ಅಂಕಣ

ಪ್ರತಿಕ್ರಿಯೆ; ಅವರು ಸಭೆ ಬಹಿಷ್ಕರಿಸಿದ್ದ ನ್ನು ಕನ್ನಡಿಗರು ಮರೆಯುವುದಿಲ್ಲ!

ಭಾಷೆಯ ಬೆಳವಣಿಗೆಗೆ ಸಂಬಂಧಿಸಿದಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ನೇತೃತ್ವದಲ್ಲಿ ತೆರಳಿದ ನಿಯೋಗ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ದೆಹಲಿಯಲ್ಲಿ ಕರ್ನಾಟಕದ ಎಲ್ಲ ಸಂಸದರ ಸಭೆಯನ್ನು ಕರೆದಿತ್ತು. ಮನವಿ ಪತ್ರದಲ್ಲಿ ಆರೆಸ್ಸೆಸ್​ನ ರಾಷ್ಟ್ರೀಯ ಸಭೆಯ (ಅಖಿಲ ಭಾರತೀಯ ಪ್ರತಿನಿಧಿ ಸಭಾ) ನಿರ್ಣಯವನ್ನು ಒಳಗೊಳ್ಳಲಾಗಿದೆ ಎಂಬ ಕಾರಣಕ್ಕೆ ಕಾಂಗ್ರೆಸ್​ನ ಸಂಸದರಾದ ಬಿ.ಕೆ. ಹರಿಪ್ರಸಾದ, ಡಿ.ಕೆ. ಸುರೇಶ್, ರಾಜೀವ್ ಗೌಡ, ನಾಸಿರ್ ಹುಸೇನ್ ಇತರರು ಸಭೆಯನ್ನು ಬಹಿಷ್ಕರಿಸಿ ಹೊರನಡೆದಿರುವುದು ಈಗ ಕನ್ನಡಿಗರಿಗೆ ತಿಳಿದಿರುವ ಸುದ್ದಿ.

ಆರೆಸ್ಸೆಸ್​ನ ಅಖಿಲ ಭಾರತೀಯ ಪ್ರತಿನಿಧಿ ಸಭೆಯು ಸಂಘಟನೆಯ ವಾರ್ಷಿಕ ಸಭೆಯಾಗಿದ್ದು, ಅದರಲ್ಲಿ ದೇಶದ ಸಮಕಾಲೀನ ವಿಚಾರಗಳ ಕುರಿತು ಸುದೀರ್ಘ ಚರ್ಚೆ ನಡೆದು ನಿರ್ಣಯವನ್ನು ಸಭೆ ಸರ್ವಾನುಮತದಿಂದ ಅಂಗೀಕರಿಸುತ್ತದೆ. ಈ ನಿರ್ಣಯ ಆರೆಸ್ಸೆಸ್​ನ ಸ್ವಯಂಸೇವಕರ ಮುಂದಿನ ದಿಶೆಯನ್ನು ನಿರ್ದೇಶನ ಮಾಡುವುದು ಮಾತ್ರವಲ್ಲ ಸಮಾಜದ ಗಮನವನ್ನೂ ಜೊತೆಗೆ ನೀತಿ ನಿರೂಪಕರ ಚಿಂತನೆಯನ್ನೂ ನಿರ್ಣಯದ ಕಡೆಗೆ ಸೆಳೆಯುವ ಪ್ರಯತ್ನವಾಗಿದೆ. 1950ರಿಂದ ಆರಂಭವಾದ ಈ ಪ್ರಕ್ರಿಯೆ ಎಡಬಿಡದೆ ಪ್ರತಿ ವರ್ಷ ನಡೆದು ಬಂದಿದೆ.

(2020ರ ಅಖಿಲ ಭಾರತೀಯ ಪ್ರತಿನಿಧಿ ಸಭೆ ಇದೇ ಮಾರ್ಚ್ 15ರಿಂದ 17ರವರೆಗೆ ಬೆಂಗಳೂರಿನಲ್ಲಿ ನಡೆಯುವುದಿದೆ) ಭಾಷೆಯ ಸಂವರ್ಧನೆ, ರಕ್ಷಣೆ ಮತ್ತು ಬಳಕೆಯ ಬಗ್ಗೆ ಆರೆಸ್ಸೆಸ್ ನಿರ್ಣಯ ಮಾಡಿರುವುದು ಇದೇ ಮೊದಲಲ್ಲ. 1960ರ ದಶಕದಿಂದಲೇ ಭಾಷೆ ಕುರಿತಾಗಿ ಚರ್ಚೆಯಲ್ಲಿ ಸಂಘ ಭಾಗವಹಿಸುತ್ತಿದೆ. ಮಾತ್ರವಲ್ಲದೆ ಧನಾತ್ಮಕ ಕೆಲಸಗಳನ್ನೂ ಮಾಡುತ್ತಿದೆ.

ರಾಷ್ಟ್ರೀಯ ಸಂಘಟನೆಯಾದ ಆರೆಸ್ಸೆಸ್ ಭಾರತದ ಎಲ್ಲ ಭಾಷೆಗಳನ್ನೂ ರಾಷ್ಟ್ರೀಯ ಭಾಷೆಗಳೆಂದು ಪರಿಗಣಿಸಿದೆ. ಭಾರತದ ಭಾಷೆ, ಉಪಭಾಷೆಗಳ ಪೋಷಣೆಗೆ ಸರ್ಕಾರ ಮಾತ್ರವಲ್ಲದೆ ಮನೆಮಂದಿಯೂ ಟೊಂಕ ಕಟ್ಟಬೇಕೆಂಬುದು ಸಂಘದ ಸ್ಪಷ್ಟ ಆಭಿಪ್ರಾಯ. ಮಗುವಿನ ಬೆಳವಣಿಗೆಗೆ ಮಾತೃಭಾಷೆ ಹೆಚ್ಚು ಸಹಕಾರಿಯಾದ್ದರಿಂದ ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲಿ ಆಗಬೇಕು ಎಂಬ ನಿರ್ಣಯವನ್ನು 2018ರಲ್ಲಿ ಪ್ರತಿನಿಧಿ ಸಭೆ ತೆಗೆದುಕೊಂಡಿತ್ತು.

ಭಾಷೆ ಉಳಿದು ಬೆಳೆಯಬೇಕೆಂದರೆ ಅದು ಜನರ ಭಾಷೆಯಾಗಬೇಕು, ನಿತ್ಯಬಳಕೆಯಲ್ಲಿ ಇರಬೇಕು. ಇದು ಒಂದಾದರೆ ಭಾಷೆ ಬೆಳೆಯಲು ಸಾಹಿತ್ಯ, ಸಂಗೀತ, ಚುಟುಕು, ನಾಟಕ, ಸಿನಿಮಾ, ಶಾಲೆ, ಪತ್ರಿಕೆಯಲ್ಲೂ ಜಾಗ ಪಡೆಯಬೇಕು. ಕೇವಲ ಮಾತಿನಲ್ಲಿದ್ದು ಅದು ಬರಹದಲ್ಲಿ ಇರದೆ ಅಥವಾ ಕೇವಲ ಬರಹದಲ್ಲಿದ್ದು ಅದು ಆಡುಭಾಷೆಯಾಗದೇ ಹೋದರೆ ಭಾಷೆ ಬೆಳೆಯಲು ಸಾಧ್ಯವಿಲ್ಲ. ಸಂಸ್ಕೃತ ಜನಜೀವನದ ಭಾಷೆಯಾಗಲು ಅಶಕ್ತವಾದ ಕಾರಣದಿಂದಲೇ ಇಂದು ಅದು ಗ್ರಾಂಥಿಕ ಭಾಷೆಯಾಗಷ್ಟೇ ಉಳಿದಿದೆ. ಕನ್ನಡ ಆಡುಭಾಷೆಯೂ ಹೌದು, ಸಾಹಿತ್ಯ, ಸಿನಿಮಾ, ಸಂಗೀತ ಇತ್ಯಾದಿಗಳಲ್ಲೂ ವಿಪುಲವಾಗಿ ಬಳಸಲ್ಪಡುವುದರಿಂದ ಅದು ನಿತ್ಯನೂತನ ಭಾಷೆಯೂ ಹೌದು.

ಆರೆಸ್ಸೆಸ್ ಕೆಲಸ ಮಾಡುತ್ತಿರುವ ರಾಜ್ಯಗಳಲ್ಲಿ ಅಲ್ಲಿನ ಭಾಷೆಯಲ್ಲಿ ಸಂಘಟನೆಯನ್ನು ಕಟ್ಟಿ ಬೆಳೆಸಿದೆಯೇ ಹೊರತು ಸಂಸ್ಕೃತದಲ್ಲಿ ಅಲ್ಲ. ಆಯಾ ರಾಜ್ಯಗಳಲ್ಲಿ ಆರೆಸ್ಸೆಸ್​ನ ಸ್ವಯಂಸೇವಕರು ಶಾಲೆ, ರಂಗ ಚಟುವಟಿಕೆ, ಪ್ರಕಾಶನ ಸಂಸ್ಥೆ, ಹಾಡುಗಳ ರಚನೆ, ಪತ್ರಿಕೆ ಇತ್ಯಾದಿ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿದ್ದಾರೆ. ಕರ್ನಾಟಕದಲ್ಲೂ ಈ ರೀತಿಯ ಚಟುವಟಿಕೆಗೆಳು ಏಳು ದಶಕಗಳಿಗೂ ಹೆಚ್ಚಿನ ಕಾಲದಿಂದ ನಡೆದು ಬಂದಿದೆ. ಕನ್ನಡದ ಕವಿಗಳು, ಸಾಹಿತಿಗಳು, ಸಂಪಾದಕರು, ರಂಗ ಕಲಾವಿದರು, ಸಿನಿಮಾ ಲೋಕದವರು, ಕನ್ನಡದ ಸಂಶೋಧಕರು ಇತ್ಯಾದಿ ಎಲ್ಲರೊಂದಿಗೂ ಆರೆಸ್ಸೆಸ್​ನ ಹತ್ತಿರದ ಒಡನಾಟವಿರುವುದು ನಾಡಿನ ಜನರಿಗೆ ಗೊತ್ತಿರುವ ವಿಷಯವೇ.

ಕಾಂಗ್ರೆಸ್ ಏನು ಮಾಡಬೇಕು?: ಕನ್ನಡದ ವಿಷಯವಾಗಿ ಏರ್ಪಟ್ಟ ಸಭೆಯಿಂದ ಸೈದ್ಧಾಂತಿಕ ಕಾರಣ ನೀಡಿ ಹೊರ ನಡೆದಿರುವುದು ಕಾಂಗ್ರೆಸ್​ನ ನಾಯಕತ್ವದಲ್ಲಿರುವ ವೈಚಾರಿಕ ನಿಃಶ್ಶಕ್ತಿಯನ್ನು ಬಹಿರಂಗಗೊಳಿಸಿದೆ. ಆ ಪಕ್ಷಕ್ಕೆ ಸೂಕ್ತ ವೈಚಾರಿಕ ಸಲಹೆಗಾರರ ಅಗತ್ಯವಿದೆ. ಈ ಬಹಿಷ್ಕಾರದಿಂದ ಸೊರಗುವುದು ಕನ್ನಡವೆಂಬುದನ್ನು ಕಾಂಗ್ರೆಸ್ ಮನಗಾಣಬೇಕು. ಕರ್ನಾಟಕದಲ್ಲಿ ಕಾಂಗ್ರೆಸ್​ನ ಗೆಲುವಿನಲ್ಲಿ ಕನ್ನಡಿಗರ ಪಾತ್ರ ಹಿರಿದಾದ್ದದ್ದು ಎಂಬುದನ್ನು ಅದು ನೆನಪಿನಲ್ಲಿಡಬೇಕು.

ಆರೆಸ್ಸೆಸ್ ಕಡೆಗೆ ಕಾಂಗ್ರೆಸ್ ಬೊಟ್ಟು ಮಾಡುವ ಮುನ್ನ ಕನ್ನಡಿಗರ ವಿರೋಧಿ, ಕನ್ನಡದ ಮೇಲೆ ಪಾರ್ಸಿ ಭಾಷೆ ಹೇರಿದ ಟಿಪ್ಪು ಜಯಂತಿಯನ್ನು ಕನ್ನಡಿಗರ ಮೇಲೆ ಬಲವಂತ ಮಾಡುವಾಗ ತನ್ನ ಕನ್ನಡ ನಿಷ್ಠೆಯನ್ನು ಪ್ರಶ್ನಿಸಿಕೊಳ್ಳಬೇಕಿತ್ತು. ಇಟಲಿಯನ್ನರನ್ನು ತಲೆ ಮೇಲೆ ಹೊತ್ತು ತಿರುಗುತ್ತಿರುವ ಕಾಂಗ್ರೆಸ್ ನಾಯಕರು ಆರೆಸ್ಸೆಸ್​ನ ಕನ್ನಡನಿಷ್ಠೆ ಮತ್ತು ಬದ್ಧತೆಯ ಬಗ್ಗೆ ಮಾತಾಡುವುದು ವಿಪರ್ಯಾಸವೇ ಸರಿ. ಕಾಂಗ್ರೆಸ್​ನ ಈ ಬಹಿಷ್ಕಾರವನ್ನು ಕನ್ನಡಿಗರು ಮರೆಯುವುದಿಲ್ಲ.

ಪ್ರದೀಪ