ದುಬೈನಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದ್ದ ಸಂದರ್ಭ. 
ಅಂಕಣ

ಪ್ರತಿಭಾ ಪಲಾಯನ, ಲಾಭ-ನಷ್ಟದ ಸಮ್ಮಿಲನ..

| ಡಾ. ಪ್ರಿಯಾಂಕ ಎಂ.ಜಿ

ಟ್ವಿಟರಿನ ಸಿಇಒ ಆಗಿದ್ದ ಅಮೆರಿಕ ಮೂಲದ ಜಾಕ್ ಪ್ಯಾಟ್ರಿಕ್ ಅವರ ಬದಲಿಗೆ ಭಾರತದ 38 ವರ್ಷದ ಟೆಕ್ಕಿ ಪರಾಗ್ ಅಗರ್​ವಾಲ್ ಅವರನ್ನು ನೇಮಿಸಲಾಗಿದೆ. ಐಎಂಎಫ್ (ಇಂಟರ್​ನ್ಯಾಷನಲ್ ಮಾನಿಟರಿ ಫಂಡ್) ನ ಮೊದಲ ಉಪ ವ್ಯವಸ್ಥಾಪಕ ನಿರ್ದೇಶಕಿಯಾಗಿ ಆರ್ಥಿಕ ತಜ್ಞೆ ಗೀತಾ ಗೋಪಿನಾಥ್ ಅವರನ್ನು 2022ರ ಜನವರಿ 21ರಂದು ನೇಮಕ ಮಾಡಲಾಗಿದೆ. ಈ ಎರಡು ನೇಮಕಗಳು ಭಾರತಸಂಜಾತರು ಬೇರೆ ಬೇರೆ ದೇಶಗಳಲ್ಲಿನ ಪ್ರಖ್ಯಾತ ಕಂಪನಿಗಳ ಉನ್ನತ ಹುದ್ದೆಗಳನ್ನು ಅಲಂಕರಿಸಿರುವ ಪಟ್ಟಿಯನ್ನು ಇನ್ನಷ್ಟು ಬೆಳೆಸಿದೆ. ಇದು ಭಾರತೀಯರಾದ ನಮಗೆ ಹೆಮ್ಮೆಯ ವಿಷಯವೇ. ಆದರೆ, ಇದರಿಂದ ಭಾರತಕ್ಕೆ ಎಷ್ಟು ಲಾಭ? 1970ರ ಮೊದಲು ಜಾಗತೀಕರಣ, ಕಾಮನ್ ಕರೆನ್ಸಿ, ಬ್ರೇನ್ ಡ್ರೇನ್​ನಂತಹ ಪದವನ್ನು ನಾವು ಕೇಳಿರಲಿಲ್ಲ. ಹಾಗಾದರೆ ಏನಿದು ಬ್ರೇನ್ ಡ್ರೇನ್ ಅಥವಾ ಪ್ರತಿಭಾ ಪಲಾಯನ? ಮಾನವ ಸಂಪನ್ಮೂಲವನ್ನು ಕಳೆದುಕೊಳ್ಳುವ ಪ್ರಕ್ರಿಯೆ ಅಥವಾ ಅಭಿವೃದ್ಧಿಯಾಗುತ್ತಿರುವ ದೇಶದಿಂದ ಅಭಿವೃದ್ಧಿ ಹೊಂದಿರುವ ದೇಶಕ್ಕೆ ವಲಸೆ ಹೋಗುವುದಕ್ಕೆ ಬ್ರೇನ್ ಡ್ರೇನ್ ಎಂದು ಕರೆಯುತ್ತಾರೆ. ಇದಕ್ಕೆ ಕಾರಣ- ದೇಶದ ರಾಜಕೀಯದಲ್ಲಿರುವ ಅಭದ್ರತೆ, ಉದ್ಯೋಗ ಸೃಷ್ಟಿಯ ಕೊರತೆ, ಭ್ರಷ್ಟಾಚಾರ, ಬುದ್ಧಿವಂತಿಕೆಗೆ ಇಲ್ಲದ ಮನ್ನಣೆ, ವಿದೇಶದಲ್ಲಿರುವ ಶಿಕ್ಷಣ, ಜೀವನದ ಗುಣಮಟ್ಟ, ಸಾಮಾಜಿಕ ಭದ್ರತೆ, ಲಿಂಗ ಸಮಾನತೆ ಮತ್ತು ಆರೋಗ್ಯ ಸೌಲಭ್ಯಗಳು.. ಹೀಗೆ ಅನೇಕ. 2016ರಲ್ಲಿ ನಡೆದ ಸಮೀಕ್ಷೆಯ ಪ್ರಕಾರ ಭಾರತದ 6 ಲಕ್ಷ ಮೂಲ ನಿವಾಸಿಗಳು ವಿದೇಶಿ ಪೌರತ್ವವನ್ನು ಸ್ವೀಕರಿಸಿದ್ದಾರೆ. 2014ರಲ್ಲಿ 23 ಸಾವಿರ ಸಿರಿವಂತರು ಭಾರತ ತೊರೆದಿದ್ದಾರೆ. ಉನ್ನತ ಶಿಕ್ಷಣ ಮತ್ತು ಶ್ರೀಮಂತ ಉದ್ಯಮಿ ವಲಸಿಗರ ಸಂಖ್ಯೆಯನ್ನು ಗಮನಿಸಿದರೆ ವಿಶ್ವದಲ್ಲಿ ಭಾರತದ್ದೇ ಮೇಲುಗೈ. ಅಂದರೆ, ಇದು 31.2 ಲಕ್ಷದಷ್ಟಿದೆ. ಚೀನಾ ಎರಡನೇ ಸ್ಥಾನ ಅಂದರೆ 22.5 ಲಕ್ಷದಷ್ಟಿದೆ, ಫಿಲಿಪ್ಪಿನ್ಸ್ ಮೂರನೇ ಸಾನ್ಥದಲ್ಲಿದ್ದು, ಅದು 18.9 ಲಕ್ಷ ಇದೆ.1970ರ ಆಸುಪಾಸಿನಲ್ಲಿ ನಮ್ಮ ಅನೇಕ ತರುಣ- ತರುಣಿಯರು ಪದವಿಯನ್ನು ಮುಗಿಸಿ ಕೆಲಸಕ್ಕಾಗಿ ಹಪಹಪಿಸಿ, ಅದು ಸಿಕ್ಕರೂ ಇಲ್ಲಿ ಅವರಿಗೆ ಸರಿಯಾದ ವೇತನ ಸಿಗದಿದ್ದ ಸಮಯದಲ್ಲಿ ವಿದೇಶದ ಅನೇಕ ಖಾಸಗಿ ಕಂಪನಿಗಳು ಟ್ಯಾಲೆಂಟ್​ಗೆ ತಕ್ಕಂತಹ ಸವಲತ್ತು ಮತು ್ತೌಲಭ್ಯಗಳನ್ನು ನೀಡಿ ತಮ್ಮತ್ತ ಸೆಳೆದಿದ್ದು ಮಾತ್ರ ಸುಳ್ಳಲ್ಲ. ಇಲ್ಲಿಂದ ಸಾಮಾನ್ಯ ಕಾರ್ವಿುಕನಾಗಿ ಹೋಗಿ ಬ್ಯಾಂಕರ್​ಗಳಾಗಿ, ದೊಡ್ಡ ಉದ್ಯಮಿಗಳಾಗಿ ಬೆಳೆದ ನಿದರ್ಶನಗಳು ಇವೆ.

ಶಿಕ್ಷಣದ ಲಭ್ಯತೆ: ಭಾರತದಲ್ಲೂ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಆದರೆ, ಅದು ಪ್ರಾಥಮಿಕ ಶಿಕ್ಷಣಕ್ಕೆ ಮಾತ್ರ. ನಮ್ಮಲ್ಲಿ ಉನ್ನತ ಶಿಕ್ಷಣ ಇಂದಿಗೂ ಒಂದು ಸವಾಲಾಗಿದೆ. ನಮ್ಮಲ್ಲಿರುವ ಐ.ಐ.ಟಿ, ಐ.ಐ.ಎಂ ನಂತಹ ಅಥವಾ ದೇಶದ ಯಾವುದೇ ಪ್ರತಿಷ್ಠಿತ ವಿವಿಗಳು ವಿಶ್ವದ ಟಾಪ್ 100 ವಿ.ವಿಗಳ ಪಟ್ಟಿಯಲ್ಲಿಲ್ಲ. ಹಾಗಾಗಿ ನಮ್ಮ ವಿದ್ಯಾರ್ಥಿಗಳು ಲಕ್ಷಾಂತರ ರೂ.ಗಳನ್ನು ಕೊಟ್ಟು ಬೇರೆ ದೇಶಗಳ ವಿಶ್ವವಿದ್ಯಾಲಯಗಳ ಕದ ತಟ್ಟುತ್ತಿದ್ದಾರೆ. ಸತ್ಯ ನಾದೆಳ್ಳ (ಮೈಕ್ರೊಸಾಫ್ಟ್ ನ ಸಿ.ಇ.ಒ), ಸುಂದರ್ ಪಿಚೈ (ಗೂಗಲ್ ಸಿ.ಇ.ಒ), ಶಾಂತನು ನಾರಾಯಣ್ (ಅಡೋಬ್ ಸಿ.ಇ.ಒ), ಅರವಿಂದ್ ಕೃಷ್ಣ (ಐ.ಬಿ.ಎಂ ಸಿ.ಇ.ಒ) ಮುಂತಾದವರು ಭಾರತದಲ್ಲಿ ಪದವಿ ಪಡೆದು ಉನ್ನತ ಶಿಕ್ಷಣಕ್ಕಾಗಿ ವಿದೇಶದ ವಿ.ವಿಗಳಿಗೆ ವಲಸೆ ಹೋಗಿ ಅಲ್ಲಿಯೇ ನೆಲೆಸಿದ್ದಾರೆ.

ಶಿಕ್ಷಣದ ಖರ್ಚು-ವೆಚ್ಚ: ಭಾರತ ತನ್ನ ಜಿ.ಡಿ.ಪಿ ಯಲ್ಲಿನ ಶೇ 3.5ರಷು ್ಟಕ್ಷಣಕ್ಕೆಂದು ಮೀಸಲಿಡುತ್ತದೆ. ಜತೆಗೆ, ಉನ್ನತ ಶಿಕ್ಷಣಕ್ಕೆ ಸಬ್ಸಿಡಿ, ಸ್ಕಾಲರ್​ಶಿಪ್​ಗಳನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದೆ. ಎಕನಾಮಿಕ್ ಸರ್ವೆಯ ಪ್ರಕಾರ 2019-20ರಲ್ಲಿ ಭಾರತ ಸುಮಾರು 6.43 ಲಕ್ಷ ಕೋಟಿ ರೂ.ಗಳನ್ನು ಪಬ್ಲಿಕ್ ಫಂಡ್ ಫಾರ್ ಎಜುಕೇಷನ್ ಮೂಲಕ ನೀಡಿದೆ. ಇನ್ನು ಕೇಂದ್ರ ಸರ್ಕಾರ ಒಟ್ಟು 56,537 ಕೋಟಿ ರೂ.ಗಳಲ್ಲಿ ಶಾಲಾ ಶಿಕ್ಷಣಕ್ಕೆ ಶೇ. 60 ಹಣವನ್ನು ನೀಡಿದರೆ, ಉನ್ನತ ಶಿಕ್ಷಣಕ್ಕಾಗಿ 38,317 ಕೋಟಿ ರೂ. ನೀಡುತ್ತಿದೆ. ಒಟ್ಟಿನಲ್ಲಿ ನಮ್ಮ ದೇಶ ತನ್ನ ಒಟ್ಟು ಆದಾಯದಲ್ಲಿನ ಶೇ. 15ರಷ್ಟು ಹಣವನ್ನು ಶಿಕ್ಷಣಕ್ಕಾಗಿಯೇ ಮೀಸಲಿಡುತ್ತಿದೆ. ಭಾರತೀಯ ವಾಣಿಜ್ಯ ಮತ್ತು ಕೈಗಾರಿಕೆ ಒಕ್ಕೂಟ (ಅಸೊಚಾಮ್ ಅಧ್ಯಯನದ ಪ್ರಕಾರ, ಭಾರತದ ವಿದ್ಯಾರ್ಥಿಗಳು ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯುವ ಸಲುವಾಗಿ ಭಾರತ ಖರ್ಚು ಮಾಡುತ್ತಿರುವ ಹಣ ಸರಿ ಸುಮಾರು 1,34,300 ಕೋಟಿ ರೂ. ಶಿಕ್ಷಣ ಮುಗಿಸಿ ಅಲ್ಲಿಗೆ ತೆರಳುವ ನಮ್ಮ ಯುವಕರು ತಮ್ಮ ಅತಿ ಮುಖ್ಯ ಘಟ್ಟದ ವಯಸ್ಸು ಮತ್ತು ಅಮೂಲ್ಯವಾದ ಐಡಿಯಾಗಳನ್ನು ಅಲ್ಲಿಯೇ ಬಂಡವಾಳವಾಗಿ ವಿನಿಯೋಗಿಸುತ್ತಾರೆ. ಅಮೆರಿಕದ ಜೈವಿಕ ತಂತ್ರಜ್ಞಾನ ಕೇಂದ್ರ (ಎನ್​ಸಿಬಿಐ) ಪ್ರಕಾರ, ಭಾರತದಿಂದಲೇ ಅತಿ ಹೆಚ್ಚು ವೈದ್ಯರು ವಿದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಅಮೆರಿಕದಲ್ಲಿ 1,325 ಜನಕ್ಕೆ ಒಬ್ಬ ಭಾರತದ ವೈದ್ಯರಿದ್ದರೆ, ಭಾರತದಲ್ಲಿ 2,400 ಜನಕ್ಕೆ ಒಬ್ಬ ವೈದ್ಯರಿದ್ದಾರೆ. ಒಟ್ಟಿನಲ್ಲಿ ಭಾರತ ನುರಿತ ವೈದ್ಯರನ್ನು, ಇಂಜಿನಿಯರ್​ಗಳನ್ನು, ಉದ್ಯಮಿಗಳನ್ನು ವಿದೇಶಕ್ಕೆ ವಲಸೆ ಹೋಗುವಂತೆ ಮಾಡಿ ತನ್ನ ಬೊಕ್ಕಸವನ್ನು ಖಾಲಿ ಮಾಡಿಕೊಳ್ಳುತ್ತಾ ವಿದೇಶಗಳ ಬೊಕ್ಕಸವನ್ನು ತುಂಬಿಸುತ್ತಿದೆ. ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದರೆ ನಮ್ಮ ಜೀನಿಯಸ್​ಗಳು ಕೈ ತಪ್ಪಿಹೋಗಿ ಭಾರತದ ಭವಿಷ್ಯಕ್ಕೆ ತೊಂದರೆಯಾಗುತ್ತದೆ.

ಅಧಿಕ ವೇತನ: ಅಮೆರಿಕದ ಅಕಾಡೆಮಿಕ್ ವಲಯದ ವೇತನ ಭಾರತಕ್ಕಿಂತ ಶೇ 6ರಷ್ಟು ಹೆಚ್ಚಿದ್ದರೆ, ಐ.ಟಿ ಕ್ಷೇತ್ರದ ವೇತನ ಭಾರತಕ್ಕಿಂತ ದುಪ್ಪಟ್ಟಿದೆ. ಮ್ಯಾನೇಜ್​ವೆುಂಟ್ ವಲಯದ ವೇತನ ಮೂರು ಪಟ್ಟು ಹೆಚ್ಚಿದೆ.

ಲಿಂಗ ಅಸಮಾನತೆ: ಭಾರತದಲ್ಲಿ ಲಿಂಗ ತಾರತಮ್ಯ 2021ರಲ್ಲಿ ಶೇ. 62ರಷ್ಟಿದೆ. ಮಹಿಳಾ ಉದ್ಯೋಗಿಗಳು ಪುರುಷರಷ್ಟೇ ಸರಿಸಮಾನರಾಗಿ ಅಥವಾ ಅದಕ್ಕಿಂತ ಹೆಚ್ಚಿನದಾಗಿಯೇ ಕೆಲಸ ನಿರ್ವಹಿಸಿ ದರೂ ಬಡ್ತಿ ಮತ್ತು ವೇತನವನ್ನು ಪುರುಷರಿಗಿಂತ ಕಡಿಮೆಯೇ ನೀಡುತ್ತಾರೆ. ಹಾಗಾಗಿ ಅನೇಕ ಯುವತಿಯರು ವಿದೇಶಕ್ಕೆ ಹಾರುತ್ತಿದ್ದಾರೆ.

ಫಾಸ್ಟ್ ಲೈಫ್: ಯುವಕರು ಫಾಸ್ಟ್ ಲೈಫ್/ಮೋಜನ್ನು ಹೆಚ್ಚು ಇಷ್ಟಪಡುತ್ತಿರುವುದರಿಂದ ವಿದೇಶಕ್ಕೆ ಹೋದವರು ಮತ್ತೆ ಹಿಂತಿರುಗಿಲ್ಲ. ಕೆಲವರು ತಂದೆ- ತಾಯಿ ಅಥವಾ ಕುಟುಂಬದ ಕಾರಣಕ್ಕೆ ವಾಪಸ್ಸಾಗಿದ್ದರೆ, ಕೆಲವರು ಅಲ್ಲಿಯ ವೀಸಾ ತಲೆನೋವಿಗಾಗಿ ವಾಪಸ್ಸಾಗಿದ್ದಾರೆ. ಮತೊಂದಷ್ಟು ಜನ ಗ್ರೀನ್ ಕಾರ್ಡ್ ಸಿಗದೆ ಮರಳಿ ಗೂಡಿಗೆ ಸೇರಿದ್ದಾರೆ.

ಎಲ್.ಪಿ.ಜಿ ಮಸೂದೆ: 1991 ರಲ್ಲಿ ಪಿ.ವಿ. ನರಸಿಂಹರಾವ್ ಸರ್ಕಾರ ತಂದ ಎಲ್.ಪಿ.ಜಿ (ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ) ಮಸೂದೆ ಅನೇಕ ಬದಲಾವಣೆ ತಂದಿದ್ದನ್ನು ಮರೆಯುವಂತಿಲ್ಲ. ಆಗ ಸಾಕಷ್ಟು ವಲಸಿಗ ಭಾರತೀಯರು, ಭಾರತದ ಆರ್ಥಿಕತೆಯ ಹಿಗ್ಗುವಿಕೆಯ ಕನಸನ್ನು ಕಾಣುತ್ತಾ, ಭಾರತಕ್ಕೆ ಮರಳಿದರು. ಹಾಗೆ ಬಂದವರನ್ನು ನಾವು ಹೆಚ್ಚು ಕಾಲ ಉಳಿಸಿಕೊಳ್ಳಲಾಗಲಿಲ್ಲ. 1997ರಿಂದ 2017ರವರೆಗೆ 1.7 ಕೋಟಿ ಭಾರತೀಯರು ಮತ್ತೊಮ್ಮೆ ಭಾರತ ತೊರೆದರು. ಒಂದು ಅಂದಾಜಿನ ಪ್ರಕಾರ ಎಸ್​ಎಸ್​ಎಲ್​ಸಿ ಮತ್ತು ಪಿಯುಸಿಯಲ್ಲಿ ಪ್ರಥಮ ರ್ಯಾಂಕ್ ಪಡೆದ ಅರ್ಧಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು 1996 ರಿಂದ 2015ರಲ್ಲಿ ವಲಸೆ ಹೋದವರು ಭಾರತಕ್ಕೆ ಮರಳಿಲ್ಲ. ಅಮೆರಿಕಕ್ಕೆ ಹೋದ ಇಂಡಿಯನ್ ಮೈಂಡ್ಸ್ ಗ್ರೀನ್ ಕಾರ್ಡ್/ಪೌರತ್ವ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.