ಒಬ್ಬ ವ್ಯಕ್ತಿಯ ಮನಸ್ಸಿನ ಆಳದಲ್ಲಿ ಯಾವುದೋ ಒಂದು ವಿಷಯ, ವಸ್ತು ಅಥವಾ ವ್ಯಕ್ತಿಯ ಸುತ್ತ ನೆನಪುಗಳು, ಆಸೆ ಆಕಾಂಕ್ಷೆಗಳು, ನಿರಾಸೆ ಹತಾಶೆಗಳು, ಆಲೋಚನೆಗಳು, ಭಾವನೆಗಳು ಕೇಂದ್ರೀಕೃತವಾಗಿ, ಅವೆಲ್ಲ ಒಟ್ಟಾಗಿ ಸೇರಿ ಒಂದು ಶಕ್ತಿಕೇಂದ್ರವಾಗಿ ಮಾರ್ಪಡುತ್ತವೆ. ಈ ಶಕ್ತಿಕೇಂದ್ರ ಆ ವ್ಯಕ್ತಿಯ ಆಂತರಿಕ ಹಾಗೂ ಬಾಹ್ಯ ವರ್ತನೆಯ ಮೇಲೆ, ನಡೆನುಡಿಯ ಮೇಲೆ ಪ್ರಭಾವ ಬೀರಿ ಆತನ ಅಥವಾ ಆಕೆಯ ಜೀವನಶೈಲಿಯನ್ನು ನಿಯಂತ್ರಿಸುತ್ತದೆ. ಇದರ ಅರಿವು ಸಾಮಾನ್ಯವಾಗಿ ಆ ವ್ಯಕ್ತಿಗೆ ಇರುವುದಿಲ್ಲ. ಇದು ಚೇತನ ಮನಸ್ಸಿನಿಂದಾಚೆ ಸುಪ್ತಚೇತನದಲ್ಲಿ ಬೇರು ಬಿಟ್ಟಿರುತ್ತದೆ. ಮನಸ್ಸಿನಾಳದಲ್ಲಿದ್ದು ನಮ್ಮ ಚಿಂತನೆ, ವರ್ತನೆಗಳನ್ನು ನಿಯಂತ್ರಿಸುತ್ತಿರುತ್ತದೆ. ಇದನ್ನೇ ಮನೋವಿಜ್ಞಾನದಲ್ಲಿ ‘ಕಾಂಪ್ಲೆಕ್ಸ್’ ಎನ್ನುತ್ತಾರೆ ಎಂದು ಮನೋವಿಜ್ಞಾನಿ ಎಂ.ಬಸವಣ್ಣ ವಿವರಿಸುತ್ತಾರೆ. (ನೋಡಿ: ಸೈಕಲಾಜಿಕಲ್ ಕಾಂಪ್ಲೆಕ್ಸ್ಗಳು, ಅಭಿನವ ಪ್ರಕಾಶನ)
ಬಹಳಷ್ಟು ಮನೋವಿಜ್ಞಾನಿಗಳು ಅಭಿಪ್ರಾಯಪಡುವಂತೆ ಇಂತಹ ಕಾಂಪ್ಲೆಕ್ಸ್ಗಳು ನಮ್ಮ ತಲೆಯಲ್ಲಿ ಇಲ್ಲಸಲ್ಲದ ಕಲ್ಪನೆಗಳನ್ನು ಹುಟ್ಟುಹಾಕಿ, ಮನಸ್ಸಿನಲ್ಲಿ ಗೊಂದಲವುಂಟುಮಾಡಿ, ನಮ್ಮನ್ನು ದಾರಿ ತಪ್ಪಿಸುವ ಸಾಧ್ಯತೆಗಳೇ ಹೆಚ್ಚು. ಬಸವಣ್ಣನವರೇ ಗುರ್ತಿಸುವಂತೆ ಇವು ನಿಜಸ್ಥಿತಿಯನ್ನು ತಪ್ಪಾಗಿ ಅರ್ಥೈಸುವಂತೆ ಮಾಡಬಹುದು; ಇತರರನ್ನು ತಪ್ಪಾಗಿ ತಿಳಿಯುವಂತೆ ಮಾಡಿ ಅವರ ಮತ್ತು ನಮ್ಮ ನಡುವಿನ ಸಂಬಂಧವನ್ನು ಹದಗೆಡುವಂತೆ ಮಾಡಬಹುದು; ನಾವು ನಿರ್ವಹಿಸಬೇಕಾದ ಕಾರ್ಯಗಳು ಫಲಪ್ರದವಾಗದಂತೆ ನಮ್ಮನ್ನು ತಪು್ಪದಾರಿಗೆ ಎಳೆಯಬಹುದು; ನಮ್ಮ ಆಲೋಚನೆಗಳನ್ನು, ಭಾವನೆಗಳನ್ನು ಕಾಂಪ್ಲೆಕ್ಸ್ಗಳೇ ನಿರ್ಧರಿಸಿ, ನಿರ್ದೇಶಿಸಿ ಅವು ನಮ್ಮ ನಿಯಂತ್ರಣಕ್ಕೆ ಸಿಕ್ಕದೆ ಹೋಗಬಹುದು, ನಮ್ಮ ವರ್ತನೆ ಅಸಮಂಜಸವಾಗಬಹುದು; ಕೆಲವೊಮೆ ಇದು ಹಿಂಸಾಚಾರಕ್ಕೂ ಕಾರಣವಾಗಬಹುದು. ‘ನನ್ನನ್ನು ಯಾರೂ ಇಷ್ಟಪಡುವುದಿಲ್ಲ’, ‘ನನಗೆ ಯಾರೂ ಮಿತ್ರರಿಲ್ಲ’, ‘ನಾನೊಬ್ಬ ಕೆಲಸಕ್ಕೆ ಬಾರದವನು’ ಎಂದೆಲ್ಲ ಅನ್ನಿಸಿ, ಕಡೆಗೆ ಇದೊಂದು ಭಾವನಾತ್ಮಕ ಸಮಸ್ಯೆಯಾಗಿ ಕಾಡಬಹುದು. ಆಡ್ಲರ್ ಹೇಳುವ ಹಾಗೆ ಇವೆಲ್ಲ ಸೇರಿ ‘ಕೀಳರಿಮೆ’ (ಇನ್ಫೀರಿಯಾರಿಟಿ ಕಾಂಪ್ಲೆಕ್ಸ್) ಉಂಟಾಗಿ, ಅನಾಹುತಗಳಿಗೆ ಹಾದಿ ಮಾಡಿಕೊಡಬಹುದು.
ಮಾನವನ ವ್ಯಕ್ತಿತ್ವದಲ್ಲಿ ಪ್ರಧಾನವಾಗಿ ಎರಡು ನೆಲೆಗಳಿವೆ. ಒಂದು ಜಾಗೃತ ಚೇತನ, ಮತ್ತೊಂದು ಸುಪ್ತಚೇತನ. ಮನುಷ್ಯನ ಸಕಲ ವರ್ತನೆಗಳೂ ಇವುಗಳಿಂದ ಪ್ರೇರಿತವಾಗಿರುತ್ತವೆ. ನಮ್ಮ ವರ್ತನೆಗೆ ನಮಗೆ ತಿಳಿದಿರುವ ಕಾರಣಗಳು ಜಾಗೃತ ಚೇತನದಿಂದ ಹುಟ್ಟಿಬಂದವು; ನಮಗೆ ತಿಳಿಯದೇ ಇರುವ ಕಾರಣಗಳು ಸುಪ್ತಚೇತನದಿಂದ ಉದ್ಭವಿಸಿರುತ್ತವೆ. ಒಮ್ಮೊಮ್ಮೆ ‘ನಾನೇಕೆ ಹಾಗೆ ವರ್ತಿಸಿದೆನೋ ನನಗೇ ತಿಳಿಯದು’ ಎನ್ನುತ್ತೇವಲ್ಲವೇ? ಇವು ನಮಗೆ ಜಾಗೃತ ನೆಲೆಯಲ್ಲಿ ತಿಳಿಯದ ಕಾರಣಗಳು; ಸುಪ್ತಚೇತನದಿಂದ ಪ್ರೇರಿತವಾದವು. ಯೂಂಗ್ನ ಪ್ರಕಾರ ನಮ್ಮ ವ್ಯಕ್ತಿತ್ವ ನಿರ್ವಣದಲ್ಲಿ ಈ ಸುಪ್ತಚೇತನದ ಪ್ರಭಾವವೇ ಅಧಿಕ. ಸುಪ್ತಚೇತನದಲ್ಲಿಯೂ ಎರಡು ನೆಲೆಗಳಿವೆ- ವೈಯಕ್ತಿಕ ಸುಪ್ತಚೇತನ, ಸಾಮೂಹಿಕ ಸುಪ್ತಚೇತನ. ಹಲವು ಕಾರಣಗಳಿಂದಾಗಿ ನಾವು ತಾಳಿಕೊಳ್ಳಲಾಗದ ಅನೇಕ ಅನುಭವಗಳನ್ನು ಸುಪ್ತಚೇತನಕ್ಕೆ ತಳ್ಳಿಬಿಡುತ್ತೇವೆ. ಈ ತಳ್ಳುವಿಕೆಯನ್ನು ಮನೋವಿಜ್ಞಾನಿಗಳು ‘ದಮನ ಕ್ರಿಯೆ’ ಎಂದು ಕರೆಯುತ್ತಾರೆ. ಈ ಕಾರ್ಯ ನಮಗೆ ಅರಿವಿಲ್ಲದಂತೆಯೇ ನಡೆದುಹೋಗುತ್ತದೆ. ಜಾಗೃತಾವಸ್ಥೆಯಲ್ಲಿ ನಾವು ಇಷ್ಟಪಡದ ಸಂಗತಿಗಳೂ ಸುಪ್ತಚೇತನಕ್ಕೆ ತಳ್ಳಲ್ಪಡುತ್ತವೆ. ಅಂದರೆ ನಾವು ಮರೆತ, ದಮನ ಮಾಡಿದ ಭಾವನೆಗಳ, ಚಿಂತನೆಗಳ, ಅನುಭವಗಳ ಆಗರವೇ ಈ ಸುಪ್ತಚೇತನ. ನಮ್ಮ ವರ್ತನೆಗಳಲ್ಲಿ ಕೆಲವೊಮ್ಮೆ ನಮಗೇ ಅನಿರೀಕ್ಷಿತವೆನ್ನಿಸುವಂತಹ ಸಂಗತಿಗಳು ಸಂಭವಿಸುವುದು ಈ ಸುಪ್ತಚೇತನದಲ್ಲಿದ್ದುಕೊಂಡು ನಮ್ಮನ್ನು ನಿಯಂತ್ರಿಸುವ ಭಾವನಾತರಂಗಗಳು.
ಒಂದು ಕತೆ ನೆನಪಾಗುತ್ತಿದೆ: ಹಳ್ಳಿಯೊಂದರಲ್ಲಿ ಬಹಳ ಹಳೆಯದಾದ ಹುಣಸೆ ಮರವೊಂದಿರುತ್ತದೆ. ಅದರಲ್ಲಿ ದೆವ್ವವಿದೆ ಎಂಬುದು ಊರವರ ನಂಬಿಕೆ. ಅಮಾವಾಸ್ಯೆಯ ದಿನ ಯಾರೂ ಆ ಮರದತ್ತ ಹೋಗುತ್ತಿರಲಿಲ್ಲ. ಆಧುನಿಕ ಮನೋಭಾವದ ಯುವಕನೊಬ್ಬನಿಗೆ ದೆವ್ವ ಭೂತಗಳಲ್ಲಿ ನಂಬಿಕೆಯಿರಲಿಲ್ಲ. ಆತ ಅವರನ್ನೆಲ್ಲ ಗೇಲಿ ಮಾಡುತ್ತಿದ್ದ. ಊರ ಜನ ಆ ಯುವಕನಿಗೆ ಅಮಾವಾಸ್ಯೆಯ ರಾತ್ರಿ ಆ ಹುಣಸೇಮರದ ಬಳಿಹೋಗಿ, ಗುರುತಿಗಾಗಿ ಅದಕ್ಕೊಂದು ಮೊಳೆ ಹೊಡೆದು ಬರಬೇಕು ಎಂಬ ಸವಾಲೊಡ್ಡುತ್ತಾರೆ. ಯುವಕ ಅಮಾವಾಸ್ಯೆಯ ರಾತ್ರಿ ಒಬ್ಬನೇ ಧೈರ್ಯವಾಗಿ ಹುಣಸೇಮರದ ಬಳಿಹೋಗಿ ಅದರ ಕಾಂಡಕ್ಕೆ ಮೊಳೆ ಹೊಡೆದು, ತಿರುಗಿ ಹೊರಡುತ್ತಾನೆ. ಆತನ ಅಂಗಿಯ ತುದಿ ಮೊಳೆಗೆ ಸಿಕ್ಕಿಹಾಕಿಕೊಂಡು ಜಗ್ಗಿದಂತಾಗುತ್ತದೆ. ಆತ ಕಿಟಾರನೆ ಕಿರುಚಿ ಅಲ್ಲೇ ಕುಸಿದು ಬೀಳುತ್ತಾನೆ. ದೆವ್ವ ಎಲ್ಲಿತ್ತು?
ವಾಸ್ತವವಾಗಿ ದೆವ್ವದ ಭಯ ಆತನಿಗೆ ಜಾಗೃತ ಪ್ರಜ್ಞೆಯಲ್ಲಿ ಕಿಂಚಿತ್ತೂ ಇರುವುದಿಲ್ಲ. ಅದನ್ನು ಆತ ಮೀರಿರುತ್ತಾನೆ. ಆದರೆ ಆತನ ಸುಪ್ತಪ್ರಜ್ಞೆಯಲ್ಲಿ ಆ ಭಯವಿರುತ್ತದೆ. ಇದನ್ನೇ ಯೂಂಗ್ ‘ಸಮಷ್ಠಿ ಸುಪ್ತಚೇತನ’ ಎಂದು ಕರೆಯುವುದು.
ಕರೊನಾದ ಭಯ ಈ ಬಗೆಯ ಸಮಷ್ಠಿ ಸುಪ್ತಚೇತನವಾಗಿ ನಮ್ಮೆಲ್ಲರಲ್ಲಿ ಮನೆ ಮಾಡುತ್ತಿದೆಯೇ? ಅದು ಉಂಟು ಮಾಡುತ್ತಿರುವ ಭೌತಿಕ ಅಪಾಯಗಳ ಬಗ್ಗೆ ನಮ್ಮಲ್ಲಿ ಸಾಕಷ್ಟು ಚರ್ಚೆಗಳಾಗುತ್ತಿವೆ. ನಮ್ಮ ದೃಶ್ಯ ಮಾಧ್ಯಮಗಳನ್ನಂತೂ ಕರೊನಾ ಸಂಪೂರ್ಣ ಆವರಿಸಿಕೊಂಡಿದೆ. ಅವರು ನಮ್ಮನ್ನು ಎಚ್ಚರಿಸುತ್ತಿದ್ದಾರೋ, ಗಾಬರಿಗೊಳಿಸಿ ದುರ್ಬಲರನ್ನಾಗಿಸುತ್ತಿದ್ದಾರೋ ಸಂದಿಗ್ಧತೆಯಿದೆ. ಇದನ್ನು ಎದುರಿಸಲು ನಾವು ವೈದ್ಯಕೀಯ ಸಿದ್ಧತೆ ಮಾಡಿಕೊಳ್ಳಬೇಕು ಎನ್ನುವುದರಲ್ಲಿ ಭಿನ್ನಾಭಿಪ್ರಾಯವಿಲ್ಲ. ಆದರೆ ಇದು ಭೌತಿಕ ಸಿದ್ಧತೆ ಮಾತ್ರವಾದರೆ ಸಾಲದು, ನಮ್ಮ ಮನಸ್ಸನ್ನೂ ಸನ್ನದ್ಧಗೊಳಿಸಿಕೊಳ್ಳುವ ಅಗತ್ಯವಿದೆ. ಯಾವುದೇ ಸಮಸ್ಯೆಯನ್ನು ಎದುರಿಸುವಾಗಲೂ ಮಾನಸಿಕ ಸ್ಥೈರ್ಯ ಮಹತ್ವದ ಪಾತ್ರ ವಹಿಸುತ್ತದೆ. ಮನಸ್ಸು ಕುಗ್ಗಿದಾಗ ಸಣ್ಣ ಸಮಸ್ಯೆಯೂ ಬೃಹದಾಕಾರವಾಗಿ ಕಾಣಿಸುತ್ತದೆ.
ನಾನು ಮತ್ತು ಶಿವಮೊಗ್ಗ ಸುಬ್ಬಣ್ಣ ಒಮ್ಮೆ ಮಾಸ್ತಿಯವರನ್ನು ಭೇಟಿಯಾಗಲು ಹೋದಾಗ ಮನೆಯ ಹೊರಾಂಗಣದಲ್ಲಿ ಅವರು ಯಾರೊಡನೆಯೋ ಮಾತನಾಡುತ್ತಿದ್ದರು. ನಾವು ಅಲ್ಲೇ ಅನತಿ ದೂರದಲ್ಲಿ ನಿಂತೆವು. ಹಿರಿಯರೊಬ್ಬರು ತಮ್ಮ ಮನೆಯ ಸಮಸ್ಯೆ ಹೇಳಿಕೊಳ್ಳುತ್ತಿದ್ದರು. ಮಾಸ್ತಿ ಅವರನ್ನು ಸಂತೈಸುತ್ತ ಆಡಿದ ಮಾತುಗಳು: ‘ನೋಡಿ ರಾಯರೇ, ನಾನು ಇಲ್ಲಿ ನಿಂತಿದೇನಲ್ಲ, ಈ ಚಪ್ಪಡಿ ಕಲ್ಲು, ಹೆಚ್ಚು ಉಳಿ ಪೆಟ್ಟು ತಿಂದಿಲ್ಲ, ಇಲ್ಲಿ ನನ್ನ ಕಾಲ ಕೆಳಗೆ ಬಿದ್ದಿದೆ. ಅಲ್ಲಿ ನೋಡಿ ಗಂಗಾಧರೇಶ್ವರನ ವಿಗ್ರಹ ಇದೆಯಲ್ಲ, ಅದು ಹೆಚ್ಚು ಉಳಿ ಪೆಟ್ಟು ತಿಂದಿದೆ, ಆದರೆ ಎಲ್ಲರಿಂದ ಪೂಜೆಗೊಳಗಾಗಿದೆ. ಉಳಿ ಪೆಟ್ಟು ಬೀಳದೆ ವಿಗ್ರಹವಾಗದು. ಆದರೆ ಕಲ್ಲು ಒಡೆದುಹೋಗಬಾರದು. ಆಗ ಅದು ಎಲ್ಲರಿಂದ ಮಾನ್ಯಗೊಳ್ಳುತ್ತದೆ. ಕಷ್ಟ ಬರುತ್ತದಪ್ಪ, ಅದನ್ನು ತಾಳಿಕೊಳ್ಳಬೇಕು. ಆಗಲೇ ಬದುಕಿನಲ್ಲಿ ಏನಾದರೂ ಸಾಧಿಸಲು ಸಾಧ್ಯ. ಮನಸ್ಸನ್ನು ಕುಗ್ಗಲು ಬಿಡಬೇಡಿ, ಧೈರ್ಯವಾಗಿ ಎದುರಿಸಿ, ಒಳ್ಳೆಯದಾಗುತ್ತದೆ’.
ಮಾಸ್ತಿಯವರ ಮಾತುಗಳು ಆ ಹಿರಿಯರಿಗೆ ಎಷ್ಟು ತಟ್ಟಿತೋ ತಿಳಿಯೆ. ಆದರೆ ನನ್ನ ಬದುಕಿನ ಮೇಲೆ ಗಾಢ ಪ್ರಭಾವ ಬೀರಿದ್ದಂತೂ ಸತ್ಯ. ಅಕ್ಕಮಹಾದೇವಿಯ ವಚನ ನೆನಪಾಗುತ್ತದೆ: ಬೆಟ್ಟದ ಮೇಲೊಂದು ಮನೆಯ ಮಾಡಿ/ ಮೃಗಗಳಿಗಂಜಿದೊಡೆಂತಯ್ಯ?/ಸಮುದ್ರದ ತಡಿಯಲೊಂದು ಮನೆಯ ಮಾಡಿ/ನೊರೆತೆರೆಗಳಿಗೆ ಅಂಜಿದೊಡೆಂತಯ್ಯ?/ಸಂತೆಯೊಳಗೊಂದು ಮನೆಯ ಮಾಡಿ/ಶಬ್ದಕ್ಕೆ ನಾಚಿದೊಡೆಂತಯ್ಯ?/ಚೆನ್ನಮಲ್ಲಿಕಾರ್ಜುನ ದೇವ ಕೇಳಯ್ಯ/ಲೋಕದೊಳಗೆ ಹುಟ್ಟಿದ ಬಳಿಕ/ಸ್ತುತಿನಿಂದೆಗಳು ಬಂದರೆ/ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು. (ವಚನ ಕಮ್ಮಟ, ವಚನ ಸಂಖ್ಯೆ 304)
ಇದೇನೂ ಸುಲಭವಲ್ಲವೆಂಬುದು ಎಲ್ಲರ ಅನುಭವ. ಸಾಮಾನ್ಯರು ಹೀಗೆ ಹೇಳಿ ಗೊಣಗಾಡುತ್ತ ಕುಗ್ಗುತ್ತಾರೆ, ವಿವೇಕಿಗಳು ಇದನ್ನು ಒಪ್ಪಿಕೊಂಡು, ಸವಾಲುಗಳನ್ನು ಸ್ವೀಕರಿಸಿ, ಸಮಸ್ಯೆಗಳನ್ನು ಎದುರಿಸಿ ಸಾಧನೆ ಮಾಡುತ್ತಾರೆ. ‘ಮನಸ್ಸಿದ್ದರೆ ಮಾರ್ಗ’.
ಯಾವುದೇ ರೀತಿಯ ಹೊರ ಆಕ್ರಮಣ ಎದುರಿಸಲು ನಮ್ಮ ದೇಹದಲ್ಲಿಯೇ ಸಶಸ್ತ್ರ ಸೈನ್ಯವೊಂದಿರುತ್ತದೆ. ಅದನ್ನೇ ರೋಗನಿರೋಧಕ ಶಕ್ತಿ ಎಂದು ಕರೆಯುತ್ತೇವೆ. ಕರೊನಾ ವೈರಾಣು ಎದುರಿಸಲು ಇನ್ನೂ ಮದ್ದು ಸಿದ್ಧವಿಲ್ಲ, ಆದರೆ ಅದರ ಆಕ್ರಮಣ ಎದುರಿಸಲು ನಮ್ಮ ದೇಹದಲ್ಲಿಯೇ ರಕ್ಷಣಾ ವ್ಯವಸ್ಥೆಯಿದೆ. ಬಿಳಿರಕ್ತಕಣಗಳು ಹಾಗೂ ಟಿ.ಲಿಂಫೊಸೈಟ್ ಎಂಬ ಜೀವಕೋಶಗಳು ಈ ರಕ್ಷಣಾ ಪಡೆಯ ನೇತಾರರು. ಈ ಪಡೆ ಯಾವುದೇ ಹೊರ ಸೋಂಕು ಉಂಟಾದಾಗ ಅದನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸುತ್ತದೆ. ಈ ನಮ್ಮ ಸೈನ್ಯಕ್ಕೂ ನಮ್ಮ ಮನಃಸ್ಥಿತಿಗೂ ನಿಕಟ ಸಂಬಂಧವಿದೆ. ವಿಜ್ಞಾನ ಇದನ್ನು ಸಾಬೀತುಪಡಿಸಿದೆ. ಇತ್ಯಾತ್ಮಕ ಭಾವನೆಗಳಾದ ಧೈರ್ಯ, ಆತ್ಮವಿಶ್ವಾಸ, ನಂಬಿಕೆ ನಮ್ಮ ರೋಗನಿರೋಧಕ ಶಕ್ತಿಯನ್ನು ಉತ್ತೇಜಿಸಿ, ಅವು ಸಮರ್ಥವಾಗಿ ಕಾರ್ಯ ನಿರ್ವಹಿಸಲು ಅನುವು ಮಾಡಿಕೊಡುತ್ತವೆ. ನೇತ್ಯಾತ್ಮಕ ಭಾವನೆಗಳಾದ ಭಯ, ಕೋಪ, ಅಸಹಾಯಕತೆ, ಹತಾಶೆ ಮೊದಲಾದವು ರೋಗನಿರೋಧಕ ಶಕ್ತಿಯ ಕಾರ್ಯಕ್ಷಮತೆಯನ್ನು ಕುಂಠಿತಗೊಳಿಸಿ, ವಿನಾಶಕಾರಿ ರೋಗಾಣುಗಳ ಶತ್ರುಸೈನ್ಯಕ್ಕೆ ಅವಕಾಶ ಕಲ್ಪಿಸಿಕೊಡುತ್ತವೆ. ರೋಗನಿರೋಧಕ ಶಕ್ತಿಗೂ ನಮ್ಮ ನರಮಂಡಲಕ್ಕೂ ನಮ್ಮ ಮನೋಭಾವಕ್ಕೂ ಇರುವ ಸಾವಯವ ಸಂಬಂಧದ ಬಗ್ಗೆ ಆಳವಾದ ಸಂಶೋಧನೆ ನಡೆದು ವಿಜ್ಞಾನ ವಿವರಿಸಿದೆ. ನಮ್ಮ ಮಿದುಳು ರಸಗ್ರಂಥಿಗಳ ಮೂಲಕ ಕಾರ್ಯನಿರ್ವಹಿಸುತ್ತದೆ. ನಕಾರಾತ್ಮಕ ಭಾವನೆಗಳು ರೋಗನಿರೋಧಕ ಸೈನ್ಯದ ಉತ್ಪತ್ತಿಯನ್ನು ನಿಯಂತ್ರಿಸಿ ಅವುಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತವೆ. ಇತ್ಯಾತ್ಮಕ ಚಿಂತನೆಗಳು ರೋಗನಿರೋಧಕ ಪಡೆಯ ಸಾಮರ್ಥ್ಯವನ್ನು ಸಬಲಗೊಳಿಸುತ್ತವೆ. ಆಗ ಈ ಸೋಂಕನ್ನು ಎದುರಿಸುವಲ್ಲಿ ಯಶಸ್ಸು ಪಡೆಯುವ ಸಾಧ್ಯತೆ ಹೆಚ್ಚಾಗುತ್ತದೆ. ಈ ಸತ್ಯವನ್ನು ನಾವು ಜನರಿಗೆ ಮನವರಿಕೆ ಮಾಡಿಕೊಡುವ ಅಗತ್ಯವಿದೆ.
ಇದನ್ನೇ ಕುವೆಂಪು ‘ಆತ್ಮಶಕ್ತಿ’ ಎಂದು ಕರೆಯುತ್ತಾರೆ. ಹೊಸ ತಲೆಮಾರನ್ನು ಉದ್ದೇಶಿಸಿ ಮಾತನಾಡುವಾಗ ಕುವೆಂಪು ಆತ್ಮಶಕ್ತಿಯನ್ನು ಬೆಳೆಸಿಕೊಳ್ಳಬೇಕೆಂದು ಯುವಕರಿಗೆ ಕರೆಕೊಡುತ್ತಾರೆ. ಯುವಕರಿಗೇಕೆ ಆತ್ಮದ ಒಡನಾಟ, ಅದೇನಿದ್ದರೂ ಬಾಳಿನ ತುದಿಯಲ್ಲಿ ವಾನಪ್ರಸ್ಥಾಶ್ರಮದಲ್ಲಿ ಚಿಂತಿಸಬೇಕಾದಂಥದು ಎಂಬುದು ಹಲವರ ಅಭಿಪ್ರಾಯ. ಆದರೆ ಅದು ಹಾಗಲ್ಲ. ಅಂಗಸಾಧನೆ ಮಾಡಿದವರೆಲ್ಲ ಪೈಲ್ವಾನರಾಗಬೇಕೆಂದಿಲ್ಲ. ಅಂಗಸಾಧನೆಯಿಂದ ಉಂಟಾಗುವ ದೇಹದಾರ್ಢ್ಯ ಅದನ್ನು ಸಂಪಾದಿಸಿದ ವ್ಯಕ್ತಿಗೆ ಜೀವನದ ಎಲ್ಲ ವಲಯಗಳಲ್ಲಿಯೂ ಸಹಕಾರಿಯಾಗಿರುತ್ತದೆ. ಅಂಗಸಾಧನೆ ಮಾಡಿ ದೃಢಕಾಯನಾದವನು ಅಂಗಸಾಧನೆಯಿಲ್ಲದ ಕೃಶಶರೀರಿಗಿಂತ ಯಾವಾಗಲೂ ಮೇಲುಗೈಯಾಗಿರುತ್ತಾನೆ. ಆತ್ಮಸಾಧನೆಯ ವಿಚಾರವೂ ಹೀಗೆಯೇ! ಯಾವಾತನು ಆತ್ಮಶಕ್ತಿ ಪಡೆದಿರುತ್ತಾನೆಯೋ ಅಂಥವನು ಬುದ್ಧಿಯಲ್ಲಿ, ಭಾವದಲ್ಲಿ ಆತ್ಮಶ್ರೀ ವಿಹೀನನಿಗಿಂತಲೂ ನಿಸ್ಸಂದೇಹವಾಗಿ ಮೇಲುಗೈಯಾಗುತ್ತಾನೆ. ಸೋಲು, ನಿರಾಸೆ, ಅವಮಾನ ಮೊದಲಾದ ಸನ್ನಿವೇಶ ಎದುರಾದಾಗ ಆತ ಎದೆಗುಂದದೆ ಅವುಗಳನ್ನು ಎದುರಿಸುವ ಶಕ್ತಿ ಪಡೆಯುತ್ತಾನೆ. ಇತರರಂತೆ ನಿರ್ವಿಣ್ಣನಾಗುವುದಿಲ್ಲ. ಹೀಗಾಗಿ ನಮ್ಮ ಜನತೆ ‘ಆತ್ಮಶಕ್ತಿ’ ಬೆಳೆಸಿಕೊಳ್ಳಬೇಕೆಂಬುದು ಕುವೆಂಪು ಅವರ ಖಚಿತ ನಿಲವು.
‘ಮಾನಸಿಕ ಖಿನ್ನತೆ’ ಎಲ್ಲ ರೋಗಗಳಿಗಿಂತ ಬಹು ಅಪಾಯಕಾರಿಯಾದುದು. ಬದುಕಿನ ಸವಾಲುಗಳನ್ನು ಎದುರಿಸದೆ ಆತ್ಮಹತ್ಯೆಗೆ ಶರಣಾಗುತ್ತಿರುವ, ಭಯಗೊಂಡು ಬದುಕಿನಿಂದ ಪಲಾಯನ ಮಾಡುತ್ತಿರುವ ಜನಸ್ತೋಮಕ್ಕೆ ಸಮಸ್ಯೆಗಳಿಗೆ ಮುಖಾಮುಖಿಯಾಗಿ ಸಾಧನೆ ಮಾಡಿ ತೋರಿಸಲು ಇಂತಹ ಆತ್ಮಶಕ್ತಿಯ ಅಗತ್ಯವಿದೆ. ವಿರುದ್ಧ ಪರಿಸರದಲ್ಲಿ ಸವಾಲುಗಳನ್ನು ಸ್ವೀಕರಿಸಿ ಸಾಧನೆ ಮಾಡಿದ ಅನೇಕ ಸಾಧಕರ ಬದುಕಿನ ಕತೆಗಳು ಇದನ್ನು ನಮಗೆ ಹೇಳುತ್ತವೆ. ಅಂಥವರ ಬದುಕು ನಮಗೆ ಮಾದರಿಯಾಗಬೇಕು.
‘ವಿಧಿಯೆ! ನಿನ್ನಿದಿರು ಮಾರಾಂತು ಹೋರಾಡಿ ಕೆ/ಚ್ಚೆದೆತನದ ಬಲ್ಮೆಯನು ಬಿತ್ತರಿಪೆನು/ಸೋಲುಗಳ ಕೋಲುಗಳನೆಸೆದೆನ್ನ ಬಾಳುವೆಯ/ಸೀಳು; ಹೋಳೆನ್ನೊಡಲ ಹಲವು ಬಾರಿ/ಧಾಳಿಡುವ ನಿನಗೆ ಶರಣೆನದೆ ಬೀಳ್ಗಳೆದು ಮೇ/ಲ್ಬೀಳುವೆನು, ವೀರನಿಗದೊಂದೆ ದಾರಿ/ಹುಟ್ಟುಸಾವಿನ ಸೋಲುಗೆಲುವಿನೊಡೆತನ ನಿನ್ನ/ಕಟ್ಟಿಗೊಳಗಾದೊಡೇನಯ್ಯ? ಹೇಳು!/ಹುಟ್ಟು ಸಾವುಗಳ ಸೀಮೆಯ ಮೀರಿ ನಿಂತ ಜಗ/ಜಟ್ಟಿಯೈ, ಆತ್ಮಸ್ವರೂಪಿ ನಾನು’. -ಗೋಪಾಲಕೃಷ್ಣ ಅಡಿಗ
(ಲೇಖಕರು ಖ್ಯಾತ ವಿಮರ್ಶಕರು)