ಅಂಕಣ

ಬೇಡ ಭಾವ ಬಂಧನ: ಮನೋಲ್ಲಾಸ

Webdesk - Ravikanth
| ಮಹಾದೇವ ಬಸರಕೋಡ ಅಮೀನಗಡ

ಸನ್ಯಾಸಿಯೊಬ್ಬರು ಕಾಡಿನ ಕುಟೀರದಲ್ಲಿ ನೆಲೆಸಿದ್ದರು. ತ್ಯಾಗ, ತಾಳ್ಮೆಯ ಪ್ರತೀಕವಾಗಿದ್ದ ಅವರು ಅತ್ಯಂತ ಸರಳ ಜೀವನ ರೂಪಿಸಿಕೊಂಡಿದ್ದರು. ಶ್ರೀಮಂತ ವ್ಯಕ್ತಿಯೊಬ್ಬ ಅವರನ್ನು ಭೇಟಿಯಾಗಬೇಕೆಂದು ಅವರನ್ನು ಅರಸಿ ಹೋದ. ಅವರು ಒಂದು ಮರದ ಕೆಳಗೆ ನಾರುಬಟ್ಟೆಯನ್ನುಟ್ಟು ಧ್ಯಾನಾಸಕ್ತರಾಗಿದ್ದರು. ಅವರ ಸರಳತೆಯ ಕುರಿತಾಗಿ ಕೇಳಿದ್ದ ಶ್ರೀಮಂತ ಅವರ ಮುಖದಲ್ಲಿದ್ದ ತೇಜಸ್ಸು ಕಂಡ. ಅವರಲ್ಲಿ ಮಡುಗಟ್ಟಿದ್ದ ಸಂತಸದ ಭಾವ ಮತ್ತಷ್ಟು ಗೌರವ ಹುಟ್ಟಿಸಿತು. ಅವರಿಗೆ ಎಲ್ಲ ಗೌರವಗಳನ್ನು ನೀಡಿ ತನ್ನ ಊರಿನಲ್ಲಿಯೇ ಇಟ್ಟುಕೊಳ್ಳಬೇಕೆಂದು ಬಯಸಿ ಅವರನ್ನು ವಿನಂತಿಸಿದ. ಸರಿ ಎಂದು ತಕ್ಷಣಕ್ಕೆ ಸಂತರು ಒಪ್ಪಿಕೊಂಡರು. ತನ್ನ ಮನೆಯ ಪಕ್ಕದಲ್ಲಿಯೇ ಇರುವ ಸುಸಜ್ಜಿತ ಕಟ್ಟಡದಲ್ಲಿ ಅವರಿಗೆ ಎಲ್ಲ ಸೌಕರ್ಯಗಳನ್ನು ಒದಗಿಸಿದ. ಸಂತರು ಸಂತೋಷದಿಂದ ದಿನಗಳನ್ನು ಕಳೆಯತೊಡಗಿದರು. ಶ್ರೀಮಂತ ಅವರನ್ನು ಪರೀಕ್ಷಿಸಲು ಚಿನ್ನದ ತಟ್ಟೆಯಲ್ಲಿ ಉತ್ಕೃಷ್ಟ ಭೋಜನಕ್ಕೆ ವ್ಯವಸ್ಥೆ ಮಾಡಿದ. ಬೆಲೆಬಾಳುವ ಬಟ್ಟೆಗಳನ್ನು ಕೊಡಿಸಿದ. ಸಕಲ ಭೋಗಭಾಗ್ಯಗಳನ್ನು ಒದಗಿಸಿದ. ಯಾವುದನ್ನೂ ನಿರಾಕರಿಸದೇ ಎಲ್ಲವನ್ನು ಸಂತಸದಿಂದಲೇ ಸ್ವೀಕರಿಸಿದರು. ಕಿಂಚಿತ್ತನ್ನೂ ನಿರಾಕರಿಸದೇ ಎಲ್ಲ ಸೌಭಾಗ್ಯಗಳನ್ನು ಅನುಭವಿಸುತ್ತಿರುವುದನ್ನು ಕಂಡು ಇವರೊಬ್ಬ ಕಳ್ಳ ಸಂತರು ಎನಿಸತೊಡಗಿತು ಶ್ರೀಮಂತನಿಗೆ. ಅವರ ಕುರಿತಾಗಿ ಇದ್ದ ಗೌರವದ ಭಾವವೆಲ್ಲ ಕ್ಷಣಮಾತ್ರದಲ್ಲಿ ಮರೆಯಾಯಿತು. ನೇರವಾಗಿ, ‘ಅದೇನು ನೀವು ನಾನು ಒದಗಿಸಿದ ಎಲ್ಲ ಭೋಗ ಭಾಗ್ಯಗಳನ್ನು ಅನುಭವಿಸುತ್ತಿದ್ದೀರಿ. ಯಾವುದನ್ನೂ ನಿರಾಕರಿಸಲಿಲ್ಲ. ಅಂದೆಂಥ ಸಂತರು ನೀವು?’ ಎಂದು ಪ್ರಶ್ನಿಸಿದ.

ಸಂತರು ಅದೇ ಪ್ರಸನ್ನ ಭಾವದಿಂದ, ‘ನಾಳೆ ನಿನ್ನ ಪ್ರಶ್ನೆಗೆ ಉತ್ತರವನ್ನು ನೀಡುತ್ತೇನೆ. ನೀನು ನನ್ನೊಂದಿಗೆ ಬರಬೇಕು’ ಎಂದರು. ಸರಿ ಎಂದ ಶ್ರೀಮಂತ. ಸಂತರು ಶ್ರೀಮಂತನನ್ನು ಕರೆದುಕೊಂಡು ಕಾಡಿನಲ್ಲಿ ಸಾಗಿದರು. ಕಾಡಿನಲ್ಲಿದ್ದ ಒಂದು ಸಣ್ಣ ಕುಟೀರದಲ್ಲಿಯೇ ತಮ್ಮೊಂದಿಗೆ ತಂಗಲು ಹೇಳಿದರು. ನಾನು ಮರಳಿ ಹೋಗಬೇಕು ಎಂದ ಶ್ರೀಮಂತ. ಕೆಲವು ದಿನ ಇಲ್ಲಿಯೇ ಇರಬೇಕು ಎಂದರು ಸಂತರು. ‘ಹೆಂಡತಿ ಮಕ್ಕಳು, ರಾಜಭೋಗ ಎಲ್ಲವೂ ಇದೆ. ನಾನು ಇಲ್ಲಿ ಇರಲಾರೆ’ ಎಂದ ಶ್ರೀಮಂತ. ‘ನಾನು ನಿನ್ನೆ ಮಹಲಿನಲ್ಲಿ ಇದ್ದೆ. ಇಂದು ಕಾಡಿನ ಕುಟೀರದಲ್ಲಿದ್ದೇನೆ. ನನಗೆ ಯಾವುದೇ ವ್ಯತ್ಯಾಸವಿಲ್ಲ. ನಾನು ಇಲ್ಲಿಯೂ ಸಂತೋಷದಿಂದ ಇದ್ದೇನೆ. ಅಲ್ಲಿಯೂ ಸಂತೋಷದಿಂದ ಇದ್ದೆ. ನೀನು ಈಗ ಮಹಲಿನಲ್ಲಿ ಇಲ್ಲದಿದ್ದರೂ ಅದು ನಿನ್ನೊಳಗೆ ಇದೆ. ನಾನು ಮಹಲಿನಲ್ಲಿದ್ದರೂ ಆಗ ಅದು ನನ್ನೊಳಗಿರಲಿಲ್ಲ. ನಿನ್ನಿಂದ ಅದು ಸಾಧ್ಯವೇ?’ ಎಂದಾಗ ಶ್ರೀಮಂತನಿಗೆ ತನ್ನ ತಪ್ಪಿನ ಅರಿವಾಗಿತ್ತು. ದುಃಖ ದುಮ್ಮಾನ, ಸುಖ ಸಂತೋಷ ಇವೆಲ್ಲ ವಸ್ತುಗಳ ಬಗೆಗೆ ನಾವು ಬೆಳೆಸಿಕೊಂಡಿರುವ ಭಾವವೇ ಹೊರತು ವಸ್ತುಗಳಲ್ಲ. ಮನಸ್ಥಿತಿ ಬದಲಾಯಿಸಿಕೊಳ್ಳುವುದು ಬಹು ಮುಖ್ಯ. ವಸ್ತುಗಳನ್ನು ಬಿಟ್ಟು ಹೋಗುವುದಲ್ಲ. ಅವುಗಳ ಕುರಿತಾಗಿ ಚಿತ್ತಸಮತೆ ಹೊಂದುವುದು, ಅದಕ್ಕಿಂತ ಹೆಚ್ಚಾಗಿ ನಮ್ಮ ಚಿತ್ತವನ್ನು ಪ್ರವೇಶಿಸದಂತೆ ತಡೆಯುವುದು ಜಾಣತನ. ಮನಸ್ಸು ಭ್ರಾಂತಿಗಳಿಗೆ ಬಲಿಯಾಗದಂತೆ ನೋಡಿಕೊಳ್ಳಬೇಕು.

(ಲೇಖಕರು ಅಧ್ಯಾಪಕರು, ಬರಹಗಾರರು)