ಇತ್ತೀಚಿನ ದಿನಗಳಲ್ಲಿ ಬ್ಯಾಂಕಿಂಗ್ ಸಂಬಂಧಿಸಿದ ಆರ್ಥಿಕ ಅಪರಾಧ ಸಂಖ್ಯೆ ಹೆಚ್ಚಾಗುತ್ತಿವೆ. ನಾಗರಿಕರಲ್ಲಿ ಬ್ಯಾಂಕಿಂಗ್ ಕುರಿತಂತೆ ಸೂಕ್ತ ಅರಿವು ಇಲ್ಲದಿರುವುದೇ ಅನೇಕ ಪ್ರಮಾದಗಳಿಗೆ ಕಾರಣವಾಗುತ್ತಿದೆ.
- ಕೋರ್ ಬ್ಯಾಂಕಿಂಗ್ ಸೌಲಭ್ಯ ಹೊಂದಿರುವ ನಮ್ಮ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಗ್ರಾಹಕನೋರ್ವ ತನ್ನ ಖಾತೆಯಿಂದ ಯಾವುದೇ ಅನ್ಯ ಬ್ಯಾಂಕಿನ (IFSC ಕೋಡ್ ಇರುವ) ಖಾತೆಗೆ ಹಣ ವರ್ಗಾವಣೆ ಮಾಡಬಹುದಾದದ್ದರಿಂದ ಒಂದಕ್ಕಿಂತ ಹೆಚ್ಚು ಬ್ಯಾಂಕ್ಗಳಲ್ಲಿ ಖಾತೆಗಳನ್ನು ತೆರೆದು ಅವುಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಇಡುವ, ಎಟಿಎಂ ಕಾರ್ಡ್ ಹಾಗೂ ಎಸ್ಎಂಎಸ್ ಮತ್ತಿತರ ಸೌಲಭ್ಯಗಳಿಗೆ ಶುಲ್ಕ ಭರಿಸಲಾಗದೆ ಪೇಚಾಡುವುದಕ್ಕಿಂತ ಒಂದೋ ಎರಡೋ ಬ್ಯಾಂಕ್ ಖಾತೆಗಳನ್ನು ಹೊಂದುವುದು ಜಾಣತನ.
- ಅನೇಕ ಗ್ರಾಹಕರು, ಖಾಸಗಿ ಉದ್ಯಮಗಳ ನೌಕರರು ವ್ಯಾಪಾರಸ್ಥರ, ಕಾಳಧನಿಕರ ಆಮಿಷಕ್ಕೆ ಬಿದ್ದು ಅವರ ಹಣವನ್ನು ತಮ್ಮ ಖಾತೆಗಳಿಗೆ ಜಮಾ ಮಾಡಿ ಅವುಗಳನ್ನು ಇನ್ನೆಲ್ಲಿಗೋ ವರ್ಗಾವಣೆ ಮಾಡಲು ನೆರವಾಗುತ್ತಾರೆ. ಮುಂದೊಂದು ದಿನ ಅದು ಸಂಕಷ್ಟಕ್ಕೆ ಕಾರಣವಾಗಬಹುದು. ವ್ಯಾಪಾರಸ್ಥರ ಆರ್ಥಿಕ ವಹಿವಾಟನ್ನು ನಡೆಸಲು ನಮ್ಮ ಉಳಿತಾಯ ಖಾತೆಯನ್ನು ಬಳಸಿಕೊಳ್ಳುವುದಕ್ಕೆ ಅವಕಾಶ ಕೊಡುವುದು ಸರಿಯಲ್ಲ.
- ಖಾತೆಯಲ್ಲಿ ಹಣ ಇಲ್ಲದಿದ್ದಾಗ್ಯೂ ಸುಮ್ಮಸುಮ್ಮನೆ ಚೆಕ್ ನೀಡುವುದರಿಂದ ಗ್ರಾಹಕನ ವಿಶ್ವಾಸಾರ್ಹತೆ ಕಡಿಮೆಯಾಗುತ್ತದೆ. ಚೆಕ್ ತಿರಸ್ಕೃತವಾಗುವುದು ಶಿಕ್ಷಾರ್ಹ ಅಪರಾಧ. ಚೆಕ್ ಕೊಟ್ಟ ನಂತರ ಮರುದಿನ ಖಾತೆಗೆ ಹಣ ತುಂಬಿಸಲು ಧಾವಿಸುವುದಕ್ಕಿಂತ ಖಾತೆಗೆ ಹಣ ತುಂಬಿಸಿದ ನಂತರ ಚೆಕ್ ನೀಡುವುದು ಉತ್ತಮ ಗ್ರಾಹಕನ ಲಕ್ಷಣ.
- ಎಟಿಎಂ ಕಾರ್ಡ್ಗಳ ಸೀಕ್ರೆಟ್ ಕೋಡನ್ನು ಕಾರ್ಡಿನ ಮೇಲೆ ಬರೆದಿಡುವುದು, ಇತರರೊಂದಿಗೆ ಹಂಚಿಕೊಳ್ಳುವುದು ಅಪಾಯ. ಫೋನ್ ಕರೆಗಳ ಆಧಾರದ ಮೇಲೆ ಖಾತೆ, ಎಟಿಎಂ ವಿವರಗಳನ್ನು ನೀಡುವುದರ ಪರಿಣಾಮ ಕೆಟ್ಟದಾಗಬಹುದು. ಬ್ಯಾಂಕ್ ಅಧಿಕಾರಿಗಳ ಸೋಗಿನಲ್ಲಿ ಬರುವ ಅಂಥ ಕರೆಗಳಿಗೆ ಸ್ಪಂದಿಸಬಾರದು.
- ಬ್ಯಾಂಕುಗಳಲ್ಲಿ ಎಲ್ಲ ವಿಧದ ಸಾಲವನ್ನು ಇಐಆಐಔ ರಿಪೋರ್ಟ್ ಆಧಾರದ ಮೇಲೆ ನೀಡಲಾಗುತ್ತದೆ. ಪ್ರಧಾನ ಮಂತ್ರಿ ಉದ್ಯೋಗ ಸೃಜನ ಯೋಜನೆ (PMGEP), ‘ಮುದ್ರಾ’ ಸಾಲ ಸೌಲಭ್ಯ, ಗುಂಪು ಸಾಲಗಳನ್ನು ಗ್ಯಾರಂಟರ್ ಇಲ್ಲದೆ ಪಡೆದ ಗ್ರಾಹಕರು ಸಾಲ ಮರುಪಾವತಿಯ ಬದ್ಧತೆ ತೋರಿಸುವುದಿಲ್ಲ. ಇದರಿಂದಾಗಿ ಕ್ರೆಡಿಟ್ ಸ್ಕೋರ್ ಬಾಧಿತವಾಗುತ್ತದೆ. ಬ್ಯಾಂಕ್ ಸಾಲ ಮರುಪಾವತಿಯಲ್ಲಿ ತೋರಿದ ಉದಾಸೀನದಿಂದಾಗಿ ಭವಿಷ್ಯದಲ್ಲಿ ಸಾರ್ವಜನಿಕ ಬ್ಯಾಂಕ್ಗಳ ದ್ವಾರವೇ ಮುಚ್ಚಿದಂತಾಗುತ್ತದೆ.
- ಸಾಲದ ಕಂತು ವಿಳಂಬವಾಗಿ ಪಾವತಿ ಮಾಡುವುದರಿಂದಲೂ ಹಾಗೂ ಅಪ್ರಾಮಾಣಿಕರಿಗೆ ಜಾಮೀನು ಹಾಕುವುದರಿಂದಲೂ ಕ್ರೆಡಿಟ್ ಸ್ಕೋರ್ ಕಡಿಮೆಯಾಗುತ್ತದೆ. ಅಪ್ರಾಮಾಣಕರಿಗೆ ಜಾಮೀನು ಹಾಕಿ ಅವರ ತಪು್ಪಗಳಿಗೆ ಸ್ವತಃ ಫಜೀತಿ ಪಡಬೇಕಾಗಬಹುದು.
- ಶಿಕ್ಷಣ ಸಾಲ ಸಹಾಯಧನವಲ್ಲ ಅದು ಕೂಡ ಸಾಲ. ಶಿಕ್ಷಣ ಸಾಲಕ್ಕೆ ಪ್ರಾರಂಭದಿಂದಲೂ ಬಡ್ಡಿ ಬೀಳುತ್ತದೆ. ಕೋರ್ಸ್ ಮುಗಿಯುವರೆಗೆ ಮರುಪಾವತಿಯಿಂದ ವಿನಾಯಿತಿ ಇರುತ್ತದೆ ಅಷ್ಟೇ. ಕೋರ್ಸ್ ಮುಗಿಯುವುದರ ಮೊದಲೂ ಸಾಧ್ಯವಿದ್ದರೆ ಮರುಪಾವತಿ ಮಾಡಬಹುದು ಮತ್ತು ಅದಕ್ಕೆ ಬಾಂಕ್ ರಿಬೇಟ್ ಕೂಡ ನೀಡುತ್ತದೆ.
- ಗೃಹಸಾಲ ಸಹಿತ ಎಲ್ಲ ಬ್ಯಾಂಕ್ ಸಾಲವನ್ನು ನಿಗದಿತ ಸಮಯಕ್ಕಿಂತ ಮೊದಲೇ ಚುಕ್ತಾ ಮಾಡಬಹುದು. ಬೇಗನೆ ಸಾಲ ಚುಕ್ತಾ ಮಾಡುವ ಗ್ರಾಹಕರ ಮೇಲೆ ಬ್ಯಾಂಕುಗಳು ದಂಡ (ಬೇಗ ವಾಪಸಾತಿಗೆ) ವಿಧಿಸುವಂತಿಲ್ಲ.
- ಬ್ಯಾಂಕ್ಗಳು ಗೃಹಸಾಲ ಸಹಿತ ಎಲ್ಲ ಪ್ರಕಾರದ ಸಾಲ ನೀಡುವ ಮೊದಲು ಗ್ರಾಹಕನ ಮರುಪಾವತಿಯ ಸಾಮರ್ಥ್ಯನ್ನು ಅಳೆಯಲು ಅಧಿಕೃತ ದಾಖಲೆ ಎನಿಸಿದ ಐಟಿ ರಿಟರ್ನ್್ಸ ಕೇಳುತ್ತವೆ. ಆದಾಯ ತೆರಿಗೆ ಫೈಲ್ ಮಾಡುವುದರಿಂದ ನಮ್ಮ ಆದಾಯ ಪ್ರಮಾಣ ಇದ್ದಂತಾಗುತ್ತದೆ. ಆದಾಯ ತೆರಿಗೆ ಫೈಲ್ ಮಾಡುವುದಕ್ಕೆ ಹಿಂಜರಿಯದಿರಿ.
- ಇತರರಿಗೆ ನೀಡುವ ಹಣವನ್ನು ನಗದಿನ ಬದಲು ಸಾಧ್ಯವಾದಷ್ಟು ಮಟ್ಟಿಗೆ ಬ್ಯಾಂಕ್ ಖಾತೆಯ (ಚೆಕ್) ಮೂಲಕ ನೀಡಿದರೆ ಅದು ನಮ್ಮ ಪಾಸ್ಬುಕ್ನಲ್ಲೂ ದಾಖಲಾಗುವುದರಿಂದ ಪಕ್ಕಾ ಪುರಾವೆಯಾಗಿ ಅದು ನಮ್ಮ ಬಳಿ ಸದಾ ಇರುತ್ತದೆ.
| ಚಂದ್ರಶೇಖರ ನಾವಡ ಬ್ಯಾಂಕ್ ಉದ್ಯೋಗಿ, ಬೈಂದೂರು