| ರಮೇಶ ದೊಡ್ಡಪುರ
ಕರ್ನಾಟಕ ಲಲಿತಕಲಾ ಅಕಾಡೆಮಿಯೊಂದಿಗೆ ರಾಜ್ಯಾದ್ಯಂತ ಕಲಾವಿದರು ಸಂಪರ್ಕ ಹೊಂದಿದ್ದಾರೆ. ಕರೊನಾ ಕಾರಣಕ್ಕೆ ಮೊದಲ ಲಾಕ್ಡೌನ್ ಆದಾಗ ಅನೇಕ ಕಲಾವಿದರಲ್ಲಿ ಆತಂಕ ಮೂಡಿತ್ತು. ಸಾಮೂಹಿಕ, ವೈಯಕ್ತಿಕ ಚಿತ್ರ ಶಿಬಿರಗಳು ಇದ್ದಕ್ಕಿದ್ದಂತೆ ರದ್ದಾದವು. ಚಿತ್ರ ಮಾರಾಟ ಮಾಡುವ ಅಂಗಡಿಗಳೂ ಮುಚ್ಚಿದವು. ಈ ಸಂದರ್ಭದಲ್ಲಿ ಅಲ್ಪಮಟ್ಟಿಗಾದರೂ ಸಹಕರಿಸುವ ಕಾರ್ಯಕ್ಕೆ ಅಕಾಡೆಮಿ ಮುಂದಾಯಿತು. ಅಕಾಡೆಮಿ ಅಧ್ಯಕ್ಷ ಡಿ. ಮಹೇಂದ್ರ ಅವರ ಮಾತಿನಲ್ಲೇ ಹೇಳುವುದಾದರೆ, ‘ಕರೊನಾ ಅವಧಿಯಲ್ಲಿ, ಹೆಸರುವಾಸಿಯಾಗಿದ್ದ ಕಲಾವಿದರು ಬಹು ಮಟ್ಟಿಗೆ ಸಂಕಷ್ಟವನ್ನು ಸಹಿಸಿಕೊಂಡರು. ಆದರೆ ಮಧ್ಯಮ ಹಾಗೂ ಹೊಸ ಕಲಾವಿದರಿಗೆ ಆಕಾಶವೇ ಕಳಚಿಬಿದ್ದಂತಾಗಿತ್ತು. ಇದೇ ಕಾರಣಕ್ಕೆ ವರ್ಚುವಲ್ ಕಲಾಶಿಬಿರಗಳನ್ನು ಅಕಾಡೆಮಿಯಿಂದ ಆಯೋಜಿಸಲಾಯಿತು. ಸಾಮಾನ್ಯವಾಗಿ ನಡೆಸುವುದಕ್ಕಿಂತಲೂ ಹೆಚ್ಚಿನ ಕಲಾವಿದರಿಗೆ ಅವಕಾಶ ನೀಡಲಾಯಿತು. ಶಿಬಿರದಲ್ಲಿ ರಚನೆಯಾದ ಕಲಾಕೃತಿಗಳನ್ನು ಅಕಾಡೆಮಿಯೇ ಖರೀದಿಸುವ ಕಾರಣಕ್ಕೆ ತಕ್ಕ ಮಟ್ಟಿಗೆ ಹಣ ಲಭಿಸಿತು’.
ಆನ್ಲೈನ್ನಲ್ಲಿ ವಿವಿಧ ವಿಚಾರ ಸಂಕಿರಣ, ಕಲಾವಿದರ ಮಾತು ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಅಕಾಡೆಮಿ ಇದೀಗ ಸ್ವಾತಂತ್ರ್ಯದ 75ನೇ ವರ್ಷಾಚರಣೆಯ ಸಂದರ್ಭದಲ್ಲಿ 50 ಕಲಾವಿದರ ಶಿಬಿರ ಆಯೋಜಿಸಲು ಮುಂದಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಪಾತ್ರವಿರುವ ಕರ್ನಾಟಕದ ಸ್ಥಳಗಳನ್ನು ಗುರುತಿಸಲಾಗಿದ್ದು, ಅವುಗಳ ಕುರಿತು ಹಾಗೂ ಒಟ್ಟಾರೆ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಚಿತ್ರಗಳು ರಚನೆಯಾಗಲಿವೆ. 50 ಕಲಾವಿದರಿಂದ ಲಭಿಸಿದ 100 ಕಲಾಕೃತಿಗಳನ್ನು ಚಿತ್ರಕಲಾ ಪರಿಷತ್ನಲ್ಲಿ ತಲಾ 10 ಸಾವಿರ ರೂ.ಗೆ ಮಾರಾಟ ಮಾಡಲಾಗುತ್ತದೆ. ಈ ಕಲಾಕೃತಿಗಳ ಮಾರಾಟದ ಸಂಪೂರ್ಣ ಹಣವನ್ನು ಕೋವಿಡ್ ಪರಿಹಾರ ಕಾರ್ಯಾಚರಣೆಗೇ ಬಳಕೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಿದ್ದೇವೆ ಎಂದು ಮಹೇಂದ್ರ ಹೇಳಿದ್ದಾರೆ.
ದೇಶಾದ್ಯಂತ ಕಲಾವಿದರನ್ನು ಬೆಸೆಯುವ ಸಂಸ್ಥೆ ರಾಷ್ಟ್ರೀಯ ಆಧುನಿಕ ಕಲಾ ಸಂಗ್ರಹಾಲಯ (ಎನ್ಜಿಎಂಎ). ಪ್ಯಾಲೇಸ್ ರಸ್ತೆಯಲ್ಲಿ ಮೂರೂವರೆ ಎಕರೆಯಷ್ಟು ಬೃಹತ್ ಪ್ರದೇಶದಲ್ಲಿ ಪ್ರಾಚೀನ ಕಟ್ಟಡದಲ್ಲಿ ಎನ್ಜಿಎಂಎ 2009ರಿಂದ ಕಾರ್ಯನಿರ್ವಹಿಸುತ್ತಿದೆ. ಅದಾಗಲೇ ಪುರಾತತ್ವ ಕಟ್ಟಡದಲ್ಲಿ ಸ್ಥಾಪನೆಯಾಗಿದ್ದ 1,551 ಚದರ ಮೀಟರ್ ಗ್ಯಾಲರಿ ಜತೆಗೆ ಹೊಸದಾಗಿ ನಿರ್ವಿುಸಿದ 1,260 ಚದರ ಮೀಟರ್ ವಿಸ್ತೀರ್ಣದ ಬೃಹತ್ ಗ್ಯಾಲರಿಗಳಿವೆ. 2020ರ ಮಾರ್ಚ್ನಲ್ಲಿ ಎನ್ಜಿಎಂಎ ಆವರಣವನ್ನು ಬಂದ್ ಮಾಡಲಾಯಿತು. ಮೊದಲನೆಯ ಅಲೆಯ ನಂತರ ಕೆಲ ಸಮಯ ತೆರೆಯಲಾಗಿತ್ತಾದರೂ ಚಿತ್ರಪ್ರದರ್ಶನ ನಡೆದಿಲ್ಲ. ಎರಡನೇ ಅಲೆ ನಿಯಂತ್ರಣಕ್ಕೆ ಬಂದ ನಂತರ ಆಗಸ್ಟ್ 16ರಿಂದ ಒಟ್ಟಾರೆ ಆವರಣವನ್ನು ಸಾರ್ವಜನಿಕರಿಗೆ ತೆರೆಯಲಾಗಿದೆ. ಕಲಾ ಅಂಗಡಿ, ಮ್ಯೂಸಿಯಂ ವೀಕ್ಷಣೆ ಮಾಡಬಹುದು. ಆದರೆ ಕಲಾ ಗ್ಯಾಲರಿಯನ್ನು ಇನ್ನೂ ಸಾರ್ವಜನಿಕರಿಗೆ ಮುಕ್ತಗೊಳಿಸಿಲ್ಲ. ಈ ಕುರಿತು ಪ್ರತಿಕ್ರಿಯಿಸಿದ ಎನ್ಜಿಎಂಎ ಕ್ಯುರೇಟರ್ ಸುಬರ್ಣ ಪಾತ್ರೊ, ‘ಸದ್ಯದಲ್ಲೆ ಬೃಹತ್ ಪ್ರಮಾಣದ ಚಿತ್ರಪ್ರದರ್ಶನವನ್ನು ಎನ್ಜಿಎಂಎ ವತಿಯಿಂದಲೇ ಆಯೋಜಿಸಲಾಗುತ್ತಿದೆ. ಕೋವಿಡ್ಗೂ ಮೊದಲೇ ಈ ಯೋಜನೆ ಹಮ್ಮಿಕೊಳ್ಳಲಾಗಿತ್ತು. ಆಗಲೇ ಕಲಾಕೃತಿಗಳೂ ಬಂದು ಸೇರಿವೆ. ಆದರೆ ಲಾಕ್ಡೌನ್ ಕಾರಣಕ್ಕೆ ಯೋಜನೆ ಅಲ್ಲಿಗೇ ಸ್ಥಗಿತವಾಗಿತ್ತು. ‘ಚಿರಂತನ ಮಹಾರತಿ’ ಎಂಬ ಈ ಚಿತ್ರಪ್ರದರ್ಶನವನ್ನು ಬಹುಶಃ ಸೆಪ್ಟೆಂಬರ್ ಮೂರನೇ ವಾರದಲ್ಲಿ ನವದೆಹಲಿಯ ಎನ್ಜಿಎಂಎ ಕೇಂದ್ರದಲ್ಲಿ ಉದ್ಘಾಟನೆ ಮಾಡಲಾಗುತ್ತದೆ. ಸೆಪ್ಟೆಂಬರ್ ಅಂತ್ಯ ಅಥವಾ ಅಕ್ಟೋಬರ್ ಮೊದಲ ವಾರದಲ್ಲಿ ಬೆಂಗಳೂರಿನಲ್ಲಿ ಚಿತ್ರಪ್ರದರ್ಶನ ಆರಂಭವಾಗಲಿದೆ. ಎರಡೂವರೆ ವರ್ಷದ ನಂತರ ನಡೆಯಲಿರುವ ಮೊದಲ ಪ್ರದರ್ಶನ ಇದಾಗಲಿದೆ. ಆನಂತರದಲ್ಲಿ ಚಿತ್ರಕಲಾವಿದರಿಗೆ ಹಾಗೂ ವೀಕ್ಷಕರಿಗೆ ಗ್ಯಾಲರಿ ಮುಕ್ತವಾಗಲಿದೆ’ ಎಂದಿದ್ದಾರೆ.
ನಗರದ ಅನೇಕ ಖಾಸಗಿ ಗ್ಯಾಲರಿಗಳಲ್ಲೂ ಚಟುವಟಿಕೆ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಚೇತರಿಕೆ ಕಾಣುವ ನಿರೀಕ್ಷೆ ಹೊಂದಿದ್ದಾರೆ. ಆಟೊಮೊಬೈಲ್ ಜತೆಗೆ ಚಿತ್ರಪ್ರದರ್ಶನ ಎಂಬ ವಿನೂತನ ಚಿಂತನೆಯಲ್ಲಿ ರೂಪಿತಗೊಂಡಿರುವುದು ಜಯನಗರದ ಮ್ಯಾಗ್ನಿಟ್ಯೂಡ್ ಗ್ಯಾಲರಿ. ಗ್ರಾಹಕರ ಮನಸ್ಸಿನಲ್ಲಿರುವಂತೆಯೇ ಚಿತ್ರಗಳನ್ನು ರಚಿಸುವ, ಪ್ರತಿ ತಿಂಗಳು ಚಿತ್ರಪ್ರದರ್ಶನದ ಥೀಂ ಬದಲಾಯಿಸಲಾಗುತ್ತದೆ. ಈ ಕುರಿತು ಮಾತನಾಡಿದ ಸಂಸ್ಥೆಯ ರಮೇಶ್ ಮಗರ್, ‘2ನೇ ಅಲೆಯ ಮುಕ್ತಾಯದ ನಂತರವೂ ಯಾವುದೇ ಚಟುವಟಿಕೆ ಕಂಡುಬಂದಿಲ್ಲ. ಮೂರನೇ ಅಲೆ ಬರುವುದಿಲ್ಲ ಎಂಬುದು ಖಾತ್ರಿಯಾದರೆ ಬಹುಶಃ ಗ್ರಾಹಕರು ಇತ್ತ ಆಗವಿಸುತ್ತಾರೆ’ ಎಂದರು.
ನಾಡಿನ ಪ್ರಸಿದ್ಧ ಹಾಗೂ ಹಳೆಯ ಚಿತ್ರಕಲಾ ಗ್ಯಾಲರಿಗಳಲ್ಲಿ ವೆಂಕಟಪ್ಪ ಆರ್ಟ್ ಗ್ಯಾಲರಿ ಸಹ ಒಂದು. 2020ರ ಮಾರ್ಚ್ನಲ್ಲಿ ಕರೊನಾ ಲಾಕ್ಡೌನ್ ಘೋಷಣೆಯಾದ ನಂತರ ಮುಚ್ಚಲ್ಪಟ್ಟ ಗ್ಯಾಲರಿಯಲ್ಲಿ ಇಲ್ಲಿವರೆಗೆ ಯಾವುದೇ ಚಿತ್ರಪ್ರದರ್ಶನ ನಡೆದಿಲ್ಲ. ಮೊದಲನೆಯ ಅಲೆಯ ನಂತರ ನಿಯಮಾವಳಿ ಸಡಿಲವಾಗಿತ್ತಾದರೂ ಯಾವುದೇ ಪ್ರದರ್ಶನ ನಡೆಯಲಿಲ್ಲ. ಇದೀಗ ಎರಡನೆಯ ಅಲೆಯ ನಂತರ ಒಂದು ಕಾರ್ಯಕ್ರಮ ಬುಕಿಂಗ್ ಆಗಿದೆ. ‘ಎರಡನೇ ಅಲೆ ನಂತರ ನಿಯಮಾವಳಿ ಸಡಿಲಿಕೆ ಮಾಡಲಾಗಿದೆ. ಕೋವಿಡ್ ನಿಯಮಗಳನ್ನು ಪಾಲಿಸುತ್ತಲೆ ಪ್ರದರ್ಶನಕ್ಕೆ ಅವಕಾಶವಿದೆ. ಒಂದು ತಂಡವು ಸೆ.19ರಿಂದ 10 ದಿನಗಳವರೆಗೆ ಪ್ರದರ್ಶನ ನಡೆಸಲು ಬುಕ್ ಮಾಡಿದೆ. ಜತೆಗೆ ಸೆ.19ರಿಂದ ಮೂರು ದಿನದವರೆಗೆ ಆಡಿಟೋರಿಯಂ ಕಾಯ್ದಿರಿಸಲಾಗಿದೆ’ ಎಂದು ಕರ್ನಾಟಕ ಪುರಾತತ್ವ ಇಲಾಖೆ ಸಹಾಯಕ ನಿರ್ದೇಶಕಿ ಕಾವ್ಯಶ್ರೀ ಹೇಳುತ್ತಾರೆ.