ಅಂಕಣ

ವಾಮಾಚಾರಕ್ಕೆ ಬಲಿಯಾದ ಯುವತಿಯರು: ಆ ಕ್ಷಣ...

ಮದನಪಲ್ಲಿ ಆಂಧ್ರಪ್ರದೇಶದ ಒಂದು ಪಟ್ಟಣ. ಇಲ್ಲಿನ ಕಾಲೇಜೊಂದರಲ್ಲಿ ಮಧ್ಯಮ ವರ್ಗದ ಕುಟುಂಬದಿಂದ ಬಂದಿದ್ದ 55 ವರ್ಷದ ಜಯರಾಂ ನಾಯ್ಡು ರಾಸಾಯನಿಕ ಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದರು. ಆತನ 50 ವರ್ಷ ವಯಸ್ಸಿನ ಪತ್ನಿ ಸಂಧ್ಯಾ ಸ್ನಾತಕೋತ್ತರ ಪದವಿಯ ನಂತರ ಸ್ಥಳೀಯ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇರಿ ಅಲ್ಲಿಯೇ ಪ್ರಿನ್ಸಿಪಾಲ್ ಆಗಿದ್ದರು. ಈ ದಂಪತಿಗೆ ಲಾವಣ್ಯ ಮತ್ತು ಅನನ್ಯಾ ಎಂಬ ಇಬ್ಬರು ಹೆಣ್ಣುಮಕ್ಕಳಿದ್ದರು. 27 ವರ್ಷದ ಲಾವಣ್ಯ ಉತ್ತರ ಭಾರತದ ಮ್ಯಾನೇಜ್​ವೆುಂಟ್ ಕಾಲೇಜಿನಲ್ಲಿ ಎಂಬಿಎ ಪದವಿ ಪಡೆದು ಕೆಲ ತಿಂಗಳ ಹಿಂದಷ್ಟೇ ಮನೆಗೆ ವಾಪಸಾಗಿದ್ದಳು. 22 ವರ್ಷದ ಅನನ್ಯಾ ಪದವಿ ಗಳಿಸಿದ ನಂತರ ಮನೆಯಲ್ಲಿಯೇ ಇದ್ದಳು.

ಅನನ್ಯಾ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಕಾರಣ ಕುಟುಂಬದವರಿಗೆ ಅವಳ ಬಗ್ಗೆ ಚಿಂತೆಯಿತ್ತು. ತಜ್ಞ ಮನೋವೈದ್ಯರಿಗೆ ತೋರಿಸಿದ್ದರೂ ಆಕೆಗೆ ಗುಣವಾಗಿರಲಿಲ್ಲ. ನಾಯ್ಡು ದಂಪತಿ ಮಗಳನ್ನು ಜ್ಯೋತಿಷಿಗಳು, ಬಾಬಾಗಳು, ನಾಟಿ ವೈದ್ಯರು ಹೀಗೆ ವಿಧವಿಧವಾದ ಜನರ ಬಳಿ ಕೊಂಡೊಯ್ದರು. ಯಾವ ಫಲವೂ ಲಭಿಸಲಿಲ್ಲ. ಆಗ ಲಾವಣ್ಯ, ತಾನು ಉತ್ತರ ಭಾರತದಲ್ಲಿ ಕಾಲೇಜಿನಲ್ಲಿದ್ದಾಗ ಸೋದರಿ ಬಗ್ಗೆಯೇ ಚಿಂತೆಯಾಗುತ್ತಿತ್ತೆಂದು ತಿಳಿಸಿ ಆಕೆಯ ಸಮಸ್ಯೆಗೆ ಪರಿಹಾರ ಹುಡುಕಲು ತಾಂತ್ರಿಕನೊಬ್ಬನ ಪರಿಚಯ ಮಾಡಿಕೊಂಡಿದ್ದಾಗಿ ತಿಳಿಸಿದಳು. ತಾನು ಅಮಾವಾಸ್ಯೆಯ ರಾತ್ರಿಗಳನ್ನು ಸ್ಮಶಾನಗಳಲ್ಲಿ ಕಳೆದು ಆ ತಾಂತ್ರಿಕ ಹೇಳಿದ ಜಪತಪಗಳನ್ನು ಮಾಡಿ ತಾಂತ್ರಿಕ ವಿದ್ಯೆ ಸಿದ್ಧಿಸಿಕೊಂಡಿರುವುದಾಗಿ ಹೇಳಿದಳು. ತಂಗಿಯ ಕಾಯಿಲೆ ಬಗ್ಗೆ ತನ್ನ ಗುರುವಿನೊಂದಿಗೆ ಮಾತನಾಡಿ ಆ ರೋಗವನ್ನು ಸುಲಭವಾಗಿ ಗುಣಪಡಿಸಬಹುದಾದ ವಿಧಿವಿಧಾನವನ್ನು ಕಲಿತು ಬಂದಿದ್ದೇನೆ ಎಂದಳು.

ಸೋದರಿಗಾಗಿ ಲಾವಣ್ಯ ತೋರಿಸಿದ ಕಾಳಜಿ ಕುಟುಂಬದವರಿಗೆ ಅವಳ ಮೇಲೆ ಹೆಮ್ಮೆ ತರಿಸಿತ್ತು. ಮರುದಿನವೇ ಅಮಾವಾಸ್ಯೆಯಾಗಿದ್ದ ಕಾರಣ ಆ ರಾತ್ರಿಯಿಂದಲೇ ಮನೆಯ ಪೂಜಾಕೊಠಡಿಯಲ್ಲಿ ಲಾವಣ್ಯ ತಾಂತ್ರಿಕ ಪೂಜಾ ವಿಧಿವಿಧಾನಗಳನ್ನು ಮಾಡತೊಡಗಿದಳು. ಭಕ್ತಿಯಿಂದ ಪೂಜೆ ಮಾಡಿದರೆ ತಾವೆಲ್ಲರೂ ತಮ್ಮ ದೇಹದಲ್ಲಿ ಶಿವ-ಪಾರ್ವತಿಯರನ್ನು ಆವಾಹಿಸಿಕೊಳ್ಳಬಹುದೆಂದು ಎಲ್ಲರನ್ನೂ ನಂಬಿಸಿದಳು. ಮುಂದಿನ ಅಮಾವಾಸ್ಯೆವರೆಗೂ ಭಕ್ತಿಯಿಂದ ಪೂಜೆ ಮಾಡಿದರೆ ಶಿವಪಾರ್ವತಿಯರು ತಮಗೊಲಿದು ಅನನ್ಯಾಳನ್ನು ಗುಣಪಡಿಸುತ್ತಾರೆ ಎಂದಳು. ಮುಂದಿನ ಹಲವಾರು ರಾತ್ರಿಗಳು ನಾಯ್ಡು ಮನೆಯಿಂದ ಗಂಟೆಯ ನಿನಾದ, ಮಂತ್ರಘೊಷ ಮುಂತಾದವು ಕೇಳಿಬರತೊಡಗಿದಾಗ ಅಕ್ಕಪಕ್ಕದವರು ಗಾಬರಿಗೊಂಡು ಅವರ ಮನೆಗೆ ಹೋಗಿ ವಿಚಾರಿಸಿದರು. ‘ಮಕ್ಕಳ ಅಭಿವೃದ್ಧಿಗಾಗಿ ಮನೆಯಲ್ಲಿ ವಿಶೇಷ ಪೂಜೆಗಳನ್ನು ಮಾಡುತ್ತಿದ್ದೇವೆ, ಕೆಲ ಸಮಯ ಸಹಿಸಿಕೊಂಡಿರಿ’ ಎಂದು ಜಯರಾಂ ಹೇಳಿದ. ಆ ಮನೆಯಲ್ಲಿದ್ದವರು ವಿದ್ಯಾವಂತರಾಗಿದ್ದು ನಾಯ್ಡು ದಂಪತಿ ಶಿಕ್ಷಕರಾಗಿದ್ದ ಕಾರಣ ನೆರೆಯವರು ಹೆಚ್ಚು ಮಾತನಾಡದೇ ಸುಮ್ಮನಾದರು.

ಮುಂದಿನ ಕೆಲವು ದಿನಗಳ ಪೂಜೆಯ ನಂತರ ಲಾವಣ್ಯ ‘ಕೆಲವೇ ದಿನಗಳಲ್ಲಿ ಶಿವ-ಪಾರ್ವತಿ ಮನೆಗೆ ಬರಲಿದ್ದಾರೆ’ ಎಂದು ಹೇಳಿ ಪೂಜಾಕೊಠಡಿಯನ್ನು ವಿಶೇಷವಾಗಿ ಸಜ್ಜುಗೊಳಿಸಿದಳು. ಮಾರುಕಟ್ಟೆಯಿಂದ ಒಂದು ತ್ರಿಶೂಲ ತಂದು ಅದಕ್ಕೆ ನಿಂಬೆಹಣ್ಣನ್ನು ಸಿಕ್ಕಿಸಿ, ಜತೆಗೆ ಶಿವನ ಡಮರುಗವೆಂದು ಮನೆಯಲ್ಲಿದ್ದ ಒಂದು ಕಬ್ಬಿಣದ ಡಂಬೆಲ್ಲಿಗೆ ಪೂಜೆ ಮಾಡತೊಡಗಿದಳು. ಕೆಲ ದಿನಗಳ ನಂತರ, ತನ್ನ ಕನಸಿನಲ್ಲಿ ಶಿವ-ಪಾರ್ವತಿ ಪ್ರತ್ಯಕ್ಷವಾಗಿ ಕೆಲವೇ ದಿನಗಳಲ್ಲಿ ಸತ್ಯಯುಗ ಬರುತ್ತದೆ, ಆಗ ನಮಗೆಲ್ಲರಿಗೂ ತುಂಬ ಶ್ರೇಯಸ್ಸಾಗುತ್ತದೆ ಎಂದು ಹೇಳಿರುವುದಾಗಿ ಲಾವಣ್ಯ ತಿಳಿಸಿದಳು. ಅವರೆಲ್ಲರೂ ಮಗಳ ಮಾತು ನಂಬಿ ಆಕೆ ಹೇಳಿದಂತೆಯೇ ನಡೆಯಲು ತಯಾರಾದರು. ‘ನಾವೆಲ್ಲ ಈಗ ಕಲಿಯುಗದಲ್ಲಿದ್ದು, ಮುಂದಿನ ಅಮಾವಾಸ್ಯೆ ದಿನ ಆ ಯುಗ ಮುಗಿಯುತ್ತದೆ, ನಂತರ ಸತ್ಯಯುಗ ಬರುತ್ತದೆ. ಕಲಿಯುಗ ದಲ್ಲಿ ಪ್ರಾಣತ್ಯಾಗ ಮಾಡಿದರೆ ನಮ್ಮ ಮುಂದಿನ ಜನ್ಮ ಸತ್ಯಯುಗದಲ್ಲಿ ಆಗುತ್ತದೆ. ಹಾಗಾಗಿ ಸತ್ಯಯುಗವನ್ನು ಎದುರುಗೊಳ್ಳಲು ನಮ್ಮ ಪ್ರಾಣವನ್ನು ಕಳೆದುಕೊಳ್ಳಬೇಕು’ ಎಂದಳು.

ಅಂದರೆ ನಾವೆಲ್ಲ ಆತ್ಮಹತ್ಯೆ ಮಾಡಿಕೊಳ್ಳಬೇಕೇ ಎಂದು ಕುಟುಂಬದವರು ಕೇಳಿದಾಗ, ‘ನಾವು ಕೆಲವೇ ನಿಮಿಷಗಳಲ್ಲಿ ಪುನರ್ಜನ್ಮ ಪಡೆಯುವುದರಿಂದ ಇದು ಸಾವೆಂದೆನಿಸಿಕೊಳ್ಳುವುದಿಲ್ಲ. ಪ್ರಾಣತ್ಯಾಗ ಮಾಡಿದ ಕೆಲವೇ ಕ್ಷಣಗಳ ನಂತರ ಇದೇ ರೂಪದಲ್ಲಿ ಮರುಜನ್ಮ ತಳೆಯುತ್ತೇವೆ. ಆಗ ರೋಗಮುಕ್ತರಾಗಿರುತ್ತೇವೆ’ ಎಂದಳು. ಅಮಾವಾಸ್ಯೆಯ ರಾತ್ರಿ 11 ಗಂಟೆಗೆ ಆಕೆ ಪೂಜಾಕ್ರಮವನ್ನು ಆರಂಭಿಸಿದಳು. ಮಧ್ಯರಾತ್ರಿ ನಂತರವೂ ನಾಯ್ಡು ಮನೆಯ ಅಕ್ಕಪಕ್ಕದವರಿಗೆ ಎಂದಿಗಿಂತ ಜೋರಾಗಿ ಮಂತ್ರ, ಜಾಗಟೆ ಶಬ್ದಗಳು ಕೇಳಿಬಂದದ್ದಲ್ಲದೆ ಯಾರೋ ಜೋರಾಗಿ ಚೀರಿದ ಶಬ್ದವೂ ಕೇಳಿಸಿತು. ಅಕ್ಕಪಕ್ಕದವರು ಇವರ ಮನೆಯಿಂದಾಗುತ್ತಿದ್ದ ಶಬ್ದಮಾಲಿನ್ಯ ತಡೆಯಲಾರದೆ ಪೊಲೀಸರಿಗೆ ಕರೆ ಮಾಡಿದರು. ಪೊಲೀಸರು ಆ ಮನೆ ಬಳಿ ಬಂದಾಗ ಬೆಳಗಿನ 1 ಗಂಟೆಯಾಗಿತ್ತು. ಮನೆಬಾಗಿಲನ್ನು ಬಡಿದಾಗ ಜಯರಾಂ ಬಾಗಿಲನ್ನು ತೆರೆದ. ‘ಈ ಸರಿರಾತ್ರಿಯಲ್ಲಿ ಏಕಿಷ್ಟು ಸಪ್ಪಳ ಮಾಡುತ್ತಿರುವಿರಿ?’ ಎಂದು ಕೇಳಿದಾಗ, ‘ಮನೆಗೆ ಕಲಿಪುರುಷ ಈಗ ತಾನೇ ಬಂದಿದ್ದಾನೆ, ಮನೆಯನ್ನು ಶುದ್ಧೀಕರಿಸುತ್ತಿದ್ದೇವೆ, ಇಲ್ಲಿಂದ ಹೊರಟು ಹೋಗಿ’ ಎಂದ. ಅವನ ಅಸಂಬದ್ಧ ಮಾತುಗಳಿಂದ ಸಂಶಯಗೊಂಡ ಪೊಲೀಸರು ಏನಾಗುತ್ತಿದೆ ಎಂದು ನೋಡಲು ಮನೆಯೊಳಗೆ ಹೋದರು. ಆಗ ಅವರು ಕಂಡ ದೃಶ್ಯ ಭಯಾನಕವಾಗಿತ್ತು. ಇಬ್ಬರೂ ಯುವತಿಯರು ಸತ್ತು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಒಬ್ಬಳ ತಲೆಯನ್ನು ಬಲವಾದ ವಸ್ತುವಿನಿಂದ ಜಜ್ಜಲಾಗಿತ್ತು. ಇನ್ನೊಬ್ಬಳ ಕುತ್ತಿಗೆಯನ್ನು ಹರಿತವಾದ ಆಯುಧದಿಂದ ಸೀಳಲಾಗಿತ್ತು. ಶವಗಳ ಪಕ್ಕದಲ್ಲಿ ಒಂದು ಡಂಬೆಲ್ ಹಾಗೂ ಒಂದು ತ್ರಿಶೂಲ ಬಿದ್ದಿದ್ದವು. ಅಷ್ಟರಲ್ಲಿ ಅವರಿಗೆದುರಾದ ಸಂಧ್ಯಾ ಭೂತ ಬಂದವಳಂತೆ ಕುಣಿಯುತ್ತ ಮಂತ್ರ ಪಠಿಸುತ್ತಿದ್ದಳು. ‘ಇದೆಲ್ಲ ಹೇಗಾಯಿತು, ಈ ಯುವತಿಯರನ್ನು ಕೊಂದವರು ಯಾರು?’ ಎಂದು ಪ್ರಶ್ನಿಸಿದಾಗ ಜಯರಾಂ, ‘ಇವರಿಬ್ಬರೂ ಸತ್ತಿಲ್ಲ. ಇನ್ನು ಅರ್ಧಗಂಟೆಯೊಳಗೆ ಇವರು ಬದುಕಿ ಬರುತ್ತಾರೆ’ ಎಂದ. ಪತ್ನಿಯನ್ನು ತೋರಿಸಿ, ಇವಳೊಳಗೆ ಶಿವಪಾರ್ವತಿಯರಿಬ್ಬರೂ ಆವಾಹನೆಯಾಗಿದ್ದಾರೆಂದು ಅವಳಿಗೆ ನಮಸ್ಕರಿಸುತ್ತ, ಇವಳ ಮಂತ್ರ ಮುಗಿದ ಕೂಡಲೇ ಮಕ್ಕಳಿಬ್ಬರೂ ಕಣ್ತೆರೆಯುತ್ತಾರೆ ಎಂದ. ‘ಪೂಜೆಯನ್ನು ಭಂಗಗೊಳಿಸಿದಿರಿ. ಅರ್ಧಗಂಟೆ ನಂತರ ಬಂದಿದ್ದರೆ ನಾನು ಮತ್ತು ಪತ್ನಿ ಇಬ್ಬರೂ ದೇಹತ್ಯಾಗ ಮಾಡಿ ಪುನರ್ಜನ್ಮ ಪಡೆಯುತ್ತಿದ್ದೆವು’ ಎಂದ. ಅವನ ಮಾತುಗಳನ್ನು ಕೇಳಿ ಪೊಲೀಸರು ಆಶ್ಚರ್ಯಗೊಂಡರು. ಕೂಡಲೇ ಹೆಚ್ಚಿನ ಸಿಬ್ಬಂದಿಗೆ ಅಲ್ಲಿಗೆ ಬರಲು ವಿನಂತಿಸಿ ದಂಪತಿಯನ್ನು ಕೋಣೆಯಲ್ಲಿ ಕೂಡಿಹಾಕಿದರು.

ಶವಗಳ ಮೇಲೆ ಪಂಚನಾಮೆ ಮಾಡಿದಾಗ ಅನನ್ಯಾ ತಲೆಗೆ ಡಂಬೆಲ್​ನಿಂದ ಜಜ್ಜಿ ಕೊಂದಿರುವುದು ಸ್ಪಷ್ಟವಾಗಿತ್ತು. ಲಾವಣ್ಯಳ ಕುತ್ತಿಗೆಯನ್ನು ತ್ರಿಶೂಲದಿಂದ ಛೇದಿಸಿದ್ದ ಕಾರಣ ಅವಳು ಬಿದ್ದ ಜಾಗದ ಸುತ್ತಲೂ ರಕ್ತದ ಕೋಡಿ ಹರಿದಿತ್ತು. ಇದಲ್ಲದೆ ಆಕೆಯ ನಾಲಿಗೆಯನ್ನೂ ಕತ್ತರಿಸಲಾಗಿದ್ದು ಅದರ ತುಂಡೂ ಅಲ್ಲಿಯೇ ಬಿದ್ದಿತ್ತು. ಜಯರಾಂನನ್ನು ಹಿರಿಯ ಅಧಿಕಾರಿಗಳು ವಿಚಾರಿಸಿದಾಗ ಆತ ಹೇಳಿದ್ದೇನೆಂದರೆ, ‘ನನ್ನ ಹಿರಿಯ ಮಗಳ ದೇಹದ ಮೇಲೆ ಶಿವ ಬಂದಾಗ ಅವಳು ಸೋದರಿ ತಲೆಗೆ ಶಿವನ ಡಮರುಗದಿಂದ ಜೋರಾಗಿ ಬಾರಿಸಿ ಕೊಂದಳು, ಆನಂತರ ತನ್ನ ನಾಲಿಗೆಯನ್ನು ಕತ್ತರಿಸಿ, ಕುತ್ತಿಗೆಯನ್ನು ತ್ರಿಶೂಲದಿಂದ ತಿವಿಯಲು ನನ್ನ ಪತ್ನಿಗೆ ಸೂಚಿಸಿದಳು. ನಾಲಿಗೆ ಕತ್ತರಿಸಿದಾಗ ಕಾಳಿಯ ಅವತಾರ ಪಡೆದು ತಂಗಿಗೆ ಮರುಜನ್ಮ ಕೊಡುವುದಾಗಿ ಹೇಳಿದಳು. ಸಂಧ್ಯಾ ಮಗಳ ನಾಲಿಗೆಯನ್ನು ಚಾಕುವಿನಿಂದ ಕೊಯ್ದು ನಂತರ ತ್ರಿಶೂಲದಿಂದ ಕುತ್ತಿಗೆಗೆ ಚುಚ್ಚಿದಳು. ಸಂಧ್ಯಾ ಶಿವನ ತಾಂಡವನೃತ್ಯ ಆಡುತ್ತ ನನ್ನನ್ನು ಕೊಂದು ನಂತರ ಅವಳೂ ಸಾಯಬೇಕಾಗಿತ್ತು. ಅಷ್ಟರಲ್ಲಿ ನೀವು ಮನೆಯ ಬಾಗಿಲು ಬಡಿದಿರಿ’ ಎಂದ.

ಸಂಧ್ಯಾಳನ್ನು ಪ್ರಶ್ನೆ ಮಾಡಿದಾಗ, ‘ಸತ್ಯಯುಗವನ್ನು ಬರಮಾಡಿಕೊಳ್ಳಲು ಪೂಜೆ ಮಾಡುತ್ತಿದ್ದೆವು. ಈಗಲೂ ಕಾಲ ಮಿಂಚಿಲ್ಲ, ಪೂಜೆ ಮುಂದುವರಿಸಲು ಅನುಕೂಲ ಮಾಡಿಕೊಡಿ, ಇಬ್ಬರೂ ಮಕ್ಕಳಿಗೆ ಜೀವ ಬರುವಂತೆ ಮಾಡುತ್ತೇವೆ’ ಎಂದಳು. ಅವಳ ಮಾತುಗಳನ್ನು ಜಯರಾಂ ಸಹ ಅನುಮೋದಿಸಿದ. ಶಾಲೆಯ ಪ್ರಿನ್ಸಿಪಾಲ್ ಆಗಿರುವ ಆಕೆ ಹಾಗೂ ಪಿಎಚ್​ಡಿ ಪದವೀಧರನಾದ ಜಯರಾಂ ಹಾಗೆ ಮಾತನಾಡುತ್ತಿರುವುದನ್ನು ಕಂಡು ಪೊಲೀಸರು ಬೆರಗಾದರು. ಹೀಗಾಗಿ ಅವರನ್ನು ಬಂಧಿಸಿದ ನಂತರ ನ್ಯಾಯಾಧೀಶರ ಅಪ್ಪಣೆ ಮೇರೆಗೆ ಅವರಿಬ್ಬರನ್ನೂ ಮನೋ ವೈದ್ಯರಿಂದ ತಪಾಸಣೆ ಮಾಡಿಸಲು ಆಸ್ಪತ್ರೆಗೆ ಸೇರಿಸಲಾಯಿತು. ಈ ಪ್ರಕರಣ ಇನ್ನೂ ವಿಚಾರಣೆಗೆ ಬಂದಿಲ್ಲ. ಇದೇ ರೀತಿಯೇ ದೆಹಲಿಯ ಬುರಾರಿಯಲ್ಲಿ 2018ರಲ್ಲಿ ಹನ್ನೊಂದು ಜನರ ಹತ್ಯಾಕಾಂಡವಾಗಿತ್ತು. ‘ಮನೆಯ ತೊರೆದೋಡಲೇಂ? ವನಗುಹೆಯ ಸಾರಲೇಂ? ತನುವನುಗ್ರಹವ್ರತಗಳಿಂದೆ ದಂಡಿಸಲೇಂ? ಬಿನದಗಳನರಸಿ ನೀನೂರೂರೊಳಲೆದೊಡೇಂ? ಮನವತೊರೆದಿರಲಹುದೆ ಮಂಕುತಿಮ್ಮ’ ಎಂದಂತೆ ಮನಸ್ಸಿನ ವಿಕಾರದಿಂದ ತಪ್ಪಿಸಿಕೊಳ್ಳಲಾರದವರು ಎಷ್ಟು ಕಲಿತರೇನು ಫಲ?

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)