ಆರ್ಥಿಕ ಹಿಂಜರಿತದಿಂದ ರಿಯಲ್ ಎಸ್ಟೇಟ್ ಮಂಕಾಗಿ ಮನೆಗಳು ಹಾಗೂ ಅಪಾರ್ಟ್ವೆುಂಟ್ಗಳ ಮಾರಾಟ ಕೊಂಚ ತಗ್ಗಿದ ಬೆನ್ನಲ್ಲೇ ಬೆಂಗಳೂರಲ್ಲೀಗ ‘ಕೋ ಸ್ಪೇಸ್ ಲಿವಿಂಗ್ ಟ್ರೆಂಡ್’ ಶುರುವಾಗಿದೆ. ನಿರ್ಮಾಣವಾಗಿರುವ ಅಪಾರ್ಟ್ವೆುಂಟ್ಗಳ ಎಲ್ಲ ಕೊಠಡಿಗಳಲ್ಲಿ ಹಾಸಿಗೆ ವ್ಯವಸ್ಥೆ ಕಲ್ಪಿಸುವ ಮೂಲಕ ಪೇಯಿಂಗ್ ಗೆಸ್ಟ್ (ಪಿಜಿ) ಹಾಗೂ ಲಾಡ್ಜ್ಗಳ ಮಾದರಿಯಲ್ಲಿ ಬಾಡಿಗೆಗೆ ಕೊಡಲಾಗುತ್ತಿದೆ.
ವಿದೇಶಗಳಲ್ಲಿ ಜನಪ್ರಿಯವಾಗಿರುವ ‘ಕೋ ಸ್ಪೇಸ್’ ಪದ್ಧತಿ ಇಲ್ಲೂ ಆರಂಭವಾಗಿದೆ. ಬೆಂಗಳೂರಿಗೆ ಉದ್ಯೋಗ, ಶಿಕ್ಷಣಕ್ಕಾಗಿ ಬೇರೆ ನಗರಗಳಿಂದ ಬರುವವರೇ ಹೆಚ್ಚು. ಕಾಲೇಜುಗಳ ವಿದ್ಯಾರ್ಥಿಗಳು ಹಾಸ್ಟೆಲ್ನಲ್ಲಿ ಉಳಿದುಕೊಂಡರೆ, ಮತ್ತೆ ಕೆಲವರು ಪಿ.ಜಿ ಹಾಗೂ ಸಂಬಂಧಿಕರ ಮನೆಯಲ್ಲಿ ವಾಸವಿರುತ್ತಾರೆ. ಇವೆರಡೂ ಇಷ್ಟ ಇಲ್ಲದವರಿಗೆ ಕೋ-ಸ್ಪೇಸ್ ಲೀವಿಂಗ್ ಅನುಕೂಲವಾಗುತ್ತದೆ. ಜತೆಗೆ, ದೂರದ ಊರುಗಳಿಂದ ಚಿಕಿತ್ಸೆ, ಸಭೆ-ಸಮಾರಂಭ, ತರಬೇತಿಗೆ ಬರುವವರಿಗೂ ಇದು ಅನುಕೂಲ.
ಕೋ ಸ್ಪೇಸ್ ಯೋಜನೆಯಲ್ಲಿ ಕೊಠಡಿಗಳನ್ನು ಬಾಡಿಗೆಗೆ ಕೊಡುವುದನ್ನು ಎರಡು ರೀತಿಯಲ್ಲಿ ವ್ಯಾಖ್ಯಾನಿಸಲಾಗುತ್ತಿದೆ. ಎರಡು ತಿಂಗಳವರೆಗೆ ಬಾಡಿಗೆ ಪಡೆಯುವುದನ್ನು ‘ಲಘು ಯೋಜನೆ’ ಎಂದೂ ಇದಕ್ಕಿಂತ ಮೇಲ್ಪಟ್ಟು ಬಾಡಿಗೆ ಪಡೆಯುವುದನ್ನು ‘ದೀರ್ಘ ಯೋಜನೆ’ ಎನ್ನಲಾಗುತ್ತದೆ. ಕಡಿಮೆ ಅವಧಿಯವರೆಗೆ ಉಳಿದುಕೊಳ್ಳಲು ಪಿ.ಜಿಗಳಲ್ಲಿ ಅವಕಾಶ ಇರುವುದು ಕಡಿಮೆ. ಒಂದೊಮ್ಮೆ ಇದ್ದರೂ ಬಾಡಿಗೆ ಕೇಳುತ್ತಾರೆ. ಹೀಗಾಗಿ ಅಪಾರ್ಟ್ವೆುಂಟ್ಗಳು ಕೋ-ಸ್ಪೇಸ್ ಲಿವಿಂಗ್ ಎಂಬ ಹೊಸ ಪದ್ಧತಿಯನ್ನು ಅಳವಡಿಸಿಕೊಂಡಿವೆ.
ಹುಡಕಾಟದ ಸಮಸ್ಯೆ ಇಲ್ಲ: ಮನೆ ಬಾಡಿಗೆ ಪಡೆದು ಅದರ ನಿರ್ವಹಣೆ ಕಷ್ಟ ಎನ್ನುವವರಿಗೆ ಈ ಪದ್ಧತಿ ಅನುಕೂಲ. ಅಲ್ಲದೆ, ಮನೆಯ ಹುಡುಕಾಟಕ್ಕಾಗಿ ಕಷ್ಟ ಪಡುವ ಅವಶ್ಯಕತೆಯೂ ಇಲ್ಲ. ಇದಕ್ಕಾಗಿಯೇ ಸಾಕಷ್ಟು ವೆಬ್ಸೈಟ್, ಮೊಬೈಲ್ ಆಪ್ಗಳು ಲಭ್ಯವಿವೆ. ಕಚೇರಿ, ಕಾಲೇಜಿಗೆ ಹತ್ತಿರವಾಗುವ ಸ್ಥಳದಲ್ಲೇ ಮನೆ ಪಡೆಯಬಹುದಾಗಿದೆ.
ಏನೆಲ್ಲಾ ಸೌಕರ್ಯ: ಇದು ಪಿ.ಜಿಗಿಂತ ಸ್ವಲ್ವ ಲಕ್ಸುರಿ. ಗುಣಮಟ್ಟದ ಬೆಡ್, ಹವಾನಿಯಂತ್ರಿತ ಕೊಠಡಿ, ಉಚಿತ ವೈ-ಫೈ, ಕಿಚನ್ ಏರಿಯಾ, ಡೈನಿಂಗ್ ಏರಿಯಾ, ಅತ್ಯಾಧುನಿಕ ಶೌಚಗೃಹ, ಪೀಠೋಪಕರಣ ಎಲ್ಲವೂ ದೊರೆಯಲಿದೆ. ಕೆಲವು ಆಪಾರ್ಟ್ವೆುಂಟ್ಗಳಲ್ಲಿ ರೆಫ್ರಿಜರೇಟರ್, ವಾಷಿಂಗ್ ಮಿಷನ್ ಸೌಲಭ್ಯವೂ ಇರಲಿದೆ.
ಬಿಲ್ಗಳ ಸಮಸ್ಯೆ ಇಲ್ಲ: ಬಾಡಿಗೆ ಮನೆಯಲ್ಲಿ ಪ್ರತಿ ತಿಂಗಳು ವಿದ್ಯುತ್ ಬಿಲ್, ನೀರಿನ ಬಿಲ್ಗಳನ್ನು ಕಟ್ಟಬೇಕು. ಮನೆ ಬಿಟ್ಟು ಹೋಗುವಾಗ ಪೇಂಟಿಂಗ್ಗಾಗಿ ಸಾಕಷ್ಟು ಹಣ ಪಾವತಿಸಬೇಕು. ಆದರೆ, ಕೋ-ಲಿವ್ನಲ್ಲಿ ಇದ್ಯಾವುದರ ಸಮಸ್ಯೆ ಇಲ್ಲ. ಮನೆ ಮಾಲೀಕರೂ ಇಲ್ಲದ ಕಾರಣ, ವಿದ್ಯಾರ್ಥಿಗಳು ಹಾಗೂ ಉದ್ಯೋಗಸ್ಥರ ಆಕರ್ಷಣೆಗೆ ಪ್ರಮುಖ ಕಾರಣವಾಗಿದೆ.
4ರಿಂದ 40 ಸಾವಿರ ರೂ. ಬಾಡಿಗೆ: ಇದರಲ್ಲೂ ಷೇರಿಂಗ್ಗೆ ಅವಕಾಶವಿದ್ದು, ಒಂದೇ ರೂಮ್ಲ್ಲಿ ಮೂರು ನಾಲ್ಕೂ ಜನ ಉಳಿಯುವುದಾದರೆ ಅಂತಹವರಿಗೆ ಈ ಷೇರಿಂಗ್ ಅನುಕೂಲವಾಗಲಿದೆ. ಬಾಡಿಗೆ ಸಹ ಕಡಿಮೆ ಬೀಳಲಿದೆ. ಬಾಡಿಗೆಯು ಆಯಾ ಪ್ರದೇಶಕ್ಕೆ ಅನುಗುಣವಾಗಿ ನಿಗದಿ ಮಾಡಲಾಗುತ್ತದೆ. ಕನಿಷ್ಠ 4 ಸಾವಿರದಿಂದ ಆರಂಭವಾಗಿ 40 ಸಾವಿರ ರೂ.ವರೆಗೂ ಬಾಡಿಗೆ ಇದೆ.
ಕೋ-ಲಿವಿಂಗ್ ಅನುಕೂಲಗಳೇನು?
40 ಎಕರೆಯಲ್ಲಿ ಕೋ ಸ್ಪೇಸ್ ಲಿವಿಂಗ್: ಗೆಸ್ಚರ್ ಎಂಬ ಸಂಸ್ಥೆ ಎಲೆಕ್ಟ್ರಾನಿಕ್ಸ್ ಸಿಟಿ ಫೇಸ್ 2ರಲ್ಲಿ 40 ಎಕರೆ ಜಾಗದಲ್ಲಿ ಯೂತ್ ಸಿಟಿ ಹೆಸರಿನಲ್ಲಿ 30ಗಿ40 ಮತ್ತು 30ಗಿ50 ಅಡಿ ನಿವೇಶನದಲ್ಲಿ ಅಪಾರ್ಟ್ವೆುಂಟ್ಗಳನ್ನು ನಿರ್ಮಾಣ ಮಾಡಿ ಕೋ ಸ್ಪೇಸ್ ಲಿವಿಂಗ್ ಪದ್ಧತಿ ಅನುಷ್ಠಾನಕ್ಕೆ ತರುತ್ತಿದೆ. ನಾಲ್ಕು ವರ್ಷಗಳ ಹಿಂದೆ ಎಲೆಕ್ಟ್ರಾನಿಕ್ ಸಿಟಿ ಫೇಸ್ 1ರಲ್ಲಿ ಅಪಾರ್ಟ್ವೆುಂಟ್ಗಳನ್ನು ನಿರ್ಮಾಣ ಮಾಡಲಾಗಿತ್ತು. ಆದರೆ, ಖರೀದಿಸಲು ಯಾರೂ ಮುಂದೆ ಬರದಿದ್ದಾಗ ವಿದೇಶಗಳಲ್ಲಿರುವ ಕೋ ಸ್ಪೇಸ್ ಲಿವಿಂಗ್ ಪದ್ಧತಿಯನ್ನು ಅಧ್ಯಯನ ನಡೆಸಿ ಇಲ್ಲೂ ಅನುಷ್ಠಾನಕ್ಕೆ ತರಲಾಯಿತು ಎಂದು ಗೆಸ್ಚರ್ ಸಂಸ್ಥೆ ನಿರ್ದೇಶಕ ಪ್ರಮೋದ್ ಕುಮಾರ್ ಹೇಳುತ್ತಾರೆ.
ಜಿಮ್ ಸಿಮ್ಮಿಂಗ್ ಫೂಲ್: ಜಿಮ್ ಈಜುಕೊಳ, ಗೇಮಿಂಗ್ ಏರಿಯಾ, ಕ್ಲಬ್ ಏರಿಯಾ ಇವೆಲ್ಲವೂ ಬೇಕಾದಲ್ಲಿ ಮತ್ತಷ್ಟು ಬಾಡಿಗೆ ನೀಡಬೇಕಾಗುತ್ತದೆ. ಕೋ-ಲಿವ್ನಲ್ಲಿ ಬಾಡಿಗೆ ಹಣ ಒಂದೇ ಪಾವತಿಸಬೇಕಾಗಿದ್ದು, ನಿರ್ವಹಣೆ ವೆಚ್ಚದಿಂದ ವಿನಾಯಿತಿ ಪಡೆದುಕೊಳ್ಳಬಹುದು.
9 ವರ್ಷಕ್ಕೆ ಲೀಸ್ಗೆ: ಎಂಬೆಸ್ಸಿ, ಸಲಾರ್ಪುರಿಯಾ ಸೇರಿ ಪ್ರಮುಖ ಬಿಲ್ಡರ್ಗಳು ಕೋ ಸ್ಪೇಸ್ ಲಿವಿಂಗ್ನತ್ತ ಬರುತ್ತಿವೆ. ಈಗಾಗಲೇ ನಿರ್ಮಾಣ ಮಾಡಿರುವ ಅಪಾರ್ಟ್ವೆುಂಟ್ಗಳನ್ನೂ 9 ವರ್ಷಕ್ಕೆ ಲೀಸ್ಗೆ ಪಡೆದು ಅವರೇ ನಿರ್ವಹಿಸುವ ವ್ಯವಸ್ಥೆಯೂ ಇದೆ. ಬಂಡವಾಳ ಹೂಡಿಕೆ ಮಾಡಿ ಕಟ್ಟಡ ನಿರ್ವಿುಸಿದರೆ ಬಿಲ್ಡರ್ ಸಂಸ್ಥೆಗಳೇ ಮುಂದೆ ಬಂದು ನಿಯಮ ಬದ್ಧವಾಗಿ ಕರಾರು ಮಾಡಿಕೊಂಡು ಹಣ ಪಡೆಯುತ್ತಾರೆ.
ದೇವರಾಜ್ ಎಲ್.