ಅಂಕಣ

ಮಾತು ನಾಟಿ ಮನಸ್ಸಿನ ಕತ್ತಲೆಯ ಜಾಗಗಳನ್ನು ಬೆಳಗುವುದು!

ನಾನು ಸೆಲೆಬ್ರಿಟಿ ಅಲ್ಲ. ಸೆಲೆಬ್ರಿಟಿ ಸಂಸ್ಕೃತಿ ಮೆಚ್ಚುವವನೂ ಅಲ್ಲ. ವ್ಯಕ್ತಿಪೂಜೆ, ಅಂಧಾಭಿಮಾನಗಳು ನಮ್ಮನ್ನು ಎಲ್ಲಿ ತಂದು ನಿಲ್ಲಿಸಿವೆ ಎಂದು ನೋಡಿದಾಗ ಅಸಹ್ಯವೂ ಆಘಾತವೂ ಆಗುತ್ತದೆ. ಅದಿರಲಿ, ಜೀವನಾನುಭವಗಳ ಕುರಿತು, ಸಾಹಿತ್ಯ ಮತ್ತು ತತ್ವಮೀಮಾಂಸೆಗಳ ಕುರಿತು ಸ್ಪಲ್ಪ ಹೇಳಿ ಎಂಬ ಕೇಳಿಕೆ ಎದುರ್ಗೆಂಡು ಈ ಕೆಲವು ಮಾತುಗಳು ಅಷ್ಟೇ.

ನನ್ನ ಬಾಲ್ಯಕಾಲದ ಕೆಲವು ವಿಚಾರಗಳನ್ನು ಹೇಳುವೆ. ಸಾಹಿತ್ಯ ಗ್ರಂಥಗಳನ್ನು ಓದಿ ಮನನ ಮಾಡಿಕೊಳ್ಳುವ ಹಂತಕ್ಕಿಂತ ಬಹಳ ಮೊದಲೇ ಗ್ರಂಥಗಳ ವಾಚನ ಕೇಳುವ ಸುಯೋಗವೊಂದು ನನಗೆ ದೊರಕಿತ್ತು. ತಂದೆಗೆ ಸಾಹಿತ್ಯದಲ್ಲಿ ಅಪಾರ ಆಸಕ್ತಿ ಇತ್ತು. ಆದರೆ ಗ್ರಂಥಗಳನ್ನು ತಾವೇ ಓದಿಕೊಳ್ಳುವ ದೃಷ್ಟಿಪಾಟವ ಅವರಿಗಿರಲಿಲ್ಲ. ನಮ್ಮ ಮನೆಗೆ ಬಹಳವಾಗಿ ಓರ್ವ ಹಿರಿಯರು ಆಗಾಗ್ಗೇ ಬರುತ್ತಿದ್ದರು. ಅವರ ಹೆಸರು ಶಂಕರ ತೋಳ್ಪಾಡಿ. ಕರ್ನಾಟಕ ಸಂಗೀತವನ್ನು ಬಲ್ಲವರು. ಯಕ್ಷಗಾನದಲ್ಲಿ ಭಾಗವತಿಕೆ ಮಾಡುತ್ತಿದ್ದರು. 1940ರ ದಶಕದಲ್ಲಿ ಪುತ್ತೂರಿನಲ್ಲಿ ಶಿವರಾಮ ಕಾರಂತರು ಮಾಡುತ್ತಿದ್ದ ಯಕ್ಷಗಾನ ಪ್ರಯೋಗಗಳಿಗೆ ಶಂಕರ ತೋಳ್ಪಾಡಿ ಅವರೇ ಭಾಗವತರಾಗಿರುತ್ತಿದ್ದರು. ಕಾರಂತರು ತಮ್ಮ ‘ಸ್ಮ ೃತಿಪಟಲ’ದಲ್ಲಿ ಈ ಕುರಿತು ಉಲ್ಲೇಖಿಸಿದ್ದಾರೆ. ಶಂಕರ ತೋಳ್ಪಾಡಿ ಅವರನ್ನು ನೆನಪಿಸಿಕೊಂಡಿದ್ದಾರೆ. ನಮ್ಮ ಮನೆಗೆ ಈ ಹಿರಿಯರು ಬರುತ್ತಿದ್ದುದು ನಮ್ಮ ತಂದೆಯವರಿಗೆ ಗ್ರಂಥಗಳನ್ನು ಓದಿ ಹೇಳಲೆಂದೇ. ಕಾರಂತರ ಒಡನಾಟದಿಂದಲೋ ಏನೋ ಶಂಕರ ತೋಳ್ಪಾಡಿ ಅವರಿಗೆ ಸಾಹಿತ್ಯ-ಸಂಗೀತಗಳ ಕುರಿತಂತೆ ಸೂಕ್ಷ್ಮಸಂವೇದನೆ ಇತ್ತು. ಇವರ ಕಂಠವೋ ಮಧುರಾತಿಮಧುರ! ಗದ್ಯ ವಾಚನದ ಶೈಲಿಯಂತೂ ಪರವಶಗೊಳಿಸುವಂಥದು. ಇವರು ಓರ್ವ ಪಾಠಕೋತ್ತಮ. ಈ ಹಿರಿಯರು ನಮ್ಮ ತಂದೆಯವರಿಗೆ ವಾಚಿಸುತ್ತಿದ್ದ ಗ್ರಂಥಗಳೆಂದರೆ ಕುವೆಂಪು ಅವರ ‘ಶ್ರೀರಾಮಾಯಣ ದರ್ಶನಂ’ ಮತ್ತು ಕನ್ನಡಾನುವಾದದಲ್ಲಿ ದೊರಕುತ್ತಿದ್ದ ಶರಶ್ಚಂದ್ರರ ಕಾದಂಬರಿಗಳು, ಚ.ವಾಸುದೇವಯ್ಯ ಮತ್ತು ಕೆರೋರ ವಾಸುದೇವಾಚಾರ್ಯರ ಕೃತಿಗಳು. ಹಾಗೆ ನಾನು ಮೊದಲು ಕೇಳಿಸಿಕೊಂಡ ಗ್ರಂಥ ರಾಮಾಯಣದರ್ಶನಂ. ಆ ಎಳವೆಯಲ್ಲಿ ಅದು ನನಗೆ ತಿಳಿದು ಬಿಟ್ಟಿತು ಎಂದಲ್ಲ. ಆದರೆ ಅದೊಂದು ಅಚ್ಚಳಿಯದ ಅನುಭವ. ಶ್ರವಣಾನುಭವ!

ನನ್ನ ಕೇಳ್ಮೆಯನ್ನು ‘ಉಪಶ್ರವಣ’ ಎನ್ನಬಹುದು. ಎದ್ದು ಹೋಗಿ ಬಂದು ಏನೋ ಮಾಡುತ್ತ ಮುಖ್ಯವಾಗಿ ತದೇಕಚಿತ್ತದಿಂದ ಕೇಳುತ್ತಿದ್ದ ತಂದೆಯ ಪ್ರತಿಕ್ರಿಯೆಗಳನ್ನು ಮತ್ತು ವಾಚಿಸುತ್ತಿದ್ದ ಶಂಕರ ತೋಳ್ಪಾಡಿ ಅವರ ಹಾವಭಾವಗಳನ್ನು ಗಮನಿಸುತ್ತ ಕೇಳುತ್ತಿದ್ದುದು! ತಮ್ಮ ವಾಚನದ ನಡುವೆ ತೋಳ್ಪಾಡಿಯವರು ಅಲ್ಲಲ್ಲಿ ಸಣ್ಣ ವಿವರಣೆ ಕೂಡ ಕೊಡುತ್ತಿದ್ದರು. ದಶರಥನನ್ನು ವರ್ಣಿಸುವಲ್ಲಿ- ‘ದೊರೆ ಸಗ್ಗದೊಡೆಯಂಗೆ’- ಎಂಬ ನುಡಿಗಳು ಬಂದವು. ಈ ಮಾತುಗಳನ್ನು ನಿಧಾನವಾಗಿ ಇನ್ನೊಮ್ಮೆ ಉಚ್ಚರಿಸಿದರು. ಆ ಮೇಲೆ, ಅಯೋಧ್ಯೆಯ ಅರಸನನ್ನು ಇಂದ್ರನಿಗೆ ಮಿಗಿಲು ಎಂದದ್ದು ರಾಮನ ತಂದೆಯಾಗಲಿರುವವನ ಯೋಗ್ಯತೆಯನ್ನು ಹೇಳುವ ಮಾತು ಎಂದರು! ನನ್ನ ತಂದೆ ಈ ಮಾತಿಗೆ ತಲೆದೂಗಿದರು. ಈ ಮಾತು ಮತ್ತು ಆ ತಲೆದೂಗುವಿಕೆಯ ಚಿತ್ರ ನನ್ನೊಳಗೆ ನೆಲೆಸಿಬಿಟ್ಟಿತು.

ಕೆಲಕಾಲ- ಒಂದೆರಡು ದಶಕಗಳೇ- ಕಳೆದ ಮೇಲೊಂದು ದಿನ ಈ ಮಾತಿನ ನೆನಪು ಮರುಕಳಿಸಿತು. ಆಗ ಅದರ ಅರ್ಥ ಸಾಧ್ಯತೆಗಳು ಬಿಚ್ಚಿಕೊಳ್ಳತೊಡಗಿದವು. ಅದೆಂದರೆ ಕತೆಯಲ್ಲಿ ಹೀಗಾಗುತ್ತದೆ ಎಂದು ಮೊದಲೇ ಗೊತ್ತಿದ್ದರೆ ಓದಿನಲ್ಲಿ ಸ್ವಾರಸ್ಯ ಕೆಡುತ್ತದಲ್ಲವೆ? ಆದರೆ ಹೀಗೆಯೇ ಆಗಬೇಕಿಲ್ಲ. ಸ್ವಾರಸ್ಯ ಕೆಡಬೇಕಿಲ್ಲ. ಇದರ ವಿರುದ್ಧ ಸ್ಥಿತಿಯೇ ಸತ್ಯ. ಈಗ ನಾವಾಡುವ ಒಂದು ಮಾತು, ಒಂದು ವರ್ಣನೆ ಮುಂದೆ ನಡೆಯಲಿರುವುದನ್ನು ಪರೀಕ್ಷವಾಗಿ ಸೂಚಿಸುವಂತಿದ್ದರೆ ಅಂಥ ಮಾತು ವಿಶೇಷ ರಸಾನುಭವ ಉಂಟು ಮಾಡಬಲ್ಲದು! ದಶರಥನು ರಾಮನ ತಂದೆಯಾಗಲಿರುವವನು ಎಂದು ಮೊದಲೇ ಗೊತ್ತಿದೆ. ಗೊತ್ತಿದ್ದರಿಂದಲೇ ಅದನ್ನು ಈಗ, ತಂದೆಯಾಗುವ ಮುನ್ನ ದಶರಥನ ವರ್ಣನೆಯಲ್ಲಿ ಸೂಚಿಸುವ ಮಾತು ರಹಸ್ಯವೊಂದರ ಗ್ರಹಿಕೆಯ ಮಾತಾಗಿ ಮನಸ್ಸಿಗೆ ನಾಟುವುದು. ಪರೋಕ್ಷವಾಗಿ ನಾಟುವುದು. ನಾಟಿ, ಮನಸ್ಸಿನ ಕತ್ತಲೆಯ ಜಡತೆಯ ಜಾಗಗಳನ್ನು ಒಮ್ಮೆಲೇ ಬೆಳಗುವುದು. ಹೀಗಾಗಬೇಕಾದರೆ ಇರುವ ಶರ್ತ ಒಂದೇ ಅದೆಂದರೆ ನಮಗೆ ಕತೆ ಮೊದಲೇ ಗೊತ್ತಿರಬೇಕು. ವರ್ಣಿಸುವ ಮಾತು ನೇರವಾಗಿರಬಾರದು; ಪರೋಕ್ಷವಾಗಿರಬೇಕು. ಅಲ್ಲದೆ ಈ ಮಾತು ತನಗೊಂದು ವ್ಯಾಖ್ಯಾನ ಬಯಸುವಂತಿರಬೇಕಿದ್ದು, ಸಾಪೇಕ್ಷವಾಗಿರಬೇಕು. ವ್ಯಾಖ್ಯಾನ ಬಯಸುವ ಮಾತೆಂದರೆ ಅದು ಅರ್ಥಕ್ಲೇಶದ ಮಾತಾಗಿರಬೇಕಿಲ್ಲ. ನಾವು ಸಾಮಾನ್ಯವಾಗಿ ಅರ್ಥಕ್ಲಿಷ್ಟ ಮಾತುಗಳನ್ನು ಕುರಿತು ಇದು ಅರ್ಹವಾಗಬೇಕಾದರೆ ಇದಕ್ಕೊಂದು ವ್ಯಾಖ್ಯಾನ ಬೇಕು ಎನ್ನುವುದುಂಟು. ಅಸಮಾಧಾನ ಸೂಚಕ ಟೀಕೆ ಇದು. ಆದರೆ ಹೀಗಲ್ಲದೆ, ಇನ್ನೊಂದೇ ಸೃಷ್ಟಿಶೀಲವಾದ ರೀತಿಯಲ್ಲಿ ವ್ಯಾಖ್ಯಾನ ಸಾಪೇಕ್ಷವಾದ ಮಾತುಗಳು ಇರುವ ಸಾಧ್ಯತೆಗಳಿವೆ ಎಂದು ನನಗೆ ತಿಳಿಯುತ್ತ ಹೋಯಿತು. ವ್ಯಾಖ್ಯಾನವನ್ನು ಬಯಸುವುದೆಂದರೆ ಮೂಲವಾಕ್ಯಕ್ಕೆ ನಿಮ್ಮದೇ ಒಂದು ಮಾತನ್ನು ಸೇರಿಸಿ, ಮೂಲವನ್ನು ನಿಮ್ಮದನ್ನಾಗಿ ಮಾಡಿಕೊಳ್ಳಿ ಎಂದು ಮೂಲವಾಕ್ಯದಲ್ಲೇ ಇರಬಹುದಾದ ಬಯಕೆ! ಕವಿ-ಸಹೃದಯ ಎನ್ನುತ್ತೇವಲ್ಲ, ಆ ಸಹೃದಯತೆಯ ಇನ್ನೊಂದು ರೂಪವಿದು. ಮಾತಿನ ಪರಂಪರೆ ಬೆಳೆಯುವುದೇ ಹೀಗೆ.

ಕತೆಯಲ್ಲಿ ಮುಂದೆ ನಡೆಯಲಿರುವುದು ನಮಗೆ ಮೊದಲೇ ಗೊತ್ತಿದ್ದು, ವಿಶೇಷ ಅನುಭವವನ್ನು ಉಂಟು ಮಾಡಬಲ್ಲದು ಎನ್ನುವುದನ್ನು ಒಪ್ಪಿದರೆ, ಹಿಂದೆ ನಡೆದಿರಬಹುದಾದ ಹಿಂದಿನ ವಾಜ್ಮಯಗಳಲ್ಲಿ ಬಂದಿರುವ ಸಂಗತಿಯೊಂದು ಈಗಿನ ಈ ಕಾಲದ ಅನುಭವ ಹೇಳುವಲ್ಲಿ ಹೊಂದಿಕೊಂಡು ಹೆಡೆ ಎತ್ತಿ ಮರ್ಮಕಂಪನವನ್ನೇ ಉಂಟುಮಾಡಬಹುದು! ಇದಕ್ಕೆ ಉಜ್ವಲವಾದ ಉದಾಹರಣೆ ಕವಿ ಬೇಂದ್ರೆ ಅವರ ಈ ವಾಕ್ಯ. ಬಡತನವನ್ನು ಕುರಿತು ಬೇಂದ್ರೆ ಬರೆದಿರುವ ಲೇಖನದ ವಾಕ್ಯವಿದು. ವಾಕ್ಯ ಹೀಗಿದೆ, ‘ದಾನಧರ್ಮಗಳಿಂದ ಹೋಗಲಾಡಿಸಲು ಬಡತನವು ತಿರುಕನ ಜೋಳಿಗೆಯಲ್ಲ. ಅದು ರುದ್ರನೊಡ್ಡಿದ ಕೈ. ‘ರುದ್ರನೊಡ್ಡಿದ ಕೈ’ ಎಂಬ ಈ ನುಡಿಗಟ್ಟು ನಮ್ಮನ್ನು ಸ್ತಬ್ಧಗೊಳಿಸುವಂಥದು. ಲಯಕರ್ತನಾದ ರುದ್ರ ತನ್ನ ಕೈಚಾಚಿ ಭಿಕ್ಷೆ ನೀಡಿ ಎನ್ನುವಂತೆ. ರುದ್ರಭಿಕ್ಷುವಿಗೆ ನೀಡಬಹುದಾದ ಭಿಕ್ಷೆಯಾದರೂ ಯಾವುದು? ನಮ್ಮ ಬಲಿದಾನವನ್ನೇ ರುದ್ರನು ತನ್ನ ಭಿಕ್ಷೆಯಾಗಿ ಬಯಸುತ್ತಿದ್ದಾನೆಯೆ? ಬಲಿದಾನಕ್ಕಿಂತ ಕಡಿಮೆ ರುದ್ರನು ಬಯಸಲಾರನಲ್ಲವೆ? ಬಡತನದ ಪ್ರಶ್ನೆಯು ಕಾಡ್ಗಿಚ್ಚಿನಂಥ ದೊಡ್ಡ ಕ್ರಾಂತಿಯೊಂದನ್ನು ತನ್ನೊಳಗೆ ಹೊತ್ತುಕೊಂಡಿದೆ ಎಂದು ಈ ನುಡಿಗಟ್ಟು ಸೂಚಿಸುತ್ತದೆ.

ಬೇಂದ್ರೆ ಸೂಚಿಸುತ್ತಿದ್ದಾರೆ ‘ರುದ್ರನೊಡ್ಡಿದ ಕೈ’ ಎಂಬ ನುಡಿಗಟ್ಟಿಗೆ ಇರುವ ಧ್ವನಿಶಕ್ತಿ ಅಗಾಧವಾದದ್ದು ಎಂದು. ಹೀಗೆ ನನಗೆ ಮಾತಿನ ಗುಂಗು ಹತ್ತಿತು. ಉಡುಪಿಯಲ್ಲಿ ಕವಿ ಗೋಪಾಲಕೃಷ್ಣ ಅಡಿಗ ಪರಿಚಯವಾದರು. ಅವರ ಮೂಲಕ ಪ್ರಜಾವಾಣಿಯ ವೈಯನ್ಕೆ ಗುರುತಾದರು. ಸತ್ಯಕಾಮ ಎಂಬ ಲೇಖಕರ ಕನ್ನಡ ಭಾಷೆ ವಿಶಿಷ್ಟವಾಗಿದೆ ಎಂದು ವೈಯನ್ಕೆ ಹೇಳಿದರು. ಸತ್ಯಕಾಮರನ್ನು ಓದತೊಡಗಿದೆ. ಸತ್ಯಕಾಮರ ಈ ಒಂದು ವಾಕ್ಯ ನೋಡಿ, ‘ಚಕ್ರ ಎಂಬುದು ಗತಿಗೆ ಕೊಟ್ಟ ಆಕಾರ’ ತಿಳಿಯುತ್ತದೆಯೆ? ಇದರರ್ಥವೇನು ಎಂದು ಯೋಚಿಸು ಎಂಬ ಒತ್ತಾಯ ಮಾಡುವಂತಿದೆ ಮಾತ್ರ. ಗತಿ ಎಂದರೆ ಚಲನೆ. ಚಲನೆಯನ್ನು ಸೂಚಿಸಲು ಒಂದು ಚಿಹ್ನೆ, ಒಂದು ಆಕಾರವನ್ನು ಕಲ್ಪಿಸಬೇಕಾದರೆ ಅದು ಚಕ್ರದ ಆಕಾರ ಎನ್ನುತ್ತಾರೆ ಸತ್ಯಕಾಮ. ಭಾಷೆಗೆ ಲಿಪಿ ಇದ್ದಂತೆ ಸತ್ಯಕಾಮರಲ್ಲಿ ಇಂಥವು ಹಲವು. ವೈಯನ್ಕೆಗೆ ಸತ್ಯಕಾಮರು ಇಷ್ಟವಾಗಲು ಕಾರಣ ಶ್ಲೇಷಾರ್ಥಪ್ರಿಯರಾಗಿದ್ದ ಕೈಲಾಸಂ ಅವರ ಒಡನಾಡಿಯಾಗಿ ವೈಯನ್ಕೆ ಇದ್ದುದು ಎಂದು ಮತ್ತೆ ನನಗೆ ಹೊಳೆಯಿತು.

ಮಾತಿನ ಸೆಳೆತಕ್ಕೆ ಸಿಕ್ಕಿದವರು ಬೇಂದ್ರೆ ಕಾವ್ಯದತ್ತ ಸುಳಿಯುತ್ತಲೇ ಇರುವರು. ಬೇಂದ್ರೆ ಕಾವ್ಯದಲ್ಲಿ ಮಾತ್ರ ಬರಬಹುದಾದ ಸಾಲು ಇದು.‘ಮೃಗಜಲವಾಗಿಯೂ ತಣಿಸುವೆ’ ಎಂಬ ಸಾಲು! ನೀರನ್ನು ಕುರಿತ ದಾಹ ಮಾತ್ರವಲ್ಲ, ಮೃಗಜಲವನ್ನು ಕುರಿತ ದಾಹವೂ ಒಂದಿದೆ. ಈ ದಾಹವೂ ತಣಿಯಬೇಕು ಎನ್ನುವರು ಬೇಂದ್ರೆ. ಕನಸೂ ಒಂದು ವಾಸ್ತವವೇ ಎಂದರಿತ ಕವಿ ಮಾತ್ರ ಹೀಗೆ ಹೇಳಬಲ್ಲ, ಹೇಳಿ ತಣಿಸಬಲ್ಲ! ಇವೆಲ್ಲವೂ ಗಹನವಾದ ಮಾತುಗಳಾಯಿತೇನೋ. ನಾನು ಯಕ್ಷಗಾನದ ನೆಲದವನಾದುದರಿಂದ ಯಕ್ಷಗಾನದ ಮಾತುಗಳ ಆಶು ಚಿಮ್ಮುವಿಕೆಯ ಒಂದು ಕಾರಂಜಿ ತೋರಿಸಿ ವಿರಮಿಸುವೆ. ಭಾಗವತರು ಪ್ರಾಯಃ ಸಂಗೀತ ವಿದ್ವಾಂಸರಾಗಿದ್ದ ದಾಮೋದರ ಮಂಡೇಚರು. ಅವರು ಪ್ರಸಂಗದ ಒಂದು ಹಾಡನ್ನು ಶಂಕರಾಭರಣ ರಾಗದಲ್ಲಿ ಮನೋಜ್ಞವಾಗಿ ಹಾಡಿದರು. ಕೇಳಿ ಪರವಶರಾದ ವೇಷಧಾರಿ ರಾಮದಾಸ ಸಾಮಗರು ತಮ್ಮ ನಿರರ್ಗಳ ಶೈಲಿಯಲ್ಲಿ ಹೀಗೆ ನುಡಿದರು- ‘ಶಿವನ ಕಂಠದಲ್ಲಿ ಆಭರಣವಾಗಿರುವ ಹಾವು ನಿಮ್ಮ ಕೊರಳಲ್ಲಿ ಹಾಡಾಗಿ ಹರಿದು ಬಂದಾಗ ನನ್ನಲ್ಲಿದ ವಿಷವೆಲ್ಲ ಇಳಿದು ಹೋಯಿತು’!

(ಲೇಖಕರು ಹಿರಿಯ ಸಾಹಿತಿ, ಚಿಂತಕರು)