ಅಂಕಣ

ಬೈಡೆನ್ ಭರವಸೆಯ ಬೆನ್ನೇರಿ ಬಂದ ಯೂನುಸ್ ಭವಿಷ್ಯ ಠುಸ್!

ಇಂದು ಬಾಂಗ್ಲಾದೇಶ ತನ್ನ ಇತಿಹಾಸವನ್ನು ನಿರಾಕರಿಸುತ್ತಿದೆ, ವರ್ತಮಾನಕ್ಕೆ ಬೆನ್ನು ತಿರುಗಿಸಿದೆ, ಭವಿಷ್ಯದ ಕುರಿತಾಗಿ ಕಣ್ಣುಮುಚ್ಚಿಕೊಂಡಿದೆ. ತನ್ನ ಜೀವವನ್ನೇ ಪಣವಾಗಿಟ್ಟು ದೇಶದ ಸ್ವಾತಂತ್ರ್ಯಕ್ಕಾಗಿ ಪಾಕಿಸ್ತಾನದ ಪಾಶವಿ ಶಕ್ತಿಯೊಂದಿಗೆ ಹೋರಾಡಿದ, ಅದಕ್ಕಾಗಿ ‘ವಂಗಬಂಧು’ ಎಂಬ ಬಿರುದಿನೊಂದಿಗೆ ರಾಷ್ಟ್ರಪಿತನ ಸ್ಥಾನವನ್ನು ಪಡೆದ ಶೇಖ್ ಮುಜೀಬುರ್ ರಹಮಾನ್​ರನ್ನು ಅವಮಾನಿಸುವ, ಅವರ ನೆನಪನ್ನು ಅಳಿಸುವ ಕೃತ್ಯಗಳು ಆಗಸ್ಟ್ 5ರ ಸಂಜೆಯಿಂದಲೇ ಆರಂಭವಾದವು. ಶೇಖ್ ಹಸೀನಾ ಢಾಕಾ ತೊರೆದು ನವದೆಹಲಿಯತ್ತ ಹೊರಡುತ್ತಿದ್ದಂತೆ ರಾಜಧಾನಿಯಲ್ಲಿ ಮುಜೀಬ್​ರ ಪ್ರತಿಮೆಗಳನ್ನು ಒಡೆಯುವ, ಚಿತ್ರಗಳನ್ನು ಹಾಳುಮಾಡುವ ಕೃತ್ಯಗಳು ಆರಂಭವಾದವು. ಅದರಲ್ಲಿ ತೊಡಗಿದವರು 1971ರಲ್ಲಿ ಪಾಕಿಸ್ತಾನದ ಪರ ನಿಂತಿದ್ದ ಜಮಾತ್-ಎ-ಇಸ್ಲಾಮಿಯ ವಿದ್ಯಾರ್ಥಿ ಅಂಗ ಇಸ್ಲಾಮಿಕ್ ಛಾತ್ರ ಶಿಬಿರ್ ಮತ್ತು ವಿರೋಧಪಕ್ಷ ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಕ್ಷದ ವಿದ್ಯಾರ್ಥಿ ಅಂಗ ಬಾಂಗ್ಲಾದೇಶ್ ಜಾತೀಯೋಬಾದಿ ಛಾತ್ರದಲ್. ಇಂದೂ ಪಾಕಿಸ್ತಾನದ ಪರವಾಗಿಯೇ ಇರುವ ಜಮಾತ್​ನ ಮುಜೀಬ್-ವಿರೋಧಿ ನೀತಿಯನ್ನೇನೋ ಅರ್ಥಮಾಡಿಕೊಳ್ಳಬಹುದು. ಅದರ ಬಹುತೇಕ ನೀತಿನಿಲುವುಗಳು ನಿರ್ಧಾರವಾಗುವುದು ಇಂದಿಗೂ ಇಸ್ಲಾಮಾಬಾದ್ ಮತ್ತು ರಾವಲ್​ಪಿಂಡಿಯಲ್ಲಿ. ಅದರಿಂದಾಗಿಯೇ ಕಳೆದ ಜನವರಿಯ ಚುನಾವಣೆಗಳಲ್ಲಿ ಅದು ಭಾಗವಹಿಸುವುದನ್ನು ದೇಶದ ಸುಪ್ರೀಂ ಕೋರ್ಟ್ ಪ್ರತಿಬಂಧಿಸಿತ್ತು. ನಂತರ ಮೇ-ಜೂನ್​ನಲ್ಲಿ ಜಮಾತ್ ಆರಂಭಿಸಿದ ದಾಂಧಲೆಗಳನ್ನು ಕಂಡು ಹಸೀನಾ ಸರ್ಕಾರ ಅದನ್ನು ಕಾನೂನುಬಾಹಿರಗೊಳಿಸಿತು. ಆದರೆ ಪಾಕ್ ಪರವಾದ ಜಮಾತ್​ನ ಮನೋಭಾವವನ್ನೇ ಬಾಂಗ್ಲಾದೇಶದ ಸ್ವಾತಂತ್ರ್ಯವನ್ನು ಮೊತ್ತಮೊದಲಿಗೆ ಚಿತ್ತಗಾಂಗ್ ರೇಡಿಯೋ ಸ್ಟೇಷನ್​ನಿಂದ ಘೊಷಿಸಿದ ಜನರಲ್ ಜಿಯಾ-ಉರ್-ರಹಮಾನ್ ಸ್ಥಾಪಿಸಿದ ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್​ಪಿ) ಸಹ ಬೆಳೆಸಿಕೊಂಡದ್ದು ಹೇಗೆ? ಮುಜೀಬ್​ರನ್ನು ರಾಷ್ಟ್ರಪಿತ ಎಂದು ನೋಡುವ ಬದಲು ತನ್ನ ರಾಜಕೀಯ ವಿರೋಧಿ ಹಸೀನಾರ ತಂದೆ ಎಂದು ಖಲೀದಾ ಜಿಯಾ ತಿಳಿದದ್ದು ಹೇಗೆ? ಇತಿಹಾಸವನ್ನು ವರ್ತಮಾನ ಈ ಬಗೆಯಾಗಿ ಕತ್ತಲುಗೊಳಿಸಬಹುದೇ?

ನಂತರ ಗೋಳದ ಆಚೆಬದಿಯ ಕ್ಲಿಂಟನ್ ಮತ್ತು ಬೈಡೆನ್ ಪ್ಯಾರಿಸ್​ನಿಂದ ಕರೆತಂದು ಢಾಕಾದಲ್ಲಿ ಪ್ರತಿಷ್ಠಾಪಿಸಿದ ಮಹಮದ್ ಯೂನುಸ್ ಸಹ ಜಮಾತ್ ಮತ್ತು ಬಿಎನ್​ಪಿಗಳ ಮುಜೀಬ್-ವಿರೋಧಿ ನೀತಿಗಳನ್ನು ಸರ್ಕಾರಿ ಸ್ತರದಲ್ಲೇ ಆರಂಭಿಸಿದರು. ಮುಜೀಬ್ ಹತ್ಯೆಯಾದ ಆಗಸ್ಟ್ 15 ಅನ್ನು ‘ರಾಷ್ಟ್ರೀಯ ಶೋಕದಿನ’ ಎಂದು ಆಚರಿಸಲಾಗುತ್ತಿದ್ದ ಸಂಪ್ರದಾಯವನ್ನು ಅವರು ಮುರಿದರು. ಡಿಸೆಂಬರ್​ನಲ್ಲಿ ಅವರು ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ದೇಶದ ಕರೆನ್ಸಿ ನೋಟ್​ಗಳಲ್ಲಿದ್ದ ಮುಜೀಬ್​ರ ಚಿತ್ರವನ್ನು ತೆಗೆಯುವ ನಿರ್ಧಾರ ಕೈಗೊಂಡರು. ಅವರ ನೇತೃತ್ವದ ಉಸ್ತುವಾರಿ ಸರ್ಕಾರ ತೆಗೆದುಕೊಂಡ ತೀರ್ವನದ ಪ್ರಕಾರ ಇನ್ನು ಮುಂದೆ ಕರೆನ್ಸಿ ನೋಟ್​ಗಳಲ್ಲಿ ಹಸೀನಾರನ್ನು ದೇಶದಿಂದ ಓಡಿಸಿದ ತಥಾಕಥಿತ ವಿದ್ಯಾರ್ಥಿ ಆಂದೋಲನದ ಚಿತ್ರಗಳಿರುತ್ತವಂತೆ!

ಈ ಹಿನ್ನೆಲೆಯಲ್ಲಿ, ಅಂದು ಮುಜೀಬ್ ಪರವಾಗಿ, ಇಂದು ಹಸೀನಾ ಪರವಾಗಿ, ಒಟ್ಟಾರೆ ಸ್ವತಂತ್ರ ಹಾಗೂ ಸಮೃದ್ಧ ಬಾಂಗ್ಲಾದೇಶದ ಪರವಾಗಿ ನಿಂತ ಭಾರತದ ಕುರಿತಾಗಿಯೂ ಯೂನುಸ್ ಸರ್ಕಾರದ ನೀತಿಗಳಲ್ಲಿ ಬದಲಾವಣೆ ಕಂಡುಬರುವುದು ನಿರೀಕ್ಷಿತವೇ ಆಗಿತ್ತು.

ಬಾಂಗ್ಲಾದೇಶದ ಸ್ವಾತಂತ್ರ್ಯದ ಪರವಾಗಿ ನಿಂತು ಪಾಕಿಸ್ತಾನದ ವಿರುದ್ಧ ಭಾರತ ವಿಜಯ ಸಾಧಿಸಿ ಇದೇ ಡಿಸೆಂಬರ್ 16ಕ್ಕೆ 53 ವರ್ಷಗಳು ತುಂಬಿದ ಸಂದರ್ಭದಲ್ಲಿ ವಾಡಿಕೆಯಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾರತೀಯ ಯೋಧರ ಸಾಹಸ ಹಾಗೂ ಸಾಧನೆಯನ್ನು ಸ್ಮರಿಸಿ ‘ಎಕ್ಸ್’ನಲ್ಲಿ ಪೋಸ್ಟ್ ಹಾಕಿದರು. ಅದಕ್ಕೆ ಪ್ರತಿಕ್ರಿಯಿಸಿದ ಯೂನುಸ್ ಸರ್ಕಾರದಲ್ಲಿನ ಕಾನೂನು ಸಲಹೆಗಾರ (ನಿಜವಾದ ಅಧಿಕಾರ ಅರ್ಥದಲ್ಲಿ ಮಂತ್ರಿ!) ಆಸಿಫ್ ನಝು್ರುಲ್ ಮತ್ತಿತರ ಕೆಲವರು ‘1971ರಲ್ಲಿ ಘಟಿಸಿದ್ದು ಬಾಂಗ್ಲಾದೇಶೀಯರು ಸ್ವಾತಂತ್ರ್ಯಕ್ಕಾಗಿ ನಡೆಸಿದ ಹೋರಾಟ, ಅದರಲ್ಲಿ ನಿಮ್ಮ ಪಾತ್ರ ಸಹಯೋಗಿಯಾಗಿ ಇದ್ದದ್ದು ಮಾತ್ರ’ ಎಂದು! ಅಂದರೆ ಇಂದು ಬಾಂಗ್ಲಾದೇಶದಲ್ಲಿ ಅಧಿಕಾರ ಹಿಡಿದು ಕೂತಿರುವವರಿಗೆ ಇತಿಹಾಸದ ಪಾಠದ ಅಗತ್ಯವಿದೆ ಎಂಬುದು ಸ್ಪಷ್ಟ.

ಹೀಗೆ ಡಿಸೆಂಬರ್ 16ರಂದು ಇತಿಹಾಸವನ್ನು ನಿರಾಕರಿಸಿದ ಒಂದುವಾರದ ತರುವಾಯ ಡಿಸೆಂಬರ್ 23ರಂದು ವರ್ತಮಾನವನ್ನು ನಿರಾಕರಿಸುವ ನಡೆಯೊಂದನ್ನು ಯೂನುಸ್ ಸರ್ಕಾರ ಪ್ರದರ್ಶಿಸಿತು. ಭಾರತದಲ್ಲಿ ಆಶ್ರಯ ಪಡೆದಿರುವ ಶೇಖ್ ಹಸೀನಾರನ್ನು ಬಾಂಗ್ಲಾದೇಶಕ್ಕೆ ಒಪ್ಪಿಸುವಂತೆ ಅಲ್ಲಿನ ಸರ್ಕಾರದ ವಿದೇಶ ವ್ಯವಹಾರಗಳ ಸಲಹೆಗಾರ ಜಹಾಂಗೀರ್ ಆಲಂ ಚೌಧರಿ ಅಧಿಕೃತ ರಾಜತಾಂತ್ರಿಕ ಮನವಿಯನ್ನು ಭಾರತಕ್ಕೆ ಸಲ್ಲಿಸಿದ್ದಾರೆ. ಕಳೆದ ನಾಲ್ಕೂವರೆ ತಿಂಗಳುಗಳಲ್ಲಿ ಹಸಿನಾರ ಮೇಲೆ ಹೊರಿಸಲಾಗಿರುವ 150 ಹೆಚ್ಚಿನ ಆರೋಪಗಳ ಹಿನ್ನೆಲೆಯಲ್ಲಿ ಇಂತಹದೊಂದು ಮನವಿ ನಿರೀಕ್ಷಿತವೇ ಆಗಿತ್ತು. ಆದರೆ ಇದನ್ನು ಭಾರತ ಸರ್ಕಾರ ಪುರಸ್ಕರಿಸುವುದಿಲ್ಲ ಎನ್ನುವುದೂ ಅಷ್ಟೇ ನಿರೀಕ್ಷಿತ.

ಪರಸ್ಪರ ಅಪರಾಧಿಗಳನ್ನು ಒಪ್ಪಿಸುವ ಪ್ರತ್ಯರ್ಪಣ ಸಂಧಿಯೊಂದನ್ನು ಹಸೀನಾ ಸರ್ಕಾರವೇ 2013ರಲ್ಲಿ ಭಾರತದೊಂದಿಗೆ ಮಾಡಿಕೊಂಡಿತ್ತು. ಅದರ ಪ್ರಕಾರ ಬಾಂಗ್ಲಾದೇಶದಲ್ಲಿ ಅಡಗಿದ್ದ ಭಯೋತ್ಪಾದಕ ಸಂಘಟನೆ ‘ಯುನೈಟೆಡ್ ಲಿಬರೇಷನ್ ಫ್ರಂಟ್ ಆಫ್ ಅಸ್ಸಾಂ’ (ಯುಎಲ್​ಎಫ್​ಎ, ಉಲ್ಪಾ) ನೇತಾರ ಅನೂಪ್ ಚೇತಿಯಾನನ್ನು 2015ರಲ್ಲಿ ಭಾರತಕ್ಕೆ ಒಪ್ಪಿಸಿತ್ತು. ಒಪ್ಪಂದದ ಮೊದಲ ವಿಧಿಯ ಪ್ರಕಾರ ರಾಜಕೀಯ ವಿರೋಧಿಗಳ ಪ್ರತ್ಯರ್ಪಣಕ್ಕೆ ಅವಕಾಶವಿಲ್ಲ. ಆದರೆ ಹಸೀನಾ ಮೇಲೆ ಯೂನುಸ್ ಸರ್ಕಾರ ಹೊರಿಸಿರುವ ಆರೋಪಗಳಲ್ಲಿ ಹೆಚ್ಚಿನವು ಹತ್ಯಾಕಾಂಡ, ಕೊಲೆ, ಅಪಹರಣ, ಭ್ರಷ್ಟಾಚಾರ ಮುಂತಾದ ರಾಜಕೀಯೇತರ ಆರೋಪಗಳು. ಈ ಕಾರಣದಿಂದಾಗಿ ಹಸೀನಾರನ್ನು ತನಗೆ ಒಪ್ಪಿಸಲೇಬೇಕಾದ ಒತ್ತಡಕ್ಕೆ ಭಾರತವನ್ನು ಸಿಕ್ಕಿಸಬಹುದು ಎಂದು ಯೂನುಸ್ ಸರ್ಕಾರ ತಿಳಿದಂತಿದೆ. ಆದರೆ ವಾಸ್ತವವೇ ಬೇರೆ. ಜೂನ್-ಜುಲೈನಲ್ಲಿ ಹಸೀನಾ ವಿರುದ್ಧ ಸುಳ್ಳು ಕಾರಣಗಳಿಗಾಗಿ ದಾಂಧಲೆ ಎಬ್ಬಿಸಿ, ಪ್ರತಿ ಕಾರ್ಯಾಚರಣೆಗಾಗಿ ಅವರನ್ನು ಪ್ರಚೋದಿಸಿದವರೇ ಈಗ ಯೂನುಸ್ ಸರ್ಕಾರದಲ್ಲಿ ಇರುವವರು. ಆಗ ಪ್ರಧಾನಿಯಾಗಿ ಹಸೀನಾ ಕೈಗೊಂಡ ಕ್ರಮಗಳನ್ನು ಅವರು ವೈಯಕ್ತಿಕವಾಗಿ ಎಸಗಿದ ಅಪರಾಧಗಳು ಎಂದು ಪರಿಗಣಿಸುವುದು ಸಮಂಜಸವಾಗಲಾರದು. ಜತೆಗೆ, ಅವರ ಮೇಲೆ ಹತ್ಯಾಕಾಂಡದ ಆರೋಪ ಹೊರಿಸಿರುವುದು ನಗೆಪಾಟಲಿನ ಕಥೆ. ಯೂನುಸ್ ಸರ್ಕಾರದ ಒಟ್ಟಾರೆ ಉದ್ದೇಶ ಹಸೀನಾರನ್ನು ವಶಕ್ಕೆ ತೆಗೆದುಕೊಂಡು ಅವರಿಗೆ ಮರಣದಂಡನೆ ವಿಧಿಸುವುದೇ ಆಗಿದೆ. ಇದರರ್ಥ ಹಸೀನಾ ಮೇಲಿನ ಆರೋಪಗಳು ದುರುದ್ದೇಶಪೂರಿತ ಎನ್ನುವುದು ಸ್ಪಷ್ಟ. 2013ರ ಪ್ರತ್ಯರ್ಪಣ ಸಂಧಿಯ ಎಂಟನೆಯ ವಿಧಿಯ ಪ್ರಕಾರ ದುರುದ್ದೇಶಪೂರಿತ ಕಾರಣಗಳನ್ನೊಡ್ಡಿ ಪ್ರತ್ಯರ್ಪಣಕ್ಕಾಗಿ ಸಲ್ಲಿಸಲಾದ ಮನವಿಗಳನ್ನು ಮಾನ್ಯ ಮಾಡದಿರಲು ಅವಕಾಶವಿದೆ. ಈ ಕಾರಣವನ್ನೇ ಒಡ್ಡಿ ಯೂನುಸ್ ಸರ್ಕಾರದ ಮನವಿಯನ್ನು ಭಾರತ ಸರ್ಕಾರ ತಿರಸ್ಕರಿಸಬಹುದಾಗಿದೆ.

ಒಂದುವೇಳೆ ಸಕಾರಣಗಳಿಲ್ಲದಿದ್ದರೂ ಇಂದಿನ ಪರಿಸ್ಥಿತಿಯಲ್ಲಿ ಭಾರತ ಹಸೀನಾರನ್ನು ತನ್ನಲ್ಲೇ ರಕ್ಷಿಸಿ ಇರಿಸಿಕೊಳ್ಳಲೂಬಹುದು. ಚೀನಿ ಕಮ್ಯೂನಿಸ್ಟ್ ಸರ್ಕಾರದ ವಿರೋಧವನ್ನು ಲೆಕ್ಕಿಸದೆ ದಲಾಯಿ ಲಾಮಾರನ್ನು ಆರೂವರೆ ದಶಕಗಳಿಂದಲೂ ತನ್ನಲ್ಲಿ ಇರಿಸಿಕೊಂಡಿರುವ ಭಾರತಕ್ಕೆ ಯೂನುಸ್ ಸರ್ಕಾರದ ವಿರೋಧವನ್ನು ಗಾಳಿಗೆ ತೂರಿ ಹಸೀನಾರನ್ನು ರಕ್ಷಿಸಿ ಇರಿಸಿಕೊಳ್ಳುವುದು ಕಷ್ಟವೇನಲ್ಲ. ಆದರೆ ಅರೆಕ್ಷಣವಾದರೂ ಚಿಂತೆಗೀಡು ಮಾಡುವುದು ಹಸೀನಾ ತಾವೇ ಮಾಡಿಕೊಂಡ ಒಪ್ಪಂದ ಇಂದು ಅವರ ವಿರುದ್ಧವೇ ಬಳಕೆಯಾಗುತ್ತಿರುವ ವಿಪರ್ಯಾಸದ ಬಗ್ಗೆ ಮಾತ್ರ.

ಹಸೀನಾ ಕುರಿತ ಯೂನುಸ್ ಸರ್ಕಾರದ ಮನವಿಯನ್ನು ತಿರಸ್ಕರಿಸುವುದರಿಂದಾಗಿ ಭಾರತ- ಬಾಂಗ್ಲಾದೇಶಗಳ ಸಂಬಂಧಗಳು ಹಾಳಾಗುತ್ತವೆ ಎಂದು ಚಿಂತಿಸುವ ಅಗತ್ಯವಿಲ್ಲ. ಅವು ಈಗಾಗಲೇ ಹಾಳಾಗಿವೆ, ಸರಿಪಡಿಸಿಕೊಳ್ಳುವ ಯಾವ ಇರಾದೆಯೂ ಯೂನುಸ್ ಸರ್ಕಾರಕ್ಕಿಲ್ಲ. ಯೂನುಸ್ ಸರ್ಕಾರ ಇಂದು ಭಾರತದಿಂದ ದೂರವಾಗಿ ಪಾಕಿಸ್ತಾನಕ್ಕೆ ಹತ್ತಿರವಾಗುತ್ತಿದೆ. 53 ವರ್ಷಗಳಲ್ಲಿ ಮೊದಲ ಬಾರಿಗೆ ಪಾಕ್ ನಾಗರಿಕರು ವೀಸಾ ಇಲ್ಲದೆ ಬಾಂಗ್ಲಾದೇಶಕ್ಕೆ ಪ್ರವೇಶಿಸಬಹುದಾಗಿದೆ. ಜತೆಗೆ ಸರಕುಗಳನ್ನು ಹೊತ್ತ ಪಾಕಿಸ್ತಾನಿ ಹಡಗುಗಳು ಬಾಂಗ್ಲಾದೇಶಿ ಬಂದರುಗಳಿಗೆ ನೇರವಾಗಿ ಬರತೊಡಗಿವೆ ಮತ್ತು ಅವು ತರುವ ವಸ್ತುಗಳನ್ನು ಕಸ್ಟಮ್್ಸ ತಪಾಸಣೆಯಿಲ್ಲದೆ ಯೂನುಸ್ ಸರ್ಕಾರ ದೇಶದೊಳಗೆ ಬಿಟ್ಟುಕೊಳ್ಳುತ್ತಿದೆ! ಅವುಗಳಲ್ಲಿ ಭಾರತದ ವಿರುದ್ಧ ಬಳಸಬಹುದಾದ ಹತ್ಯಾರಗಳಿರುವ ಸಾಧ್ಯತೆ ಇದೆ. ಟರ್ಕಿ ನಿರ್ವಿುತ ಆರು ಬೇರಿಕ್ತಾರ್ ಟಿಬಿ2 ಡ್ರೋನ್​ಗಳನ್ನು ಯೂನುಸ್ ಸರ್ಕಾರ ಭಾರತದ ವಿರುದ್ಧ ಬಳಸಲು ಸಜ್ಜಾಗಿರಿಸಿರುವ ಸುದ್ದಿ ತಿಂಗಳ ಹಿಂದೆಯೇ ಬಂತು. ಆ ಡ್ರೋನ್​ಗಳನ್ನು ಹಸೀನಾ ಸರ್ಕಾರವೇ ಖರೀದಿಸಿತ್ತು. ಉದ್ದೇಶ ಮಾತ್ರ ಕಳ್ಳಸಾಗಾಣಿಕೆ ಮತ್ತು ಸಮುದ್ರತೀರದಲ್ಲಿ ಕಾನೂನುಬಾಹಿರ ಚಟುವಟಿಕೆಗಳ ಮೇಲೆ ನಿಗಾ ಇರಿಸಲು. ಅವುಗಳನ್ನೀಗ ಭಾರತದ ವಿರುದ್ಧ ಬಳಸಲು ಹೊರಟಿರುವ ಯೂನುಸ್ ಸರ್ಕಾರ ತನ್ನ ಬತ್ತಳಿಕೆಯನ್ನು ವೃದ್ಧಿಸಿಕೊಳ್ಳಲು ಪಾಕಿಸ್ತಾನದಿಂದ ಶಸ್ತ್ರಾಸ್ತ್ರಗಳನ್ನು ಪಡೆದುಕೊಳ್ಳುತ್ತಿರಬಹುದೇ? ಆ ಸಾಧ್ಯತೆ ಇದೆ.

ಭಾರತದ ವಿರುದ್ಧ ಇಂದು ಬಾಂಗ್ಲಾದೇಶದಲ್ಲಿ ಅಪರಿಮಿತ ದ್ವೇಷದ ಮಾತುಗಳು ಹೊರಡುತ್ತಿರುವುದನ್ನು ಕೇಳುತ್ತಲೇ ಇದ್ದೇವೆ. ಇದನ್ನು ಮತ್ತೊಂದು ಮಜಲಿಗೇರಿಸಿದ ಯೂನುಸ್ ಸರ್ಕಾರದ ಪ್ರಮುಖ ಸದಸ್ಯ ಮಹಫೂಜ್ ಆಲಂ ‘ವಿಶಾಲ ಬಾಂಗ್ಲಾದೇಶ’ ಎಂಬ ಹೆಸರಿನಲ್ಲಿ ಭೂಪಟವೊಂದನ್ನು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದರು. ಪಶ್ಚಿಮ ಬಂಗಾಳ, ತ್ರಿಪುರಾ, ಅಸ್ಸಾಂ ಮತ್ತು ಮಿಜೋರಾಮ್ಳ ಕೆಲವು ಪ್ರದೇಶಗಳನ್ನು ಬಾಂಗ್ಲಾದೇಶದ ಭಾಗಗಳಾಗಿ ಆ ನಕ್ಷೆಯಲ್ಲಿ ತೋರಿಸಲಾಗಿತ್ತು! ಭಾರತದಿಂದ ವಿರೋಧವನ್ನು ನಿರೀಕ್ಷಿಸಿ (ಅದು ನಂತರ ಬಂತು) ಮಹಫೂಜ್ ಆಲಂ ಕೆಲತಾಸುಗಳ ನಂತರ ಆ ಪೋಸ್ಟ್ ಅನ್ನು ತೆಗೆದುಹಾಕಿದರೇನೋ ನಿಜ, ಆದರೆ ಇಂದಿನ ಬಾಂಗ್ಲಾದೇಶಿ ನಾಯಕರ ಮನಸ್ಥಿತಿ ಹೇಗಿದೆಯೆನ್ನುವುದಕ್ಕೆ ಈ ನಕ್ಷೆಯೊಂದು ಉದಾಹರಣೆಯಾಗುತ್ತದೆ. ಮಹಫೂಜ್ ಆಲಂ ಸಾಧಾರಣ ವ್ಯಕ್ತಿಯೇನಲ್ಲ. ಇದೇ ಸೆಪ್ಟೆಂಬರ್​ನಲ್ಲಿ ಮಹಮದ್ ಯೂನುಸ್ ಅಮೆರಿಕಕ್ಕೆ ಭೇಟಿಯಿತ್ತಾಗ ಇಪ್ಪತ್ತಾರು ವರ್ಷಗಳ ತಮ್ಮ ‘ಸಹೋದ್ಯೋಗಿ’ ಆಲಂರನ್ನು ಜತೆಗೆ ಕರೆದೊಯ್ದು ಅಧ್ಯಕ್ಷ ಬೈಡೆನ್ ಮತ್ತು ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರ ಮುಂದೆ ನಿಲ್ಲಿಸಿ, ‘ಕ್ರಾಂತಿಯ ರೂವಾರಿ’ ಎಂದು ಬಹುವಾಗಿ ಪ್ರಶಂಸಿಸಿದ್ದರು.

ಕಳೆದ ಏಳೆಂಟು ತಿಂಗಳುಗಳಲ್ಲಿ ಬಾಂಗ್ಲಾದೇಶದಲ್ಲಿ ಘಟಿಸಿದ್ದೆಲ್ಲವೂ ಆ ಇಬ್ಬರು ಅಮೆರಿಕನ್ ನಾಯಕರ ಪಿತೂರಿಯಿಂದಾಗಿಯೇ ಎಂಬ ವಾಸ್ತವದ ಹಿನ್ನೆಲೆಯಲ್ಲಿ ಅವರೊಂದಿಗೆ ಮಹಫೂಜ್ ಆಲಂರ ಭೇಟಿ ಮತ್ತು ಮೂರು ತಿಂಗಳ ನಂತರ ‘ಎಕ್ಸ್’ನಲ್ಲಿ ಕಾಣಿಸಿಕೊಂಡ ನಕ್ಷೆಯನ್ನು ನಾವು ಗಂಭೀರವಾಗಿಯೇ ತೆಗೆದುಕೊಳ್ಳಬೇಕಾಗಿದೆ. ಇವುಗಳೊಂದಿಗೆ ಪಾಕಿಸ್ತಾನದಿಂದ ಬರುತ್ತಿರುವ ರಹಸ್ಯ ಸಾಮಗ್ರಿಗಳನ್ನೂ ಸೇರಿಸಿದರೆ ಚುಕ್ಕೆಗಳು ಸೇರಿ ಪೂರ್ಣ ಚಿತ್ರ ನಮಗೆದುರಾಗಬಹುದು.

ಇಂತಹ ಸನ್ನಿವೇಶದಲ್ಲಿ ಭಾರತ ಏನು ಮಾಡಬಹುದು? ದೊಡ್ಡದೇನೂ ಮಾಡಬೇಕಾಗಿಲ್ಲ. ತಾಳ್ಮೆಯಿಂದ ಇನ್ನೊಂದು ತಿಂಗಳು ಕಾದರೆ ಸಾಕು. ಬಾಂಗ್ಲಾದೇಶದಲ್ಲಿ ಯೂನುಸ್ ಮತ್ತವರ ಗ್ರಾಮೀಣ ಬ್ಯಾಂಕ್ ಅನ್ನು ಎತ್ತಿಕಟ್ಟಿದ್ದೇ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್. ಅದೇ ಕ್ಲಿಂಟನ್ ಜತೆಗೆ ಇಂದು ಬೈಡೆನ್ ಸೇರಿ ಯೂನುಸ್​ರನ್ನು ಢಾಕಾದಲ್ಲಿ ಪಟ್ಟಕ್ಕೇರಿಸಿದ್ದೂ ಆಯಿತಷ್ಟೇ. ಇದು ನಾಲ್ಕು ದಿನಗಳ ನಾಟಕ ಅಷ್ಟೇ. 2016ರ ಅಧ್ಯಕ್ಷೀಯ ಚುನಾವಣೆಗಳಲ್ಲಿ ತಮ್ಮ ಪ್ರತಿಸ್ಪರ್ಧಿ ಹಿಲರಿ ಕ್ಲಿಂಟನ್​ರಿಗೆ ಧನಸಹಾಯ ಮಾಡಿದ್ದಕ್ಕಾಗಿ ಯೂನುಸ್ ಮೇಲೆ ಡೊನಾಲ್ಡ್ ಟ್ರಂಪ್ ಕಿಡಿಕಾರಿದ್ದರು. ತಮ್ಮನ್ನು ಭೇಟಿಯಾದ ಹಸೀನಾ ಸರ್ಕಾರದ ಪ್ರತಿನಿಧಿಗಳ ಮುಂದೆ ‘ಎಲ್ಲಿ ಆ ಮೈಕ್ರೋಫೈನಾನ್ಸ್ ಮನುಷ್ಯ?’ ಎಂದು ಲೇವಡಿಯಾಡಿದ್ದರು.

ಈಗ ಯೂನುಸ್ ದರ್ಬಾರಿನ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಾಗುತ್ತಿರುವ ದೌರ್ಜನ್ಯದ ವಿರುದ್ಧ ಇದೇ ದೀಪಾವಳಿಯ ಸಂದರ್ಭದಲ್ಲಿ ದನಿಯೆತ್ತಿದ ಟ್ರಂಪ್ ತಾವು ಅಧ್ಯಕ್ಷರಾದರೆ ಆ ಅತಿರೇಕಗಳನ್ನು ತಡೆಯಲು ಕ್ರಮ ಕೈಗೊಳ್ಳುವುದಾಗಿ ಘೊಷಿಸಿದರು. 2025ರ ಜನವರಿ 20ರಂದು ಅವರು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅಲ್ಲಿಗೆ ಯೂನುಸ್​ರಿಗೆ ಅಮೆರಿಕ ಸರ್ಕಾರಿ ವ್ಯವಸ್ಥೆಯಿಂದ ಸಿಕ್ಕಿದ ಎಲ್ಲ ಸವಲತ್ತು ಹಾಗೂ ಬೆಂಬಲಗಳು ನಿಂತುಹೋಗುತ್ತವೆ. ಕೇವಲ ಕ್ಲಿಂಟನ್ ಗ್ಲೋಬಲ್ ಫೌಂಡೇಶನ್ ಮತ್ತು ಜಾರ್ಜ್ ಸೊರೋಸ್​ನ ಓಪನ್ ಸೊಸೈಟಿ ಫೌಂಡೇಶನ್​ಗಳ ಸಹಾಯದಿಂದ ಯೂನುಸ್ ಅಧಿಕಾರದಲ್ಲಿ ಮುಂದುವರಿಯಲಾಗುವುದಿಲ್ಲ. ಆ ಹೊತ್ತಿಗೆ ಬಾಂಗ್ಲಾದೇಶದಲ್ಲಿ ಈಗಾಗಲೇ ಆರಂಭವಾಗಿರುವ ಆಹಾರ ಕೊರತೆ ಮತ್ತು ಆರ್ಥಿಕ ಕುಸಿತ ತಾರಕ್ಕೇರಿರುತ್ತದೆ. ಯೂನುಸ್ ಕೇಳಿರುವ ಐವತ್ತು ಸಾವಿರ ಟನ್ ಅಕ್ಕಿಯನ್ನು ಪೂರೈಸುವ ಮನಸ್ಸು ಭಾರತಕ್ಕಿಲ್ಲ. ಜತೆಗೆ ಅಲ್ಲಿನ ಸಿದ್ಧ ಉಡುಪು ಕೈಗಾರಿಕೆಗಾಗಿ ಭಾರತದಿಂದ ಬಟ್ಟೆಗಳು ಹೋಗುವುದೂ ನಿಂತುಹೋಗಿದೆ. ಇವ್ಯಾವುಗಳನ್ನೂ ಪೂರೈಸುವ ಸ್ಥಿತಿಯಲ್ಲಿ ಪಾಕಿಸ್ತಾನ ಇಲ್ಲ. ಅಲ್ಲಿಗೆ ಜನಾಕ್ರೋಶ ಯೂನುಸ್​ರನ್ನು ನುಂಗಿಹಾಕಲು ಬಾಯಿ ತೆರೆದು ನಿಂತಾಗಿರುತ್ತದೆ. ಆಗ ಮಹಫೂಜ್ ಆಲಂರಂತಹವರ ಬಾಯಿಗಳು ಬಂದ್ ಆಗುತ್ತವೆ, ಅವರ ನಕ್ಷೆ ಮೂಲೆ ಸೇರುತ್ತದೆ. ಬದಲಿಗೆ, 1947ರಲ್ಲಿ ನೆಹರುರ ನಿರ್ಲಕ್ಷ ್ಯನದಿಂದಾಗಿ ನಾವು ಕಳೆದುಕೊಂಡ ಚಿತ್ತಗಾಂಗ್ ಗುಡ್ಡಗಾಡು ಪ್ರದೇಶದೊಂದಿಗೆ ಉತ್ತರದ ರಂಗ್​ಪುರ್​ನ ಕೆಲವು ಭಾಗಗಳೂ ನಮ್ಮದಾಗಿ ಪೂವೋತ್ತರ ಭಾರತಕ್ಕೆ ಸಂಪರ್ಕ ಕಲ್ಪಿಸುವ ಸಿಲಿಗುರಿ ಕಾರಿಡಾರ್ ಅಗಲವಾಗಿರುವ ಹೊಸ ನಕ್ಷೆ ತಯಾರಾಗಲು ಕ್ಷಣಗಣನೆ ಆರಂಭವಾಗುತ್ತದೆ. ಅದರ ಮೊದಲ ರೇಖೆಗಳನ್ನು ಮ್ಯಾನ್ಮಾರ್​ನ ಅರಕಾನ್ ಸೇನೆ ಈಗಾಗಲೇ ಎಳೆಯತೊಡಗಿದೆ. ಇದೆಲ್ಲದರ ಪೂರ್ಣ ಚಿತ್ರವನ್ನು ಮುಂದಿನವಾರ ಸರಣಿಯ ಅಂತಿಮ ಭಾಗದಲ್ಲಿ ನೀಡುತ್ತೇನೆ.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)