ಕೇಂದ್ರ ನಾಗರಿಕ ಸೇವಾ ಆಯೋಗ ಪ್ರತಿ ವರ್ಷ ಆಯೋಜಿಸುವ ನಾಗರಿಕ ಸೇವಾ ಪರೀಕ್ಷೆ ಜಗತ್ತಿನ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಎರಡನೇಯದು ಎಂಬ ಅಭಿಮತ ವಿಶ್ವದ ವಿವಿಧ ಪರೀಕ್ಷಾ ಮಂಡಳಿಗಳದ್ದು. ಇಂತಹ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಿರುವವರ ಪೈಕಿ ಟಾಪರ್ಗಳಲ್ಲಿ ಇಂಜಿನಿಯರ್ಗಳು ಮೇಲುಗೈ ಸಾಧಿಸುತ್ತಿರುವುದು ಗಮನಾರ್ಹ.
| ಉಮೇಶ್ಕುಮಾರ್ ಶಿಮ್ಲಡ್ಕ ಬೆಂಗಳೂರು
ದೇಶಾದ್ಯಂತ ಪ್ರತಿವರ್ಷ 10 ಲಕ್ಷ ವಿದ್ಯಾರ್ಥಿಗಳು ನಾಗರಿಕ ಸೇವಾ ಪರೀಕ್ಷೆ ಎದುರಿಸುತ್ತಿದ್ದಾರೆ. ಇದರಲ್ಲಿ ಉತ್ತೀರ್ಣರಾಗುವವರ ಪ್ರಮಾಣ ಕೇವಲ ಶೇಕಡ 1.5. ಹೀಗಾಗಿಯೇ ಜಗತ್ತಿನ ಅತಿ ಕಠಿಣ ಪರೀಕ್ಷೆಗಳ ಪೈಕಿ ಎರಡನೆಯದು ಎಂಬ ಅಭಿಪ್ರಾಯ ಇದರ ಬಗ್ಗೆ ರೂಪುಗೊಂಡಿದೆ. ಈ ವರ್ಷವೂ 761 ಹುದ್ದೆಗಳಿಗೆ 10 ಲಕ್ಷ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ವಿಶೇಷ ಎಂದರೆ ಈ ಪೈಕಿ ಇಂಜಿನಿಯರ್ಗಳೇ ಅಧಿಕ. ಕಳೆದ ಒಂದು ವರ್ಷದ ಡೇಟಾದಲ್ಲಿ ಗಮನಸೆಳೆದ ಟ್ರೆಂಡ್ ಕೂಡ ಇದುವೇ. ಟಾಪರ್ಗಳನ್ನು ಗಮನಿಸಿದರೆ ಅದರಲ್ಲಿ ಶೇಕಡ 50ಕ್ಕಿಂತ ಹೆಚ್ಚು ಇಂಜಿನಿಯರ್ಗಳು ಮತ್ತು ಐಐಟಿಯಲ್ಲಿ ಕಲಿತವರೇ ಇದ್ದಾರೆ. ಲಾಲ್ ಬಹಾದುರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಶನ್ಗೆ
ತರಬೇತಿಗಾಗಿ 2020ನೇ ಸಾಲಿನ 428 ನಾಗರಿಕ ಸೇವಾ ಅಧಿಕಾರಿಗಳ ತಂಡ ಸೇರಿಕೊಂಡಿದೆ. ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಇತ್ತೀಚೆಗೆ ಬಿಡುಗಡೆ ಮಾಡಿದ ಡೇಟಾ ಪ್ರಕಾರ, ಈ ತಂಡದಲ್ಲಿ 245 ಅಭ್ಯರ್ಥಿಗಳು (57.25%) ಇಂಜಿನಿಯರಿಂಗ್ ಪದವೀಧರರು. ಕೇವಲ 84 ಅಭ್ಯರ್ಥಿಗಳು (19.6%) ಮಾನವಶಾಸ್ತ್ರಗಳ ಹಿನ್ನೆಲೆಯವರು. ಇನ್ನೂ ಆಸಕ್ತಿದಾಯಕ ವಿಚಾರ ಎಂದರೆ ನಾಗರಿಕ ಸೇವೆಗೆ ಆಯ್ಕೆ ಆಗುತ್ತಿರುವವರ ಪೈಕಿ ಟಾಪರ್ಗಳಲ್ಲಿ ಹೆಚ್ಚಿನವರು ಐಐಟಿ ಮತ್ತು ಎನ್ಐಟಿಯಲ್ಲಿ ಕಲಿತವರು. ಸೆಪ್ಟೆಂಬರ್ನಲ್ಲಿ ಪ್ರಕಟವಾದ ಫಲಿತಾಂಶವನ್ನು ಗಮನಿಸಿದರೆ ಟಾಪ್ 10 ರ್ಯಾಂಕ್ ಪಡೆದವರಲ್ಲಿ ನಾಲ್ವರು ಐಐಟಿಯವರು. ಒಬ್ಬರು ಡೆಲ್ಲಿ ಟೆಕ್ನಾಲಾಜಿಕಲ್ ಯೂನಿವರ್ಸಿಟಿ (ಡಿಟಿಯು) ಮತ್ತು ಇನ್ನೊಬ್ಬರು ಮಧ್ಯಪ್ರದೇಶದ ಭೋಪಾಲದ ಮೌಲಾನಾ ಆಜಾದ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಎಎನ್ಐಟಿ)ಯವರು. 2011 ಮತ್ತು 2015 ಬಿಟ್ಟರೆ ಇಡೀ ದಶಕದ ಯುಪಿಎಸ್ಸಿ ಟಾಪರ್ಗಳ ಡೇಟಾ ಗಮನಿಸಿದರೆ ಇಂಜಿನಿಯರ್ಗಳದ್ದೇ ಮೇಲುಗೈ ಕಾಣಿಸುತ್ತದೆ.
ಈ ವಿದ್ಯಮಾನಕ್ಕೆ ಕಾರಣವೇನು?
- ಸ್ಪರ್ಧಾತ್ಮಕ ಪರೀಕ್ಷೆ ಬರೆದ ಅನುಭವ: ಬಹುತೇಕ ಇಂಜಿನಿಯರಿಂಗ್ ಪದವೀಧರರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿದ ಅನುಭವ ಮೊದಲೇ ಇರುತ್ತದೆ. ಐಐಟಿ ಜೆಇಇ, ಬಿಟ್ಸ್ಯಾಟ್ ಮುಂತಾದ ಪರೀಕ್ಷೆಗಳನ್ನು ಅವರು ಬರೆದಿರುತ್ತಾರೆ. ಹೀಗಾಗಿ ಪರೀಕ್ಷೆಯಲ್ಲಿ ಸಮಯ ನಿರ್ವಹಣೆ, ಆಯ್ದ ವಿಷಯಗಳ ಅಧ್ಯಯನ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗೆ ಹೇಗೆ ಸಿದ್ಧತೆ ನಡೆಸಬೇಕು ಮತ್ತು ತಂತ್ರಗಾರಿಕೆಯ ಅರಿವು ಇರುತ್ತದೆ. ಸಮಸ್ಯೆ ಪರಿಹರಿಸುವುದು, ಟಿಪ್ಪಣಿ ಮಾಡುವುದು ಮತ್ತು ಸಿದ?ತೆಯಲ್ಲಿ ಅನುಸರಿಸಬೇಕಾದ ಅನೇಕ ತಂತ್ರಗಾರಿಕೆ ಅವರಿಗೆ ತಿಳಿದಿರುತ್ತದೆ.
- ಸಿವಿಲ್ ಸರ್ವೀಸಸ್ನ ಆಪ್ಟಿಟ್ಯೂಡ್ ಟೆಸ್ಟ್ : ಪ್ರಿಲಿಮ್ಸ್ನಲ್ಲಿ ಸಿವಿಲ್ ಸರ್ವೀಸಸ್ ಆಪ್ಟಿಟ್ಯೂಡ್ ಟೆಸ್ಟ್ (ಸಿಎಸ್ಎಟಿ) ಅನ್ನು 2011ರಲ್ಲಿ ಯುಪಿಎಸ್ಸಿ ಪರಿಚಯಿಸಿದೆ. ಇದು ತಾಂತ್ರಿಕ, ಇಂಜಿನಿಯರಿಂಗ್ ಹಿನ್ನೆಲೆಯ ವಿದ್ಯಾರ್ಥಿಗಳ ಆಸಕ್ತಿಯನ್ನು ಹೆಚ್ಚಿಸಿದೆ. ಇದಕ್ಕೂ ಮುನ್ನ, ಸಾಮಾನ್ಯ ಅಧ್ಯಯನ ಮತ್ತು ಐಚ್ಛಿಕ ಪೇರ್ಗಳಷ್ಟೆ ಪ್ರಿಲಿಮ್ಸ್ನಲ್ಲಿದ್ದವು. ಸಿಎಸ್ಎಟಿ ಅಭ್ಯರ್ಥಿಯೂ ಲಾಜಿಕಲ್ ಆಗಿ ಕಾರಣ ನೀಡುವುದು, ವಿಶ್ಲೇಷಣಾತ್ಮಕ ಸಾಮರ್ಥ್ಯ, ಆಂಗ್ಲ ಭಾಷಾ ಜ್ಞಾನ ಮುಂತಾದವುಗಳನ್ನು ಒರೆಗೆ ಹಚ್ಚುತ್ತಿದೆ. ಈ ಪರೀಕ್ಷಾ ವಿನ್ಯಾಸವು ಜಿಎಂಎಟಿ, ಸಿಎಟಿ, ಜೆಎಟಿ ಮುಂತಾದ ಪರೀಕ್ಷೆಗಳ ವಿನ್ಯಾಸವನ್ನೇ ಹೋಲುತ್ತಿರುವುದು ಕೂಡ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಮೇಲುಗೈ ಕಾರಣ.
- ವಿಶ್ಲೇಷಣಾ ಸಾಮರ್ಥ್ಯ ಮತ್ತು ವ್ಯವಸ್ಥಿತ ವಿಧಾನ: ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕಠಿಣ ಮತ್ತು ವೈವಿಧ್ಯಮಯವಾದ ಪಠ್ಯಕ್ರಮವಿದೆ. ಐಐಟಿಗಳಲ್ಲಿ ಕೂಡ ಅತ್ಯಂತ ಕಿರಿಯ ವಿದ್ಯಾರ್ಥಿಗಳನ್ನೂ ಅತ್ಯಂತ ಹಿರಿಯ ಪ್ರಾಧ್ಯಾಪಕರೊಂದಿಗೆ ಬಿಡುವ ಪರಿಪಾಠವಿದೆ. ಈ ರೀತಿಯ ಪ್ರಯೋಗಗಳು ವಿದ್ಯಾರ್ಥಿಗಳಿಗೆ ಸರಿಯಾದ ವೃತ್ತಿ ಮಾರ್ಗದರ್ಶವನ್ನು ಆರಂಭದಲ್ಲೇ ನೀಡಿಬಿಡುತ್ತವೆ. ಇದೊಂದೇ ಅಲ್ಲ, ಬಿಟೆಕ್ ಕಲಿಯುವಾಗಲೂ ಅಷ್ಟೆ - ವಿದ್ಯಾರ್ಥಿಗಳು 40ಕ್ಕಿಂತ ಹೆಚ್ಚು ಟೆಕ್ ಮತ್ತು ಇತರೆ ವಿಷಯಗಳ ಅಧ್ಯಯನ ಮಾಡುತ್ತಾರೆ. 20ಕ್ಕೂ ಹೆಚ್ಚು ಪರೀಕ್ಷೆ ಬರೆಯುತ್ತಾರೆ. ಹೀಗಾಗಿ ಅವರಲ್ಲಿ ವ್ಯವಸ್ಥಿತವಾದ ವಿಧಾನ ಮತ್ತು ಬಲಿಷ್ಠ ವಿಶ್ಲೇಷಣಾತ್ಮಕ ಸಾಮರ್ಥ್ಯ ಅಭಿವೃದ್ಧಿಯಾಗಿರುತ್ತದೆ.
- ಸಹಪಾಠಿಗಳೊಂದಿಗೆ ಕಲಿಕೆ ಮತ್ತು ಹಳೆ ವಿದ್ಯಾರ್ಥಿಗಳ ಜಾಲ: ಇಂಜಿನಿಯರಿಂಗ್ ಕಾಲೇಜುಗಳ ಬಹುದೊಡ್ಡ ಪ್ರಯೋಜನ ಎಂದರೆ ಸಹಪಾಠಿಗಳೊಂದಿಗೆ ನೇರ ಕಲಿಕೆಯ ಪರಿಸರ ಸಿಗುತ್ತದೆ. ಇಲ್ಲಿ ಆಕಾಂಕ್ಷಿಗಳು ಒಟ್ಟಾಗಿ ಸಿವಿಲ್ ಸರ್ವೀಸ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಾರೆ. ಟಾಪ್ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಅಲುಮ್ನಿ ಜಾಲ ಬಲಿಷ್ಠವಾಗಿದ್ದು, ಅವರಿಂದ ಆಕಾಂಕ್ಷಿಗಳಿಗೆ ಅಧ್ಯಯನ ಸುಧಾರಣೆಗೆ ನೆರವು ಸಿಗುತ್ತದೆ.