ಅಂಕಣ

ದೇಶದ್ರೋಹಿಗಳಿಗೆ ತಕ್ಕ ಶಾಸ್ತಿಯಾಗಲಿ; ಪ್ರತಿಜ್ಞೆ ಕಾರ್ಯರೂಪಕ್ಕೆ ಬರಬೇಕು: ಜನಮತ

ದೇಶದ್ರೋಹಿಗಳಿಗೆ ತಕ್ಕ ಶಾಸ್ತಿಯಾಗಲಿ

ಇತ್ತಿಚೆಗೆ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಕ್ರಿಕೆಟ್ ಪಂದ್ಯದಲ್ಲಿ ಪಾಕಿಸ್ತಾನದ ಗೆಲುವನ್ನು ಭಾರತದಲ್ಲಿನ ಕೆಲವರು ಸಂಭ್ರಮಿಸಿದ್ದಾರೆ. ಇಂಥವರು ಈ ದೇಶಕ್ಕಾಗಿ ಕೊಡುಗೆ ನೀಡುವುದು ಬೇಡ, ಕನಿಷ್ಠಪಕ್ಷ ಅವರಿಂದ ದೇಶಕ್ಕೆ ತೊಂದರೆ ಆಗದೆ ಇದ್ದರೆ ಸಾಕು. ದೇಶದ ಎಲ್ಲಾ ಸವಲತ್ತುಗಳನ್ನು ಉಪಯೋಗಿಸಿಕೊಂಡು ದೇಶವನ್ನೇ ಹಳಿಯುವ ಕೆಲಸಕ್ಕೆ ಇಳಿಯುವುದು ಎಷ್ಟು ಸರಿ? ಶ್ರೀರಾಮನು ‘ಜನ್ಮಭೂಮಿ ಸ್ವರ್ಗಕ್ಕಿಂತ ಮಿಗಿಲು’ ಎಂದು ಹೇಳಿರುವಾಗ ಕೆಲವರು ಈ ದೇಶದ ಅನ್ನ ತಿಂದು,

ಈ ದೇಶದ ನೀರು ಕುಡಿದು ಶತ್ರುದೇಶದ ಪರವಾಗಿರುವುದು ನೋಡಿದರೆ ಆಘಾತವಾಗುತ್ತದೆ. ಬೇರೆ ದೇಶದಲ್ಲಿ ಹೀಗೆ ಮಾಡಿದ್ದರೆ ಗಡಿಪಾರು ಮಾಡುತ್ತಿದ್ದರೇನೊ? ಅದೂ ಇಂಥ ವರ್ತನೆ ತೋರುತ್ತಿರುವವರು ಯಾರೋ ಅವಿದ್ಯಾವಂತರಲ್ಲ. ಉನ್ನತ ಶಿಕ್ಷಣ ಮಾಡುತ್ತಿರುವವರು. ಇಂಥ ದೇಶದ್ರೋಹಿಗಳಿಗೆ ಪಾಠ ಕಲಿಸಲು ಸೂಕ್ತ ಕಾನೂನು ತರಬೇಕು.

| ಎಂ.ಪರಮೇಶ್ವರ ಮದ್ದಿಹಳ್ಳಿ

ಪ್ರತಿಜ್ಞೆ ಕಾರ್ಯರೂಪಕ್ಕೆ ಬರಬೇಕು

ವಿಧಾನಸಭೆ ಸಚಿವಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿ ‘ಲಂಚ ಪಡೆಯುವುದಿಲ್ಲ ಮತ್ತು ಲಂಚ ಕೊಡುವುದಿಲ್ಲ’ ಎಂದು ಪ್ರತಿಜ್ಞೆ ಮಾಡಿದ ಬಗ್ಗೆ ವರದಿಯಾಗಿದೆ. ಇದನ್ನು ನೋಡಿ ಸಂತೋಷವಾಯಿತು. ಜತೆಗೆ ಸಂದೇಹವೂ ಮೂಡಿತು- ನಮ್ಮ ದೇಶದಲ್ಲಿ ಇದು ಸಾಧ್ಯವಾ ಎಂದು. ಪ್ರಾಮಾಣಿಕ ಅಧಿಕಾರಿಗಳು ಈಗಲೂ ನಮ್ಮ ನಡುವೆ ಇದ್ದಾರೆ. ಆದರೆ ಭ್ರಷ್ಟಾಚಾರ ಎಲ್ಲಾ ಕ್ಷೇತ್ರಗಳಲ್ಲಿ ವ್ಯಾಪಕವಾಗಿ ಬೇರೂರಿದೆ. ಸರ್ಕಾರಿ ಕಚೇರಿಗಳ ಬೋರ್ಡಗಳಲ್ಲಿ ಮಾತ್ರ ಕಾಣುವ ‘ಲಂಚ ಕೊಡಬೇಡಿ, ಕೇಳಿದರೆ ಈ... ನಂಬರಿಗೆ ಕರೆ ಮಾಡಿ’ ಎನ್ನುವುದು ಕೆಲವೊಮ್ಮೆ ಹಾಸ್ಯಾಸ್ಪದ ಎನಿಸುತ್ತದೆ. ಇಂತಿಷ್ಟು ಎಂದು ಮೊದಲೇ ನಿರ್ಧಾರಿತವಾಗಿರುವ ಲಂಚದ ಕೂಪದಲ್ಲಿ ಸಮಾಜದ ಉನ್ನತ ಹಂತದಿಂದಲೇ ತಾವು ಲಂಚ ಮುಟ್ಟುವುದಿಲ್ಲವೆಂದು ಸಂಕಲ್ಪ ಮಾಡಬೇಕು. ಜತೆಗೆ ಜನರು ಕೂಡ ಚುನಾವಣಾ ಸಮಯದಲ್ಲಿ ದುಡ್ಡು ಪಡೆಯದೆ ಯೋಗ್ಯರಿಗೆ ಮತ ಚಲಾಯಿಸುತ್ತೇವೆಂದು ಗಟ್ಟಿ ನಿರ್ಧಾರ ಮಾಡಿದರೆ ಲಂಚಾವತಾರವನ್ನು ಸ್ವಲ್ಪ ಕಡಿಮೆ ಮಾಡಬಹುದು. ಲಂಚ ಕೊಡುವವರು ಇರುವ ತನಕ ತೆಗೆದುಕೊಳ್ಳುವವರು ಇರುತ್ತಾರೆ. ಇದು ಸಾರ್ವಕಾಲಿಕ ಸತ್ಯ. ಪ್ರತಿಜ್ಞೆಗಳು ಮತ್ತು ಉಪದೇಶಗಳು ಕೇವಲ ಕಾಗದದಲ್ಲಿ ಇರದೆ ಕಾರ್ಯರೂಪಕ್ಕೆ ಬರುವಂತಾದಲ್ಲಿ ಸಾರ್ಥಕ.

| ಮಲ್ಲತ್ತಹಳ್ಳಿ ಡಾ. ಎಚ್. ತುಕಾರಾಂ