಿಕ-ಸಾಮಾಜಿಕವಾಗಿ ಮಹತ್ವ ಪಡೆದ ಅಕ್ಷಯ ತೃತೀಯೆಯು ವರ್ಷದ ಮೂರೂವರೆ ಶುಭವಾದ, ಪುಣ್ಯವಾದ ಮುಹೂರ್ತಗಳಲ್ಲಿ ಒಂದಾಗಿದೆ. ಆ ಕಾರಣಕ್ಕಾಗಿ ಈ ದಿನದಂದು ಯಾವುದೇ ಶುಭ ಕಾರ್ಯವನ್ನು ಮಾಡಬಹುದು.
ಅಕ್ಷಯ ತೃತೀಯಾ ಮಹತ್ವವೇನು?: ನಿರ್ಣಯಸಿಂಧುವಿನ ಪ್ರಕಾರ ವೈಶಾಖ ಶುಕ್ಲ ತೃತೀಯಾ ಅಕ್ಷಯ ತೃತೀಯೋಚ್ಯತೇ || ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ದಿನವೇ ಅಕ್ಷಯ ತೃತೀಯಾ. ಈ ದಿನ ಸಂಗ್ರಹಿಸಿದ ಪುಣ್ಯಗಳಿಗೆ ಕ್ಷಯ (ನಾಶ) ಇಲ್ಲ ಎಂಬ ಕಾರಣಕ್ಕೆ ಈ ದಿನವನ್ನು ಅಕ್ಷಯ ತೃತೀಯಾ ಎಂದು ಕರೆಯಲಾಗಿದೆ. ಭವಿಷ್ಯ ಪುರಾಣದಲ್ಲಿ -
ಸ್ನಾನಂ ದಾನಂ ಜಪೋಹೋಮಃ ಸ್ವಾಧ್ಯಾಯಃ ಪಿತೃತರ್ಪಣಮ್ |
ಯದಸ್ಯಾಂ ಕ್ರಿಯತೇ ಕಿಂಚಿತ್ಸರ್ವಂ ಸ್ಯಾತ್ತದಿಹಾಕ್ಷಯಮ್ ||
ವೈಶಾಖ ಶುದ್ಧ ತೃತೀಯೆಯಲ್ಲಿ ಪುಣ್ಯಕ್ಷೇತ್ರಗಳಲ್ಲಿ ಮಾಡಿದ ಸ್ನಾನವು, ಸತ್ಪಾತ್ರರಿಗೆ ಮಾಡಿದ ದಾನವು, ಮಾಡುವ ಜಪವು, ಪಿತೃಗಳನ್ನು ಉದ್ದೇಶಿಸಿ ಕೊಟ್ಟ ತರ್ಪಣವು ಇತ್ಯಾದಿಯಾದ ಇತರ ಯಾವ ವಿಹಿತ ಕರ್ಮಗಳೂ ಯತ್ಕಿಂಚಿತ್ ಆದರೂ ಅವೆಲ್ಲವೂ ಈ ತಿಥಿ (ದಿನ) ಪ್ರಭಾವದಿಂದಲೇ ಅಕ್ಷಯವಾಗುವುದು. ಈ ದಿನ ಮಾಡಿದ ದಾನಮಾನಾದಿಗಳು ಸರ್ವಪಾಪನಾಶಕವೂ, ಸರ್ವಸೌಖ್ಯಪ್ರದಾಯಕವೂ ಆಗಿವೆ.
ಯತ್ಕಿಂಚಿತ್ ದೀಯತೇ ದಾನಂ ಸ್ವಲ್ಪಂ ವಾ ಯದಿ ವಾ ಬಹು |
ತತ್ಸರ್ವಂ ಅಕ್ಷಯಂ ಯಸ್ಮಾತ್ ತೆನೇಯಂ ಅಕ್ಷಯಾ ಸ್ಮೃತಾ ||
ಈ ದಿನದಂದು ಸ್ವಲ್ಪವಾಗಲಿ, ಬಹಳವಾಗಲಿ ಅಥವಾ ಎಷ್ಟೇ ದಾನ ಮಾಡಿದರೂ ಅದರ ಫಲ ಅಕ್ಷಯವಾಗುವುದು.
ಯಾ ಮನ್ವಾದ್ಯಾ ಯುಗಾದ್ಯಾಶ್ಚ ತಿಥಿಯಸ್ತಾಸು ಮಾನವಃ |
ಸ್ನಾತ್ವಾ ಹುತ್ವಾ ಚ ದತ್ವಾ ಚ ಜಪ್ತ್ವಾ ಅನಂತ ಫಲಂ ಲಭೇತ್ ||
ಅಕ್ಷಯ ಫಲದಾಯಿನಿಯಾದ ಈ ದಿನ ದೇವ-ಪಿತೃ ಪೂಜೆಗೆ ಪ್ರಶಸ್ತವಾಗಿದ್ದು, ಗಂಗಾದಿ ಪುಣ್ಯನದಿಗಳಲ್ಲಿ, ಸಮುದ್ರದಲ್ಲಿ ಸ್ನಾನ, ಭಗವಂತನನ್ನು ಉದ್ದೇಶಿಸಿ ಹೋಮ, ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಬಳಸಲ್ಪಡುವ ನೀರಿನ ಪಾತ್ರೆ, ಬಂಗಾರ, ಹಸಿವು ಹೋಗಲಾಡಿಸುವ ವಿವಿಧ ಬಗೆಯ ಆಹಾರಗಳು, ಬಾಯಾರಿಕೆ ನೀಗಿಸುವ ಕಬ್ಬಿನ ರಸ ಮುಂತಾದ ಪಾನೀಯಗಳು, ಅಕ್ಕಿ, ಗೋದಿ, ಕಡಲೆ ಮುಂತಾದ ಧಾನ್ಯಗಳು, ಹಿಟ್ಟು, ಮೊಸರು, ಅನ್ನ, ಸಸ್ಯ ಒಟ್ಟಿನಲ್ಲಿ ಗ್ರೀಷ್ಮಕಾಲದಲ್ಲಿ ಉಪಯೋಗಿಸುವ ಆಹಾರ, ವಸ್ತು ಮೊದಲಾದವುಗಳನ್ನು ಸತ್ಪಾತ್ರರಿಗೆ ದಾನ, ಇಷ್ಟದೇವತೆಯ ಜಪ-ತಪಗಳನ್ನು ಮಾಡಿದರೆ, ಅನಂತಫಲ ದೊರಕುವುದು ಎಂದು ಮಹಾಭಾರತ- ಭವಿಷ್ಯ ಪುರಾಣವೇ ಮೊದಲಾದ ಪುರಾಣಗಳಲ್ಲಿ ಹೇಳಿದೆ. ಬೃಹತ್ಪರಾಶರ ಸಂಹಿತೆಯಲ್ಲಿ 'ದಾನಮೇಕಂ ಕಲೌಯುಗೇ' ಎಂದು ಹೇಳಿದಂತೆ, ಯಾರಿಗೆ ಆಹಾರ, ಬಟ್ಟೆ, ಔಷಧಿ ಮುಂತಾದವುಗಳ ಸಹಾಯದ ಅವಶ್ಯಕತೆಯಿದೆಯೋ ಅವರಿಗೆ ತನು-ಮನ-ಧನಗಳ ಸಹಾಯ-ಸಹಕಾರ-ಸೇವೆ ಮಾಡಿದರೆ ಸರ್ವಪುಣ್ಯಗಳೂ ಲಭಿಸುವವು. ಭಗವಂತನ ನಿಜವಾದ ಪೂಜೆ ಅದೇ. ದಾನದಿಂದಲೇ ಮನಸ್ಸಂತೋಷ, ಚಿತ್ತಶುದ್ಧಿ ದೊರಕುವುದು, ಅಕ್ಷಯಮೋಕ್ಷಸ್ಯಕಾರಣಂ ಎನ್ನುವಂತೆ ಈ ದಿನ ಇವೆಲ್ಲವನ್ನು ಮಾಡುವುದರಿಂದ ಮೋಕ್ಷಕ್ಕೂ ಕಾರಣವಾಗುವುದು ಎಂದು ಪುರಾಣಗಳೂ ಸಾರಿವೆ.
ಪುರಾಣ ಕಥೆ: ಅಕ್ಷಯ ತೃತೀಯಾ ವ್ರತದ ಕುರಿತಾಗಿ ಪ್ರಸಿದ್ಧ ಪುರಾಣ ಕಥೆಯೊಂದು ಹೀಗಿದೆ. ಹಿಂದೆ ಧರ್ಮದಾಸನೆಂಬ ವೈಶ್ಯನಿದ್ದ. ಅತ್ಯಂತ ಸದಾಚಾರಿಯಾದ ಆತ ದೇವತೆಗಳನ್ನು, ವಿಪ್ರರನ್ನು ಸದಾ ಶ್ರದ್ಧೆಯಿಂದ ಪೂಜಿಸುತ್ತಿದ್ದ. ಅಕ್ಷಯ ತೃತೀಯಾ ವ್ರತದ ಮಹತ್ವ ಅರಿತ ಆತ, ಅಂದು ಗಂಗಾನದಿಯಲ್ಲಿ ಸ್ನಾನ ಮಾಡಿ, ವಿಧಿಪೂರ್ವಕ ಭಗವಂತನನ್ನು ಪೂಜಿಸಿ, ಸತ್ಪಾತ್ರರಿಗೆ ಬಂಗಾರ, ವಸ್ತ್ರ, ಆಹಾರ ಧಾನ್ಯಗಳನ್ನು ದಾನ ಮಾಡಿದ. ವರ್ಷ ಕಳೆದಂತೆ ಅಶಕ್ತನಾಗಿಯೂ, ವೃದ್ಧನಾಗಿಯೂ ಈ ದಿನ ಉಪವಾಸ-ದಾನ-ಧರ್ಮಗಳನ್ನು ಕೈಗೊಂಡ. ಅದೇ ವೈಶ್ಯನು ಮುಂದಿನ ಜನ್ಮದಲ್ಲಿ ಕುಶಾವತಿ ರಾಜ್ಯದ ರಾಜನಾದ. ರಾಜನಾದಾಗಲೂ ಹಿಂದಿನ ಜನ್ಮಸಂಸ್ಕಾರ ವಿಶೇಷದಿಂದ ಅಕ್ಷಯ ತೃತೀಯಾ ವ್ರತವನ್ನು ಆಚರಿಸಿದ. ಅಂದು ಸತ್ಪಾತ್ರರಿಗೆ ಗ್ರೀಷ್ಮ ಕಾಲದಲ್ಲಿ ಉಪಯೋಗಿಸುವ ವಸ್ತುಗಳನ್ನು ಯಥೇಚ್ಛವಾಗಿ ದಾನ ಮಾಡಿದ. ಸಾಕ್ಷಾತ್ ದೇವೇಂದ್ರನೇ ವೇಷ ಮರೆಸಿ ವಿಪ್ರ ವೇಷ ತೊಟ್ಟು ಅಕ್ಷಯ ತೃತೀಯಾದಂದು ರಾಜನ ದಾನಯಜ್ಞದಲ್ಲಿ ಪಾಲ್ಗೊಳ್ಳುತ್ತಿದ್ದ. ರಾಜನಿಗೆ ತನ್ನ ಶ್ರದ್ಧೆ ಮತ್ತು ಭಕ್ತಿಯ ಕುರಿತಾಗಿ ಸ್ವಲ್ಪವೂ ಅಹಂಕಾರವಿರಲಿಲ್ಲ. ಈ ವ್ರತದ ಪ್ರಭಾವದಿಂದ ರಾಜ ಅತ್ಯಂತ ವೈಭವಶಾಲಿಯಾಗಿ ರಾಜ್ಯವಾಳಿದರೂ ಧರ್ಮಮಾರ್ಗದಿಂದ ವಿಚಲಿತನಾಗಿರಲಿಲ್ಲ. ಅಕ್ಷಯ ತೃತೀಯಾ ದಿನದಂದು ರಾಜ ನಡೆಸಿದ ದೇವಪೂಜನ ಹಾಗೂ ಸತ್ಪಾತ್ರರಿಗೆ ಸುವಸ್ತುಗಳನ್ನು ನೀಡಿದ ಫಲವಾಗಿ ಧನವಂತ-ಪ್ರತಾಪಿ ರಾಜನೆನಿಸಿಕೊಂಡು ಸದ್ಗತಿ ಹೊಂದಿದ.
ಆಚರಣೆ ಹೇಗೆ ಮಾಡಬೇಕು?: ಎಲ್ಲ ಹಬ್ಬಗಳಂತೆ ಈ ದಿನ ಪ್ರಾತಃಕಾಲದಲ್ಲಿ ನಿತ್ಯಕರ್ಮ ಮಂಗಲ ಸ್ನಾನ, ನವವಸ್ತ್ರ ಧಾರಣೆ ಮಾಡಿ, ಲಕ್ಷ್ಮೀನಾರಾಯಣನನ್ನು ದರ್ಶಿಸಿ, ಪೂಜಿಸಿ ಸತ್ಪಾತ್ರರಿಗೆ ಗ್ರೀಷ್ಮ ಕಾಲದಲ್ಲಿ ಉಪಯೋಗಿಸುವ ವಸ್ತುಗಳನ್ನು ದಾನ ಮಾಡಿ, ಅಥವಾ ದಾನ ಮಾಡುವೆ ಎಂದು ಸಂಕಲ್ಪಿಸಬೇಕು. ಫಲಾಹಾರ ಸೇವಿಸಿ, ಅಕ್ಷಯ ತೃತೀಯಾದ ಮಹತ್ವ ಸಾರುವ ಪುರಾಣ ಕಥೆ ಶ್ರವಣ ಮಾಡಬೇಕು.
ಎಲ್ಲ ಹಬ್ಬಗಳೂ ನಮ್ಮ ಜೀವನಕ್ಕೆ ಅಮೂಲ್ಯ ಸಂದೇಶ- ಪಾಠಗಳನ್ನು ಸಾರುತ್ತವೆ. ಅಕ್ಷಯ ತೃತೀಯಾ ಕೂಡ ‘ಸಂಕಷ್ಟದಲ್ಲಿರುವವರಿಗೆ ಕೈಲಾದ ಸಹಾಯ ಮಾಡಿ’ ಎನ್ನುವ ಬಹು ದೊಡ್ಡ ಸಂದೇಶವನ್ನು ಹೇಳಿದೆ. ಈ ಹಿನ್ನೆಲೆಯಲ್ಲಿ ಹಬ್ಬವನ್ನು ಅರಿತು ಆಚರಿಸಿದಲ್ಲಿ ಇಹ-ಪರಕ್ಕೆ ಕ್ಷೇಮವಾಗುವುದು.