ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ಸಣ್ಣ ಗ್ರಾಮ ಪಾರಸಮಣಿಯಾ. ಗುಡ್ಡಗಾಡಿನ ಪ್ರದೇಶದಲ್ಲಿ ಕುರುಚಲು ಕಾಡುಗಳ ನಡುವೆ ಇರುವ ಈ ಗ್ರಾಮದಲ್ಲಿ ಇನ್ನೂರು ಮನೆಗಳಿದ್ದು ಇಲ್ಲಿ ಒಂದೇ ಕೋಣೆಯ ಪ್ರಾಥಮಿಕ ಶಾಲೆಯೊಂದಿದೆ. ಊರ ಹೊರಗಿದ್ದ ಆ ಶಾಲೆಯ ಒಂಟಿ ಶಿಕ್ಷಕ 28 ವರ್ಷದ ಮಹೇಂದ್ರ ಶಾಲೆಯಲ್ಲಿಯೇ ವಾಸಿಸುತ್ತ ಹದಿನೈದು ದಿನಗಳಿಗೊಮ್ಮೆ ತನ್ನ ಊರಿಗೆ ಹೋಗಿ ಬರುತ್ತಿದ್ದ. ಆತ ಊರ ಮಂದಿಗೆಲ್ಲ ಪರಿಚಯವಿದ್ದು ಎಲ್ಲರ ಗೌರವಕ್ಕೂ ಪಾತ್ರನಾಗಿದ್ದು ಆತನಿಗೆ ದಿನಕ್ಕೊಂದು ಮನೆಯಿಂದ ಊಟವನ್ನು ಕಳಿಸುತ್ತಿದ್ದರು.
2018ರ ಜುಲೈ ತಿಂಗಳ ಒಂದು ರಾತ್ರಿ ಮಹೇಂದ್ರ ತನ್ನ ಕೋಣೆಯಲ್ಲಿ ಒಬ್ಬಂಟಿಯಾಗಿಯೇ ಮದ್ಯಪಾನ ಮಾಡಿದ. ಇನ್ನಷ್ಟು ಮದ್ಯಪಾನ ಮಾಡಬೇಕೆಂಬ ಬಯಕೆಯಾದಾಗ ಜೇಬಿನಲ್ಲಿ ಹಣವಿಲ್ಲದಿರುವುದನ್ನು ಮನಗಂಡು ಸಾಲ ಪಡೆಯಲು ಅದೇ ಗ್ರಾಮದ ನರೇಶ್ನ ಮನೆಗೆ ಹೋದ. ಆಗ ರಾತ್ರಿ ಹತ್ತಾಗಿತ್ತು. ನರೇಶ್ ರಾತ್ರಿಯ ಭೋಜನ ಮುಗಿಸಿ ಮನೆಯ ಹೊರಗೆ ಒಂದು ಹಗ್ಗದ ಮಂಚದ ಮೇಲೆ ಮಲಗಿದ್ದ. ಆತನ ಪಕ್ಕದಲ್ಲಿ ಅವನ ಆರು ವರ್ಷದ ಮಗಳು ಕುಸುಮ ಸಹ ಮಲಗಿದ್ದಳು.
ನರೇಶ್ನನ್ನು ಎಬ್ಬಿಸಿದ ಮಹೇಂದ್ರ, ‘ನನಗೆ ಮದ್ಯಪಾನ ಮಾಡಬೇಕೆನಿಸಿದೆ. ನನ್ನ ಜತೆ ಸಾರಾಯಿ ಅಂಗಡಿಗೆ ಬರುವೆಯಾ?’ ಎಂದು ಕೇಳಿದ. ‘ನಾನೀಗಾಗಲೇ ಊಟ ಮಾಡಿ ಮಲಗಿದ್ದೇನೆ, ನಾನು ಬರುವುದಿಲ್ಲ. ನೀನೊಬ್ಬನೇ ಹೋಗಿ ಬಾ’ ಎಂದ ನರೇಶ್. ‘ಹಾಗಾದರೆ ನನಗೆ 100 ರೂಪಾಯಿ ಸಾಲ ಕೊಡು, ಸಂಬಳ ಬಂದ ನಂತರ ಹಿಂತಿರುಗಿಸುತ್ತೇನೆ’ ಎಂದ ಮಹೇಂದ್ರ. ಇದಕ್ಕೊಪ್ಪಿದ ನರೇಶ್ ಮನೆಯೊಳಗೆ ಹೋಗಿ ಹಣ ತಂದುಕೊಟ್ಟ. ಪಲ್ಲಂಗದ ಮೇಲೆ ಮಲಗಿದ್ದ ಕುಸುಮಳತ್ತ ಬೊಟ್ಟು ಮಾಡಿದ ಮಹೇಂದ್ರ, ‘ನಿನ್ನ ಮಗಳು ಬಹಳ ಬುದ್ಧಿವಂತೆ, ಒಂದನೇ ತರಗತಿಯಲ್ಲಿಯೇ ಎಲ್ಲರಿಗಿಂತ ಮುಂದಿದ್ದಾಳೆ, ಆಕೆಯನ್ನು ಮುಂದೆ ಹೆಚ್ಚಿಗೆ ಓದಿಸಿ ಪದವೀಧರೆಯನ್ನಾಗಿ ಮಾಡು’ ಎಂದು ಹೇಳಿ ಮಲಗಿದ್ದ ಕುಸುಮಳ ತಲೆ ನೇವರಿಸಿ ಹೊರಟುಹೋದ. ಊರ ಹೊರಗಿದ್ದ ಸಾರಾಯಿ ಅಂಗಡಿಯಲ್ಲಿ ಇನ್ನಷ್ಟು ಮದ್ಯಪಾನ ಮಾಡಿದ ಮಹೇಂದ್ರ ತನ್ನ ಕೊಠಡಿಗೆ ವಾಪಸಾದ. ನಿದ್ರೆ ಹತ್ತಲಿಲ್ಲ. ಮೊಬೈಲ್ ಫೋನಿನಲ್ಲಿ ಕಾಮಪ್ರಚೋದಕ ವಿಡಿಯೋ ನೋಡಿದ. ಆತನಿಗೆ ಕಾಮೋದ್ರೇಕವಾಯಿತು. ಹೊರಬಂದು ನರೇಶ್ನ ಮನೆಯತ್ತ ಹೆಜ್ಜೆ ಹಾಕಿದ. ನರೇಶ್ ಗಾಢನಿದ್ರೆಯಲ್ಲಿ ಮುಳುಗಿದ್ದ. ಮಹೇಂದ್ರ ಬಳಿಯಿದ್ದ ಪೊದೆಯೊಂದರ ಹಿಂದೆ ಅಡಗಿಕೊಂಡ. ಆತನ ದೃಷ್ಟಿಯೆಲ್ಲ ನರೇಶ್ನ ಮೇಲೆಯೇ ನೆಟ್ಟಿತ್ತು. ಅರ್ಧ ಗಂಟೆ ತರುವಾಯ ನರೇಶ್ ಶೌಚಕ್ಕೆ ಹೋಗಬೇಕೆಂದು ನಿದ್ರೆಯಿಂದೆದ್ದು ಬಯಲ ಕಡೆಗೆ ಹೋದ. ಅದೇ ಸಮಯಕ್ಕಾಗಿ ಕಾಯುತ್ತಿದ್ದ ಮಹೇಂದ್ರ ಕುಸುಮ ಮಲಗಿದ್ದ ಮಂಚದತ್ತ ಬಿರಬಿರನೆ ಹೋದ. ಅವಳನ್ನು ಅನಾಮತ್ತಾಗಿ ಎತ್ತುಕೊಂಡು ತನ್ನ ಕೋಣೆಗೆ ಕರೆದೊಯ್ದ. ಆ ಕತ್ತಲಲ್ಲಿ ಅವನನ್ನು ಯಾರೂ ನೋಡಲಿಲ್ಲ. ಹಾದಿಯಲ್ಲಿ ಆ ಬಾಲಕಿ ಎಚ್ಚೆತ್ತು ಅಳತೊಡಗಿದಳು. ‘ಅಳಬೇಡ, ನಾನು ನಿನ್ನ ಮಾಸ್ತರ್’ ಎಂದು ಆಕೆಯನ್ನು ಸಮಾಧಾನ ಮಾಡಿದ. ಮಹೇಂದ್ರ ತನ್ನ ಕೋಣೆಗೆ ಕರೆದುಕೊಂಡು ಬಂದು ಆ ಪುಟ್ಟ ಬಾಲಕಿಯ ಮೇಲೆ ಪೈಚಾಚಿಕ ಕೃತ್ಯವನ್ನು ನಡೆಸಿದ.
ಮಗು ನೋವಿನಿಂದ ಅರಚತೊಡಗಿದಾಗ ‘ಈ ವಿಷಯವನ್ನು ನೀನು ಬೇರೆಲ್ಲಾದರೂ ತಿಳಿಸಿದರೆ ಪರಿಸ್ಥಿತಿ ಕೆಟ್ಟದಾಗುತ್ತದೆ’ ಎಂದು ಹೆದರಿಸಿದ. ಅಷ್ಟರಲ್ಲಿಯೇ ಆ ಸಣ್ಣ ಬಾಲಕಿ ಮೂರ್ಛೆ ಹೋದಳು. ಕುಸುಮ ಸತ್ತುಹೋದಳೆಂದು ಭಾವಿಸಿದ ಮಹೇಂದ್ರ ಕೃತ್ಯ ಬೆಳಕಿಗೆ ಬಾರದಿರಲೆಂದು ಅಕೆಯನ್ನು ಎತ್ತಿಕೊಂಡು ಊರ ಹೊರಗಿನ ಪೊದೆಯೊಂದರ ಹಿಂದೆ ಎಸೆದು ತನ್ನ ರೂಮಿಗೆ ಹೋಗಿ ಏನೂ ಆಗದವನಂತೆ ಮಲಗಿದ. ಇತ್ತ ಶೌಚ ಮುಗಿಸಿ ಬಂದ ನರೇಶ್ ಪಲ್ಲಂಗದ ಮೇಲೆ ಮಗಳು ಇರದಿದ್ದುದನ್ನು ಕಂಡು ಗಾಬರಿಯಾದ. ನೆರೆಯವರನ್ನು ಎಬ್ಬಿಸಿ ಅವರೊಂದಿಗೆ ಮಗಳನ್ನು ಹುಡುಕಲು ಹೊರಟ. ಕುಸುಮ ಗ್ರಾಮದಲ್ಲೆಲ್ಲಿಯೂ ಕಾಣಲಿಲ್ಲ. ಆ ಗ್ರಾಮವು ಪೊಲೀಸ್ ಠಾಣೆಯಿಂದ ದೂರವಿದ್ದ ಕಾರಣ ಎಲ್ಲರೂ ಗ್ರಾಮದ ಪೊಲೀಸ್ ಪಾಟೀಲ್ನ ಮನೆಗೆ ಹೋಗಿ ಅವನಿಗೆ ಕುಸುಮ ಕಾಣೆಯಾಗಿರುವ ಸುದ್ದಿ ಮುಟ್ಟಿಸಿದರು. ‘ನಿನ್ನ ಮನೆಯಾದರೋ ಕಾಡಿನ ಅಂಚಿನಲ್ಲಿದೆ, ನೀನು ಶೌಚಕ್ಕೆ ಹೋದಾಗ ಯಾವುದೋ ನಾಯಿಯೋ, ನರಿಯೋ ನಿನ್ನ ಮಗಳನ್ನು ಒಯ್ದಿರಬೇಕು’ ಎಂದ ಆತ ‘ಬೆಳಕಾದ ಕೂಡಲೇ ಆಕೆಯನ್ನು ಹುಡುಕೋಣ’ ಎಂದ. ಆದರೆ ಸುಮ್ಮನಿರದ ನರೇಶ್ ಇತರರೊಡನೆ ಊರ ಹೊರಗಿನ ಕಾಡಿನಲ್ಲಿ ಮಗಳನ್ನು ಹುಡುಕಲು ಹೊರಟ.
ಅಷ್ಟರಲ್ಲಿ ಅವನಿಗೆ ಅದೇ ರಾತ್ರಿ ಮಹೇಂದ್ರ ತನ್ನ ಮನೆಗೆ ಬಂದಿದ್ದು ನೆನಪಾಯಿತು. ಅವನಿಗೇನಾದರೂ ಕುಸುಮಳ ಬಗ್ಗೆ ಮಾಹಿತಿಯಿರಬಹುದು ಎಂದು ಭಾವಿಸಿ ನರೇಶ್ ಅವನ ಕೋಣೆಗೆ ಹೋದ. ಮಹೇಂದ್ರ ನಶೆಯಲ್ಲಿದ್ದ ಕಾರಣ ಅವನನ್ನು ಎಬ್ಬಿಸಲು ಹರಸಾಹಸ ಮಾಡಬೇಕಾಯಿತು. ‘ನನ್ನ ಮಗಳನ್ನು ನೋಡಿದೆಯಾ?’ ಎಂದು ಕೇಳಿದಾಗ, ‘ನಾನು ಅವಳನ್ನು ನೋಡಿದಾಗ ನಿನ್ನ ಪಕ್ಕದಲ್ಲಿಯೇ ಮಲಗಿದ್ದಳಲ್ಲಾ’ ಎಂದ ಮಹೇಂದ್ರ. ‘ಅವಳನ್ನು ಹುಡುಕಲು ನಾನೂ ನಿಮ್ಮೊಡನೆ ಬರುವೆ’ ಎಂದ ಆತ ಇಡೀ ರಾತ್ರಿ ಗ್ರಾಮಸ್ಥರೊಡನೆ ಬಾಲಕಿಯನ್ನು ಹುಡುಕುವ ನಾಟಕವಾಡಿದ. ಕುಸುಮ ಎಲ್ಲಿಯೂ ಕಾಣಲಿಲ್ಲ.
ಪೊದೆಯ ಹಿಂದೆ ಗಾಯಗೊಂಡು ಬಿದ್ದಿದ್ದ ಕುಸುಮಳನ್ನು ಬೆಳಕಾದ ನಂತರ ಮಹಿಳೆಯೊಬ್ಬಳು ಕಂಡು ಊರವರಿಗೆ ವಿಷಯ ತಿಳಿಸಿದರು. ಗ್ರಾಮಸ್ಥರು ಸ್ಥಳಕ್ಕೆ ಬಂದು ನೋಡಿದಾಗ ಆಕೆಯ ಮೈಗೆ ತರಚಿದ ಗಾಯಗಳಾಗಿದ್ದು, ಬಟ್ಟೆಗಳು ರಕ್ತಸಿಕ್ತವಾಗಿದ್ದವು. ಆಕೆ ಮಾತನಾಡುವ ಪರಿಸ್ಥಿತಿಯಲ್ಲಿರಲಿಲ್ಲ. ಕೂಡಲೇ ಪಕ್ಕದ ಗ್ರಾಮದಲ್ಲಿದ್ದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ತುರ್ತು ಚಿಕಿತ್ಸೆ ನೀಡಿದ ವೈದ್ಯರು ಬಾಲಕಿ ಮೇಲೆ ಅತ್ಯಾಚಾರವಾಗಿರುವುದಾಗಿ ಸ್ಪಷ್ಟಪಡಿಸಿ, ಸ್ಥಿತಿ ಗಂಭೀರವಾಗಿದ್ದು 55 ಕಿಮೀ ದೂರದಲ್ಲಿರುವ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲು ತಿಳಿಸಿದರು. ಕುಸುಮಳನ್ನು ದೊಡ್ಡ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ಪ್ರಾರಂಭಿಸಿದರು. ಆಸ್ಪತ್ರೆಯಿಂದ ಹೋದ ಮಾಹಿತಿ ಮೇರೆಗೆ ಅತ್ಯಾಚಾರದ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಆರಂಭಿಸಿದರು. ರಾತ್ರಿಯ ವೇಳೆ ನರೇಶನ ಬಳಿ ಯಾರು ಬಂದಿದ್ದರೆಂದು ವಿಚಾರಿಸಿದಾಗ, ಅಂದಿನ ರಾತ್ರಿ ಅವನನ್ನು ಹುಡುಕಿಕೊಂಡು ಮಹೇಂದ್ರ ಬಂದಿದ್ದನೆಂದು ತಿಳಿಯಿತು. ಕೂಡಲೇ ಪೊಲೀಸರು ಮಹೇಂದ್ರ
ವಾಸಿಸುತ್ತಿದ್ದ ಶಾಲೆಯ ಕೊಠಡಿಯೊಳಗೆ ಹೋಗಿ ಅವನನ್ನು ವಿಚಾರಣೆಗೆ ಒಳಪಡಿಸಿದರು. ಆರಂಭದಲ್ಲಿ ತನಗೇನು ಗೊತ್ತಿಲ್ಲ ಎಂದೇ ಆತ ವಾದಿಸಿದ. ಆದರೆ ಪೊಲೀಸರು ಕೋಣೆಯನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಕೋಣೆಯ ಒಂದು ಭಾಗದಲ್ಲಿ ಬಾಲಕಿ ಧರಿಸಿದ್ದ ಒಡೆದ ಬಳೆಯ ಚೂರುಗಳು ಕಂಡು ಬಂದವು. ಅವು ಮಗಳು ಧರಿಸಿದ್ದ ಬಳೆಗಳೆಂದು ನರೇಶ್ ಗುರುತಿಸಿದ. ಇದಲ್ಲದೇ ಚಾಪೆಯ ಮೇಲೆ ರಕ್ತದ ಕಲೆಗಳು ಕಂಡುಬಂದವು. ಗೋಡೆಯ ಮೇಲಿದ್ದ ರಕ್ತದ ಮಾದರಿಯನ್ನು ಸಂಗ್ರಹಿಸಲಾಯಿತು.
ಮಹೇಂದ್ರನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ತಾನು ಮದ್ಯಪಾನದ ಅಮಲಿನಲ್ಲಿ ಮಗುವಿನ ಮೇಲೆ ಬಲಾತ್ಕಾರ ಮಾಡಿದನೆಂದು ಒಪ್ಪಿಕೊಂಡ. ಅವನನ್ನು ಬಂಧಿಸಲಾಯಿತು. ಇಷ್ಟರಲ್ಲಿ ಕುಸುಮ ಆಸ್ಪತ್ರೆಗೆ ಸೇರಿ ವಾರವೊಂದು ಮುಗಿದಿತ್ತು. ಆಕೆ ಜೀವನ್ಮರಣಗಳ ನಡುವೆ ಹೋರಾಡುತ್ತಿದ್ದಳು. ಇನ್ನೂ ಮಾತನಾಡುವ ಪರಿಸ್ಥಿತಿಯಲ್ಲಿರಲಿಲ್ಲ. ಜನಾಗ್ರಹದ ಮೇರೆಗೆ ಸರ್ಕಾರ ಆಕೆಯನ್ನು ವಿಶೇಷ ವಿಮಾನದಲ್ಲಿ ದೆಹಲಿಗೆ ಕಳಿಸಿ ಅಲ್ಲಿನ ಏಮ್್ಸ ಆಸ್ಪತ್ರೆಗೆ ದಾಖಲು ಮಾಡಿಸಿತು. ಒಂದು ತಿಂಗಳ ಉಪಚಾರದ ತರುವಾಯ ಬಾಲಕಿಗೆ ಮಾತು ಬಂದು ತನ್ನ ಮಾಸ್ತರ್ ಮಾಡಿದ ಕುಕೃತ್ಯದ ಬಗ್ಗೆ ಪೊಲೀಸರಿಗೆ ಹೇಳಿಕೆ ನೀಡಿದಳು.
ಆನಂತರ ಪೊಲೀಸರು ಮಹೇಂದ್ರನ ವಿರುದ್ಧ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಿದರು. ನ್ಯಾಯಾಂಗ ವಿಚಾರಣೆಯಲ್ಲಿ ವಿಡಿಯೋ ಕಾಲ್ ಮೂಲಕ ಹಾಜರಾದ ಕುಸುಮ ಮಹೇಂದ್ರನ ವಿರುದ್ಧ ಹೇಳಿಕೆ ನೀಡಿದಳು. ಆ ಬಾಲಕಿಯ ಹೇಳಿಕೆ ಮೇರೆಗೆ ಮಹೇಂದ್ರನಿಗೆ ನ್ಯಾಯಾಲಯ ಭಾರತ ದಂಡ ಸಂಹಿತೆ ಮತ್ತು ಪೋಕ್ಸೋ ಕಾಯ್ದೆಯನ್ವಯ ಒಂದು ತಿಂಗಳ ತ್ವರಿತ ವಿಚಾರಣೆ ನಂತರ ಮರಣದಂಡನೆ ಶಿಕ್ಷೆಯನ್ನು ಘೋಷಿಸಿತು. ಈ ಶಿಕ್ಷೆಯನ್ನು ಪುರಸ್ಕರಿಸಿದ ಹೈಕೋರ್ಟ್ ಶಿಕ್ಷೆಯನ್ನು ಕಾಯಂಗೊಳಿಸಿತು. 2019ರ ಮಾರ್ಚ್ 2ರಂದು ಅವನನ್ನು ಗಲ್ಲಿಗೇರಿಸಲು ಕಪು್ಪವಾರಂಟ್ ಹೊರಡಿಸಲಾಯಿತು. ಅಷ್ಟರಲ್ಲಿ ಮಧ್ಯಪ್ರವೇಶಿಸಿದ ಸುಪ್ರೀಂ ಕೋರ್ಟ್ ಗಲ್ಲಿಗೆ ತಡೆಯಾಜ್ಞೆ ನೀಡಿ ಮುಂದಿನ ವಿಚಾರಣೆ ನಡೆಸುವುದಾಗಿ ತಿಳಿಸಿತು. ಸದ್ಯ ಮಹೇಂದ್ರ ಜೈಲಿನಲ್ಲಿದ್ದಾನೆ. ಶಿಕ್ಷಕನೊಬ್ಬ ತನ್ನ ಶಾಲೆಯ ಪುಟ್ಟ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮಾಡಿದ ಘಟನೆ ದೇಶವನ್ನೇ ಬೆಚ್ಚಿಬೀಳಿಸಿದ್ದು ಆತನಿಗೆ ಮರಣದಂಡನೆ ಎಂದಾಗುತ್ತದೆಯೋ ಎಂದು ಸಾರ್ವಜನಿಕರು ಕಾಯುತ್ತಿದ್ದಾರೆ. ‘ಅತ್ಯಾಚಾರಿಗಳು ಮಾನವಕುಲಕ್ಕೇ ಒಂದು ಶಾಪ. ನಮ್ಮ ಬಾಲಕಿಯರು, ಪುತ್ರಿಯರು ಮತ್ತು ಮಹಿಳೆಯರು ಅವರ ಗುರಿಯಾಗಬಾರದೆಂದರೆ ಅವರನ್ನು ಬೆಳೆಯಲು ಬಿಡಲೇಬಾರದು’ ಎನ್ನುತ್ತಾನೆ ನೈಜೀರಿಯಾದ ಕವಿ ಹಾಗೂ ಪ್ರೇರಣಾದಾಯಿ ಭಾಷಣಕಾರ ಒಲುರೋಟಿಮಿ.
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)