ಸಂಸ್ಕೃತದಲ್ಲಿ ಊರು ಎಂದರೆ ತೊಡೆ. ಸ್ತಂಭ ಎಂದರೆ ಬಿಗಿತ. ಕಾಲುಗಳನ್ನು ಸಲೀಸಾಗಿ ಚಾಚಲು ಹಾಗೂ ಚಲಿಸಲು ಕಷ್ಟವಾಗುವ, ಸಂವೇದನೆಯನ್ನು ಕಳೆದುಕೊಂಡು ತೊಡೆಯು ಮರಗಟ್ಟಿದ ಅನುಭವ ನೀಡುವ, ನಿರಂತರವಾಗಿ ತೀವ್ರ ನೋವಿನಿಂದ ಕಾಡುವ ಈ ಊರುಸ್ತಂಭಕ್ಕೆ ಸರಳವಾಗಿ ತೊಡೆಗಳ ಸ್ನಾಯು ಬಿಗಿತ ಎನ್ನಬಹುದು. ಪೌರುಷ ಪ್ರದರ್ಶನದ ಸಂದರ್ಭಗಳಲ್ಲಿ ತೊಡೆತಟ್ಟಿ ಕಾದಾಟಕ್ಕೆ ಪಂಥಾಹ್ವಾನ ನೀಡುವುದಿದೆ. ಕಾಲಿನ ತೊಡೆಗಳೇ ನಿಶ್ಚೇಷ್ಟವಾದರೆ ಏನು ಮಾಡುವುದಕ್ಕೂ ಬರುವುದಿಲ್ಲ, ಅದು ಬಲ ಹೀನತೆಯ ಸಂಕೇತ. ನಡೆಯಲೇ ಕಷ್ಟಪಡಬೇಕಾದರೆ ಇನ್ನು ಕುಸ್ತಿಯ ಮಾತೆಲ್ಲಿ?
ಊರುಸ್ತಂಭದಲ್ಲಿ ಜೀರ್ಣಪ್ರಕ್ರಿಯೆ ಸರಿಯಾಗಿ ನಡೆಯದೆ ಆಮವೆಂಬ ಅಜೀರ್ಣದ ವಿಷ ಜಠರದಲ್ಲಿ ಸಂಚಿತವಾಗುತ್ತದೆ. ಆಮ ದೋಷವು ಮೇದಸ್ ಧಾತುವಿನೊಂದಿಗೆ ಸೇರಿಕೊಂಡು ವಾತದ ಸ್ವಾಭಾವಿಕ ಚಲನೆಗೆ ತಡೆಯನ್ನು ಉಂಟುಮಾಡುತ್ತದೆ. ಕೆಳಮುಖವಾಗಿ ಕಾಲುಗಳೆಡೆಗೆ ವೇಗವಾಗಿ ಚಲಿಸಿ ಅಲ್ಲಿ ಶೇಖರಣೆಯಾಗಿರುವ ಕಫದೋಷದೊಂದಿಗೆ ಸೇರಿಕೊಂಡು ರೋಗ ಉತ್ಪತ್ತಿ ಮಾಡಿ ತೊಡೆಗಳು ಜೋಮು ಹಿಡಿದಂತಾಗಿ ಸ್ತಬ್ಧವಾಗುತ್ತದೆ. ವಾತ, ಕಫ ದೋಷ ಹಾಗೂ ಮೇದೋಧಾತುಗಳ ಪಾತ್ರವಿರುತ್ತದೆ. ಕಾಲುಗಳು ವಾತ ದೋಷದ ಮೂಲ ಆಶ್ರಯ ಸ್ಥಾನವಾಗಿರುತ್ತದೆ. ಹೀಗೆ ವಾತಸ್ಥಾನದಲ್ಲಿ ಕಫವು ಉಲ್ಬಣಗೊಳ್ಳುವುದರಿಂದ ಶರೀರವನ್ನು ಶುದ್ಧಿಕರೀಸುವ ಪಂಚಕರ್ಮ ಚಿಕಿತ್ಸೆಯನ್ನು ಅಳವಡಿಸಿಕೊಳ್ಳುವುದು ಕಷ್ಟವಾಗುತ್ತದೆ. ಮರಳಿನ ಕಣಗಳನ್ನು ಬಿಸಿಮಾಡಿ ಅದನ್ನು ಕೋರ ಬಟ್ಟೆಯಲ್ಲಿ ಸುತ್ತಿ ಬಿಸಿಶಾಖ ನೀಡುವ ವಾಲುಕಾಸ್ವೇದವೆಂಬ ಚಿಕಿತ್ಸೆಯನ್ನು ಮಾಡುವುದರಿಂದ ಅನುಕೂಲವಾಗುತ್ತದೆ.ವಿರುದ್ಧ ಗುಣದ ಆಹಾರ ಪದಾರ್ಥ ಜೊತೆಯಾಗಿ ಸೇವಿಸುವುದಕ್ಕೆ ವಿರುದ್ಧಾಹಾರ ಎನ್ನುತ್ತೇವೆ. ಊರುಸ್ತಂಭ ರೋಗ ಉತ್ಪತ್ತಿಯಾಗಲೂ ವಿರುದ್ಧಾಹಾರ ಸೇವನೆ ಮೊದಲ ಕಾರಣ. ಉಷ್ಣ ಹಾಗೂ ಶೀತ ಗುಣದ ಆಹಾರವನ್ನು ಒಟ್ಟಾಗಿ ಸೇವಿಸುವುದು, ಜೀರ್ಣಕ್ಕೆ ಕಷ್ಟವಾಗುವ ಹಾಗೂ ಸುಲಭವಾಗಿ ಜೀರ್ಣವಾಗುವ ಆಹಾರ ದ್ರವ್ಯಗಳನ್ನು ಜೊತೆಯಲ್ಲಿ ಸೇವಿಸುವುದು, ಬಿರುಸಾದ ಹಾಗೂ ನಯವಾದ ಪದಾರ್ಥಗಳು, ಜಿಡ್ಡಿನ ಆಹಾರ ಹಾಗೂ ಒಣಗುಣದ ಆಹಾರ ವಸ್ತುಗಳನ್ನು ಒಟ್ಟಿಗೇ ಸೇವಿಸುವುದು- ಈ ವಿಧವಾದ ವಿರುದ್ಧಾಹಾರಗಳು ಊರುಸ್ತಂಭ ವ್ಯಾಧಿಗೆ ಕಾರಣವಾಗುತ್ತದೆ.
ಈ ಮೊದಲು ಸೇವಿಸಿದ ಆಹಾರ ಜೀರ್ಣವಾಗದೇ ಇದ್ದಾಗ ಅಥವಾ ಸ್ವಲ್ಪವೇ ಪಚನವಾಗಿರುವ ಹೊತ್ತಿನಲ್ಲಿ ಪುನಃ ಆಹಾರ ಸೇವಿಸುವುದು, ದೇಹದ ಶಕ್ತಿಯನ್ನು ಮೀರಿ ಶ್ರಮದಾಯಕ ದೈಹಿಕ ಕೆಲಸಗಳನ್ನು ಮಾಡುವುದು, ಹಗಲು ಹೊತ್ತಿನಲ್ಲಿ ನಿದ್ರೆ, ರಾತ್ರಿ ಸಮಯದಲ್ಲಿ ನಿದ್ರೆ ಮಾಡದೆ ಜಾಗರಣೆ ಮಾಡುವುದು- ಇವುಗಳೂ ಊರುಸ್ತಂಭ ಕಾಯಿಲೆ ಉಂಟಾಗಲು ಪ್ರಮುಖ ಕಾರಣಗಳು. ಊರುಸ್ತಂಭ ರೋಗದ ಪ್ರಾರಂಭದಲ್ಲಿ ಚಿಂತೆಯಿಂದ ಮೌನವಾಗಿ ಇದ್ದುಬಿಡುವುದು, ಅತಿಯಾಗಿ ನಿದ್ರೆ ಬರುವುದು, ಕಳೆಗುಂದಿರುವುದು, ಗಾಬರಿಯಾಗುವುದು, ಬಾಯಿರುಚಿ ಇಲ್ಲದಾಗುವುದು, ಜ್ವರ, ವಾಂತಿ, ಕಾಲು ಹಾಗೂ ತೊಡೆಗಳ ದೌರ್ಬಲ್ಯ ಕಾಣಿಸಿಕೊಳ್ಳುವುದು.
ಇವು ಊರುಸ್ತಂಭದ ಪ್ರಾರಂಭಿಕ ಚಿಹ್ನೆಗಳು. ಸಾಮಾನ್ಯವಾಗಿ ಯಾವುದೇ ವಾತಸಂಬಂಧೀ ವ್ಯಾಧಿಯಲ್ಲಿ ಎಣ್ಣೆಯನ್ನು ಹಚ್ಚಿದರೆ ಲಕ್ಷಣಗಳು ಕಡಿಮೆಯಾಗಲು ಪ್ರಾರಂಭವಾಗುತ್ತದೆ. ಆದರೆ ಊರುಸ್ತಂಭ ಕಾಯಿಲೆಯಿದ್ದಾಗ ಯಾವುದೇ ಎಣ್ಣೆ ಹಚ್ಚಿದರೂ ಪಾದಗಳ ನಿಶ್ಚೇಷ್ಟತೆ, ಜೋಮು ಹಿಡಿಯುವುದು, ಕಾಲು ಎತ್ತಲು ಕಷ್ಟವಾಗುವುದು- ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಪ್ರಾರಂಭದಲ್ಲೇ ಚಿಕಿತ್ಸೆ ನೀಡದಿದ್ದರೆ ಅದು ಹಲವಾರು ಲಕ್ಷಣಗಳನ್ನು ಹುಟ್ಟುಹಾಕುತ್ತವೆ. ತೊಡೆಯ ಸ್ನಾಯುಗಳ ಬಿಗಿತ, ತೊಡೆಗಳು ತಣ್ಣಗಿರುವಂತೆ ಅನುಭವ, ಭಾರವಾದಂತೆ ಅನಿಸುವುದು, ಅತಿಯಾದ ನೋವು, ಮಾನಸಿಕ ವ್ಯಥೆ, ದುಃಖಿತನಾಗಿ
ಮೌನಕ್ಕೆ ಶರಣಾಗುವುದು, ಮೈಕೈ ನೋವು, ತೂಕಡಿಕೆ, ವಾಂತಿ, ಬಾಯಿ ರುಚಿ ಇಲ್ಲದಿರುವುದು, ಜ್ವರ, ಪಾದಗಳು ಜೋಮು ಹಿಡಿಯುವುದು, ಪಾದಗಳನ್ನು ಎತ್ತಲು ಕಷ್ಟವಾಗುವುದು, ಕಾಲು ಹಾಗೂ ತೊಡೆಗಳಲ್ಲಿ ನಿಶ್ಯಕ್ತಿ, ನಿರಂತರವಾಗಿ ತೊಡೆ ಉರಿ, ಅವಿರತ ನೋವು, ನೆಲದಲ್ಲಿ ಕಾಲಿಡಲು ಹಾಗೂ ನೆಲಕ್ಕೆ ಪಾದವನ್ನು ಒತ್ತಲು ಕಷ್ಟವಾಗುವುದು, ನಿಂತುಕೊಳ್ಳಲು ಅಶಕ್ತತೆ, ನಡೆಯಲು ಪರರ ಅವಲಂಬನೆ - ಈ ಎಲ್ಲ ಲಕ್ಷಣಗಳಿಗೆ ಕಾರಣವಾಗುತ್ತದೆ. ಸಮರ್ಪಕ ಚಿಕಿತ್ಸೆ ಪಡೆಯದೆ ರೋಗವು ಮತ್ತಷ್ಟು ಉಲ್ಬಣಿಸಿ ಅತಿಯಾಗಿ ಉರಿ, ಸಂಕಟ, ತೀವ್ರವಾಗಿ ಚುಚ್ಚುವ ನೋವು, ನಡುಕಗಳು ಕಂಡುಬಂದರೆ ಗುಣಪಡಿಸಲು ಕಷ್ಟವಾಗುತ್ತಾ ಹೋಗುತ್ತದೆ. ಆರಂಭದಲ್ಲೇ ಆದರೆ ಚಿಕಿತ್ಸೆಯಿಂದ ರೋಗದ ಸಂಪೂರ್ಣ ಶಮನ ಸಾಧ್ಯವಾಗುತ್ತದೆ.
(ಪ್ರತಿಕ್ರಿಯಿಸಿ: vvsudina@gmail.com)