ಚೀನಾದ ವರ್ತನೆ ಬದಲಾದದ್ದು ಈ ಶತಮಾನದ ಎರಡನೆಯ ದಶಕದಲ್ಲಿ. ಅಮೆರಿಕದ ಬೆಂಬಲವಿದ್ದ ಸುತ್ತಲಿನ ದೇಶಗಳನ್ನು ಕೆಣಕದಿರುವ ತನ್ನ ಹಿಂದಿನ ನೀತಿಯನ್ನು ಬದಲಾಯಿಸಿಕೊಂಡ ಚೀನಾ 2011-12ರಲ್ಲಿ ಸೆಂಕಾಕು ನಡುಗಡ್ಡೆಗಳ ವಿಷಯದಲ್ಲಿ ಜಪಾನ್ ವಿರುದ್ಧ ಪ್ರಚೋದನಕಾರಿ ನಡವಳಿಕೆ ಪ್ರದರ್ಶಿಸತೊಡಗಿದ್ದಲ್ಲದೆ ಕಾಳಗಕ್ಕೂ ತಯಾರು ಎಂಬ ಸೂಚನೆಯನ್ನೂ ಮತ್ತೆಮತ್ತೆ ತೋರತೊಡಗಿತು. ಇದಕ್ಕೆ ಕಾರಣ 2010ರಲ್ಲಿ ಜಪಾನನ್ನು ಹಿಂದಿಕ್ಕಿ ಜಗತ್ತಿನ ಎರಡನೆಯ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆದುನಿಂತದ್ದರ ಜತೆಗೆ ಅಮೆರಿಕದ ಬಲಹೀನ ಒಬಾಮ ಸರ್ಕಾರದ ಮೃದುನೀತಿಗಳೂ ಸಹ. ಜತೆಗೆ ಮಹತ್ವಾಕಾಂಕ್ಷಿ ಜಿನ್ಪಿಂಗ್ ನವೆಂಬರ್ 2012ರಲ್ಲಿ ಬೀಜಿಂಗ್ ಗದ್ದುಗೆಯೇರಿದ್ದು ಚೀನಾದ ಕಲಹಪ್ರಿಯತೆಯನ್ನು ಗಣನೀಯವಾಗಿ ವೃದ್ಧಿಸಿತು. ತೈವಾನ್ ಜತೆಗೂ ಪರಿಸ್ಥಿತಿ ಉಲ್ಬಣಗೊಳ್ಳತೊಡಗಿದ್ದು ಆಗ. ಹೊಸ ಚೀನಾದ ಬಹುತೇಕ ಪ್ರಚೋದನಕಾರಿ ನಡವಳಿಕೆಗಳಿಗೆ ಬಹುಪಾಲು ಪ್ರಚೋದನೆ ಸಿಕ್ಕಿದ್ದು ಎರಡನೆಯ ಬಾರಿಗೆ ಶ್ವೇತಭವನ ಪ್ರವೇಶಿಸಿದ ಬಲಹೀನ ಒಬಾಮರಿಂದಾಗಿ ಏಷ್ಯಾ-ಪೆಸಿಫಿಕ್ ವಲಯದಲ್ಲಿ ಆತ್ಮಹತ್ಯೀಯ ನೀತಿಗಳನ್ನು ಅಮೆರಿಕ ಪ್ರದರ್ಶಿಸತೊಡಗಿದ್ದರಿಂದಾಗಿ.
ಆದರೆ ಮುಂದಿನ ದಿನಗಳಲ್ಲಿ ನವದೆಹಲಿ ಹಾಗೂ ವಾಷಿಂಗ್ಟನ್ನಲ್ಲಿ ಸರ್ಕಾರಗಳು ಬದಲಾಗಿ ಅವು ಹಿಂದಿನ ಸರ್ಕಾರಗಳ ಚೀನಾ-ಪರ ನೀತಿಗಳನ್ನು ಸಂಪೂರ್ಣವಾಗಿ ಬದಲಿಸಿ, ಸ್ಪಷ್ಟ ಹಾಗೂ ಕಟು ನೀತಿನಿಲುವುಗಳನ್ನು ಅನುಸರಿಸತೊಡಗಿದ ಮೇಲೂ ಜಿನ್ಪಿಂಗ್ರ ಶಾಂತಿಕಂಟಕ ನೀತಿಗಳು ಬದಲಾಗಲೇ ಇಲ್ಲ. ನರೇಂದ್ರ ಮೋದಿಯವರ ಹೊಸ ಭಾರತ ದೊಕ್ಲಾಂನಲ್ಲಿ ಪ್ರದರ್ಶಿಸಿದ ದಿಟ್ಟತನ ಮತ್ತು ಗಲ್ವಾನ್ನಲ್ಲಿ ತೋರಿದ ಕಲಿತನದ ಮುಂದೆ ನಿಲ್ಲಲಾರದೆ ಓಡಿದ ಮೇಲೂ, ಡೊನಾಲ್ಡ್ ಟ್ರಂಪ್ ಸಾರಿದ ಶುಲ್ಕಯುದ್ಧದಲ್ಲಿ ಅಪಾರ ಆರ್ಥಿಕ ಹಾನಿ ಅನುಭವಿಸತೊಡಗಿದ ಮೇಲೂ ಷಿ ಜಿನ್ಪಿಂಗ್ ಬಹುತೇಕ ಹುಚ್ಚು ಎನ್ನಬಹುದಾದ ಆಕ್ರಮಣಕಾರಿ ನಡವಳಿಕೆಗಳನ್ನೇ ಮುಂದುವರಿಸಿಕೊಂಡು ಹೋಗತೊಡಗಿದ್ದು ಅರ್ಥಕ್ಕೆ ನಿಲುಕುವುದಿಲ್ಲ. ಚೀನಾ ನಿರೀಕ್ಷೆಗೆ ವಿರುದ್ಧವಾಗಿ ಟ್ರಂಪ್ರ ನೀತಿಗಳನ್ನೇ ಜೋ ಬೈಡೆನ್ ಮುಂದುವರಿಸಿದ್ದಾರೆ. ಇಂತಹ ಸನ್ನಿವೇಶದಲ್ಲಿ ತೈವಾನ್ನ ವಾಯುಪ್ರದೇಶವನ್ನು ನಾಲ್ಕು ದಿನಗಳ ಅವಧಿಯಲ್ಲಿ 152 ಬಾರಿ ಉಲ್ಲಂಘಿಸಿದ್ದು, ಅದಕ್ಕಾಗಿ ಒಂದೇ ದಿನ 56 ಯುದ್ಧವಿಮಾನಗಳನ್ನು ಬಳಸಿದ್ದು; ಉತ್ತರಾಖಂಡ ಗಡಿಯ ಬಾರಾಹೋತಿಯಲ್ಲಿ 300ರಷ್ಟು, ಅರುಣಾಚಲ ಪ್ರದೇಶ ಗಡಿಯ ಬುಮ್ಲಾದಲ್ಲಿ 100ರಷ್ಟು ಸೈನಿಕರನ್ನು ಭಾರತದ ಗಡಿಯೊಳಗೆ ದಾಂಧಲೆ ಎಬ್ಬಿಸಲು ಕಳುಹಿಸಿದ್ದು ಸಮರತಂತ್ರಗಳ ದೃಷ್ಟಿಯಲ್ಲಿ ಅರ್ಥಹೀನ. ಹೊರಗಿನಿಂದ ಸಹಾಯ ಬರುವವರೆಗೆ ತನ್ನ ವಾಯುಪ್ರದೇಶವನ್ನು ಕಾಪಾಡಿಕೊಳ್ಳುವ ಸಾಮರ್ಥ್ಯ ಇಂದು ತೈವಾನ್ಗಿದೆ. ಹಾಗೆಯೇ, ಶತ್ರುಸೈನಿಕರ ಗಡಿ ಉಲ್ಲಂಘನಾ ದುಸ್ಸಾಹಸವನ್ನು ಯಶಸ್ವಿಯಾಗಿ ನಿಷ್ಪಲಗೊಳಿಸುವ, ದಾಳಿಯನ್ನು ಚೀನೀ ಪ್ರದೇಶಕ್ಕೇ ಕೊಂಡೊಯ್ಯುವ ಸಾಮರ್ಥ್ಯ ಇಂದು ಭಾರತೀಯ ಸೇನೆಗಿದೆ. ಗಡಿ ಪ್ರದೇಶದಲ್ಲಿ ಭಾರತಕ್ಕಿಂತ ಉತ್ತಮವಾಗಿರುವುದು ಚೀನೀ ವಾಯುದಳ ಮತ್ತದಕ್ಕಿರುವ ಸೌಲಭ್ಯಗಳು ಮಾತ್ರ. ಆದರೆ ಅವುಗಳ ಕ್ಷಮತೆಯನ್ನು ಮುಂದಿನ ಆರು ತಿಂಗಳುಗಳ ಚಳಿಗಾಲ ಗಣನೀಯವಾಗಿ ಕುಗ್ಗಿಸಿಬಿಡುತ್ತದೆ. ಚಳಿಗಾಲ ಮುಗಿಯುವುದರೊಳಗೆ ಭಾರತಕ್ಕೆ ರಷ್ಯಾದಿಂದ ಎಸ್-400 ಮಿಸೈಲ್ಗಳೂ, ಮತ್ತಷ್ಟು ರಫೇಲ್ ಯುದ್ಧವಿಮಾನಗಳೂ ಫ್ರಾನ್ಸ್ನಿಂದ ಬಂದಿರುತ್ತವೆ. ಚೀನೀ ವಾಯುದಾಳಿಯನ್ನು ನಿಷ್ಪಲಗೊಳಿಸಲು ಅವು ಸಾಕಾಗಬಹುದು.
ಇನ್ನು ಪಾಕಿಸ್ತಾನದ ಬಗ್ಗೆ ಹೇಳುವುದಾದರೆ, ಕಾಶ್ಮೀರ ಕಣಿವೆ ಮತ್ತು ಹತೋಟಿ ರೇಖೆಯಲ್ಲಿ ಡಿಸೆಂಬರ್ 1989ರ ಸ್ಥಿತಿಯನ್ನು ಮತ್ತೆ ನಿರ್ವಿುಸಿ ಭಾರತವನ್ನು ಅದು ಮಣಿಸಲಾಗುವುದಿಲ್ಲ. ಸಾಂಪ್ರದಾಯಿಕ ಯುದ್ಧದಲ್ಲಿ ಸೋಲು ಖಚಿತ. ಜತೆಗೆ, ಅಣ್ವಸ್ತ್ರ ಬಳಸಹೋದರೆ ಭಾರತದಿಂದ ಅದಕ್ಕಿಂತಲೂ ಉಗ್ರವಾದ ಪ್ರತಿಕ್ರಿಯೆ ಎದುರಿಸಬೇಕಾಗುತ್ತದೆ. ಅಲ್ಲದೆ ಇಂದು ಪಾಕಿಸ್ತಾನ ಅನುಭವಿಸುತ್ತಿರುವ ಆರ್ಥಿಕ ದುರವಸ್ಥೆ ನಾಲ್ಕುದಿನಗಳ ಯುದ್ಧಕ್ಕೂ ಸಹಕಾರಿಯಲ್ಲ. ಭಾರತದ ಜತೆ ನೇರ ಯುದ್ಧಕ್ಕಿಳಿಯದೇ, ಸಣ್ಣಪುಟ್ಟ ಗಡಿತಂಟೆ ಮತ್ತು ಭಯೋತ್ಪಾದನೆಯಿಂದ ಭಾರತೀಯ ಸೇನೆಯನ್ನು ಪಶ್ಚಿಮದಲ್ಲಿ ಕಟ್ಟಿಹಾಕಿ ಚೀನೀಯರಿಗೆ ಸಹಕಾರಿಯಾಗುವಂತೆ ನಡೆದುಕೊಳ್ಳುವುದು ಪಾಕಿಸ್ತಾನದ ಯೋಚನೆಯಿದ್ದರೆ ಅದಕ್ಕೆ ಅದು ಬಹುದೊಡ್ಡ ಬೆಲೆ ತೆರಬೇಕಾಗುತ್ತದೆ. ಒಟ್ಟಾರೆ ಉತ್ತರದ ಗಡಿಗಳಲ್ಲಿ ಭಾರತದ ವಿರುದ್ಧ ಚೀನಾ ಮತ್ತು ಪಾಕಿಸ್ತಾನಗಳು ಒಟ್ಟಿಗೆ ತಂಟೆ ತೆಗೆದರೂ ನಿರೀಕ್ಷಿತ ಪರಿಣಾಮ ಅವುಗಳಿಗೆ ದಕ್ಕುವುದಿಲ್ಲ. ಅಲ್ಲದೇ ಪರಿಸ್ಥಿತಿ ತಿರುವುಮುರುವಾಗಲೂಬಹುದು.
ಪ್ರಸಕ್ತ ಅಂತಾರಾಷ್ಟ್ರೀಯ ರಾಜಕಾರಣದ ಪ್ರಮುಖ ಭಾಗಿದಾರ ದೇಶಗಳೆಲ್ಲವೂ ತಂತಮ್ಮ ನೆಲ ಹಾಗೂ ವಾಯುಪ್ರದೇಶಗಳ ರಕ್ಷಣೆಯನ್ನು ಸಮರ್ಥವಾಗಿ ನಿರ್ವಹಿಸಿಕೊಳ್ಳುತ್ತಿರುವ ಈ ದಿನಗಳಲ್ಲಿ ವ್ಯಾಪಕ ಹಾಗೂ ನಿರ್ಣಾಯಕ ಸಂಘರ್ಷಗಳು ನಡೆಯಲಿರುವುದು ಸಾಗರ ಪ್ರದೇಶಗಳಲ್ಲೇ. ಅದರಂತೆ ಚೀನಾ ಜಗತ್ತಿನ ಅತಿ ದೊಡ್ಡ ನೌಕಾದಳವನ್ನು ಹೊಂದಿದೆ ಎನ್ನುವುದೂ ನಿಜ. ಈಗ ಭಾರತದಲ್ಲಿ 150 ಮತ್ತು ಅಮೆರಿಕದಲ್ಲಿ 297 ಯುದ್ಧನೌಕೆಗಳು ಮತ್ತು ಜಲಾಂತರ್ಗಾಮಿಗಳಿದ್ದರೆ ಚೀನಾದಲ್ಲಿ ಅವುಗಳ ಸಂಖ್ಯೆ 360. ಆದರೆ ನೌಕಾಯುದ್ಧದ ಗೆಲುವಿಗೆ ಕೇವಲ ಸಾಂಖ್ಯಿಕ ಮುನ್ನಡೆಯಷ್ಟೇ ಸಾಕೇ? ಅಮೆರಿಕನ್ ಯುದ್ಧನೌಕೆಗಳ ಕಾರ್ಯಕ್ಷಮತೆ ಚೀನೀ ನೌಕೆಗಳಿಗಿಂತ ಅದೆಷ್ಟೋ ಪಟ್ಟು ಮಿಗಿಲಾದರೆ ಜಲಾಂತರ್ಗಾಮಿಗಳದು ಇನ್ನೊಂದು ಕಥೆ. ಚೀನೀ ಜಲಾಂತರ್ಗಾಮಿಗಳ ತಂತ್ರಜ್ಞಾನ ಕಳಪೆಯಾಗಿದ್ದು ಅವು ಹೆಚ್ಚು ಶಬ್ದ ಹೊರಡಿಸುವುದರಿಂದ ತಾವು ಸಾಗುತ್ತಿರುವ ಸುಳಿವನ್ನು ಬಿಟ್ಟುಕೊಡುತ್ತಲೇ ಇರುತ್ತವೆ. ಹೀಗಾಗಿ ಯುದ್ಧಸಮಯದಲ್ಲಿ ಅವು ಶತ್ರುದಾಳಿಗೆ ಸುಲಭವಾಗಿ ಒಡ್ಡಿಕೊಳ್ಳುತ್ತವೆ. ಜತೆಗೆ, ಹೇಳಿಕೊಳ್ಳುವಂತಹ ನೌಕಾದಳವೇ ಇಲ್ಲದ ಪಾಕಿಸ್ತಾನದಿಂದ ಚೀನಾಗೆ ಯಾವ ಸಹಾಯವೂ ಸಿಗಲಾರದು.
ಜತೆಗೆ, ಕಳೆದೊಂದು ವರ್ಷದಲ್ಲಿ ಇಂಡೋ-ಪೆಸಿಫಿಕ್ ವಲಯದಲ್ಲಿನ ಭೂ-ಸಾಮರಿಕ ವಾಸ್ತವಗಳು ಗಮನಾರ್ಹವಾಗಿ ಬದಲಾಗಿವೆ. ಭಾರತ, ಆಸ್ಟ್ರೇಲಿಯಾ, ಜಪಾನ್ ಮತ್ತು ಅಮೆರಿಕ ‘ಕ್ವಾಡ್’ ಸಹಯೋಗವನ್ನು ವಿಸ್ತರಿಸಿದ್ದರೆ ಅಮೆರಿಕ, ಆಸ್ಟ್ರೇಲಿಯಾ ಮತ್ತು ಬ್ರಿಟನ್ ‘ಆಕಸ್’ ಸೇನಾ ಸಂಘಟನೆ ಹುಟ್ಟುಹಾಕಿವೆ. ‘ಆಕಸ್’ನಲ್ಲಿ ಆ ಮೂರು ದೇಶಗಳ ಹೆಸರುಗಳಷ್ಟೇ ಕಾಣಿಸಿಕೊಂಡಿದ್ದರೂ ಭಾರತ, ಜಪಾನ್ ಮತ್ತು ತೈವಾನ್ ಅಲ್ಲಿ ‘ಅದೃಶ್ಯ’ ಸದಸ್ಯ ರಾಷ್ಟ್ರಗಳಾಗಿವೆ ಎನ್ನುವುದು ಬಹಿರಂಗ ರಹಸ್ಯ. ಇದಕ್ಕೆ ಹಿನ್ನೆಲೆಯಾಗಿ ಅಮೆರಿಕ ಮುಂದಾಳತ್ವದ ಸಪ್ತಮಹಾಆರ್ಥಿಕ ಶಕ್ತಿಗಳ ಕೂಟ ಜಿ7 ಕಳೆದ ಜೂನ್ನಲ್ಲೇ ತೈವಾನ್ಗೆ ಸಂಬಂಧಿಸಿದಂತೆ ಚೀನಾಗೆ ಎಚ್ಚರಿಕೆ ನೀಡಿದೆ. ಅದರ ಮರುಗಳಿಗೆಯೇ ಬಲಾಢ್ಯ ಮಿಲಿಟರಿ ಕೂಟ ನ್ಯಾಟೋ ತನ್ನ ವಿರೋಧಿ ಚೀನಾ ಎಂದು ಸ್ಪಷ್ಟ ಸೂಚನೆ ನೀಡಿದೆ.
ಹೀಗೆ ತನ್ನ ವಿರುದ್ಧ ಒಂದಕ್ಕಿಂತ ಒಂದು ಸೇನಾಕೂಟ ನಿಂತಿರುವುದು ಮತ್ತು ಅವೆಲ್ಲವುಗಳ ಒಟ್ಟಾರೆ ಸಾಮರ್ಥ್ಯದ ಎದುರು ತಾನು ನಿಲ್ಲಲಾಗದು ಎಂದು ಅರಿತಿರಬಹುದಾದ ಚೀನಾ ಬೇರೊಂದು ಬಗೆಯಲ್ಲಿ ಶಕ್ತಿ ವೃದ್ಧಿಸಿಕೊಳ್ಳಲು ಹೊರಟಿದೆ. ಅದರ ಅಂಗವಾಗಿ ಈ ವರ್ಷದ ಬೇಸಿಗೆಯುದ್ದಕ್ಕೂ ಅದು ಹಲವಾರು ಸೂಪರ್ಸಾನಿಕ್ ಕ್ಷಿಪಣಿಗಳನ್ನು ಪರೀಕ್ಷಿಸಿದೆ. ಆಗಸ್ಟ್ನಲ್ಲಿ ಅದು ಪರೀಕ್ಷಿಸಿದ ಇತ್ತೀಚಿನ ಕ್ಷಿಪಣಿ ಶಬ್ದದ ವೇಗಕ್ಕಿಂತಲೂ ಐದು ಪಟ್ಟು ಹೆಚ್ಚು ವೇಗದಿಂದ ಚಲಿಸಬಲ್ಲುದು ಮತ್ತದು ಅಣ್ವಸ್ತ್ರಗಳನ್ನು ಹೊತ್ತೊಯ್ಯಬಲ್ಲುದು! ಈಗಿರುವ ಯಾವುದೇ ಕ್ಷಿಪಣಿಗಳು ಒಮ್ಮೆ ಹಾರಿದ ಮೇಲೆ ನಿಗದಿತ ಗುರಿಯತ್ತ ನೇರವಾಗಿ ಸಾಗುತ್ತವೆ. ಹೀಗಾಗಿ ಅವುಗಳನ್ನು ಪತ್ತೆಹಚ್ಚಿ ಮಾರ್ಗಮಧ್ಯದಲ್ಲೇ ನಾಶಗೊಳಿಸಬಹುದು. ಆದರೆ ಈ ಚೀನೀ ಸೂಪರ್ಸಾನಿಕ್ ಮಿಸೈಲ್ ಹಾರಿದ ಮೇಲೂ ಅದರ ಪಥವನ್ನು ನಿಯಂತ್ರಿಸಬಹುದು, ಬದಲಾಯಿಸಬಹುದು! ಪರಿಣಾಮವಾಗಿ ಇದು ತನ್ನತ್ತ ಸಾಗಿಬರುತ್ತಿರುವ ಪಥ ಶತ್ರುರಾಷ್ಟ್ರಕ್ಕೆ ಸೂಕ್ತಸಮಯಮಿತಿಯಲ್ಲಿ ತಿಳಿಯುವುದಿಲ್ಲ, ತಿಳಿಯುವ ಹೊತ್ತಿಗೆ ಸಮಯ ಮೀರಿರುತ್ತದೆ. ಹೀಗಾಗಿ ಈ ಭಯಾನಕ ಮಿಸೈಲ್ ವಿರುದ್ಧ ಸದ್ಯಕ್ಕೆ ಯಾವುದೇ ಪ್ರತಿಅಸ್ತ್ರ ಇಲ್ಲ.
ಚೀನೀ ಮಿಸೈಲ್ ಪರೀಕ್ಷೆಯಲ್ಲಿ ತನ್ನ ಗುರಿಯನ್ನು 20ರಿಂದ 24 ಮೈಲಿ ಅಂತರದಲ್ಲಿ ಮಿಸ್ ಮಾಡಿಕೊಂಡಿತೆಂದು ಹೇಳಲಾಗುತ್ತಿದೆ. ಆದರೆ ಇದನ್ನು ಸರಿಪಡಿಸಿಕೊಳ್ಳುವುದು ಚೀನಾಗೆ ಕಷ್ಟವೇನಲ್ಲ. ಅದಾಗಿಬಿಟ್ಟರೆ ಅಮೆರಿಕ, ಭಾರತವೂ ಸೇರಿದಂತೆ ಯಾವ ದೇಶವನ್ನೇ ಆಗಲಿ ಅದಕ್ಕೆ ಸುಳಿವೇ ಸಿಗದಂತೆ ಮಾರಕ ದಾಳಿಗೊಳಪಡಿಸುವ ಸಾಮರ್ಥ್ಯ ಚೀನಾದ್ದಾಗುತ್ತದೆ. ಆ ದಿನ ದೂರವಿಲ್ಲ. ಈ ಸುದ್ದಿ ಹೊರಬರುತ್ತಿದ್ದಂತೆ ಅಮೆರಿಕ ಕಳೆದೊಂದು ತಿಂಗಳಲ್ಲಿ ಈ ಬಗೆಯ ಮೂರು ಮಿಸೈಲ್ಗಳನ್ನು ತರಾತುರಿಯಲ್ಲಿ ಪರೀಕ್ಷಿಸಿದೆ. ಅಂದರೆ ಶೀತಲಸಮರ ಕಾಲದಲ್ಲಿ ಅಮೆರಿಕ ಮತ್ತು ಸೋವಿಯತ್ ಯೂನಿಯನ್ ನಡುವೆ ನಡೆದಂಥ ಶಸ್ತ್ರ ಪೈಪೋಟಿ (ಆಮ್್ಸರ್ ರೇಸ್) ಇಂದು ಅಮೆರಿಕ ಮತ್ತು ಚೀನಾ ನಡುವೆ ಆರಂಭವಾಗಿದೆ! ಈ ರೇಸ್ಗೆ ರಷ್ಯಾ, ಬ್ರಿಟನ್, ಫ್ರಾನ್ಸ್ ಮತ್ತು ನಮ್ಮ ಭಾರತವೂ ಧುಮುಕಿವೆ ಎಂದು ಸುದ್ದಿ.
ರಷ್ಯಾದ ಹೊರತಾಗಿ ಮೇಲಿನ ನಾಲ್ಕು ದೇಶಗಳಲ್ಲಿ ಯಾವೊಂದಕ್ಕಾದರೂ ಹೊಸ ಮಿಸೈಲ್ ತಂತ್ರಜ್ಞಾನ ಲಭ್ಯವಾದರೆ ಅದು ಉಳಿದೆಲ್ಲವುಗಳಿಗೂ ದಕ್ಕಿದಂತೆಯೇ. ಇದನ್ನು ಭಾರತದ ಪರವಾಗಿ ಅಮೆರಿಕ ನಿಲ್ಲುವುದಾಗಿ 2020 ಜೂನ್ 26ರಂದು ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ಘೊಷಿಸಿದ್ದಕ್ಕೆ, ತೈವಾನ್ನ ರಕ್ಷಣೆಗಾಗಿ ಅಮೆರಿಕ ಧಾವಿಸುವ ಸೂಚನೆಯನ್ನು ಅಧ್ಯಕ್ಷ ಬೈಡೆನ್ ಇದೇ ಅಕ್ಟೋಬರ್ 21ರಂದು ನೀಡಿದ್ದಕ್ಕೆ, ಅಮೆರಿಕದ ಜತೆ ಆಸ್ಟ್ರೇಲಿಯಾ ನಿಲ್ಲುವುದಾಗಿ ಆ ದೇಶದ ರಕ್ಷಣಾಮಂತ್ರಿ ಪೀಟರ್ ಕ್ರೇಗ್ ಡಟನ್ ಅಕೊ್ಟೕಬರ್ 25ರಂದು ಹೇಳಿದ್ದಕ್ಕೆ ಹೊಂದಿಸಿದರೆ ಮುಂದಿನ ಸಮರದ ಒಂದು ಸ್ಥೂಲ ಚಿತ್ರಣ ನಮಗೆ ದಕ್ಕುತ್ತದೆ. ತೈವಾನ್ ವಿರುದ್ಧ ಚೀನಾ, ಭಾರತದ ವಿರುದ್ಧ ಅದರ ಜತೆ ಪಾಕಿಸ್ತಾನವೂ ಸೇರಿ ಆರಂಭಿಸುವ ಯಾವುದೇ ಏಕರಂಗ ಅಥವಾ ದ್ವಿರಂಗ ಸಮರ ಕ್ಷಿಪ್ರಕಾಲದಲ್ಲಿ ಬಹುರಂಗ ಸಮರವಾಗಿ ಹರಡಿಹೋಗುತ್ತದೆ. ಇಂತಹ ಸನ್ನಿವೇಶದಲ್ಲಿ ಷಿ ಜಿನ್ಪಿಂಗ್ಗೆ ಬೇಗನೆ ಬುದ್ಧಿ ಬರಲಿ ಅಥವಾ ಚೀನಾಗೆ ಹೊಸ ವಿವೇಕಿ ನಾಯಕತ್ವ ದಕ್ಕಲಿ ಎನ್ನುವುದೇ ನಮ್ಮ ನಿರೀಕ್ಷೆ.
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)