ಅಂಕಣ

ಮರದ ನೆಲಹಾಸಿನತ್ತ ಜನರ ಚಿತ್ತ

malli

‘ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು’ ಎಂಬ ಗಾದೆ ಮಾತಿದೆ. ಆದರೆ ಈಗೆಲ್ಲಾ ‘ಕಟ್ಟಿದ ಮನೆಯ ವಿನ್ಯಾಸ (ಇಂಟೀರಿಯರ್) ನೋಡು... ಅನ್ನೋ ಮಾತೇ ಹೆಚ್ಚು ಪ್ರಚಲಿತ. ಹೀಗಾಗಿ ಇಂದು ಬೆಚ್ಚನೆಯ ಮನೆಯಾದರಷ್ಟೇ ಸಾಲದು ಮನಸ್ಸಿಗೆ ಮುದ ನೀಡುವ, ಕಣ್ಣಿಗೆ ಹಾಯ್ ಎನ್ನಿಸುವ ವಿನ್ಯಾಸವನ್ನೋ ಹೊಂದಿರಬೇಕು ಎಂದು ಬಯಸುತ್ತಾರೆ.

ಗುಡಿಸಲು, ಮಾಳಿಗೆ, ಶೀಟ್, ಹೆಂಚು ಹೋಗಿ ಈಗ ತಾರಸಿಯ ಕಾಲ. ಹೀಗೆ ಕಾಲ ಬದಲಾದಂತೆ ಮನೆಯ ಆಕಾರಗಳು ಬದಲಾಗಿವೆ. ಒಂದು ಅಂತಸ್ತಿನ ಮನೆಗೆ ಬದಲಾಗಿ ಬಹುಮಹಡಿ ಕಟ್ಟಡಗಳು ಹೆಚ್ಚಾಗಿವೆ. ಅದಕ್ಕೆ ಅನುಗುಣವಾಗಿ ಮನೆಯ ವಿನ್ಯಾಸಗಳಲ್ಲೂ ಬಹಳಷ್ಟು ಬದಲಾವಣೆಗಳಾಗಿದ್ದು, ಅದರಿಂದ ನೆಲಹಾಸು ಹೊರತಾಗಿಲ್ಲ. ಹೀಗಾಗಿ ಸಗಣಿ ನೆಲದಿಂದ, ಸಿಮೆಂಟ್ ನೆಲ, ಕಲ್ಲಿನ ನೆಲದ ಕಾಲ ಹೋಗಿ ಟೈಲ್ಸ್, ಮಾರ್ಬಲ್, ಗ್ರೆನೈಟ್, ಅಮೃತಶಿಲೆಗಳು ಬಂದಿವೆ, ಅವುಗಳಲ್ಲದೆ ಇತ್ತೀಚಿನ ವರ್ಷಗಳಲ್ಲಿ ಪರಿಸರ ಸ್ನೇಹಿ ‘ಮರದ ನೆಲಹಾಸಿ’ನತ್ತ ಜನರ ಒಲವು ಹೆಚ್ಚಿದೆ.

ಆರೋಗ್ಯಕ್ಕಾಗಿ ಮರದ ನೆಲಹಾಸು

ಥರಾವರಿ ಬಣ್ಣಗಳು, ಚಿತ್ರಪಟಗಳಿಂದ ಮನೆಯನ್ನು ಅಲಂಕರಿಸಿದರಷ್ಟೇ ಸಾಲದು. ಮನೆಯ ವಿನ್ಯಾಸಕ್ಕೆ ಹೊಂದುವ ಬಣ್ಣ, ಅದಕ್ಕೆ ಹೊಂದುವ ಮರದ ಷೋಕೇಸ್ ಹಾಗೂ ಮರದ ಪೀಠೋಪಕರಣಗಳ ಬಳಕೆ ಹೆಚ್ಚಾಗಿದ್ದು, ಅವುಗಳಿಗೆ ಹೊಂದಿಕೆಯಾಗುವ ರೀತಿಯಲ್ಲಿ ಮರದ ನೆಲಹಾಸನ್ನು ಆಯ್ಕೆ ಮಾಡಲಾಗುತ್ತಿದೆ. ಇದ ಕೇವಲ ಬದಲಾಗುತ್ತಿರುವ ವಿನ್ಯಾಸದಿಂದಷ್ಟೇ ಅಲ್ಲ, ಆರೋಗ್ಯದ ದೃಷ್ಟಿಯಿಂದಲೂ ಜನರು ಮರದ ನೆಲಹಾಸು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಅರ್ಕಿಟೆಕ್ಟ್ ಕೆ. ಜಯರಾಮ್

ಎಲ್ಲಾ ಕಾಲಕ್ಕೂ ಸೈ

ವೆಟ್ರಿಫೈಡ್, ಗ್ರೆನೈಟ್, ಮಾರ್ಬಲ್, ಅಮೃತಶಿಲೆಯ ನೆಲಹಾಸುಗಳು ಮಳೆ ಮತ್ತು ಚಳಿಗಾಲದಲ್ಲಿ ಬಹಳ ತಣ್ಣನೆಯ ಅನುಭವ ನೀಡುತ್ತವೆ. ಇದರಿಂದ ಕೈಕಾಲುಗಳು ಹಿಡಿದುಕೊಂಡಂತೆ ಆಗಿ, ನೆಲದ ಮೇಲೆ ತಿರುಗಾಡಲು ಕಿರಿಕಿರಿ ಉಂಟು ಮಾಡುತ್ತದೆ. ಅಪ್ಪಿತಪ್ಪಿ ನೀರು ಚೆಲ್ಲಿ ನೋಡದೆ ಹೆಜ್ಜೆ ಇಟ್ಟರೆ ಅಪಾಯ ತಪ್ಪಿದ್ದಲ್ಲ.

ಆದರೆ ಯುವಕ-ಯುವತಿಯರಿಗೆ ಇದೇನು ದೊಡ್ಡ ಸಮಸ್ಯೆ ಎಂದು ಅನ್ನಿಸದಿದ್ದರೂ, ಎಳೆಯ ಮಕ್ಕಳಿಗೆ, ವೃದ್ಧರಿಗೆ, ಗರ್ಭಿಣಿ ಹಾಗೂ ಬಾಣಂತಿಯರು, ಸಂಧಿವಾತ ಸೇರಿದಂತೆ ಆರೋಗ್ಯ ಸಮಸ್ಯೆ ಇರುವವರಿಗೆ ತೊಂದರೆ ತಪ್ಪಿದ್ದಲ್ಲ. ಆದರೆ ಮರದ ನೆಲಹಾಸು ಹಾಗಲ್ಲ. ಬೇಸಿಗೆ, ಮಳೆ, ಚಳಿ ಎಲ್ಲಾ ಕಾಲಕ್ಕೂ ಬೆಚ್ಚನೆಯ ಅನುಭವ ನೀಡುತ್ತದೆ. ನೀರು ಚೆಲ್ಲಿದರೆ ಬೀಳುತ್ತೇವೆಂಬ ಭಯವೂ ಇಲ್ಲ. ಇದರಿಂದ ವರ್ಷವಿಡೀ ಮನೆಯೊಳಗೆ ಒಂದೇ ರೀತಿಯ ಹವಾಮಾನ ಇರುವಂತೆ ನೋಡಿಕೊಳ್ಳಬಹುದು.

ಪಾರ್ಕ್ವೆಟ್ ಫ್ಲೋರಿಂಗ್

ಮರದಿಂದ ಮಾಡಿದ ನೆಲಹಾಸಿಗೆ ‘ಪಾರ್ಕ್ವೆಟ್ ಫ್ಲೋರಿಂಗ್’ ಎಂದು ಕರೆಯಲಾಗುತ್ತದೆ. ಮರ ದುಬಾರಿಯಾಗಿರುವ ಕಾರಣ ಈ ದಿನಗಳಲ್ಲಿ ಇದು ಟೈಲ್ಸ್ ಮಾದರಿಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಪಾಲಿಷ್​ನಿಂದ ಕೂಡಿದ್ದ ಆಕರ್ಷಕ ವಿನ್ಯಾಸಗಳಲ್ಲಿ ದೊರೆಯಲಿವೆ. ಆರಂಭದಲ್ಲಿ ದೊಡ್ಡ ದೊಡ್ಡ ಕಂಪನಿಗಳಲ್ಲಿ, ಕಚೇರಿಗಳಲ್ಲಿ ಬಳಕೆಯಾಗುತ್ತಿದ್ದ ಮರದ ನೆಲಹಾಸು ಇತ್ತೀಚಿನ ವರ್ಷಗಳಲ್ಲಿ ಮನೆಯಲ್ಲೂ ಪ್ರವೇಶ ಪಡೆದಿದೆ. ಟೀಕ್​ವುಡ್​ನಿಂದ (ತೇಗದ ಮರ) ತಯಾರಿಸುವ ಮರದ ನೆಲಹಾಸು ಸ್ವಾಭಾವಿಕ ಹಾಗೂ ಚಿತ್ತಾಕರ್ಷಕ ವಿನ್ಯಾಸ ಹೊಂದಿರುತ್ತದೆ. ಅಲ್ಲದೆ ಮೊದಲೇ ಫಿನಿಷಿಂಗ್ ಆಗಿ ಬರುವುದರಿಂದ ಬರಿ ಗಮ್ ಹಾಕಿ ಈಗಿರುವ ನೆಲಸ ಮೇಲೆಯೇ ಸುಲಭವಾಗಿ ಅಂಟಿಸಬಹುದು.

ಎಲ್ಲೆಲ್ಲಿ ಬಳಸಿದರೆ ಸೂಕ್ತ

ಮರದ ನೆಲಹಾಸು ಮನೆಯ ಅಂದ ಹೆಚ್ಚಿಸುತ್ತದೆ. ಆದರೆ ಇದನ್ನು ಎಲ್ಲೆಡೆ ಬಳಸುವ ಹಾಗಿಲ್ಲ. ಎಣ್ಣೆ ಹಾಗೂ ಬೆಂಕಿ ಬಳಕೆಯಾಗುವ ಅಡುಗೆ ಕೋಣೆ ಹಾಗೂ ದೇವರ ಮನೆಗೆ ಇದು ಸೂಕ್ತವಲ್ಲ. ಬೆಡ್ ರೂಮ್ ಲಿವಿಂಗ್ ರೂಮ್ ಡೈನಿಂಗ್ ಹಾಲ್​ಗಳಲ್ಲಿ ಬಳಸಬಹುದು. ನಿರ್ವಹಣೆ ಸ್ವಲ್ಪ ಕಷ್ಟ ಜತೆಗೆ ಇತರ ನೆಲಹಾಸುಗಳಿಗಿಂತ ಸ್ವಲ್ಪ ದುಬಾರಿ. ಹೀಗಾಗಿ ಎಲ್ಲರೂ ಇದನ್ನು ಬಳಸುವುದಿಲ್ಲ. ಮನೆಯ ವಿನ್ಯಾಸದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುವವರು ಇದನ್ನು ಬಳಸುತ್ತಾರೆ. ಪರಿಸರಸ್ನೇಹಿ ನೆಲಹಾಸು ಆಗಿರುವುದರಿಂದ ಮನಸ್ಸಿಗೆ ಉಲ್ಲಾಸ ನೀಡುತ್ತದೆ.

ನಿರ್ವಹಣೆ ಸ್ವಲ್ಪ ಕಷ್ಟ

ಆಕರ್ಷಣೆ ಹಾಗೂ ಆರೋಗ್ಯದ ದೃಷ್ಟಿಯಿಂದ ಮರದ ನೆಲಹಾಸು ಒಳ್ಳೆಯದು. ಆದರೆ ಉಳಿದ ನೆಲಹಾಸುಗಳಿಗೆ ಹೋಲಿಸಿದರೆ ಇದರ ನಿರ್ವಹಣೆ ಸ್ವಲ್ಪ ಕಷ್ಟ. ಇದು ಗಡುಸುತನವನ್ನು ಹೊಂದಿರುವುದಿಲ್ಲ. ಬಳಸುವಾಗ ಹಾಗೂ ಹಾಕುವಾಗ ಎಚ್ಚರ ವಹಿಸಬೇಕು.

ಮರ ಹಾಳಾಗದಿರಲು 3-4 ವರ್ಷಕ್ಕೊಮ್ಮೆ ವಾರ್ನಿಷ್ ಅಥವಾ ಪಾಲಿಷ್​ಕಡ್ಡಾಯವಾಗಿ ಮಾಡಿಸಬೇಕು. ನೀರು ನಿಲ್ಲದಂತೆ ಎಚ್ಚರವಹಿಸಬೇಕು. ಟೀಕ್ ವುಡ್ ನೈಸರ್ಗಿಕವಾಗಿ ಕ್ರಿಮಿನಾಶಕ ಎಣ್ಣೆಯನ್ನು ಹೊಂದಿರುವುದರಿಂದ ಫಿನಾಯಿಲ್, ಲೈಝಾಲ್​ನಂತಹ ಕ್ರಿಮಿನಾಶಕ ರಾಸಾಯನಿಕಗಳನ್ನು ಬಳಸುವ ಅಗತ್ಯವಿಲ್ಲ.

ಚೆನ್ನಾಗಿ ನೀರು ಹಿಂಡಿದ ಬಟ್ಟೆಯಲ್ಲಿ ಒರೆಸಿದರೆ ಸಾಕು. ಇದರ ಮೇಲೆ ಭಾರವಾದ ವಸ್ತುಗಳನ್ನು ಇಡಬಹುದು, ಆದರೆ ಎಳೆದಾಡಬಾರದು. ಈ ರೀತಿ ಒಂದಿಷ್ಟು ಕಾಲಜಿ ವಹಿಸುವ ಅಗತ್ಯವಿದೆ.

ಋತು ಬದಲಾಗುವುದು ಕಾಲನಿಯಮ, ಅದಕ್ಕೆ ಪೂರಕವಾಗಿ ಎಲ್ಲಾ ಕಾಲಕ್ಕೂ ಹೊಂದಿಕೆಯಾಗುವಂತೆ ಮರದ ನೆಲಹಾಸಿನಿಂದ ಮನೆಯ ವಿನ್ಯಾಸ ಮಾಡಿಕೊಂಡರೆ ಅಕರ್ಷಕವಾಗಿರುತ್ತದೆ. ಹತ್ತಾರು ವರ್ಷ ಆರಾಮವಾಗಿರುವುದು ಜತೆಗೆ ಆರೋಗ್ಯವಾಗಿಯೂ ಇರಬಹುದು. | ಬಿ.ಆರ್.ರುದ್ರೇಶ್ ಗುತ್ತಿಗೆದಾರ

| ಪಂಕಜ ಕೆ.ಎಂ.