ಅಂಕಣ

ನವೋದ್ಯಮಗಳ ನಾಯಕತ್ವದಲ್ಲಿ ನಾರಿಶಕ್ತಿ

theerthaswamy
 ಕಾರ್ಪೆರೇಟ್, ನವೋದ್ಯಮ ಸೇರಿದಂತೆ ಪ್ರಮುಖ ವಲಯಗಳ ಉನ್ನತ ನಾಯಕತ್ವ ಸ್ತರಕ್ಕೆ ಮಹಿಳೆಯರ ನೇಮಕ ಬಹಳ ಕಡಿಮೆ. ಈ ವಿಚಾರ ಪದೇಪದೆ ಸಾಮಾಜಿಕ ವಲಯದಲ್ಲಿ ಚರ್ಚೆಯ ಮುನ್ನೆಲೆಗೆ ಬರುತ್ತಲೇ ಇರುತ್ತದೆ. ಸಮೀಕ್ಷೆ, ಅಧ್ಯಯನ ವರದಿಗಳೂ ಇದೇ ವಿಚಾರದತ್ತ ಬೆಳಕು ಚೆಲ್ಲುವುದು ಕೂಡ ವಾಡಿಕೆ. ಆದರೂ, ನವೋದ್ಯಮಗಳ ನಾಯಕತ್ವದಲ್ಲಿ ನಾರಿಶಕ್ತಿ ಪಾತ್ರ 2021ರಲ್ಲಿ ಕೊಂಚ ಸುಧಾರಿಸಿದೆ ಎಂಬುದು ಸಮಾಧಾನಕರ ವಿಚಾರ.

|ಉಮೇಶಕುಮಾರ್ ಶಿಮ್ಲಡ್ಕ

ಭಾರತದ ನವೋದ್ಯಮ ಕ್ಷೇತ್ರದ ಚಾಲನಾ ಸ್ತರದಲ್ಲಿ ಲಿಂಗ ತಾರತಮ್ಯ ಕೊಂಚ ಮಟ್ಟಿಗೆ ನಿವಾರಣೆ ಆಗಿದ್ದು, 2021ರಲ್ಲಿ ಮಹಿಳೆಯರ ನಾಯಕತ್ವ ಪ್ರಮಾಣದಲ್ಲಿ ಸ್ವಲ್ಪ ಸುಧಾರಣೆ ಆಗಿದೆ. ಏಷ್ಯಾದ ಪ್ರಮುಖ ಉದ್ಯಮ ಬಂಡವಾಳ ಸಾಲ ನೀಡಿಕೆ ಸಂಸ್ಥೆ ಇನ್ನೊವೆನ್ ಕ್ಯಾಪಿಟಲ್ ಇತ್ತೀಚೆಗೆ ಪ್ರಕಟಿಸಿದ ಏಳನೇ ಆವೃತ್ತಿಯ ‘ಸ್ಟಾರ್ಟಪ್ ಔಟ್​ಲುಕ್ ರಿಪೋರ್ಟ್ 2022’ ಈ ಕುರಿತು ಗಮನಸೆಳೆದಿದೆ. 100 ನವೋದ್ಯಮ ಸಂಸ್ಥಾಪಕರು ಇನ್ನೋವೆನ್ ಸಮೀಕ್ಷೆಯಲ್ಲಿ ಭಾಗವಹಿಸಿದ್ದರು. ಅವರು ನೀಡಿದ ಮಾಹಿತಿಗಳನ್ನು ಆಧರಿಸಿ ವರದಿ ಸಿದ್ಧವಾಗಿದೆ. ದೇಶದಲ್ಲಿ 2020ರಲ್ಲಿ ಶೇ.77 ನವೋದ್ಯಮಗಳಿಗೆ ಹೋಲಿಸಿದರೆ 2021ರಲ್ಲಿ ಶೇ.70 ನವೋದ್ಯಮಗಳಲ್ಲಿ ನಾಯಕತ್ವ ಸ್ಥಾನಗಳಲ್ಲಿ ಶೇಕಡ 20ಕ್ಕಿಂತ ಕಡಿಮೆ ಮಹಿಳೆಯರಿದ್ದಾರೆ. ಅದೇ ರೀತಿ ಶೇಕಡ 41 ನವೋದ್ಯಮಗಳಲ್ಲಿ ಶೇ.10ಕ್ಕಿಂತ ಕಡಿಮೆ ಮಹಿಳೆಯರು ನಾಯಕತ್ವ ಸ್ಥಾನದಲ್ಲಿದ್ದಾರೆ. ಲಿಂಗ ತಾರತಮ್ಯ 2019ರಲ್ಲಿ ಶೇ.69 ನವೋದ್ಯಮಗಳಲ್ಲಿ ಶೇ. 20ಕ್ಕಿಂತ ಕಡಿಮೆ ಇತ್ತೆಂಬುದು ಗಮನಾರ್ಹ. ಒಟ್ಟಿನಲ್ಲಿ ಆಡಳಿತ ಸ್ತರದಲ್ಲಿ ಲಿಂಗ ವೈವಿಧ್ಯ ಕಾಪಾಡುವುದು, ಸುಧಾರಣೆಗೊಳಿಸುವುದು ಒಂದು ಸವಾಲಿನ ಕೆಲಸವೇ ಸರಿ ಎಂದು ವರದಿ ಹೇಳಿದೆ.

ತೆರೆಮರೆಯಲ್ಲಿತ್ತು ನಾಯಕತ್ವ ಕೆಲಸ: ಕೋವಿಡ್ 19 ಸಂಕಷ್ಟದ ಸಂದರ್ಭ ದಲ್ಲಿ ಮೆಕ್​ಇನ್ಸೆ ಆಂಡ್ ಕಂಪನಿ ನಡೆಸಿದ ಸಮೀಕ್ಷೆಯ ‘ವಿಮೆನ್ ಇನ್ ವರ್ಕ್​ಪ್ಲೇಸ್ 2021’ ವರದಿ ಪ್ರಕಾರ, ಪುರುಷ ನಾಯಕತ್ವಕ್ಕೆ ಹೋಲಿಸಿದರೆ ಮಹಿಳಾ ನಾಯಕತ್ವ ಹೆಚ್ಚು ಮಾನವೀಯ ಕೆಲಸ ಮಾಡಿದೆ.

ಸಮಸ್ಯೆ ಬಗೆಹರಿಸುವ ಕೌಶಲ: ಗುಂಪು ಚರ್ಚೆ ಮತ್ತು ಸೃಜನಶೀಲತೆ, ಪ್ರತಿಯೊಬ್ಬರನ್ನೂ ಉತ್ತೇಜಿಸುವ ಕೆಲಸದಿಂದ ಹಿಡಿದು ಪ್ರತಿಯೊಂದರಲ್ಲೂ ಮುನ್ನುಗ್ಗುವ ಛಾತಿ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬಂದಿದೆ. ಇದಲ್ಲದೆ ಯಾವುದೇ ಸಮಸ್ಯೆಗೂ ಪರಿಹಾರ ಒದಗಿಸಿ ಅದನ್ನು ಬಗೆಹರಿಸುವ ಕೌಶಲ ಹಾಗೂ ಜಾಗೃತಿ ಮಹಿಳಾ ನಾಯಕತ್ವದಲ್ಲಿ ವ್ಯಕ್ತವಾಗುತ್ತಿರುವುದು ಅನೇಕ ಸಮೀಕ್ಷೆಗಳಲ್ಲಿ ಬಹಿರಂಗವಾಗಿದೆ. ಅವರ ಈ ಕೌಶಲದ ಕಾರಣವೇ ಪ್ರಗತಿಗೆ, ಬೆಳವಣಿಗೆಗೆ ಪೂರಕವಾಗಿ ಕಂಡುಬಂದಿದೆ.

ಸವಾಲು ಎನಿಸಲು ಕಾರಣಗಳಿವು:

  1. ಕೆಲ ವಾಸ್ತವ ವಿಚಾರಗಳು ಮತ್ತು ಇನ್ನು ಕೆಲವು ಗುಪ್ತವಾಗಿರುವ ಪೂರ್ವಗ್ರಹಗಳು
  2. ನವೋದ್ಯಮ ವಲಯದಲ್ಲಿ ಮಹಿಳಾ ಸಂಸ್ಥಾಪಕರ ಸಂಖ್ಯೆ ಅತ್ಯಂತ ಕಡಿಮೆ
  3. ಟೆಕ್, ಕಾರ್ಯಾಚರಣೆ ಮತ್ತು ಮಾರಾಟ ಕ್ಷೇತ್ರವೂ ಸೇರಿ ಪ್ರಮುಖ ವಿಭಾಗಗಳ ಉನ್ನತ ಸ್ತರದಲ್ಲಿ ಆಡಳಿತ ನಿರ್ವಹಣೆ ಮಾಡಬಲ್ಲ ಮಹಿಳಾ ಪ್ರತಿಭೆಗಳ ಪೂರೈಕೆಯ ಕೊರತೆ
  4. ನವೋದ್ಯಮ ವ್ಯವಸ್ಥೆಯೊಳಗೆ ಹೆಚ್ಚಿನ ಸಂಖ್ಯೆಯಲ್ಲಿರುವ ಪುರುಷರಷ್ಟು ಪರಿಣತಿ ಪಡೆದ ಮಹಿಳಾ ವೃತ್ತಿಪರರ ಕೊರತೆ
  5. ಕೆಲ ಅರ್ಹ ಮಹಿಳಾ ವೃತ್ತಿಪರರು ಇದ್ದರೂ ಅವರು ನವೋದ್ಯಮಗಳನ್ನು ಮುನ್ನಡೆಸಲು ಮುಂದಾಗುತ್ತಿಲ್ಲ. ಕೆಲಸದ ಅವಧಿ, ಮನೆ ಮತ್ತು ಕಚೇರಿ ಬದುಕಿನ ನಡುವಿನ ಸಮತೋಲನ ಅವರಿಗೆ ದೊಡ್ಡ ಸವಾಲು.
  6. ಶೇ.30 ನವೋದ್ಯಮಗಳ ಲೀಡರ್​ಶಿಪ್ ಟೀಮ್ಲ್ಲಿ ಶೇ.20ಕ್ಕಿಂತ ಹೆಚ್ಚು ಮಹಿಳೆಯರು.
  7.  ಶೇ.41 ನವೋದ್ಯಮ ಗಳ ಲೀಡರ್​ಶಿಪ್ ಟೀಮ್ಲ್ಲಿ ಶೇ.10ಕ್ಕಿಂತ ಕಡಿಮೆ ಮಹಿಳೆಯರು

(ಮಾಹಿತಿ- ಸ್ಟಾರ್ಟಪ್ ಔಟ್​ಲುಕ್ ರಿಪೋರ್ಟ್ 2022)