| ಬಸವರಾಜ ಗಿರಗಾಂವಿ
ಕೃಷಿಯಲ್ಲಿ ಯೂರಿಯಾ ಗೊಬ್ಬರದ್ದು ಮಹತ್ವದ ಪಾತ್ರ. ಸಾರಜನಕ ಪೋಷಕಾಂಶವನ್ನು ಬಿಡುಗಡೆ ಮಾಡಿ ಬೆಳೆಗಳ ಪೋಷಣೆ ಮಾಡುವುದರಿಂದ ಯೂರಿಯಾ ಗೊಬ್ಬರ ಯಾವುದೇ ಬೆಳೆಗೂ ಬಹಳ ಸಹಕಾರಿ. ಹಾಗಾಗಿಯೇ ಜಗತ್ತಿನಾದ್ಯಂತ ಕೃಷಿಯಲ್ಲಿ ಯೂರಿಯಾ ಬಳಕೆ ಸಾಮಾನ್ಯವಾಗಿಬಿಟ್ಟಿದೆ. ಜಗತ್ತಿನಲ್ಲಿ ಉತ್ಪಾದನೆಯಾಗುವ ಒಟ್ಟಾರೆ ಯೂರಿಯಾದಲ್ಲಿ ಶೇ. 90ರಷ್ಟು ಯೂರಿಯಾ ಕೃಷಿ ಕ್ಷೇತ್ರದಲ್ಲೇ ಉಪಯೋಗವಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಯೂರಿಯಾ ಮತ್ತು ಇತರ ರಸಗೊಬ್ಬರಗಳು ಸಮಯಾನುಸಾರ ನಿರೀಕ್ಷಿಸಿದಷ್ಟು ದೊರೆಯುತ್ತಿಲ್ಲ. ಪ್ರತಿ ವರ್ಷ ಭಾರತದ ಅನೇಕ ಕಡೆಗಳಲ್ಲಿ ಯೂರಿಯಾ ಗೊಬ್ಬರದ ಅಭಾವ ಸೃಷ್ಟಿಯಾಗುತ್ತಲೇ ಇದೆ. ಇದು ಸರಕಾರಕ್ಕೆ ಹಾಗೂ ಕೃಷಿಕರಿಗೆ ಪ್ರತಿ ವರ್ಷವೂ ದೊಡ್ಡ ತಲೆನೋವಾಗಿ ಪರಿಣಮಿಸುತ್ತದೆ. ಮಳೆಗಾಲದ ಆರಂಭದ ಅವಧಿಯಲ್ಲಿ ಬೀಜಗಳ ಬಿತ್ತನೆ ಹಾಗೂ ಸಸಿಗಳ ನಾಟಿಯ ಸಂದರ್ಭದಲ್ಲಿ ರೈತರು ರಾಸಾಯನಿಕ ಗೊಬ್ಬರಗಳ ಮಾರಾಟ ಮಳಿಗೆಗಳ ಎದುರು ಹಾಗೂ ಸರ್ಕಾರದ ದಾಸ್ತಾನು ಕೇಂದ್ರಗಳ ಮುಂದೆ ಸಾಲುಗಟ್ಟಿ ನಿಲ್ಲುತ್ತಾರೆ. ಇಂಥ ಕ್ಲಿಷ್ಟಕರ ಸಂದರ್ಭಗಳಲ್ಲಿ ಲಾಠಿ ಚಾರ್ಜ್, ಕರ್ಫ್ಯೂ, ಗೋಲಿಬಾರ್ನಂತಹ ಪ್ರಕರಣಗಳೂ ನಡೆದು ಸರಕಾರವೇ ಇಕ್ಕಟ್ಟಿಗೆ ಸಿಲುಕಿರುವುದೂ ಉಂಟು. ಆದರೂ ರೈತರಿಗೆ ಅಗತ್ಯವಿರುವಷ್ಟು ಪ್ರಮಾಣದ ಯೂರಿಯಾ ಸಿಗದಿರುವುದು ಹಾಗೂ ಈ ಸಮಸ್ಯೆಗೆ ಇಲ್ಲಿಯತನಕ ಶಾಶ್ವತ ಪರಿಹಾರ ದೊರೆಯದಿರುವುದು ಸತ್ಯ. ಈ ಸಮಸ್ಯೆಯನ್ನು ಪರಿಹರಿಸಲು ಸರಕಾರಗಳು ಕಾಲಕಾಲಕ್ಕೆ ಪ್ರಯತ್ನ ಪಡುತ್ತಲೇ ಇವೆ. ಆದರೆ ಈ ವಿಷಯದಲ್ಲಿ ರೈತರು ಗಮನಿಸಬೇಕಾದ ಅಂಶವೊಂದಿದೆ. ಇದಕ್ಕೆ ಸರ್ಕಾರದ ಮೇಲೆ ಅವಲಂಬಿತರಾಗದೇ ತಮ್ಮ ಮನೆಯಲ್ಲಿಯೇ ಸಾವಯವ ಯೂರಿಯಾ ಗೊಬ್ಬರ ತಯಾರಿಸಿ ಹಣ ಮತ್ತು ಸಮಯವನ್ನು ಉಳಿಸಬಹುದಾಗಿದೆ.
ಸದ್ಯ ದೇಶವು ರಸಗೊಬ್ಬರಗಳ ಅಭಾವ ಎದುರಿಸುತ್ತಿದೆ. ಅದಲ್ಲದೆ ಪ್ರತಿ ವರ್ಷ ಗೊಬ್ಬರದ ಬೆಲೆಯೂ ಹೆಚ್ಚಾಗುತ್ತಿದೆ. ಹೀಗಾಗಿ ರೈತರು ಯೂರಿಯಾಗೆ ಪರ್ಯಾಯ ಗೊಬ್ಬರದ ಹುಡುಕಾಟದಲ್ಲಿದ್ದಾರೆ. ಆದರೆ ಈ ರಸಗೊಬ್ಬರದ ಸ್ಥಾನವನ್ನು ಬೇರೊಂದು ರಸಗೊಬ್ಬರವು ತುಂಬುತ್ತದೆ ಎಂಬ ಕಲ್ಪನೆಯೂ ಸಹ ಸದ್ಯದ ಮಟ್ಟಿಗೆ ಗೋಚರಿಸದಂತಾಗಿದೆ. ಈ ನಡುವೆ ಇತ್ತೀಚೆಗೆ ಬಿಡುಗಡೆಯಾಗಿರುವ ಇಫ್ಕೋ ಕಂಪನಿಯ ನ್ಯಾನೋ ಯೂರಿಯಾ ಗೊಬ್ಬರವು ಭವಿಷ್ಯದಲ್ಲಿ ರೈತರ ಪಾಲಿನ ಆಶಾಕಿರಣವಾಗಿ ಹೊರಹೊಮ್ಮುವಂತೆ ಗೋಚರಿಸುತ್ತಿದೆ. ಇದು ಒಂದು ಸಂತೋಷದ ಬೆಳವಣಿಗೆಯಾಗಿದೆ.
ರೈತರು ಸ್ವತಃ ಯೂರಿಯಾ ತಯಾರಿಸಿ ಉಪಯೋಗಿಸಿದರೆ ದೊಡ್ಡ ಸಮಸ್ಯೆ ಪರಿಹಾರವಾದಂತಾಗುತ್ತದೆ. ಇದು ಸಾಧ್ಯವಿದೆ. ದೇಸಿ ಅಂದರೆ ಸಾವಯವ ಪದ್ದತಿ ಮೂಲಕ ಎಮ್ಮೆ, ಹಸು ಮತ್ತಿತರ ದನಕರುಗಳ ಗಂಜಲು (ದೇಸಿ ರಾಸುಗಳ ಗಂಜಲವಾದರೆ ಉತ್ತಮ) ಮತ್ತು ಮರಳನ್ನು ಬಳಸಿ ಕೇವಲ ಒಂದು ತಿಂಗಳಲ್ಲಿ ತಮಗೆ ಅಗತ್ಯವಿರುವಷ್ಟು ಯೂರಿಯಾವನ್ನು ತಯಾರಿಸಿಕೊಳ್ಳಬಹುದು. ಮನೆ ಅಥವಾ ಜಮೀನಿನ ಪಕ್ಕದ ನೆರಳಲ್ಲಿ 5 ಅಡಿ ಉದ್ದ, 4 ಅಡಿ ಅಗಲ ಹಾಗೂ 2 ಅಡಿ ಆಳದ ಗುಂಡಿ ತೆಗೆಯಬೇಕು. ಸಿಮೆಂಟ್ ತೊಟ್ಟಿಯಲ್ಲಿಯೂ ಮಾಡಬಹುದು. ದನದ ಕೊಟ್ಟಿಗೆಯ ಪಕ್ಕದಲ್ಲಿ, ಅಂದರೆ ದನಗಳ ಗಂಜಲ ಹೊರಹೋಗುವ ಸ್ಥಳಕ್ಕೆ ಹೊಂದಿಕೊಂಡಂತೆ ಗುಂಡಿ ತೆಗೆಯುವುದು ಸೂಕ್ತ. ಬಳಿಕ ಆ ಗುಂಡಿಯಲ್ಲಿ ಒಂದೂವರೆ ಅಥವಾ ಒಂದೂಮುಕ್ಕಾಲು ಅಡಿವರೆಗೆ ಮರಳು ತುಂಬಬೇಕು. ಅದಕ್ಕೆ 30 ದಿನಗಳವರೆಗೆ ದಿನವಿಡೀ ಲಭ್ಯವಿರುವ ಗಂಜಲನ್ನು ಸುರಿಯುತ್ತಿರಬೇಕು. ಈ ಪ್ರಕ್ರಿಯೆಯಿಂದಾಗಿ 30 ದಿನಗಳ ಬಳಿಕ ಮರಳಿನಲ್ಲಿ ಸಾರಜನಕದ ಅಂಶ ಕ್ರೋಡೀಕರಣಗೊಳ್ಳುತ್ತದೆ. ಗುಂಡಿಯೊಳಗಿನ ಮರಳು ಕಪ್ಪು ಬಣ್ಣಕ್ಕೆ ತಿರುಗಿದರೆ ಸಾರಜನಕದ ಅಂಶ ಕ್ರೋಡೀಕೃತವಾಗಿದೆ ಎಂದರ್ಥ. 30 ದಿನಗಳ ನಂತರ ಮರಳನ್ನು ಗುಂಡಿಯಿಂದ ಹೊರತೆಗೆದು ಗೋಣಿಚೀಲಗಳ ಮೇಲೆ ಹರಡಿ, ಒಂದೆರಡು ದಿನ ನೆರಳಲ್ಲಿ ಒಣಗಿಸಿ ಬಳಿಕ ಚೀಲಗಳಲ್ಲಿ ತುಂಬಿ ನೆರಳಿನಲ್ಲಿ ಶೇಖರಿಸಿಟ್ಟುಕೊಂಡು ಹಂತ ಹಂತವಾಗಿ ಬೆಳೆಗಳಿಗೆ ಉಪ ಯೋಗಿಸಬೇಕು.
ಮಾರುಕಟ್ಟೆಯಲ್ಲಿ ಲಭ್ಯವಿರುವ ರಾಸಾಯನಿಕ ಯೂರಿ ಯಾದ ರೀತಿಯಲ್ಲಿಯೇ ಸಾವಯವ ಯೂರಿಯಾವನ್ನು ಮೇಲು ಗೊಬ್ಬರವಾಗಿ ಬಳಸಬಹುದು. ಸಾವಯವ ಯೂರಿಯಾದಿಂದ ಬೆಳೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಸಾರಜನಕ ಅಂಶ ಲಭ್ಯವಾಗುತ್ತದೆ. ಜತೆಗೆ ಬೆಳೆಗಳಿಗೆ ಅಗತ್ಯವಿರುವ ಇನ್ನಿತರ ಪೋಷಕಾಂಶಗಳು ಸಹ ದೊರೆಯುತ್ತವೆ. ಈ ಯೂರಿಯಾದಲ್ಲಿ ರಾಸಾಯನಿಕಗಳು ಇಲ್ಲದಿರುವ ಕಾರಣ ಮಣ್ಣಿನ ಆರೋಗ್ಯ ಉತ್ತಮಗೊಳ್ಳುತ್ತದೆ. ಫಲವತ್ತತೆ ಹೆಚ್ಚಾಗುತ್ತದೆ. ಪ್ರತಿ 50 ಕೆಜಿ ಸಾವಯವ ಯೂರಿಯಾ ತಯಾರಿಸಿದಾಗ ರೈತರಿಗೆ ಅಂದಾಜು ರೂ. 250 ಉಳಿತಾಯವಾಗುತ್ತದೆ.
(ಲೇಖಕರು ಹಿರೇಪಡಸಲಗಿಯ ಜಮಖಂಡಿ ಸಕ್ಕರೆ ಕಾರ್ಖಾನೆಯ ಸಹಾಯಕ ಮಹಾಪ್ರಬಂಧಕರು)