ಬೆಂಗಳೂರಿನ ಲಲಿತಾ ಕುಟುಂಬ 
ಅಂಕಣ

ಜೇನಿನ ಗೂಡು ನಾವೆಲ್ಲ; ಇಂದು ವಿಶ್ವ ಕುಟುಂಬ ದಿನ

ಕುಟುಂಬವೆಂದರೆ ದೊಡ್ಡ ಭಾವಲೋಕ, ನೆಮ್ಮದಿಯ ಸೆಲೆ. ಸುರಕ್ಷಾ ಕವಚವೂ ಹೌದು. ಇತ್ತೀಚಿನ ದಿನಗಳಲ್ಲಿ ಪರಿವಾರದ ಬಂಧಗಳು ಸಡಿಲವಾಗುತ್ತಿದ್ದು, ಹೊಂದಾಣಿಕೆ ಎಂಬುದು ವಿರಳವಾಗುತ್ತಿದೆ. ಇಂಥ ಹೊತ್ತಲ್ಲಿ ಅವಿಭಕ್ತ ಕುಟುಂಬಗಳು ಪ್ರೀತಿಯ ಮೌಲ್ಯ, ಸಹಬಾಳ್ವೆಯ ಆದರ್ಶವನ್ನು ಸಾಕ್ಷಾತ್ಕರಿಸುತ್ತಿವೆ. ‘ವಿಶ್ವ ಕುಟುಂಬ ದಿನ’ದ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ಅಂಥ ಕೆಲ ಕೂಡುಕುಟುಂಬಗಳ ಬದುಕು ಮತ್ತು ಸಾರ್ಥಕತೆಯ ಹಾದಿ ಕುರಿತಾದ ಮಾಹಿತಿ ಇಲ್ಲಿದೆ.

ಕೂಡಿ ಬಾಳುವ ಸುಖ

ಕೂಡಿ ಬಾಳುವುದರಲ್ಲಿ ಸ್ವರ್ಗಸುಖವಿದೆ ಎಂಬುದನ್ನು ಇಂದಿನ ಜಮಾನಕ್ಕೆ ಸಾರಿ ಹೇಳುತ್ತಿದೆ ಹೊಸಪೇಟೆಯ ಕುಡತಿನಿ ವೀರಣ್ಣನವರ ಕುಟುಂಬ. ಕುಡತಿನಿ ಕುಟುಂಬದ ಸದಸ್ಯರು ಕಳೆದ 78 ವರ್ಷದಿಂದ ಒಂದೇ ಕಡೆ ನೆಲೆಸಿದ್ದಾರೆ. ತನ್ನ ಮಕ್ಕಳೆಲ್ಲರೂ ಕೂಡಿ ಬಾಳಬೇಕೆಂಬ ಕನಸು ಕಂಡ ವೀರಣ್ಣ-ಹಂಪಮ್ಮ ದಂಪತಿ, ಭಿನ್ನಾಭಿಪ್ರಾಯಗಳಿಲ್ಲದಂತೆ ಬದುಕು ನಡೆಸುವುದನ್ನು ಮಕ್ಕಳಾದ ಹನುಮಂತಪ್ಪ, ಭೂಪತಿ, ಶಿವಾನಂದ ಮತ್ತು ವೆಂಕಟೇಶಗೆ ಕಲಿಸಿಕೊಟ್ಟಿದ್ದಾರೆ. ಮಕ್ಕಳು ಸಹ ತಂದೆಯ ಆಶಯದಂತೆ ಸಾಗುತ್ತಿದ್ದಾರೆ. ಕುಡತಿನಿ ಕುಟುಂಬದಲ್ಲಿ ಹಿರಿಯರಾಗಿ ವೆಂಕಟೇಶ ಕುಡತಿನಿ ಒಳಗೊಂಡಂತೆ ನಾಲ್ವರು ಸಹೋದರರು, ಪತ್ನಿಯರು, ಸೊಸೆಯಂದಿರು, ಮೊಮ್ಮಕ್ಕಳು ಮತ್ತು ಮರಿಮೊಮ್ಮಕ್ಕಳು ಸೇರಿ 42 ಜನ ಒಂದೇ ಸೂರಿನಲ್ಲಿ ಬದುಕನ್ನು ಸಂಭ್ರಮಿಸುತ್ತಿದ್ದಾರೆ.

ಇಂದಿನ ಆಧುನಿಕ ಪದ್ಧತಿಯಿಂದ ಅವಿಭಕ್ತ ಕುಟುಂಬಗಳು ಮರೆಯಾಗಿವೆ. ಆದರೆ, ಮನುಷ್ಯ ಕೂಡಿ ಬಾಳಿದರೆ ಹೆಚ್ಚು ಸಂತೋಷ ಎಂಬುದನ್ನು ಅರ್ಥೈಸಿಕೊಳ್ಳಬೇಕು. ನಮ್ಮ ತಂದೆ ಹಾಕಿಕೊಟ್ಟ ಮಾರ್ಗದಲ್ಲಿಯೇ ನಾವೆಲ್ಲರೂ ಒಂದಾಗಿ ಒಂದೇ ಕಡೆ ನೆಲೆಸಿ ಜೀವನದ ಬಂಡಿ ಸಾಗಿಸುತ್ತಿದ್ದೇವೆ. | ವೆಂಕಟೇಶ ಕುಡತಿನಿ

ಮನೆಯಲ್ಲಿ ಮೂರ್ನಾಲ್ಕು ಜನರಿದ್ದರೆ ಭಿನ್ನಾಭಿಪ್ರಾಯ ಮೂಡುವುದು ಸಹಜ ಎಂಬಂತಾಗಿದೆ. ಆದರೆ, ಈ ಕುಟುಂಬದಲ್ಲಿ ಮೂರು ಡಜನ್​ಗೂ ಹೆಚ್ಚು ಜನರಿದ್ದರೂ ಭಿನ್ನಾಭಿಪ್ರಾಯ ಕಂಡುಬಂದಿಲ್ಲ. ಊಟ, ತಿಂಡಿ, ದುಡಿಮೆ ಹೀಗೆ ಯಾವುದರಲ್ಲಿಯೂ ತಕರಾರು ಇಲ್ಲವೇ ಇಲ್ಲ. ಮನೆಗೆಲಸವನ್ನು ಎಲ್ಲರೂ ಸೇರಿ ಮಾಡುತ್ತಾರೆ. ವಿಶೇಷ ಕಾರ್ಯಕ್ರಮವಿದ್ದ ದಿನ ಮನೆಯಲ್ಲಿ ಸಮಾವೇಶವೊಂದು ಮೈದಳೆದಂತೆ ಕಾಣುತ್ತದೆ. ಮುಖ್ಯವಾಗಿ ಮನೆಯಲ್ಲಿ ಶಿಸ್ತು, ಸಂಪ್ರದಾಯ ಹೊಂದಾಣಿಕೆ, ಅನುಕಂಪ, ಪ್ರೀತಿ ಇದೆ. ಇದೇ ತುಂಬಿದ ಕುಟುಂಬದ ಪ್ರೀತಿಯ ಗುಟ್ಟು. ‘ಅವಿಭಕ್ತ ಕುಟುಂಬಗಳು ಒಂದು ಸಾಮಾಜಿಕ ಶಕ್ತಿ ಎನ್ನುತ್ತಿದ್ದ ನಮ್ಮ ತಂದೆಯೇ ನಮಗೆ ದೊಡ್ಡ ಆಸ್ತಿ. ಇಂದು ಅವರಿಲ್ಲದಿದ್ದರೂ ಅವರು ಆರಂಭಿಸಿದ ದಿನಪತ್ರಿಕೆ ವಿತರಣೆ ಕೆಲಸ ನಮ್ಮೆನ್ನೆಲ್ಲ ಸಲುಹಿದೆ. ನಾಲ್ಕು ಜನ ಸೇರಿ ನಿರ್ಧಾರ ಕೈಗೊಳ್ಳುವುದರಿಂದ ಎಲ್ಲಿಯೂ ವೈಮನಸ್ಸು ಉಂಟಾಗಿಲ್ಲ. ಬದುಕು ಮತ್ತು ವ್ಯವಹಾರ ಎಲ್ಲವೂ ಉತ್ತಮವಾಗಿ ನಡೆಯುತ್ತಿದೆ. ಮಕ್ಕಳು, ಮೊಮ್ಮಕ್ಕಳಿಗೆ ಮುಂದೆಯೂ ಕೂಡಿ ಬಾಳುವುದನ್ನೇ ಕಲಿಸಿಕೊಡುತ್ತೇವೆ’ ಎನ್ನುತ್ತಾರೆ ಕುಟುಂಬದ ಹನುಮಂತಪ್ಪ, ಶಿವಾನಂದ, ಭೂಪತಿ, ವೀರಣ್ಣ.

ಮಾಳಗಿ ಕುಟುಂಬದ ಅನ್ಯೋನ್ಯತೆ

ರಟ್ಟಿಹಳ್ಳಿ ತಾಲೂಕು ಶಿರಗಂಬಿ ಗ್ರಾಮದ ಹನುಮಂತಪ್ಪ ಶಿವಪ್ಪ ಮಾಳಗಿ ಅವರದ್ದು 56 ಸದಸ್ಯರ ಕುಟುಂಬ. ಅನ್ಯೋನ್ಯತೆ ಇವರ ಮನೆಮಂತ್ರ. ಕೆಲವರು ಉದ್ಯೋಗ ನಿಮಿತ್ತ ಬೇರೆ ಕಡೆ ಇರುವುದರಿಂದ ಪ್ರಸ್ತುತ ಒಂದೇ ಸೂರಿನಡಿ 35ಕ್ಕೂ ಹೆಚ್ಚು ಜನರು ವಾಸವಾಗಿದ್ದಾರೆ. ಹನುಮಂತಪ್ಪ, ಚೆನ್ನಬಸಪ್ಪ, ಮಲ್ಲನಗೌಡ, ಬಸವರಾಜ, ಚಂದ್ರಶೇಖರ ಈ ಐವರು ಸಹೋದರರು ಮತ್ತು ಮೂವರು ಸಹೋದರಿಯರು ಮೂಲಕುಟುಂಬದ ಸದಸ್ಯರು. ಹನುಮಂತಪ್ಪ ಶಿವಪ್ಪ ಮಾಳಗಿ ಕುಟುಂಬ ಹಲವು ವರ್ಷಗಳಿಂದ ವ್ಯವಸಾಯವನ್ನೇ ನಂಬಿ ಜೀವನ ಸಾಗಿಸುತ್ತಿದೆ. 68 ಎಕರೆ ಕೃಷಿ ಜಮೀನು ಇದೆ. ಕುಟುಂಬದ ಎಲ್ಲ ಗೃಹಿಣಿಯರು ಅಡುಗೆ ಕೆಲಸದೊಂದಿಗೆ ಕೃಷಿ ಚಟುವಟಿಕೆಯಲ್ಲೂ ಕೈ ಜೋಡಿಸುತ್ತಾರೆ. ಎಲ್ಲ ಸದಸ್ಯರಿಗೆ ಒಂದೇ ಅಡುಗೆಮನೆ ಇದ್ದು ಎಲ್ಲರಿಗೂ ಒಂದೇ ಒಲೆಯಲ್ಲಿ ಅಡುಗೆ ಮಾಡಲಾಗುತ್ತಿದೆ.

ಹಲವು ವರ್ಷಗಳಿಂದ ಒಟ್ಟಾಗಿ ಬಾಳುತ್ತಿರುವುದು ನಮಗೆಲ್ಲ ಸಂತಸ ತಂದಿದೆ. ಮನೆಯೆಂದ ಮೇಲೆ ಸಣ್ಣಪುಟ್ಟ ಸಮಸ್ಯೆಗಳು ಇರುವುದು ಸಹಜ. ಆದರೆ, ಈ ಸಮಸ್ಯೆಗಳನ್ನು ಎಲ್ಲರೂ ತಾಳ್ಮೆಯಿಂದ ಬಗೆಹರಿಸಿಕೊಂಡು ಸಂತೋಷದಿಂದ ಬದುಕಬೇಕು. ಮನೆಯಲ್ಲಿನ ಮಕ್ಕಳು ಸೇರಿದಂತೆ ಎಲ್ಲರೂ ಗುರು-ಹಿರಿಯರಿಗೆ ಗೌರವ ನೀಡುತ್ತಾರೆ. ದ್ವೇಷ, ಸಿಟ್ಟು, ಕೋಪಗಳನ್ನು ಕುಟುಂಬದಲ್ಲಿ ಸಾಧಿಸಬಾರದು. ಎಲ್ಲರೂ ಒಟ್ಟಾಗಿ ಇದ್ದು ಶುಭಸಮಾರಂಭ, ಹಬ್ಬ ಹರಿದಿನಗಳನ್ನು ಆಚರಿಸಿಕೊಂಡಾಗ ಅದರಲ್ಲಿನ ಸಂತೋಷ ಅನುಭವಸಿದವರಿಗೆ ಮಾತ್ರ ಗೊತ್ತು. | ಹನುಮಂತಪ್ಪ ಶಿವಪ್ಪ ಮಾಳಗಿ

ನಾಲ್ಕು ತಲೆಮಾರು ಒಟ್ಟಿಗೆ...

ನಾಲ್ಕು ತಲೆಮಾರಿನ ಅಪರೂಪದ ಅವಿಭಕ್ತ ಕುಟುಂಬವೊಂದು ಬೀದರ್ ಜಿಲ್ಲೆಯಲ್ಲಿದೆ. ಹುಮನಾಬಾದ್ ಕ್ಷೇತ್ರದ ಶಾಸಕ ರಾಜಶೇಖರ ಪಾಟೀಲ್ ಅವರ ಒಂದೇ ಮನೆಯಲ್ಲಿ ಮನೆತನದ ಎಲ್ಲ ಸದಸ್ಯರು ಇರುವ ಮೂಲಕ ಮಾದರಿ ಕುಟುಂಬ ಎನಿಸಿದೆ. ಶಾಸಕ ರಾಜಶೇಖರ ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ ಪಾಟೀಲ್, ಭೀಮರಾವ ಪಾಟೀಲ್ ಹಾಗೂ ಉದ್ಯಮಿ ಸೋಮಶೇಖರ ಪಾಟೀಲ್ ಸೇರಿ ನಾಲ್ವರು ಸಹೋದರರು. ಇವರು ಮಾಜಿ ಸಚಿವ ದಿ.ಬಸವರಾಜ ಪಾಟೀಲ್ ಪುತ್ರರು. ಹುಮನಾಬಾದ್ ಬಸ್ ನಿಲ್ದಾಣ ಪಕ್ಕದಲ್ಲಿರುವ ಮನೆಯಲ್ಲಿ ಈ ನಾಲ್ವರು ಸಹೋದರರು ತಾಯಿ ಜತೆ ವಾಸವಾಗಿದ್ದಾರೆ. ತಾಯಿ, ಶಾಸಕ ರಾಜಶೇಖರ ಪಾಟೀಲ್, ಇವರ ಪುತ್ರ ಅಭಿಷೇಕ, ಮೊಮ್ಮಗ ಹೀಗೆ ನಾಲ್ಕು ತಲೆಮಾರಿನವರು ಒಂದೇ ಮನೆಯಲ್ಲಿರುವುದು ವಿಶೇಷ. ‘ಹಿರಿಯಣ್ಣ ಶಾಸಕ ನಮಗೇನು ಚಿಂತೆ?’ ಎಂಬ ಅಹಂ ಇವರ ಕುಟುಂಬದಲ್ಲಿ ಕಾಣಸಿಗದು. ಇಬ್ಬರು ಸಹೋದರರನ್ನೂ ರಾಜಶೇಖರ ಪಾಟೀಲ್ ವಿಧಾನ ಪರಿಷತ್​ಗೆ ಕಳಿಸಿದ್ದಾರೆ. ಅಣ್ಣನ ಪ್ರತಿಯೊಂದು ಕಾರ್ಯದಲ್ಲಿ ಸಹೋದರರ ಸಹಭಾಗಿತ್ವ ಕಾಣಬಹುದು. ಪಾಟೀಲ್ ಸಹೋದರರದ್ದು ವಿನಯ ಸ್ವಭಾವ. ತಂದೆ ದಿ.ಬಸವರಾಜ ಪಾಟೀಲ್ ಹಾಕಿಕೊಟ್ಟ ಮಾರ್ಗದಲ್ಲಿ ನಾಲ್ವರು ಅಣ್ಣ-ತಮ್ಮಂದಿರು ನಡೆಯುತ್ತಿದ್ದಾರೆ.

ಯರಗಟ್ಟಿ ಫ್ಯಾಮಿಲಿ ಬಲುಗಟ್ಟಿ

ಒಗ್ಗಟ್ಟಿನಲ್ಲಿ ಬಲವಿದೆ ಎಂಬುದಕ್ಕೆ ಸಾಕ್ಷಿ ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದ ಯರಗಟ್ಟಿ ಕುಟುಂಬ. ಗುರುಪಾದಪ್ಪ ದುಂಡಪ್ಪ ಯರಗಟ್ಟಿ (92) ಈ ಕುಟುಂಬದ ಯಜಮಾನ. ಅವರ ಕುಟುಂಬದಲ್ಲಿ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಸೇರಿದಂತೆ ಒಟ್ಟು 36 ಸದಸ್ಯರು ಇದ್ದಾರೆ. 70 ವರ್ಷಗಳ ಹಿಂದೆ ಅನ್ಯರ ತೋಟದಲ್ಲಿ ಕೆಲಸ ಮಾಡುತ್ತಿದ್ದ ಗುರುಪಾದಪ್ಪ ಯರಗಟ್ಟಿ ಅವರು ಈಗ ನಲವತ್ತು ಎಕರೆ ಜಮೀನಿನ ಮಾಲೀಕರು. ಅವರ ಈ ಸಾಧನೆಗೆ ಮೂಲಕಾರಣವೇ ಕೃಷಿ ಹಾಗೂ ಅವರ ಕುಟುಂಬದ ಒಗ್ಗಟ್ಟು. ಅವರಿಗೆ ನಾಲ್ವರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಎಲ್ಲರೂ ಕೃಷಿಕಾಯಕದಲ್ಲಿ ತೊಡಗಿದ್ದಾರೆ. ಒಬ್ಬರು ಟ್ರ್ಯಾಕ್ಟರ್ ಮೂಲಕ ನೇಗಿಲು ಹೊಡೆಯುವುದು, ಬಿತ್ತುವುದು, ಕಸ ತೆಗೆಯುವುದು ಮಾಡಿದರೆ ಮತ್ತೊಬ್ಬರು ಕೃಷಿಗೆ ಬೇಕಾದ ಎಲ್ಲ ಪತ್ರವ್ಯವಹಾರ, ಕಚೇರಿ ಕೆಲಸ ಮಾಡಿಕೊಂಡು ಬರುತ್ತಾರೆ. ಇನ್ನಿಬ್ಬರು ತೋಟದ ಕಾರ್ಯ ಹಾಗೂ ಕೆರೆ ನಿರ್ವಹಣೆ ಮಾಡುತ್ತಾರೆ. ಉಳಿದ ಎಲ್ಲ ಕಾರ್ಯವನ್ನೂ ಸೊಸೆಯಂದಿರು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು, ಅಳಿಯಂದಿರು ಹಾಗೂ ಹೆಣ್ಣುಮಕ್ಕಳು ಮಾಡುತ್ತಾರೆ.

ಮಕ್ಕಳ ಜತೆಗೆ ಸೊಸೆಯಂದಿರೂ ತೋಟದಲ್ಲಿ ಕೆಲಸ ಮಾಡಿದ್ದರಿಂದ ಪ್ರತಿವರ್ಷ ಒಂದು ಎಕರೆ, ಎರಡು ಎಕರೆ ಹೀಗೆ ಜಮೀನು ಖರೀದಿ ಮಾಡುತ್ತಿದ್ದೆ. ಈಗ 40 ಎಕರೆ ನೀರಾವರಿ ಜಮೀನು ಇದೆ. ಒಂದೇ ಒಂದು ಸಲ ನಮ್ಮ ಮನೆಯಲ್ಲಿ ಯಾವ ವಿಚಾರವಾಗಿಯೂ ಜಗಳ ನಡೆದಿಲ್ಲ. ಎಲ್ಲರೂ ಅವರವರ ಕೆಲಸ ಮಾಡುತ್ತಿರುವುದರಿಂದ ಇಲ್ಲಿ ಯಾರೂ ಹೆಚ್ಚು-ಕಡಿಮೆ ಎನ್ನುವ ಪ್ರಶ್ನೆಯೇ ಬಂದಿಲ್ಲ. | ಗುರುಪಾದಪ್ಪ ಯರಗಟ್ಟಿ

ಸಂತೋಷದ ಹೊನಲು

40 ಸದಸ್ಯರ ಕುಟುಂಬವೊಂದು ಮೂರು ತಲೆಮಾರುಗಳಿಂದ ಒಂದೇ ಸೂರಿನಡಿ ವಾಸಿಸುತ್ತಿದ್ದು, ಅವಿಭಕ್ತ ಪರಂಪರೆ ಜೀವಂತಿಕೆಗೆ ಸಾಕ್ಷಿಯಾಗಿದೆ. ಯಾದಗಿರಿ ಜಿಲ್ಲಾ ಕೇಂದ್ರದಿಂದ ಕೂಗಳತೆ ದೂರದ ಚಾಮನಾಳ ಗ್ರಾಮದಲ್ಲಿ ದೊಡ್ಡ ಸಿದ್ದಲಿಂಗಪ್ಪ ಬಡಿಗೇರ ಅವರ ಅವಿಭಕ್ತ ಕುಟುಂಬ ಪಿತ್ರಾರ್ಜಿತವಾಗಿ ಬಂದ ಜಮೀನಿನಲ್ಲಿ ಸಾಗುವಳಿ ಮಾಡುತ್ತ ನೆಮ್ಮದಿಯ ಬದುಕು ಸಾಗಿಸುತ್ತಿದೆ. ದೊಡ್ಡ ಸಿದ್ದಲಿಂಗಪ್ಪ ಅವರಿಗೆ ನಾಲ್ವರು ಪುತ್ರರು, ಇಬ್ಬರು ಪುತ್ರಿಯರಿದ್ದರೆ, ಮಲ್ಲಪ್ಪ ಬಡಿಗೇರಗೆ ನಾಲ್ವರು ಪುತ್ರಿಯರು, ಒಬ್ಬ ಮಗ ಇದ್ದಾನೆ. ಕರೊನಾದಿಂದ ಕಳೆದ ವರ್ಷ ದೊಡ್ಡ ಸಿದ್ದಲಿಂಗಪ್ಪ ಮೃತಪಟ್ಟರು. ಹೆಣ್ಮಕ್ಕಳಿಗೆ ಮದುವೆ ಮಾಡಿಕೊಟ್ಟಿದ್ದು, ಐವರು ಗಂಡು ಮಕ್ಕಳು ಸೇರಿ ಈ ವಂಶವೃಕ್ಷದ ಸದಸ್ಯರ ಸಂಖ್ಯೆ ಇದೀಗ 40ಕ್ಕೆ ಬಂದು ನಿಂತಿದೆ. ಈ ಮನೆತನದ ಸೊಸೆಯಂದಿರು ಸಹ ಅನ್ಯೋನ್ಯವಾಗಿದ್ದಾರೆ. 16 ಎಕರೆ ಜಮೀನಿನಲ್ಲಿ ಅಣ್ಣ, ತಮ್ಮಂದಿರು ಸೇರಿ ಉಳುಮೆ ಮಾಡಿಕೊಂಡಿದ್ದಾರೆ. ಮನೆಯಲ್ಲಿ ಒಂದ್ಹೊತ್ತಿನ ಊಟಕ್ಕೆ ಮೂರು ಸೇರು ಜೋಳದ ಹಿಟ್ಟು ಹಾಗೂ ನಾಲ್ಕು ಸೇರು ಅಕ್ಕಿ ಖಾಲಿಯಾಗುತ್ತದೆ. ಹಿರಿಯರ ಮಾತನ್ನು ಕಿರಿಯರು ಪಾಲಿಸುತ್ತಾರೆ.
ನಮ್ಮ ಅಪ್ಪ-ಚಿಕ್ಕಪ್ಪ ಕೂಡ ಒಂದೇ ಸೂರಿನಲ್ಲಿದ್ದು ಕೊಂಡು ಸಂಸಾರದ ಬಂಡಿ ಎಳೆದಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದರ್ಶನ ದಲ್ಲಿ ನಾವೂ ಜೀವನ ಸಾಗಿಸುತ್ತಿದ್ದೇವೆ. | ಶ್ರೀಶೈಲ ಬಡಿಗೇರ

ಸಾಮರಸ್ಯದ ಜೀವನ

ಮದ್ದೂರು ತಾಲೂಕು ಮಠದ ದೊಡ್ಡಿ ಗ್ರಾಮದ ದೊಡ್ಡ ಸಂಗ್ಯ ಒಡೆಯರ್ ಕುಟುಂಬ ನಾಲ್ಕು ತಲೆಮಾರಿನಿಂದ ಸಾಮರಸ್ಯದ ಜೀವನ ನಡೆಸಿಕೊಂಡು ಬಂದಿದೆ. ಸದಾಶಿವಸ್ವಾಮಿ ಮತ್ತು ಗೌರಮ್ಮ ದಂಪತಿಗೆ ನಾಲ್ವರು ಗಂಡುಮಕ್ಕಳು. ಗ್ರಾಮದಲ್ಲಿ ದೊಡ್ಡ ಸಂಗ್ಯ ಒಡೆಯರ್, ಇವರ ಮೂರನೇ ಮಗ ಮತ್ತು ಇವರ ಕುಟುಂಬ, ಅಂತೆಯೇ ಗುರುಸಿದ್ದಸ್ವಾಮಿ ಹಾಗೂ ಕುಟುಂಬ ವಾಸವಿದೆ. 84 ವರ್ಷದ ಒಡೆಯರ್ ಅವರೇ ಕುಟುಂಬದ ಯಜಮಾನ. ಯಾವುದೇ ನಿರ್ಧಾರವಾದರೂ ಇವರು ಹೇಳಿದ್ದೇ ಅಂತಿಮ. ಇದಕ್ಕೆ ಎಲ್ಲರೂ ಕಟ್ಟಿಬದ್ಧರು. ಗ್ರಾಮದಲ್ಲಿ ಈ ಕುಟುಂಬ ದವರೇ ಸೇರಿ ಹರಿಹರ ಕೂಡಲ ಸಂಗಮ ಶಿವ ಕ್ಷೇತ್ರವೆಂದು ಮಠ ಸ್ಥಾಪಿಸಿದ್ದಾರೆ. ಇಷ್ಟು ವರ್ಷದ ಅವಧಿಯಲ್ಲಿ ಕುಟುಂಬದವರ ನಡುವೆ ಸಣ್ಣ ಬಿರುಕು ಕಾಣಿಸಿಕೊಂಡಿಲ್ಲ.
ನಮ್ಮ ಕುಟುಂಬ ಗುರುಪರಂ ಪರೆಯನ್ನು ಪಾಲಿಸಿಕೊಂಡು ಬಂದಿದೆ. ಕುಟುಂಬದ ಹಿರಿಯರು ಹೇಳುವ ಮಾತೇ ಕೊನೆ. ಅದನ್ನು ಎಲ್ಲರೂ ಅನುಸರಿಸುತ್ತೇವೆ. ವಿಶೇಷ ದಿನದಲ್ಲಿ ಎಲ್ಲರೂ ಒಟ್ಟಿಗೆ ಸೇರುತ್ತೇವೆ. | ಚಿದಾನಂದ ಒಡೆಯರ್

ಸಹಬಾಳ್ವೆಯ ಸುಖ

ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಕಾಳೀಹುಂಡಿ ಗ್ರಾಮದಲ್ಲಿ ಮರೀಗೌಡ ಕುಟುಂಬದ ಹಲವು ಸಂಸಾರಗಳು ಒಂದೇ ಹಟ್ಟಿಯಲ್ಲಿ ಒಟ್ಟಾಗಿ ಬಾಳುವ ಮೂಲಕ ಮಾದರಿಯಾಗಿದ್ದಾರೆ.ಕೃಷಿಪ್ರಧಾನವಾದ ಕುಟುಂಬದಿಂದ ಬಂದ ಮರೀಗೌಡರ ಮೊಮ್ಮಕ್ಕಳಾದ ಕೃಷ್ಣಕುಮಾರ್, ಸುಬ್ರಹ್ಮಣ್ಯ, ಮಹಾದೇವ ಮತ್ತು ಮಂಜುನಾಥ್ ಅವರ ಕುಟುಂಬದವರು ಒಂದೇ ಮನೆಯಲ್ಲಿ ಬಾಳ್ವೆ ನಡೆಸುತ್ತಿದ್ದಾರೆ. ಕೃಷ್ಣಕುಮಾರ್ ಮತ್ತು ಸುಬ್ರಹ್ಮಣ್ಯ ಅಣ್ಣತಮ್ಮಂದಿರು. ಮಹಾದೇವು ಮತ್ತು ಮಂಜುನಾಥ್ ಕಸಿನ್ ಬ್ರದರ್ಸ್. ಇವರೆಲ್ಲ ಪತ್ನಿ ಮತ್ತು ಮಕ್ಕಳ ಜತೆಗೆ ಒಂದೇ ಮನೆಯಲ್ಲಿ ವಾಸವಿದ್ದಾರೆ. ಕೃಷ್ಣಕುಮಾರ್ ಅವರ ತಾಯಿ ಸರೋಜಮ್ಮ ಮತ್ತು ಚಿಕ್ಕಮ್ಮಂದಿರೂ ಇಲ್ಲಿದ್ದಾರೆ. ಕೆಲವು ಮಕ್ಕಳು ವಿದ್ಯಾಭ್ಯಾಸಕ್ಕೆ ಹೊರಗೆ ಹೋಗಿದ್ದರೂ ಮನೆಯಲ್ಲಿ 15 ಜನರಿದ್ದು, ಮನೆ ಸದಾ ಜನರಿಂದ ತುಂಬಿ ತುಳುಕುತ್ತದೆ. ಕೃಷಿಯನ್ನೇ ನಂಬಿಕೊಂಡು ಬಂದಿರುವ ಈ ಕುಟುಂಬದವರು ಒಬ್ಬರಿಗೊಬ್ಬರು ಹೆಗಲುಕೊಟ್ಟು ಕೆಲಸ ಮಾಡುತ್ತಿದ್ದಾರೆ. ಕೃಷ್ಣಕುಮಾರ್ ಕುಟುಂಬದ ನಿರ್ವಹಣೆ ಜವಾಬ್ದಾರಿ ಹೊತ್ತಿದ್ದರೆ, ಸಹೋದರರಲ್ಲಿ ಒಬ್ಬರು ಟ್ರ್ಯಾಕ್ಟರ್ ಟಿಲ್ಲರ್ ಜವಾಬ್ದಾರಿ ನೋಡಿಕೊಳ್ಳುತ್ತಾರೆ. ಮತ್ತೊಬ್ಬರು ಕೃಷಿ ಕೆಲಸ ನೋಡುತ್ತಾರೆ. ಇನ್ನೊಬ್ಬರು ದನಕರುಗಳ ಕೆಲಸವನ್ನು ನಿಭಾಯಿಸುತ್ತಾರೆ. ಮನೆಕೆಲಸವನ್ನು ಒಟ್ಟಾಗಿ ನಿಭಾಯಿಸುವ ಹೆಂಗಸರು ಗೋಬರ್ ಗ್ಯಾಸ್ ಮೂಲಕ ಮನೆಮಂದಿಗೆಲ್ಲ ಅಡುಗೆ ಮಾಡುತ್ತಾರೆ. ಎಲ್ಲರೂ ಒಟ್ಟಿಗೂ ಕೂತು ಊಟ ಸವಿಯುತ್ತಾರೆ. ಹಬ್ಬ ಹರಿದಿನಗಳು ಬಂದರೆ ಎಲ್ಲರೂ ಸೇರಿ ಸಂಭ್ರಮಿಸುತ್ತಾರೆ.
ನಾವು ಒಂದೇ ಸೂರಿನಡಿ 15 ರಿಂದ 20 ಜನರಿದ್ದರೂ ಹಬ್ಬ ಹರಿದಿನಗಳಿಗೆ ಐವತ್ತರಷ್ಟು ಜನರು ಒಟ್ಟಿಗೆ ಸೇರುತ್ತೇವೆ. ಒಂದೇ ಕುಟುಂಬದಲ್ಲಿ ಹಲವು ಕಾಲದಿಂದ ಇದ್ದು, ಕೆಲಸಕಾರ್ಯಗಳನ್ನು ಹಂಚಿಕೊಂಡು ಮಾಡುತ್ತೇವೆ. | ಕೃಷ್ಣಕುಮಾರ್

22 ಜನರ ಒಗ್ಗಟ್ಟಿನ ಬಂಡಿಯ ಪಯಣ

ಮಾಲೂರು ತಾಲೂಕಿನ ತೊರ್ನಹಳ್ಳಿ ಗ್ರಾಪಂ ವ್ಯಾಪ್ತಿಯ ಗೇರುಪುರ (ಬಂಡೆ ಹೊಸೂರು) ಗ್ರಾಮದ ದಿವಂಗತ ದೊಡ್ಡನಾರಾಯಣಪ್ಪ ಅವರ ಕುಟುಂಬದ ಬಳ್ಳಿ ಎಲ್ಲ ಕ್ಷೇತ್ರಕ್ಕೂ ಚಾಚಿಕೊಂಡು ಇಂದಿಗೂ ಹೂಬಳ್ಳಿಗಳಂತೆ ಅವಿಭಕ್ತ ಕುಟುಂಬದಲ್ಲಿ ಬೆಸುಗೆ ಪಡೆದಿದೆ. ಈ ಕುಟುಂಬದಲ್ಲಿ 22 ಜನರಿದ್ದು, ಎಲ್ಲರೂ ಒಂದೇ ಸೂರಿನಲ್ಲಿ ವಾಸವಾಗಿದ್ದಾರೆ, ಮೂಲ ಕಸುಬು ಕೃಷಿಯನ್ನು ನೆಚ್ಚಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಒಟ್ಟು 80 ಎಕರೆ ಜಮೀನು ಹೊಂದಿದ್ದಾರೆ. ತೋಟಗಾರಿಕೆ, ಹೈನುಗಾರಿಕೆ, ಇಟ್ಟಿಗೆ ಕಾರ್ಖಾನೆ, ಕಲ್ಲು ಒಡೆಯುವ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ದೊಡನಾರಾಯಣಪ್ಪನವರ ಎರಡನೆಯ ಪುತ್ರ ವೆಂಕಟರಾಯಪ್ಪ ಕುಟುಂಬದ ಮುಖ್ಯಸ್ಥರು. ಯಾವುದೇ ಜಗಳ, ವೈಮನಸ್ಸುಗಳಿಲ್ಲದೆ ಈ ಕುಟುಂಬ ಒಗ್ಗಟಾಗಿದ್ದು, ಹಿರಿಯರು ಹಿಂದಿನಿಂದಲೂ ನಡೆಸಿಕೊಂಡು ಬಂದ ಸಂಪ್ರದಾಯವನ್ನು ಮುನ್ನಡೆಸುತ್ತಿದ್ದಾರೆ.