ಅಂಕಣ

ರವಿಬೆಳಗೆರೆ ಅಂಕಣ: ನಿಮ್ಮಲ್ಲಿ ಪ್ರತಿ ನಿಮಿಷದ ರಾಕ್ಷಸ ಹಟ ಹುಟ್ಟೋದೇ ಹಾಗೆ!

ನಮ್ಮ ಬದುಕಿನ ಸಾವಿರಾರು, ಲಕ್ಷಾಂತರ ಚಿಕ್ಕಚಿಕ್ಕ ಗೆಲುವುಗಳು, ವಿಜಯಗಳು, ಸಾಧನೆಗಳು ಸೇರಿಕೊಂಡೇ ಒಂದು ultimate ಗಮ್ಯವನ್ನು ತಲುಪುವುದಕ್ಕೆ ನಮಗೆ ಸಹಾಯ ಮಾಡಿರುತ್ತವೆ.

ಒಂದು ಕೆಲಸ ಆರಂಭಿಸ್ತೀರಿ. ಅದನ್ನ ಅರ್ಧಕ್ಕೇ ಬಿಟ್ಟು ಇನ್ನೊಂದಕ್ಕೆ ಹೊರಡ್ತೀರಿ. ನಿನ್ನೆ ಸಂಜೆ ತನಕ ನಿಮಗೆ ಗಿಟಾರು ಅಂದ್ರೆ ಪಂಚಪ್ರಾಣ.

ಇವತ್ತು ಮೊಬೈಲ್ ರಿಪೇರಿ ಮಾಡುವುದನ್ನು ಕಲಿಯೋದು ಬಿಟ್ರೆ ಬೇರೆ ಜೀವನವೇ ಇಲ್ಲವೇನೋ ಎಂಬಂತೆ ಕನ್ನಡಕ ಹಾಕ್ಕೊಂಡು ಕೂತಿದೀರಿ. ಅದನ್ನ ಕೊಳ್ಳದೆ ಇದ್ರೆ ನಿಮ್ಮ ‘ಜೀವನವೇ ವೇಷ್ಟು’ ಎಂಬಷ್ಟು ಅವಸರಕ್ಕೆ ಬಿದ್ದು ಒಂದು ಕಂಪ್ಯೂಟರ್ ಕೊಂಡುಕೊಂಡ್ರಿ. ಅದರ ಮೇಲಿನ ಧೂಳಲ್ಲಿ ಇವತ್ತು ಇಡೀ ಮನೆಗೆ ರಂಗೋಲಿ ಹಾಕಬಹುದು. ಹೋದ ಜನವರಿ ಫಸ್ಟಿಗೆ ‘ಐಎಎಸ್ ಆಫೀಸರಾಗ್ತೀನಿ’ ಅಂತ ಶಪಥ ಮಾಡಿ ಹತ್ತು ವರ್ಷದ ‘ಕಾಂಪಿಟಿಷನ್ ಸಕ್ಸಸ್’ ಮ್ಯಾಗಝೀನ್ ಕಲೆಕ್ಟ್ ಮಾಡಿದ್ರಿ. ಈ ವರ್ಷ ನಿಮ್ಮ ಪ್ರಯಾರಿಟಿಗಳ ಪಟ್ಟಿಯಲ್ಲಿ ‘ಷೇರು ಮಾರ್ಕೆಟ್​ನಲ್ಲಿ ಕೋಟಿಗಟ್ಲೆ ದುಡ್ಡು ಮಾಡೋದು ಹೇಗೆ’ ಅನ್ನೋದು ಮೊದಲ ಮೆಟ್ಟಿಲ ಮೇಲಿದೆ. ಮೊನ್ನೆ ಮೊನ್ನೆ ತನಕ ‘ನಂಗೆ ಹಿಂದಿನ ಬೀದಿ ಗೋವಿಂದು ಇಷ್ಟ ಕಣೇ...’ ಅಂತಿದ್ರಿ. ಇವತ್ತು ಆಚೆ ಬೀದಿಯ ಇರ್ಫಾನ್ ಇಷ್ಟ ಆಗ್ತಾನೆ. ರೂಂ ಕ್ಲೀನ್ ಮಾಡ್ಕೋತೀನಿ ಅಂತ ಹೊರಡ್ತೀರಿ: ಕಿಟಕಿ ಒರೆಸುವುದರೊಳಗಾಗಿ ಆಸಕ್ತಿ ಹೋಗಿಬಿಡುತ್ತದೆ. ಗಾಡಿ ತೊಳೆಯೋಕೆ ಅಂತ ಹೊರಟವರು ಡಿಕ್ಕಿಯಲ್ಲಿ ಎಂದೋ ಇಟ್ಟು ಮರೆತ ಮ್ಯಾಗಝೀನು ಓದುತ್ತ ಕುಳಿತುಬಿಡುತ್ತೀರಿ. ಎಷ್ಟೋ ಸಲ ನಿಮ್ಮದು ಆರಂಭಶೂರತ್ವ ಅಂತ ನಿಮಗೇ ಅನಿಸಿಬಿಡುತ್ತದೆ.

ಯಾಕೆ ಹೀಗೆ? ಥಾಮಸ್ ಆಲ್ವ ಎಡಿಸನ್​ಗೆ ಬಲ್ಬಿನಲ್ಲಿ ಬೆಳಕು ಕಂಡುಹಿಡಿಯೋದೇ ಜೀವನದ ಅತಿದೊಡ್ಡ ಗುರಿಯಾಗಿತ್ತು. ಗಾಂಧೀಜಿಗೆ ಸ್ವಾತಂತ್ರ್ಯ, ನೆಹರೂಗೆ ಪ್ರಧಾನಿ ಪದವಿ, ಅಬ್ದುಲ್ ಕಲಾಂಗೆ ಅಣು ಬಾಂಬು, ಉಷಾಗೆ ಒಲಿಂಪಿಕ್ಸ್- ಹೀಗೆ ಅವರಿಗೆಲ್ಲ ಜೀವನದಲ್ಲಿ ಒಂದು ಮಹತ್ತರವಾದ ಗುರಿ ಇತ್ತು. ಅದಕ್ಕೋಸ್ಕರ ಬದುಕಿದರು, ದುಡಿದರು, ಬಡಿದಾಡಿದರು, ಸಾಧಿಸಿದರು.

ನಮಗೇನಿದೆ?

‘ಜೀವನದಲ್ಲಿ ಒಂದು ಗುರಿ ಅಂತ ಇಟ್ಕೋಬೇಕು ಕಣಯ್ಯಾ’ ಅಂತ ವಯಸ್ಸಾದವರು ಕಿರಿಯರಿಗೆ ಅಡ್ವೈಸು ಮಾಡುತ್ತಿರುತ್ತಾರೆ. ‘ನಿಮ್ಮ ಗುರಿ ಏನಿತ್ತು ಮತ್ತು ಅದನ್ನ ತಲುಪಿದ್ದೀರಾ?’ ಅಂತ ಅವರನ್ನ ಕೇಳಿ ನೋಡಿ.

‘ಹೇಳಿದಷ್ಟು ಕೇಳು... ತಲೆಹರಟೇನ್ತಂದೂ...’ ಅಂತ ರೇಗುತ್ತಾರೆ.

ಬದುಕೇ ಹಾಗೆ. ಇಲ್ಲಿ ಅಡ್ವೈಸಿನಷ್ಟು ಸುಲಭವಾದ್ದು ಮತ್ತೊಂದಿಲ್ಲ. ಆದರೆ ಬದುಕಿನ ಶ್ರೇಷ್ಠ ಗುರಿಗಳನ್ನ ತಲುಪಿದವರನ್ನ ಕೇಳಿ ನೋಡಿ: ಅವರು ಅಡ್ವೈಸು ಮಾಡುವುದೂ ಇಲ್ಲ, ಇನ್ನೊಬ್ಬರಿಂದ ಹೆಚ್ಚಾಗಿ ಅಡ್ವೈಸು ಪಡೆದಿರುವುದೂ ಇಲ್ಲ. ಅವರ ಪಾಡಿಗವರು ಒಂದು ಗಮ್ಯವಿಟ್ಟುಕೊಂಡು ದುಡಿದಿರುತ್ತಾರೆ, ಬೆಳೆದಿರುತ್ತಾರೆ, ಗುರಿ ತಲುಪುವ ಬದಲು ಒಂದು ಹೆಗ್ಗುರುತನ್ನು ಸೃಷ್ಟಿಸಿ ಈ ಜಗತ್ತಿಗೆ ಬಿಟ್ಟುಹೋಗಿರುತ್ತಾರೆ.

ಆದರೆ ಅಂಥವರು ಎಷ್ಟು ಜನ ಇದ್ದಾರೆ ಹೇಳಿ ಈ ಜಗತ್ತಿನಲ್ಲಿ? ನಾವು ಯೋಚನೆ ಮಾಡಬೇಕಾದದ್ದು ಅವರ ಬಗ್ಗೆ ಅಲ್ಲ. ನಾವು ಯೋಚಿಸಬೇಕಾದದ್ದು ನನ್ನಂಥ, ನಿಮ್ಮಂಥ, ನಮ್ಮ ತಮ್ಮ ತಂಗಿಯರಂಥ, ನಮ್ಮ ಮಕ್ಕಳಂಥ ಸಾಮಾನ್ಯರ ಬಗ್ಗೆ. ನನ್ನ ಜರ್ನಲಿಸ್ಟ್ ಮಗಳಿಗೆ ‘ನೀನು ಬರ್ಖಾ ದತ್ ಥರ ದೊಡ್ಡ ಪತ್ರಕರ್ತೆಯಾಗಬೇಕಮ್ಮ’ ಅಂತ ಸಲಹೆ ಕೊಡುವುದು ಸುಲಭ. ಅಂಥದ್ದೊಂದು ಗುರಿ ಅಥವಾ ಗಮ್ಯ ಠಛಿಠಿ ಮಾಡಿಕೊಟ್ಟುಬಿಡುವುದೂ ಸುಲಭ. ಆದರೆ ಅವಳಿಗದು ಇಷ್ಟವಾ? ಇಷ್ಟವಿದ್ದರೂ, ಅವಳಿಂದ ಅದು ಸಾಧ್ಯವಾ? ಅದನ್ನು ಅವಳೇ ಯೋಚಿಸಿ ತೀರ್ವನಿಸಬೇಕು.

ಸಾಮಾನ್ಯವಾಗಿ ನಾವೆಲ್ಲ ಮಾಡುವ ಅತಿದೊಡ್ಡ ಪೊರಪಾಟೆಂದರೆ, ನಮ್ಮ ಯೋಗ್ಯತೆ, ತಾಕತ್ತು, ಶ್ರದ್ಧೆ ಎಲ್ಲವನ್ನೂ over estimate ಮಾಡಿ ಒಂದು ಗುರಿ ಆಯ್ದುಕೊಂಡುಬಿಡುತ್ತೇವೆ. ಸರಿಯಾಗಿ ದಿನಕ್ಕೆರಡು ನ್ಯೂಸ್ ಪೇಪರು ಓದುವ ಸಹನೆ ಇರುವುದಿಲ್ಲ: ಐಎಎಸ್ ಬರೆಯಲು ತಯಾರಾಗಿಬಿಡುತ್ತೇವೆ. ನಮ್ಮ ನಿಲುಕಿಗಿಲ್ಲದ ಅಂಥ ಗುರಿಗಳನ್ನ ಇಟ್ಟುಕೊಂಡಾಗ ಸಹಜವಾಗಿಯೇ ಆರಂಭದಲ್ಲೇ ‘ಇದು ನಂಗೆ ಹೇಳಿ ಮಾಡಿಸಿದ್ದಲ್ಲ’ ಎಂಬುದು ಗೊತ್ತಾಗಿಹೋಗುತ್ತದೆ. ನಮ್ಮ ನಿರ್ಧಾರಕ್ಕೆ ಸಂಬಂಧವೇ ಇಲ್ಲದಂತೆ ನಾವು ಅದರಲ್ಲಿ ಆಸಕ್ತಿ ಕಳೆದುಕೊಂಡುಬಿಡುತ್ತೇವೆ. ಕಂಪ್ಯೂಟರು ನಮ್ಮದಲ್ಲ, ಗಿಟಾರು ನಮಗೆ ಹೇಳಿಮಾಡಿಸಿದ್ದಲ್ಲ, ಹಿಂದಿನ ಬೀದಿ ಗೋವಿಂದು not worth, ರೂಮು ಕ್ಲೀನ್ ಮಾಡೋದಕ್ಕೆ ಕೆಲಸದವಳೇ ಸರಿ, ಮೊಬೈಲ್ ರಿಪೇರಿ ಕಲಿತು ಏನಾಗಬೇಕಿದೆ? ಹೀಗೆ ನಮಗೇನೇ ನಮ್ಮ ಆಯ್ಕೆಗಳ ಮೇಲಿನ ಆಸ್ಥೆ ಹೊರಟುಹೋಗಿ ನಮ್ಮದು ಆರಂಭ ಶೂರತ್ವವಾಗಿಬಿಡುತ್ತದೆ.

ಇದರಿಂದ ತಪ್ಪಿಸಿಕೊಳ್ಳಲಿಕ್ಕೆ ಎರಡು ದಾರಿಗಳಿವೆ. ಮೊದಲನೆಯದು, ಗುರಿ ಅಂತ ಆರಿಸಿಕೊಳ್ಳುವಾಗ ಅದನ್ನು ತಲುಪುವ ಯೋಗ್ಯತೆ, ಅದಕ್ಕಾಗಿ ಶ್ರಮಿಸುವ ಸಹನೆ, ತಾಕತ್ತು ನಮಗೆ ಇದೆಯಾ ಅಂತ ಚೆಕ್ ಮಾಡಿಕೊಳ್ಳಬೇಕು. ಅದರ ಬಗ್ಗೆ ಕೊಂಚ ಅನುಮಾನವುಂಟಾದರೂ, ಆ ಗುರಿ ಎಷ್ಟೇ attractive ಆಗಿರಲಿ: ಅದನ್ನು ಬಿಟ್ಟುಬಿಡಬೇಕು. ಎರಡನೆಯದು: ಹಾಗೆ ನಮ್ಮ ಗುರಿಗಳನ್ನು (ಗುರುಗಳನ್ನೂ) ನಮಗೆ ಬೇಕಾದಾಗ ಬಿಟ್ಟಾಕಿ ಬೇರೆ ಆಯ್ಕೆ ಮಾಡಿಕೊಳ್ಳಲು ಹಿಂಜರಿಯಬಾರದು! ‘ಇದು ಇವತ್ತಲ್ಲ ನಾಳೆ ಬಿಟ್ಟಾಕೋ ಗುರಿಯೇ’ ಅಂತ ತೀರ್ವನಿಸಿಕೊಂಡು, ನಮ್ಮ ಎದುರಿನಲ್ಲಿ ನಮಗೇ ಆಗುವ ಮುಖಭಂಗವನ್ನು ಒಪ್ಪಿಕೊಂಡು ‘ನಾನು ಸ್ವಲ್ಪ ಹಾಗೇ ಕಣ್ರೀ...’ ಅಂತ ನಾವೇ accept ಮಾಡಿಕೊಂಡು ಹೊಸದೇನನ್ನಾದರೂ ಮಾಡಲು ಹೊರಡಬೇಕು. ನಿಮಗೆ ಗೊತ್ತಿರಲಿ- ಪದೇಪದೆ ಆಸಕ್ತಿ, ಗುರು, ಗುರಿ, ಅಭಿರುಚಿ ಬದಲಿಸುವುದು ಕೂಡ ಕ್ರಿಯಾಶೀಲತೆಯ ಲಕ್ಷಣವೇ! ನಾನದನ್ನು ಮೂವತ್ತಾರು ವರ್ಷ ಮಾಡಿದ್ದೇನೆ. ಈಗಲೂ ತಲೆಯ ಮೇಲಿನ ಬುತ್ತಿಯನ್ನು ನನ್ನೊಳಗಿನ ಚಾಂಚಲ್ಯವೆಂಬ bull dog ಕೊಡವುತ್ತಲೇ ಇರುತ್ತದೆ. ಒಂದಲ್ಲ ಹತ್ತು ಪ್ರಯತ್ನಗಳನ್ನು ಮಾಡಿ ಕಡೆಗೊಂದು ವೃತ್ತಿಗೆ, ಗಮ್ಯಕ್ಕೆ, ಗುರಿಗೆ ಗಂಟುಬೀಳುವುದು ಸಹಜ ಮತ್ತು ಸರಿ ಕೂಡ.

ನಿಮಗೆ ಕೊಂಚ odd ಅನ್ನಿಸಿದರೂ ಸರಿಯೇ, ಒಂದು ಮಾತು ಹೇಳ್ತೀನಿ ಕೇಳಿ. ಇವತ್ತಿನ ಗುರಿಗಳನ್ನ ಇವತ್ತೇ ಬೆಳಗ್ಗೆ ಎದ್ದು ಸೆಟ್ ಮಾಡಿಕೊಳ್ಳಿ. ಇವತ್ತು ಏನೇನು ಕೆಲಸ ಮಾಡಬೇಕು ಅಂತ ಒಂದು ಪಟ್ಟಿ ಮಾಡಿಕೊಂಡು ತುಂಬ ಅಗ್ರೆಸಿವ್ ಆಗಿ, ಶುದ್ಧ killer instinct ಇಟ್ಟುಕೊಂಡು, ಈ ಪುಟ್ಟ ಯುದ್ಧ ಗೆದ್ದೇ ಗೆಲ್ತೀನಿ ಅಂತ ರಾಕ್ಷಸನ ಹಾಗೆ ಹೊರಡಿ. ಇವತ್ತಿನ ಯುದ್ಧಕ್ಕೆ, ದುಡಿತಕ್ಕೆ, ಶ್ರಮಕ್ಕೆ ಇವತ್ತು ಬೆಳಗ್ಗೆ ನೀವು ಕೈಗೊಂಡ ನಿರ್ಧಾರ, ಸೆಟ್ ಮಾಡಿಕೊಂಡ ಗುರಿ ಸಾಕು. ನಾಳೆ ಏನು ಮಾಡಬೇಕು, ಹತ್ತು ವರ್ಷದ ನಂತರ ನೀವು ಏನಾಗಿರಬೇಕು ಅನ್ನೋದಿದೆಯಲ್ಲ- ಅದು ನಿಮ್ಮ ಇವತ್ತಿನ ಅಷ್ಟೂ ಕೆಲಸಗಳ ಮಧ್ಯೆ ಕೇವಲ 15 ನಿಮಿಷ ನೀಡಿ ಯೋಚಿಸಬೇಕಾದ ವಿಷಯವೇ ಹೊರತು, ಅದೇ ಇಡೀ ದಿನದ ಚಟುವಟಿಕೆಯಾಗಿ ಬಿಡಬಾರದು. ಎಷ್ಟೋ ಸಲ ಬೃಹತ್ತಾದ ಗುರಿಗಳ ನೆಪದಲ್ಲಿ ನಾವು ಇವತ್ತಿನ ಕೈಂಕರ್ಯಗಳನ್ನು ಮರೆಯುತ್ತಿರುತ್ತೇವೆ. ನಮ್ಮ ಕಳ್ಳಬೀಳುವ ಮನಸು ಇವತ್ತಿನ ಸವಾಲುಗಳಿಂದ ತಪ್ಪಿಸಿಕೊಳ್ಳಲು ಐಎಎಸ್​ನ ನೆಪ ಹುಡುಕುತ್ತಿರುತ್ತದೆ. ನಿಮ್ಮನ್ನು ನಾನು ವಿಮುಖರನ್ನಾಗಿ ಮಾಡುತ್ತಿದ್ದೇನೆ, ಉನ್ನತ ಗುರಿಗಳಿಂದ ದಿಕ್ಕು ತಪ್ಪಿಸುತ್ತಿದ್ದೇನೆ ಅಂತ ದಯವಿಟ್ಟು ಅಂದುಕೊಳ್ಳಬೇಡಿ. ನಮ್ಮ ಬದುಕಿನ ಸಾವಿರಾರು, ಲಕ್ಷಾಂತರ ಚಿಕ್ಕಚಿಕ್ಕ ಗೆಲುವುಗಳು, ವಿಜಯಗಳು, ಸಾಧನೆಗಳು ಸೇರಿಕೊಂಡೇ ಒಂದು ultimate  ಗಮ್ಯವನ್ನು ತಲುಪುವುದಕ್ಕೆ ನಮಗೆ ಸಹಾಯ ಮಾಡಿರುತ್ತವೆ. ಇವತ್ತು ಮನೆಮಂದಿಗೆಲ್ಲ ಅದ್ಭುತವಾದ ಹೋಳಿಗೆ ಮಾಡಿ ಬಡಿಸುತ್ತೇನೆ ಅಂತ ಹೊರಡುವ ತಾಯಿ ಎಲೆಯಂಚಿಗೆ ಕೋಸಂಬರಿ ಮಾಡಿಬಡಿಸುವುದನ್ನ ಮರೆತಿರುವುದಿಲ್ಲ. ಬೃಹತ್ತಾದ ಡ್ಯಾಮು ಕಟ್ಟಿದ ಕಾಂಟ್ರಾ್ಯಕ್ಟರನೊಬ್ಬ ಎಷ್ಟೋ ವರ್ಷಗಳ ಹಿಂದೆ ಸಿಮೆಂಟು ಕಲೆಸಿದ ಗಂಡಾಳಾಗಿರುತ್ತಾನೆ. ಹತ್ತು ವಿಲಕ್ಷಣ ಪ್ರೊಫೆಷನ್ನುಗಳ ಅಂತ್ಯದಲ್ಲಿ ನನ್ನ ಕೈಗೆ ಸಿಕ್ಕದ್ದು ಪತ್ರಿಕೋದ್ಯಮ. ಇಪ್ಪತೆôದು ವರ್ಷದ ಹಿಂದೆ ಎರಡು ಅಂಗೈಯಗಲದಷ್ಟು ಒಂದು ತಗಡಿನ ಮೇಲೆ ‘ಹಾಯ್ ಬೆಂಗಳೂರ್ ಓದಿರಿ!’ ಅಂತ ಬರೆಸಿ ಬನಶಂಕರಿಯ ಮರಗಳ ಮುಂದೆ ಬೈಕು ನಿಲ್ಲಿಸಿ, ಅದರ ಮೇಲೆ ಹತ್ತಿ ನಾನೇ ಮರಕ್ಕೆ ತಗಡನ್ನು ಮೊಳೆಯಿಟ್ಟು ಹೊಡೆದದ್ದು ನೆನಪಿದೆ. ಇಪ್ಪತೆôದು ವರ್ಷದ ನಂತರ, ಇವತ್ತು ಒಂದು ಫೋನು ಮಾಡಿದರೆ ಕುಳಿತಲ್ಲೇ ಕೆಲಸ ಆಗಿಬಿಡುತ್ತದೆ. ಆದರೂ ಖುದ್ದಾಗಿ ನಾನೇ ಹೋಗಿ ಮಾಡಿ ಬರುತ್ತೇನೆ. ದಾರಿಯಲ್ಲಿ ಯಾರಾದರೂ ನಿಲ್ಲಿಸಿ ‘ನಿನ್ನ ಜೀವನದ ಅತಿ ದೊಡ್ಡ ಗುರಿಯೇನು?’ ಅಂತ ಕೇಳಿದ್ದಿದ್ದರೆ, ‘ಈಗ ಹೋಗಿ ಕುಳಿತು ಬಾಕಿಯಿರುವುದಷ್ಟನ್ನೂ ಬರೆದು ಮುಗಿಸಿ ಕಣ್ತುಂಬ ನಿದ್ದೆ ಮಾಡಬೇಕು’ ಅಂತ ಉತ್ತರಿಸುತ್ತಿದ್ದೆ. ನನ್ನಲ್ಲಿ ಪ್ರತಿನಿಮಿಷದ ರಾಕ್ಷಸ ಹಟ ಹುಟ್ಟೋದೇ ಹಾಗೆ.

(ಲೇಖಕರು ಹಿರಿಯ ಪತ್ರಕರ್ತರು)