ಅಂಕಣ

ಶೂನ್ಯ ನೀರಿನ ದಿನ ನಮ್ಮೆಲ್ಲರಿಂದ ಹೆಚ್ಚು ದೂರವಿಲ್ಲ…

ರಮೇಶ್​ ಕುಮಾರ್​​ ಬಿ ಎಡಮೋಳೆ
| ಸುನೀಲ್ ಬಾರ್ಕೋರ್ (ಲೇಖಕರು ವಿಜ್ಞಾನ, ತಂತ್ರಜ್ಞಾನ ಬರಹಗಾರರು)

ದಕ್ಷಿಣ ಆಫ್ರಿಕಾದ ಕೇಪ್​ಟೌನ್ ನಗರ 2017ರ ಆಸುಪಾಸಿನಲ್ಲಿ ತೀವ್ರ ಬರಗಾಲದ ದಿನಗಳನ್ನು ಎದುರಿಸುತ್ತಿತ್ತು. ಅಲ್ಲಿನ ಜಲಾಶಯಗಳೆಲ್ಲ ಬರಿದಾಗಿ ಕುಡಿಯುವ ನೀರಿಗೂ ತತ್ವಾರದ ಸನ್ನಿವೇಶ. ಪರಿಸ್ಥಿತಿಯನ್ನು ಅವಲೋಕಿಸಿದ ಸ್ಥಳೀಯ ಆಡಳಿತ, ಇದು ಮುಂದುವರಿದು ನಗರದ ನಲ್ಲಿಗಳಿಗೆ ಪೂರೈಕೆಯನ್ನು ನಿಲ್ಲಿಸಿ ನೀರನ್ನು ರೇಷನ್ನುಗಳಿಂದ ತಲೆಗಿಷ್ಟೆಂದು ಹಂಚುವ ವಿಕೋಪದ ಪರಿಸ್ಥಿತಿಗೆ ತಲುಪುವುದೆಂಬುದು ಖಾತ್ರಿಯಾಯಿತು. ಅಂತಹ ದಿನಕ್ಕೆ ಸಜ್ಜಾದ ಆಡಳಿತ ನಲ್ಲಿಗಳಿಗೆ ನೀರಿನ ಪೂರೈಕೆಯನ್ನು ನಿಲ್ಲಿಸುವ ದಿನವನ್ನು zero water day ಅಂದರೆ ಶೂನ್ಯ ನೀರಿನ ದಿನವೆಂದು ಗುರುತಿಸಿ ಅಂತಹ ದಿನವನ್ನು ಆದಷ್ಟೂ ಮುಂದೂಡಲು ಹಲವು ಹಂತದ ಕ್ರಿಯಾಯೋಜನೆ ರೂಪಿಸಿ ಜಾರಿಗೊಳಿಸಿತು. ಅದರನ್ವಯ ಕುಡಿಯುವ ನೀರಿಗೆ ಅಗ್ರಪ್ರಾಶಸ್ಱ ನೀಡಿ ಉಳಿದ ನೀರಿನ ಬಳಕೆಯನ್ನೆಲ್ಲ ಕಡ್ಡಾಯವಾಗಿ ಕಡಿತಗೊಳಿಸಲಾಯಿತು. ಕುಟುಂಬಕ್ಕೆ ಇಂತಿಷ್ಟೇ ನೀರೆಂಬ ಕಟ್ಟಳೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಯಿತು. ಇದೆಲ್ಲದರ ಪರಿಣಾಮ ಕೇಪ್​ಟೌನ್ ಎದುರು ನೋಡುತ್ತಿದ್ದ ಶೂನ್ಯ ನೀರಿನ ದಿನ ಮುಂದೂಡಲ್ಪಡುತ್ತ ಕೊನೆಗೂ ಬರದೇ ಇರುವಂತೆ ಮಾಡಲು ಆಡಳಿತ ಯಶಸ್ವಿಯಾಯಿತು.

ಇಂತಹುದೇ ಪರಿಸ್ಥಿತಿ 2019ರಲ್ಲಿ ಚೆನ್ನೆ ೖ ನಗರಕ್ಕೂ ಆವರಿಸಿತ್ತು. ಆ ವರ್ಷ ಜೂನ್ 19ರಂದು ಚೆನ್ನೈ ನಗರವ್ಯಾಪ್ತಿಯಲ್ಲಿ ‘ಶೂನ್ಯ ನೀರಿನ ದಿನ’ವೆಂದು ಘೊಷಿಸಿ ಸರ್ಕಾರಿ ನಲ್ಲಿಗಳಲ್ಲಿ ನೀರು ಸರಬರಾಜನ್ನು ನಿಲ್ಲಿಸಿ ಟ್ಯಾಂಕರ್ ಮೂಲಕ ಪಾಳಿಯಲ್ಲಿ ಜನರಿಗೆ ನೀರನ್ನು ಹಂಚಲಾಯಿತು. ವಿಪರ್ಯಾಸವೆಂದರೆ ಅದೇ ವರ್ಷದ ಜನವರಿಯಲ್ಲಿ ಆ ನಗರ ಮೇಘಸ್ಪೋಟಕ್ಕೊಳಗಾಗಿ ಮಳೆನೀರಿನಲ್ಲಿ ಮುಳುಗೆದ್ದಿತು. ವರ್ಷಕ್ಕೊಮ್ಮೆ ಈ ರೀತಿಯ ವೈಪರೀತ್ಯದಿಂದ ಸಮುದ್ರದ ನೀರು ಉಕ್ಕಿ ಚೆನ್ನೆ ೖ ನಗರದ ಅಳಿದುಳಿದ ಜಲಮೂಲಗಳನ್ನು ಮಲೀನಗೊಳಿಸಿ ಬೇಸಿಗೆಯಲ್ಲಿ ನೀರಿಗಾಗಿ ಪರಿತಪಿಸುವುದು ಅಲ್ಲಿ ಇದೀಗ ವಾಡಿಕೆಯಾಗಿದೆ. ಕೆಲ ದಿನಗಳ ಹಿಂದೆಯಷ್ಟೆ ಬೆಂಗಳೂರು ಮಹಾನಗರ ಪಾಲಿಕೆ ವಾಹನ ತೊಳೆಯಲು, ಕಾರಂಜಿ ಹುಲ್ಲುಹಾಸಿನಂತಹ ಐಷಾರಾಮಿ ಕಾರಣಕ್ಕಾಗಿ ನೀರಿನ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಫೆಬ್ರವರಿ ತಿಂಗಳಿನಲ್ಲಿಯೇ ನಮ್ಮಲ್ಲಿನ ಹೆಚ್ಚಿನ ಜಲಮೂಲಗಳು ಬತ್ತಿ ಪಳೆಯುಳಿಕೆಗಳಂತಾಗಿರುವುದು ನಿಜಕ್ಕೂ ಆತಂಕದ ವಿಷಯ. ಅಪ್ಪಟ ಮಲೆನಾಡಿನ ಪ್ರದೇಶದಲ್ಲಿಯೇ ಜನರು ನೀರಿಗಾಗಿ ಟ್ಯಾಂಕರ್ ಮೊರೆಹೋಗಿರುವಂಥ ಇಂದಿನ ಪರಿಸ್ಥಿತಿ ಬದಲಿ ಜಲಮೂಲದ ಕುರಿತ ಚರ್ಚೆಯನ್ನು ಮತ್ತೆ ಹುಟ್ಟುಹಾಕಿದೆ.

ಜಾಗತಿಕವಾಗಿ ಲಭ್ಯವಿರುವ ನೀರಿನ ಸಂಪನ್ಮೂಲವನ್ನೊಮ್ಮೆ ಅವಲೋಕಿಸಿದರೆ ಕುಡಿಯುವ ನೀರು ಏಕೆ ಅಷ್ಟೊಂದು ಅಮೂಲ್ಯವೆಂಬುದು ನಮಗರ್ಥವಾಗುತ್ತದೆ. ಭೂಮಿಯಲ್ಲಿ ದೊರಕುವ ನೀರಿನ ಪೈಕಿ ಶೇಕಡ 97 ಉಪ್ಪುನೀರಾಗಿದ್ದು, ಉಳಿದಿರುವ ಶೇ.3 ಸಿಹಿನೀರಿನ ಹೆಚ್ಚಿನ ಭಾಗ ಹಿಮ ರೂಪದಲ್ಲಿದೆ. ಹೀಗಾಗಿ ಮಾನವನಿಗೆ ಎಟುಕಬಲ್ಲ ಸ್ಥಿತಿಯಲ್ಲಿರುವ ಸಿಹಿನೀರು 1% ಮಾತ್ರ. ಈ ನೀರು ಸಹ ಭೂಭಾಗದಲ್ಲಿ ಅಸಮಾನವಾಗಿ ಹಂಚಲ್ಪಟ್ಟಿದ್ದು, ಕೇವಲ 6 ದೇಶಗಳು ಅಂದರೆ ರಷ್ಯಾ, ಬ್ರೆಜಿಲ್, ಇಂಡೋನೇಷ್ಯಾ, ಚೀನಾ ಮತ್ತು ಕೊಲಂಬಿಯಾ ಆ ಒಂದು ಪ್ರತಿಶತದ ಅರ್ಧಪಾಲಿಗೆ ಮಾಲೀಕರಾಗಿದ್ದಾರೆ. ಹೀಗಾಗಿ ಉಳಿದ ಅರೆಕಾಸಿನ ಮಜ್ಜಿಗೆಗೆ ಭಾರತವೂ ಸೇರಿದಂತೆ ಉಳಿದ ದೇಶಗಳು ಹಪಹಪಿಸುತ್ತಿದ್ದೇವೆ. ಮಳೆಕೊಯ್ಲು, ಕೆರೆ ಹೂಳನ್ನೆತ್ತುವುದು, ಕೊಳಚೆ ನೀರಿನ ಮರುಬಳಕೆ, ನದಿಗಳ ಜೋಡಣೆ ಈ ಎಲ್ಲ ಮಾಗೋಪಾಯಗಳಿಂದ ಈ ಬೊಗಸೆ ನೀರನ್ನು ಉಳಿಸಿ ಮಿತವಾಗಿ ಬಳಸುವ ಸಾಧ್ಯತೆಯಿದ್ದರೂ ಬೆಳೆಯುತ್ತಿರುವ ಜನಸಂಖ್ಯೆ, ಜಾಗತಿಕ ತಾಪಮಾನದ ಹೆಚ್ಚಳ, ಜಲಮೂಲಗಳನ್ನು ಮಲೀನಗೊಳಿಸಿರುವುದು, ನಗರೀಕರಣ, ಜಲಪ್ರಜ್ಞೆಯ ಕೊರತೆ ಹೀಗೆಲ್ಲ ಹಲವು ಸಂಗತಿಗಳು ಪರಿಸ್ಥಿತಿ ಹದಗೆಡಲು ಮುಖ್ಯ ಕಾರಣವಾಗಿವೆ.

ಇಂತಹ ಸನ್ನಿವೇಶದಲ್ಲಿ ನಮಗಿರುವ ಸೀಮಿತ ಆಯ್ಕೆಗಳಲ್ಲೊಂದು ಸಮುದ್ರದ ನೀರಿನ ಬಳಕೆ. ನದಿಗಳೆಲ್ಲ ಅನಾದಿಕಾಲದಿಂದ ತಾವು ಹರಿದು ಬಂದ ದಾರಿಗುಂಟ ಸಿಗುವ ಬೆಟ್ಟ, ಕಲ್ಲು, ಮಣ್ಣುಗಳಿಂದ ಹೊತ್ತುತರುವ ಲವಣಗಳು ಸಮುದ್ರವನ್ನು ಸೇರಿ ಇಲ್ಲಿಂದ ಆವಿಯಾಗಿ ಮಾಯವಾಗುವ ಶುದ್ಧನೀರು ಲವಣಗಳನ್ನು ಇಲ್ಲೇ ಬಿಟ್ಟು ಹೋಗಿರುವುದರಿಂದ ಸಮುದ್ರದ ನೀರು ಉಪ್ಪಾಗಿದೆ. ಈ ಕ್ಷಾರನೀರನ್ನು ಕುಡಿಯಲು ಬಳಸಲು ನಮಗಿರುವ ಸವಾಲೆಂದರೆ ಈ ಸಮುದ್ರದ ನೀರಿನಲ್ಲಿ ಸೇರಿರುವ ಉಪ್ಪನ್ನು ಪ್ರತ್ಯೇಕಿಸುವುದು. ಈಛಿಠಚ್ಝಜ್ಞಿಚಠಿಜಿಟ್ಞ ಅಂದರೆ ನಿರ್ಲವಣೀಕರಣ ಎಂಬ ಈ ಪ್ರಕ್ರಿಯೆಗೆ ಬಳಸಲ್ಪಡುವ ಹಲವು ತಂತ್ರಗಳಲ್ಲಿ ಎರಡು ತಂತ್ರಗಳು ಹೆಚ್ಚು ಜನಪ್ರಿಯವಾಗಿವೆ. ಉಪ್ಪು ನೀರನ್ನು ಸೊಸುಕಗಳಿಂದ ಸೋಸುವುದು ಮತ್ತು ಸಮುದ್ರದ ನೀರನ್ನು ಆವಿಗೊಳಿಸಿ ಆ ಮೂಲಕ ಲವಣಗಳನ್ನು ಪ್ರತ್ಯೇಕಿಸುವುದು. ಮೊದಲ ಅಂದರೆ ಸೋಸುವ ಪ್ರಕ್ರಿಯೆಯಲ್ಲಿ ಜನಪ್ರಿಯವಾದುದು ರಿವರ್ಸ್ ಒಸ್ಮೋಸಿಸ್ (ಣ) ಎಂಬ ತಂತ್ರಜ್ಞಾನ.

ಇದರಲ್ಲಿ ಸಮುದ್ರದ ನೀರನ್ನು ಹೆಚ್ಚಿನ ಒತ್ತಡದಲ್ಲಿ ಸೋಸುಕಗಳ ಮೂಲಕ ಹಾಯಿಸಿ ಲವಣಗಳನ್ನು ಸೆರೆಹಿಡಿ ಯಲಾಗುತ್ತದೆ. ಆದರೆ ಇದರಲ್ಲಿ ತೊಂದರೆಯೆಂದರೆ ಈ ಸೋಸುಕಗಳು ಲವಣಗಳ ಜೊತೆಗೆ ನಮಗೆ ಅಗತ್ಯವಾದ ಖನಿಜಾಂಶಗಳನ್ನೂ ಹಿಡಿದಿಟ್ಟುಕೊಳ್ಳುತ್ತವೆ. ಹೀಗಾಗಿ ಈ ಖನಿಜಗಳನ್ನು ಹೊಸದಾಗಿ ಸೇರಿಸಿದರೆ ಮಾತ್ರ ಈ ನೀರು ಕುಡಿಯಲು ಯೋಗ್ಯ. ಸೋಸುಕಗಳ ಮೂಲಕ ಹಾದುಹೋಗುವ ಉಪ್ಪುನೀರನ್ನು ಸದಾ ಒತ್ತಡದಲ್ಲಿಡಲು ಬೇಕಾದ ಮೂಲಭೂತ ಸೌಕರ್ಯದ ಅಗತ್ಯತೆ, ವಿದ್ಯುತ್ ಶಕ್ತಿ ಹಾಗೂ ಸಿಹಿನೀರಿನ ಉತ್ಪಾದನೆಗೆ ಅನುಗುಣವಾಗಿ ಬದಲಿಸಬೇಕಾದ ಸೋಸುಕಗಳ ಜೊತೆಗೆ ಬೇಕಿರುವ ನಿರ್ವಹಣಾ ವೆಚ್ಚ ಇವೆಲ್ಲ ರಿವರ್ಸ್ ಒಸ್ಮೋಸಿಸ್ ತಂತ್ರಜ್ಞಾನದ ಹಿನ್ನೆಡೆಗಳು.

ನಿರ್ಲವಣೀಕರಣ ಪ್ರಕ್ರಿಯೆಯ ಎರಡನೇ ಜನಪ್ರಿಯ ತಂತ್ರಜ್ಞಾನ ಸಮುದ್ರದ ನೀರನ್ನು ಕುದಿಸಿ ಆವಿಯನ್ನು ತಂಪಾಗಿಸುವುದು, ಭಟ್ಟಿ ಇಳಿಸಿ ಸಿಹಿನೀರನ್ನಾಗಿಸುವುದು. ಇಲ್ಲಿ ಉಪ್ಪುನೀರನ್ನು ಆವಿಯಾಗಿಸಲು ಹೆಚ್ಚಿನ ಉಷ್ಣಶಕ್ತಿ ಬೇಕಾಗುವುದರಿಂದ ಮತ್ತು ಈ ತಂತ್ರಜ್ಞಾನ ಬಳಸುವ ಬಹುತೇಕ ಕೇಂದ್ರಗಳು ಡೀಸೆಲ್​ನಂಥ ಪಳೆಯುಳಿಕೆ ಇಂಧನ ಉಪಯೋಗಿಸುವ ಕಾರಣಕ್ಕೆ ಪರಿಸರದ ದೃಷ್ಟಿಯಿಂದ ಇದು ಮಾರಕ. ಅಲ್ಲದೆ, ಈ ಪ್ರಕ್ರಿಯೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವಾದ ಕ್ಷಾರಯುಕ್ತ ನೀರನ್ನು ಪುನಃ ಸಮುದ್ರಕ್ಕೇ ಬಿಡುವುದರಿಂದ ಅದು ಜಲಚರಗಳಿಗೆ ಹಾನಿಕಾರಕ. ಅದು ಎಷ್ಟರ ಮಟ್ಟಿಗೆಯೆಂದರೆ ಈ ತಂತ್ರಜ್ಞಾನವನ್ನು ಬಳಸುವ ನಿರ್ಲವಣಿಕರಣದ ಪ್ರಕ್ರಿಯೆಯಲ್ಲಿ ನಮಗೆ ಸಿಗುವ ಕುಡಿಯುವ ನೀರಿನ ಪ್ರಮಾಣಕ್ಕಿಂತ ತ್ಯಾಜ್ಯದ ಪ್ರಮಾಣವೇ ಹೆಚ್ಚು. ಇದರಿಂದ ಈ ಪದ್ಧತಿಯಲ್ಲಿ ತಯಾರಾಗುವ ಸಿಹಿನೀರು ಉತ್ಪಾದನಾ ವೆಚ್ಚದ ಏರಿಕೆಗೆ ಕಾರಣವಾಗಿ ಸಾಮಾನ್ಯರ ಕೈಗೆಟುಕದಂತೆ ಮಾಡುತ್ತಿದೆ. ಆದರೂ ಇತ್ತೀಚಿನ ದಿನಗಳಲ್ಲಿ ಈಛಿಠಚ್ಝಜ್ಞಿಚಠಿಜಿಟ್ಞ ತಂತ್ರಜ್ಞಾನ ಅಭಿವೃದ್ಧಿ ಹೊಂದುತ್ತ ಸೌರಶಕ್ತಿ ಬಳಸಿ ಒಟ್ಟಾರೆ ವಿದ್ಯುತ್ ಮತ್ತು ಡೀಸೆಲ್ ಬಳಕೆಯನ್ನು ಕಡಿಮೆ ಮಾಡುವತ್ತ ಪ್ರಯತ್ನಗಳು ಸಾಗಿವೆ.

ಸದ್ಯಕ್ಕೆ ವಿಶ್ವಾದ್ಯಂತ 177 ದೇಶಗಳಲ್ಲಿ ಹದಿನಾರು ಸಾವಿರ ನಿರ್ಲವಣೀಕರಣ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ ಹೆಚ್ಚಿನವು ಮಧ್ಯಪ್ರಾಚ್ಯ ದೇಶಗಳಲ್ಲಿವೆ. ಈ ದೇಶಗಳು ಎಷ್ಟರ ಮಟ್ಟಿಗೆ ನೀರಿಗಾಗಿ ನಿರ್ಲವಣೀಕರಣ ಪ್ರಕ್ರಿಯೆ ಮೇಲೆ ನಿರ್ಭರವಾಗಿವೆಯೆಂದರೆ ಜಾಗತಿಕವಾಗಿ ಈ ಪ್ರಕ್ರಿಯೆಯಿಂದ ಉತ್ಪಾದಿಸಲಾಗುವ ಸಿಹಿನೀರಿನ ಒಟ್ಟಾರೆ ಪ್ರಮಾಣದ ಶೇಕಡ ಎಪ್ಪತ್ತರಷ್ಟು ನೀರು ಈ ರಾಷ್ಟ್ರಗಳೇ ತಯಾರಿಸುತ್ತಿವೆ. ಇಸ್ರೇಲ್ ಅಂತೂ ತನ್ನ ಸಿಹಿನೀರಿನ ಅವಶ್ಯಕತೆಯ ಶೇಕಡ 97 ಪ್ರಮಾಣವನ್ನು ನಿರ್ಲವಣೀಕರಣ ತಂತ್ರಜ್ಞಾನ ಬಳಸಿಯೇ ತಯಾರಿಸುತ್ತದೆ. ಸೌದಿ ಅರೇಬಿಯಾ ಜಾಗತಿಕವಾಗಿ ಅತಿಹೆಚ್ಚು ಪ್ರಮಾಣದಲ್ಲಿ ನಿರ್ಲವಣೀಕರಣ ಪ್ರಕ್ರಿಯೆಯಿಂದ ಸಿಹಿನೀರನ್ನು ಉತ್ಪಾದಿಸುವ ದೇಶವಾಗಿದ್ದು, ಇಲ್ಲಿ ಕುಡಿಯಲು, ಬಟ್ಟೆಒಗೆಯಲು, ಈಜುಕೋಳ, ಕ್ರೀಡಾಂಗಣದ ಹುಲ್ಲುಹಾಸಲಿಗೆ ಹೀಗೆ ಎಲ್ಲ ಕಡೆಗೂ ಬಳಸುವುದು ಈ ನೀರನ್ನೇ. ಆದರೆ ಈ ದೇಶಗಳಲ್ಲಿ ಅವರು ಬಳಸುವ ಇಂಧನವಾದ ಡೀಸೆಲ್ ಅವರ ಹಿತ್ತಲಗಿಡವಾಗಿರುವ ಕಾರಣದಿಂದ ಉತ್ಪಾದನಾ ವೆಚ್ಚ ಗಣನೀಯವಾಗಿ ತಗ್ಗುತ್ತದೆ.

ಒಂದು ಅಂದಾಜಿನ ಪ್ರಕಾರ ಸೌದಿಯಲ್ಲಿ ಉತ್ಪಾದನೆಯಾಗುವ ಒಟ್ಟೂ ತೈಲ ಮತ್ತು ಅನಿಲದ ಕಾಲುಭಾಗದಷ್ಟು ವಿದ್ಯುತ್ ಉತ್ಪಾದನೆ ಮತ್ತು ನಿರ್ಲವಣೀಕರಣ ಪ್ರಕ್ರಿಯೆಗೇ ಹೋಗುತ್ತದೆ. ಕೆಲ ದಿನಗಳ ಹಿಂದೆ ಬೃಹನ್ಮುಂಬೈ ಮುನ್ಸಿಪಲ್ ಕಾಪೋರೇಷನ್ ನಗರದ ಹೊರವಲಯದಲ್ಲಿರುವ ಮಾನೋರಿ ಗ್ರಾಮದಲ್ಲಿ ದಿನಕ್ಕೆ ಎರಡು ಸಾವಿರ ಲಕ್ಷ ಲೀಟರ್ ಉತ್ಪಾದನಾ ಸಾಮರ್ಥ್ಯದ ನಿರ್ಲವಣೀಕರಣ ಸ್ಥಾವರವನ್ನು ನಿರ್ವಿುಸಲು ಟೆಂಡರ್ ಕರೆದಿದೆ. ಸುಮಾರು ಒಂದೂವರೆ ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ವಿುಸಲಾಗುತ್ತಿರುವ ಈ ಸ್ಥಾವರದ ಸಾಮರ್ಥ್ಯವನ್ನು ಮುಂದಿನ ದಿನಗಳಲ್ಲಿ ದುಪ್ಪಟ್ಟಾಗಿಸುವುದು ಕಾಪೋರೇಷನ್ನಿನ ಸದ್ಯದ ಯೋಜನೆ.

ರಿವರ್ಸ್ ಒಸ್ಮೋಸಿಸ್ ತಂತ್ರಜ್ಞಾನ ಬಳಸಲಿರುವ ಇಲ್ಲಿನ ನೀರಿನ ಉತ್ಪಾದನಾ ವೆಚ್ಚ ಪ್ರತಿ ಲೀಟರ್​ಗೆ 5 ಪೈಸೆಯಾಗಲಿದೆಯೆಂಬುದು ಸದ್ಯದ ಅಂದಾಜು. ಚೆನ್ನೈನಲ್ಲಿಯೂ 4 ಸಾವಿರ ಲಕ್ಷ ಲೀಟರ್ ಉತ್ಪಾದನಾ ಸಾಮರ್ಥ್ಯದ ನಿರ್ಲವಣೀಕರಣ ಸ್ಥಾವರಕ್ಕೆ ಶಂಕು ಸ್ಥಾಪನೆ ಮಾಡಲಾಗಿದೆ. ರಾಜ್ಯದ ನಾಲ್ಕನೇ ಹಾಗೂ ಆಗ್ನೇಯ ಏಷ್ಯಾದ ಅತಿದೊಡ್ಡ ನಿರ್ಲವಣೀಕರಣ ಸ್ಥಾವರವೆಂದು ಹೇಳಲಾಗುವ ಈ ಯೋಜನೆಯಿಂದ 22 ಲಕ್ಷ ಜನರು ಫಲಾನುಭವಿಗಳೆಂದು ಅಂದಾಜು. ಸದ್ಯದ ಪರಿಸ್ಥಿತಿಯನ್ನೊಮ್ಮೆ ಅವಲೋಕಿಸಿದರೆ ಜಲಕ್ಷಾಮ ಇನ್ನು ಪ್ರತಿವರ್ಷ ಬೇಡದೇ ಬರುವ ನೆಂಟನಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಇದನ್ನರಿತ ಸಂಶೋಧನಾ ಸಂಸ್ಥೆಗಳು ನಿರ್ಲವಣಿಕರಣ ಪ್ರಕ್ರಿಯೆಯನ್ನು ಸೌರಶಕ್ತಿ ಬಳಸುವುದರ ಮೂಲಕ ಒಟ್ಟಾರೆ ವೆಚ್ಚವನ್ನು ಕಡಿಮೆಗೊಳಿಸುವ ಮತ್ತು ಇಲ್ಲಿಯವರೆಗೆ ಈ ತಂತ್ರಜ್ಞಾನದ ದೊಡ್ಡ ಹಿನ್ನೆಡೆಯೆಂದೇ ಹೇಳಲಾಗುವ ತ್ಯಾಜ್ಯವನ್ನು ಮರುಪೂರಣಗೊಳಿಸುವತ್ತ ಹೊಸ ಪ್ರಯತ್ನಗಳು ನಡೆಸಿ ಅವು ತಕ್ಕಮಟ್ಟಿಗೆ ಯಶಸ್ಸನ್ನು ಕಂಡಿವೆ. ಇದೆಲ್ಲದರ ಜೊತೆಗೆ ಉಷ್ಣ ಮತ್ತು ಅಣುಸ್ಥಾವರಗಳಲ್ಲಿ ಟರ್ಬೆನ್ (ಪರಿವರ್ತಕ) ಗಳನ್ನು ತಿರುಗಿಸಿ ಹೊರಬರುವ ಉಗಿಯಲ್ಲಿದ್ದು ಪೋಲಾಗುವ ಉಷ್ಣಶಕ್ತಿಯನ್ನು ನಿರ್ಲವಣಿಕರಣ ಪ್ರಕ್ರಿಯೆಗೆ ಬಳಸುವ ಪ್ರಯತ್ನ ಸಹ ಫಲ ಕಂಡಿದೆ.

ಇತ್ತೀಚಿನ ಪತ್ರಿಕಾ ವರದಿಯೊಂದರ ಪ್ರಕಾರ ಸ್ವಾತಂತ್ರ್ಯದ ನಂತರ ಭಾರತದ ನಾಗರಿಕನಿಗೆ ಕುಡಿಯುವ ನೀರಿನ ತಲಾ ಉಪಲಬ್ಧತೆ ಶೇಕಡ ಎಪ್ಪತೆôದಕ್ಕಿಂತ ಕಡಿಮೆ ಯಾಗಿದೆ. ಹೀಗಾಗಿ ಜನರಲ್ಲಿ ಜಲಪ್ರಜ್ಞೆ ಹೆಚ್ಚಿಸಿ ಸಾಂಪ್ರದಾಯಿಕ ಜಲಮೂಲಗಳನ್ನು ರಕ್ಷಿಸುವ ಜೊತೆಗೆ ಅವುಗಳಾಚೆಗೂ ಯೋಚಿಸುವ ಜರೂರತ್ತು ನಮ್ಮ ಚಿಂತಕರ ಚಾವಡಿ ಯ ಮುಂದಿದೆ. ಏಕೆಂದರೆ, ಶೂನ್ಯ ನೀರಿನ ದಿನ ನಮ್ಮೆಲ್ಲರಿಂದ ಹೆಚ್ಚು ದೂರವಿಲ್ಲ.