ಅಂಕಣ

ಆಲೋಚನೆಗಳನ್ನು ಬದಲಿಸಿಕೊಂಡರೆ ಬದುಕು ಭಾರವಲ್ಲ!

ಬೆಳಗಿನ ವಾಕಿಂಗ್​ ಮುಗಿಸಿ ಮನೆ ಕಡೆ ಬರ್ತಾ ಇದ್ದೆ. ಪಕ್ಕದ ಮನೆಯ ಕಿಟಕಿಯಿಂದ ಸ್ವರ ಕೇಳಿಸ್ತು, "ಹಲೋ ಅಂಕಲ್​'. ನಾಲ್ಕು ವರ್ಷದ ಹುಡುಗ ಹರ್ಷ ಕಿಟಕಿಗೆ ಮುಖ ಆನಿಸಿ ಕೂತಿದ್ದ. "ಹೌ ಆರ್​ ಯು?' ಅಂದೆ. ಪೆಚ್ಚು ಮೊರೆ ಹಾಕಿ ಅಂದ, "ಬೋರ್​ಡ್​'. ಮನಸ್ಸಿಗೆ ಬೇಸರವಾಯಿತು. ಈ ಕೋವಿಡ್​ ಸೋಂಕು ಬದುಕನ್ನು ಸಂಪೂರ್ಣ ಆವರಿಸಿ ಮಕ್ಕಳ ಸ್ವಾಭಾವಿಕ ಬದುಕನ್ನೇ ಕಿತ್ತುಕೊಂಡಿದೆ. ನನ್ನ ಅಜ್ಜ ತೊಂಬತ್ತೆಂಟು ವರ್ಷ ಇದ್ರು, ಅಜ್ಜಿ ಸತ್ತಾಗ ಆಕೆಗೆ ತೊಂಬತ್ತೆರೆಡು ವರ್ಷ. ಅವರ್ಯಾವತ್ತೂ ಬೋರ್​ ಅಂದವರೇ ಅಲ್ಲ. ಅಪ್ಪ&ಅಮ್ಮನ ಕಾಲದಲ್ಲೂ ಈ ಪದ ಬಳಕೆಯಲ್ಲಿದ್ದದ್ದು ಕಾಣೆ. ಬಡತನವಿತ್ತು, ಖಿನ್ನತೆಯಿರಲಿಲ್ಲ. ಆಗಲೂ ಸಾಂಕ್ರಾಮಿಕ ರೋಗಗಳಿದ್ವು, ಸಾವು&ನೋವು ಸಾಕಷ್ಟು ಆಗಿದ್ವು. ಆದರೂ ಯಾರೂ ಖಿನ್ನರಾಗಿ ಕೂತಿರಲಿಲ್ಲ. ನನ್ನ ಬಾಲ್ಯ, ಯೌವ್ವನದಲ್ಲೂ ಈ ಪದ ಬಳಸಿದ್ದು ಕಮ್ಮಿ. ಮಕ್ಕಳ ಕಾಲದಲ್ಲಿ ಅಲ್ಲಲ್ಲಿ ಉಪಯೋಗಿಸಿ, ಮೊಮ್ಮಕ್ಕಳ ಕಾಲಕ್ಕೆ ಸರ್ವೇಸಾಮಾನ್ಯವಾಗಿದೆ.

ಖಿನ್ನತೆ ಒಂದು ಮನಸ್ಥಿತಿ, ರೋಗವಲ್ಲ. ಉತ್ತರ, ನಮ್ಮ ಆಲೋಚನಾ ಲಹರಿಯಲ್ಲೇ ಇದೆ. ಪ್ರಾಯಶ@ ಆಧುನಿಕ ಕಾಲದಲ್ಲಿ ಮನ@ಶಾಸರು ಹೆಚ್ಚಾದ್ರು ಅನ್ನೋ ಕಾರಣಕ್ಕೆ , ಮನಸ್ಸಿನ ಕೆಲವು ಸ್ವಾಭಾವಿಕ ಅಸ್ಥಿರ ಸ್ಥಿತಿಗಳನ್ನ ರೋಗ ಅಂತ ಗುರುತಿಸಿದರೇನೋ! ಖಿನ್ನತೆಗೆ ಇಂತಹದ್ದೇ ಕಾರಣ ಅಂತ ಹೇಳೊದು ಕಷ್ಟ. ಉದಾಹರಣೆಗೆ ಒಬ್ಬ ರಾಜಕಾರಣಿ, "ಐಎಎಸ್​ ಏನೂ, ದನಕಾಯೋರೂ ಪಾಸ್​ ಮಾಡಬಹುದು' ಅಂದ್ರು. ವೃತ್ತಪತ್ರಿಕೆಯಲ್ಲಿ ಇದು ತಲೆಬರಹವಾಗಿ ಬಂದಾಗ ಮನಸ್ಸು ಖಿನ್ನವಾಗತ್ತೆ. ಐಎಎಸ್​ ಪರೀೆ ತೇರ್ಗಡೆಯಾಗಲು ಬೇಕಾದ ಬುದ್ಧಿಮತ್ತೆ ಮತ್ತು ಪರಿಶ್ರಮದ ಅರಿವು ಇರುವವರಿಗೆ ಬೇಸರವಾಗುತ್ತದೆ. ಬೇಸರ ಎರಡು ಕಾರಣಕ್ಕೆ. ಪ್ರಾಮಾಣಿಕ ಅಧಿಕಾರಿ ಬಗ್ಗೆ ಹೀಗೆ ಮಾತನಾಡಿದರಲ್ಲ ಎನ್ನುವುದು ಒಂದು ಕಾರಣವಾದರೆ, ಇಷ್ಟು ಕೇವಲವಾಗಿ ಮಾತನಾಡುವ ಅಸಭ್ಯ ಮನುಷ್ಯನಿಗೆ ನಮ್ಮನ್ನು ಆಳುವ ಅಧಿಕಾರ ಕೊಟ್ಟೆವಲ್ಲ ಅನ್ನುವುದು ಮತ್ತೊಂದು ಕಾರಣ. ಸ್ವಲ್ಪ ನಿಧಾನವಾಗಿ ಆಲೋಚಿಸಿದರೆ, ಈ ಖಿನ್ನತೆಯಿಂದ ಆಚೆಗೆ ಬರಬಹುದು. ಮನುಷ್ಯ ಸತ್ಯ ಹೇಳಿರಬಹುದಾ! ಐಎಎಸ್​ ಆಗೋದಕ್ಕೆ ಕನಿಷ್ಠ ದನಕಾಯೋವಷ್ಟಾದರೂ ಬುದ್ಧಿಯಿರಬೇಕು, ರಾಜಕಾರಣಿ ಯಾಗೋದಕ್ಕೆ ಅದೂ ಬೇಕಿಲ್ಲ ಅಂತಿರಬಹುದಾ? ಈ ಭಾವ ಮನಸ್ಸಿಗೆ ಬರ್ತಾಇದ್ದ ಹಾಗೆ ಬೇಸರ ಮಾಯವಾಗಿ ನಗು ಬಂತು. ಅದ್ಯಾವುದೋ ಒಂದು ವಾಹಿನಿಯಲ್ಲಿ ಒಬ್ಬ ಆಂಕರ್​, "ಆರ್​ ವಿ ಸ್ಟುಪಿಡ್​?' ಅಂತ ಅರಚುತ್ತಿದ್ದ. "ಯೆಸ್​ ಯು ಆರ್​ ಸ್ಟುಪಿಡ್​' ಅಂತ ಟಿವಿ ಆಫ್​ ಮಾಡಿದೆ. ಮನಸ್ಸು ನಿರಾಳವಾಯಿತು, ಆವರಿಸಿದ್ದ ಖಿನ್ನತೆ ಕರಗಿತು.ಪ್ರಜ್ಞಾವಂತ, ಪ್ರಾಮಾಣಿಕ ಸಭ್ಯ ಮನಸ್ಸು ಪ್ರಪಂಚದ ಆಗುಹೋಗುಗಳಿಗೆ ಸ್ವಾಭಾವಿಕವಾಗಿ ಪ್ರತಿಕ್ರಿಯಿಸುತ್ತೆ. ಬದುಕಲ್ಲಿ ಭಾವಗಳ ಏರಿಳಿತ ಸಹಜ. ಇತ್ತೀಚೆಗೆ ಒಬ್ಬ ಉಪಮುಖ್ಯಮಂತ್ರಿಗಳು, "ವ್ಯಾಕ್ಸೀನ್​ಗೆ ಗ್ಲೋಬಲ್​ ಟೆಂಡರ್​ ಕರಿತೀವಿ' ಅಂದ್ರು. ಗ್ಲೋಬಲ್​ ಟೆಂಡರ್​ ಅಂದ್ರೆ ಹೊರದೇಶದ ವ್ಯಾಕ್ಸೀನ್​ ತರಿಸುವುದು. ಚರ್ಚೆಯಲ್ಲಿದ್ದಿದ್ದು ಫೈಜರ್​ ಕಂಪನಿಯದ್ದು. ಅದು ಒಂದು ಲಸಿಕೆಗೆ 2,700 ರೂಪಾಯಿ. ಈ ರಾಜ್ಯಕ್ಕೆ ಹತ್ತುಕೋಟಿ ತರಿಸಿದರೆ, ಇಪ್ಪತ್ತೇಳು ಸಾವಿರ ಕೋಟಿ ಬೆಲೆ. ಪೂರ್ತಿ ದೇಶ ಅದನ್ನು ತರಿಸಿದರೆ, ಊಹಿಸಲೂ ಆಗದಷ್ಟು, ವಿದೇಶಿ ವಿನಿಮಯ ಹೋಗುತ್ತೆ. ದೇಶ ಇಪ್ಪತ್ತು ವರ್ಷ ಹಿಂದಕ್ಕೆ ಹೋಗುತ್ತೆ. ದೇಶದ ಅವನತಿಯ ಸೂಚನೆ, ಖಿನ್ನತೆಗೆ ಒಂದು ಕಾರಣವಾದರೆ, ಈ ವ್ಯವಹಾರದಲ್ಲಿ ಕೋಟ್ಯಂತರ ರೂಪಾಯಿ ಕಿಕ್​ಬ್ಯಾಕ್​ ಇರತ್ತೆ. ಅದನ್ನು ಅಧಿಕಾರದಲ್ಲಿರುವವರು ತಿನ್ನುತ್ತಾರೆ ಮತ್ತವರನ್ನು ನಾವೇ ಆರಿಸಿದ್ದು ಅನ್ನುವುದು ಇನ್ನೊಂದು ಕಾರಣ. ನಂತರದ ದಿನಗಳಲ್ಲಿ ಕೇಂದ್ರ ಸರ್ಕಾರ, "ಇದೇ ದೇಶದ ವ್ಯಾಕ್ಸಿನ್​ಗಳನ್ನು ಪೂರೈಸ್ತೀವಿ ಮತ್ತು ಮುಫತ್ತಾಗಿ ಕೊಡ್ತೀವಿ' ಅಂದಾಗ ಕೇಂದ್ರದ ಆಯ್ಕೆ ಚೆನ್ನಾಗಿದೆ ಅಂತ ಮನಸ್ಸಿಗೆ ಸಮಾಧಾನವಾಯಿತು. ಮೀರಿ ಈ ವ್ಯವಹಾರದಲ್ಲಿ ಹಣ ಮಾಡುವ ಹುನ್ನಾರದಲ್ಲಿರುವವರ ಕನಸು, ತಿರುಕನ ಕನಸಾಗಿ ಕಂಡು ಆ ಮುಖಗಳು ಮನ@ಪಟಲ ದಲ್ಲಿ ತೇಲಿದಾಗ, ತಿರುಕರನ್ನು ಕಂಡಂತಾಗಿ ಸಂತೋಷವೇ ಆಯಿತು. ಮೊದಲಿಗೆ ಮನಸ್ಸಿಗೆ ಖಿನ್ನತೆ ಆವರಿಸಿದರೂ, ನಂತರದ ವಿದ್ಯಮಾನಗಳು ಅದನ್ನು ಕರಗಿಸಿದವು.


ಇಷ್ಟೇ ಅಂತಕಾಣತ್ತೆ. ಒಂದು ಸೋಂಕು ಪ್ರಪಂಚವನ್ನು ಆಕ್ರಮಿಸಿ ಸ್ವಾಭಾವಿಕ ಬದುಕನ್ನು ಕಿತ್ತುಕೊಂಡಿದೆ. ದಡ್ಡರು ಅಧಿಕಾರಯುತವಾಗಿ ಬುದ್ಧಿವಂತ ವಿಶ್ಲೇಷಣೆಗಳನ್ನು ಮಾಡುತ್ತಿದ್ದಾರೆ. ಭಾವುಕನಾಗಿ ಅವರ ವಿಶ್ಲೇಷಣೆಗಳಲ್ಲಿ ಕಳೆದುಹೋದರೆ, ಖಿನ್ನರಾಗ್ತೀವಿ. ಇವರೊಟ್ಟಿಗೆ ಬದುಕ್ತಾ ಇದ್ದೀವಲ್ಲ ಅನ್ನುವ ಖಿನ್ನತೆಯೂ ಕಾಡತ್ತೆ. ನಾನು ಕಟ್ಟಿದ ತೆರಿಗೆ ಹಣದಲ್ಲಿ ಇವರಿಗೂ ಉಚಿತವಾಗಿ ವ್ಯಾಕ್ಸಿನೇಶನ್​ ಕೊಡಬೇಕಲ್ಲ ಅನ್ನುವ ಖಿನ್ನತೆಯೂ ಇರುತ್ತೆ. ಬದಲಿಗೆ ಬುದ್ಧಿ ಚುರುಕಾಗಿಸಿ, ಮೂರ್ಖರ ಗುರುತು ಹಿಡಿದು, ಅಲ್ಪರನ್ನು, ಅಶಕ್ತರನ್ನು ಮತ್ತು ಅಸಮರನ್ನು ಸಾಕುವುದು ನಾಗರಿಕತೆಯ ಲಕ್ಷಣ ಎನ್ನುವ ತ್ಯಾಗದ ಭಾವ ಬಂದರೆ, ನಾನು ಬುದ್ಧಿವಂತ ಮತ್ತು ದಾನಿಯ ಪಟ್ಟಕ್ಕೆ ಕೂರ್ತೀನಿ. ಆಗ ಧನ್ಯತೆ ಭಾವ ಬೆಳೆಯುತ್ತೆ. ಖಿನ್ನತೆ ಕರಗಿ, ಸಮಾಧಾನದ ಭಾವ ಬಂದು, ಬದುಕಿದ್ದು ಸಾರ್ಥಕ ಅನ್ಸತ್ತೆ, ಉತ್ಸಾಹವಿರತ್ತೆ. ಸಧ್ಯದ ಪರಿಸ್ಥಿತಿಗೆ ಈ ಭಾವ ಅವಶ್ಯಕವೇನೋ. ಈ ಮನುಷ್ಯ ಜನಾಂಗಕ್ಕೆ ಒಂದು ಭ್ರಮೆ. ಅದೇನೋ ಭಗವಂತ ಕಷ್ಟಪಟ್ಟು ಅವನ ಎಲ್ಲ ಬುದ್ಧಿಮತ್ತೆ ಉಪಯೋಗಿಸಿ ಪ್ರಪಂಚದ ಉದ್ಧಾರಕ್ಕಾಗಿ ಸೃಷ್ಟಿಸಿದ್ದಾನೇನೋ; ಹಾಗಾಗಿ ಎಲ್ಲ ಅವಶ್ಯಕತೆಗಳನ್ನು ಯಾರೋ ನೋಡಿಕೋಬೇಕು; ತಾನು ಕಾಲು ಚಾಚಿಕೂತು; ಪ್ರಪಂಚದ ನೂನ್ಯತೆಗಳನ್ನು ಆಡಿಕೊಂಡು ಸಂಭ್ರಮಿಸಬೇಕೇನೋ? ಆದರಿದು ಸರೀನಾ? ಅದ್ಯಾರೋ ವಿಜ್ಞಾನಿ ಹೇಳಿದ್ದು, "ಜೇನು ಇಲ್ಲವಾದರೆ ಪ್ರಪಂಚ ನಾಶವಾಗತ್ತಂತೆ'. ಸ್ವಾಭಾವಿಕ; ಪರಾಗಸ್ಪರ್ಶವೇ ಆಗಲ್ಲ, ಬೆಳೆ ಬೆಳೆಯಲ್ಲ, ಉಳಿವು ಇರಲ್ಲ, ಪ್ರಳಯವಾಗತ್ತೆ. ಚೀನಾದಲ್ಲಿ ಕಾಳು ತಿನ್ನತ್ತೆ ಅಂತ, ಗುಬ್ಬಿಗಳ ಮಾರಣಹೋಮ ಮಾಡಿದ್ರಂತೆ, ಅದ್ಯಾರೋ ಕಮ್ಯುನಿಸ್ಟ್​ ದಂಡನಾಯಕನ ಆೆಯ ಮೇರೆಗೆ. ನಂತರದ ವರ್ಷ ಕ್ರಿಮಿ&ಕೀಟಗಳ ಬಾಧೆ ಹೆಚ್ಚಾಗಿ ಬೆಳೆನೇ ಬರದೆ, ಾಮವಾಗಿತ್ತಂತೆ. ಹುಲ್ಲಿಲ್ಲದೇ ಜಿಂಕೆಯಿಲ್ಲ, ಜಿಂಕೆಯಿಲ್ಲದೇ ಹುಲಿಯಿಲ್ಲ. ಹಾಗೆ ಹುಲಿ ಸಂತತಿ ನಾಶವಾದರೆ, ಜಿಂಕೆಗಳ ಸಂಖ್ಯೆ ಹೆಚ್ಚಾಗಿ ಹುಲ್ಲೇ ಇರದ ಪ್ರಪಂಚವಾಗತ್ತೆ. ಪ್ರಪಂಚದಲ್ಲಿ ಎಲ್ಲ ಜೀವಗಳ ಅಸ್ತಿತ್ವವೂ ಪರಸ್ಪರ ಪೂರಕ. ಸಮತೋಲನವಿಲ್ಲದಿದ್ದರೆ ಪ್ರಳಯ. ಹಾಗೇ ಸಮತೋಲನಕ್ಕೆ ಅವು ಅವಶ್ಯಕ ಕೂಡ. ಅದೇ ಮನುಷ್ಯನ ವಿಷಯ ನೋಡಿ! ಎಷ್ಟೋ ಯುದ್ಧಗಳಾಗಿವೆ. ಲಾಂತರಜನ ಸತ್ತಿದ್ದಾರೆ. ಮಾವೋ, ಸ್ಟಾಲಿನ್​ ಆಳ್ವಿಕೆ, ಎರಡು ವಿಶ್ವಯುದ್ಧಗಳು, ಮಾನವ ಸೃಷ್ಟಿಯ ಾಮಗಳು, ಸ್ವಾತಂತ್ರ$್ಯ ಸಂಗ್ರಾಮಗಳು. ಕೋಟ್ಯಂತರ ಜನ ಸತ್ತಿದ್ದಾರೆ. ಆದರೆ ಪ್ರಳಯ ಆಗಿಲ್ಲ. ಹಾಗೆ ನೋಡಿದರೆ, ಮನುಷ್ಯ ಪ್ರಳಯಕಾರಕ. ಇನ್ಯಾರೋ ಮಹಾನುಭಾವ ಹೇಳಿದ ಮಾತು; "ಜಗತ್ತಿನ ಯಾವುದೇ ಜೀವಿ ನಿರ್ನಾಮವಾದರೂ, ಒಂದು ಪ್ರಾಕೃತಿಕ ಅಸಮತೋಲನಕ್ಕೆ ಕಾರಣವಾಗತ್ತೆ; ಆದರೆ ಮನುಷ್ಯ ಜೀವಿ ಇದಕ್ಕೆ ಅಪವಾದ'. ಮನುಷ್ಯರು ಕಮ್ಮಿ ಇದ್ದಷ್ಟೂ ಪ್ರಕೃತಿಗೂ ೇಮ. ಈ ಭಾವ ಬಲಿತರೆ ಕೃತತಾ ಪೂರ್ವಕವಾಗಿ ಬದುಕ್ತಿವಿ, ಗಳಿಸಿದ ಭಾವ ಹೆಚ್ಚಾಗಿ, ಕಳಕೊಂಡ ಭಾವ ನಶಿಸುತ್ತೆ. ಖಿನ್ನತೆ ಕಾಡಲ್ಲ.


ಬದುಕೋ ಇಚ್ಛೆ ಇದ್ದವರಿಗೆ ಸಾವು ತಕ್ಷಣಕ್ಕೆ ಬರಲ್ಲ. ಕೃತತಾಪೂರ್ವಕ ಬದುಕಲ್ಲಿ ಖಿನ್ನತೆಗೆ ಆಸ್ಪದವಿಲ್ಲ. ಪ್ರಪಂಚದ ಎಲ್ಲ ದೇಶಗಳಿಗಿಂತ ಮೊದಲು ಈ ದೇಶ, ವ್ಯಾಕ್ಸಿನ್​ ಅನ್ನು ಕಂಡುಹಿಡಿದು ಉತ್ಪಾದಿಸಿ ಮತ್ತು ಆ ವ್ಯಾಕ್ಸಿನ್​ ಎಲ್ಲ ವ್ಯಾಕ್ಸಿನ್​ಗಳಿಗಿಂತ ಶಕ್ತಿಯುತ ಅನ್ನುವುದು ಗೊತ್ತಾಗಿದೆ. ಅದನ್ನು ಆದಷ್ಟು ಬೇಗ ಎಲ್ಲರಿಗೂ ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಜವಾಬ್ದಾರಿಯುತವಾದ ಸರ್ಕಾರ ಕೇಂದ್ರದಲ್ಲಿದೆ. ಪ್ರಕೃತಿಯ ದೃಷ್ಟಿಕೋನ ಯಾವತ್ತೂ "ಸರ್​ವೈವಲ್​ ಆಫ್​ದ ಫಿಟ್ಟೆಸ್ಟ್​'. ಮಾನಸಿಕವಾಗಿ ಸಮತೋಲನವಿದ್ರೆ, ದೈಹಿಕವಾಗಿ ಆರೋಗ್ಯವಿರತ್ತೆ. ದೇಶದ ಪ್ರಗತಿಗೆ ಸೋಂಕಿನಿಂದ ಹಿಂಜರಿತವಾಗಿದೆ. ದೇಶದ ಬಗ್ಗೆ ಬೇಜವಾಬ್ದಾರಿಯ ಹೇಳಿಕೆಗಳನ್ನು ಪಕ್ಕಕ್ಕೆ ಇರಿಸಿ, ನಮ್ಮ ನಮ್ಮ ವೃತ್ತಿಗಳಲ್ಲಿ ಉತ್ಸಾಹದಿಂದ ತೊಡಗಿದರೆ, ಬದುಕಿಗೂ ಸುಖ ಮತ್ತು ದೇಶವೂ ಸಮೃದ್ಧಿ. ಇದು ಸಧ್ಯದ ಅವಶ್ಯಕ ಮನಸ್ಥಿತಿ. ವಾಕಿಂಗ್​ ಮುಗಿಸಿ ಬರ್ತಾ ಒಂದು ಪ್ರತಿಷ್ಠಿತ ಹೆಂಡದ ಅಂಗಡಿಯ ಎದುರು, ನಾಲಕ್ಕು ಹೈಎಂಡ್​ ಕಾರುಗಳು ನಿಂತಿದ್ವು. ಗಂಡಸರು, ಹೆಂಗಸರು, ಮಕ್ಕಳಾದಿಯಾಗಿ ಒಂದು ಹತ್ತುಜನ ಇದ್ರು. ವಾರದ ಅವಶ್ಯಕತೆ ಇರಬೇಕು. ಕ್ರೇಟುಗಟ್ಟಲೆ ಹೆಂಡದ ಖರೀದಿ ಮಾಡಿಯಾಗಿತ್ತು. ಕಿವಿಗೆ ಬಿದ್ದ ಮಾತು, "ಲೈಫ್​ ಈಸ್​ಡಿಫಿಕಲ್ಟ್​ ಯಾ. ಪೆಟ್ರೋಲಿನ ಬೆಲೆ ಲೀಟರಿಗೆ ನೂರು ರುಪಾಯಿ'.


ವ್ಯಾಕ್ಸಿನೆಶನ್​ ಎಲ್ಲರಿಗೂ ಮುಫತ್ತಾಗಿ ಬೇಕು. ದೇಶದ ಒಳಗೂ ಹೊರಗೂ ತುಂಬಿರುವ ಶತ್ರುಗಳಿಂದ ದೇಶವನ್ನು ಕಾಯಬೇಕು. ಸುಳ್ಳು ಸುದ್ದಿ ಹರಡುವವರಿದ್ದಾರೆ. ಪೊಳ್ಳು ಆಶ್ವಾಸನೆಗಳನ್ನು ಕೊಡುವವರಿದ್ದಾರೆ. ಕಳ್ಳರಿದ್ದಾರೆ, ಲಂಪಟರಿದ್ದಾರೆ, ಲೂಟಿಕೋರರಿದ್ದಾರೆ. ಹೆಜ್ಜೆ ಹೆಜ್ಜೆಗೂ ತಡೆಒಡ್ಡುವ ವಿಚಾರವಾದಿ ಬುದ್ಧಿವಂತರಿದ್ದಾರೆ. ಎಲ್ಲ ಇಲಾಖೆಗಳಲ್ಲೂ ಲಂಚಕೋರರಿದ್ದಾರೆ. ಬುದ್ಧಿ ಮಂಕಾಗಿಸುವ ಚಿಂತಕರಿದ್ದಾರೆ. ದೇಶದ್ರೋಹಿಗಳ ಪರ ವಾದಿಸುವವರಿದ್ದಾರೆ. ಉಗ್ರರಿಗೆ ಮನುಷ್ಯತ್ವದ ಹಕ್ಕು ಕೊಡಿಸಿ ಉಳಿಸುವ ಹುನ್ನಾರದ ಸಮಾಜಸೇವಕರಿದ್ದಾರೆ. ಹಣಕ್ಕೆ ಧರಣಿ ಕೂರುವವರು ಇದ್ದಾರೆ. ಹೆಣದ ಫೋಟೋ ಮಾರಿ ಹಣ ಮಾಡುವವರಿದ್ದಾರೆ. ಇವರೆಲ್ಲರಿಗೂ ಅವರವರ ಮನಸೋ ಇಚ್ಛೆಯ ಕ್ರಿಯಾ ಸ್ವಾತಂತ್ರ$್ಯಕೊಟ್ಟು ದೇಶ ನಡೆಸಬೇಕು. ಆದರೆ ಪೆಟ್ರೋಲು ಲೀಟರಿಗೆ ನೂರು ರೂಪಾಯಿ ಆಗಬಾರದು. ದೇಶದ ಹಿತದೃಷ್ಟಿಯಲ್ಲಿ ಮೇಲಿನ ಯಾವುದೇ ಒಂದು ಗುಂಪು ಅವರ ಚಟುವಟಿಕೆಗಳನ್ನು ಸ್ವಲ್ಪಕಾಲ ಸ್ತಬ್ಧಗೊಳಿಸಿದರೆ ಪೆಟ್ರೋಲ್​ ಬೆಲೆ ಅರ್ಧಕ್ಕೆ ಇಳಿಯಬಹುದೇನೋ. ಉತ್ತರವನ್ನು ಸರ್ಕಾರದಲ್ಲಿ ಹುಡುಕಿದರೆ ಖಿನ್ನತೆ ಕಾಡತ್ತೆ. ಸ್ವಂತದಲ್ಲಿ ತಡಕಿದರೆ ಉತ್ತರ ಸಿಕ್ಕೀತು ಮತ್ತು ಮನಸ್ಸು ನಿರಾಳವಾದೀತು.

(ಲೇಖಕರು ಹಿರಿಯ ನಟ, ರಂಗಕರ್ಮಿ)