ಪ್ರಭುಶಂಕರರು ಪ್ರಧಾನ ಗುರುದತ್ತರೂ ಸೇರಿದಂತೆ ಎಷ್ಟೊಂದು ಜನರಿಗೆ ಮಾಡಿದ ಸಹಾಯ, ತಗಾದೆ ತೆಗೆಯದೇ ಬಿಟ್ಟುಕೊಟ್ಟ ಸ್ಥಾನಮಾನಗಳು, ಅದರ ಬಗ್ಗೆ ಎಂದೂ ಬೇಸರಿಸಿಕೊಳ್ಳದೇ ಬದುಕಿದ್ದು ಈ ಎಲ್ಲದರ ಜೊತೆಗೆ ಪ್ರತಿಯೊಬ್ಬರ ನೆನಪಿನಲ್ಲೂ ಅವರ ಒಂದಲ್ಲ ಒಂದು ತಮಾಷೆಯ ಪ್ರಸಂಗಗಳಿದ್ದವು. ಒಮ್ಮೆ ಯಾರೋ ಅವರನ್ನು ‘ಪ್ರಭುಶಂಕರ ಅಂದರೆ ಕುವೆಂಪು ನೆರಳಿದ್ದ ಹಾಗೆ’ ಅಂದರಂತೆ. ಅದಕ್ಕಿವರು ‘ಹೌದೌದು ಕುವೆಂಪು ಅವರು ಎಷ್ಟು ಬೆಳ್ಳಗಿದ್ದಾರೋ ಅವರ ನೆರಳು ಮಾತ್ರ ಅಷ್ಟೇ ಕಪ್ಪಗೆ’ ಅಂದರಂತೆ.
ರಾಮಕೃಷ್ಣಾಶ್ರಮದ ಸುರೇಶಾನಂದರಿಗೆ ಆತ್ಮೀಯರಾಗಿದ್ದ ಪ್ರಭುಶಂಕರರು ಒಮ್ಮೆ ಕಾರಿನಲ್ಲಿ ಕೂತಾಗ ಸ್ವಾಮೀಜಿ ‘ಕಾರಿಗೆ ಪೇಂಟ್ ಮಾಡಿಸುವ ಅಗತ್ಯವಿದೆ’ ಅಂದರಂತೆ. ಅದಕ್ಕಿವರು ‘ಕಾರಿಗೆ ಮಾತ್ರ ಅಲ್ಲ ಡ್ರೖೆವರಿಗೆ ಕೂಡ ಇದೆ’ ಅಂದರಂತೆ. ತನ್ನ ಕಪ್ಪುಬಣ್ಣವನ್ನು ಹೀಗೆ ತಾನೇ ತಮಾಷೆ ಮಾಡಿಕೊಳ್ಳುತ್ತಿದ್ದ ಅವರ ಪ್ರಸಂಗಗಳು ಅನೇಕ. ಇನ್ಯಾರೋ ‘ನೋಡಿ ಪ್ರಭುಶಂಕರ್, ನಾನು ಎಷ್ಟು ಕಷ್ಟಪಟ್ಟು ಅನುವಾದ ಮಾಡಿದ ಸಾಹಿತ್ಯವನ್ನು ನನ್ನ ಹೆಂಡತಿ ನೋಡದೇ ಒಲೆಗೆ ಹಾಕಿಬಿಟ್ಟಿದಾಳೆ’ ಅಂದರಂತೆ. ಅದಕ್ಕಿವರು ‘ಛೇ ಹಾಗಲ್ಲಪ್ಪ, ಅವರ್ಯಾಕೆ ಹಾಗೆ ಮಾಡ್ತಾರೆ ಹೇಳಿ, ಅವರದನ್ನು ಖಂಡಿತಾ ಓದಿರಬೇಕು ಬಿಡಿ’ ಅಂದರಂತೆ. ತನ್ನನ್ನು ತಾನೇ ತಮಾಷೆ ಮಾಡಿಕೊಳ್ತಾ, ಜೊತೆಗಿದ್ದವರ ಕಾಲೆಳೆಯುತ್ತ, ಕ್ಲಿಷ್ಟಕರ ಸಂದರ್ಭಗಳನ್ನೂ ತಿಳಿಹಾಸ್ಯದಲೇ ತಿಳಿಯಾಗಿಸುತ್ತ, ಸಿಗದ ಕುರ್ಚಿಗಳ ಬಗ್ಗೆ ಎಂದೋ ಮೋಹ ಕಳಚಿಕೊಂಡು ಬದುಕಿದ ಪ್ರಭುಶಂಕರರ ಕುರಿತು ನಡೆದ ಮಾತುಕತೆಗಳು ಗಂಟೆಗಳು ಕಳೆದರೂ ಮುಗಿಯದಿರಲಿ ಅನಿಸುವಂತಿತ್ತು.
ಕೆ.ಸಿ.ಶಿವಪ್ಪನವರೂ ಗೆಳೆಯನನ್ನು ಹಾಗೇ ತಮಾಷೆಯ ಪ್ರಸಂಗಗಳೊಡನೆ ನೆನಪಿಸಿಕೊಂಡರೂ ಹೀಗೊಂದು ಘಟನೆ ಹೇಳಿದರು. ಪ್ರಭುಶಂಕರರು ಒಂದು ದಿನ ಇವರ ಮನೆಗೆ ಬಂದರಂತೆ, ಶೇವ್ ಮಾಡಿದ್ದರೂ ಅಲ್ಲಲ್ಲಿ ಕೂದಲು ಉಳಿದಿತ್ತಂತೆ. ‘ಇದೇನು ಹೀಗೆ’ ಅಂತ ಇವರು ತಮಾಷೆ ಮಾಡಿದರಂತೆ. ಆದರೆ ಪ್ರಭುಶಂಕರರು ಗಂಭೀರವಾಗಿ ‘ನೋಡು ಶಿವಪ್ಪ, ಒಂದಲ್ಲ ಒಂದು ದಿನ ನಿನಗೂ ಇದು ಅರ್ಥವಾಗತ್ತೆ’ ಅಂದರಂತೆ. ಇದಾಗಿ ಕೆಲದಿನಗಳಿಗೆ ಪ್ರಭುಶಂಕರರು ತೀರಿಕೊಂಡಿದ್ದಾರೆ. ಆದರೆ ಗೆಳೆಯನ ಆ ಮಾತು ಹೇಳುವಾಗ ಶಿವಪ್ಪನವರು ಗದ್ಗದಿಸಿದರು, ಇಡೀ ಸಭೆ ಸೂಜಿಸದ್ದಿನ ಮೌನಕ್ಕೆ ಜಾರಿತ್ತು. ಎರಡು ಹಿರಿಯ ಜೀವಗಳ ಗಾಢಸ್ನೇಹಕ್ಕೆ ಎಂಥ ಆರ್ದ್ರತೆ ಇರುತ್ತದೆ! ‘ಮುದ್ದು ರಾಮನ ಮನಸು’ ಕೃತಿ ಬರೆದ, ಬದುಕಿನ ನಶ್ವರತೆ, ಸಾವಿನ ಖಚಿತತೆ ತಿಳಿದ ಶಿವಪ್ಪನವರು ಈ ವಯಸ್ಸಿನಲ್ಲಿ ಗೆಳೆಯನನ್ನು ನೆನೆದು ಹಾಗೆ ಭಾವುಕರಾದರಲ್ಲಾ.. ಸುದೀರ್ಘ ಕಾಲದ ನಿಷ್ಕಲ್ಮಶ ಸ್ನೇಹ, ಸಂಗಾತಿಯನ್ನು ಕಳೆದುಕೊಂಡಷ್ಟೇ ಗಾಢವಾಗಿ ಆವರಿಸಿ, ಎಂತವರನ್ನೂ ಅಲ್ಲಾಡಿಸಿಬಿಡುತ್ತದಲ್ಲ ಅನಿಸಿತು.
ನಾವು ಹುಟ್ಟಿದ ಧರ್ಮ, ಸ್ಥಳ, ಓದುವ ಶಾಲೆ, ಬಾಲ್ಯ ಕಳೆಯುವ ಊರು ಇತ್ಯಾದಿಗಳ್ಯಾವುದೂ ನಮ್ಮ ಆಯ್ಕೆಯಾಗಿರುವುದಿಲ್ಲ. ಆದರೆ ಅವೆಲ್ಲ ನಮ್ಮ ವ್ಯಕ್ತಿತ್ವವನ್ನು ರೂಪಿಸುವ ಪ್ರಭಾವಿಸುವ ಸಂಗತಿಗಳು. ಸುತ್ತೂರು ಮಠದವರು ನಡೆಸುವ ಜೆಎಸ್ಎಸ್ ಸಂಸ್ಥೆಯಲ್ಲಿ ಓದಿದ ಕಾರಣದಿಂದ ನಾನು ಶಾಲಾದಿನಗಳಲ್ಲಿ ಇಂತಹ ಎಷ್ಟೋ ಕಾರ್ಯಕ್ರಮಗಳನ್ನು ಕಂಡವಳು. ಹಿಂದಿನ ಶ್ರೀಗಳ ಜಯಂತಿಯನ್ನು ಬೇರೆ ಬೇರೆ ತಾಲೂಕು ಕೇಂದ್ರಗಳಲ್ಲೂ ಮಾಡುತ್ತಿದ್ದರು. ಪ್ರತಿವರ್ಷ ಅಲ್ಲಿ ಕಡ್ಡಾಯವಾಗಿ ಎರಡು ವಿಷಯಗಳಿರುತ್ತಿದ್ದವು ಒಂದು- ‘ಧರ್ಮ ಮತ್ತು ರಾಜಕಾರಣ’. ಎರಡನೆಯದು- ಸರ್ವಧರ್ಮ ಸಮ್ಮೇಳನ. ಧರ್ಮ ಮತ್ತು ರಾಜಕಾರಣ ವಿಷಯವಿದ್ದ ದಿನ ರಾಜಕಾರಣಿಗಳೂ, ಧರ್ಮಗುರುಗಳೂ ವೇದಿಕೆಯಲ್ಲಿದ್ದು ರಾಜಕೀಯದಲ್ಲಿ ಧರ್ಮ ಹೇಗಿರಬೇಕೆಂದು ಮಾತಾಡುತ್ತಿದ್ದರು. ಧರ್ಮ ಎಂದರೆ ಮನುಷ್ಯ ಮನುಷ್ಯನಿಗೆ ಒಳಿತು ಮಾಡುವುದು ಅಷ್ಟೇ ಅಂತೆಲ್ಲ ಯಾರೋ ಹೇಳಿದ್ದನ್ನು ನಾನು ಶ್ರದ್ಧೆಯಿಂದ ಬರೆದುಕೊಳ್ಳುತ್ತಿದ್ದೆ. ಇನ್ನು ಸರ್ವಧರ್ಮ ಸಮ್ಮೇಳನದಲ್ಲಿ ಪೇಜಾವರರು, ಹಿರಿಯ ಬಾಲಗಂಗಾಧರನಾಥರು, ಹೀಗೆ ಬೇರೆ ಬೇರೆ ಸಮುದಾಯದ ಮಠಾಧೀಶರು, ಕ್ರೖೆಸ್ತ, ಮುಸಲ್ಮಾನ ಧಾರ್ವಿುಕ ಮುಖಂಡರು, ಜೈನರು, ಬೌದ್ಧರು ಹೀಗೆ ಎಲ್ಲರೂ ಸಾಲಾಗಿ ವೇದಿಕೆಯಲ್ಲಿರುವಾಗ ಎದುರು ಕೂತಿರುತ್ತಿದ್ದವರ ಕಂಗಳಲ್ಲಿ ಸರ್ವಜನಾಂಗದ ಶಾಂತಿಯ ತೋಟದ ಹೂಗಳು ಅರಳುತ್ತಿದ್ದವು. ಬರಿಯ ಮಾತಿಗಲ್ಲ, ಪೇಜಾವರರು, ಹಿರಿಯ ಸಿದ್ಧಗಂಗಾ ಶ್ರೀಗಳು, ಸುತ್ತೂರು ಶ್ರೀಗಳು, ರಾಮಕೃಷ್ಣಾಶ್ರಮ ಶ್ರೀಗಳು, ನಮ್ಮ ಅಬ್ದುಲ್ ಕಲಾಂ- ಎಲ್ಲರ ನಡುವೆ ಒಂದು ಬಗೆಯ ಭ್ರ್ರಾತೃತ್ವ, ಪರಸ್ಪರ ಗೌರವ ಮುಂತಾದವು ಇದ್ದವು. ಇದನ್ನೆಲ್ಲ ನೋಡಿ ಬೆಳೆದ ನಾನು ಜೀವನದ ಒತ್ತಡಗಳಲ್ಲಿ ಸಿಲುಕಿ ಇತ್ತೀಚಿನ ವರ್ಷಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಕಂಡದ್ದಿಲ್ಲ. ಮುಖ್ಯವಾಗಿ ಬಾಲ್ಯದಾಟಿದ ಹೊರಜಗತ್ತು ಚಿಕ್ಕವಳಿದ್ದಾಗ ಭಾಷಣ ಕೇಳಿ ಆ ನೋಟ್ ಪುಸ್ತಕದಲ್ಲಿ ಬರೆದದ್ದೆಲ್ಲ ಸುಳ್ಳು, ಇಲ್ಲಿ ನೋಡು ನಿಜ ಅಂತ ತೋರಿಸಿತ್ತು. ಇಲ್ಲಿ ದಿನವೂ ಮುಗಿಯದ ವಾದ ಮತ್ತು ತರ್ಕಗಳು. ಎಲ್ಲವೂ ವಿಕೋಪಕ್ಕೆ ಹೋಗುತ್ತಿರುವ ಈ ದಿನಗಳಲ್ಲಿ ಮತ್ತೆ ಅದೇ ಪುಟ್ಟ ಹುಡುಗಿಯ ಶ್ರದ್ಧೆಯಲ್ಲಿ ನಾನು ಕೂತು, ಮತ್ತೊಂದು ಮಾನವೀಯ ಕಾರ್ಯಕ್ರಮಕ್ಕೆ ಸಾಕ್ಷಿಯಾದೆ. ಬಹುಶಃ ಕೃಷ್ಣೇಗೌಡರು ಹೇಳಿದ ಹಾಗೆ ಈ ಕಾರ್ಯಕ್ರಮ ನನ್ನ ಮನಸ್ಸನ್ನು ಮಡಿಯಾಗಿಸಿತ್ತು. ಆಲೋಚನೆಗಳನ್ನೂ.
ಅವತ್ತು ಅಲ್ಲಿದ್ದವರೆಲ್ಲ ದೊಡ್ಡ ವಿದ್ವಾಂಸರು, ಇಬ್ಬರು ಮಠಾಧಿಪತಿಗಳು. ಆದರೆ ಯಾರ ನಡುವೆಯೂ ‘ಇಗೋ’ ಕಾಣಲಿಲ್ಲ. ಕೇವಲ ಮನುಷ್ಯಪ್ರೀತಿ ಮತ್ತು ಪರಸ್ಪರ ಗೌರವಗಳಿದ್ದವು. ಒಂದು ಸಿನಿಮಾ ನಮ್ಮನ್ನು ಒಳಗೊಳ್ಳುವಂತೆ, ಒಂದು ಸಾಹಿತ್ಯಕೃತಿ ತನ್ನ ಕತೆಯೊಳಗೆ ನಮ್ಮ ಕತೆಯನ್ನು ಮರೆಸುವಂತೆ, ಬೆಳಗಾದರೆ ಅನಿವಾರ್ಯವಾಗಿ ಬಂದು ಬೀಳುವ ಕಸದಂತಾ ಮನುಷ್ಯದ್ವೇಷದ ಸುದ್ದಿಗಳಿಂದ ಪ್ರಭುಶಂಕರರ ಕಾರ್ಯಕ್ರಮ ಎಲ್ಲವನ್ನೂ ಮರೆಸಿ ಹಳೆಯ ದಿನಗಳಿಗೆ ಕರೆದೊಯ್ದಿತ್ತು. ಪ್ರಧಾನ ಗುರುದತ್ತರು ಕೆ.ಸಿ.ಶಿವಪ್ಪನವರಿಗೆ ಹಾರ ಹಾಕಿ ಆ ಹಿರಿಯ ಜೀವಗಳ ಕಣ್ಣುಗಳು ಕೂಡಿದಾಗ, ಸುಕ್ಕಿನ ಕೈಗಳ ಆಪ್ತಸ್ಪರ್ಶವಾದಾಗ, ರಾಮಕೃಷ್ಣಾಶ್ರಮ ಮತ್ತು ಸುತ್ತೂರು ಶ್ರೀಗಳನ್ನು ಒಟ್ಟಿಗೇ ಕಂಡಾಗ, ಇಲ್ಲಿ ನಿಜವಾಗಿ ಎಲ್ಲವೂ ಕೆಟ್ಟಿದೆಯೋ? ಅಥವಾ ಪುಟ್ಟ ಗುಂಪೊಂದಕ್ಕೆ ದೊಡ್ಡ ಮೈಕು ಸಿಕ್ಕಿ ಎದ್ದಿರುವ ಗದ್ದಲವೋ ಎಂದೂ ಯೋಚಿಸುವಂತಾಯಿತು.
ಧರ್ಮ, ಸಿದ್ಧಾಂತಗಳ ಹೆಸರಲ್ಲಿ ಅಬ್ಬರವನ್ನು ಕೇಳಿ, ನೋಡುತ್ತಿರುವ ನಮಗೆ ಈ ಕಾರ್ಯಕ್ರಮ, ಅದರಲ್ಲಿದ್ದ ಹಿರಿಯರ ಮಾತು, ನಡವಳಿಕೆಗಳು, ಪ್ರಭುಶಂಕರರು ಬಹಳ ಎತ್ತರದ ಅಧ್ಯಾತ್ಮ ಚಿಂತಕರಾದರೂ ಸುಮ್ಮನೇ ತಮಾಷೆ ಮಾಡಿಕೊಂಡಿರುತ್ತಿದ್ದ ರೀತಿ ಇದೆಲ್ಲ ಈ ಸದ್ದುಗಳ ಕಡೆ ನಿರ್ಲಕ್ಷ್ಯದಿಂದ ನೋಡಬಹುದಾದ ಹೊಸಶಕ್ತಿ ಕೊಟ್ಟವು. ‘ಹೀಗಿದ್ದರು ಪ್ರಭುಶಂಕರ’ ಪುಸ್ತಕ ಓದಿದವರಿಗೆಲ್ಲ ಈ ಆಲೋಚನೆ ಖಂಡಿತ ಬರುತ್ತದೆ. ಅವರು ಸುಮ್ಮನೇ ತಮಾಷೆ ಮಾಡಿ ಆಳದ ಚಿಂತನೆಗೆ ನಮ್ಮನ್ನು ನೂಕಿದ್ದು ಕಾಣುತ್ತದೆ.
ಪ್ರಭುಶಂಕರರ ‘ಅಂಗುಲಿಮಾಲ’ದ ಪ್ರಸಂಗ ಹೇಳುತ್ತ ಕೃಷ್ಣೇಗೌಡರು ಹೇಳಿದರು-‘ಕೋಪ ಕೋಪವನ್ನು ಎದುರಿಸಬಹುದು. ಆದರೆ ಕೋಪ ಶಾಂತಿಯನ್ನು ಎದುರಿಸಲಾರದು.’ ಈಗ ನಡೆಯುತ್ತಿರುವ ವಿದ್ಯಮಾನಗಳ ನಡುವೆ ಈ ಮಾತನ್ನು ಯಾರಿಗೆ ಹೇಳುವುದೆಂದು ಯೋಚಿಸುತ್ತಿದ್ದೇನೆ...
ರಾಮಕೃಷ್ಣಾಶ್ರಮದ ಸ್ವಾಮಿ ಮುಕ್ತಿದಾನಂದರು ಒಂದು ಪ್ರಸಂಗ ಹೇಳಿದರು. ಒಮ್ಮೆ ಅವರು ಪ್ರಭುಶಂಕರರ ಮನೆಗೆ ಹೋದಾಗ ಅವರ ಪತ್ನಿ ಶಾಂತಮ್ಮ ಪೂಜೆ ಮಾಡುತ್ತಿದ್ದರಂತೆ. ಸ್ವಾಮೀಜಿ ‘ನಾವು ಆ ಕಡೆ ಹೋಗಿ ಮಾತಾಡೋಣ ಪ್ರಭುಶಂಕರ್, ಅವರು ಪಾಪ ಪೂಜೆ ಮಾಡ್ತಿದ್ದಾರೆ ತೊಂದರೆ ಆಗೋದು ಬೇಡ’ ಅಂದರಂತೆ. ಅದಕ್ಕಿವರು ‘ಬನ್ನಿ ಸ್ವಾಮೀಜಿ, ಅವರು ಮಾಡೋದೂ ಪೂಜೇನೇ ನಾವ್ ಮಾಡೋದೂ ಪೂಜೇನೇ’ ಅಂದ್ರಂತೆ. ಈ ಮಾತು ಸರಳ ಮತ್ತು ಸಹಜವಾದ್ದಾದರೂ ಅದಕ್ಕೆ ಎಷ್ಟೊಂದು ದೊಡ್ಡ ಅರ್ಥ! ‘ನಾವ್ ಮಾಡೋದೂ ಪೂಜೇನೇ’ ಎಂಬ ಮಾತಿನ ಹಿಂದೆ ಬಿದ್ದು ಬರೆಯಲು ಶುರುಮಾಡಿದರೆ ದೊಡ್ಡ ಗ್ರಂಥವೇ ಆದೀತು. ಆದರೆ ಹಾಗೆ ಗ್ರಂಥವಾಗಬಹುದಾದ ತತ್ತ್ವವನ್ನು ಅದೆಷ್ಟು ಸರಳವಾಗಿ, ಸಹಜವಾಗಿ ಆಡಿ ಮುಗಿಸಿ ಸುಮ್ಮನೇ ಅವರ ಮುಂದಿನ ಕೆಲಸ ಮಾಡಿಬಿಟ್ಟಿರುತ್ತಾರೆ. ಅದಕ್ಕೇ ಅವರು ಪ್ರಭುಶಂಕರರು. ಅಥವಾ ದೊಡ್ಡ ತತ್ತ್ವಗಳು ಇರುವ ರೀತಿಯೇ ಹೀಗೋ? ಎನಿಸುತ್ತಾರೆ.
ಪೊ›.ಕೃಷ್ಣೇಗೌಡರು ‘ಪ್ರಭುಶಂಕರರನ್ನು ನೆನಪಿಸಿಕೊಂಡರೆ ಮನಸ್ಸು ಮಡಿಯಾದ ಹಾಗಾಗುತ್ತದೆ’ ಅಂದರು. ಅರೆ! ಈ ಮಡಿ ಅನ್ನುವುದನ್ನು ಬೇರೆ ಬೇರೆ ಸಂದರ್ಭಗಳಲ್ಲಿ ಕೇಳಿದ್ದೇವೆ, ನೋಡಿದ್ದೇವೆ, ಟೀಕಿಸಿದ್ದೇವೆ. ಆದರೆ ‘ಮನಸ್ಸು ಮಡಿಯಾಗೋದು’ ಅನ್ನುವುದು ಹೊಸ ಥರ ಕೇಳಿಸಿತು. ಒಬ್ಬರ ನೆನಪಿನಿಂದ ಮನಸ್ಸು ಮಡಿಯಾಗುವುದಾದರೆ, ಅವರೆಂಥವರಿರಬೇಕು? ಎಷ್ಟು ನಿಷ್ಕಲ್ಮಶವಾಗಿರಬೇಕು! ಶುದ್ಧ ವ್ಯಕ್ತಿತ್ವಗಳ ನೆನಪು ಒಂದು ಬಗೆಯ ಮನೋಸ್ನಾನವೇ? ಅದಕ್ಕೆ ಕೆದಕಿದಷ್ಟೂ ಹೊಸ ಅರ್ಥ! ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಶ್ರೀಗಳು ‘ಕುಹಕವಿರದ ಹಾಸ್ಯ ಎಂದೂ ಬೇಸರ ಮಾಡುವುದಿಲ್ಲ, ಪ್ರಭುಶಂಕರರು ಕಾವಿ ಧರಿಸದೆಯೂ ಸಂತನಂತೆ ಬದುಕಿದವರು’ ಅಂದದ್ದು ಅವರ ಸ್ಥಿತಪ್ರಜ್ಞತೆಯನ್ನು ನೋಡಿದ್ದ ಎಲ್ಲರಿಗೂ ನಿಜವೇ ಅನಿಸಿತ್ತು.
ಡಾ.ಪ್ರಭುಶಂಕರ ಕನ್ನಡದ ಪ್ರಮುಖ ಲೇಖಕರು, ಆಧ್ಯಾತ್ಮಿಕ ಚಿಂತಕರು ಮತ್ತು ಕುವೆಂಪು ಅವರ ಪರಮಾಪ್ತರಲ್ಲಿ ಒಬ್ಬರು. ಅವರು ಕನ್ನಡದಲ್ಲಿ ಕುವೆಂಪು ಬರಹಗಳ ಬಗ್ಗೆ ಸಮಗ್ರ ಅಧ್ಯಯನ ಮಾಡಿ ಡಾಕ್ಟರೇಟ್ ಪಡೆದ ಮೊದಲಿಗರು. ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗ ಪ್ರಾರಂಭಗೊಂಡಾಗ ಪ್ರಥಮ ಪ್ರಾಧ್ಯಾಪಕರಾದರು. ಸ್ವಾಮಿ ವಿವೇಕಾನಂದರ ಕೃತಿಶ್ರೇಣಿ ಕನ್ನಡಕ್ಕೆ ತರುವಲ್ಲಿ ಪ್ರಭುಶಂಕರರದ್ದು ಪ್ರಮುಖ ಪಾತ್ರ. ಬುದ್ಧನ ಕುರಿತಾದ ಅವರ ‘ಪ್ರೇಮಭಿಕ್ಷು’ ಕೃತಿ ಹಲವು ವರ್ಷಗಳ ಕಾಲ ಕಾಲೇಜುಗಳಿಗೆ ಪಠ್ಯವಾಗಿತ್ತು. ಕುವೆಂಪುರವರ ವ್ಯಕ್ತಿತ್ವ, ಬೆರಳ್ಗೆ ಕೊರಳ್, ಸ್ಮಶ್ಮಾನ ಕುರುಕ್ಷೇತ್ರ, ಶೂದ್ರತಪಸ್ವಿ ಕೃತಿಗಳನ್ನು ಇಂಗ್ಲಿಷ್ಗೆ ಅನುವಾದ ಮಾಡಿದರು. ಜನಮನ (ವ್ಯಕ್ತಿಚಿತ್ರ), ಎತ್ತಿಗೆ ಜ್ವರ ಎಮ್ಮೆಗೆ ಬರೆ (ಲಘು ಪ್ರಬಂಧ), ಪ್ರೇಮಭಿಕ್ಷು, ಜೀವ ಜೀವದ ನಂಟು (ಕಾದಂಬರಿ), ಅಂಗುಲಿಮಾಲ, ಆಮ್ರಪಾಲಿ, ಗೋರಿಗೊಂದು ಹದ್ದು (ನಾಟಕ), ‘ಬೆಸ್ಟ್ ಆಫ್ ಪ್ರಭುಶಂಕರ’ ಇವರ ಪ್ರಮುಖ ಕೃತಿಗಳು.
(ಲೇಖಕರು ಹವ್ಯಾಸಿ ಬರಹಗಾರರು)