ಮೂರು ದಶಕಗಳ ಹಿಂದೆ ಸೋವಿಯೆತ್ ಯೂನಿಯನ್ನಲ್ಲಿ ಕಮ್ಯೂನಿಸಂ ಪತನಗೊಂಡು, ಆ ವಿಶಾಲ ದೇಶ ಛಿದ್ರಗೊಂಡ ಪರಿಣಾಮವಾಗಿ ಮಧ್ಯ ಏಶಿಯಾದಲ್ಲಿ ಅಸ್ತಿತ್ವಕ್ಕೆ ಬಂದ ಐದು ಮುಸ್ಲಿಂ ಗಣರಾಜ್ಯಗಳಲ್ಲೊಂದಾದ ಕಝಾಖ್ಸ್ತಾನ್ ಇಲ್ಲಿಯವರೆಗೂ ಶಾಂತವಾಗಿದ್ದು ಈಗ ಏಕಾಏಕಿ ಸ್ಪೋಟಿಸಿರುವುದಕ್ಕೆ ಮೇಲುನೋಟಕ್ಕೆ ಕಾಣುವ ಕಾರಣ ಎಲ್ಪಿಜಿ ಬೆಲೆಯೇರಿಕೆಯಾದರೂ, ಸೂಕ್ಷ್ಮವಾಗಿ ನೋಡಿದರೆ ಬೇರೆಯೇ ಕಾರಣಗಳಿರುವುದು ಕಾಣುತ್ತದೆ. ಇಂಧನ ಬೆಲೆಯೇರಿಕೆಯ ವಿರುದ್ಧ ಆರಂಭವಾದ ಸಾರ್ವಜನಿಕರ ಪ್ರತಿಭಟನೆ ಮಾಜಿ ಅಧ್ಯಕ್ಷ ನೂರ್ ಸುಲ್ತಾನ್ ನಝುರ್ಬಯೇವ್ ವಿರುದ್ಧ ತಿರುಗಿದ್ದು, ಅವರಿಗೆ ಹತ್ತಿರದವರನ್ನೆಲ್ಲಾ ಪ್ರಸಕ್ತ ಸರ್ಕಾರ ಬಂಧಿಸುತ್ತಿರುವುದು, ಅವರನ್ನು ನಖಶಿಖಾಂತ ದ್ವೇಷಿಸುವ ರಶಿಯನ್ ಅಧ್ಯಕ್ಷ ವ್ಲಾದಿಮಿರ್ ಪುತಿನ್ ತರಾತುರಿಯಲ್ಲಿ ಸೇನೆ ಕಳುಹಿಸಿರುವುದು- ಇಷ್ಟೆಲ್ಲವನ್ನೂ ಗಮನಿಸಿದರೆ ಮಧ್ಯ ಏಶಿಯಾದಲ್ಲಿ ಜರುಗುತ್ತಿರುವುದು ಜಾಗತಿಕ ಬೃಹತ್ಶಕ್ತಿಗಳ ನಡುವಿನ ಭೂ-ರಾಜಕೀಯ ಹಣಾಹಣಿ ಎನ್ನುವುದು ಸ್ಪಷ್ಟ. ಜತೆಗೇ, ಕಝಾಖ್ ಬೆಳವಣಿಗೆಗಳನ್ನು ಪ್ರತ್ಯೇಕವಾಗಿ ನೋಡದೇ, ಕಪ್ಪು ಸಮುದ್ರದ ಉತ್ತರ ತೀರದಲ್ಲಿ, ಒಟ್ಟಾರೆ ರಶಿಯಾದ ಪೂರ್ವ ಮತ್ತು ದಕ್ಷಿಣ ಗಡಿಗಳಲ್ಲಿ ಅಮೆರಿಕಾ ಮತ್ತದರ ಮಿತ್ರದೇಶಗಳು ಎಸಗುತ್ತಿರುವ ರಶಿಯನ್-ವಿರೋಧಿ ಚಟುವಟಿಕೆಗಳು ಮತ್ತು ಅವುಗಳಿಗೆ ಪ್ರತಿಯಾಗಿ ರಶಿಯಾ ಒಡ್ಡುತ್ತಿರುವ ಪ್ರತಿರೋಧದ ಭಾಗವಾಗಿ ಪರಿಗಣಿಸಬೇಕು. ಇದರ ಆಮೂಲಾಗ್ರ ವಿಶ್ಲೇಷಣೆ ಎರಡು ಭಾಗಗಳ ಈ ಲೇಖನದಲ್ಲಿ.
ಮಧ್ಯ ಏಶಿಯಾದ ಮುಸ್ಲಿಂ ನಾಡುಗಳು ಯೂರೋಪಿಯನ್ ಕ್ರಿಶ್ಚಿಯನ್ ರಶಿಯನ್ ಸಾಮ್ರಾಜ್ಯದ ಭಾಗಗಳಾದದ್ದೇ ಇತಿಹಾಸದ ಒಂದು ಅನಿರೀಕ್ಷಿತ ಹಾಗೂ ಅನಪೇಕ್ಷಿತ ತಿರುವಿನಿಂದ. ಸಮಶೀತೋಷ್ಣ ವಲಯದ ಬ್ರಿಟನ್, ಫ್ರಾನ್ಸ್ ಮುಂತಾದ ಪಶ್ಚಿಮ ಯೂರೋಪಿನ ದೇಶಗಳು ನೌಕಾಪಡೆಗಳನ್ನು ಕಟ್ಟಿ ಜಗತ್ತಿನಾದ್ಯಂತ ವಸಾಹತುಶಾಹಿ ಸಾಮ್ರಾಜ್ಯಗಳನ್ನು ಸ್ಥಾಪಿಸಿಕೊಂಡಂತೆ ತನ್ನದೇ ವಸಾಹತುಗಳನ್ನು ಹೊಂದುವುದು ಒಂದಾದರೂ ಸರ್ವಋತು ಬಂದರನ್ನು ಹೊಂದಿಲ್ಲದ ಶೀತವಲಯದ ರಶಿಯಾಗೆ ಸಾಧ್ಯವಾಗಲಿಲ್ಲ. ಅಂತಹ ಬಂದರೊಂದನ್ನು ಗಳಿಸಿಕೊಳ್ಳುವ ಇರಾದೆಯಿಂದ ರಶಿಯನ್ನರು 19ನೇ ಶತಮಾನದ ಮಧ್ಯದಲ್ಲಿ ಕಪ್ಪುಸಮುದ್ರದ ಉತ್ತರದಲ್ಲಿ ತುರ್ಕಿಗೆ ಸೇರಿದ್ದ ಪ್ರದೇಶಗಳನ್ನು ಆಕ್ರಮಿಸಿಕೊಂಡು ಮೆಡಿಟರೇನಿಯನ್ ಸಮುದ್ರದತ್ತ ಮುಂದೊತ್ತಿ ಬರಲು ಹವಣಿಸಿದರು. ಆದರೆ ರಶಿಯನ್ನರ ಆಕ್ರಮಣಶೀಲತೆಗೆ ಉಗ್ರ ಪ್ರತಿರೋಧ ತೋರಿದ ಬ್ರಿಟನ್ ಮತ್ತು ಫ್ರಾನ್ಸ್ ತುರ್ಕಿಯೊಡನೆ ಸೇರಿ ಝಾರಿಸ್ಟ್ ರಶಿಯನ್ ಸೇನೆಯನ್ನು 1853-56ರಲ್ಲಿ ಕಪು್ಪಸಮುದ್ರದ ಉತ್ತರ ತೀರದ ಕ್ರಿಮಿಯಾದಲ್ಲಿ ನಿರ್ಣಾಯಕವಾಗಿ ಸೋಲಿಸಿ ರಶಿಯನ್ನರ ದಕ್ಷಿಣಮುಖೀ ಮುಂದೊತ್ತುವಿಕೆಯನ್ನು ಯಶಸ್ವಿಯಾಗಿ ತಡೆಗಟ್ಟಿದವು. ಹೀಗೆ, ಮೆಡಿಟರೇನಿಯನ್ ಸಮುದ್ರದ ಹಾದಿ ಮುಚ್ಚಿಹೋದಾಗ ರಶಿಯನ್ನರು ಅರಬ್ಬೀ ಸಮುದ್ರ ಮತ್ತು ಪರ್ಶಿಯನ್ ಕೊಲ್ಲಿಯ ಕಡೆಗೆ ತಿರುಗಿ, 1856ರ ನಂತರ ಕೇವಲ ಮೂರೇ ದಶಕಗಳಲ್ಲಿ ಪಶ್ಚಿಮದ ತುರ್ಕ್ವೆುನಿಸ್ತಾನದಿಂದ ಪೂರ್ವದ ರ್ಕಿಗಿಸ್ತಾನದವರೆಗೆ ಇಡೀ ಮಧ್ಯ ಏಶಿಯಾವನ್ನು ಆಕ್ರಮಿಸಿಕೊಂಡರು. ಆದರೆ ಅಲ್ಲೂ ಅವರಿಗೆ ಬ್ರಿಟಿಷ್ ತಡೆಗೋಡೆ ಎದುರಾಯಿತು.
ಮಧ್ಯ ಏಶಿಯಾವನ್ನು ದಾಟಿ ಅಫ್ಘಾನಿಸ್ತಾನ ಮತ್ತು ಪಶ್ಚಿಮ ಭಾರತದ (ಇಂದಿನ ಪಾಕಿಸ್ತಾನ) ಮೂಲಕ ಅರಬ್ಬೀಸಮುದ್ರ ತೀರವನ್ನು ತಲುಪುವ ತಮ್ಮ ಅಂತಿಮ ಉದ್ದೇಶದಲ್ಲಿ ರಶಿಯನ್ನರು ಸಫಲರಾಗಲು ಭಾರತದಲ್ಲಿ ಭದ್ರವಾಗಿ ನೆಲೆಯೂರಿದ್ದ ಬ್ರಿಟಿಷರು ಬಿಡಲಿಲ್ಲ. ಪರಿಣಾಮವಾಗಿ ರಶಿಯನ್ನರು ಮಧ್ಯ ಏಶಿಯನ್ ಮುಸ್ಲಿಂ ನಾಡುಗಳ ಮೇಲಷ್ಟೇ ಹಿಡಿತವನ್ನು ಸೀಮಿತಗೊಳಿಸಿಕೊಳ್ಳಬೇಕಾಯಿತು. 1917ರ ಕಮ್ಯೂನಿಸ್ಟ್ ಕ್ರಾಂತಿಯ ನಂತರ ವಿ.ಐ. ಲೆನಿನ್ ರಶಿಯನ್ ಸಾಮ್ರಾಜ್ಯದಲ್ಲಿದ್ದ ಹದಿನೈದು ಪ್ರಮುಖ ಜನಾಂಗಗಳಿಗೂ ಗಣರಾಜ್ಯಗಳ ಸ್ಥಾನ ನೀಡಿ, ಅವೆಲ್ಲವನ್ನೂ ಮಾಸ್ಕೋದಲ್ಲಿನ ಕೇಂದ್ರ ಸರ್ಕಾರದ ಅಧೀನಕ್ಕೊಳಪಡಿಸಿ ‘ಸೋವಿಯೆತ್ ಯೂನಿಯನ್’ ಅಥವಾ ‘ಯೂನಿಯನ್ ಆಫ್ ಸೋವಿಯೆತ್ ಸೋಶಿಯಲಿಸ್ಟ್ ರಿಪಬ್ಲಿಕ್ಸ್’ (ಯುಎಸ್ಎಸ್ಆರ್) ಅನ್ನು ಸೃಷ್ಟಿಸಿದರು. ಆ ಹದಿನೈದು ಗಣರಾಜ್ಯಗಳಿಗೂ ತಮ್ಮದೇ ಆದ ಸಂಸತ್ ಹಾಗೂ ಅಧ್ಯಕ್ಷ ಸಹಾ ಇದ್ದದ್ದು, ಆದರೆ ಅವೆಲ್ಲವೂ ಮಾಸ್ಕೋದಲ್ಲಿನ ಕೇಂದ್ರ ಸರ್ಕಾರದ ಕೈಗೊಂಬೆಗಳಾಗಿದ್ದದ್ದು ಲೆನಿನ್ ರೂಪಿಸಿದ ಸಂವಿಧಾನದ ವೈಶಿಷ್ಟ್ಯ. ಒಟ್ಟಾರೆ ಸೋವಿಯೆತ್ ಯೂನಿಯನ್ನಲ್ಲಿ ನೆಲ ಹಾಗೂ ಜನಸಂಖ್ಯೆಯಲ್ಲಿ ಅಗಾಧವಾಗಿದ್ದದ್ದು ರಶಿಯನ್ ಫೆಡರೇಶನ್.
ನಂತರ ಏಳು ದಶಕಗಳ ಕಮ್ಯೂನಿಸ್ಟ್ ಪ್ರಯೋಗದಲ್ಲಿ ವಿಫಲಗೊಂಡ ಆಂತರಿಕ ಆರ್ಥಿಕ ನೀತಿಗಳು ಮತ್ತು ಪ್ರತಿಕೂಲ ಅಂತಾರಾಷ್ಟ್ರೀಯ ಭೂ-ರಾಜಕೀಯ ಹಾಗೂ ಭೂ-ಸಾಮರಿಕ ಬೆಳವಣಿಗೆಗಳ ಪರಿಣಾಮವಾಗಿ 1990-91ರಲ್ಲಿ ಸೋವಿಯೆತ್ ಯೂನಿಯನ್ ಕುಸಿದಾಗ ಪರಂಪರಾಗತ ಉಗ್ರ ರಶಿಯನ್-ವಿರೋಧಿ ಬಾಲ್ಟಿಕ್ ಗಣರಾಜ್ಯಗಳಾದ ಲಾತ್ವಿಯಾ, ಲಿಥುವೇನಿಯಾ ಮತ್ತು ಎಸ್ತೋನಿಯಾಗಳ ಹೊರತಾಗಿ ಉಳಿದ ಹನ್ನೆರಡು ಗಣರಾಜ್ಯಗಳು ಒಂದಾಗಿಯೇ ಉಳಿಯಬಹುದಾಗಿತ್ತು. ಆದರೆ ಕಮ್ಯೂನಿಸ್ಟ್ ವ್ಯವಸ್ಥೆ ಕುಸಿಯುತ್ತಿದ್ದಂತೇ ಪ್ರಭಾವಶಾಲಿಯಾದ ರಶಿಯನ್ ಫೆಡರೇಶನ್ನ ಕುಡುಕ, ಬೇಜವಾಬ್ದಾರ ಅಧ್ಯಕ್ಷ ಬೋರಿಸ್ ಯೆಲ್ತ್ಸಿನ್ ಸೋವಿಯೆತ್ ಯೂನಿಯನ್ ಅನ್ನೇ ವಿಸರ್ಜಿಸಿ ಎಲ್ಲ ಗಣರಾಜ್ಯಗಳಿಗೂ ಸ್ವತಂತ್ರ ಅಸ್ತಿತ್ವದ ಅವಕಾಶ ನೀಡಿಬಿಟ್ಟರು. ನಿರಾಯಾಸವಾಗಿ ಸಿಗುವ ಸ್ವಾತಂತ್ರ್ಯವನ್ನು ಯಾರು ಬೇಡವೆನ್ನುತ್ತಾರೆ?
ಡಿಸೆಂಬರ್ 1991ರಲ್ಲಿ ಸೋವಿಯೆತ್ ಯೂನಿಯನ್ ಅಧಿಕೃತವಾಗಿ ಅಂತ್ಯಗೊಂಡಾಗ ಅದರ ಹದಿನೈದು ಉತ್ತರಾಧಿಕಾರಿ ರಾಷ್ಟ್ರಗಳಲ್ಲಿ ಹನ್ನೊಂದು ಒಟ್ಟುಗೂಡಿ ರಚಿಸಿಕೊಂಡ ‘ಕಾಮನ್ವೆಲ್ತ್ ಆಫ್ ಇಂಡಿಪೆಂಡೆಂಟ್ ಸ್ಟೇಟ್ಸ್’ ಪ್ರಯೋಜನಕಾರಿಯೇನೂ ಆಗಿರಲಿಲ್ಲ. ಆದರೆ ರಶಿಯಾ, ಬೆಲರೂಸ್, ಅಮೇನಿಯಾ, ತುರ್ಕ್ವೆುನಿಸ್ತಾನ್, ಕಝಾಖ್ಸ್ತಾನ್, ತಾಜಿಕಿಸ್ತಾನ್ ಮತ್ತು ರ್ಕಿಗಿಸ್ತಾನ್ 1994ರಲ್ಲಿ ಭದ್ರತಾ ಒಪ್ಪಂದವೊಂದಕ್ಕೆ ಸಹಿಹಾಕಿದವು. ಅದೂ ಪರಿಣಾಮಕಾರಿಯೇನೂ ಆಗಲಿಲ್ಲ. ಆದರೆ ಎಲ್ಲವೂ ಬದಲಾದದ್ದು ಹೊಸ ಶತಮಾನದ ಆರಂಭದೊಂದಿಗೆ ಕ್ರೆಮ್ಲಿನ್ ನಾಯಕತ್ವ ವ್ಲಾದಿಮಿರ್ ಪುತಿನ್ ಕೈಸೇರಿದಾಗ.
1991ರಲ್ಲಿ ಬೋರಿಸ್ ಯೆಲ್ತ್ಸಿನ್ ಬದಲಿಗೆ ವ್ಲಾದಿಮಿರ್ ಪುತಿನ್ ರಶಿಯನ್ ಫೆಡರೇಷನ್ನ ಅಧ್ಯಕ್ಷರಾಗಿದ್ದಿದ್ದರೆ ಸೋವಿಯೆತ್ ಯೂನಿಯನ್ ಛಿದ್ರವಾಗುತ್ತಿರಲಿಲ್ಲ, ಬೇರೊಂದು ಹೆಸರಿನಿಂದ ಅಸ್ತಿತ್ವದಲ್ಲಿ ಮುಂದುವರಿಯುತ್ತಿತ್ತು ಎಂದು ಹೇಳಿದರೆ ಪುತಿನ್ರ ಮನೋಭಾವದ ಸ್ಪಷ್ಟ ಚಿತ್ರಣ ನಿಮಗೆ ಸಿಗಬಹುದು. ಆದರೆ ಅವರು ಅಧಿಕಾರಕ್ಕೆ ಬರುವ ಹೊತ್ತಿಗೆ ಯೂಕ್ರೇನ್, ಜಾರ್ಜಿಯಾ, ಅಜರ್ಬೈಜಾನ್ಗಳು ರಶಿಯಾದಿಂದ ಬಹಳ ದೂರದೂರ ಹೊರಟುಹೋಗಿದ್ದವು. ತೈಲಭರಿತ ಹಾಗೂ ಆಯಕಟ್ಟಿನ ಮಧ್ಯ ಏಶಿಯನ್ ಗಣರಾಜ್ಯಗಳೂ ಅಮೆರಿಕಾ, ಯೂರೋಪಿಯನ್ ಯೂನಿಯನ್, ಜತೆಗೆ ಚೀನಾದ ಆಸಕ್ತಿಯನ್ನೂ ಕೆರಳಿಸಿದ್ದವು. ಅವುಗಳನ್ನು ತಮ್ಮ ಆರ್ಥಿಕ ಹಾಗೂ ಸಾಮರಿಕ ಪ್ರಭಾವವಲಯದೊಳಗೆ ಸಿಲುಕಿಸಿಕೊಳ್ಳಲು ಅವೆಲ್ಲವೂ ಪೈಪೋಟಿಗಿಳಿದಿದ್ದವು. ಇದು ಹೀಗೇ ಮುಂದುವರಿದರೆ ರಶಿಯಾದ ಮೃದು ಹೊಟ್ಟೆಯ ಕೆಳಗೆ ಹೊರಗಿನ ಬೃಹತ್ ಶಕ್ತಿಗಳು ಕತ್ತರಿ ಆಡಿಸತೊಡಗುತ್ತವೆ ಎಂದು ಅಧ್ಯಕ್ಷ ಪುತಿನ್ ಸಹಜವಾಗಿಯೇ ಶಂಕಿಸಿದರು ಮತ್ತು ಪರಿಸ್ಥಿತಿ ಅಪಾಯಕಾರಿಯಾಗಿ ಬೆಳೆಯದಂತೆ ಕ್ರಮಗಳನ್ನು ರೂಪಿಸತೊಡಗಿದರು. ಅದರಲ್ಲೂ 2001ರಲ್ಲಿ ಅಮೆರಿಕನ್ ಸೇನೆ ಅಫ್ಘಾನಿಸ್ತಾನಕ್ಕೆ ಕಾಲಿಟ್ಟ ಮೇಲೆ ಪುತಿನ್ ಮತ್ತಷ್ಟು ಚುರುಕಾದರು. ಅವರ ಪ್ರೇರಣೆಯಂತೆ ಅಮೇನಿಯಾ, ಬೆಲರೂಸ್, ಕಝಾಖ್ಸ್ತಾನ್, ತುರ್ಕ್ವೆುನಿಸ್ತಾನ್, ತಾಜಿಕಿಸ್ತಾನ್ ಮತ್ತು ರ್ಕಿಗಿಸ್ತಾನ್ 1994ರಲ್ಲಿ ರಶಿಯಾ ಜತೆ ಮಾಡಿಕೊಂಡಿದ್ದ ಭದ್ರತಾ ಒಪ್ಪಂದವನ್ನು ಮತ್ತೊಂದು ಮಜಲಿಗೇರಿಸಿ 2002ರಲ್ಲಿ ಇಟ್ಝ್ಝ್ಚಜಿಡಛಿ ಖಛ್ಚಿuಜಿಠಿಢ ಖ್ಟಛಿಚಠಿಢ ಣ್ಟಜಚ್ಞಜಿಠಚಠಿಜಿಟ್ಞ (ಸಿಎಸ್ಟಿಓ) ಎಂಬ ಸೇನಾಕೂಟವನ್ನು ಸ್ಥಾಪಿಸಿಕೊಂಡವು. ಇದು ಯೂರೋಪ್ನಲ್ಲಿ ಸಕ್ರಿಯವಾಗಿದ್ದು 2001ರಲ್ಲಿ ಅಫ್ಘಾನಿಸ್ತಾನಕ್ಕೆ ಪ್ರವೇಶಿಸಿದ್ದ ಅಮೆರಿಕಾ ನೇತೃತ್ವದ ನ್ಯಾಟೋ ಸೇನಾಕೂಟಕ್ಕೆ ರಶಿಯಾದ ಉತ್ತರದಂತಿತ್ತು.
ಸೋವಿಯೆತ್ ಯೂನಿಯನ್ ಕುಸಿದಿರಬಹುದು, ಆದರೆ ರಶಿಯಾ ಇನ್ನೂ ಜಾಗತಿಕ ರಾಜಕಾರಣದಲ್ಲಿ ಮಹತ್ವದ ಸ್ಥಾನವನ್ನು ಉಳಿಸಿಕೊಂಡೇ ಇದೆ. ಅದೇನೂ ಮಧ್ಯ ಅಮೆರಿಕಾದ ನಗಣ್ಯ ‘ಬನಾನಾ ರಿಪಬ್ಲಿಕ್’ ಅಲ್ಲ. ಭೂವಿಸ್ತಾರದಲ್ಲಿ ಜಗತ್ತಿನ ಅತಿ ದೊಡ್ಡ ದೇಶ. ತನ್ನಲ್ಲಿರುವ ಸಂಪನ್ಮೂಲಗಳನ್ನು ಸರಿಯಾಗಿ ಬಳಸಿಕೊಂಡರೆ ವೈಶ್ವಿಕ ಅರ್ಥವ್ಯವಸ್ಥೆಯ ಚುಕ್ಕಾಣಿಯನ್ನದು ಸುಲಭವಾಗಿ ಹಿಡಿಯಬಲ್ಲುದು. ಮತ್ತು, ನಾಯಕತ್ವ ದೃಷ್ಟಿಯಿಂದಲೂ ರಶಿಯಾ ಈಗ ಸದೃಢ. ಅಲ್ಲೀಗ ಇರುವುದು ರಶಿಯಾದ ಹಿತಾಸಕ್ತಿಗಳ ಬಗ್ಗೆ ಸ್ಪಷ್ಟ ಅರಿವು ಹಾಗೂ ದೃಷ್ಟಿಕೋನ ಹೊಂದಿರುವ ಪುತಿನ್. ಈ ಎಲ್ಲಾ ಕಾರಣಗಳಿಂದ ರಶಿಯಾ ಹಕ್ಕುದಾರನಾದ ಗೌರವವನ್ನು ಜಗತ್ತು ಅದಕ್ಕೆ ನೀಡಲೇಬೇಕು. ರಶಿಯಾದ ಹಿತಾಸಕ್ತಿಗಳಿಗೆ ಹಾನಿಯೆಸಗುವ, ಅದರ ಸುರಕ್ಷೆಗೆ ಅಪಾಯವೊಡ್ಡುವ ಕೃತ್ಯಗಳಿಂದ ಹೊರಜಗತ್ತು ದೂರ ಉಳಿಯಬೇಕು. ದುರದೃಷ್ಟವಶಾತ್ ಅಮೆರಿಕಾ ಮತ್ತು ಯೂರೋಪಿಯನ್ ನೇತಾರರು ಇದನ್ನು ಅರಿಯುವಲ್ಲಿ ದಾರುಣವಾಗಿ ವಿಫಲರಾಗಿದ್ದಾರೆ.
ಪೂರ್ವ ಯೂರೋಪ್ನಲ್ಲಿ ಯಾವುದೇ ಬಲಾಢ್ಯ ಶಕ್ತಿ ಕಾಲೂರದಂತೆ ನೋಡಿಕೊಳ್ಳುವುದು ತನ್ನ ಸುರಕ್ಷೆಗೆ ಅತ್ಯಗತ್ಯ ಎನ್ನುವುದು ರಶಿಯಾದ ಐತಿಹಾಸಿಕ ನಿಲುವು. ಆ ಕಾರಣದಿಂದಲೇ ಪೂರ್ವ ಯೂರೋಪನ್ನು ತನ್ನ ಪ್ರಭಾವವಲಯದಲ್ಲಿರಿಸಿಕೊಳ್ಳಲು ರಶಿಯಾ ಕಳೆದ ಮುನ್ನೂರು ವರ್ಷಗಳಿಂದಲೂ ನಿರಂತರವಾಗಿ ಶ್ರಮಿಸುತ್ತಿದೆ. ಅದನ್ನು ಅರಿಯದ ಪಶ್ಚಿಮ ಯೂರೋಪಿಯನ್ ನೇತಾರರು ಮತ್ತು ಅಮೆರಿಕನ್ ನಾಯಕತ್ವ, ಮುಖ್ಯವಾಗಿ ಡೆಮೋಕ್ರಾಟಿಕ್ ಅಧ್ಯಕ್ಷರುಗಳು ಶೀತಲ ಸಮರಾನಂತರ ಪೂರ್ವ ಯೂರೋಪಿಯನ್ ದೇಶಗಳನ್ನು ಒಂದೊಂದಾಗಿ ಯೂರೋಪಿಯನ್ ಒಕ್ಕೂಟಕ್ಕೆ, ನ್ಯಾಟೋಗೆ ಸೇರಿಸಿಕೊಳ್ಳತೊಡಗಿದ್ದಾರೆ ಮತ್ತು ಆ ಮೂಲಕ ಅಪಾಯ ಮನೆಬಾಗಿಲಿಗೇ ಬರುತ್ತಿದೆ ಎಂಬ ಆತಂಕವನ್ನು ಮಾಸ್ಕೋಗೆ ಉಂಟುಮಾಡುತ್ತಿದ್ದಾರೆ. ಜತೆಗೆ, ತೈಲದ ಮೇಲೆ ತೇಲುತ್ತಿದೆ ಎನ್ನಲಾಗುವ ತುರ್ಕ್ವೆುನಿಸ್ತಾನವನ್ನು ರಶಿಯಾದಿಂದ ದೂರ ಒಯ್ದು ತಮ್ಮತ್ತ ಸೆಳೆದುಕೊಳ್ಳುವುದರಲ್ಲಿ ಅಮೆರಿಕಾ ಮತ್ತು ಪಶ್ಚಿಮ ಯೂರೋಪ್ ಯಶಸ್ವಿಯಾಗಿವೆ. ಇದರಿಂದಾಗಿಯೇ ಆ ಮಧ್ಯ ಏಶಿಯನ್ ದೇಶ 2012ರಲ್ಲಿ ರಶಿಯಾ ನೇತೃತ್ವದ ಸಿಎಸ್ಟಿಓ ಕೂಟದಿಂದ ಹೊರನಡೆಯಿತು. ಇತ್ತ ಕುತಂತ್ರಿ ಚೀನಾ ಸದ್ದಿಲ್ಲದೇ ಆ ದೇಶಗಳನ್ನು ತನ್ನ ಸಾಲಸಂಕೋಲೆಯಲ್ಲಿ ಸಿಲುಕಿಸಿಕೊಳ್ಳಲು ಹೂಟ ಹೂಡುತ್ತಿದೆ! ಇದೆಲ್ಲವನ್ನೂ ಪುತಿನ್ ಅಥವಾ ಯಾವುದೇ ರಶಿಯನ್ ರಾಷ್ಟ್ರೀಯವಾದಿ ನಾಯಕ ಸಹಿಸಿಕೊಳ್ಳುವುದು ಹೇಗೆ? ರಶಿಯನ್ ಗಡಿಯಲ್ಲೇ ಹೊರಗಿನ ಶಕ್ತಿಗಳ ಋಣಾತ್ಮಕ ಚಟುವಟಿಕೆಗಳು ಹೀಗೆ ಅವ್ಯಾಹತವಾಗಿ ಜರುಗುತ್ತಿರುವುದು ಸಹಜವಾಗಿಯೇ ಪೂತಿನ್ರ ಪಿತ್ತವನ್ನು ನೆತ್ತಿಗೇರಿಸಿವೆ.
ರಶಿಯನ್ ನಾಯಕನನ್ನೀಗ ಅತಿಯಾಗಿ ಆಕ್ರೋಶಗೊಳಿಸಿರುವುದು ಯೂಕ್ರೇನ್ ಕುರಿತಾಗಿ ಜೋ ಬೈಡೆನ್ ಸರ್ಕಾರ ಅನುಸರಿಸುತ್ತಿರುವ ನೀತಿ. ಆಯಕಟ್ಟಿನ ಹಾಗೂ ಗೋಧಿಯ ಕಣಜ ಯೂಕ್ರೇನ್ 1991ರಲ್ಲಿ ರಶಿಯಾದಿಂದ ಪ್ರತ್ಯೇಕಗೊಂಡದ್ದನ್ನು ಪುತಿನ್ ಇಂದಿಗೂ ಮನಪೂರ್ವಕವಾಗಿ ಒಪ್ಪಿಕೊಂಡಿಲ್ಲ. ಆ ದೇಶ ರಶಿಯಾದಿಂದ ದೂರದೂರ ಸಾಗುತ್ತಾ ಬರಾಕ್ ಒಬಾಮಾ ಕಾಲದಲ್ಲಿ ಪಶ್ಚಿಮ ಜಗತ್ತಿನ ಆಮಿಷಗಳಿಗೆ ಬಲಿಯಾಗತೊಡಗಿದಂತೇ ಮುಂದೊಂದು ದಿನ ಆಯಕಟ್ಟಿನ ಕ್ರಿಮಿಯಾ ಪರ್ಯಾಯದ್ವೀಪದಲ್ಲಿ ನ್ಯಾಟೋ ನೌಕಾಪಡೆ ನೆಲೆಗೊಳ್ಳಬಹುದೆಂದು ಆತಂಕಗೊಂಡ ಪುತಿನ್ ಆ ಪ್ರದೇಶವನ್ನೇ 2014ರಲ್ಲಿ ಯೂಕ್ರೇನ್ನಿಂದ ಕಿತ್ತುಕೊಂಡದ್ದನ್ನು ನೆನಪಿಸಿಕೊಳ್ಳಿ. ಇಂದು ಜೋ ಬೈಡೆನ್ ಸರ್ಕಾರ ಯೂಕ್ರೇನನ್ನು ನ್ಯಾಟೋಗೆ ಸೇರಿಸಿಕೊಳ್ಳಲು ಹೊರಟಿದೆ! ಹಾಗೇನಾದರೂ ಆದರೆ ಯೂಕ್ರೇನ್ಗೆ ರಶಿಯನ್ ಸೇನೆ ಪ್ರವೇಶಿಸುತ್ತದೆ ಎಂದು ಪುತಿನ್ ಎಚ್ಚರಿಸಿದ್ದಾರೆ. ರಶಿಯಾಗೆ ಅತಿಮುಖ್ಯ ಎಂದು ಪುತಿನ್ ಪರಿಗಣಿಸುವ ಮತ್ತೊಂದು ಮಾಜಿ ಸೋವಿಯೆತ್ ಗಣರಾಜ್ಯವೆಂದರೆ ಕಝಾಖ್ಸ್ತಾನ್. ಅಲ್ಲಿ ಹೊರಗಿನವರ ಕೈವಾಡವನ್ನು ರಶಿಯನ್ ನಾಯಕ ಸಹಿಸಲು ಸಾಧ್ಯವೇ ಇಲ್ಲ. ಈ ಬೆಳವಣಿಗೆಗಳನ್ನು ಮುಂದಿನವಾರ ರ್ಚಚಿಸೋಣ.
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)