ಒಮ್ಮೆ ಭೋಜರಾಜನು ಪಂಡಿತ ಮಾಘನೊಂದಿಗೆ ವಾಯುವಿಹಾರಕ್ಕೆ ಹೊರಟಿದ್ದ. ಅದೂ ಇದೂ ಮಾತನಾಡುತ್ತ ಅವರು ಉಜ್ಜಯಿನಿಯಿಂದ ಬಹು ದೂರ ಬಂದುಬಿಟ್ಟಿದ್ದರು. ವಾಪಸ್ ಹೋಗುವಾಗ ಅವರಿಗೆ ದಾರಿ ತಿಳಿಯದಾಯಿತು. ಹಾಗೆ ಸುತ್ತಾಡುತ್ತ ಒಂದು ಗುಡಿಸಲ ಬಳಿ ಬಂದರು. ಅಲ್ಲಿ ಒಬ್ಬ ಮುದುಕಿ ಇದ್ದಳು. ಮಾಘ ಕೇಳಿದ -‘ಅಜ್ಜಿ! ಈ ದಾರಿ ಎಲ್ಲಿಗೆ ಹೋಗುತ್ತದೆ?’ ಇಬ್ಬರನ್ನೂ ಧ್ಯಾನಪೂರ್ವಕವಾಗಿ ನೋಡಿ ಮುದುಕಿ ಹೇಳಿದಳು -‘ದಾರಿ ಎಲ್ಲಿಗೂ ಹೋಗೋದಿಲ್ಲ. ಜನ ಇದರ ಮೇಲೆ ಓಡಾಡ್ತಾರೆ, ಅಷ್ಟೆ. ಅದು ಸರಿ, ನೀವು ಯಾರು?’
ಮಾಘ ನುಡಿದ- ‘ನಾವು ಯಾತ್ರಿಕರು.’ ಮುದುಕಿ ಮುಗುಳ್ನಕ್ಕು ನುಡಿದಳು-‘ಯಾತ್ರಿಕರು ಇಬ್ಬರೇ ಇಬ್ಬರು. ಒಬ್ಬ ಸೂರ್ಯ ಮತ್ತೊಬ್ಬ ಚಂದ್ರ. ನೀವು ಹೇಗಾದೀರಿ? ನಿಜ ಹೇಳಿ, ನೀವು ಯಾರು?’ ‘ನಾವು ಕ್ಷಣಭಂಗುರ ಮನುಷ್ಯರು’- ಮಾಘ ಸಾರ್ಥಕತೆಯಿಂದ ನುಡಿದ.
‘ಕ್ಷಣಭಂಗುರ ಮನುಷ್ಯರು? ಜಗತ್ತಿನಲ್ಲಿ ಕಣಭಂಗುರ ವಸ್ತುಗಳು ಎರಡೇ ಎರಡು. ಒಂದು ವನ ಮತ್ತೊಂದು ಧನ.’
ಸೋಲಿನ ಲಕ್ಷಣಗಳು ಕಂಡುಬಂದರೂ ಮಾಘ ಬಿಡಲಿಲ್ಲ. ಮಾತು ಮುಂದು ವರಿಸಿದ -‘ನಾವು ರಾಜರು’ ಎಂದ. ‘ರಾಜರಿರುವುದು ಇಬ್ಬರು ಮಾತ್ರ, ಇಂದ್ರ ಮತ್ತು ಯಮ, ನೀವೆಂತಹ ರಾಜರು?’
ಮುದುಕಿ ಸಾಮಾನ್ಯಳಲ್ಲ ಎಂದು ಮಾಘ ಸ್ವಲ್ಪ ಯೋಚನೆ ಮಾಡಿ ಹೇಳಿದ -‘ಕ್ಷಮಾಶೀಲರು ಅಜ್ಜಿ’ ಎಂದ. ‘ಕ್ಷಮಾಶೀಲರು? ಎಂದಿಗೂ ಸಾಧ್ಯವಿಲ್ಲ. ಕ್ಷಮಿಸುವವರು ಪೃಥ್ವಿ ಮತ್ತು ಹೆಣ್ಣು. ಇವರಿಬ್ಬರಲ್ಲಿ ನೀವು ಯಾರೂ ಅಲ್ಲ.’
ಮಾಘನಿಗೆ ಗಾಬರಿಗಿಟ್ಟುಕೊಂಡಿತು. ಆದರೂ ಸುಧಾರಿಸಿಕೊಂಡು ಹೇಳಿದ- ‘ನಾವು ಪರದೇಶಿಗಳು.’
‘ಅಸಂಭವ! ಜೀವನ ಮತ್ತು ಮರದ ಎಲೆಗಳನ್ನುಳಿದು ಈ ಜಗತ್ತಿನಲ್ಲಿ ಯಾರೂ ಪರದೇಶಿಗಳಲ್ಲ’ ಅವರಿಂದ ಮುಂದೆ ಮಾತನಾಡಲಾಗಲಿಲ್ಲ. ಇಬ್ಬರೂ ಸೋತು ತಲೆ ತಗ್ಗಿಸಿದರು. ನಂತರ ರಾಜ ತಮ್ಮ ಅಜ್ಞಾನವನ್ನು ಒಪ್ಪಿಕೊಂಡು ನುಡಿದ -‘ನಾವು ಸೋತೆವು ಅಜ್ಜಿ.’ ಮುದುಕಿ ಇದನ್ನೂ ಒಪ್ಪಿಕೊಳ್ಳದೆ ಹೇಳಿದಳು- ‘ಜಗತ್ತಿನಲ್ಲಿ ಸೋತವರು ಇಬ್ಬರೇ ಇಬ್ಬರು. ಒಬ್ಬ ಸಾಲಗಾರ, ಮತ್ತೊಬ್ಬ ಹೆಣ್ಣು ಹೆತ್ತ ತಂದೆ. ನಿಜ ಹೇಳಿ. ನೀವು ಯಾರು?’
ಲಜ್ಜಿತಭಾವದಿಂದ ಇಬ್ಬರೂ ಮೌನ ವಹಿಸಿದರು. ಆಗ ಮುದುಕಿ ಮುಗುಳ್ನಕ್ಕು, ತಾನೇ ಹೇಳಿದಳು - ‘ನೀವಿಬ್ಬರೂ ಭೋಜರಾಜ ಮತ್ತು ಪಂಡಿತ ಮಾಘರಿದ್ದೀರಿ! ಈ ದಾರಿ ನೇರವಾಗಿ ಉಜ್ಜಯಿನಿಗೆ ಹೋಗುತ್ತದೆ.’
ಜ್ಞಾನ ಯಾರ ಸ್ವತ್ತೂ ಅಲ್ಲ. ಅದನ್ನು ಯಾರು ಬೇಕಾದರೂ ಹೊಂದಬಹುದು. ಬಾಹ್ಯನೋಟವನ್ನು ನೋಡಿ ಯಾವುದೇ ವ್ಯಕ್ತಿಯ ಜ್ಞಾನವನ್ನು ಅಳೆಯಲಾಗದು. ಕೆಲವರು ಓದು, ಅಧ್ಯಯನದ ಮೂಲಕ ಜ್ಞಾನ ಗಳಿಸಿಕೊಂಡರೆ, ಇನ್ನು ಕೆಲವರು ಜೀವನಾನುಭವದ ಮೂಲಕವೇ ಪರಿಪಕ್ವರಾಗುತ್ತಾರೆ.
(ಲೇಖಕರು ಹವ್ಯಾಸಿ ಬರಹಗಾರರು)