ಅಂಕಣ

ಎಥನಾಲ್ ಆರ್ಥಿಕತೆ: ಪರ್ಯಾಯ ಮಾರ್ಗದಲ್ಲಿ ದೃಢ ಹೆಜ್ಜೆ

| ಭರತ್ ಶೆಟ್ಟಿಗಾರ್ ಮಂಗಳೂರು

ಈಗ ಎಲ್ಲ ಕಡೆ ಇಂಧನ ಬೆಲೆ ಏರಿಕೆಯದ್ದೇ ಸುದ್ದಿ, ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ದಿನದಿಂದ ದಿನಕ್ಕೆ ಗಗನಮುಖಿಯಾಗುತ್ತಿವೆ. ಅದರಲ್ಲೂ ಇದೀಗ ರಷ್ಯಾ-ಯುಕ್ರೇನ್ ಯುದ್ಧದ ಫಲವಾಗಿ ಕಚ್ಚಾತೈಲ ಬೆಲೆ ಹಿಗ್ಗಾಮಗ್ಗಾ ಏರಿಕೆಯಾಗುತ್ತಿದ್ದು, ಪಂಚರಾಜ್ಯ ಚುನಾವಣೆಗಳು ಮುಗಿದ ಬೆನ್ನಿಗೆ ದೇಶದಲ್ಲೂ ಇಂಧನ ಬೆಲೆ ಮತ್ತಷ್ಟು ಹೆಚ್ಚಾಗುವುದು ನಿಶ್ಚಿತ. ಇದಕ್ಕೆ ಪರ್ಯಾಯ ಇಂಧನ ಬಳಕೆ ಇಂದಿನ ತುರ್ತು ಅಗತ್ಯವಾಗಿದ್ದು, ಇದರ ಬಳಕೆಗೆ ಒತ್ತು ನೀಡುವ ನಿಟ್ಟಿನಲ್ಲಿ ದೇಶದಲ್ಲಿ ಎಥನಾಲ್ ಉತ್ಪಾದನೆ ಮತ್ತು ಬಳಕೆ ಪ್ರಮಾಣ ಹೆಚ್ಚಿಸಲು ಉದ್ದೇಶಿಸಲಾಗಿದೆ.

8 ಲಕ್ಷ ಕೋಟಿ ರೂ. ವ್ಯಯ: ಭಾರತ ಇಂದು ಅತಿ ಹೆಚ್ಚು ಆಮದು ಮಾಡಿಕೊಳ್ಳುತ್ತಿರುವ ಕಚ್ಚಾತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳಿಗೆ ಪ್ರಸ್ತುತ ವರ್ಷಕ್ಕೆ 8 ಲಕ್ಷ ಕೋಟಿ ರೂ. ವಾರ್ಷಿಕ ವ್ಯಯ ಮಾಡಲಾಗುತ್ತಿದ್ದು, ಮುಂದಿನ 5 ವರ್ಷದಲ್ಲಿ ಇದು 35 ಲಕ್ಷ ಕೋಟಿ ರೂ.ಗೆ ಏರಿಕೆಯಾಗಲಿದೆ. ಆದ್ದರಿಂದ ಕೃಷಿ ಕ್ಷೇತ್ರದಿಂದ ಜೈವಿಕ ಇಂಧನ ಮತ್ತು ವಿದ್ಯುತ್ ಉತ್ಪಾದಿಸುವ ಮೂಲಕ, ವಾಹನಗಳಿಗೆ ಬಳಸುವ ಇಂಧನ ವೆಚ್ಚ ವನ್ನು ಕಡಿಮೆ ಮಾಡುವುದು ಮತ್ತು ಪರಿಸರ ಪೂರಕವಾಗಿ ಮಾಲಿನ್ಯ ಪ್ರಮಾಣವನ್ನು ತಗ್ಗಿಸುವುದು ಇದರ ಹಿಂದಿನ ಉದ್ದೇಶ.

ಆಹಾರ ಪದಾರ್ಥ ಉತ್ಪಾದನೆ ಹೆಚ್ಚಳ: ದೇಶದಲ್ಲಿ ಒಂದು ಕಾಲದಲ್ಲಿ ಆಹಾರ ಪದಾರ್ಥಗಳ ಕೊರತೆ ಇತ್ತು. ಆದರೆ ಇಂದು ಅಕ್ಕಿ, ಸಕ್ಕರೆ, ಜೋಳ, ಗೋಧಿ ಸಾಕಷ್ಟು ಪ್ರಮಾಣದಲ್ಲಿ ಉತ್ಪಾದನೆಯಾಗುತ್ತಿದೆ. ಪಂಜಾಬ್-ಹರಿಯಾಣದಂತಹ ರಾಜ್ಯದಲ್ಲಿ ಉತ್ಪಾದನೆ ಹೆಚ್ಚಾಗಿ ಶೇಖರಿಸಿಡಲು ಗೋದಾಮುಗಳ ಕೊರತೆಯಾಗಿ, ಜಮೀನಿನಲ್ಲೇ ಉಳಿಯುತ್ತಿದೆ. ಕೆಲವೆಡೆ ರೈತರು ರೈಲ್ವೆ ಫ್ಲ್ಯಾಟ್ ಫಾಮರ್್​ಗಳಲ್ಲಿ ಇಡುತ್ತಿದ್ದಾರೆ. ಒಂದು ಟನ್ ಬ್ರೋಕನ್ ರೈಸ್​ನಿಂದ 480 ಲೀ. ಬಯೋ ಎಥನಾಲ್ ದೊರೆಯುತ್ತದೆ. ಇಥೆನಾಲ್ ಉತ್ಪಾದನೆಯ ಪ್ರಮುಖ ಕಚ್ಚಾವಸ್ತುಗಳಲ್ಲಿ ಒಂದಾಗಿರುವ ಕಬ್ಬನ್ನು ದೇಶದಲ್ಲಿ ಬೇಡಿಕೆಗಿಂತಲೂ ಹೆಚ್ಚು ಉತ್ಪಾದಿಸಲಾಗುತ್ತಿದೆ. ಹೆಚ್ಚುವರಿ ಅಕ್ಕಿ, ಜೋಳವನ್ನೂ ಎಥನಾಲ್ ತಯಾರಿಕೆಗೆ ಉಪಯೋಗಿಸಲಾಗುತ್ತಿದೆ.

ಪೆಟ್ರೋಲ್​ಗೆ ಮಿಶ್ರಣ: ಸದ್ಯ ದೇಶದಲ್ಲಿ 400 ಕೋಟಿ ಲೀ. ಬಯೋ ಎಥನಾಲ್ ಉತ್ಪಾದನೆಯಾಗುತ್ತಿದ್ದು, ಪ್ರತಿ ಲೀಟರ್ ಪೆಟ್ರೋಲ್​ಗೆ ಶೇ.10 ಎಥನಾಲ್ ಮಿಶ್ರಣ ಮಾಡಲಾಗುತ್ತಿದೆ. 2025ರೊಳಗೆ ಶೇ.20 ಮತ್ತು 2030ರೊಳಗೆ ಡೀಸೆಲ್ ಜತೆ ಶೇ.5 ಮಿಶ್ರಣ ಮಾಡುವ ಗುರಿ ಹೊಂದಲಾಗಿದೆ. ಇಷ್ಟು ಪ್ರಮಾಣದಲ್ಲಿ ಪೆಟ್ರೋಲ್ ಜತೆ ಸೇರಿಸಬೇಕಿದ್ದರೆ 1 ಸಾವಿರ ಕೋಟಿ ಲೀ. ಎಥನಾಲ್ ಉತ್ಪಾದಿಸುವ ಅವಶ್ಯಕತೆಯಿದೆ. ಕೇಂದ್ರ ಸರ್ಕಾರ ಇದಕ್ಕಾಗಿ ರಾಷ್ಟ್ರೀಯ ನೀತಿಯೊಂದನ್ನು ಸಿದ್ಧಪಡಿಸಿದ್ದು, ದೇಶದಲ್ಲಿ ಮುಂದಿನ 2 ವರ್ಷದಲ್ಲಿ 300 ಎಥನಾಲ್ ಉತ್ಪಾದನಾ ಉದ್ದಿಮೆಗಳು ಕಾರ್ಯಾರಂಭಿಸಲಿವೆ ಎನ್ನುತ್ತಾರೆ ಕೇಂದ್ರ ಸಚಿವ ನಿತಿನ್ ಗಡ್ಕರಿ.

ದೇಶಕ್ಕೆ ಬೇಕಾದ ಇಂಧನವನ್ನು ನಮ್ಮಲ್ಲಿಯೇ ಉತ್ಪಾದಿಸುವುದು ಸದ್ಯದ ಪರಿಸ್ಥಿತಿಯಲ್ಲಿ ಅಗತ್ಯವಾಗಿದೆ. ಈಗ ಇರುವ ಕೃಷಿ ಉತ್ಪನ್ನಗಳಿಂದ ಇಂಧನ ತಯಾರಿಸುವುದು ನಮ್ಮಲ್ಲಿರುವ ಸುಲಭ ಆಯ್ಕೆಯಾಗಿದ್ದು, ಇದರಿಂದ ಕೃಷಿ ಕ್ಷೇತ್ರದ ಬೆಳವಣಿಗೆಗೂ ಕಾರಣವಾಗಲಿದೆ. | ನಿತಿನ್ ಗಡ್ಕರಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ

ಇನ್ನೆಂಟು ವರ್ಷಕ್ಕೆ ಶೇ.50 ಪ್ರಗತಿ: 2030ರ ವೇಳೆಗೆ ಪಳಿಯುಳಿಕೆಯೇತರ ಇಂಧನಗಳ ಮೂಲಕ ಶೇಕಡ 50 ಎನರ್ಜಿ ಪಡೆಯುವ ಗುರಿಯನ್ನು ಭಾರತ ಹೊಂದಿದೆ. ಸುಸ್ಥಿರ ಶಕ್ತಿ ಮೂಲಗಳನ್ನು ಬಳಸಿಕೊಂಡು ಸುಸ್ಥಿರ ಬೆಳವಣಿಗೆ ಸಂಬಂಧ ಭಾರತದ ದೃಷ್ಟಿಕೋನ ಬಹಳ ಸ್ಪಷ್ಟವಾಗಿದೆ. ನಾವು ಹೈಡ್ರೋಜನ್ ಇಕೋಸಿಸ್ಟಮ್ ಅನ್ನು ಅಭಿವೃದ್ಧಿಪಡಿಸಬೇಕಾಗಿದೆ. ಇದರಲ್ಲಿ ಖಾಸಗಿ ವಲಯ ಮಹತ್ವದ ಪಾತ್ರ ವಹಿಸಬಹುದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ‘ಎನರ್ಜಿ ಫಾರ್ ಸಸ್ಟನೇಬಲ್ ಗ್ರೋತ್’ ವೆಬಿನಾರ್​ನಲ್ಲಿ ಹೇಳಿದ್ದಾರೆ.

ಸಂಗ್ರಹ ಸಾಮರ್ಥ್ಯ ಶೇ.51 ಏರಿಕೆ: ದೇಶದ ಸರ್ಕಾರಿ ಸ್ವಾಮ್ಯದ ಪೆಟ್ರೋಲಿಯಂ ಉತ್ಪನ್ನ ಮಾರಾಟಗಾರ ಕಂಪನಿಗಳು ತಮ್ಮ ಎಥನಾಲ್ ಸಂಗ್ರಹ ಸಾಮರ್ಥ್ಯವನ್ನು ಶೇ.51ಕ್ಕೆ ಏರಿಕೆ ಮಾಡಿಕೊಂಡಿವೆ. 2025ರ ವೇಳೆಗೆ ಗ್ಯಾಸೋಲಿನ್​ಅನ್ನು ಜೈವಿಕ ಇಂಧನದ ಜತೆಗೆ ಸೇರಿಸುವ ಪ್ರಮಾಣವನ್ನು ಶೇ.20ಕ್ಕೆ ಏರಿಸುವ ಗುರಿ ಸಾಧಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೆರೇಶನ್​ನ ಮೂಲಗಳು ತಿಳಿಸಿವೆ. ಇಂಡಿಯನ್ ಆಯಿಲ್ ಕಾರ್ಪೆರೇಶನ್, ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೆರೇಶನ್, ಭಾರತ್ ಪೆಟ್ರೋಲಿಯಂ ಕಾರ್ಪೆರೇಶನ್​ಗಳಲ್ಲಿ ಒಟ್ಟು 178 ದಶಲಕ್ಷ ಲೀ. ಸಾಮರ್ಥ್ಯದ ಸಂಗ್ರಹಾಗಾರವಿದೆ.

ಫ್ಲೆಕ್ಸ್ ಇಂಜಿನ್ ಕಾರುಗಳು: ದೇಶದಲ್ಲಿ ಮುಂದಿನ 6 ತಿಂಗಳಲ್ಲಿ ಫ್ಲೆಕ್ಸ್ ಇಂಜಿನ್ ಹೊಂದಿರುವ ಕಾರುಗಳು ಮಾರುಕಟ್ಟೆಗೆ ಬಿಡುಗಡೆಯಾಗಲಿವೆ. ಶೇ.100 ಪೆಟ್ರೋಲ್ ಅಥವಾ ಎಥನಾಲ್​ನಲ್ಲಿ ಈ ಕಾರುಗಳು ಸಂಚರಿಸುತ್ತವೆ. ಬ್ರೆಜಿಲ್, ಕೆನಡಾ, ಅಮೆರಿಕದಂತಹ ದೇಶಗಳಲ್ಲಿ ಈಗಾಗಲೆ ಇಂತಹ ಕಾರುಗಳು ಸಂಚರಿಸುತ್ತಿವೆ. ಸುಜುಕಿ, ಹುಂಡೈ, ಟೊಯೋಟಾ ಕಿಲೋಸ್ಕರ್ ಸಂಸ್ಥೆಗಳು ತಮ್ಮ ಕಾರುಗಳನ್ನು ಫ್ಲೆಕ್ಸ್ ಇಂಜಿನ್​ನಲ್ಲಿ ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ತಯಾರಿ ನಡೆಸುತ್ತಿವೆ. ಈ ಕಾರುಗಳು ಸಂಚಾರ ಆರಂಭವಾದ ಬಳಿಕ ದೇಶದಲ್ಲಿ 2 ಸಾವಿರ ಕೋಟಿ ಲೀ. ಎಥನಾಲ್ ಇಂಧನದ ಅವಶ್ಯಕತೆ ಬೀಳಲಿದ್ದು, ಈ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಎಥನಾಲ್ ಉತ್ಪಾದಿ ಸುವುದು ಸದ್ಯದ ಪ್ರಮುಖ ಗುರಿಯಾಗಿದೆ.