ಅಂಕಣ

ಇಂದು ವಿಶ್ವ ನಗು ದಿನ; ಬನ್ನಿ... ಎಚ್​. ಡುಂಡಿರಾಜ್​ ಅವರ ಕವನಗಳನ್ನು ಓದುತ್ತ ನಗೋಣ...

ಎಲ್ಲರ ಬದುಕೂ ಈಗ ಕರೊನಾ ಸುತ್ತಲೇ ಗಿರಕಿ ಹೊಡೆಯುತ್ತಿದೆ. ಇದ್ದಲ್ಲೇ ಇದ್ದು ಎಲ್ಲರಿಗೂ ಬೋರಾಗಿದೆ. ಮೊಬೈಲು, ಟಿ.ವಿ. ನೋಡಿ ನೋಡಿ ಸಾಕಾಗಿದೆ. ಇಂಥ ಹೊತ್ತಿನಲ್ಲೇ ನಮ್ಮೆಲ್ಲರನ್ನೂ ನಗಿಸಲು ಮತ್ತೊಂದು ‘ನಗೆ ದಿನ’ ಬಂದಿದೆ. ಕನ್ನಡದ ಖ್ಯಾತ ಹಾಸ್ಯ‘ಪನ್’ಡಿತರಾದ ಎಚ್. ಡುಂಡಿರಾಜ್ ಅವರು ‘ವಿಜಯವಾಣಿ’ ಓದುಗರಿಗಾಗಿಯೇ ಹನಿಗವನಗಳನ್ನು ಹೊಸೆದು ಕೊಟ್ಟಿದ್ದಾರೆ. ಬನ್ನಿ ಸವಿಯೋಣ.
ತಬ್ಬಲಿ

ಕರೊನಾದಿಂದಾಗಿ
ಇವನೀಗ ಪಾಪ
ನಿಜವಾಗಿಯೂ ತಬ್ಬಲಿ
ಗೆಳತಿಯರೆಲ್ಲ ದೂರ
ಬರೀ ನಮಸ್ಕಾರ
ಕೇಳುತ್ತಿದ್ದಾನೆ ಓ ದೇವರೆ
ಯಾರನ್ನು ತಬ್ಬಲಿ?

ಕನಸು ನನಸು

ಕೊನೆಗೂ ಸಿಕ್ಕ ಕುಡಿಯದ
ಪರಸ್ತ್ರೀಯರನ್ನು ನೋಡದ
ಮನೆಗೆಲಸ ಮಾಡುವ ಗಂಡ
ಎಲ್ಲ ಮಹಿಳೆಯರ ಹಳೆಯ
ಕನಸನ್ನು ನನಸು ಮಾಡಿತು
ಲಾಕ್​ಡೌನ್​ ಮಂತ್ರದಂಡ !

ಸಮಸ್ಯೆ

ಹಲ್ವ ಅಂದರೆ ನೋಡಿ
ನಮ್ಮೂರ ಗೋಧಿ ಹಲ್ವ
ಅಂಥ ಹಲ್ವ ಇಲ್ಲಿಲ್ಲ,
ಪಾರ್ಸೆಲ್​ ತರಿಸಿ
ತಿನ್ನುವಾ ಅಂದರೆ ಅಯ್ಯೋ ಹಲ್ಲಿಲ್ಲ