ಅಂಕಣ

ಕ್ಯಾನ್ಸರ್ ತಡೆಗೆ ಯೋಗ-ನೈಸರ್ಗಿಕ ಜೀವನಶೈಲಿ ಮದ್ದು

| ಸದ್ಗುರು (ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ)

ಯೋಗ ವಿಜ್ಞಾನದ ಪ್ರಕಾರ, ನಮ್ಮ ದೇಹದಲ್ಲಿರುವ ಕ್ಯಾನ್ಸರ್ ಕೋಶಗಳನ್ನು ಸಮಾಜದಲ್ಲಿರುವ ಅಪರಾಧಿಗಳಿಗೆ ಹೋಲಿಸಬಹುದು. ಅಲ್ಲಿ ಇಲ್ಲಿ ಸಣ್ಣಪುಟ್ಟ ಅಪರಾಧಗಳನ್ನು ಮಾಡುವವರಿಂದ ಸಮಾಜಕ್ಕೆ ದೊಡ್ಡ ತೊಂದರೆಯಾಗುವುದಿಲ್ಲ, ಆದರೆ ಅವರೇ ಒಂದಾಗಿ ಒಂದು ಕಡೆ ಗ್ಯಾಂಗ್ ಕಟ್ಟಿಕೊಂಡಾಗ ಏನೋ ಒಂದು ಶುರುವಾಗುತ್ತದೆ. ಸಣ್ಣ ಅಪರಾಧವು ಸಂಘಟಿತ ಅಪರಾಧವಾಗಿ ಬದಲಾಗುವುದು ಗಂಭೀರ ಸಮಸ್ಯೆ. ಅದೇ ರೀತಿ, ಪ್ರತಿಯೊಬ್ಬರ ದೇಹದಲ್ಲೂ ಕ್ಯಾನ್ಸರ್ ಜೀವಕೋಶಗಳು ಇದ್ದೇ ಇರುತ್ತವೆ, ಆದರೆ ಅವುಗಳಲ್ಲಿ ಕೆಲವು ಮಾತ್ರ ಇದ್ದರೆ ನಿಮ್ಮ ಜೀವನ ಅಥವಾ ಆರೋಗ್ಯಕ್ಕೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಅವು ತಂತಾನೇ ಎಲ್ಲೋ ಒಂದೆರಡು ಅಡ್ಡಾಡಿಕೊಂಡಿರುವತನಕ ಯಾವುದೇ ಸಮಸ್ಯೆಯಿಲ್ಲ. ಆದರೆ ಅವುಗಳ ಸಂಖ್ಯೆ ಮಿತಿ ಮೀರಿದಾಗ ತೊಂದರೆ ಶುರುವಾಗುತ್ತದೆ.

ಕ್ಯಾನ್ಸರ್ ಬರಲು ಕಾರಣವೇನು?

ಯೋಗದಲ್ಲಿ ಇದನ್ನು ಈ ರೀತಿ ನೋಡಲಾಗುತ್ತದೆ- ಒಬ್ಬ ವ್ಯಕ್ತಿಯ ಮನಸ್ಥಿತಿ, ಆಹಾರ, ಜೀವನಶೈಲಿ ಅಥವಾ ಇತರ ಕಾರಣಗಳಿಂದಾಗಿ ದೇಹದ ಪ್ರಾಣಶಕ್ತಿಯಲ್ಲಿ ಕೆಲವು ಖಾಲಿ ಜಾಗಗಳು (ತಡೆಗಳು) ಉಂಟಾದಾಗ, ಕ್ಯಾನ್ಸರ್ ಕೋಶಗಳು ಬೆಳೆಯಲು ಸೂಕ್ತವಾದ ವಾತಾವರಣ ನಿರ್ಮಾಣವಾಗುತ್ತದೆ. ದೇಹದ ಯಾವ ಭಾಗದಲ್ಲಿ ಪ್ರಾಣಶಕ್ತಿಯ ಸಂಚಲನ ಸರಿಯಾಗಿರುವುದಿಲ್ಲವೋ, ಅಲ್ಲಿ ಕ್ಯಾನ್ಸರ್ ಕೋಶಗಳು ಅಡಗಿ ಕುಳಿತು ಬೆಳೆಯಲು ಪ್ರಾರಂಭಿಸುತ್ತವೆ. ಕಾಲಕಾಲಕ್ಕೆ ದೇಹವನ್ನು ಶುದ್ಧೀಕರಿಸುವುದು ಮತ್ತು ಕೆಲವು ಸರಳ ಅಭ್ಯಾಸಗಳು ಹಾಗೂ ಜೀವನಶೈಲಿಯ ಬದಲಾವಣೆಗಳಿಂದ ಕ್ಯಾನ್ಸರನ್ನು ತಡೆಗಟ್ಟಬಹುದು. ಕ್ಯಾನ್ಸರ್​ನ ಅಪಾಯವನ್ನು ಕಡಿಮೆ ಮಾಡುವ ಮಾರ್ಗಗಳನ್ನು ನೋಡೋಣ.

ಕಾಲಕಾಲಕ್ಕೆ ಉಪವಾಸ

ದೇಹದಲ್ಲಿ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಗಟ್ಟಲು ನಿಯಮಿತ ಉಪವಾಸ ಅತ್ಯಂತ ಸರಳ ಪರಿಹಾರಗಳಲ್ಮೊಂದು ಕ್ಯಾನ್ಸರ್ ಜೀವಕೋಶಗಳ ಒಂದು ಗುಣವೇನೆಂದರೆ, ಅವುಗಳಿಗೆ ಸಾಮಾನ್ಯ ಕೋಶಗಳಿಗಿಂತ ಹೆಚ್ಚಿನ ಪೋಷಕಾಂಶಗಳು ಬೇಕಾಗುತ್ತವೆ. ಕೆಲವು ನಿರ್ದಿಷ್ಟ ದಿನಗಳಲ್ಲಿ ಆಹಾರವನ್ನು ತ್ಯಜಿಸುವುದರಿಂದ, ದೇಹದಲ್ಲಿರುವ ಕ್ಯಾನ್ಸರ್ ಜೀವಕೋಶಗಳ ಸಂಖ್ಯೆಯನ್ನು ನಿಯಂತ್ರಿಸಬಹುದು.

ಬೇವು-ಅರಿಶಿನದ ಸೇವನೆ

ಪ್ರತಿದಿನವೂ ಬೇವು ಮತ್ತು ಅರಿಶಿನದ ಸಣ್ಣ ಉಂಡೆಗಳನ್ನು ಸೇವಿಸಬಹುದು. ಇದು ಈಗಾಗಲೇ ಕ್ಯಾನ್ಸರ್​ ಪೀಡಿತರಾದವರಿಗೆ ಚಿಕಿತ್ಸೆಯಾಗದಿರಬಹುದು, ಆದರೆ ಸಾಮಾನ್ಯರಲ್ಲಿ ಇದು ದೇಹದಲ್ಲಿನ ಕ್ಯಾನ್ಸರ್ ಕೋಶಗಳ ಸಂಖ್ಯೆಯನ್ನು ಒಂದು ಮಿತಿಯಲ್ಲಿ ಇಡುವುದರಿಂದ, ಆ ಕೋಶಗಳು ಒಂದಾಗಿ ಆರೋಗ್ಯದ ವ್ಯವಸ್ಥೆಯನ್ನು ಕೆಡಿಸುವುದಿಲ್ಲ. ದೇಹದಲ್ಲಿ ಜಡತ್ವ ಹೆಚ್ಚಾದಾಗ, ಅದು ಪ್ರಾಣಶಕ್ತಿಯು ಜೀವಕೋಶದ ಮಟ್ಟಕ್ಕೆ ತಲುಪದಂತೆ ತಡೆಯುತ್ತದೆ. ದೇಹದ ಯಾವ ಭಾಗಗಳಲ್ಲಿ ಪ್ರಾಣಶಕ್ತಿ ಸರಾಗವಾಗಿ ಹರಿಯುವುದಿಲ್ಲವೋ ಆ ಭಾಗಗಳು ಕ್ಯಾನ್ಸರ್​ಗೆ ತುತ್ತಾಗಬಹುದು.

ಬೇವು-ಅರಿಶಿನದ ಮಿಶ್ರಣವು ಪ್ರಾಣಶಕ್ತಿಯ ಹರಿವನ್ನು ವಿಸ್ತರಿಸುವ ಸಾಧನವಾಗಿ (ಡೈಲೇಟರ್) ಕೆಲಸ ಮಾಡುತ್ತದೆ. ಉದಾಹರಣೆಗೆ, ಕಣ್ಣಿನ ವೈದ್ಯರು ನಿಮ್ಮ ಕಣ್ಣಿನೊಳಗೆ ನೋಡಲು ಬಯಸಿದಾಗ, ಡೈಲೇಟರಿನ ಒಂದು ಹನಿಯನ್ನು ಹಾಕಿ ಕಣ್ಣಿನ ಪಾಪೆಯನ್ನು ಅಗಲಗೊಳಿಸುತ್ತಾರೆ. ಹೀಗೆಯೇ ಬೇವು ಮತ್ತು ಅರಿಶಿಣವು ದೇಹದಲ್ಲಿ ಪ್ರಾಣಶಕ್ತಿಯು ಪ್ರತಿಯೊಂದು ಮೂಲೆಗೂ ಪ್ರವೇಶಿಸಲು ಒಳಗಿನ ಜಾಗವನ್ನು ಅಗಲ ಮಾಡಿ ಅನುವು ಮಾಡಿಕೊಡುತ್ತವೆ.

ಸಸ್ಯಾಹಾರ ಪದ್ಧತಿ

ಜೀವಿಗಳು ವಿಕಾಸಗೊಂಡಂತೆ, ಅವು ಹೊಂದಿರುವ ಮಾಹಿತಿ, ನೆನಪುಗಳು ಹೆಚ್ಚು ಸಂಕೀರ್ಣವಾಗುತ್ತವೆ. ಯೋಗ ಪರಂಪರೆಯಲ್ಲಿ, ನಿಮ್ಮ ಆನುವಂಶಿಕ ರಚನೆಗಿಂತ ಬಹಳ ವಿಭಿನ್ನವಾಗಿರುವ ಜೀವಿಗಳನ್ನು ಆಹಾರವಾಗಿ ಸೇವಿಸಬೇಕು. ಮಾಂಸವೇ ಸೇವಿಸಲು ಅತ್ಯುತ್ತಮ ಆಹಾರ ಎಂದು ನೂರು ವರ್ಷಗಳ ಕಾಲ ಹೇಳಿದ ಪಾಶ್ಚಿಮಾತ್ಯ ವೈದ್ಯರು, ಈಗ ಮಾಂಸ ಸೇವನೆಯು ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಕ್ಯಾನ್ಸರ್​ಗೆ ಕಾರಣವಾಗಬಹುದು ಎನ್ನುತ್ತಿದ್ದಾರೆ. ಯೋಗ ಪರಂಪರೆಯಲ್ಲಿ ನಾವು ಹೇಳುತ್ತ ಬಂದಂತೆ ಜಟಿಲವಾದ ಆನುವಂಶಿಕ ರಚನೆಯುಳ್ಳ ಆಹಾರವನ್ನು ತಿಂದರೆ, ದೇಹದ ವ್ಯವಸ್ಥೆಯು ಯಾವುದೋ ರೀತಿಯಲ್ಲಿ ಹಾಳಾಗುತ್ತದೆ. ಮಿಲಿಯನ್ ಡಾಲರ್ ಸಂಶೋಧನೆ ಮಾಡುವ ಬದಲು, ನಾವು ಆಹಾರ ಸೇವಿಸಿದಾಗ ನಮ್ಮ ದೇಹದಲ್ಲಿ ಏನಾಗುತ್ತದೆ ಎಂಬುದನ್ನು ಗಮನಿಸುವುದರ ಮೂಲಕವೇ ನಾವು ಈ ತೀರ್ವನಕ್ಕೆ ಬಂದಿದ್ದೇವೆ. ಒಂದು ವೇಳೆ ನೀವು ಮಾಂಸಾಹಾರ ಸೇವಿಸಲೇಬೇಕು ಎಂದಿದ್ದರೆ, ಮೀನು ಸೇವಿಸಬಹುದು.

ನೈಸರ್ಗಿಕ ನಾರಿನ ಉಡುಪು

ಕ್ಯಾನ್ಸರ್ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಮೈಕ್ರೋಫೈಬರ್ ಮತ್ತು ಸಿಂಥೆಟಿಕ್ (ಕೃತಕ) ಉಡುಪುಗಳಿಗೆ ಸಂಬಂಧಿಸಿವೆ ಎನ್ನುತ್ತವೆ ಅಧ್ಯಯನಗಳು. ನೀವು ಧರಿಸುವ ಬಟ್ಟೆ ನೈಸರ್ಗಿಕವಾಗಿರುವುದು ಅತ್ಯಂತ ಮುಖ್ಯ. ಇದು ನಿಮ್ಮ ಆರೋಗ್ಯಕ್ಕೆ ಮಾತ್ರವಲ್ಲದೆ ಪರಿಸರಕ್ಕೂ ಒಳ್ಳೆಯದು. ಲಿನೆನ್, ಸೆಣಬು, ಹತ್ತಿಯಂತಹ ನೈಸರ್ಗಿಕ ನಾರುಗಳಿಂದ ಮಾಡಿದ ಬಟ್ಟೆಗಳನ್ನು ಕೇವಲ 3 ದಿನ ಧರಿಸಿ ನೋಡಿ. ಹೇಗನಿಸುತ್ತದೆ ಎಂದು ಗಮನಿಸಿ. ನಿಮ್ಮ ದೇಹ ಸಹಜವಾಗಿಯೇ ಹಗುರ ಮತ್ತು ವಿಶ್ರಾಂತಿ ಸ್ಥಿತಿಗೆ ಬರುತ್ತದೆ.

ಕಿಮೊಥೆರಪಿಯ ಪರಿಣಾಮ

ನೀವು ಕಿಮೊಥೆರಪಿ ಎಂದು ಯಾವುದನ್ನು ಕರೆಯುತ್ತೀರೋ, ಅದು ಔಷಧಿಗಳು ಮತ್ತು ವಿಷಗಳ ಸಂಕೀರ್ಣ ಮಿಶ್ರಣ. ಸಾವು ಸಂಭವಿಸಬಹುದು ಎಂಬ ಒಂದೇ ಕಾರಣಕ್ಕೆ ನಾವು ದೇಹಕ್ಕೆ ಸ್ವಲ್ಪ ಮಟ್ಟಿನ ಹಾನಿ ಮಾಡಿಕೊಳ್ಳುವುದನ್ನು ಆಯ್ಕೆ ಮಾಡಿಕೊಳ್ಳುತ್ತೇವೆ. ಸಮಸ್ಯೆಯೇನೆಂದರೆ, ಕಿಮೊಥೆರಪಿಯಿಂದಾಗಿ ದೇಹದಲ್ಲಿರುವ ಎಲ್ಲ ಜೀವಕೋಶಗಳು- ಅವು ಆರೋಗ್ಯಕರವಾಗಿರಲಿ ಅಥವಾ ಇಲ್ಲದಿರಲಿ- ವಿಭಜನೆಯಾಗಲು ಸಾಧ್ಯವಾಗುವುದಿಲ್ಲ. ಇದರಿಂದ ದೇಹದ ಪುನರುಜ್ಜೀವನ ವ್ಯವಸ್ಥೆ ಗಂಭೀರ ಪೆಟ್ಟು ತಿನ್ನುತ್ತದೆ. ಕಿಮೊಥೆರಪಿ ಮುಗಿದ ನಂತರ, ಜೀವಕೋಶಗಳ ಸಂಖ್ಯೆ ಹೆಚ್ಚಾಗುವುದನ್ನು ಸಾಮಾನ್ಯ ಸ್ಥಿತಿಗೆ ತರುವುದು ಮುಖ್ಯ ವಿಷಯ. ಅಂದರೆ, ಹಳೆಯ ಕೋಶಗಳ ಜಾಗದಲ್ಲಿ ಹೊಸ ಕೋಶಗಳು ಬರುವ ಪುನರುಜ್ಜೀವನದ ಪ್ರಕ್ರಿಯೆಯನ್ನು ಸಾಧ್ಯವಾದಷ್ಟು ಬೇಗ ಸಾಮಾನ್ಯ ಸ್ಥಿತಿಗೆ ತರಬೇಕು.

ಜೀವಕೋಶಗಳ ಪುನರುಜ್ಜೀವನಕ್ಕೆ ಯೋಗಾಭ್ಯಾಸ

ಮಾನವ ವ್ಯವಸ್ಥೆಯಲ್ಲಿನ ಪಂಚಭೂತಗಳನ್ನು ಶುದ್ಧೀಕರಿಸುವ ‘ಭೂತ ಶುದ್ಧಿ’ ಪ್ರಕ್ರಿಯೆಯು ಅದ್ಭುತಗಳನ್ನೇ ಮಾಡಬಲ್ಲದು. ಕ್ಯಾನ್ಸರ್ ಪತ್ತೆಯಾದ ನಂತರ ಯಾವುದೇ ವೈದ್ಯಕೀಯ ಚಿಕಿತ್ಸೆಗೆ ಹೋಗದ ಕೆಲವು ಜನರನ್ನು ನಾನು ಬಲ್ಲೆ. ಅವರು ದಿನಕ್ಕೆ ಕೆಲವು ಗಂಟೆಗಳ ಕಾಲ ತಾಜಾ ನೀರಿನಲ್ಲಿ ಮುಳುಗಿದ್ದು ಕೆಲವು ನಿರ್ದಿಷ್ಟ ಪ್ರಕ್ರಿಯೆಗಳನ್ನು ಮಾತ್ರ ಮಾಡಿದರು. ಯಾವುದೇ ವೈದ್ಯಕೀಯ ಚಿಕಿತ್ಸೆಯಿಲ್ಲದೆ ಕ್ಯಾನ್ಸರ್ನಿಂದ ಹೊರಬಂದರು. ಕೇವಲ ನೀರಿನ ಸಂಪರ್ಕದಲ್ಲಿರುವುದರಿಂದಲೇ ನೀವು ಇದರಿಂದ ಹೊರಬರುವುದು ಒಂದು ಸಾಧ್ಯತೆಯಾಗಿದೆ. ಆದರೆ ಎಲ್ಲರಿಗೂ ಇಂತಹ ಕೆಲಸಗಳನ್ನು ಮಾಡುವ ಶಕ್ತಿ ಇರುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ, ಈ ರೀತಿಯ ರಿಸ್ಕ್ ತೆಗೆದುಕೊಳ್ಳುವುದು ಸೂಕ್ತವಲ್ಲ. ಯೋಗ ವ್ಯವಸ್ಥೆಯಲ್ಲಿ ಅನೇಕ ಅಭ್ಯಾಸಗಳಿವೆ. ಆದರೆ ಕ್ಯಾನ್ಸರ್ ವಿಷಯದಲ್ಲಿ ಅಪಾಯದ ಮಟ್ಟ ಅತ್ಯಂತ ಹೆಚ್ಚಿರುತ್ತದೆ ಮತ್ತು ಸಿಗುವ ಸಮಯ ತೀರಾ ಕಡಿಮೆಯಿರುತ್ತದೆ. ಹಾಗಾಗಿ ನಾವು ಸಾಮಾನ್ಯವಾಗಿ ಅಂತಹ ಸಾಹಸಕ್ಕೆ ಕೈಹಾಕುವುದಿಲ್ಲ.

ಆಧುನಿಕ ವೈದ್ಯಕೀಯವು ಕ್ಯಾನ್ಸರ್ ಕೋಶಗಳನ್ನು ಹೇಗೆ ಕೊಲ್ಲುವುದು ಎಂಬುದನ್ನು ಮಾತ್ರ ನೋಡುತ್ತದೆ. ಯೋಗ ವಿಜ್ಞಾನವು ಆರೋಗ್ಯಕರ ಕೋಶಗಳನ್ನು ಹೇಗೆ ಬಲಪಡಿಸುವುದು ಎಂದು ನೋಡುತ್ತದೆ. ಹಾಗಾಗಿ ಆ ಕೋಶಗಳು ಕ್ಯಾನ್ಸರ್ ಬೆಳೆಯುವ ಮುನ್ನವೇ ಅದನ್ನು ತಾವೇ ನೋಡಿಕೊಳ್ಳುತ್ತವೆ. ಕ್ಯಾನ್ಸರ್ ಪತ್ತೆಯಾದಾಗ, ವೈದ್ಯಕೀಯ ಚಿಕಿತ್ಸೆಗೆ ಒಳಗಾಗುವುದು ಮತ್ತು ನಂತರ ರೋಗವು ಮರುಕಳಿಸದಂತೆ ಇತರ ಅಭ್ಯಾಸಗಳನ್ನು ಮಾಡುವುದು ಅತ್ಯುತ್ತಮ ಮಾರ್ಗ. ಪಂಚಭೂತಗಳ ಶುದ್ಧೀಕರಣದ ಜತೆಗೆ, ಸಾಮಾನ್ಯ ವ್ಯಾಯಾಮವೂ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಆದರೆ ನೀವು ಭೂತ ಶುದ್ಧಿ ಮತ್ತು ಸರಿಯಾದ ಆಹಾರ ಪದ್ಧತಿಯೊಂದಿಗೆ ಸರಿಯಾದ ರೀತಿಯ ಯೋಗಾಭ್ಯಾಸಗಳನ್ನು ಮಾಡಿದರೆ, ದೇಹವು ತನ್ನ ಸಹಜ ಪುನರುಜ್ಜೀವನ ಮಟ್ಟಕ್ಕೆ ಬೇಗನೆ ಮರಳುವ ಸಾಮರ್ಥ್ಯವನ್ನು ಪಡೆಯುತ್ತದೆ.