ಪದವಿ, ಸ್ನಾತಕೋತ್ತರ ಪದವಿ ಮುಗಿಸಿ ಹೊಸ ಉದ್ಯೋಗ ಸೇರುವ ಧಾವಂತ ಹಲವರದ್ದು. ಕೋವಿಡ್ 19 ಸಂಕಷ್ಟದ ಕಾರಣ ಹೊಸ ನೇಮಕಾತಿಯಲ್ಲಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಕೊಂಚ ಹಿನ್ನಡೆ ಇತ್ತು. ಈಗ ಪರಿಸ್ಥಿತಿ ಬದಲಾಗಿದೆ. ನೇಮಕಾತಿಯಲ್ಲಿ ಸುಧಾರಣೆ ಆಗಿದೆ ಎಂಬುದನ್ನು ಟೀಮ್ ಲೀಸ್ ಎಡ್ಟೆಕ್ನ ಕರಿಯರ್ ಔಟ್ಲುಕ್ ದತ್ತಾಂಶ ವರದಿ ಬಹಿರಂಗಪಡಿಸಿದೆ. ಇದರಂತೆ, ಕಳೆದ ಆರು ತಿಂಗಳ ಅವಧಿಗೆ ಅಂದರೆ 2021ರ ಜುಲೈನಿಂದ ಡಿಸೆಂಬರ್ ತನಕದ ಅವಧಿಯಲ್ಲಿ ಶೇಕಡ 17 ಕಂಪನಿ ಗಳಷ್ಟೆ ಫ್ರೆಶರ್ಸ್ ಅನ್ನು ನೇಮಕ ಮಾಡಿದ್ದವು. ಆದರೆ, ಈ ವರ್ಷದ ಜನವರಿಯಿಂದ ಜೂನ್ ತನಕದ ಅವಧಿಯಲ್ಲಿ ಶೇಕಡ 47 ಕಂಪನಿಗಳು ಫ್ರೆಶರ್ಸ್ ಅನ್ನು ಉದ್ಯೋಗಕ್ಕೆ ನೇಮಕ ಮಾಡಿಕೊಳ್ಳಲಿವೆ. ಅಂದರೆ ಶೇಕಡ 30 ಹೆಚ್ಚಳ ಕಾಣಲಿದೆ. ಇದಕ್ಕೆ ಪೂರಕ ವೆಂಬಂತೆ ಮೈಕ್ರೋಸಾಫ್ಟ್ ಕಂಪನಿ ಸಾಫ್ಟ್ವೇರ್ ಎಂಜಿನಿಯರ್ ಹುದ್ದೆಗಳಿಗೆ ಫ್ರೆಶರ್ಸ್ನಿಂದ ಅರ್ಜಿಯನ್ನು ಇತ್ತೀಚೆಗೆ ಆಹ್ವಾನಿಸಿತ್ತು. ಬಿಟೆಕ್/ಎಂಟೆಕ್/ಎಂಎಸ್ ಅನ್ನು 2022ರ ಬ್ಯಾಚ್ನಲ್ಲಿ ಪೂರ್ಣಗೊಳಿಸಿದ್ದು, 7.5 ಸಿಜಿಪಿಎ ಹೊಂದಿರುವವರು ಅರ್ಜಿ ಸಲ್ಲಿಸಲು ಅರ್ಹರು. ಹೈದರಾಬಾದ್, ಬೆಂಗಳೂರು, ನೋಯ್ಡಾಗಳಲ್ಲಿರುವ ಕಚೇರಿಗಳಲ್ಲಿ ಕೆಲಸ ಮಾಡಲು ಉದ್ಯೋಗಿಗಳ ನೇಮಕಕ್ಕೆ ಇದನ್ನು ಕಂಪನಿ ಘೋಷಿಸಿದೆ.ಇದಕ್ಕೆ ಹೊರತಾಗಿಯೂ ಮುಂದಿನ ಕೆಲವು ತಿಂಗಳುಗಳಲ್ಲಿ ಎಲ್ಲ ಉದ್ಯೋಗ ರಂಗಗಳಲ್ಲೂ ಶೇಕಡ 50ರಷ್ಟು ಉದ್ಯೋಗ ಸೃಷ್ಟಿ ಆಗಲಿದೆ. ಈ ಉದ್ಯೋಗಾವಕಾಶ ಪರಿಣತ ವೃತ್ತಿಪರರಿಗೆ ಮತ್ತು ಫ್ರೆಶರ್ಸ್ಗೆ ಸಿಗಲಿದೆ ಎಂಬುದು ಆಶಾದಾಯಕ ವಿಚಾರ.
ಮಾಧ್ಯಮದಲ್ಲಿ ಉದ್ಯೋಗ ಕುಸಿತ: ಇದೇ ವರದಿಯಲ್ಲಿ ಕೆಲವು ಸೆಕ್ಟರ್ಗಳಲ್ಲಿ ನೇಮಕ ಪ್ರಕ್ರಿಯೆ ಕುಸಿಯುವ ವಿಚಾರವೂ ಉಲ್ಲೇಖವಾಗಿದೆ. ಇದರಲ್ಲಿ ರಿಯಲ್ ಎಸ್ಟೇಟ್, ಕೃಷಿ ಮತ್ತು ಕೃಷಿರಾಸಾಯನಿಕಗಳು, ನಾನ್-ಎಸೆನ್ಶಿಯಲ್ ರಿಟೇಲ್, ಎಫ್ಎಂಸಿಜಿ, ಮಾರ್ಕೆಟಿಂಗ್ ಮತ್ತು ಅಡ್ವಟೈಸಿಂಗ್, ಮೀಡಿಯಾ ಆಂಡ್ ಎಂಟರ್ಟೇನ್ವೆುಂಟ್ ಕ್ಷೇತ್ರಗಳಲ್ಲಿ ಉದ್ಯೋಗ ಕುಸಿತ ಉಂಟಾಗಲಿದೆ.
ಸಿವಿ ಚುಟುಕಾಗಿರಲಿ...: ಯಾವುದೇ ಉದ್ಯೋಗದಾತರು ಅಭ್ಯರ್ಥಿಯ ಸಿವಿಯನ್ನು ಕೇವಲ ಆರು ಸೆಕೆಂಡ್ಗಳ ಒಳಗೆ ಗ್ರಹಿಸುತ್ತಾರೆ. ಹೀಗಾಗಿ ಸಿವಿಯನ್ನು ಸಾಧ್ಯವಾದಷ್ಟು ಚುಟುಕಾಗಿ ಮತ್ತು ಆಸಕ್ತಿದಾಯಕವಾಗಿ ಇರಿಸುವುದು ಅಗತ್ಯ. ಆತ್ಮವಿಶ್ವಾಸದೊಂದಿಗೆ ಸಂದರ್ಶನವನ್ನು ಎದುರಿಸಲು ಸಜ್ಜಾಗುವುದು ಕೂಡ ಅಗತ್ಯ ಎಂದು ವರದಿ ಹೇಳಿದೆ.
ಹೈಬ್ರಿಡ್ ಕೆಲಸಕ್ಕೆ ಸಿದ್ಧರಾಗಿ: ಕೋವಿಡ್ ಸಂಕಷ್ಟದ ನಂತರದ ಈ ಕಾಲಾವಧಿಯಲ್ಲಿ ಉದ್ಯೋಗಾರ್ಥಿಗಳು ಹೈಬ್ರಿಡ್ ಕೆಲಸಕ್ಕೆ ಸಜ್ಜಾಗಿರಬೇಕಾದ್ದು ಅವಶ್ಯ. ಐಟಿ ಕಂಪನಿಗಳಲ್ಲಿ ಹೈಬ್ರಿಡ್ ಮಾದರಿ ಕೆಲಸ ಹೆಚ್ಚಾಗುತ್ತಿದೆ. ಹೈಬ್ರಿಡ್ ಮಾದರಿ ಎಂದರೆ ವಾರದ ಕೆಲವು ದಿನ ಆಫೀಸಿನಲ್ಲೂ, ಇನ್ನು ಕೆಲವು ದಿನ ಮನೆಯಿಂದಲೂ ಕೆಲಸ ಮಾಡಲು ಸಜ್ಜಾಗಬೇಕು. ರಿಮೋಟ್ ಮೋಡ್, ವರ್ಕ್ ಫ್ರಂ ಹೋಮ್ ಎಂಬಿತ್ಯಾದಿಯಾಗಿ ಇದನ್ನು ಪರಿಗಣಿಸುತ್ತಾರೆ. ಇದಕ್ಕಾಗಿ ಉತ್ತಮ ಹೈಸ್ಪೀಡ್ ಇಂಟರ್ನೆಟ್ ಸಂಪರ್ಕ, ಉತ್ತಮ ಗುಣಮಟ್ಟದ ಹೆಡ್ಫೋನ್ಗಳನ್ನು ಹೊಂದಿರಬೇಕಾದ್ದು ಅವಶ್ಯ.