ಅಂಕಣ

ಎಸ್​​ಬಿಐನಲ್ಲಿ ಸಿಗಲಿದೆ ಸ್ಟಾರ್ಟಪ್​ಗೆ ಸಾಲ; ನವೋದ್ಯಮ ಕನಸಿಗೆ ಎಸ್​ಬಿಐ ಸ್ಟಾರ್ಟ್ ಬ್ರ್ಯಾಂಚ್​ ಸಹಕಾರ

ಇದು ಸ್ಟಾರ್ಟಪ್​ಗಳ ಜಮಾನಾ. ಸಮಾಜ ಎದುರಿಸುತ್ತಿರುವ ವಿವಿಧ ಸಮಸ್ಯೆಗಳಿಗೆ ಪರಿಹಾರ ಹುಡುಕಿ ದಿನಕ್ಕೊಂದು ನವೋದ್ಯಮಗಳು ಎದುರಿಗೆ ಬರುತ್ತಿದೆ. ಇಂಟರ್​ನೆಟ್ ವ್ಯಾಪಕತೆಯಿಂದ ಸಾಮಾನ್ಯರೂ ಹೇರಳವಾಗಿ ಸಿಗುವ ಜ್ಞಾನ ಸಂಪತ್ತನ್ನು ಅರ್ಜಿಸಿಕೊಳ್ಳುವುದರಿಂದ ಹೊಸ ಹೊಸ ಆಲೋಚನೆಗಳು ಉದ್ಯಮ ರೂಪ ಪಡೆದುಕೊಳ್ಳಲು ಸಾಧ್ಯವಾಗುತ್ತಿದೆ. ಕೆಲಸಕ್ಕೆ ಅರ್ಜಿ ಹಿಡಿದು ಅಲೆಯುವ ಬದಲು ಉದ್ಯಮಿಯಾಗಿ ಉದ್ಯೋಗ ನೀಡುವ ಟ್ರೆಂಡ್ ಕೂಡ ಹೆಚ್ಚಾಗುತ್ತಿದೆ. ಇನ್ನೊಂದು ಭಾಗದಲ್ಲಿ ವೆಂಚರ್ ಕ್ಯಾಪಿಟಲಿಸ್ಟ್​ಗಳು ತಮ್ಮ ಸಂಪತ್ತನ್ನು ನವ್ಯೋದ್ಯಮದ ಮೇಲೆ ಹೂಡಿಕೆ ಮಾಡಲು ಹೆಚ್ಚೆಚ್ಚು ಆಸಕ್ತಿ ತೋರುತ್ತಿದ್ದಾರೆ.

ಅಂದಹಾಗೆ ನವ್ಯೋದ್ಯಮಕ್ಕೆ ಬೆಂಗಳೂರೇ ರಾಜಧಾನಿ. ದೇಶದಲ್ಲಿ ಅತೀ ಹೆಚ್ಚು ನವೋದ್ಯಮ ಇರುವುದು ಇಲ್ಲಿಯೇ! ದೇಶದ ಶೇ.4ಕ್ಕಿಂತ ಹೆಚ್ಚು ಯೂನಿಕಾರ್ನ್ ಗಳೂ ನಮ್ಮ ಬೆಂಗಳೂರಲ್ಲೇ ನೆಲೆಯೂರಿವೆ. ಇದಕ್ಕೆ ಕಾರಣ ಇಲ್ಲಿನ ಇಕೋ ಸಿಸ್ಟಂ. ತಂತ್ರಜ್ಞಾನ ಆಧಾರಿತ ಬೆಂಬಲ, ಮಾನವ ಸಂಪನ್ಮೂಲ ಇಲ್ಲಿ ಹೇರಳವಾಗಿ ಸಿಗುತ್ತಿದೆ. ಜಗತ್ತಿನ ಮುಂದುವರಿದ ದೇಶಗಳು ಸಹ ನವ್ಯೋದ್ಯಮ ಎಂದಾಗ ಬೆಂಗಳೂರಿನತ್ತಲೇ ದೃಷ್ಟಿ ಹರಿಸುತ್ತಿವೆ. ಹೀಗಾಗಿ ನವ್ಯೋದ್ಯಮ ರೇಸ್​ನಲ್ಲಿ ರಾಜ್ಯದ ರಾಜಧಾನಿ ಬಹಳ ಮುಂದಿದೆ.

ಸ್ಟಾರ್ಟಪ್​ಗೆ ಅಂದರೆ ಏನು? ಎಂದು ವಿವರಣೆ ಕೊಡುವ ಕಾಲ ದಾಟಿದೆ. ಆದರೆ, ಸ್ಟಾರ್ಟಪ್​ಗೆ ಆರಂಭಿಸುವವರಿಗೆ ಕೆಲವು ಮಾಹಿತಿ ಅತ್ಯಗತ್ಯ ಎನಿಸಿದೆ. ಇದರ ಆರಂಭಕ್ಕೆ ಹಣಕಾಸು ನೆರವಿನ ಬಗ್ಗೆ ಅರಿವಿನ ಕೊರತೆಯಂತೂ ಇದ್ದೇಇದೆ. ಇಂತಹ ಸಂದರ್ಭದಲ್ಲಿ ಸ್ಟೇಟ್ ಬ್ಯಾಂಕ್ ಇಂಡಿಯಾ ಸ್ಟಾರ್ಟಪ್​ಗಳ ಅಗತ್ಯವನ್ನು ಅವಕಾಶವಾಗಿಸಿಕೊಳ್ಳುವ ಹಾಗೂ ಬೆನ್ನೆಲುಬಾಗಿ ನಿಲ್ಲಲು ಹೊಸ ಪ್ರಯತ್ನ ನಡೆಸಿದೆ. ಈ ಪ್ರಯತ್ನ ಬೆಂಗಳೂರಿನಲ್ಲಿ ಮೊದಲು ಎಂಬುದು ಅಗ್ಗಳಿಕೆ.

ಅಂದಮೇಲೆ ದೇಶದ ಮೊಟ್ಟ ಮೊದಲ ಎಸ್​ಬಿಐ ಸ್ಟಾರ್ಟ್ ಬ್ರ್ಯಾಂಚ್​ ಯಾವ ವಿಳಾಸದಲ್ಲಿದೆ? ಅಲ್ಲಿ ಏನೆಲ್ಲ ಸೌಲಭ್ಯ ಸಿಗಲಿದೆ? ಯಾವ ರೀತಿ ನವ್ಯೋದ್ಯಮ ಕನಸು ಹೊತ್ತವರಿಗೆ ಅನುಕೂಲವಾಗಲಿದೆ ಎಂಬ ಮಾಹಿತಿ ಕೊಡುವ ಪ್ರಯತ್ನ ಇದು.

ಪ್ರತ್ಯೇಕ ಶಾಖೆ ಆರಂಭ: ಸ್ಟಾರ್ಟಪ್​ಗಳಿಗೆ ನೆರವಾಗುವ ಉದ್ದೇಶದಿಂದ ಪ್ರತ್ಯೇಕ ಶಾಖೆಯನ್ನು ಬೆಂಗಳೂರಿನ ಕೋರಮಂಗಲದಲ್ಲಿ ತೆರೆಯಲಾಗಿದೆ. ಎಸ್​ಬಿಐ ಅಧ್ಯಕ್ಷ ದಿನೇಶ್ ಖಾರ ಮಹತ್ವದ ನಿರೀಕ್ಷೆಯೊಂದಿಗೆ ಕಳೆದ ವಾರ ಹೊಸ ಶಾಖೆ ಉದ್ಘಾಟಿಸಿದ್ದಾರೆ. ಈ ರೀತಿ ಪ್ರತ್ಯೇಕ ಬ್ರ್ಯಾಂಚ್​ ಆರಂಭಿಸುವ ಮುನ್ನ ಸ್ಟಾರ್ಟಪ್​ಗಳ ನಿರೀಕ್ಷೆ ಬಗ್ಗೆ ಒಂದು ಸರ್ವೆ ಮಾಡಿಸಲಾಗಿದೆ. ಯಾವ ರೀತಿ ಸೇವೆ ಕೊಡಬಹುದು? ಸ್ಟಾರ್ಟಪ್​ಗಳ ನಿರೀಕ್ಷೆಗಳೇನಿವೆ? ಅವಕಾಶವನ್ನು ಯಾವ ರೀತಿ ಬಳಸಿಕೊಳ್ಳಬಹುದು? ಎಂಬ ಬಗ್ಗೆ ಅವಲೋಕನ ಮಾಡಿಯೇ ಈ ಹೆಜ್ಜೆ ಇಡಲಾಗಿದೆ. ಕೇಂದ್ರ ಸರ್ಕಾರವು ತನ್ನ ಪ್ರಮುಖ ‘ಸ್ಟಾರ್ಟಪ್ ಇಂಡಿಯಾ’ ಆಂದೋಲನದ ಮೂಲಕ ಸುಸ್ಥಿರ ಆರ್ಥಿಕ ಬೆಳವಣಿಗೆಗೆ ಚಾಲನೆ ನೀಡಲು ಹಾಗೂ ಭಾರತೀಯ ಯುವಕರಿಗೆ ಉದ್ಯಮಶೀಲತಾ ಕೌಶಲಗಳಿಗೆ ಸಹಾಯ ಹಸ್ತ ನೀಡಲು, ದೊಡ್ಡ ಪ್ರಮಾಣದ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮೂಲಕ ದೇಶದಲ್ಲಿ ಹೊಸ ಬದಲಾವಣೆ ತರ ಬಯಸುತ್ತಿದೆ. ಇದಕ್ಕೆ ಪೂರಕವಾಗಿ ಸ್ಟಾರ್ಟಪ್ ಪೋಷಿಸಲು ಗಟ್ಟಿಯಾದ ಇಕೋಸಿಸ್ಟಂ ರೂಪಿಸಲು ಪ್ರಯತ್ನಿಸುತ್ತಿದೆ. ಈ ಪ್ರಯತ್ನಕ್ಕೆ ಬೆಂಬಲವಾಗಿ ಪ್ರತ್ಯೇಕ ಶಾಖೆ ಆರಂಭಿಸಿದ್ದೇವೆ ಎಂಬುದು ಎಸ್​ಬಿಐ ವಿವರಣೆಯಾಗಿದೆ.

ಸ್ಟಾರ್ಟಪ್ ಅಂದ್ರೆ ಯಾವುದು?
  • ಹೊಸದಾಗಿ ಆರಂಭಿಸಿದ ಉದ್ಯಮಗಳೆಲ್ಲವೂ ಸ್ಟಾರ್ಟಪ್​ಗಳಲ್ಲ. ಸ್ಟಾರ್ಟಪ್ ಎಂದು ಪರಿಗಣನೆಯಾಗಬೇಕಾದರೆ ಸರ್ಕಾರದ ಸೂಕ್ತ ವೇದಿಕೆಯಲ್ಲಿ ನೋಂದಣಿಯಾಗಬೇಕು.
  • ಆರಂಭಿಕ ಗುರುತಿಸುವಿಕೆಗಾಗಿ ಅರ್ಹತಾ ಮಾನದಂಡಗಳೇ ಇವೆ. ಸ್ಟಾರ್ಟಪ್ ಅನ್ನು ಖಾಸಗಿ ಸೀಮಿತ ಕಂಪನಿಯಾಗಿ ಸಂಯೋಜಿಸಬೇಕು ಅಥವಾ ಪಾಲುದಾರಿಕೆ ಸಂಸ್ಥೆ, ಸೀಮಿತ ಹೊಣೆಗಾರಿಕೆ ಪಾಲುದಾರಿಕೆಯಾಗಿ ನೋಂದಾಯಿಸಬೇಕು.
  • ಹಿಂದಿನ ಯಾವುದೇ ಹಣಕಾಸು ವರ್ಷಗಳಲ್ಲಿ ವಹಿವಾಟು 100 ಕೋಟಿ ರೂ.ಗಳಿಗಿಂತ ಕಡಿಮೆ ಇರಬೇಕು. ಒಂದು ಘಟಕವನ್ನು ಅದರ ಸಂಯೋಜನೆ ದಿನಾಂಕದಿಂದ 10 ವರ್ಷಗಳವರೆಗೆ ಸ್ಟಾರ್ಟಪ್ ಎಂದು ಪರಿಗಣಿಸಲಾಗುತ್ತದೆ.
  • ಅಸ್ತಿತ್ವದಲ್ಲಿರುವ ಉತ್ಪನ್ನಗಳು, ಸೇವೆಗಳು ಮತ್ತು ಪ್ರಕ್ರಿಯೆಗಳ ನಾವೀನ್ಯತೆ ಅಥವಾ ಸುಧಾರಣೆಗೆ ಕೆಲಸ ಮಾಡಬೇಕು ಮತ್ತು ಉದ್ಯೋಗ ಸೃಷ್ಟಿ ಅಥವಾ ಸಂಪತ್ತನ್ನು ಸೃಷ್ಟಿಸುವ ಸಾಮರ್ಥ್ಯ ಹೊಂದಿರಬೇಕು.
  • ಅಸ್ತಿತ್ವದಲ್ಲಿರುವ ವ್ಯಾಪಾರವನ್ನು ವಿಭಜಿಸುವ ಅಥವಾ ಪುನರ್​ನಿರ್ವಣ ಮಾಡುವ ಮೂಲಕ ರೂಪುಗೊಂಡ ಘಟಕವನ್ನು ಸ್ಟಾರ್ಟಪ್ ಎಂದು ಪರಿಗಣಿಸಲಾಗುವುದಿಲ್ಲ.
ಸ್ಟಾರ್ಟಪ್​ಗೆ ಕೇಂದ್ರ ಸರ್ಕಾರ ವಿಶೇಷ ಆದ್ಯತೆ ನೀಡುತ್ತಿದೆ. ಪೂರಕವಾಗಿ ನಮ್ಮ ಬ್ಯಾಂಕ್ ಸ್ಟಾರ್ಟಪ್​ಗಳಿಗೆ ಸಹಾಯಹಸ್ತ ನೀಡಲು ವಿಶೇಷ ವ್ಯವಸ್ಥಿತ ಶಾಖೆಗಳ ಅಗತ್ಯ ಇರುವುದನ್ನು ಮನಗಂಡು ಶಾಖೆ ತೆರೆದಿದ್ದೇವೆ. ಇಲ್ಲಿ ನವ್ಯೋದ್ಯಮಗಳಿಗೆ ಅಗತ್ಯ ಅನುಕೂಲ ಮತ್ತು ಸಹಾಯ ನೀಡಲಾಗುತ್ತದೆ. | ದಿನೇಶ್ ಖಾರ ಎಸ್​ಬಿಐ ಅಧ್ಯಕ್ಷ

ಎಷ್ಟು ಸಾಲ ಸಿಗಲಿದೆ?: ಈಗಾಗಲೆ 104 ಸ್ಟಾರ್ಟಪ್​ಗಳಿಗೆ 250 ಕೋಟಿ ರೂ.ಗಳಷ್ಟು ಸಾಲ ನೀಡಲಾಗಿದೆ. ಸಾಲ ನೀಡಿಕೆಗೆ ನಿರ್ದಿಷ್ಟ ಗುರಿ ಇರುವುದಿಲ್ಲ. ಅಗತ್ಯಕ್ಕೆ ತಕ್ಕಂತೆ ನೀಡಲಾಗುತ್ತದೆ ಎಂಬುದು ಬ್ಯಾಂಕ್​ನ ವಿವರಣೆ.

ಹಣಕಾಸು-ಸಲಹಾ ಸೇವೆ

ಎಸ್​ಬಿಐ ಸ್ಟಾರ್ಟ್ ಶಾಖೆಯು ವಿವಿಧ ಸ್ಟೇಕ್​ಹೋಲ್ಡರ್​ಗಳಿಗೆ ಕೇಂದ್ರವಾಗಿ ಕಾರ್ಯನಿರ್ವಹಿಸುವ ಜತೆಗೆ ಪರಿಹಾರಗಳನ್ನು ಒದಗಿಸುತ್ತದೆ. ಆರಂಭದಿಂದ ಅಂತ್ಯದವರೆಗೆ ಹಣಕಾಸು ಮತ್ತು ಸಲಹಾ ಸೇವೆ ಪಡೆಯಲು ಅವಕಾಶ ಇರುತ್ತದೆ. ಅಲ್ಲದೆ, ಸ್ಟೇಟ್ ಬ್ಯಾಂಕ್ ಗ್ರೂಪ್​ನ ಎಲ್ಲ ಘಟಕಗಳು, ವಿವಿಧ ಇಲಾಖೆಗಳ ನಡುವೆ ಹೊಂದಾಣಿಕೆ ನಡೆಸಲಿದೆ. ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನಾ ಇಲಾಖೆಯು ಸ್ಟಾರ್ಟಪ್ ನೋಂದಣಿಗೆ ಒಂದು ಆನ್​ಲೈನ್ ವೇದಿಕೆ ಕಲ್ಪಿಸಿದೆ. ಜತೆಗೆ ಯಾವುದನ್ನು ಸ್ಟಾರ್ಟಪ್ ಎಂದು ಒಪ್ಪಿಕೊಳ್ಳಲಾಗುತ್ತದೆ ಎಂಬುದರ ಬಗ್ಗೆ ನಿಯಮ ರೂಪಿಸಿದೆ. ಆ ಮಾನದಂಡಗಳಡಿ ಅರ್ಜಿ ಸಲ್ಲಿಸಬೇಕು. ಅಲ್ಲಿ ಒಪ್ಪಿತವಾದರೆ ಸ್ಟಾರ್ಟಪ್ ಎಂದು ಪರಿಗಣಿತವಾಗುತ್ತದೆ. ಹೀಗೆ ನೊಂದಾವಣೆಯಾದವು ಈ ನೂತನ ಶಾಖೆಯ ನೆರವು ಪಡೆಯಬಹುದು. ಈ ಶಾಖೆಯಲ್ಲಿ ಸ್ಟಾರ್ಟಪ್​ಗಳಿಗೆ ನೆರವಾಗುವ ಕೌಶಲ ಹೊಂದಿದ ಸಿಬ್ಬಂದಿ ನಿಯೋಜಿಸಲಾಗಿದೆ. ಅವರು ಉಳಿದ ಬ್ಯಾಂಕ್ ಶಾಖೆಗಳಿಗಿಂತ ವಿಭಿನ್ನವಾಗಿ ಕಾರ್ಯನಿರ್ವಹಿಸಲಿದ್ದಾರೆ. ಆ ರೀತಿಯಲ್ಲೇ ವ್ಯವಸ್ಥೆ ರೂಪಿಸಿ ಚೌಕಟ್ಟು ಹಾಕಿಕೊಳ್ಳಲಾಗಿದೆ.

ಮುಂದಿನ ದಿನಗಳಲ್ಲಿ ಮತ್ತಷ್ಟು ಶಾಖೆ

ಕಾಪೋರೇಟ್ ಮತ್ತು ಸ್ಟಾರ್ಟಪ್​ಗಳಿಗೆ ಐಪಿಒ ಮತ್ತು ಎಫ್​ಪಿಒ ಸಂಬಂಧ ಒನ್ ಸ್ಟಾಪ್ ಸೆಲ್ಯೂಷನ್ ರೀತಿ ಎಸ್​ಬಿಐ ಸ್ಟಾರ್ಟ್ ಶಾಖೆ ಕಾರ್ಯನಿರ್ವಹಿಸುತ್ತದೆ. ‘ಗೋ ಟು ಪ್ಲೇಸ್’ ಕಲ್ಪನೆಯಲ್ಲಿ ಇದೇ ಮುಖ್ಯಕೇಂದ್ರವಾಗಲಿದೆ. ಬ್ಯಾಂಕಿಂಗ್ ಸೇವೆಗಳ ಹೊರತಾಗಿ ಬಂಡವಾಳ ಮಾರುಕಟ್ಟೆ ಹಾಗೂ ಈಕ್ವಿಟಿ ಸಂಬಂಧ ಸಹಾಯ ಮಾಡಲಿದೆ. ಕೌಶಲ ಹೊಂದಿದ ಸಿಬ್ಬಂದಿ ಇದ್ದು, ಅವರು ಮಾರ್ಗದರ್ಶನ ಮಾಡಲಿದ್ದಾರೆ. ವಿದೇಶಿ ವಿನಿಮಯ, ಟ್ರೆಜರಿ ಸೆಲ್ಯೂಷನ್, ವೆಲ್ತ್ ಮ್ಯಾನೇಜ್​ವೆುಂಟ್ ಮತ್ತು ಸಾಲ ವಿತರಣೆ ಕುರಿತು ವಿಶೇಷ ಅಧಿಕಾರ ಹೊಂದಿರುವ ಈ ಶಾಖೆ, ಮ್ಯೂಚುಯಲ್ ಫಂಡ್, ಕಸ್ಟೋಡಿಯಲ್ ಸೇವೆಯನ್ನೂ ಒಳಗೊಂಡಿದೆ. ಅಲ್ಲದೆ, ಇಡೀ ಸ್ಟಾರ್ಟಪ್ ಇಕೋ ಸಿಸ್ಟಂನ ಅಗತ್ಯ ಪೂರೈಸಲು ನೆರವು ನೀಡುತ್ತದೆ. ಪ್ರೖೆವೇಟ್ ಈಕ್ವಿಟಿ, ವೆಂಚರ್ ಕ್ಯಾಪಿಟಲ್ ಸಂಬಂಧಿಸಿದಂತೆಯೂ ನೆರವಾಗಲಿದೆ. ದೇಶದಲ್ಲಿ ಸ್ಟಾರ್ಟಪ್ ಬೆಳವಣಿಗೆಗೆ ಪೂರಕವಾಗಿ ಕೇಂದ್ರ ಪ್ರೋತ್ಸಾಹದೊಂದಿಗೆ ಮುಂಬರುವ ತಿಂಗಳಲ್ಲಿ ವಿವಿಧ ಕಡೆ ಇದೇ ರೀತಿ ಶಾಖೆ ಆರಂಭಿಸುವ ಉದ್ದೇಶವಿದೆ, ಆರು ತಿಂಗಳಲ್ಲಿ ಗುರುಗ್ರಾಮ ಮತ್ತು ಹೈದರಾಬಾದ್​ನಲ್ಲಿ ಆದ್ಯತೆ ಮೇಲೆ ಪ್ರಾರಂಭಿಸಲಾಗುತ್ತದೆ ಎಂದು ಬ್ಯಾಂಕ್ ಅಧ್ಯಕ್ಷ ದಿನೇಶ್ ಖಾರ ಈಗಾಗಲೆ ಘೋಷಿಸಿದ್ದಾರೆ.