ಅವಳು ಸುಕನ್ಯೆ. ಶರ್ಯಾತಿರಾಜನ ಮಗಳು. ಸ್ತ್ರೀಸಮಾಜಕ್ಕೇ ಹೆಮ್ಮೆಯ ಹೆಣ್ಣು. ಅಸಾಧಾರಣ ಪಾತಿವ್ರತ್ಯದಿಂದ ಸ್ತ್ರೀಕುಲಕ್ಕೇ ಆದರ್ಶಳಾದವಳು. ಅವಳ ಜೀವನದಲ್ಲಿ ನಡೆದ ಘಟನೆ ಬಹುದೊಡ್ಡ ಸಂದೇಶವನ್ನು ನೀಡುತ್ತದೆ. ಒಮ್ಮೆ ಶರ್ಯಾತಿ ರಾಜನು ಮಗಳು ಸುಕನ್ಯೆ ಹಾಗೂ ಪರಿವಾರಸಮೇತನಾಗಿ ಮಹರ್ಷಿ ಚ್ಯವನರ ಆಶ್ರಮಕ್ಕೆ ಬಂದ. ಆಶ್ರಮದಲ್ಲಿ ಚ್ಯವನರು ಕಾಣಿಸುವುದಿಲ್ಲ. ಅತ್ತಿತ್ತ ಹುಡುಕಾಡಿದರೂ, ಸುಳಿವಿಲ್ಲ. ರಾಜಕುಮಾರಿ ಸುಕನ್ಯೆ ಚಿಕ್ಕ ವಯಸ್ಸಿನ ಹುಡುಗಿ. ಅತ್ತಿತ್ತ ಓಡಾಡುವಾಗ ಒಂದು ಹುತ್ತದಲ್ಲಿ ಬೆಳಕು ಕಾಣಿಸಿತು. ಏನಿರಬಹುದೆಂದು ತಿಳಿದುಕೊಳ್ಳುವ ಹಂಬಲದಿಂದ ಒಂದು ಕಡ್ಡಿ ತೆಗೆದುಕೊಂಡು ಹುತ್ತದೊಳಗೆ ಹಾಕಿ ನೋಡಿದಳು. ಧ್ಯಾನಾಸಕ್ತರಾಗಿದ್ದ ಚ್ಯವನರ ಸುತ್ತ ಹುತ್ತ ಬೆಳೆದಿತ್ತು. ಚ್ಯವನರ ಕಣ್ಣಿನ ಬೆಳಕು ಅದು. ಸುಕನ್ಯೆ ಹಾಕಿದ ಕಡ್ಡಿ ಚ್ಯವನರ ಕಣ್ಣಿಗೆ ಚುಚ್ಚಿ, ರಕ್ತ ಸುರಿಯಿತು. ಏನೋ ಅಪಚಾರವಾಯಿತೆಂದು ಅರಿತ ಸುಕನ್ಯೆ ಹೆದರಿ ದೂರಹೋದಳು. ಚ್ಯವನರು ಮಹಾತಪಸ್ವಿಗಳು. ಶಾಪಾನುಗ್ರಹಸಮರ್ಥರು. ಮಹಾತ್ಮರಿಗೆ ರಾಜಕುಮಾರಿ ಮಾಡಿದ ಅಪಚಾರದಿಂದಾಗಿ ಎಲ್ಲ ಪರಿವಾರದವರಿಗೂ, ಪ್ರಜೆಗಳಿಗೂ ಮಲ-ಮೂತ್ರಬಂಧವಾಗಿಬಿಟ್ಟಿತು. ಪರಿಣಾಮ, ಅಸಾಧ್ಯ ಹೊಟ್ಟೆನೋವು. ರಾಜನು ವಿಚಾರಿಸಿದಾಗ ಸುಕನ್ಯೆ ಮಾಡಿದ ತಪ್ಪಿನ ಅರಿವಾಯಿತು. ಒಬ್ಬ ರಾಜಕುಮಾರಿ ಮಾಡಿದ ತಪ್ಪಿನ ಪರಿಣಾಮ ಎಲ್ಲ ಪ್ರಜೆಗಳೂ ಶಿಕ್ಷೆ ಅನುಭವಿಸುವಂತಾಯಿತು. ಆದ ಅಪಚಾರಕ್ಕೆ ಪ್ರಾಯಶ್ಚಿತ್ತರೂಪವಾಗಿ ತನ್ನ ಮಗಳು ಸುಕನ್ಯೆಯನ್ನೇ ಚ್ಯವನರಿಗೆ ಮದುವೆ ಮಾಡಿ ಕೊಟ್ಟ ಶರ್ಯಾತಿರಾಜ.
ಒಬ್ಬ ರಾಜ ದೊರೆಯಾಗಿ ತಾನು ಹೇಗಿರಬೇಕು ಎಂಬುದನ್ನು ಈ ಘಟನೆ ತಿಳಿಸುತ್ತದೆ. ರಾಜನೆಂದರೆ ಅವನು ದೇಶದ ನಾಯಕ, ಪ್ರಜೆಗಳ ಪ್ರತಿನಿಧಿ. ಹೀಗಾಗಿ ರಾಜನು ಮಾಡುವ ಕೆಲಸ ಅದು ರಾಜನಿಗೆ ಮಾತ್ರವಲ್ಲ, ಇಡೀ ದೇಶಕ್ಕೇ ಪ್ರತಿಫಲ ನೀಡುತ್ತದೆ. ರಾಜನು ಸಾಧುಸ್ವಭಾವದವನಾಗಿದ್ದು ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದರೆ ಅದರಿಂದ ದೇಶ ಸುರಕ್ಷಿತ, ಸುಭಿಕ್ಷವಾಗಿರುತ್ತದೆ. ಅದೇ ರಾಜನು ದುಷ್ಟಸ್ವಭಾವದವನಾಗಿ ಕೆಟ್ಟಕೆಲಸಗಳನ್ನು ಮಾಡುತ್ತಿದ್ದರೆ ಅದರಿಂದ ದೇಶಕ್ಕೇ ಅನರ್ಥ ನಿಶ್ಚಿತ. ಶಾಸ್ತ್ರವು ಬಹಳ ಒತ್ತುಕೊಟ್ಟು ಇದನ್ನು ತಿಳಿಸಿದೆ. ಇವತ್ತಿನ ರಾಜರು ಅರ್ಥಾತ್ ಜನಪ್ರತಿನಿಧಿಗಳು, ರಾಜಕಾರಣಿಗಳು ತಮ್ಮ ಜೀವನದಲ್ಲಿ ಹೇಗಿರಬೇಕು ಎನ್ನುವುದನ್ನು ಈ ಮೂಲಕ ಮಹಾಭಾರತ ಸ್ಪಷ್ಟಪಡಿಸುತ್ತದೆ.
ನಮಗೆ ಅನಿಸಬಹುದು- ‘ನಾವು ಯಾವುದೇ ರಾಜ್ಯಕ್ಕೆ ರಾಜರಲ್ಲ. ರಾಜಕಾರಿಣಿಗಳಲ್ಲ. ಹಾಗಾಗಿ ನಮಗೆ ಇದು ಸಂಬಂಧಿಸಿಲ್ಲ’ ಎಂದು. ಆದರೆ ಅದು ತಪ್ಪು. ನಾವು ಬೇರಾವುದೇ ರಾಜ್ಯಕ್ಕೆ ರಾಜರಾಗದಿದ್ದರೂ ನಮ್ಮ ಕುಟುಂಬಕ್ಕೆ ನಾವೇ ರಾಜರು. ತಂದೆ-ತಾಯಿ, ಹೆಂಡತಿ-ಮಕ್ಕಳು, ಬಂಧು-ಮಿತ್ರರು ಇವರೇ ನಮ್ಮ ಪ್ರಜೆಗಳು. ಒಬ್ಬ ಕುಟುಂಬದ ಯಜಮಾನನಾಗಿ ನಾವು ಹೇಗಿರಬೇಕು ಎನ್ನುವುದನ್ನು ಈ ಕಥೆ ತಿಳಿಸುತ್ತದೆ. ಮನೆಯ ಯಜಮಾನ ಅಧಾರ್ವಿುಕನಾಗಿ, ದುಷ್ಟಕಾರ್ಯಗಳಲ್ಲಿ ಪ್ರವೃತ್ತನಾಗಿದ್ದರೆ ಅದರ ಪರಿಣಾಮ ಕುಟುಂಬದ ಸದಸ್ಯರು ನಾನಾಅನರ್ಥಗಳನ್ನು ಎದುರಿಸಬೇಕಾಗುತ್ತದೆ. ರಾಜಕುಮಾರಿ ಸುಕನ್ಯೆ ಮಾಡಿದ ಒಂದು ಅಪರಾಧದಿಂದ ಎಲ್ಲ ಪ್ರಜೆಗಳು ಸಂಕಷ್ಟ ಎದುರಿಸಬೇಕಾಯಿತು. ಈ ದೃಷ್ಟಿಯಲ್ಲಿ ದೇಶದ ರಾಜನಾಗಲೀ, ಅವರವರ ಕುಟುಂಬದ ಯಜಮಾನರಾಗಲೀ ಎಚ್ಚರಿಕೆಯಿಂದ ಕೆಲಸಗಳನ್ನು ಮಾಡಬೇಕು. ಅಡ್ಡಿ, ಆತಂಕಗಳು ಬಂದರೂ ಸರಿದಾರಿಯಲ್ಲೇ ಸಾಗಬೇಕು.
(ಲೇಖಕರು ಸಂಸ್ಕೃತ ವಿದ್ವಾಂಸರು)