ಅಂಕಣ

ಮಹಿಳೆಯರ ಆರೋಗ್ಯ ಪ್ರಗತಿಪರ ರಾಷ್ಟ್ರಕ್ಕೆ ಬುನಾದಿ

ಭಾರತದ ಪ್ರಗತಿ ಗಾಥೆಯ ಪ್ರಮುಖ ಸ್ತಂಭ ಮಹಿಳೆಯರೇ. ಅವರು ಸಮಾಜದ ಉತ್ಪಾದಕತೆಯನ್ನು ಹಲವು ಮಾರ್ಗಗಳಲ್ಲಿ ಉತ್ತಮವಾಗಿ ರೂಪಿಸಿದ್ದಾರೆ. ಮಹಿಳೆಯರ ಸಬಲೀಕರಣ, ಆರೋಗ್ಯದ ರಕ್ಷಣೆ ಸರ್ಕಾರದ ಆದ್ಯತೆಯಾಗಿದ್ದು, ಈ ನಿಟ್ಟಿನಲ್ಲಿ ಹಲವು ಯೋಜನೆ, ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (ಎಂಓಎಚ್​ಎಫ್​ಡಬ್ಲು್ಯ) ಜಾರಿಗೆ ತಂದಿರುವ ಕಾರ್ಯಕ್ರಮಗಳು, ಯೋಜನೆಗಳು ಹಾಗೂ ಉಪಕ್ರಮಗಳು ಮಹಿಳಾ ಹಕ್ಕುಗಳ ಬಗ್ಗೆ ಹುಟ್ಟಿದಾಗಿನಿಂದ ಹದಿಹರೆಯದವರೆಗೆ ಮತ್ತು ಪ್ರೌಢಾವಸ್ಥೆಯವರೆಗೆ ಕಾಳಜಿ ವಹಿಸುತ್ತವೆ. ಇದನ್ನು ‘ಜೀವನಚಕ್ರ ವಿಧಾನ’ ಎಂದು ಕರೆಯಲಾಗಿದೆ. ಲಸಿಕೆಗಳು, ಆರೋಗ್ಯ ಕಾರ್ಯಕರ್ತರ ಮನೆಮನೆ ಭೇಟಿ, ಪೌಷ್ಟಿಕತೆ (ಜೀವನಚಕ್ರದಾದ್ಯಂತ) ಮೂಲಕ ಆರೋಗ್ಯವಂತ ಬಾಲ್ಯವನ್ನು ಖಾತ್ರಿಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ, ಹದಿಹರೆಯದವರ ಆರೋಗ್ಯ ಕಾರ್ಯಕ್ರಮಗಳ ಅಡಿ ಋತುಚಕ್ರದ ನೈರ್ಮಲ್ಯ ಕಾರ್ಯಕ್ರಮ ಕೈಗೆತ್ತಿಕೊಳ್ಳಲಾಗಿದೆ. ಈ ಮೂಲಕ ವಿವಾಹಿತ ಮಹಿಳೆಯರಿಗೆ ಕುಟುಂಬ ಯೋಜನೆ ಸೇವೆಗಳ ಜತೆಗೆ ಗರ್ಭನಿರೋಧಕಗಳ ಹಲವು ಆಯ್ಕೆಗಳನ್ನು ನೀಡಲಾಗುತ್ತಿದೆ ಮತ್ತು ಅಂತಿಮವಾಗಿ ಪ್ರಧಾನ ಮಂತ್ರಿಗಳ ಸುರಕ್ಷಿತ ಮಾತೃತ್ವ ಅಭಿಯಾನ (ಪಿಎಂಎಸ್​ಎಂಎ), ಸುರಕ್ಷಿತ ಮಾತೃತ್ವ ಆಶ್ವಾಸನಾ (ಸುಮನ್), ಲಕ್ಷ್ಯಾ (ಹೆರಿಗೆ ಕೊಠಡಿಯ ಗುಣಮಟ್ಟ ಸುಧಾರಣಾ ಉಪಕ್ರಮ) ಮತ್ತು ಸೂಲಗಿತ್ತಿ ಸೇವೆಗಳಂತಹ ಕಾರ್ಯಕ್ರಮಗಳ ಮೂಲಕ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸಲಾಗುತ್ತಿದೆ.

ಸಮಗ್ರ ಮತ್ತು ಗುಣಮಟ್ಟದ ಪ್ರಸವಪೂರ್ವ ಆರೈಕೆಯನ್ನು ಖಾತ್ರಿಪಡಿಸಲು ಪಿ.ಎಂ.ಎಸ್.ಎಂ.ಎ.ಯನ್ನು 2016 ಜೂನ್​ನಲ್ಲಿ ಆರಂಭಿಸಲಾಯಿತು. ಪ್ರತಿ ತಿಂಗಳ 9ರಂದು ಸಾರ್ವತ್ರಿಕವಾಗಿ ಎಲ್ಲ ಗರ್ಭಿಣಿಯರಿಗೆ ಪ್ರಸವಪೂರ್ವ ಆರೈಕೆಯ ಕನಿಷ್ಠ ಪ್ಯಾಕೇಜ್ (ತಪಾಸಣೆ ಔಷಧಸಹಿತ) ಉಚಿತವಾಗಿ ಒದಗಿಸಲಾಗುತ್ತಿದೆ. ಈವರೆಗೆ 2.38 ಕೋಟಿಗೂ ಹೆಚ್ಚು ಗರ್ಭಿಣಿಯರು ಪಿ.ಎಂ.ಎಸ್.ಎಂ.ಎ. ಅಡಿಯಲ್ಲಿ ಪ್ರಸವಪೂರ್ವ ಆರೈಕೆ ಪಡೆದಿದ್ದಾರೆ ಮತ್ತು 12.55 ಲಕ್ಷಕ್ಕೂ ಹೆಚ್ಚು ಅಪಾಯವಿರುವ ಗರ್ಭಧಾರಣೆಗಳನ್ನು ಪತ್ತೆ ಮಾಡಲಾಗಿದೆ. ಮಹಿಳೆಯರಿಗಾಗಿ ಇತ್ತೀಚೆಗೆ ರೂಪಿಸಲಾದ ಕಾರ್ಯಕ್ರಮ ‘ಸುಮನ್’(2019ರ ಅಕ್ಟೋಬರ್). ಈ ಯೋಜನೆ ಅಡಿಯಲ್ಲಿ, ತಾಯಿ ಮತ್ತು ನವಜಾತ ಶಿಶುಗಳಿಗಾಗಿ ಹಾಲಿ ಜಾರಿಯಲ್ಲಿರುವ ಎಲ್ಲ ಯೋಜನೆಗಳನ್ನು ತರಲಾಗಿದೆ.

ಸಾರ್ವತ್ರಿಕ ಆರೋಗ್ಯ ಸೇವೆ ಬಗ್ಗೆ ಹೇಳುವುದಾದರೆ, ಸಾಂಕ್ರಾಮಿಕವಲ್ಲದ ಕಾಯಿಲೆಗಳು ಅಂದರೆ ಮಧುಮೇಹ, ಅತಿ ಒತ್ತಡ ಮತ್ತು ಮೂರು ಬಗೆಯ ಸಾಮಾನ್ಯ ಕ್ಯಾನ್ಸರ್ (ಬಾಯಿ, ಸ್ತನ ಮತ್ತು ಗರ್ಭಕೋಶ) ಬಗ್ಗೆ ಮೂವತ್ತು ವರ್ಷ ಮೇಲ್ಪಟ್ಟ ಎಲ್ಲರಿಗೂ ತಪಾಸಣೆ ಮಾಡಲಾಗುತ್ತಿದೆ. ಈವರೆಗೆ 1.03 ಕೋಟಿ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಮತ್ತು 69 ಲಕ್ಷ ಮಹಿಳೆಯರಿಗೆ ಗರ್ಭಕೋಶದ ಕ್ಯಾನ್ಸರ್ ಬಗ್ಗೆ ತಪಾಸಣೆ ಮಾಡಲಾಗಿದೆ.

ಇತ್ತೀಚೆಗೆ, ಆರೋಗ್ಯ ಸಚಿವಾಲಯ ದೇಶದಲ್ಲಿ ಆರೈಕೆಯ ಗುಣಮಟ್ಟ ಸುಧಾರಣೆಗಾಗಿ ಮತ್ತು ಗರ್ಭಿಣಿಯರಿಗೆ, ನವಜಾತ ಶಿಶುಗಳಿಗೆ ಗೌರವಯುತ ಆರೈಕೆಯ ಖಾತ್ರಿಗಾಗಿ ಸೂಲಗಿತ್ತಿಯರ ಸೇವೆಯ ಉಪಕ್ರಮ ಆರಂಭಿಸಲು ನೀತಿನಿರ್ಧಾರ ಕೈಗೊಂಡಿದೆ. ಸೂಲಗಿತ್ತಿಯರ ಅಂತಾರಾಷ್ಟ್ರೀಯ ಒಕ್ಕೂಟ (ಐಸಿಎಂ) ನಿಗದಿಪಡಿಸಿದ ಮಾನದಂಡಗಳಿಗೆ ಅನುಗುಣವಾಗಿ ನುರಿತ ಆರೋಗ್ಯ ಸೇವೆಗಳನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿರುವ ಸೂಲಗಿತ್ತಿಯರಿಗೆ ಶುಶ್ರೂಷಕಿಯರ ಸೇವಾ ಕೇಡರನ್ನು ರಚಿಸುವ ಗುರಿಯನ್ನು ಇದು ಹೊಂದಿದೆ. ಈ ತರಬೇತಿ ಕಾರ್ಯಕ್ರಮಗಳಿಗೆ ಉತ್ತೇಜನ ನೀಡಲು ಸರ್ಕಾರ 2014ರಲ್ಲಿ ದೆಹಲಿ ಪ್ರದೇಶದಲ್ಲಿ ಐದು ರಾಷ್ಟ್ರೀಯ ಕೌಶಲ ಪ್ರಯೋಗಾಲಯ ಆರಂಭಿಸಿದೆ. ಗುಜರಾತ್, ಹರಿಯಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ಪಶ್ಚಿಮಬಂಗಾಳ, ಒಡಿಶಾ, ತಮಿಳುನಾಡು, ತ್ರಿಪುರಾ, ಜಮ್ಮು ಮತ್ತು ಕಾಶ್ಮೀರ ಇತ್ಯಾದಿ ವಿವಿಧ ರಾಜ್ಯಗಳಲ್ಲಿ 104 ಅದ್ವಿತೀಯ ಕೌಶಲ್ಯ ಪ್ರಯೋಗಾಲಯಗಳನ್ನು ಸ್ಥಾಪಿಸಿದೆ, ಈವರೆಗೆ 3,375 (2018-19ರ ಹಣಕಾಸು ವರ್ಷದಲ್ಲಿ 1,238) ಆರೋಗ್ಯ ಸಿಬ್ಬಂದಿಗೆ ರಾಷ್ಟ್ರೀಯ ಕೌಶಲ್ಯ ಪ್ರಯೋಗಾಲಯಗಳಲ್ಲಿ ತರಬೇತಿ ನೀಡಲಾಗಿದೆ.

ಸಚಿವಾಲಯದ ಸಂಘಟಿತ ಹೋರಾಟ ಫಲ ನೀಡುತ್ತಿದೆ. ಭಾರತದ ರಿಜಿಸ್ಟ್ರಾರ್ ಜನರಲ್ ಇತ್ತೀಚೆಗೆ ಬಿಡುಗಡೆ ಮಾಡಿರುವ ಎಂಎಂಆರ್ ಕುರಿತ ವಿಶೇಷ ಪ್ರಕಟಣೆಯಲ್ಲಿ ಭಾರತದಲ್ಲಿ ತಾಯಂದಿರ ಮರಣ ಪ್ರಮಾಣ ಒಂದು ವರ್ಷದಲ್ಲಿ 8 ಅಂಕ ಇಳಿಕೆಯಾಗಿದೆ ಎಂದು ತಿಳಿಸಿದೆ. ಈ ಇಳಿಕೆ ಮಹತ್ವದ್ದಾಗಿದೆ ಏಕೆಂದರೆ, ಇದರಿಂದಾಗಿ ಹೆಚ್ಚುವರಿಯಾಗಿ ವಾರ್ಷಿಕ 2000 ಗರ್ಭಿಣಿಯರನ್ನು ಉಳಿಸಲಾಗುತ್ತಿದೆ ಎಂಬುದು ವೇದ್ಯವಾಗುತ್ತದೆ. ಎಂಎಂಆರ್ 2014-16ರಲ್ಲಿ ಪ್ರತಿ ಲಕ್ಷ ನೇರ ಜನನಕ್ಕೆ 130 ಇದ್ದದ್ದು, 2015-17ರಲ್ಲಿ ಪ್ರತಿ ಲಕ್ಷ ನೇರ ಜನನಗಳಿಗೆ 122ಕ್ಕೆ ಇಳಿದಿದೆ (ಶೇಕಡ 6.2ಕುಸಿತ); ಈ ನಿರಂತರ ಕುಸಿತದೊಂದಿಗೆ, 2030ರ ವೇಳೆಗೆ ಎಂಎಂಆರ್ ಅನ್ನು ಕಡಿಮೆ ಮಾಡುವ ಹಾದಿಯಲ್ಲಿ ಭಾರತ ಇದೆ.

ಇದರೊಂದಿಗೆ, ಸುರಕ್ಷಿತ ಹೆರಿಗೆ ಕೂಡ ಈ ಅವಧಿಯಲ್ಲಿ ಶೇಕಡ 52.7ರಿಂದ ಶೇ.81.4ಕ್ಕೆ ಏರಿದೆ. ಈ ಕಾರ್ಯಕ್ರಮಗಳ ಜೊತೆಗೆ, ಮಹಿಳೆಯರ ಹಕ್ಕುಗಳನ್ನು ರಕ್ಷಿಸಲು ಮತ್ತು ಅವರ ಸಬಲೀಕರಣಕ್ಕಾಗಿ ಕಾನೂನುಗಳನ್ನು ಸಹ ತರಲಾಗಿದೆ. ಮಹಿಳೆಯರು ಆರೋಗ್ಯ ಆರೈಕೆ ಕಾರ್ಯಕ್ರಮಗಳ ಫಲಾನುಭವಿಗಳಷ್ಟೇ ಅಲ್ಲ, ಜೊತೆಗೆ ಅವರು ಸಮಾಜಕ್ಕೆ ಆರೋಗ್ಯ ಸೇವೆಗಳನ್ನು ತಲುಪಿಸುವ ತಂಡದ ಪ್ರಮುಖ ಭಾಗವೂ ಆಗಿದ್ದಾರೆ. ಆರೋಗ್ಯ ಮುಂಪಡೆಯ ಈ ಆರೋಗ್ಯ ಆರೈಕೆ ಪಡೆಯಲ್ಲಿ ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತೆಯರು (ಆಶಾಗಳು), ಸೂಲಗಿತ್ತಿ ಶುಶ್ರೂಷಕಿಯರ ಸಹಾಯಕರು (ಎ.ಎನ್.ಎಂ.ಗಳು), ನರ್ಸ್ ಸಿಬ್ಬಂದಿ ಮತ್ತು ಮಹಿಳಾ ವೈದ್ಯರು ಸೇರಿದ್ದಾರೆ.

ಡಾ.ಹರ್ಷವರ್ಧನ್ (ಲೇಖಕರು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು)