ಅಂಕಣ

ನಾವು ನಾವಾಗಿಯೇ ಇರೋಣ: ಮನೋಲ್ಲಾಸ

| ಮಹಾದೇವ ಬಸರಕೋಡ

ನಮ್ಮ ಬಹುತೇಕ ವೈಫಲ್ಯಗಳಿಗೆ ನಮ್ಮನ್ನು ಇತರರೊಂದಿಗೆ ಹೋಲಿಸಿಕೊಳ್ಳುವುದೇ ಬಹುಮುಖ್ಯ ಕಾರಣವಾಗಿರುತ್ತದೆ. ಸೃಷ್ಟಿಯಲ್ಲಿ ಪ್ರತಿ ಜೀವಿಗೂ ತನ್ನದೇ ಆದ ಅನನ್ಯತೆ ಇದೆ ಎಂಬುದನ್ನು ನಾವು ಮರೆಯುತ್ತೇವೆ. ಪರಿಚಿತ, ಪ್ರಸಿದ್ಧ ವ್ಯಕ್ತಿಗಳೊಂದಿಗೆ ಹೋಲಿಸಿಕೊಳ್ಳುತ್ತೇವೆ. ಅವರನ್ನೇ ಅನುಕರಿಸುತ್ತೇವೆ. ಇಂತಹ ನಡೆಗಳು ಅನೇಕ ಬಾರಿ ನಮ್ಮ ಹಿನ್ನಡೆಗೆ ಕಾರಣವಾಗುತ್ತವೆ.

ಮುಲ್ಲಾ ನಸ್ರುದ್ದೀನ್ ಒಂದು ದಿನ ಶಿಷ್ಯಬಳಗದ ಒತ್ತಾಯದ ಮೇರೆಗೆ ಜಾತ್ರೆಗೆ ತೆರಳಿದ. ಜಾತ್ರೆಯ ಆನಂದವನ್ನು ಅವರೆಲ್ಲ ಮನಸಾರೆ ಆಸ್ವಾದಿಸುತ್ತಿದ್ದರು. ಜಾತ್ರೆಯಲ್ಲಿ ಸಾಗುತ್ತಿರುವಾಗ ಬಿಲ್ಲಿನಿಂದ ಬಾಣ ಬಿಡುವ ಪಂದ್ಯವೊಂದು ಕಾಣಿಸಿತು. ಅದರತ್ತ ಧಾವಿಸಿದರು. ಶಿಷ್ಯರು ಮುಲ್ಲಾ ನಸ್ರುದ್ದೀನ್​ಗೆ ಬಿಲ್ಲು ಎತ್ತಿಕೊಂಡು ಬಾಣಗಳನ್ನು ಗುರಿಯಿಟ್ಟು ಹೊಡೆಯಲು ಒತ್ತಾಯಿಸಿದರು. ಇದನ್ನು ಗಮನಿಸಿದ ಜಾತ್ರೆಯಲ್ಲಿನ ಅನೇಕ ಜನರು ಧಾವಿಸಿ ಬಂದರು. ಮುಲ್ಲಾ ನಸ್ರುದ್ದೀನ್ ಸಾಮರ್ಥ್ಯ ನೋಡಲು ಅವರೆಲ್ಲ ಕುತೂಹಲದಿಂದ ಕಾಯುತ್ತಿದ್ದರು. ಮುಲ್ಲಾ ನಸ್ರುದ್ದೀನ್ ಬಾಣವನ್ನು ಎತ್ತಿಕೊಂಡ. ಬಿಲ್ಲಿನ ಹಗ್ಗವನ್ನು ಠೇಂಕರಿಸಿದ. ಸೈನಿಕನಂತೆ ತನ್ನ ತಲೆಯ ಮೇಲೆ ಕ್ಯಾಪ್ ಧರಿಸಿಕೊಂಡ. ಬಾಣ ಬಿಟ್ಟ. ಗುರಿ ತಲುಪದೇ ಬಾಣ ಪಕ್ಕಕ್ಕೆ ಬಿತ್ತು. ಅಲ್ಲಿದ್ದವರೆಲ್ಲ ಜೋರಾಗಿ ನಗತೊಡಗಿದರು. ಮುಲ್ಲಾಗೆ ಒಂದು ಕ್ಷಣ ಮುಜುಗರವಾಯಿತಾದರೂ ತಕ್ಷಣ ಸುಧಾರಿಸಿಕೊಂಡ.

‘ಬಾಣವನ್ನು ಸೈನಿಕರು ಹೇಗೆ ಪ್ರಯೋಗಿಸುತ್ತಾರೆ ಎಂಬುದನ್ನು ಮಾತ್ರ ನಿಮಗೆ ತೋರಿಸಿದೆ. ಸೈನಿಕರು ಗುರಿ ಇಡುವುದು ಒಂದು ಕಡೆ ಬಾಣ ಪ್ರಯೋಗಿಸುವುದು ಒಂದು ಕಡೆ. ಹಾಗಾಗಿ ಅವರು ಬಹುತೇಕ ಬಾರಿ ಯುದ್ಧದಲ್ಲಿ ವಿಫಲರಾಗುತ್ತಾರೆ ಎನ್ನುವುದಕ್ಕೆ ಇದೇ ಸಾಕ್ಷಿ’ ಎಂದ. ನಾನು ಶತ್ರುವಿನತ್ತ ಬಾಣ ಬಿಡುವ ಸೈನಿಕನೆಂದು ಭಾವಿಸಿ ಬಾಣಪ್ರಯೋಗ ಮಾಡಿದೆ. ಅದಕ್ಕೆ ಅದು ವಿಫಲವಾಯಿತು ಎಂದು ಸಮಜಾಯಿಷಿ ನೀಡಿದ. ಎರಡನೆಯ ಬಾಣ ಎತ್ತಿಕೊಂಡ. ಗುರಿಯತ್ತ ಪ್ರಯೋಗಿಸಿದ. ಈ ಬಾರಿಯೂ ಬಾಣ ಗುರಿ ಮುಟ್ಟುವಲ್ಲಿ ವಿಫಲವಾಯಿತು. ಜನ ಬಾಯಿ ಬಿಡುವ ಮುನ್ನವೇ ಮುಲ್ಲಾ ‘ಗೆಲ್ಲಬೇಕೆಂಬ ಅದಮ್ಯ ಉತ್ಸಾಹವಿದ್ದರೂ ಏಕಾಗ್ರತೆ ಸಾಧಿಸುವ ನಿಟ್ಟಿನಲ್ಲಿ ನಾನು ಸೈನಿಕರಂತೆ ಮತ್ತೆ ವಿಫಲನಾದೆ’ ಎಂಬ ಸಮಜಾಯಿಷಿ ನೀಡಿದ. ಜನರೆಲ್ಲ ಸುಮ್ಮನಾದರು. ಮೂರನೇ ಬಾರಿ ಮುಲ್ಲಾ ಬಾಣವನ್ನು ಗಮ್ಯದತ್ತ ಬಿಟ್ಟ. ಬಾಣ ನಿಖರವಾಗಿ ಗುರಿ ತಲುಪಿತು. ಅಲ್ಲಿದ್ದವರೆಲ್ಲ ಜೋರಾಗಿ ಓ.. ಎಂದು ಕೂಗಿದರು. ಒಬ್ಬ ಕೇಳಿದ-‘ಈ ಬಾರಿ ಗುರಿ ಮುಟ್ಟಲು ಹೇಗೆ ಸಾಧ್ಯವಾಯಿತು?’ ಮುಲ್ಲಾ ನಸುನಗುತ್ತ ಉತ್ತರಿಸಿದ-‘ಈ ಬಾರಿ ನಾನು ನನ್ನೊಂದಿಗೆ ಸಮೀಕರಿಸಿಕೊಂಡು ಬಾಣ ಪ್ರಯೋಗ ಮಾಡಿದೆ’

ನಾವು ನಮ್ಮನ್ನು ಮೊದಲು ತಿಳಿಯಬೇಕು. ನಮ್ಮ ನಿಲುವುಗಳಿಗೆ ಬದ್ಧರಾಗಬೇಕು. ನಮ್ಮೊಳಗಿನ ಶಕ್ತಿಯಿಂದ ಶ್ರೇಷ್ಠವಾದದನ್ನು ಮಾಡಲು ಮನಸ್ಸನ್ನು ಜಾಗ್ರತಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಜಾರಿಯಲ್ಲಿರಬೇಕು. ಇದು ಸಂತಸ ಮತ್ತು ಯಶಸ್ಸಿನ ರಹದಾರಿಯಾಗಿದೆ.

(ಲೇಖಕರು ಹವ್ಯಾಸಿ ಬರಹಗಾರರು)