ಅಂಕಣ

ದೂಷಿಸುವ ಮನಸ್ಥಿತಿ ತೊರೆದು ಸಾಧಿಸುವ ಸಂಕಲ್ಪವಿರಲಿ...: ವಿಜಯವಾಣಿ ಸೆಲೆಬ್ರಿಟಿ ಕಾರ್ನರ್​ನಲ್ಲಿ ಡಾ.ಶಾಲಿನಿ ರಜನೀಶ್​

ಯುವಕರು ನಮ್ಮ ದೇಶದ ದೊಡ್ಡ ಆಸ್ತಿ. ಭಾರತವು ಅತಿ ಹೆಚ್ಚು ಯುವಜನತೆಯನ್ನು ಹೊಂದಿದೆ. ನಾವು ನಮ್ಮನ್ನು ಅಭಿವೃದ್ಧಿ ಹೊಂದುತ್ತಿರುವ ದೇಶದ ಬದಲು ಅಭಿವೃದ್ಧಿ ಹೊಂದಿದ ದೇಶದ ಪ್ರಜೆಗಳೆಂದು ಕರೆಯಲು ಬಯಸಿದರೆ ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ನಮ್ಮನ್ನು ಅಭಿವೃದ್ಧಿಪಡಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಬೇಕು. ನಾವು ದೊಡ್ಡ ಕನಸು ಕಾಣಲು ನಿರ್ಧರಿಸಿ, ಅವುಗಳನ್ನು ನನಸಾಗಿಸಲು ಶ್ರಮಿಸಬೇಕು. ಆಡಳಿತದಲ್ಲಿ ನನ್ನ 30 ವರ್ಷಗಳ ಅನುಭವ ಮತ್ತು 20 ವರ್ಷಗಳ ನನ್ನ ಯುವ ದಿನಗಳನ್ನು ಆಧರಿಸಿ, ಕರ್ನಾಟಕದ ಯುವಕರಿಗೆ ಕೆಲವು ಸಲಹೆಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ. ನೀವು ಪ್ರತಿಯೊಬ್ಬರೂ ಈ ಸಲಹೆಗಳನ್ನು ಅತ್ಯುತ್ತಮವಾಗಿ ಬಳಸಿಕೊಳ್ಳುತ್ತೀರಿ ಮತ್ತು ಅನುಸರಿಸುತ್ತೀರಿ ಎಂಬ ನಂಬಿಕೆ ಇದೆ.

ವಿದ್ಯೆ ಮತ್ತು ಯಶಸ್ಸು ಸಾಧಕನ ಸ್ವತ್ತು, ನಿರಂತರ ಸ್ವಪ್ರಯತ್ನದಿಂದ ಗಳಿಸುವ ವಿದ್ಯೆ ಶಾಶ್ವತವಾದದ್ದು, ಪ್ರತಿಯೊಬ್ಬ ವ್ಯಕ್ತಿಯ ಯಶಸ್ಸು ನಿರಂತರವಾದ ಕಠಿಣ ಪರಿಶ್ರಮದಿಂದಲೇ ಸಾಧಿಸಲಾಗಿರುತ್ತದೆ. ಬದುಕಿನ ಯಶಸ್ಸು ನಿರ್ಧಾರವಾಗುವುದು ನಮ್ಮ ದೃಢನಿರ್ಧಾರ ಮತ್ತು ಸಂಕಲ್ಪದಿಂದ, ಎದೆಗೆ ಬಿದ್ದ ಅಕ್ಷರ ಮತ್ತು ಭೂಮಿಗೆ ಬಿದ್ದ ಬೀಜ ಎಂದೂ ವ್ಯರ್ಥವಾಗುವುದಿಲ್ಲ ಎಂಬ ಮಾತಿನಂತೆ ನಾವು ಮಾಡುವ ಉತ್ತಮ ರೀತಿಯ ಕೆಲಸ ಖಂಡಿತವಾಗಿಯೂ ಯಶಸ್ಸನ್ನು ತಂದುಕೊಡುತ್ತದೆ. ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಹೇಳಿದಂತೆ ಯಾವುದೇ ಕೆಲಸವಾಗಿರಲಿ ಕೆಲಸವನ್ನು ನಿರಂತರ ಮತ್ತು ಏಕಾಗ್ರತೆಯಿಂದ ಮಾಡಿದಾಗ ಯಶಸ್ಸು ಕಟ್ಟಿಟ್ಟ ಬುತ್ತಿ. ನಿರಂತರ ಪ್ರಯತ್ನ ಯುವಕ-ಯುವತಿಯರನ್ನು ಯಶಸ್ವಿ ಸಾಧಕರನ್ನಾಗಿಸುತ್ತದೆ. ಧನಾತ್ಮಕವಾದ ಚಿಂತನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು. ಜಗತ್ತಿನಲ್ಲಿ ಅಸಾಧ್ಯವಾದದ್ದು ಯಾವುದೂ ಇಲ್ಲ ಎಂಬುದನ್ನು ಮೊದಲು ಮನಗಾಣಬೇಕು.

ಕರೊನಾ ಮಹಾಮಾರಿ ಇಂದು ಭಾರತ ದೇಶವನ್ನು ಅಲ್ಲದೆ ಜಗತ್ತಿನ ಹಲವಾರು ದೇಶಗಳನ್ನು ಮತ್ತು ಈ ದೇಶಗಳ ಶೈಕ್ಷಣಿಕ ವ್ಯವಸ್ಥೆ, ಕಲಿಕೆ ಮತ್ತು ಪಾಠದ ನಿರ್ವಹಣೆ ವ್ಯವಸ್ಥೆಯನ್ನು ಹಾಗೂ ವ್ಯಾಪಾರ-ವ್ಯವಹಾರ, ಕೃಷಿ ಮೊದಲಾದ ಕ್ಷೇತ್ರಗಳ ಮೇಲೆ ಅಪಾರವಾದ ಪರಿಣಾಮವನ್ನು ಉಂಟು ಮಾಡಿದೆ. ಉದ್ಯೋಗನಷ್ಟದಿಂದ ಯುವಕ-ಯುವತಿಯರು ಒಂದು ರೀತಿಯ ಆತಂಕಕ್ಕೆ ಒಳಗಾಗಿದ್ದಾರೆ. ಆದರೆ, ಧೈರ್ಯಗುಂದುವ ಅಗತ್ಯವಿಲ್ಲ. ಏಕೆಂದರೆ, ಸಾಧನೆ ಮಾಡಲು ಇಚ್ಛಿಸುವ ಪ್ರತಿಯೊಬ್ಬ ಯುವಕ-ಯುವತಿಗೆ 21ನೇ ಶತಮಾನ ಕಡಿಮೆ ಅವಧಿಯಲ್ಲಿ ಹೆಚ್ಚು ಅವಕಾಶಗಳನ್ನು ತಂದುಕೊಡುವಂಥ ವ್ಯವಸ್ಥೆಯನ್ನು ಒದಗಿಸಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಕಳೆದ 20 ವರ್ಷಗಳ ಆವಿಷ್ಕಾರಗಳು ಹಾಗೂ ಮಹತ್ತರ ಬದಲಾವಣೆಗಳು ಸಮಾಜದ ಅಭಿವೃದ್ಧಿಯ ದಿಕ್ಕನ್ನು ಬದಲಿಸಿವೆ. ಅಂದರೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕವಾಗಿ ಹಲವಾರು ಗುರುತರವಾದ ಬದಲಾವಣೆಗಳು ಆಗಿವೆ. ಈ ಬದಲಾವಣೆಗಳಿಗೆ ತೆರೆದುಕೊಳ್ಳುತ್ತ ನಾವು ಬದುಕುತ್ತಿರುವ ಸಮಾಜ ಮತ್ತು ಕುಟುಂಬಗಳನ್ನು ಸುಧಾರಣೆಯ ಕಡೆ ತೆಗೆದುಕೊಂಡು ಹೋಗಲು ಸಾಧ್ಯವಿದೆ.

ಇಂದಿನ ವಿದ್ಯಾರ್ಥಿಗಳಿಗೆ ಆಧುನಿಕ ಶೈಕ್ಷಣಿಕ ವ್ಯವಸ್ಥೆ ಹೆಚ್ಚು ಅವಕಾಶಗಳನ್ನು ತಂದುಕೊಡುತ್ತಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಕೊಡುಗೆಗಳಿಂದಾಗಿ ಇಂಟರ್​ನೆಟ್, ಸಾಮಾಜಿಕ ಜಾಲತಾಣಗಳು ಮೊದಲಾದ ಅವಕಾಶಗಳು ನಮ್ಮ ಮುಂದೆ ಇವೆ. ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಅನುಕೂಲ ಆಗಿದೆ. ಜಾಗತೀಕರಣದ ಪರಿಣಾಮವಾಗಿ ಜಗತ್ತಿನ ಎಲ್ಲ ವಿದ್ಯಾರ್ಥಿಗಳು ಒಂದೇ ಪ್ಲಾಟ್​ಫಾಮರ್್​ನಡಿಯಲ್ಲಿ ಅಧ್ಯಯನ ಕೈಗೊಳ್ಳಬಹುದಾದ ಸಂದರ್ಭ ಸೃಷ್ಟಿಯಾಗಿದೆ. ಆನ್​ಲೈನ್ ತರಗತಿಗಳು ಸಾಮಾನ್ಯವಾಗಿವೆ. ಯಾವ ಭಾಗವನ್ನೂ ಯಾರು ಬೇಕಾದರೂ ಸಂರ್ಪಸಬಹುದಾದ ವಾತಾವರಣ ನಿರ್ವಣವಾಗಿದೆ. ಓದುತ್ತೇನೆ ಎಂಬ ಛಲವಿರುವ ವಿದ್ಯಾರ್ಥಿಗೆ ಸಹಾಯಮಾಡಲು ನೂರಾರು ಸಂಘ-ಸಂಸ್ಥೆಗಳು, ನೂರಾರು ಸಹೃದಯ ವ್ಯಕ್ತಿಗಳು ಮುಂದೆ ಬರುತ್ತಿದ್ದಾರೆ.

ಇಂದಿನ ಟಿವಿ ರಿಯಾಲಿಟಿ ಶೋಗಳಲ್ಲಿ ನಾವು ಗಮನಿಸಬಹುದು. ಯಾವುದೇ ಹಿನ್ನೆಲೆ ಹೊಂದಿರದ, ಶಿಕ್ಷಕರ ಮಾರ್ಗದರ್ಶನ ಪಡೆಯದ ಹಲವಾರು ಪ್ರತಿಭೆಗಳು ಸಮಾಜದ ಮುಖ್ಯವಾಹಿನಿಯಲ್ಲಿ ಯಶಸ್ಸು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ ಸಾಧಿಸಲೇ ಬೇಕು ಎಂಬ ಛಲ ಮತ್ತು ಆ ನಿಟ್ಟಿನಲ್ಲಿ ತಯಾರಿಗಾಗಿ ಮಾಡಿಕೊಂಡ ದೃಢಸಂಕಲ್ಪ. ಡಾ.ಬಿ.ಆರ್. ಅಂಬೇಡ್ಕರ್ ಅವರು ಹೇಳಿದಂತೆ, ‘ಸಾಧಿಸಲು ಮುನ್ನುಗ್ಗುವ ವ್ಯಕ್ತಿಯ ಮುಂದೆ ಸವಾಲುಗಳು ಎದುರಾಗುತ್ತವೆ, ಅವುಗಳನ್ನು ಎದುರಿಸಿ ಸವಾಲುಗಳನ್ನೇ ಮೆಟ್ಟಿಲುಗಳನ್ನಾಗಿಸಿಕೊಂಡವರು ಮುನ್ನಡೆ ಯುತ್ತಾರೆ, ಗುರಿ ತಲುಪುತ್ತಾರೆ, ಸಮಾಜದಲ್ಲಿ ಯಶಸ್ವಿ ವ್ಯಕ್ತಿಗಳಾತ್ತಾರೆ, ನಂತರ ಸಮಾಜ ಅವರನ್ನು ಒಂದು ಮಾದರಿಯನ್ನಾಗಿ ಪರಿಗಣಿಸುತ್ತದೆ’. ಸಾಧಿಸಲು ಮುಖ್ಯವಾಗಿ ಬೇಕಾಗಿರುವುದು ಸಕಾರಾತ್ಮಕ ಮನಸ್ಥಿತಿ. ಎಲ್ಲಿಯವರೆಗೆ ನಮ್ಮ ಬದುಕಿನಲ್ಲಿ ಆ ಕೆಲಸವನ್ನು ಮಾಡಲೇಬೇಕು ಎಂದು ತೀರ್ವನಿಸುವುದಿಲ್ಲವೋ ಅಲ್ಲಿಯವರೆಗೆ ಅಂತಹ ಕೆಲಸಗಳು ಕಷ್ಟವೆನಿಸುತ್ತವೆ. ಯಾವಾಗ ಯಶಸ್ಸು ಮತ್ತು ಸಾಧಿಸಲು ಹೊರಟಿರುವ ಬದುಕು ಅವಶ್ಯಕವೆಂದು ಅನಿಸುತ್ತದೆಯೋ ಆಗ ಮಾತ್ರ ಮುಂದಿನ ದಾರಿ ತೆರೆದುಕೊಳ್ಳುತ್ತದೆ. ಸಾಧನೆಗೆ ಬಡತನ ಅಡ್ಡಿಯಾಗುವುದಿಲ್ಲ. ಕಾರಣ ಸರ್ಕಾರಗಳು ಸಮಾಜದ ಎಲ್ಲ ವರ್ಗಗಳ ಜನರಿಗೆ ತಲುಪುವಂತಹ ನೂರಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿವೆ. ಎಲ್ಲ ವಿದ್ಯಾರ್ಥಿಗಳು ಈ ಅನುಕೂಲಗಳನ್ನು ಬಳಸಿಕೊಂಡು, ಶ್ರಮವಹಿಸಿ ಸಾಧಿಸುವ ಮನಸ್ಥಿತಿಯನ್ನು ನಿರ್ಮಾಣ ಮಾಡಿಕೊಳ್ಳಬೇಕಾಗಿದೆ.

ವಿದ್ಯಾರ್ಥಿ ಜೀವನದ ಕಾಲಘಟ್ಟವನ್ನು ಗೋಲ್ಡನ್ ಟೈಮ್ ಎಂದೇ ಕರೆಯುತ್ತಾರೆ. ಪ್ರಸ್ತುತ ಸನ್ನಿವೇಶದಲ್ಲಿ ಈ ಮಾತನ್ನು ಅರ್ಥೈಸುವುದಾದರೆ ವಿದ್ಯಾರ್ಥಿ ಜೀವನ ಭವಿಷ್ಯಕ್ಕೆ ಭದ್ರ ಬುನಾದಿಯಾಗಬೇಕು. ವಿದ್ಯಾರ್ಥಿಗಳು ಗಳಿಸುವ ಜ್ಞಾನ ಮತ್ತು ಕೌಶಲಗಳು ಭವಿಷ್ಯಕ್ಕೆ ಮೆಟ್ಟಿಲು. ಸ್ವಾಮಿ ವಿವೇಕಾನಂದರು ಹೇಳುವಂತೆ ನಮ್ಮ ಬದುಕಿನ ನಿರ್ವತೃ ನಾವುಗಳೇ, ಬಿತ್ತಿದಂತೆ ಬೆಳೆ ಎಂಬಂತೆ ಎಷ್ಟು ಪ್ರಯತ್ನಪಡುತ್ತೇವೊ ಅಷ್ಟು ಯಶಸ್ಸನ್ನು ಗಳಿಸುತ್ತೇವೆ.

ಅನುಕರಣೆ ಬೇಡ: ಇಂದಿನ ಯುವಪೀಳಿಗೆಯ ಅನುಕರಣೆಯ ಮನಸ್ಥಿತಿ ಅಪಾಯಕಾರಿ. ಅದರಿಂದ ಅವರು ದೂರ ಬರಬೇಕಾಗಿದೆ. ಗ್ರಾಹಕ ಜಗತ್ತಿನಲ್ಲಿ ಪ್ರತಿಯೊಂದು ನಮಗೆ ಬೇಕು ಎಂದು ಅನಿಸುತ್ತದೆ. ಆದರೆ, ಸೂಕ್ತ ವಿವೇಚನೆ ಜತೆಗೆ ಒಂದಿಷ್ಟು ಮೋಹ ತ್ಯಜಿಸುವ ಬದ್ಧತೆ ಅಗತ್ಯ. ನಿಜಕ್ಕೂ ಯಾವುದು ಬೇಕು, ಯಾವುದು ಬೇಡ ಎಂಬುದನ್ನು ಆಯ್ಕೆ ಮಾಡಿಕೊಳ್ಳುವಂಥ ವಿವೇಕ ನಮ್ಮಲ್ಲಿರಬೇಕು. ಪ್ರತಿಯೊಬ್ಬ ರಲ್ಲಿಯೂ ಜ್ಞಾನವಿರುತ್ತದೆ. ಆದರೆ ಜ್ಞಾನದ ಜೊತೆಯಲ್ಲಿ ವಿವೇಕ ಇರಬೇಕು. ಜ್ಞಾನವನ್ನು ಅಧ್ಯಯನದಿಂದ ಗಳಿಸಿಕೊಳ್ಳಬಹುದು. ಆದರೆ ವಿವೇಕ ಎಂಬುದು ಒಂದು ಬಗೆಯ ವ್ಯಕ್ತಿತ್ವ. ಅದು ಅನುಭವದಿಂದ ಬರುವಂಥದ್ದು. ಪ್ರಸ್ತುತ ಸನ್ನಿವೇಶದಲ್ಲಿ ಪ್ರತಿಯೊಬ್ಬರೂ ಅವಶ್ಯವಾಗಿ ರೂಢಿಸಿಕೊಳ್ಳಬೇಕಾದ ಗುಣ ಎಂದರೆ ತಾಳ್ಮೆ. ತಾಳ್ಮೆ ಎಂಬುದು ಬೆಲೆಕಟ್ಟಲಾಗದ ವಸ್ತು. ‘ತಾಳಿದವನು ಬಾಳಿಯಾನು’ ಎಂಬ ಮಾತು ಇದೆ. ಯುವಕರು ತಾಳ್ಮೆಯಿಂದ ವರ್ತಿಸುವುದನ್ನು ಕಲಿಯಬೇಕು. ಯಾರಲ್ಲಿ ತಾಳ್ಮೆ ಇದೆಯೋ ಅವರು ಹೆಚ್ಚು ಶಕ್ತಿಶಾಲಿಗಳು.

ಜ್ಞಾನ ಮತ್ತು ಕೌಶಲ ನಿಜವಾದ ಸಂಪತ್ತು: ಕರೊನಾ ಸೋಂಕಿನ ಹಾವಳಿಯಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕು ತಲ್ಲಣಗಳಿಗೆ ಸಿಕ್ಕಿದಂತಾಗಿದೆ. ಯುವಕ-ಯುವತಿಯರು ವಿದ್ಯಾಭ್ಯಾಸದ ವಿಭಿನ್ನ ಮಾದರಿಗಳಲ್ಲಿ ಕಲಿಯಬೇಕಾಗಿದೆ. ಇಂತಹ ತಲ್ಲಣಗಳು ಪ್ರತಿಯೊಬ್ಬರ ಬದುಕಿನಲ್ಲಿ ಬರುತ್ತವೆ. ಯಾರು ಬದಲಾವಣೆಗಳಿಗೆ ಒಗ್ಗಿಕೊಂಡು ಜಾಗತಿಕ ಬದುಕಿನಲ್ಲಿ ಮುನ್ನಡೆಯಲು ನಿರ್ಧರಿಸುತ್ತಾರೋ ಅಂಥವರು ಸಮಾಜದಲ್ಲಿ ಯಶಸ್ಸನ್ನು ಗಳಿಸುತ್ತಾರೆ. ಯಾವುದೇ ಸಂಪತ್ತು ಶಾಶ್ವತವಲ್ಲ, ಯುವಕ-ಯುವತಿಯರು ಗಳಿಸುವ ಜ್ಞಾನ ಮತ್ತು ಕೌಶಲಗಳು ನಿಜವಾದ ಸಂಪತ್ತು. ಇವು ಬದುಕಿಗೆ ಅನಿವಾರ್ಯ ಮತ್ತು ಶಾಶ್ವತವಾಗಿ ನಮ್ಮ ಜತೆಯಲ್ಲಿಯೇ ಇರುತ್ತವೆ. ಇಂದಿನ ಜಗತ್ತಿನಲ್ಲಿ ವ್ಯಕ್ತಿಗಳನ್ನು ಗುರುತಿಸುವುದು ಅವರಲ್ಲಿರುವ ಕೌಶಲಗಳು ಮತ್ತು ವಿವೇಕದಿಂದ. ಅದರಲ್ಲೂ, ಸಂವಹನ ಕೌಶಲಗಳು ಮತ್ತು ಸಾಮಾನ್ಯ ಜ್ಞಾನಕ್ಕೆ ಮನ್ನಣೆ. ‘ನಾನು ಕಲಿತಿದ್ದೇನೆ’ ಎಂದು ಅಹಂಕಾರ ಪಡುವುದಕ್ಕಿಂತ ಬದುಕಿನ ಪ್ರತಿ ಹಂತದಲ್ಲಿ ಕಲಿಯುವ ಮನಸ್ಥಿತಿಯ ಯುವಕ-ಯುವತಿಯರು ಸಮಾಜದಲ್ಲಿ ಯಶಸ್ವಿ ವ್ಯಕ್ತಿಗಳಾಗುತ್ತಾರೆ.

ನಮ್ಮ ಹಣೆಬರಹಕ್ಕೆ ನಾವೇ ಹೊಣೆಗಾರರು, ನಮ್ಮ ಹಣೆಬರ ಹವನ್ನು ಬರೆದುಕೊಳ್ಳಬೇಕಾಗಿರುವವರು ನಾವೇ. ಜಗತ್ತಿನ ಎಲ್ಲ ಸಾಧಕರ ಚರಿತ್ರೆಯನ್ನು ಒಮ್ಮೆ ಗಮನಿಸಿ. ಪರಿಶ್ರಮ, ನಿರಂತರ ಸ್ವಪ್ರಯತ್ನ ಮತ್ತು ಅವಕಾಶವನ್ನು ಹುಡುಕಿಕೊಂಡು ಹೆಚ್ಚು ಏಕಾಗ್ರತೆಯಿಂದ ಕಾರ್ಯನಿರ್ವಹಿಸಿಯೇ ಯಶಸ್ಸನ್ನು ಗಳಿಸಿದ್ದಾರೆ. ಯಶಸ್ಸು ಸುಲಭವಾಗಿ ಸಿಗುವಂಥದ್ದಲ್ಲ. ಎಲ್ಲರಿಗೂ ಒಳ್ಳೆಯದಾಗಲಿ. ದೂಷಿಸುವ ಮನಸ್ಥಿತಿಯಿಂದ ಆಚೆಬಂದು ಸಾಧಿಸುತ್ತೇನೆ ಎಂಬ ದೃಢಸಂಕಲ್ಪ ಮತ್ತು ಅಚಲವಾದ ಮನಸ್ಥಿತಿ ರೂಡಿಸಿಕೊಂಡರೆ ಗಟ್ಟಿ ವ್ಯಕ್ತಿತ್ವ ನಮ್ಮದಾಗುತ್ತದೆ.

(ಲೇಖಕರು ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ)