ನನ್ನಮ್ಮ ಶಾಂತಸ್ವರೂಪಿಣಿ, ಸಹನೆಯೇ ಅವಳ ಉಸಿರು. ತಾಳ್ಮೆಯ ಮೂರ್ತಿಯಾದ ಅವಳೂ ಒಮ್ಮೆನನ್ನ ನಿರ್ಲಕ್ಷೃದಿಂದಾಗಿ ಸಿಟ್ಟಿಗೆದ್ದಿದ್ದಳು. ಸುಮಾರು ನಲವತ್ತು ವರುಷದ ಹಿಂದಿನ ಘಟನೆಯಿದು. ನಾನಾಗ ಐದನೆ ತರಗತಿಗೆ ಹೋಗುತ್ತಿದ್ದೆ. ಮಳೆಗಾಲಕ್ಕೆಂದು ಅಪ್ಪಯ್ಯ ನನಗೆ, ಅಣ್ಣನಿಗೆ ರೇನ್ ಕೋಟ್ ತಂದಿದ್ದರೆ ಅಂಗಡಿಯಲ್ಲಿ ಕಂಡ ಬಣ್ಣದ ಪುಟ್ಟ ಕೊಡೆ ನನ್ನ ಮನಸ್ಸನ್ನು ಸೆಳೆದಿತ್ತು. ಅದು ಬೇಕೆಂದು ಹಠ ಮಾಡಿದರೂ ಅಮ್ಮ ಏನೇನೊ ಸಬೂಬು ಹೇಳಿ ಸುಮ್ಮನಿರಿಸಿದಳು.
ಶಾಲೆಗೆ ಹೋದಾಗಲೂ ನನ್ನ ಕಣ್ತುಂಬಾ ಬಣ್ಣದ ಕೊಡೆಯೇ ತುಂಬಿತ್ತು. ಮನೆಗೆ ಹೊರಟಾಗ ದಾರಿಯಲ್ಲಿ ಯಾರೋ ಕಿಡಿಗೇಡಿಗಳು ಬ್ಲೇಡಿನಿಂದ ರೇನ್ ಕೋಟಿನ ಹಿಂಭಾಗವನ್ನು ಉದ್ದಕ್ಕೆ ಕೊಯ್ದಿದ್ದು ಗೊತ್ತಾಗಿ ಅಪ್ಪನ ಹೊಡೆತದ ನೆನಪು ಅಳು ತರಿಸಿತು. ತಂದು ವಾರವಾಗಿಲ್ಲಾ ಆಗಲೇ ಹಾಳು ಮಾಡಿದೆನೆಂದು ಅಮ್ಮನಿಗೆ ತುಂಬಾ ಸಿಟ್ಟು ಬಂದು ಹೊಡೆಯಲು ಬಂದವಳು, ನಿಜ ಸ್ಥಿತಿ ತಿಳಿದು, ನನ್ನ ಅಳು ನೋಡಿ ಕರಗಿ ತಲೆ ಸವರುತ್ತಾ, ‘‘ನಮಗೆಷ್ಟು ಕಷ್ಟವಿದೆಯೆಂದು ನಿನಗೆ ಹೇಗೆ ಅರ್ಥ ಮಾಡಿಸಲಿ? ಚುರುಕುತನ ಕಲಿ ಮಗಳೇ. ನಿನ್ನ ವಸ್ತುವನ್ನು ನೀನು ಸರಿಯಾಗಿ ಇಟ್ಟುಕೊಳ್ಳದೆ, ಯಾರೋ ಹಾಳು ಮಾಡಿದರೆಂದು ಹೇಳಿದರೆ ಏನು ಮಾಡಲಿ? ನಿನ್ನ ವಸ್ತುವಿಗೆ ನೀನೆ ಹೊಣೆಗಾರಳು’’ ಎಂದು ತಿಳಿ ಹೇಳಿದಳು. ಅಮ್ಮನ ಆ ಮಾತು ಇಂದಿಗೂ ನನ್ನ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ, ನನಗೆ ಮಾರ್ಗದರ್ಶಕವಾಗುತ್ತಿದೆ.
| ಸುಲೋಚನಾ ವಾದಿರಾಜ್ ಹೊಳೆಹೊನ್ನೂರು, ಶಿವಮೊಗ್ಗ