ಆಮೇಲೆ ತಿಳಿದದ್ದು ಅವರು ಕೋವಿಡ್-19 ರೋಗಕ್ಕೆ ಸಿಲುಕಿ ಬೀಜಿಂಗ್ನ ‘ಮಿಲಿಟರಿಹಾಸ್ಪಿಟಲ್ 301’ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು. ಆಮೇಲೂ ಅವರು ಆಗಾಗ, ಮುಖ್ಯವಾಗಿ ಹೊರದೇಶಗಳಲ್ಲಿ ಮಹತ್ವದ ಸಮಾವೇಶಗಳಲ್ಲಿ ಹಾಜರಾಗಿ ಸ್ವದೇಶಕ್ಕೆ ಹಿಂತಿರುಗಿದಾಗೆಲ್ಲ ಎರಡು-ಮೂರು ವಾರಗಳು ಅದೃಶ್ಯರಾಗಿಬಿಡುತ್ತಿದ್ದರು. ಅಂತಹ ಅದೃಶ್ಯದಾಟಗಳಲ್ಲಿ ಜಾಗತಿಕವಾಗಿ ಕುತೂಹಲ ಉಂಟುಮಾಡಿದ್ದು ಎರಡು ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾದ ಜೊಹಾನ್ನೆಸ್ಬರ್ಗ್ನಲ್ಲಿ ‘ಬ್ರಿಕ್ಸ್’ ಸಮಾವೇಶದಲ್ಲಿ ಬಂದವರೇ ಷಿ ಮಾಯವಾಗಿಬಿಟ್ಟರು.
ದೇಶದಿಂದ ಹೊರಗಿದ್ದ ಸಮಯದಲ್ಲಿ ಅವರ ಪದಚ್ಯುತಿಗೆ ಪಿತೂರಿ ನಡೆದಿದೆ, ಬೀಜಿಂಗ್ಗೆ ಬರುತ್ತಿದ್ದಂತೇ ಅವರನ್ನು ಬಂಧಿಸಿ ಗೃಹಬಂಧನದಲ್ಲಿಡಲಾಗಿದೆ ಎಂಬ ವದಂತಿಗಳು ಎಲ್ಲೆಡೆ ಹಾರಾಡತೊಡಗಿದವು. ಆದರೆ ಎರಡು ವಾರಗಳ ನಂತರ ಷಿ ಸಾರ್ವಜನಿಕವಾಗಿ ಕಾಣಿಸಿಕೊಂಡರು, ಆಗವರು ‘ಎಲ್ಲವೂ ಸರಿಯಾಗಿರುವಂತೇ’ ಕಂಡರು, ದೇಶದಲ್ಲೂ ‘ಎಲ್ಲವೂ ಸರಿಯಾಗಿರುವಂತೇ’ ಕಂಡಿತು. ಆಮೇಲೆ ಒಂದೆರಡು ಸಮಾವೇಶಗಳಿಗೆ ಅವರು ಹೋಗಲೇ ಇಲ್ಲ. ಈಗ ಬ್ರೆಜಿಲ್ನ ರಯೋ ಡಿ ಜನೈರೋನಲ್ಲಿ ನಡೆಯುತ್ತಿರುವ ಬ್ರಿಕ್ಸ್ ರಾಷ್ಟ್ರನಾಯಕರ ಸಮಾವೇಶಕ್ಕೂ ಹೋಗಿಲ್ಲ. ಆ ಕುರಿತಾಗಿ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈ ಬಾರಿ ವದಂತಿಗಳೇನೂ ಇಲ್ಲ, ಎಲ್ಲವೂ ನಿಜವಾದ ಸುದ್ದಿಗಳೇ, ಬೀಜಿಂಗ್ನಲ್ಲಿ ನಿಜವಾಗಿಯೂ ದೊಡ್ಡ ರಾಜಕೀಯ ಸ್ಥಿತ್ಯಂತರ ಜರುಗಿದೆ ಎನ್ನುವ ಸ್ಪಷ್ಟ ಸೂಚನೆಗಳು ಕಾಣುತ್ತಿವೆ. ಈ ಬಗ್ಗೆ ಚೀನಿ ಸರ್ಕಾರಿ ಮಾಧ್ಯಮವೇ ವರದಿ ಮಾಡಿದೆ! ಇನ್ನು ಕೇಳುವುದೇನು? ಷಿ ಅದೃಷ್ಟರೇಖೆ ಇಳಿಮುಖವಾಗೇಬಿಟ್ಟಿದೆ!
ಚೀನಿ ಕಮ್ಯೂನಿಸ್ಟ್ ಪಾರ್ಟಿಯಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಅತ್ಯುನ್ನತ ಸಮಿತಿಯಾದ ಇಪ್ಪತ್ತನಾಲ್ಕು ಸದಸ್ಯರ ಪಾಲಿಟ್ಬ್ಯೂರೋ ಸಭೆ ಇದೇ ಜೂನ್ 30ರಂದು ನಡೆಯಿತು. ಆ ಬಗ್ಗೆ ವರದಿ ಮಾಡಿದ ಸರ್ಕಾರಿ ವಾರ್ತಾಸಂಸ್ಥೆ ಷಿನ್ಹುವಾ ಹೇಳಿದ್ದು ಅಧ್ಯಕ್ಷ ಷಿ ಜಿನ್ಪಿಂಗ್ ಅವರ ಅಧಿಕಾರಗಳನ್ನು ಪಕ್ಷದಲ್ಲಿ ಘಟಿಸಲಾದ ಒಂದು ಸಮಿತಿಗೆ ಹಸ್ತಾಂತರಿಸಲಾಗಿದೆ ಎಂದು! ನಂತರ ಇದೇ ವಿವರಗಳನ್ನು ಹಾಂಗ್ಕಾಂಗ್ನ ಪ್ರತಿಷ್ಠಿತ ‘ಸೌತ್ ಚೈನಾ ಮಾರ್ನಿಂಗ್ ಪೋಸ್ಟ್’ ಪತ್ರಿಕೆಯೂ ಪ್ರಕಟಿಸಿತು. ಅದಾದ ಮೇಲೆ ನಮ್ಮ ಪಿಟಿಐ ಸೇರಿದಂತೆ ಜಗತ್ತಿನ ಪ್ರಮುಖ ಸುದ್ದಿಸಂಸ್ಥೆಗಳು ಬೀಜಿಂಗ್ನಲ್ಲಾದ ರಾಜಕೀಯ ಭೂಕಂಪವನ್ನು ವರದಿ ಮಾಡತೊಡಗಿದವು. ಅಂದರೆ ಜೀವಮಾನಪೂರ್ತಿ ಅಧ್ಯಕ್ಷರಾದ ಷಿ ಜಿನ್ಪಿಂಗ್ ಅವರಿಗೆ ಈಗ ಎಪ್ಪತ್ತೆರಡನೇ ವಯಸ್ಸಿನಲ್ಲೇ ‘ಏನೋ’ ಆಗಿದೆ! ಅದೇನು? ಅದೇಕಾಯಿತು?
ಹನ್ನೆರಡನೆಯ ‘ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್’ನಿಂದ 2013ರ ನವೆಂಬರ್ 14ರಂದು ಚೀನಿ ಜನತಾ ಗಣರಾಜ್ಯದ ಅಧ್ಯಕ್ಷರಾಗಿ ಆಯ್ಕೆಯಾದ ಷಿ ಜಿನ್ಪಿಂಗ್ ಚೀನಾದ ವರ್ಚಸ್ಸನ್ನು ಜಾಗತಿಕವಾಗಿ ಅಸಾಧಾರಣ ಪ್ರಮಾಣದಲ್ಲಿ ವೃದ್ಧಿಸುವ ಯೋಜನೆಗಳನ್ನು ಪ್ರಥಮ ದಿನದಿಂದಲೇ ರೂಪಿಸತೊಡಗಿದರು. "Belt and Road Initiative' (BRI) ಅವರ ಮಹತ್ವಾಕಾಂಕ್ಷೆಯ ಯೋಜನೆ. ಜಗತ್ತಿನ ಬಡದೇಶಗಳನ್ನು ಚೀನಾದ ಸಾಲಸಂಕೋಲೆಗೆ ಸಿಲುಕಿಸಿ ಅವುಗಳ ಆಯಕಟ್ಟಿನ ಬಂದರುಗಳು, ರಸ್ತೆ/ರೈಲುಮಾರ್ಗಗಳು, ವಿಮಾನನಿಲ್ದಾಣಗಳು ಹಾಗೂ ನೈಸರ್ಗಿಕ ಸಂಪತ್ತಿನ ಮೇಲೆ ಚೀನಾದ ಹತೋಟಿ ಸ್ಥಾಪಿಸುವ ಅತ್ಯಂತ ನಿರ್ಲಜ್ಜ ಯೋಜನೆ ಇದು ಎಂದು ಹೇಳಬಹುದು. ವಿಶ್ವಬ್ಯಾಂಕ್, ಐಎಂಎಫ್, ಏಷ್ಯನ್ ಡೆವಲಪ್ವೆುಂಟ್ ಬ್ಯಾಂಕ್ ಮುಂತಾದ ಜಾಗತಿಕ ಹಾಗೂ ಪ್ರಾದೇಶಿಕ ಹಣಕಾಸು ಸಂಸ್ಥೆಗಳು ಸಾಲ ನೀಡುವುದು ಉಪಯುಕ್ತ ಯೋಜನೆಗಳಿಗಾಗಿ ಮಾತ್ರ.
ಸಾಲ ಪಡೆದ ದೇಶಗಳು ಹಣವನ್ನು ಸರಿಯಾದ ಬಗೆಯಲ್ಲಿ ಬಳಸಿ, ಯೋಜನೆಯನ್ನು ಪೂರ್ಣಗೊಳಿಸಿ, ತಾವೂ ಉಪಯೋಗ ಹಾಗೂ ಲಾಭ ಪಡೆದು, ಸಾಲವನ್ನೂ ಹಿಂತಿರುಗಿಸಬಹುದಾದ ಯೋಜನೆಗಳಿಗೆ ಮಾತ್ರ ಅವು ಸಾಲ ನೀಡುತ್ತವೆ. ಬಡ್ಡಿದರವೂ ಕಡಿಮೆ, ಕೇವಲ ಶೇಕಡ ಒಂದರಿಂದ ಒಂದೂವರೆ ಮಾತ್ರ. ಆದರೆ ಬಿಆರ್ಐ ಯೋಜನೆಯ ಪ್ರಕಾರ ನಿರುಪಯುಕ್ತವಾದ ಹಾಗೂ ಲಾಭಕರವಲ್ಲದ ಯೋಜನೆಗಳಿಗಾಗಿ ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕಾದ ದೇಶಗಳಿಗೆ ಷಿ ಜಿನ್ಪಿಂಗ್ ಶೇಕಡ ನಾಲ್ಕೂವರೆಯಿಂದ ಎಂಟರಷ್ಟು ಅಧಿಕ ಬಡ್ಡಿದರದಲ್ಲಿ ಸಾಲ ನೀಡತೊಡಗಿದರು. ಸಾಲ ತೀರಿಸಲಾಗದೇ ಹೋದರೆ ಯಾವುದರ ನಿರ್ವಣಕ್ಕಾಗಿ ಸಾಲ ನೀಡಲಾಗಿದೆಯೋ ಅದು ಚೀನಾಗೆ ದೀರ್ಘಕಾಲದವರೆಗೆ ಗುತ್ತಿಗೆಗೆ ದಕ್ಕುವಂತಹ ಕಲಮನ್ನೂ ಷಿ ಸಾಲಪತ್ರದಲ್ಲಿ ಸೇರಿಸುತ್ತಿದ್ದರು. ಅದನ್ನು ಸಾಲಗಾರ ದೇಶ ಬೇರೆ ದೇಶಗಳಿಗೆ ಬಹಿರಂಗಪಡಿಸಕೂಡದು ಎನ್ನುವ ಕರಾರು ಬೇರೆ! ವ್ಯರ್ಥ ಯೋಜನೆಗಳು ಎಂದರಿತು ಸಾಲ ತೆಗೆದುಕೊಳ್ಳಲು ಮನಸ್ಸು ತೋರದ ವಿದೇಶಿ ನೇತಾರರನ್ನು ಪುಸಲಾಯಿಸಲು ಷಿ ಅನುಸರಿಸಿದ ಮಾರ್ಗ ಅವರಿಗೆ ಹೇರಳ ಲಂಚ ನೀಡುವುದು. ಇದಕ್ಕೆ ಬಲಿಯಾದವರು ಬಹಳ.
ಹೀಗೆ ನವವಸಾಹತುಶಾಹಿ ಎಂದೇ ಹೇಳಬಹುದಾದ ಬಿಆರ್ಐ ಯೋಜನೆಗೆ ಷಿ ಸುರಿದದ್ದು ಒಂದು ಟ್ರಿಲಿಯನ್ ಡಾಲರ್ಗಳಷ್ಟು ಅಗಾಧ ಮೊತ್ತ. ವ್ಯರ್ಥ ಯೋಜನೆಗಳಿಗಾಗಿ ಸಾಲ ಪಡೆದ ದೇಶಗಳು ಅನುಭವಿಸಿದ ಗೋಳೆಂದರೆ ಯೋಜನೆಯೂ ಪೂರ್ಣವಾಗಲಿಲ್ಲ, ಬಳಸಿದ ಹಣವೂ ಹಿಂದಕ್ಕೆ ಬರಲಿಲ್ಲ, ಸಾಲ ತೀರಿಸಲೂ ಆಗಲಿಲ್ಲ, ಅಧಿಕವಾದ ಬಡ್ಡಿಯನ್ನೂ ಕಟ್ಟಲಾಗಲಿಲ್ಲ. ಷಿ ಜಿನ್ಪಿಂಗ್ಗೆ ಬೇಕಾಗಿದ್ದುದು ಇದೇ. ರಹಸ್ಯ ಕರಾರಿನಂತೆ ಹಲವಾರು ದೇಶಗಳಲ್ಲಿ ಬಂದರುಗಳನ್ನು, ಸಂಪರ್ಕಮಾರ್ಗಗಳನ್ನು, ಗಣಿಗಳನ್ನು ಷಿ ಕಬಳಿಸಿದರು. ಶ್ರೀಲಂಕಾದ ಹಂಬನ್ತೋಟ ಬಂದರು, ಪಾಕಿಸ್ತಾನದ ಗ್ವಾದಾರ್ ಬಂದರು, ಮಾಂಟೆನೀಗ್ರೋದ 150 ಕಿಲೋಮೀಟರ್ ರೈಲುಮಾರ್ಗ ಇವುಗಳಲ್ಲಿ ಕೆಲವು. ಕಾಂಬೋಡಿಯಾ, ಮಲೇಷ್ಯಾ ಜತೆಗೆ ಆಫ್ರಿಕಾದ ಸುಮಾರು ನಲವತ್ತು ದೇಶಗಳಲ್ಲಿ ಹೀಗೆ ರಸ್ತೆ/ರೈಲುಮಾರ್ಗಗಳು, ವಿಮಾನನಿಲ್ದಾಣಗಳು ಮತ್ತು ಬಗೆಬಗೆಯ ಖನಿಜಗಳ ಗಣಿಗಳನ್ನು ಷಿ ಹೀಗೆ ಕಬಳಿಸಿದ್ದಾರೆ. ದಕ್ಷಿಣ ಏಷ್ಯಾದಲ್ಲಿ ಭಾರತದ ಹೊರತಾಗಿ ಉಳಿದೆಲ್ಲ ದೇಶಗಳು ಈ ಪಿತೂರಿಗೆ ಬಲಿಯಾಗಿವೆ, ಅವುಗಳ ನೇತಾರರು ಶ್ರೀಮಂತರಾಗಿದ್ದಾರೆ!
ಆದರೆ 2020-21ರ ಹೊತ್ತಿಗೆ ಷಿ ಅವರ ಈ ಯೋಜನೆಗೆ ವಿರೋಧ ಮೂಡತೊಡಗಿತು. ಸಾಲಗಾರ ದೇಶಗಳಲ್ಲಿ ಬಂದ ಹೊಸ ಸರ್ಕಾರಗಳು ಸಾಲ ತೀರಿಸಲು ತಮಗೆ ಹೆಚ್ಚಿನ ಅವಧಿ ನೀಡಬೇಕೆಂದೂ, ಇಲ್ಲದಿದ್ದರೆ ಸಾಲವನ್ನೇ ತೀರಿಸುವುದಿಲ್ಲವೆಂದೂ ಧಮಕಿ ಹಾಕತೊಡಗಿದವು. ಹೀಗಾಗಿ ಹೂಡಿದ ಒಂದು ಟ್ರಿಲಿಯನ್ ಡಾಲರ್ಗಳ ಒಂದು ದೊಡ್ಡ ಭಾಗ ಮುಳುಗಿಹೋಗುವಂತಹ ಸ್ಥಿತಿಯನ್ನು ಷಿ ಕಂಡರು. ಇದು ಅವರ ಸೋಲಿನ ಮೊದಲ ಸೂಚನೆ.
ಇದರ ಜತೆಗೆ ಕೋವಿಡ್-19 ರೋಗದಿಂದಾಗಿ ಜಾಗತಿಕ ಅರ್ಥವ್ಯವಸ್ಥೆಗೆ ಹೊಡೆತ ಬಿದ್ದಿದ್ದರಿಂದಾಗಿ ‘ಜಗತ್ತಿನ ಕಾರ್ಖಾನೆ’ಯಾದ ಚೀನಾದ ಉತ್ಪಾದನೆಗಳಿಗೆ ಬೇಡಿಕೆ ಕುಗ್ಗತೊಡಗಿ, ಕಾರ್ಖಾನೆಗಳು ಮುಚ್ಚತೊಡಗಿದವು. ಇದರಿಂದಾಗಿ ಚೀನಾದ ವಾರ್ಷಿಕ ಜಿಡಿಪಿ ಇಳಿಯುತ್ತ ಹೋಯಿತು ಮತ್ತು ನಿರುದ್ಯೋಗ ಹೆಚ್ಚತೊಡಗಿತು.
ಇಂತಹ ಸಂಕಷ್ಟದ ಸ್ಥಿತಿಯಲ್ಲಿ ಬಿಆರ್ಐ ಯೋಜನೆಯಿಂದ ನೊಂದ ಹಲವಾರು ದೇಶಗಳು ತಮ್ಮ ಕಷ್ಟಕಾಲದಲ್ಲಿ ಚೀನಾ ಸಹಾಯಕ್ಕೆ ಬರುತ್ತಿಲ್ಲವೆಂದು ದೂರಿ ಪರಿಹಾರಕ್ಕಾಗಿ ಬೇರೆಡೆ ಹೊರಳುತ್ತಿವೆ. ಇದಕ್ಕೆ ಶ್ರೀಲಂಕಾ, ಮಾಲ್ಡೀವ್ಸ್ ಮತ್ತು ಬಾಂಗ್ಲಾದೇಶ ಉತ್ತಮ ಉದಾಹರಣೆಗಳು. ಪಾಕಿಸ್ತಾನದಲ್ಲಂತೂ ಚೀನಾದ 87 ಬಿಲಿಯನ್ ಡಾಲರ್ಗಳು ಮುಳುಗಿಹೋಗಿವೆ ಮತ್ತು ಆ ದೇಶ ಈಗ ಚೀನಾದಿಂದ ದೂರ ಸರಿದು ಅಮೆರಿಕಾದ ಮಗ್ಗುಲಿಗೆ ಸರಿಯುವ ಹಂಚಿಕೆಯಲ್ಲಿದೆ. ಬಾಂಗ್ಲಾದೇಶದಲ್ಲಿ ಹಿಂದಿನ ಶೇಖ್ ಹಸೀನಾ ಸರ್ಕಾರದ ಮಂತ್ರಿಗಳು ಚೀನಿ ಸಾಲವನ್ನು ತೆಗೆದುಕೊಳ್ಳುವುದು ಆತ್ಮಹತ್ಯೆಗೆ ಸಮಾನ ಎಂದು ಹೇಳಿದಲ್ಲದೆ ಇತರ ದೇಶಗಳನ್ನೂ ಎಚ್ಚರಿಸುತ್ತಿದ್ದರು. ಪ್ರಸಕ್ತ ಮಹಮದ್ ಯೂನುಸ್ ಸರ್ಕಾರ ಭಾರತವನ್ನು ವಿರೋಧಿಸಲೆಂದೇ ಮೊದಲಿಗೆ ಚೀನಾದ ತೆಕ್ಕೆಗೆ ಸರಿದರೂ ಅದರಿಂದಾಗುವ ಅಪಾಯದ ವಾಸನೆ ಹತ್ತಿ ದೂರ ಹೋಗುವ ಕಸರತ್ತು ಆರಂಭಿಸಿದೆ.
ಇಂತಹದೇ ಸ್ಥಿತಿ ಆಫ್ರಿಕಾದ ಉದ್ದಗಲಕ್ಕೂ ವ್ಯಾಪಿಸಿದೆ. ಇದು ಚೀನಾದ ಜಾಗತಿಕ ವರ್ಚಸ್ಸಿಗೆ ಪೆಟ್ಟು ನೀಡಿದೆ. ಇದೇ ಅವಧಿಯಲ್ಲಿ ಆಫ್ರಿಕಾದಲ್ಲಿ ನವವಸಾಹತುಶಾಹಿ ಮಾರ್ಗ ಹಿಡಿಯದೆ ಅಲ್ಲಿನ ದೇಶಗಳ ಅಭಿವೃದ್ಧಿಯಲ್ಲಿ ಸಹಕಾರಿ ಹಾಗೂ ಸಹಭಾಗಿಯಾಗುವ ನೀತಿ ಅನುಸರಿಸತೊಡಗಿರುವ ಭಾರತ ಜನಪ್ರಿಯತೆ ಹಾಗೂ ವಿಶ್ವಾಸ ಗಳಿಸುತ್ತಿದೆ. ಇದನ್ನು ಜಗತ್ತು ಗುರುತಿಸುತ್ತಿದೆ ಮತ್ತು ಭಾರತದ ವೈರಿ ಎಂದೇ ಹೇಳಬಹುದಾದ ಅಜರ್ಬೈಜಾನ್ನ ಮಾಧ್ಯಮಗಳೂ ಭಾರತದ ನಡೆಯ ಬಗ್ಗೆ ಧನಾತ್ಮಕ ಮಾತುಗಳನ್ನು ಬರೆಯುತ್ತಿವೆ! ಹೀಗೆ ಜಾಗತಿಕವಾಗಿ ಚೀನಾದ ವರ್ಚಸ್ಸನ್ನು ಕುಂದಿಸಿ ಬಹುತೇಕ ಹಳೆಯ ಮಿತ್ರದೇಶಗಳು ಅದರಿಂದ ದೂರ ಓಡುವಂತೆ ಮಾಡಿದ ಷಿ ಅವರ ನೀತಿಗಳಿಗೆ ಚೀನಿ ಕಮ್ಯೂನಿಸ್ಟ್ ಪಾರ್ಟಿಯಲ್ಲೇ ವಿರೋಧ ವ್ಯಾಪಕವಾಗಿದೆ.
ಇದರೊಂದಿಗೆ ಷಿ ಅವರ ಜನಪ್ರಿಯತೆಯನ್ನು ದೇಶದೊಳಗೇ ಕುಗ್ಗಿಸಿದ ಮತ್ತು ಪಾರ್ಟಿಗೆ ಅಪ್ರಿಯರನ್ನಾಗಿಸಿದ ಮತ್ತೊಂದು ಮುಖ್ಯ ಬೆಳವಣಿಗೆಯೆಂದರೆ ಅವರ ಸರ್ವಾಧಿಕಾರಿ ಮನೋಭಾವ ಹಾಗೂ ಅದು ವ್ಯಕ್ತವಾಗುತ್ತಿರುವ ಬಗೆ. ಯಾವುದೇ ವಿರೋಧವನ್ನು ಸಹಿಸದ ಷಿ ಅದನ್ನು ಹಿಂಸೆಯ ಮೂಲಕ ಹತ್ತಿಕ್ಕುವುದನ್ನೇ ತಮ್ಮ ದೈನಂದಿನ ಕಾರ್ಯಕ್ರಮವಾಗಿಸಿಕೊಂಡಿದ್ದಾರೆ. ಸಂಭಾವಿತ ನಡವಳಿಕೆ ಹಾಗೂ ದೇಶಹಿತಕಾರಕ ನಿಲುವುಗಳಿಗೆ ಹೆಸರಾದ ಮಾಜಿ ಪ್ರಧಾನಿ ಲೀ ಕೇಚಿಯಾಂಗ್ ಜತೆಗೆ ಇಬ್ಬರು ರಕ್ಷಣಾ ಸಚಿವರು, ಒಬ್ಬರು ವಿದೇಶ ಮಂತ್ರಿ, ಹತ್ತಕ್ಕಿಂತಲೂ ಹೆಚ್ಚು ಸೇನಾಧಿಕಾರಿಗಳನ್ನು ಷಿ ಕೊಲ್ಲಿಸಿದ್ದಾರೆ. ಹೆಚ್ಚಿನ ಕೊಲೆಗಳಿಗೆ ಅವರು ಅನುಸರಿಸುವ ವಿಧಾನ ಕ್ರೂರವಾದುದು. ತಮ್ಮ ವಿರೋಧಿಗಳನ್ನು ತಮ್ಮ ಹಸ್ತಕರ ಮೂಲಕ ಬಂಧಿಸಿ ಅದೆಷ್ಟು ಹಿಂಸೆ ನೀಡುತ್ತಾರೆಂದರೆ ಆ ಬಡಪಾಯಿಗಳು ತಮಗೆ ಆತ್ಮಹತ್ಯೆಗೆ ಅವಕಾಶವನ್ನು ಮತ್ತು ಸಾಧನಗಳನ್ನು ಒದಗಿಸುವಂತೆ ಅಂಗಲಾಚುತ್ತಾರೆ! ಆಮೇಲೆ ಅವರು ‘ಆತ್ಮಹತ್ಯೆ’ ಮಾಡಿಕೊಂಡ ಸುದ್ದಿ ಪ್ರಸಾರವಾಗುತ್ತದೆ, ತಮ್ಮ ಕೈಗಳಲ್ಲಿ ರಕ್ತದ ಕಲೆಗಳಿಲ್ಲ ಎಂದು ಷಿ ಆರಾಮವಾಗಿದ್ದುಬಿಡುತ್ತಾರೆ!
ಇದೆಲ್ಲವೂ ಎಷ್ಟು ದಿನಗಳ ಆಟ? ಹಿಂದೆ ದೇಶದ ಹಿತಕ್ಕಾಗಿ ಶ್ರಮಿಸಿದ ಹಿರಿಯ ನೇತಾರರು ಹಾಗೂ ಇಂದು ದೇಶ ಇಳಿದ ದುರ್ಗತಿಗಾಗಿ ನೊಂದ ನಾಯಕರು ಒಟ್ಟುಗೂಡಿ ಷಿ ಅವರ ದುರಾಡಳಿತದಿಂದ ಚೀನಾವನ್ನು ರಕ್ಷಿಸಲು ಯೋಜನೆ ರೂಪಿಸುವುದು ಸಹಜವೇ. ಅದನ್ನು ಮಾಡುತ್ತಿರುವುದು ಮಾಜಿ ಅಧ್ಯಕ್ಷ ಹು ಜಿಂತಾವೋ. ಮತ್ತವರ ಸಹಯೋಗಿಗಳು. ನಿಜ ಹೇಳಬೇಕೆಂದರೆ, ಷಿ ಎರಡು ವರ್ಷಗಳ ಹಿಂದೆ ಪಾರ್ಟಿಯ ಮಹಾಸಭೆಯಿಂದ ಹು ಚಿಂತಾವೋ ಅವರನ್ನು ಅವಮಾನಿಸಿ ಹೊರದಬ್ಬಿಸಿದ್ದು ಅವರ ಅದೃಷ್ಟರೇಖೆಯನ್ನು ನಿರ್ಣಾಯಕವಾಗಿ ಕೆಳಗಿಳಿಸಿದ ಪ್ರಕರಣ. ಅಲ್ಲಿಂದೀಚೆಗೆ ತೆರೆಯ ಹಿಂದೆಯೇ ಕಾರ್ಯಪ್ರವೃತ್ತರಾದ ಹು ತಮ್ಮ ಬೆಂಬಲಿಗರನ್ನು ಪಾರ್ಟಿ, ಸರ್ಕಾರ ಮತ್ತು ಸೇನೆಯಲ್ಲಿ ಉನ್ನತ ಸ್ಥಾನಗಳಿಗೇರಿಸಲು ಆರಂಭಿಸಿದರು. ಇಂದಿನ ಪ್ರಧಾನಿ ಲೀ ಕಿಯಾಂಗ್ ಸೇರಿದಂತೆ ಚೀನಿ ವ್ಯವಸ್ಥೆಯ ಉನ್ನತ ಸ್ಥಾನಗಳಲ್ಲಿ ಹು ಅವರ ಬೆಂಬಲಿಗರಿದ್ದಾರೆ. ಅಷ್ಟೇ ಅಲ್ಲ, ಸೇನೆಯಲ್ಲೂ ಅವರ ಪ್ರಾಬಲ್ಯ ಹೆಚ್ಚಿ ಷಿ ಅವರಿಗೆ ನಿಷ್ಠರಾಗಿದ್ದ ಇಪ್ಪತ್ತಕ್ಕೂ ಅಧಿಕ ಸೇನಾಧಿಕಾರಿಗಳಿಗೆ ಎತ್ತಂಗಡಿಯಾಗಿದೆ! ಹೀಗೆ ಷಿ ಅವರ ಅವನತಿಯನ್ನು ಇನ್ನಷ್ಟು ತೀವ್ರಗೊಳಿಸಿದ್ದು ಮೇ ತಿಂಗಳಲ್ಲಿ ನಡೆದ ಭಾರತ-ಪಾಕಿಸ್ತಾನ ಸಂಘರ್ಷ.
ಚೀನಿ ಸೈನಿಕರು ನೇರ ಹಣಾಹಣಿಯಲ್ಲಿ ಭಾರತೀಯ ಸೈನಿಕರ ಮುಂದೆ ನಿಲ್ಲಲಾರರು ಎನ್ನವುದು ಐದು ವರ್ಷಗಳ ಹಿಂದೆ ಗಲ್ವಾನ್ನಲ್ಲಿ ಸಾಬೀತಾಗಿತ್ತು. ಚೀನಿ ಶಸ್ತ್ರಾಸ್ತ್ರಗಳು ಭಾರತೀಯ ಶಸ್ತ್ರಾಸ್ತ್ರಗಳ ಮುಂದೆ ನಿಲ್ಲಲಾರವು ಎನ್ನುವುದನ್ನು ಆ ನಾಲ್ಕು ದಿನಗಳಲ್ಲಿ ಜಗತ್ತೇ ನೋಡಿ ನಿಬ್ಬೆರಗಾಯಿತು. ಚೀನಿ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಹೊರಟಿದ್ದ ಹಲವು ದೇಶಗಳು ವಹಿವಾಟಿನಿಂದ ಹಿಂದೆ ಸರಿದವು. ಚೀನಿ ವಾಯುಸುರಕ್ಷಾ ವ್ಯವಸ್ಥೆಯನ್ನು ಖರೀದಿಸಲು ಲೆಕ್ಕಹಾಕಿದ್ದ ಬಾಂಗ್ಲಾದೇಶ ಸಹ ಅದಕ್ಕೆ ಭಾರತದ ಬ್ರಹ್ಮೋಸ್ ಮತ್ತು ಎಸ್-400 ಕಾಣಿಸಿದ ಗತಿಯನ್ನು ಕಂಡು ತರಾತುರಿಯಲ್ಲಿ ಮನಸ್ಸು ಬದಲಾಯಿಸಿ ಅಮೆರಿಕಾದತ್ತ ಹೊರಳಿದೆ!
ಷಿ ನಾಯಕತ್ವದಲ್ಲಿ ಆಂತರಿಕವಾಗಿ ಏಕವ್ಯಕ್ತಿಯ ನಿರಂಕುಶಾಧಿಕಾರ, ಆರ್ಥಿಕ ದುಃಸ್ಥಿತಿ, ಬಾಹ್ಯರಂಗದಲ್ಲಿ ಕುಗ್ಗಿದ ರಾಜತಾಂತ್ರಿಕ ವರ್ಚಸ್ಸು, ಭಾರತದ ಎದುರು ನಿರರ್ಥಕವಾದ ಶಸ್ತ್ರಾಸ್ತ್ರಗಳು, ಷಿ ಅವರನ್ನು ಇನ್ನು ಸಹಿಸಿಕೊಳ್ಳಲಾಗದು ಎನ್ನುವ ಸ್ಥಿತಿಯನ್ನು ಕಮ್ಯೂನಿಸ್ಟ್ ಪಾರ್ಟಿಯಲ್ಲಿ ಗಾಢಗೊಳಿಸಿದವು. ಪರಿಣಾಮವಾಗಿ ಕಳೆದೊಂದು ತಿಂಗಳಿಂದಲೂ ಷಿ ಅದೃಶ್ಯರಾಗಿದ್ದಾರೆ, ಅವರ ಅಧ್ಯಕ್ಷೀಯ ಜವಾಬ್ದಾರಿಗಳನ್ನು ಅವರ ಕೈಯಿಂದ ಕಿತ್ತುಕೊಳ್ಳುವ ನಿರ್ಣಯವನ್ನು ಕಮ್ಯೂನಿಸ್ಟ್ ಪಾರ್ಟಿ ತೆಗೆದುಕೊಂಡಿದೆ.
ಇದರಿಂದಾಗಿ ಹೊರಜಗತ್ತಿನ ಜತೆ, ಮುಖ್ಯವಾಗಿ ಅಮೆರಿಕಾದ ಜತೆ ಚೀನಾದ ಸಂಬಂಧಗಳಲ್ಲಿ ಅಗಾಧ ಪಲ್ಲಟಗಳಾಗಲಿವೆ ಎಂದು ವಿಶ್ಲೇಷಕ ಗೋರ್ದಾನ್ ಚಾನ್ ಸೇರಿದಂತೆ ಹಲವರು ವಿದ್ವಾಂಸರು ಹೇಳುತ್ತಾರೆ. ಅಧ್ಯಕ್ಷ ಟ್ರಂಪ್ ಒಂದು ಹೆಜ್ಜೆ ಮುಂದೆ ಹೋಗಿ ‘ಚೀನೀ ಸಾಮ್ರಾಟನ ಅಂತ್ಯ’ದ ಭವಿಷ್ಯ ನುಡಿದಿದ್ದಾರೆ. ಆದರೆ ನ್ಯಾಟೋ ಸೇನಾಕೂಟದ ಮಹಾ ಕಾರ್ಯದರ್ಶಿ ಮಾರ್ಕ್ ರಟ್ ಹೇಳುವುದೇ ಬೇರೆ. ತಮ್ಮ ದೈನಂದಿನ ಕೆಲಸಕಾರ್ಯಗಳನ್ನು ಇತರರಿಗೆ ನೀಡಿ ಅವುಗಳ ಜಂಜಡಗಳಿಂದ ಹೊರಬಂದು ಮಹತ್ತರವಾದುದೇನಕ್ಕೋ ಷಿ ತಮ್ಮನ್ನು ಸಿದ್ಧಗೊಳಿಸಿಕೊಳ್ಳುತ್ತಿದ್ದಾರೆ; ಅಮೆರಿಕಾದ ವಿರೋಧವನ್ನು ಲೆಕ್ಕಿಸದೆ ಹಾಗೂ ಮೂರನೆಯ ಮಹಾಯುದ್ಧಕ್ಕೂ ಅಂಜದೆ ಅವರು ತೈವಾನ್ ಅನ್ನು ಆಕ್ರಮಿಸಿಕೊಳ್ಳಲು ಗಂಭೀರ ಯೋಜನೆಯನ್ನು ರೂಪಿಸುತ್ತಿರಬಹುದು ಎಂದು ರಟ್ ಹೇಳುತ್ತಾರೆ! ಈ ಚೀನೀ ಒಗಟನ್ನು ಬಿಡಿಸಲು ನಮಗೆ ಕೆಲವು ದಿನಗಳ ಅಗತ್ಯವಿದೆ.
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)