ಅಂಕಣ

ಯಾರಿಗೆ ಎಷ್ಟು ಔಷಧ ಎಂಬ ಜಾಣ ನಿರ್ಧಾರ

ಚಿಕಿತ್ಸೆಯಲ್ಲಿ ಯಾರಿಗೆ, ಯಾವಾಗ, ಯಾವ ರೀತಿ, ಯಾವುದರೊಂದಿಗೆ, ಎಷ್ಟು, ಯಾವ ಔಷಧ ಎಂಬ ನಿರ್ಧಾರದ ಹಿಂದೆ ಮಹತ್ವಪೂರ್ಣ ವಿಷಯಗಳು ಅಡಗಿರುತ್ತವೆ. ಔಷಧಗಳ ಲೇಬಲ್​ನಲ್ಲಿ ಬೆಳಗ್ಗೆ ಎರಡು ಮಾತ್ರೆ, ರಾತ್ರಿ ಎರಡು ಮಾತ್ರೆ ಆಹಾರ ಸೇವಿಸಿದ ನಂತರ ಅಥವಾ ವೈದ್ಯರ ಸಲಹೆಯಂತೆ ಎಂಬಂತಹ ಒಕ್ಕಣೆಗಳನ್ನು ನೋಡಿರುತ್ತೇವೆ. ಸೇವಿಸಬೇಕಾದ ಔಷಧದ ಪ್ರಮಾಣ ಎಷ್ಟೆಂದು ಹೇಳಿದ ಬಳಿಕ ವೈದ್ಯರ ನಿರ್ದೇಶನದಂತೆ ಎಂದು ಬರೆಯುವ ಅಗತ್ಯವೇನು ಎಂದು ಹಲವರಿಗೆ ಹಲವು ಬಾರಿ ಅನಿಸಿರುತ್ತದೆ. ಅಲ್ಲಿ ಮೊದಲು ಹೇಳುವ ಔಷಧದ ಪ್ರಮಾಣವು ಸಾಮಾನ್ಯ ಸಲಹೆಯೇ ಹೊರತು ಒಬ್ಬ ವ್ಯಕ್ತಿಗೆ ನಿರ್ದಿಷ್ಟವಾಗಿ ಹೇಳಿರುವುದಲ್ಲ. ಔಷಧಿಯ ಮೂಲ ಆಶಯದಂತೆ ನಿರ್ಧರಿಸಲ್ಪಟ್ಟ ಪರಿಮಾಣವೂ ಹೌದು. ವೈದ್ಯಕೀಯ ಗ್ರಂಥಗಳ ಆಧಾರದಲ್ಲಿ ಹೇಳಲ್ಪಟ್ಟ ಔಷಧ ಪ್ರಮಾಣವೂ ಹೌದು. ಇವೆಲ್ಲ ಇದ್ದರೂ ಒಬ್ಬ ರೋಗಿಗೆ ಎಷ್ಟು ಔಷಧ ನೀಡಬೇಕೆಂಬುದು ಸಂಪೂರ್ಣವಾಗಿ ವೈದ್ಯರ ವಿವೇಚನೆಗೆ ಬಿಟ್ಟಿದ್ದು!

ದಶಕಗಳ ಹಿಂದಿನ ರೇಡಿಯೋ ಉಪಕರಣಗಳಲ್ಲಿ ಬಾನುಲಿ ಕೇಂದ್ರಗಳನ್ನು ಹುಡುಕಲು ಒಂದು ಬಟನ್ ತಿರುವಬೇಕಿತ್ತು. ಅದು ಔಷಧದಲ್ಲಿ ಬರೆಯಲ್ಪಟ್ಟ ಪ್ರಮಾಣದಂತೆ. ಇನ್ನೊಂದು ಗುಂಡಿಯನ್ನು ಸೂಕ್ಷ್ಮವಾಗಿ ತಿರುವಿದಾಗ ಆ ಬಾನುಲಿ ಕೇಂದ್ರದ ಧ್ವನಿ ಸ್ಪಷ್ಟವಾಗಿ ಕೇಳಲು ಆರಂಭವಾಗುತ್ತಿತ್ತು. ಅದೇ ರೀತಿಯಲ್ಲಿ ಔಷಧ ಪ್ರಮಾಣದಲ್ಲಿ ನಿಖರತೆ, ಸ್ಪಷ್ಟತೆ ಪಡೆಯಬೇಕಾದರೆ ವೈದ್ಯರ ಸಲಹೆಗೇ ಹೆಚ್ಚಿನ ಮಹತ್ವ, ಅದುವೇ ಅಂತಿಮವಾಗುತ್ತದೆ. ರೋಗಿ ಎಂದಾಕ್ಷಣ ಒಂದೇ ರೋಗ ಇರುವುದೆಂದಲ್ಲ. ನೀಡಲಾಗುವ ಔಷಧವೂ ಒಂದೇ ಆಗಿರುವುದಿಲ್ಲ. ರೋಗಿಯ ವಯಸ್ಸು, ದೇಹ ತೂಕವನ್ನು ಮಾತ್ರ ಅವಲಂಬಿಸಿ ಔಷಧ ನೀಡಲಾಗದು. ಇದಕ್ಕಾಗಿ ಇಪ್ಪತ್ತು ಅಂಶಗಳನ್ನು ವೈದ್ಯನಾದವನು ಪರಿಗಣಿಸಬೇಕು ಎಂದು ಆಯುರ್ವೆದವು ಸಹಸ್ರಾರು ವರುಷಗಳ ಹಿಂದೆಯೇ ಹೇಳಿರುವುದು ವೈಜ್ಞಾನಿಕ ಮಾಹಿತಿಗಳ ವಿಚಾರದಲ್ಲಿ ಪ್ರಾಚೀನ ಭಾರತದ ಸಾಧನೆಯ ಉತ್ತುಂಗವನ್ನು ತೋರಿಸುತ್ತದೆ. ವ್ಯಕ್ತಿಯ ವಯಸ್ಸು, ಬಲ, ಲಿಂಗ, ಅಗ್ನಿ, ದೋಷ, ಧಾತು, ವ್ಯಾಧಿ, ಕೋಷ್ಠ, ದ್ರವ್ಯ, ಪ್ರಕೃತಿ, ಅಭ್ಯಾಸ, ಶೋಷಣ, ಆಹಾರ ಶಕ್ತಿ, ಅವಸ್ಥಾ, ಮಾನಸಿಕಸ್ಥಿತಿ, ದೇಶ, ಕಾಲ, ಸೂಕ್ಷ್ಮಾಸೂಕ್ಷ್ಮತೆ ಹಾಗೂ ಕಲ್ಪಗಳೆಂಬ ವಿಷಯಗಳನ್ನು ಗಣನೆಗೆ ತೆಗೆದುಕೊಳ್ಳಲೇಬೇಕು ಎಂಬ ಪರಿಕಲ್ಪನೆಯೇ ಅದೆಷ್ಟು ಪರಿಪೂರ್ಣ! ವಯಸ್ಸು ಇಪ್ಪತ್ತೇ ಆಗಿದ್ದರೂ ದೇಹ ತೂಕ ನೂರು ಕೆಜಿಯ ಆಸುಪಾಸಿನಲ್ಲಿ ಇರುವವರನ್ನು ನೋಡಿರುತ್ತೀರಿ. ಹಾಗೆಂದು ಮಾನಸಿಕವಾಗಿ ಏನೇನೂ ಬಲವಿರುವುದಿಲ್ಲ, ಶರೀರದಲ್ಲೂ ಶಕ್ತಿ ಇರುವುದಿಲ್ಲ. ರೋಗದ ವಿವಿಧ ಹಂತಗಳು, ಪಚನಶಕ್ತಿಯ ಮಟ್ಟ, ಕರುಳುಗಳ ಕ್ಷಮತೆ, ದೇಹ-ಮನಸ್ಸಿಗೆ ಒಗ್ಗುವ ಒಗ್ಗದ ವಿಚಾರಗಳು, ಆಹಾರ-ವಿಹಾರ, ಆಚಾರ-ವಿಚಾರಗಳು, ಯಾವರೋಗ ಪ್ರಬಲ, ಯಾವುದು ದುರ್ಬಲ, ಶರೀರ ಪೋಷಣೆ- ಶೋಷಣೆಯ ಅಂಶಗಳು, ವಾಸಿಸುತ್ತಿರುವ ದೇಶ-ಪ್ರದೇಶ, ಕಾಲದ ಸ್ಥಿತಿಗತಿ, ಔಷಧದ ತಯಾರಿಕೆಯ ಸ್ವರೂಪ, ಸ್ತ್ರೀ ಪುರುಷತ್ವವನ್ನು ಆಧರಿಸಿದ ಕೋಮಲತೆ-ದೃಢತೆ, ದೋಷಾದಿಗಳ ಸಮಗ್ರ ಕ್ರಿಯೆ ಪ್ರಕ್ರಿಯೆಗಳು - ಹೀಗೆ ಎಲ್ಲಾ ಆಂಶಗಳಿಂದ ಕೂಡಿದ ವಿವೇಚನೆ ವೈದ್ಯರದ್ದಾಗಿರಬೇಕು ಎಂಬುದು ಆಯುರ್ವೆದದ ವೈದ್ಯವಿಜ್ಞಾನಿಋಷಿಗಳ ಆಶಯ.

ಔಷಧಗಳ ಸಾಮಾನ್ಯ ಪ್ರಮಾಣವನ್ನೂ ಅರುಹಲಾಗಿದೆ. ಹಸಿಯಾದ ತಾಜಾ ಸಸ್ಯಗಳ ರಸವಾದರೆ 24 ರಿಂದ 48 ಮಿಲಿಲೀಟರ್, ಕಲ್ಕ, ಚೂರ್ಣ, ಗುಟಿಕಾಗಳಾದರೆ ದಿನವೊಂದಕ್ಕೆ 12 ಗ್ರಾಂ, ಔಷಧೀಯ ತುಪ್ಪ, ಎಣ್ಣೆಗಳು, ಅವಲೇಹ, ಆಸವ, ಅರಿಷ್ಟಗಳು 48 ಎಮ್​ಲ್, ಕ್ವಾಥ, ಫಾಂಟ, ಹಿಮ, ಕಷಾಯಗಳು 96 ಎಮ್​ಲ್- ಇವಿಷ್ಟು ಔಷಧಗಳ ಪ್ರಮಾಣವನ್ನು ನೇರವಾಗಿ ಹೇಳಲಾಗಿದ್ದು ಈ ಮೊದಲೇ ಹೇಳಲಾದ ವಿಚಾರಗಳನ್ನೆಲ್ಲ ಪರಿಗಣನೆಗೆ ತೆಗೆದುಕೊಂಡು ಅವುಗಳ ಪ್ರಮಾಣದಲ್ಲಿ ಹೆಚ್ಚು ಕಡಿಮೆ ಮಾಡುವ ನಿರ್ಧಾರದ ಜವಾಬ್ದಾರಿಯನ್ನು ವೈದ್ಯರಿಗೆ ಹೊರಿಸಲಾಗಿದೆ, ಕೆಲವು ರೋಗಿಗಳು ತಾವು ತೆಗೆದುಕೊಳ್ಳಬೇಕಾದ ಔಷಧ, ಅದರ ಪ್ರಮಾಣವನ್ನು ಅವರೇ ನಿರ್ಧರಿಸುವುದಿದೆ! ಮನಸ್ಸಿಗೆ ತೋಚಿದಂತೆ ನಿರ್ಧರಿಸಿ ವೈದ್ಯರಿಗೇ ತಿಳಿಹೇಳುವ ಮಟ್ಟಕ್ಕೂ ಹೋಗುತ್ತಾರೆ! ಔಷಧಗಳಿಂದಾಗುವ ಅಡ್ಡಪರಿಣಾಮಗಳ ಕುರಿತಾದ ಭೀತಿ, ಊಟಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕಾಗಿ ಬರುವ ಔಷಧ ಈ ಎರಡು ವಿಷಯಗಳು ಬಹುಶಃ ಅವರ ಈ ನಿಲುವಿನ ಹಿಂದಿರುವ ಪ್ರಮುಖ ಕಾರಣಗಳಾಗಿರುತ್ತವೆ. ವೈದ್ಯರು ಚಿಕಿತ್ಸೆಯಲ್ಲಿ ತಲ್ಲೀನರಾಗಿ ಯೋಚನೆ, ಯೋಜನೆಗಳನ್ನು ಮಾಡಬೇಕು. ರೋಗಿಯು ರೋಗಮುಕ್ತಿಯನ್ನು ಚಿತ್ತದಲ್ಲಿ ಬಿಂಬಿಸಿ ಔಷಧ, ಆಹಾರ, ಅಭ್ಯಾಸಗಳನ್ನು ಅನುಷ್ಠಾನಗೊಳಿಸಬೇಕು. ಆಗ ಚಿಕಿತ್ಸೆ ಸಫಲವಾಗುತ್ತದೆ, ರೋಗಿ ಹಾಗೂ ವೈದ್ಯರ ಪರಿಶ್ರಮಗಳೆಲ್ಲ ಸಾರ್ಥಕವಾಗುತ್ತದೆ.