ಈಗ ಅಮೆರಿಕಾದತ್ತ ಹೊರಳೋಣ. ಅಮೆರಿಕಾ ಪಶ್ಚಿಮ ಯೂರೋಪ್ನಿಂದ ಭೌಗೋಳಿಕವಾಗಿ ದೂರದಲ್ಲಿರಬಹುದು; ಆದರೆ ಅದು ಜನಾಂಗೀಯವಾಗಿ, ಸಾಂಸ್ಕೃತಿಕವಾಗಿ, ಭಾಷಿಕವಾಗಿ, ಧಾರ್ವಿುಕವಾಗಿ ಹಾಗೂ ವೈಚಾರಿಕವಾಗಿ ಪಶ್ಚಿಮ ಯೂರೋಪ್ನ ವಿಸ್ತರಣವಷ್ಟೇ. ಪಶ್ಚಿಮ ಯೂರೋಪ್ನಲ್ಲಿ ಬೇರೆಬೇರೆ ರಾಜಕೀಯ ಅಸ್ಮಿತೆಗಳನ್ನು ಹೊಂದಿರುವ ಐರಿಷರು, ಬ್ರಿಟಿಷರು, ಫ್ರೆಂಚರು, ಬೆಲ್ಜಿಯನ್ನರು, ಡಚ್ಚರು, ಜರ್ಮನರು, ಸ್ಪಾ್ಯನಿಷರು ಹಾಗೂ ಇಟಾಲಿಯನ್ನರು ಒಟ್ಟುಗೂಡಿ (ಕೊನೆಯ ಇಬ್ಬರು ಬೇಡದ ಕೂಸುಗಳು, ಅದು ಬೇರೆಯೇ ಕಥೆ) ಒಂದೇ ರಾಜಕೀಯ ಆಸ್ಮಿತೆಯನ್ನು ಪಡೆದುಕೊಂಡಿರುವುದು ಅಮೆರಿಕಾದಲ್ಲಿ. ಅಂದರೆ ಅಮೆರಿಕಾದಲ್ಲಿ ಕಾಣುವುದು ಇಡೀ ಪಶ್ಚಿಮ ಯೂರೋಪ್ ಒಟ್ಟುಗೂಡಿರುವುದನ್ನು, ಅಂದರೆ ಪಶ್ಚಿಮ ಯೂರೋಪಿಯನ್ ಮನೋಭಾವ ಒಂದೆಡೆ ಸಾಂದ್ರಗೊಂಡಿರುವುದನ್ನು. (ಹೀಗಾಗಿ ಇನ್ನು ಮುಂದೆ ಲೇಖನದುದ್ದಕ್ಕೂ ಅಮೆರಿಕ ಮತ್ತು ಪಶ್ಚಿಮ ಯೂರೋಪ್ಗಳನ್ನು ಒಟ್ಟಿಗೇ ಸೂಚಿಸಬೇಕಾದರೆ ‘ಪಶ್ಚಿಮ’ ಎಂಬ ಪದವನ್ನಷ್ಟೇ ಬಳಸುತ್ತೇನೆ,)
ಈಗ ಅಮೆರಿಕಾದ ರಕ್ತಪಾತ ಇತಿಹಾಸವನ್ನೊಮ್ಮೆ ಪರಿಚಯ ಮಾಡಿಕೊಳ್ಳೋಣ. ಏಪ್ರಿಲ್ 1775 - ಸೆಪ್ಟೆಂಬರ್ 1783ರ ಆವಧಿಯ ಸ್ವಾತಂತ್ರ್ಯ ಸಂಗ್ರಾಮದ ನಂತರ ಪೂರ್ವದ ಅಟ್ಲಾಂಟಿಕ್ ತೀರದಲ್ಲಿ ಸ್ವತಂತ್ರ ರಾಷ್ಟ್ರವಾಗಿ ಅವತರಿಸಿದ ಆ ದೇಶ ಮುಂದಿನ ಆರೂವರೆ ದಶಕಗಳಲ್ಲಿ ಖರೀದಿ, ವಿಸ್ತರಣ, ಆಕ್ರಮಣಗಳ ಮೂಲಕ ಪಶ್ಚಿಮದ ಪೆಸಿಫಿಕ್ ತೀರವನ್ನು ತಲುಪಿತು. ಈ ವಿಸ್ತರಣಾವಾದ ಪೂರ್ಣಗೊಂಡದ್ದು 1846-48ರಲ್ಲಿ ದಕ್ಷಿಣದ ಮೆಕ್ಸಿಕೋದಿಂದ ಕ್ಯಾಲಿಫೋರ್ನಿಯಾ, ಅರಿಜೋನಾ ಹಾಗೂ ನ್ಯೂ ಮೆಕ್ಸಿಕೋ ಸೇರಿದಂತೆ ವಿಶಾಲ ಪ್ರದೇಶಗಳನ್ನು ಕಿತ್ತುಕೊಳ್ಳುವುದರ ಮೂಲಕ. ಸರಿಸುಮಾರು ಎರಡೂವರೆ ಶತಮಾನಗಳ ಇತಿಹಾಸದಲ್ಲಿ ಅಮೆರಿಕಾ ತನ್ನ ಎಲ್ಲೆಯೊಳಗೆ ರಕ್ತಪಾತವನ್ನು ಕಂಡದ್ದು 1812-16ರಲ್ಲಿ ಬ್ರಿಟನ್ನೊಂದಿಗೆ ಕಾದಾಡಿದಾಗ ಮತ್ತು 1861-65ರಲ್ಲಿ ಅಂತರ್ಯುದ್ಧದಲ್ಲಿ ಸಿಲುಕಿಕೊಂಡಾಗ ಮಾತ್ರ. 1898ರಲ್ಲಿ ಸ್ಪೇನ್ ವಿರುದ್ಧ, 1917-18ರಲ್ಲಿ ಮೊದಲ ಮಹಾಯುದ್ಧದಲ್ಲಿ ಭಾಗಿಯಾಗಿ ಜರ್ಮನಿ ವಿರುದ್ಧ, 1942-45ರಲ್ಲಿ ಎರಡನೆಯ ಮಹಾಯುದ್ಧದಲ್ಲಿ ಭಾಗಿಯಾಗಿ ಜಪಾನ್ ಮತ್ತು ಜರ್ಮನಿಯ ವಿರುದ್ಧ ಅದು ಸೆಣಸಿದ್ದು ತನ್ನ ಗಡಿಯಿಂದ ಬಹುದೂರದಲ್ಲಿ. ಆ ಯುದ್ಧಗಳ ಜತೆ 1965-73ರಲ್ಲಿ ವಿಯೆಟ್ನಾಂನಲ್ಲಿ, 2003-11ರಲ್ಲಿ ಇರಾಕ್ನಲ್ಲಿ, 2001-21ರಲ್ಲಿ ಅಫ್ಘಾನಿಸ್ತಾನದಲ್ಲಿ ಅಮೆರಿಕಾ ನಡೆಸಿದ ಯುದ್ಧಗಳಲ್ಲಿ ಅಮೆರಿಕನ್ ಸೈನಿಕರು ಭಾಗಿಯಾಗಿದ್ದು ಅವರ ಜೀವಹಾನಿಯಾಯಿತೇ ವಿನಃ ಅಮೆರಿಕನ್ ನೆಲಕ್ಕೆ, ಪ್ರಜೆಗಳಿಗೆ ಹಾನಿಯಾಗಲಿಲ್ಲ. ಈ ಯುದ್ಧಗಳ ಹೊರತಾಗಿ ಸರ್ಬಿಯಾ, ಲಿಬಿಯಾ, ಸಿರಿಯಾ ಸೇರಿದಂತೆ ಹಲವೆಡೆ ಅಮೆರಿಕನ್ ವಾಯುಸೇನೆ ಕಾರ್ಯಾಚರಣೆಗಿಳಿದಿತ್ತಷ್ಟೇ. ವಿಯೆಟ್ನಾಂ ಹೊರತಾಗಿ ಉಳಿದೆಡೆಗಳಲ್ಲಿ ಅಮೆರಿಕಾ ಜತೆ ನ್ಯಾಟೋ ಹಣೆಪಟ್ಟಿಯಡಿಯಲ್ಲಿ ಪಶ್ಚಿಮ ಯೂರೋಪಿಯನ್ ದೇಶಗಳೂ ಜತೆಗೂಡಿದ್ದವು. ಅಂದರೆ ಪಶ್ಚಿಮ ಯೂರೋಪ್ ಮತ್ತು ಅದರ ವಿಸ್ತರಣವಾದ ಅಮೆರಿಕಾ ಒಟ್ಟುಗೂಡಿ ತಮ್ಮ ನೆಲವನ್ನು ಶಾಂತವಾಗಿಟ್ಟುಕೊಂಡು, ತಮ್ಮದಲ್ಲದ ನೆಲಗಳಲ್ಲಿ ಒಂದಾದ ಮೇಲೊಂದರಂತೆ ಯುದ್ಧ ನಡೆಸುತ್ತಿವೆ!
ಈ ಯುದ್ಧಗಳಿಂದಾಗಿ ಏಷಿಯಾ ಮತ್ತು ಆಫ್ರಿಕಾಗಳು ನಿರಂತರ ಅಶಾಂತಿಯಲ್ಲಿ ಬೇಯುತ್ತಿವೆ. ಅತ್ತ ಯುದ್ಧಕೋರ ಪಶ್ಚಿಮ ಆರ್ಥಿಕವಾಗಿ ಸದೃಢಗೊಳ್ಳುತ್ತಾ, ಸಂಪದ್ಭರಿತವಾಗುತ್ತಾ ಸಾಗುತ್ತಿದೆ! ಅಂದರೆ ತಮ್ಮದಲ್ಲದ ನೆಲಗಳಲ್ಲಿ ನಿರಂತರ ಅಶಾಂತಿ ಜಾರಿಯಲ್ಲಿರುವುದು ಪಶ್ಚಿಮಕ್ಕೆ ಅನುಕೂಲಕರ ಮತ್ತು ಲಾಭದಾಯಕ! ಇದನ್ನು ಪಶ್ಚಿಮ ಅರಿತುಕೊಂಡದ್ದು ಹೇಗೆ?
ವಿಶ್ವಮಾನ್ಯ ಆರ್ಥಿಕ ಇತಿಹಾಸಕಾರರಾದ ಪಾಲ್ ಬೈರೋಖ್ ಮತ್ತು ಆಂಗಸ್ ಮ್ಯಾಡಿಸನ್ ಪ್ರತಿಪಾದಿಸುವುದು ಕ್ರಿಶ. 1600ರಲ್ಲಿ ಜಾಗತಿಕ ಅರ್ಥವ್ಯವಸ್ಥೆಯಲ್ಲಿ ಭಾರತ ಮತ್ತು ಚೀನಾಗಳ ಪಾಲು 60ರಿಂದ 65% ಇತ್ತು ಎಂದು. ಅವುಗಳಿಗೆ ಹೋಲಿಸಿದರೆ ಪಶ್ಚಿಮ ಯೂರೋಪ್ ಏನೇನೂ ಅಲ್ಲ ಎನ್ನುವಂತಿತ್ತು. ಆಫ್ರಿಕಾದ ಮಾಲಿ ಮತ್ತು ದಕ್ಷಿಣ ಅಮೆರಿಕಾದ ಇಂಕಾ ಸಾಮ್ರಾಜ್ಯಗಳು ಒಟ್ಟಾರೆ ಯೂರೋಪ್ಗಿಂತಲೂ ಹಲವು ಪಟ್ಟು ಹೆಚ್ಚು ಸಂಪದ್ಭರಿತವಾಗಿದ್ದವು. ನಂತರದ ಮೂರು ಶತಮಾನಗಳ ವಸಾಹತುಶಾಹಿಯಲ್ಲಿ ಪಶ್ಚಿಮ ಯೂರೋಪಿಯನ್ ದೇಶಗಳು ಈ ಎಲ್ಲಾ ಸಂಪದ್ಭರಿತ ನಾಡುಗಳನ್ನು ಕೊಳ್ಳೆಹೊಡೆದು ತಾವು ಶ್ರೀಮಂತವಾಗತೊಡಗಿದವು. ಒಂದು ಕನಿಷ್ಟ ಅಂದಾಜಿನ ಪ್ರಕಾರ 1765-1935ರ ಆವಧಿಯಲ್ಲಿ ಭಾರತವೊಂದರಿಂದಲೇ ಇಂಗ್ಲೆಂಡ್ ಕೊಳ್ಳೆಹೊಡೆದ ಹಣ ಮತ್ತು ವಸ್ತುಗಳ ಒಟ್ಟು ಮೌಲ್ಯ 45 ಟ್ರಿಲಿಯನ್ ಡಾಲರ್ಗಳು! ಅಕ್ಷರಶಃ ಚಿನ್ನದ ನಾಡೇ ಆಗಿದ್ದ ಇಂಕಾ ಸಾಮ್ರಾಜ್ಯವನ್ನು ಇಡಿಯಾಗಿ ಕೊಳ್ಳೆಹೊಡೆದದ್ದು ಸ್ಪೇನ್. ಆದರೆ 19ನೇ ಶತಮಾನದ ಮೊದಲ ಮೂರು ದಶಕಗಳಲ್ಲಿ ಅದು ಮತ್ತು ಪೋರ್ಚುಗಲ್ ತಮ್ಮೆಲ್ಲಾ ಉಪಯುಕ್ತ ವಸಾಹತುಗಳನ್ನು ಕಳೆದುಕೊಂಡವು ಮತ್ತು ಲೂಟಿ ನಿಂತುಹೋದದ್ದರಿಂದಾಗಿ ಹಿಂದಿನ ಆರ್ಥಿಕ ದುರವಸ್ಥೆಯ ಯುಗಕ್ಕೇ ಮರಳಿದವು. ಆದರೆ ಮುಂದಿನ ಮುಕ್ಕಾಲು ಶತಮಾನದಲ್ಲಿ ಇತರ ಪಶ್ಚಿಮ ಯೂರೋಪಿಯನ್ ದೇಶಗಳು ಪರಸ್ಪರ ವಸಾಹತುಶಾಹಿ ಸಾಮ್ರಾಜ್ಯಗಳ ಗಡಿಗಳನ್ನು ಗುರುತಿಸಿ, ಗೌರವಿಸಿ, ಪರಸ್ಪರ ಹೊಂದಾಣಿಕೆಯಿಂದ ಏಷಿಯಾ ಮತ್ತು ಆಫ್ರಿಕಾಗಳಲ್ಲಿ ಲೂಟಿಯನ್ನು ಮುಂದುವರಿಸಿದವು. ಇದರಿಂದ ಅವು ಶ್ರೀಮಂತವಾಗುತ್ತಾ ಸಾಗಿದರೆ ಅವುಗಳ ವಸಾಹತುಗಳು ಬಡತನದತ್ತ ಜಾರುತ್ತಾ ಹೋದವು. ಜಾಗತಿಕ ಅರ್ಥವ್ಯವಸ್ಥೆಯಲ್ಲಿ 1850ರಲ್ಲಿ 27% ಇದ್ದ ಭಾರತದ ಪಾಲು 1947ರಲ್ಲಿ 1.6%ಗಿಳಿಯಿತು ಎಂಬ ಒಂದು ಉದಾಹರಣೆಯೇ ಸಾಕು ಪಶ್ಚಿಮ ಯೂರೋಪಿಯನ್ ವಸಾಹತುಶಾಹಿ ದೇಶಗಳು ವೈಶ್ವಿಕ ಅರ್ಥವ್ಯವಸ್ಥೆಯನ್ನು ಕೈಗೆ ತೆಗೆದುಕೊಂಡು ಒಂದುಕಾಲದ ಬಲಾಢ್ಯ ಅರ್ಥವ್ಯವಸ್ಥೆಗಳನ್ನು ಬಡತನಕ್ಕೆ ದೂಡಿದವು ಎಂದು ಹೇಳಲು. ಅದೇ ಆವಧಿಯಲ್ಲಿ ಅಮೆರಿಕ ಸಹ ತನ್ನ ಅಗಾಧ ಪ್ರಾಕೃತಿಕ ಸಂಪನ್ಮೂಲಗಳು ಮತ್ತು ನವೀನ ತಾಂತ್ರಿಕತೆಯಿಂದ ಪ್ರಬಲ ಅರ್ಥವ್ಯವಸ್ಥೆಯಾಗಿ ಬೆಳೆಯಿತು.
ದುರಂತವೆಂದರೆ ಈ ಅಗಾಧ ಸಂಪತ್ತನ್ನೆಲ್ಲಾ ಪಶ್ಚಿಮ ಯೂರೋಪಿಯನ್ ದೇಶಗಳು ಎರಡು ಮಹಾಯುದ್ಧಗಳಲ್ಲಿ ಹಾಳುಮಾಡಿಕೊಂಡವು. ಅವುಗಳ ವಿಸ್ತರಣವಾದ ಅಮೆರಿಕ ಯಾವುದೇ ಯುದ್ಧ ತನ್ನ ನೆಲಕ್ಕೆ ಬಾರದಂತೆ ನೋಡಿಕೊಂಡ ಕಾರಣ ಸಂಪತ್ತನ್ನು ಇಡಿಯಾಗಿ ಉಳಿಸಿಕೊಂಡಿತು ಮತ್ತು ಯುದ್ಧದಿಂದ ಸಂತ್ರಸ್ತಗೊಂಡ ತನ್ನ ಪಶ್ಚಿಮ ಯೂರೋಪಿಯನ್ ತಾಯಿನೆಲವನ್ನು ಸಂಕಷ್ಟದಿಂದ ಮೇಲೆತ್ತಲು ಮಾರ್ಷಲ್ ಪ್ಲಾನ್ ನಂತರ ಆರ್ಥಿಕಸಹಾಯ ಯೋಜನೆಯನ್ನು ರೂಪಿಸಿ ಅನುಷ್ಠಾನಗೊಳಿಸಿತು. ತಾಯಿಯ ನೆರವಿಗೆ ಮಗಳು ಬಂದದ್ದು ಹೀಗೆ.
ಅಮೆರಿಕಾದ ಅನುಭವದಿಂದ ಪಶ್ಚಿಮ ಯೂರೋಪ್ ಸಹ ಕಲಿತ ಪಾಠವೆಂದರೆ ತಮ್ಮ ನೆಲದಿಂದ ಯುದ್ಧಗಳನ್ನು ದೂರವಿಟ್ಟು, ಜಗತ್ತಿನ ಒಂದಲ್ಲ ಒಂದೆಡೆ ಒಂದಲ್ಲ ಒಂದು ಯುದ್ಧ ಅಥವಾ ಅಶಾಂತಿ ನಿರಂತರವಾಗಿ ಜಾರಿಯಲ್ಲಿರುವಂತೆ ನೋಡಿಕೊಂಡರೆ ಅದರಿಂದ ಎರಡು ಬಗೆಯ ಲಾಭಗಳಾಗುತ್ತವೆ:
ಒಂದು- ಮೊದಲಿಗೆ ಯುದ್ಧಕ್ಕಿಳಿದ ಏಷಿಯನ್-ಆಫ್ರಿಕನ್ ದೇಶಗಳಿಗೆ ಶಸ್ತ್ರಾಸ್ತ ಮಾರಾಟದಿಂದ ಹೇರಳ ಲಾಭ ಗಳಿಸಬಹುದು ಮತ್ತು ಯುದ್ಧಾನಂತರ ಅದೇ ದೇಶಗಳಿಗೆ ಆರ್ಥಿಕ ಪುನರ್ನಿರ್ವಣ ಪರಿಕರಗಳ ಪೂರೈಕೆಯಿಂದ ಇನ್ನಷ್ಟು ಹಣ ಸಂಪಾದಿಸಬಹುದು. ಇದೇ ಪ್ರಕ್ರಿಯೆಯನ್ನು ಪುನರಾವರ್ತಿಸುವುದರಿಂದ ಬೊಕ್ಕಸ ಸದಾ ತುಂಬುತ್ತಲೇ ಹೋಗುವಂತೆ ನೋಡಿಕೊಳ್ಳಬಹುದು. ಎರಡು- ಏಷಿಯಾ ಮತ್ತು ಆಫ್ರಿಕಾದ ದೇಶಗಳು ಹೀಗೆ ನಿರಂತರವಾಗಿ ಯುದ್ಧ ಮತ್ತು ಶಾಂತಿಗಳ ನಡುವೆ ಹೊರಳಾಡುತ್ತಲೇ ಇರುವಂತೆ ನೋಡಿಕೊಳ್ಳುವುದರಿಂದ ತಮ್ಮ ಜಾಗತಿಕ ಯಜಮಾನಿಕೆಗೆ ಅವೆಂದೂ ಸ್ಪರ್ಧಿಗಳಾಗದಂತೆ ತಡೆಯಬಹುದು.
1945-65ರ ಅವಧಿಯಲ್ಲಿ ಸ್ವತಂತ್ರಗೊಂಡ ಬಹುಪಾಲು ವಸಾಹತುಗಳು ಪಶ್ಚಿಮ ಯೂರೋಪಿಯನ್ ವಸಾಹತುಶಾಹಿ ದೇಶಗಳು ಎಳೆದಿದ್ದ ಅರ್ತಾಕ ಹಾಗೂ ಅವ್ಯಾವಹಾರಿಕ ಗಡಿಗಳಿಂದಾಗಿ ಒಂದಷ್ಟು ಕಾಲ ಕಚ್ಚಾಡಿದ್ದುಂಟು. ಆದರೆ ನಿಧಾನವಾಗಿ ಪರಿಸ್ಥಿತಿಯೊಂದಿಗೆ ರಾಜಿ ಮಾಡಿಕೊಂಡು ಶಾಂತಿ ಸ್ಥಾಪಿಸಿಕೊಳ್ಳಲು ಪ್ರಯತ್ನಿಸಿದ್ದೂ ಉಂಟು. ಈ ಬೆಳವಣಿಗೆ ಪಶ್ಚಿಮದ ನೀತಿಗಳಿಗೆ ಹೊಂದಿಕೆಯಾಗುವಂತಿರಲಿಲ್ಲ. ಜಾಗತಿಕ ಅಶಾಂತಿ ನಿರಂತರವಾಗಿರುವಂತೆ ಅಂದರೆ ಪಶ್ಚಿಮಕ್ಕೆ ಅನುಕೂಲಕರವಾಗಿಯೇ ಇರುವಂತಾಗಬೇಕಾದರೆ ಯುದ್ಧಗಳಿಗೆ ಕೃತಕ ಕಾರಣಗಳನ್ನು ಸೃಷ್ಟಿಸುವ ಅಗತ್ಯವನ್ನೂ ಪಶ್ಚಿಮ ಕಂಡುಕೊಂಡಿತು. ಈ ವಿಷಯದಲ್ಲಿ ಅಮೆರಿಕಾಗೆ ಸಾಕಷ್ಟು ಅನುಭವವಿತ್ತು. 1898ರ ಸ್ಪಾ್ಯನಿಷ್-ಅಮೆರಿಕನ್ ಯುದ್ಧಕ್ಕೆ ಕಾರಣವೆಂದು ತೋರಿಸುವುದು ಹವಾನಾ ಬಂದರಿನಲ್ಲಿ ಲಂಗರು ಹಾಕಿದ್ದ ಯುಎಸ್ಎಸ್ ಮೇನ್ ಜಹಜಿನ ಮೇಲೆ ಸ್ಪಾ್ಯನಿಷರು ದಾಳಿಯೆಸಗಿದ್ದನ್ನು. ಆದರೆ ಯುದ್ಧಕ್ಕೊಂದು ಕಾರಣ ಸೃಷ್ಟಿಸಲು ಅಮೆರಿಕನ್ನರೇ ತಮ್ಮ ಜಹಜನ್ನು ನಾಶಮಾಡಿ ಅದನ್ನು ಸ್ಪಾ್ಯನಿಷರ ತಲೆಗೆ ಕಟ್ಟಿದರು ಎಂಬ ಅನುಮಾನ ಇಂದಿಗೂ ಇದೆ! ಇನ್ನು ವಿಯೆಟ್ನಾಂ ಯುದ್ಧಕ್ಕೆಂದೇ ಅಧ್ಯಕ್ಷ ಜಾನ್ಸನ್ ಖತರ್ನಾಕ್ ಸುಳ್ಳೊಂದನ್ನು ಸೃಷ್ಟಿಸಿದ್ದನ್ನು ಎರಡು ವಾರಗಳ ಹಿಂದೆ ಇಲ್ಲೇ ವಿವರವಾಗಿ ಹೇಳಿದ್ದೇನೆ. ಇವೆರಡರ ನಡುವೆ ಅಮೆರಿಕಾ ಅಂತಹ ಹಲವು ಸುಳ್ಳುಗಳನ್ನು ಸೃಷ್ಟಿಸಿದ ಆಪಾದನೆಗೊಳಗಾಗಿದೆ. ಸುಮ್ಮನಿರಲಾಗದ ಸೋವಿಯೆತ್ ಯೂನಿಯನ್ 1979ರಲ್ಲಿ ಅಫ್ಘಾನಿಸ್ತಾನಕ್ಕೆ ಸೇನೆ ಕಳಿಸಿದ್ದು ಪಶ್ಚಿಮದ ರೊಟ್ಟಿಯನ್ನು ತುಪ್ಪದಲ್ಲಿ ಬೀಳಿಸಿದ್ದನ್ನು, ಪಶ್ಚಿಮಕ್ಕೆ ನಾಲ್ಕು ದಶಕಗಳ ಹಬ್ಬವನ್ನುಂಟುಮಾಡಿದ್ದನ್ನು ನೋಡಿಯೇ ಇದ್ದೇವೆ. ಈ ನಡುವೆ ಸರ್ಬಿಯಾ, ಲಿಬಿಯಾ ಮತ್ತು ಸಿರಿಯಾಗಳನ್ನೂ ಪಶ್ಚಿಮ ರಣಾಂಗಣವನ್ನಾಗಿಸಿರುವುದನ್ನೂ ನೋಡುತ್ತಲೇ ಇದ್ದೇವೆ. ಇಂದಿನ ಯೂಕ್ರೇನ್-ರಷ್ಯಾ ಯುದ್ಧವನ್ನು ಈ ಹಿನ್ನೆಲೆಯಲ್ಲಿ ನೋಡಬೇಕು. ಪಶ್ಚಿಮಕ್ಕೆ ರಷಿಯನ್ನರು, ಬೆಲರೂಸಿಯನ್ನರು ಮತ್ತು ಯೂಕ್ರೇನಿಯನ್ನರು ಯೂರೋಪಿಯನ್ನರಲ್ಲ. ಅವರೆಲ್ಲರನ್ನೂ ತುರ್ಕರಿಗೆ ಸಮೀಕರಿಸಿ, ‘ಅನಾಗರಿಕ ಏಷಿಯನ್ನರು’ ಎಂದು ಪಶ್ಚಿಮ ಒಂದೂವರೆ ಶತಮಾನದ ಹಿಂದೆಯೇ ಹೀಗಳೆದಾಗಿದೆ. ಒಂದುಕಾಲದಲ್ಲಿ ತನಗೆ ಸವಾಲೊಡ್ಡಿದ್ದ ಸೋವಿಯೆತ್ ಯೂನಿಯನ್ನ ಭಾಗಗಳಾದ ರಷಿಯಾ ಮತ್ತು ಯೂಕ್ರೇನ್ ಹೀಗೆ ಪರಸ್ಪರ ಕಚ್ಚಾಡುತ್ತಿದ್ದರೆ ಯೂಕ್ರೇನ್ಗೆ ಶಸ್ತ್ರಾಸ್ತ್ರ ನೀಡಿ ರಷಿಯಾವನ್ನು ಅಲ್ಲಿ ಕಟ್ಟಿಹಾಕಬಹುದು, ರಷಿಯಾ ಮೇಲೆ ಐದುಸಾವಿರಕ್ಕೂ ಹೆಚ್ಚಿನ ಆರ್ಥಿಕ ದಿಗ್ಬಂಧನಗಳನ್ನು ವಿಧಿಸಿ ಅದನ್ನು ಧರಾಶಾಯಿಯಾಗಿಸಬಹುದು! ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆದುರುಳಿಸಬಹುದು! ಇಲ್ಲಿ ಜೋ ಬೈಡೆನ್ ಮಹಾಶಯನಿಗೆ ಸೈತಾನ ಕೊಟ್ಟ ವರದಂತೆ ಸಿಕ್ಕಿದ್ದು ವೊಲೊದಿಮೀರ್ ಝೆಲೆನ್ಸ್ಕಿ ಎಂಬ ನಾಟಕಕಾರ, ಎಳಸು ರಾಜಕಾರಣಿ.
ಇಷ್ಟೆಲ್ಲಾ ಪೀಠಿಕೆ ಹಾಕಿದ್ದು ಬೈಡೆನ್ರ ಅಮೆರಿಕಾ ನಮ್ಮ ಭಾರತದ ಮೇಲೆ ಹೂಡಿರುವ ನಾಗರಕಣ್ಣಿನತ್ತ ನಿಮ್ಮ ಗಮನ ಸೆಳೆಯಲು. ಅದನ್ನು ಮುಂದಿನವಾರ ವಿವರವಾಗಿ ಹೇಳುತ್ತೇನೆ.
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)