ವಿವಾಹಪೂರ್ವಕಾಲದಲ್ಲಿ ಯುವತಿಯೆಂದಷ್ಟೇ ಕರೆಸಿಕೊಂಡವಳು, ವಿವಾಹೋತ್ತರಕಾಲದಲ್ಲಿ ಗೃಹಿಣೀ - ಎನಿಸಿಕೊಳ್ಳುತ್ತಾಳೆ -ಎಂಬುದು ಕಾಳಿದಾಸನ ಶಾಕುಂತಲ ನಾಟಕದ ಮಾತು.
ಸಾಕುಮಗಳಾದ ಶಕುಂತಲೆಯನ್ನು ಪತಿಗೃಹಕ್ಕೆ ಕಳುಹಿಸಿ ಕೊಡುವಾಗ ಕಣ್ವಮಹರ್ಷಿಗಳು ಕೆಲವು ಹಿತವಚನಗಳನ್ನು ಹೇಳುತ್ತಾರೆ. ಹೇಗಿದ್ದಲ್ಲಿ ಅವಳು ಗೃಹಿಣೀ? ಹೇಗಿದ್ದರಲ್ಲ? - ಎಂಬುದನ್ನು ಸ್ಮರಣೀಯಸೂಕ್ತಿಗಳಿಂದ ಸೂಚಿಸುತ್ತಾರೆ. ಗೃಹಿಣಿಯೆಂಬುದು ಹಿರಿದಾದ ಒಂದು ಸ್ಥಾನ. ಗೃಹಿಣಿಯೆಂದು ಕರೆಸಿಕೊಳ್ಳಲು ಅನರ್ಹಳಾದಲ್ಲಿ, ಅಂತಹವಳು ಕುಲಕ್ಕೇ ಆಧಿಯಾಗುವಳು - ಎನ್ನುತ್ತಾರೆ. (ಶರೀರವನ್ನು ಬಾಧಿಸುವ ರೋಗವು ವ್ಯಾಧಿಯಾದರೆ ಮನಸ್ಸನ್ನು ಪೀಡಿಸುವ ರೋಗವು ಆಧಿ.) ಅಂತಹವಳಿಂದ ಅದೆಷ್ಟು ಮಂದಿಗೆ ಕ್ಲೇಶವೋ ಹೇಳಲಾಗದು.
ವಿವಾಹವನ್ನು ಮಾಡಿಕೊಂಡವನು ಗೃಹೀ; ಅವನಿಗೇನು ಕಡಿಮೆ ಜವಾಬ್ದಾರಿಗಳಿಲ್ಲ. ಅವನ ಜೊತೆಗಾರ್ತಿಯಾದ ಗೃಹಿಣಿಗೆ ತೋರಿಸಿರುವ ಸ್ಥಾನವೆಂತಹುದು? ಅತ್ತೆ-ಮಾವಂದಿರ ಮೇಲೂ ನೀನು ಸಮ್ರಾಜ್ಞಿ (ಅರಸಿ)ಯಾಗಿರು! - ಎಂದೇ ವೇದಮಂತ್ರಗಳಲ್ಲಿಯ ಆಶೀರ್ವಾದ. ಅದೇನು ಬರೀ ಬಾಯಿಮಾತಿಗೇ? ತೋರಿಕೆಗೇ? ಅದರ ಆಶಯವನ್ನರಿತು ಆಚರಿಸಬೇಕಷ್ಟೆ?
ಗೃಹಿಣಿಯೇ ಗೃಹ ಹೇಗಾದಾಳು? ಹಲವು ಬಗೆಗಳಲ್ಲಿ: ಮನೆಯು ಚೆನ್ನಾಗಿ ನಡೆದುಕೊಂಡು ಹೋಗಬೇಕೆಂದರೆ ಅವಳ ಪಾತ್ರವೇ ಮುಖ್ಯವಾಗುತ್ತದೆ. ಇನ್ನು ದೇಶಕ್ಕೆ ಆಸ್ತಿಮಾಡುವಲ್ಲಂತೂ ಅವಳದ್ದೇ ಹಿರಿದಾದ ಪಾತ್ರ. ಏಕೆ? ದೇಶದ ದೊಡ್ಡ ಆಸ್ತಿಯೆಂದರೆ ಸತ್ಪ್ರಜೆಗಳೇ; ಬರೀ ಪ್ರಜೆಗಳಲ್ಲ. ಜನಿಸುವ ಶಿಶುವಿಗೆ ತಾಯಿಯ ಗರ್ಭವೇ ಮೊದಲ ಮನೆ. ಜೀವಕಾರುಣ್ಯವೆಂಬುದು ತಾಯಿಯಲ್ಲೇ ಸಹಜವಾಗಿ ಉಕ್ಕುವುದು. ಶಿಶುವಿಗೆ ಅದೆಷ್ಟು ಪೋಷಕವೂ ಕೋಮಲವೂ ಆದ ಶಯ್ಯೆಯನ್ನು ಗರ್ಭದಲ್ಲಿ ಪ್ರಕೃತಿಯೇ ಸೃಷ್ಟಿಸಿಟ್ಟಿದೆ! ಜನಿಸುವ ಶಿಶುವಿಗೆ ತಾಯಿಯೇ ಮೊದಲ ಮನೆ; ಜನಿಸಿದ ಮಗುವಿಗೆ ತಾಯಿಯೇ ಮೊದಲ ಗುರು! ತಾಯಿಯೆಂಬುದೂ ಸಂಸ್ಕೃತಪದವೇ. ‘ತಾಯೃ ಸಂತಾನ-ಪಾಲನಯೋಃ’ ಎಂದು ಧಾತುಪಾಠವೇ ಇರುವುದನ್ನು ಶ್ರೀರಂಗಮಹಾಗುರುಗಳು ತೋರಿಸಿಕೊಟ್ಟಿದ್ದರು.
ಸಾಂಖ್ಯದರ್ಶನದಲ್ಲಿ ಪ್ರಕೃತಿ-ಪುರುಷ ಎಂಬ ಎರಡು ಪದಗಳನ್ನು ವಿಶೇಷಾರ್ಥದಲ್ಲಿ ಬಳಸುತ್ತಾರೆ. ಪುರುಷ ಎನ್ನುವುದು ಚೈತನ್ಯ; ಪ್ರಕೃತಿ ಎನ್ನುವುದು ಅದಕ್ಕೆ ಆಸರೆ. ಎಲ್ಲ ಜೀವಿಗಳೂ ಪುರುಷರೇ. ಧರ್ಮ- ಅರ್ಥ- ಕಾಮ-ಮೋಕ್ಷಗಳಿಗೆ ಪುರುಷಾರ್ಥವೆಂಬ ಹೆಸರಿದೆ. ಸ್ತ್ರೀಯರಿಗೆ ಅವೇನು ಬೇಡವೆಂದೇ?: ಎಂದೇ, ಜೀವ ಎಂಬ ಅರ್ಥದಲ್ಲಿ ಸ್ತ್ರೀಯರೂ ಪುರುಷರೇ.
ಬರೀ ಚೈತನ್ಯವು ಕೆಲಸ ಮಾಡಲಾಗದಲ್ಲವೇ? ಅದಕ್ಕೊಂದು ಆಧಾರ ಬೇಕು, ಆಕಾರ ಬೇಕು. ಚೈತನ್ಯವು ಹೀಗೆ ಮೈತಾಳಿದಾಗಲೇ ಮುಂದಕ್ಕೆ ವ್ಯವಹಾರ. ಮೈಯನ್ನು ತಾಳುವುದೇ, ಮೂರ್ತಿಯನ್ನು ಸ್ವೀಕರಿಸು ವುದು; ಹೀಗೆ ಮೂರ್ತವಾಗುವುದೇ ಹುಟ್ಟುವುದೆಂಬುದೂ.
ಹಿರಿಯರ ವಿಷಯದಲ್ಲಿ ಉಕ್ಕುವ ಗೌರವ-ಪ್ರೀತಿಗಳ ಮಧುರ ಮೇಳನವೇ ಭಕ್ತಿಯೆನಿಸಿಕೊಳ್ಳುವುದು. ಪ್ರೀತಿಯ ಪುತ್ಥಳಿಯಾದ ಶಿಶುವನ್ನು ಕಾಪಿಟ್ಟುಕೊಳ್ಳುವ ಎಡೆಯು ಗರ್ಭವಾದರೆ, ಉಕ್ಕುವ ಭಕ್ತಿಯಿಂದ ಭಗವಂತನನ್ನು ಕಾಪಿಟ್ಟುಕೊಳ್ಳುವ ಎಡೆಯು ಗರ್ಭಗುಡಿಯೆನಿಸುತ್ತದೆ. ಕುಟಿಯೆಂದರೆ ಮನೆಯೇ; ಕುಟಿಯೇ ಗುಡಿಯಾಗಿದೆ. ಹೀಗಾಗಿ ಮೈತಾಳುವುದೆಂದರೆ ಮನೆಯೊಂದರಲ್ಲಿ ವಾಸ ಮಾಡುವುದೆಂದೇ!. ದೇಹವೇ ಮೊದಲ ಗೇಹ. ಮುಂದಕ್ಕೆ ಬೇರೆ ವಾಸಸ್ಥಾನಗಳೂ ಉಂಟು. ನಮ್ಮ ವಸತಿಯಾದ ಊರೇ ನನ್ನ ಮನೆ; ಭಾರತವೇ ಮಾತೃಭೂಮಿ; ವೇದವಂತೂ ಪೃಥ್ವೀ ಮಾತಾ- ಇಡೀ ಭೂಮಿಯೇ ತನ್ನ ತಾಯಿ ಎನ್ನುತ್ತದೆ: ಇದಿಷ್ಟೂ ಹೊರನೋಟದ ಮನೆಗಳು. ಇನ್ನು ಒಳನೋಟದವು: ಶರೀರವು ಗೃಹ; ಅದಕ್ಕೂ ಹಿಂದಿರುವ ಮನಸ್ಸು ಗೃಹವಲ್ಲವೇ?; ಸಾಂಖ್ಯವು ಹೇಳುವ ಬುದ್ಧಿ-ಅಹಂಕಾರ ಗಳೂ, ಇವಕ್ಕೂ ಮೂಲವೆನಿಸುವ ಪ್ರಕೃತಿತತ್ತ್ವವೂ ಮನೆಯೇ.
ಪ್ರಕೃತಿಯ ಮೂರ್ತರೂಪವೇ ಆಗಿರುವ ಗೃಹಿಣಿಯೇ ಅತ್ಯಂತ ಮುಖ್ಯವೆನಿಸುವ ಗೃಹ. ಬೇರೆಲ್ಲೂ ದೊರೆಯದ ತುಷ್ಟಿ-ಪುಷ್ಟಿಗಳು ಮನೆಯಲ್ಲಿ ದೊರೆಯುತ್ತದೆ. ಮತ್ತೆಲ್ಲೂ ದಕ್ಕದ ನೆಚ್ಚಿಕೆ-ನೆಮ್ಮದಿಗಳು, ಪಾಲನೆ-ಪೋಷಣೆಗಳು ಗೃಹಿಣಿಯಿಂದ ಲಭ್ಯವಾಗುವವು. ಕಡುಬಡತನದಿಂದಾಗಿ ಮರದ ಬುಡದಲ್ಲಿ ವಾಸಮಾಡಬೇಕಾಗಿ ಬಂದರೂ, ಮನಸಾರೆ ಪ್ರೀತಿಸುವ ಮಡದಿಯೊಡನಿದ್ದಲ್ಲಿ, ಮರದ ಬುಡವೂ ಸದನವೇ-ಎನ್ನುತ್ತದೆ ಸುಭಾಷಿತ. ಗೃಹವಸ್ತು-ಗೃಹಕೃತ್ಯಗಳೆಲ್ಲಕ್ಕೂ ಸೇರಿ ಒಟ್ಟಿನ ಹೆಸರು ಗೃಹ. ಅವೆಲ್ಲವನ್ನೂ ಅಚ್ಚುಕಟ್ಟಾಗಿ ಅಣಿಮಾಡುವವಳೇ ಗೃಹಿಣಿ. ಒಡತಿಯಿಲ್ಲದ ಬೀಡು ಕಾಡಿಗಿಂತಲೂ ಕೇಡು-ಎಂಬುದು ಹಿಂದೆಷ್ಟೋ ಮುಂದೂ ಅಷ್ಟೇ ಸತ್ಯ-ಪತಿಪತ್ನಿಯರು ತಮ್ಮ ತಮ್ಮ ಪಾತ್ರಗಳನ್ನು ಯಥಾವತ್ತಾಗಿ ಅರಿತು ನಡೆಸಿಕೊಂಡಲ್ಲಿ!