ಹಲವು ದಿನಗಳಾದರೂ ದಿಲೀಪನ ಬಗ್ಗೆ ಸುಳಿವು ಸಿಗಲಿಲ್ಲ. ಕೆಲ ದಿನಗಳ ನಂತರ ಕಾಣೆಯಾಗಿದ್ದ ಯೋಧನ ಸೋದರ ಅರವಿಂದ್ ಠಾಣೆಗೆ ಬಂದು, ಅಣ್ಣ ನಾಪತ್ತೆಯಾಗಿದ್ದಾನೆಂದು ಕೊಟ್ಟ ದೂರಿನ ಬಗ್ಗೆ ತನಗೆ ಸಂಶಯವಿದೆ. ಆತನನ್ನು ತನ್ನ ಅತ್ತಿಗೆ ಕೊಲೆ ಮಾಡಿಸಿರಬಹುದು ಎಂದ. ನಿನ್ನ ಸಂಶಯಕ್ಕೆ ಆಧಾರವೇನೆಂದು ಕೇಳಿದಾಗ-‘‘ನನಗೆ ಲಗ್ನವಾಗಿಲ್ಲ. ತಾಯಿ ಮತ್ತು ಅಣ್ಣ ದಿಲೀಪ್ನೊಂದಿಗೆ ನಾನು ಅವನ ಮನೆಯಲ್ಲಿಯೇ ವಾಸವಿದ್ದೆ. ಅಣ್ಣ ಮನೆಯ ಬಳಿಯೇ ವಾಸಿಸುತ್ತಿದ್ದ ಅರುಣಾಳನ್ನು ಲಗ್ನವಾದ ನಂತರ ಪಕ್ಕದ ಗ್ರಾಮದಲ್ಲಿ ಸೈಟೊಂದನ್ನು ಖರೀದಿಸಿ ಅಲ್ಲಿ ಮನೆಯನ್ನು ಕಟ್ಟಿಸಿ ಅದನ್ನು ಅರುಣಾಳ ಹೆಸರಿಗೇ ಮಾಡಿದ. ನಮ್ಮನ್ನೂ ವಾಸಿಸಲು ಅಲ್ಲಿಗೇ ಕರೆದೊಯ್ದ. ಅರುಣಾಳ ಸೂಚನೆಯ ಮೇರೆಗೆ ಆಕೆಯ ಉಪಯೋಗಕ್ಕಾಗಿ ಒಂದು ಸೆಕೆಂಡ್ಹ್ಯಾಂಡ್ ಕಾರನ್ನು ಖರೀದಿಸಿದ. ಅದನ್ನು ಕಾಲಕಾಲಕ್ಕೆ ಟ್ಯಾಕ್ಸಿಯಾಗಿ ಉಪಯೋಗಿಸಿ ಹೆಚ್ಚಿನ ಆದಾಯವನ್ನು ಗಳಿಸಲು ತೀರ್ವನಿಸಿ ಆ ಕಾರಿಗೆ ಮನೆಯ ಬಳಿಯೇ ವಾಸಿಸುತ್ತಿದ್ದ ಪ್ರಕಾಶ್ ಎನ್ನುವವನನ್ನು ಚಾಲಕನನ್ನಾಗಿ ನೇಮಿಸಿದ.
ಕೆಲಸಮಯದ ನಂತರ ಅತ್ತಿಗೆಗೂ ಪ್ರಕಾಶನಿಗೂ ಅನೈತಿಕ ಸಂಬಂಧ ಬೆಳೆಯಿತು, ಇದನ್ನು ಗಮನಿಸಿದ ನಾನು ದಿಲೀಪನಿಗೆ ಫೋನ್ ಮಾಡಿ ವಿಷಯ ತಿಳಿಸಿದೆ. ಆತ ಕೂಡಲೇ ಅರುಣಾಳಿಗೆ ಫೋನ್ ಮಾಡಿ ವಿಚಾರಿಸಿದ. ‘ನಾನೇ ಅವಳನ್ನು ಲೈಂಗಿಕ ಸುಖಕ್ಕಾಗಿ ಕರೆದಿದ್ದು, ತಾನು ತಿರಸ್ಕರಿಸಿದ ಕಾರಣ ನಾನು ಅವಳ ನಡತೆಯ ಬಗ್ಗೆ ಬೇಕೆಂತಲೇ ಸುಳ್ಳನ್ನು ಹೇಳುತ್ತಿದ್ದೇನೆ’ ಎಂದು ಅಣ್ಣನಿಗೆ ಅರುಣಾ ಚಾಡಿ ಹೇಳಿದಳು. ಅವಳ ಮಾತುಗಳನ್ನು ನಂಬಿದ ದಿಲೀಪ್ ನನ್ನನ್ನೇ ಮನೆಯಿಂದ ಹೊರಗೆ ಹಾಕಿದ. ನಾನು ನಮ್ಮ ಪೂರ್ವಜರ ಮನೆಗೇ ಬಂದು ವಾಸಿಸತೊಡಗಿದೆ. ಪ್ರಕಾಶನೊಂದಿಗೆ ತನ್ನ ಸಂಬಂಧವನ್ನು ಮುಂದುವರಿಸಿ ಅಣ್ಣನ ಆಸ್ತಿಯನ್ನು ಕಬಳಿಸುವ ಉದ್ದೇಶದಿಂದ ಅರುಣಾಳೇ ದಿಲೀಪನ ಕೊಲೆ ಮಾಡಿಸಿ ಆತ ಕಾಣೆಯಾಗಿದ್ದಾನೆಂದು ಸುಳ್ಳು ದೂರನ್ನು ನೀಡಿದ್ದಾಳೆ’.
ಈ ದೂರು ಬಂದ ನಂತರ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿ ಸೂಕ್ಷ್ಮವಾಗಿ ಅರುಣಾ ಮತ್ತು ಪ್ರಕಾಶನ ಚಟುವಟಿಕೆಗಳನ್ನು ಗಮನಿಸತೊಡಗಿದರು. ದಿಲೀಪ್ ಕಾಣೆಯಾದ ದಿನ ವನ್ಯಧಾಮವನ್ನು ನೋಡಲು ಕಾರಿನಲ್ಲಿ ಅವನ ಜತೆಗೆ ಅರುಣಾ, ಚಾಲಕ ಪ್ರಕಾಶ ಮತ್ತವನ ಗೆಳೆಯರಾದ ಜಯಂತ್ ಮತ್ತು ಕಿರಣ್ ಎನ್ನುವವರು ಹೋಗಿದ್ದಾಗಿ ತಿಳಿಯಿತು. ಜಯಂತ್ ಮತ್ತು ಕಿರಣರನ್ನು ಠಾಣೆಗೆ ಕರೆಸಿ ವಿಚಾರಿಸಿದಾಗ ಅವರಿಬ್ಬರೂ, ದಿಲೀಪ್ ಕಾರಿನಿಂದ ಇಳಿದು ಜಿಲ್ಲಾಕೇಂದ್ರಕ್ಕೆ ಹೋದನೆಂದೇ ಸಮರ್ಥಿಸಿದರು. ವನ್ಯಧಾಮದ ಬಳಿಗೆ ಹೋಗಿ ವಿಚಾರಿಸಿದಾಗ ಯಾವುದೇ ಸುಳಿವು ಸಿಗಲಿಲ್ಲ.
ಆನಂತರ ಪ್ರಕಾಶನನ್ನು ಠಾಣೆಗೆ ಕರೆಸಿ ತೀವ್ರವಾಗಿ ವಿಚಾರಿಸಿದಾಗ ಆತ ಹೀಗೆ ಹೇಳಿದ-
‘‘ನಮ್ಮ ಊರಿನಲ್ಲಿ ದಿಲೀಪ್ ನನ್ನ ಮನೆಯ ಬಳಿಯೇ ತನ್ನ ಹೊಸ ಮನೆ ಕಟ್ಟಿಸಿದ್ದ. ಕೆಲ ಕಾಲಾನಂತರ ನನಗೂ ಅರುಣಾಳಿಗೂ ಸ್ನೇಹ ಬೆಳೆಯಿತು. ನಾನು ಡ್ರೖೆವರ್ ಎಂದು ತಿಳಿದ ಆಕೆ ತನ್ನ ಗಂಡನಿಗೆ ಹೇಳಿ ಒಂದು ಕಾರನ್ನು ಖರೀದಿಸಿ ನನ್ನನ್ನೇ ಕೆಲಸಕ್ಕೆ ನೇಮಿಸಿಕೊಂಡಳು. ವರ್ಷಕ್ಕೆ ಒಂಬತ್ತು ತಿಂಗಳ ಕಾಲ ದಿಲೀಪ್ ಊರಿನಲ್ಲಿ ಇರದೇ ಇರುತ್ತಿದ್ದ ಕಾರಣ ನಮ್ಮಿಬ್ಬರ ನಡುವೆ ಅನೈತಿಕ ಸಂಬಂಧವು ಮೂಡಿತು. ಅರವಿಂದನಿಗೆ ಈ ವಿಷಯ ತಿಳಿದ ಕೂಡಲೇ ಆತ ತನ್ನಣ್ಣನಿಗೆ ವಿಷಯ ಮುಟ್ಟಿಸಿದ. ಆದರೆ ಅರುಣಾ ಅವನನ್ನೇ ತನ್ನ ಮನೆಯಿಂದ ಓಡಿಸುವಲ್ಲಿ ಸಫಲಳಾದಳು. ಆದರೂ ದಿಲೀಪನಿಗೆ ಪತ್ನಿ ಮೇಲೆ ಮೂಡಿದ್ದ ಸಂಶಯ ಪೂರ್ತಿಯಾಗಿ ಹೋಗಿರಲಿಲ್ಲ.
ನಮ್ಮಿಬ್ಬರ ಸಂಬಂಧ ಗಟ್ಟಿಯಾದ ನಂತರ ಅರುಣಾ ತನ್ನ ಗಂಡನನ್ನೇ ಮುಗಿಸಬೇಕೆಂದು ತೀರ್ವನಿಸಿದಳು. ನಾನು ಅವಳ ಈ ಸಲಹೆಗೆ ಒಪ್ಪಲಿಲ್ಲ. ನಾವಿಬ್ಬರೂ ಓಡಿಹೋಗಿ ಬೇರೆ ಊರಿನಲ್ಲಿ ಸಂಸಾರ ಮಾಡೋಣ ಎಂದೆ. ದಿಲೀಪ್ ಆಸ್ತಿಯನ್ನು ತನ್ನ ಹೆಸರಿನಲ್ಲಿಯೇ ಮಾಡಿದ್ದ ಕಾರಣ ಆತನನ್ನೇ ಮುಗಿಸಿ ಆತ ಆತ್ಮಹತ್ಯೆ ಮಾಡಿಕೊಂಡ ಎಂದು ಬಿಂಬಿಸುವುದೆಂದು ಅರುಣಾ ಹೇಳಿದಳು. ಈ ಬಗ್ಗೆ ನಾವು ಕೆಲವು ಗೆಳೆಯರು ಕೂಡಿಕೊಂಡು ಸಾಕಷ್ಟು ವಿಚಾರ ಮಾಡಿದೆವು. ಅವನನ್ನು ಹೇಗೆ ಕೊಲೆ ಮಾಡಬೇಕು, ಮೃತದೇಹವನ್ನು ಎಲ್ಲಿ ಹಾಕಬೇಕು ಎಂಬ ಯೋಜನೆ ತಯಾರಿಸಿದೆವು.
ಜನವರಿಯಲ್ಲಿ ದಿಲೀಪ್ ರಜೆಯ ಮೇಲೆ ಮನೆಗೆ ಬಂದಾಗ ನಾನು, ಜಯಂತ್ ಮತ್ತು ಕಿರಣ್ ಅವನಿಗೆ ಮದ್ಯಪಾನ ಮಾಡಿಸಲು ಹೇಳಿದೆವು. ಆತ ಊರಿನಿಂದ ತಂದಿದ್ದ ರಮ್ ಬಾಟಲಿಯನ್ನು ಹೊರತಂದ. ನಾವು ಮಧ್ಯಾಹ್ನವೇ ಮದ್ಯಪಾನ ಮಾಡತೊಡಗಿದೆವು. ಊಟ ಮಾಡಿದ ನಂತರ ವನ್ಯಧಾಮಕ್ಕೆ ಪಿಕ್ನಿಕ್ ಹೋಗೋಣವೆಂದು ನಾನು ಸೂಚಿಸಿದೆ. ದಿಲೀಪ್ ತಾನು ಬರಲು ಒಪ್ಪಿದರೂ ಅರುಣಾ ಸಹ ನಮ್ಮ ಜತೆಯಲ್ಲಿ ಬರಬೇಕು ಎಂದು ಹಠಹಿಡಿದ.
ವನ್ಯಧಾಮದಲ್ಲಿಯೇ ಅವನ ಕೊಲೆ ಮಾಡಬೇಕೆಂದು ನಾವು ತೀರ್ವನಿಸಿದ್ದರಿಂದ ಅರುಣಾ ಬಂದರೆ ಹೇಗೋ ಎಂಬ ಯೋಚನೆಯಾಯಿತು. ಆಕೆ ಧೈರ್ಯ ಮಾಡಿ ಬಂದಳು. ವನ್ಯಧಾಮದ ನಿರ್ಜನವಾಗಿದ್ದ ಜಾಗದಲ್ಲಿ ಕುಳಿತು ಮತ್ತಷ್ಟು ಮದ್ಯ ಸೇವಿಸಿದೆವು. ದಿಲೀಪ್ ಸಂಪೂರ್ಣವಾಗಿ ನಶೆಗೆ ಇಳಿದಾಗ ನಾನು ಅವನ ಕುತ್ತಿಗೆ ಕುಯ್ದೆ. ಉಳಿದವರು ಚಾಕುವಿನಿಂದ ಅವನ ದೇಹಕ್ಕೆ ಇರಿದರು. ಕ್ಷಣಾರ್ಧದಲ್ಲಿ ದಿಲೀಪ್ ಸತ್ತುಹೋದ. ಆನಂತರ ಶವವನ್ನು ಪೊದೆಯೊಂದರ ಹಿಂದೆ ಇಟ್ಟು ಕಾರಿನಲ್ಲಿ ಮನೆಗೆ ಮರಳಿದೆವು. ನಮ್ಮ ಬಟ್ಟೆಗಳಿಗೆ ರಕ್ತ ಹತ್ತಿದ್ದ ಕಾರಣ ಹಾದಿಯಲ್ಲಿದ್ದ ಸೇತುವೆ ಬಳಿ ಗಾಡಿ ನಿಲ್ಲಿಸಿ ರಕ್ತಸಿಕ್ತ ಬಟ್ಟೆಗಳಿಗೆ ಪೆಟ್ರೋಲ್ ಸುರಿದು ಸುಟ್ಟು ನಾವು ನಮ್ಮೊಡನೆ ತಂದಿದ್ದ ಬೇರೆ ಬಟ್ಟೆ ಧರಿಸಿದೆವು. ಗ್ರಾಮಕ್ಕೆ ವಾಪಸಾಗಿ ದಿಲೀಪ್ ಎಲ್ಲಿಗೋ ಹೋದನೆಂಬ ಸುದ್ದಿ ಹಬ್ಬಿಸಿದೆವು. ಮಾರನೆಯ ದಿನವೇ ನಾವು ಮೂರೂ ಜನ ಫೋನಿನಲ್ಲಿದ್ದ ಸಿಮ್ ಕಾರ್ಡ ಎಸೆದು ಬೇರೆ ಸಿಮ್ ಹಾಕಿಸಿ ಬೆಂಗಳೂರಿಗೆ ಹೊರಟುಹೋದೆವು.
ಕಾಣೆಯಾದ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿಲ್ಲ ಎಂದು ತಿಳಿದ ನಂತರ ಊರಿಗೆ ವಾಪಸಾದೆವು. ನಂತರ ದಿಲೀಪನನ್ನು ಕೊಲೆ ಮಾಡಿದ್ದ ಜಾಗಕ್ಕೆ ಮತ್ತೆ ಹೋದೆ. ಅವನ ಶವವನ್ನು ಪ್ರಾಣಿಗಳು ತಿಂದು ಹಾಕಿ ಕೇವಲ ತಲೆಬುರುಡೆ ಮತ್ತು ಅಸ್ಥಿಪಂಜರವಿತ್ತು. ತಲೆಬುರುಡೆಯನ್ನು ಅಲ್ಲಿಂದ ತೆಗೆದು ಬೇರೊಂದು ಜಾಗದಲ್ಲೆಸೆದೆ. ನೀವು ನಮ್ಮ ಜತೆಗೆ ಬಂದರೆ ಕೊಲೆಯಾದ ಜಾಗವನ್ನು ತೋರಿಸುತ್ತೇನೆ’ ಎಂದ. ಪೊಲೀಸರು ಪ್ರಕಾಶನ ಜತೆಗೆ ವನ್ಯಧಾಮಕ್ಕೆ ಹೋದಾಗ ಕೊಲೆಯಾದ ಜಾಗದಲ್ಲಿ ದಿಲೀಪನ ಅಸ್ಥಿಪಂಜರ ಬಿದ್ದಿತ್ತು. ಆತ ಕಟ್ಟಿಕೊಂಡಿದ್ದ ಗಡಿಯಾರ ಮಣಿಕಟ್ಟಿನ ಮೇಲೆಯೇ ಇತ್ತು. ಆತನ ಸೆಲ್ ಫೋನ್, ವಾಯುಸೇನೆಯ ಗುರುತಿನ ಚೀಟಿ ಮತ್ತು ಪರ್ಸ್ ಪಕ್ಕದಲ್ಲಿಯೇ ಬಿದ್ದಿದ್ದವು. ಸೂಪರ್ ಇಂಪೊಸಿಷನ್ ಮತ್ತು ಡಿಎನ್ಎ ತಂತ್ರಜ್ಞಾನವನ್ನು ಬಳಸಿ ತಲೆಬುರುಡೆ ಮತ್ತು ಅಸ್ಥಿಪಂಜರ ದಿಲೀಪನದೇ ಎಂದು ಸಾಬೀತು ಪಡಿಸಲಾಯಿತು. ಆನಂತರ ಈ ಕೊಲೆಯಲ್ಲಿ ಭಾಗಿಯಾಗಿದ್ದ ಅರುಣಾ ಮತ್ತಿಬ್ಬರನ್ನು ಬಂಧಿಸಲಾಯಿತು. ಆರೋಪಿಗಳ ಹ್ಯಾಂಡ್ಸೆಟ್ಟುಗಳು ಕೊಲೆಯಾದ ದಿನ ಕೊಲೆಯಾದ ಸ್ಥಳದಲ್ಲಿದ್ದವು ಎನ್ನುವುದನ್ನು ಸೆಲ್ಫೋನ್ ಸಂಸ್ಥೆ ದೃಢೀಕರಿಸಿತು. ಆರೋಪಿಗಳ ಅರ್ಧಸುಟ್ಟ ಬಟ್ಟೆಗಳನ್ನೂ ವಶಪಡಿಸಿಕೊಂಡು ನಾಲ್ಕೂ ಆರೋಪಿಗಳ ಮೇಲೆ ನ್ಯಾಯಾಲಯದಲ್ಲಿ ಅಪಹರಣ, ಕೊಲೆ ಮತ್ತು ಸಾಕ್ಷ್ಯನಾಶದ ಆರೋಪ ಹೊರೆಸಿ ಆರೋಪಪಟ್ಟಿ ಸಲ್ಲಿಸಲಾಯಿತು. ಎಲ್ಲರೂ ಜೈಲಿಗೆ ಹೋದರು. ಅರುಣಾಳ ಮಗಳನ್ನು ಪಾಲನೆ ಮಾಡುವವರು ಯಾರೂ ಇರದ ಕಾರಣ ಆ ಪುಟ್ಟಬಾಲಕಿಯೂ ಜೈಲಿನಲ್ಲಿದ್ದಾಳೆ.
‘ಮನೆಗೆ ಆಧಾರ ಭೂಮಿಯಲ್ಲ, ಒಬ್ಬ ಸ್ತ್ರೀ’ ಎನ್ನುವ ಒಂದು ಮೆಕ್ಸಿಕನ್ ಗಾದೆಯಂತೆ ಅರುಣಾಳ ದುರ್ನಡತೆಯ ಫಲವಾಗಿ ಅವಳ ಇಡೀ ಕುಟುಂಬವೇ ಸಂಕಷ್ಟಕ್ಕೆ ಸಿಲುಕುವಂತಾಯಿತು.
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)