| ನಳಿನಿ ಟಿ. ಭೀಮಪ್ಪ ಧಾರವಾಡ
ಕೆಲದಿನಗಳ ಹಿಂದೆ ಗೆಳತಿಯ ಮನೆಗೆ ಹೋಗಿದ್ದಾಗ, ಆಕೆಯ ಪತಿಯೂ ಮನೆಯಲ್ಲೇ ಇದ್ದರು. ಹೀಗೇ ಲೋಕಾಭಿರಾಮವಾಗಿ ಮಾತನಾಡುವಾಗ ಅವರು ನಿಮ್ಮ ಗೆಳತಿಗೆ ನಿಮ್ಮ ಹಾಗೆ ಕಥೆ, ಕವನ, ಪ್ರಬಂಧ ಏನಾದರೂ ಬರೆಯೋದು ಹೇಳಿಕೊಡಿ ಮೇಡಂ. ಸುಮ್ಮನೆ ಮನೆಯಲ್ಲಿ ಕೂತು ಕಾಲ ಕಳೆಯುತ್ತಾಳೆ. ಮನೆಕೆಲಸ ಬಿಟ್ಟರೆ ಬೇರೆ ಕೆಲಸವೇ ಇಲ್ಲ ಆಕೆಗೆ. ಟೀಚರ್ ಆಗಿ ಯಾವುದಾದರೂ ಸ್ಕೂಲು ಸೇರಿಕೋ ಎಂದರೂ ಹೋಗುವುದಿಲ್ಲ, ಖಾಲಿ ತಲೆ ಇದ್ದರೆ ಮನಸ್ಸು ಕೆಲಸಕ್ಕೆ ಬಾರದ್ದನ್ನೆಲ್ಲ ಯೋಚಿಸುತ್ತಿರುತ್ತದೆ ಎಂದಾಗ, ಆತ ನನ್ನ ಬರವಣಿಗೆಯನ್ನು ಹೊಗಳುತ್ತಿದ್ದಾನೋ ಅಥವಾ ಕೆಲಸವಿಲ್ಲದವರ ಕೆಲಸ ಅದು, ಯಾರು ಬೇಕಾದರೂ ಬರೆಯಬಹುದು ಎಂದುಕೊಂಡಿದ್ದನೋ ತಿಳಿಯಲಿಲ್ಲ. ಆಕೆ ಮನೆಯಲ್ಲಿ ಕೆಲಸದವರನ್ನೇ ಇಟ್ಟುಕೊಂಡಿಲ್ಲ. ಅಷ್ಟು ದೊಡ್ಡ ಮನೆಯ ಪ್ರತಿಯೊಂದು ಕೆಲಸವನ್ನೂ ಸಂತೋಷದಿಂದಲೇ ಮಾಡುತ್ತಾ, ವಯಸ್ಸಾದ ಅತ್ತೆ, ಮಾವ, ಗಂಡ, ಮಕ್ಕಳ ಇಷ್ಟಗಳನ್ನು ಪೂರೈಸುವುದರಲ್ಲಿ ಆಕೆಯ ಸಮಯವೆಲ್ಲ ಸೋರಿ ಹೋಗುತ್ತಿದ್ದುದು ನೋಡುತ್ತಲೇ ಇದ್ದುದರಿಂದ, ಆಕೆಯ ಗಂಡನ ಮಾತು ಸರಿ ಎನಿಸಲಿಲ್ಲ. ಹಾಗೆ ಒತ್ತಾಯಪೂರ್ವಕವಾಗಿ ಏನೂ ಮಾಡಲಿಕ್ಕೆ ಆಗುವುದಿಲ್ಲ. ಪ್ರತಿಯೊಬ್ಬರ ಅಭಿರುಚಿಗಳು ಬೇರೆಯೇ ಇರುತ್ತವೆ. ಆಕೆಗೆ ಯಾವ ವಿಷಯದಲ್ಲಿ ಆಸಕ್ತಿ ಇದೆಯೋ ಅದನ್ನೇ ಮುಂದುವರಿಸಿದರೆ ಒಳ್ಳೆಯದು ಸರ್ ಎಂದೆ. ಆಕೆಗೆ ಬ್ಯೂಟಿ ಪಾರ್ಲರ್ ಇಷ್ಟ ಅಂತೆ, ಅದೇನು ಚಂದ ಇರುತ್ತದೆ ಹೇಳಿ, ಇಂಥಹದ್ದೆಲ್ಲ ಬೇಡ ಎಂದು ಹೇಳಿಬಿಟ್ಟಿದ್ದೇನೆ ಎಂದು ವ್ಯಂಗ್ಯವಾಗಿ ನುಡಿದಾಗ, ಗೆಳತಿಗೆ ತುಂಬಾ ಮುಜುಗರವಾಗಿ ಮುಖ ಸಪ್ಪಗೆ ಮಾಡಿದ್ದಳು.
ಇಂಥವರಿಗೆ ಹೇಳಿಯೂ ಉಪಯೋಗವಿಲ್ಲ ಎಂದುಕೊಂಡು ಸುಮ್ಮನಾಗಿದ್ದಾಯ್ತು. ಮತ್ತೊಬ್ಬಾಕೆಯದಂತೂ ಇನ್ನೂ ವಿಚಿತ್ರ ಸಮಸ್ಯೆ. ಮದುವೆಯಾದ ಹೊಸತರಲ್ಲಿ ಆಕೆ ಮನೆಕೆಲಸವನ್ನೆಲ್ಲ ಮುಗಿಸಿ ಏನಾದರು ಓದಬೇಕು, ಬರೆಯಬೇಕು ಎಂದು ಪುಸ್ತಕ ಹಿಡಿದರೆ ಸಾಕು ‘ಮಾಡೋಕೆ ಬೇರೆ ಕೆಲಸ ಇಲ್ವಾ ನಿನಗೆ, ಮೂರು ಹೊತ್ತೂ ಪುಸ್ತಕ ಹಿಡಿದು ಕೂತರೆ ಸಂಸಾರ ಸಾಗುತ್ತಾ?’ ಅಂತ ಗಂಡ ಅತ್ತೆ ಎಲ್ಲ ಜಗಳ ಮಾಡುತ್ತಿದ್ದರಂತೆ. ಕೊನೆಗೆ ಆಕೆಯ ತವರು ಮನೆಯವರಿಗೂ ದೂರು ಕೊಟ್ಟರಂತೆ. ಆಕೆ ತನ್ನ ಸಂಗ್ರಹದಲ್ಲಿದ್ದ ಎಲ್ಲ ಪುಸ್ತಕಗಳನ್ನು ರದ್ದಿಯವರಿಗೆ ಕೊಟ್ಟ ಮೇಲೆಯೇ ಸುಮ್ಮನಾಗಿದ್ದು ಎಂದು ಹೇಳಿದಾಗ ಕನಿಕರ ಮೂಡಿತ್ತು. ಆದರೂ ಆಕೆಯ ಓದುವ ಹಂಬಲ ಈಗ ಮತ್ತೆ ಗರಿಗೆದರಿರುವುದು ಸ್ಮಾರ್ಟ್ ಫೋನು ಬಂದಾಗಿನಿಂದ. ಫೇಸ್ಬುಕ್ನಲ್ಲಿ ಫೇಕ್ ಐಡಿಯಲ್ಲಿ ಅಕೌಂಟ್ ತೆಗೆದು ಒಳ್ಳೊಳ್ಳೆಯ ಬರಹಗಾರರ ಬರಹಗಳನ್ನು ಓದಿ ಖುಷಿ ಪಡುತ್ತಿದ್ದಾಳೆ. ಜತೆಗೆ ತಾನೂ ಸಹ ಕವನಗಳನ್ನು ಬರೆದು, ಓದುಗರು ಮೆಚ್ಚಿ ಕಮೆಂಟ್ ಹಾಕಿದಾಗ ತುಂಬಾ ಖುಷಿಪಡುತ್ತಿದ್ದಾಳೆ. ಇನ್ನೂ ಕೆಲವು ಮದುವೆಗಳು ಹುಡುಗಿ ಏನೇನೋ ಬರೆಯುತ್ತಾಳಂತೆ ಎಂದು ಮುರಿದು ಬಿದ್ದದ್ದೂ ಇದೆ. ಎಷ್ಟೋ ಮಹಿಳೆಯರು (ವಿವಾಹಿತರು ಹೆಚ್ಚು) ಪ್ರೇಮ, ಕಾಮ ಅಥವಾ ಕೆಲವೊಂದು ಸಾಮಾಜಿಕ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಬರೆಯಬಲ್ಲರಾದರೂ, ಮನೆಯಲ್ಲಿ ಎದುರಾಗಬಹುದಾದ ಕಿರಿಕಿರಿಗೆ ಹೆದರಿ ಒಂದೋ ಅಂತಹ ವಿಷಯಗಳ ಬಗ್ಗೆ ಬರೆಯಲು ಹಿಂದೇಟು ಹಾಕುತ್ತಾರೆ. ಅಕಸ್ಮಾತ್ ಬರೆದರೂ ಬೇರೆ ಹೆಸರಿನಿಂದ ಬರೆಯುವುದುಂಟು. ತಮ್ಮದೇ ಹೆಸರಿನಿಂದ ಬರೆದು ಅದು ಪ್ರಕಟಗೊಂಡರೂ ಅದನ್ನು ಮುಕ್ತವಾಗಿ ಹಂಚಿಕೊಳ್ಳುವ ಧೈರ್ಯವೇ ಇರುವುದಿಲ್ಲ. ಮನೆಯಲ್ಲಿ, ಬಂಧುಬಳಗದವರಲ್ಲಿ ಗೊತ್ತಾಗಿ ರಂಪಾಟವಾಗಿ, ಎಲ್ಲಿ ಬರವಣಿಗೆಗೇ ಕುತ್ತು ಬರುತ್ತದೆಯೋ ಎನ್ನುವ ಆತಂಕ. ಮತ್ತೂ ಕೆಲವರು ತಮ್ಮ ಗಂಡನಿಗೆ ಬರೆದಿದ್ದನ್ನು ತೋರಿಸಿಯೇ ಪತ್ರಿಕೆಗಳಿಗೆ ಕಳಿಸುವುದುಂಟು. ಹೀಗಾದಾಗ ಮುಕ್ತ ಬರವಣಿಗೆ ಹೆಣ್ಣುಮಕ್ಕಳಿಂದ ಹೊಮ್ಮುವುದನ್ನು ನಿರೀಕ್ಷಿಸುವುದಾದರೂ ಹೇಗೆ?
ಜೀವನೋತ್ಸಾಹ ಬತ್ತದಿರಲಿ: ಕಾಲ ಬದಲಾಗುತ್ತಿದೆ. ಹೆಣ್ಣುಮಕ್ಕಳು ಎಲ್ಲ ಕ್ಷೇತ್ರದಲ್ಲಿಯೂ ದಾಪುಗಾಲಿಕ್ಕಿ ಮುನ್ನಡೆಯುತ್ತಿದ್ದಾರೆ. ಗಂಡು, ಹೆಣ್ಣು ಎಂಬ ಲಿಂಗ ತಾರತಮ್ಯ ಕಡಿಮೆಯಾಗಿದೆ. ಆದರೂ ಅಲ್ಲೊಂದು ಇಲ್ಲೊಂದು ಇಂತಹ ಘಟನೆಗಳನ್ನು ನೋಡಿದಾಗ ಮನಸ್ಸು ವ್ಯಾಕುಲಗೊಳ್ಳುತ್ತದೆ. ಅವರ ಆಸಕ್ತಿ, ಅಭಿರುಚಿ, ಜೀವನದ ಗುರಿಯನ್ನು ದಯವಿಟ್ಟು ಬದಲಾಯಿಸಲು ನೋಡಬೇಡಿ. ಅವರಲ್ಲಿ ಮೊಳೆತಿರುವ ಹವ್ಯಾಸ ಮುಂದೆ ಒಂದು ದೊಡ್ಡ ವೇದಿಕೆಯನ್ನೇ ಕಲ್ಪಿಸಿಕೊಡಬಹುದು. ಅಥವಾ ಅವರಲ್ಲಿನ ಜೀವನೋತ್ಸಾಹ ಬತ್ತದಂತೆ ಕಾಪಾಡುವ ಸಂಜೀವಿನಿಯಾಗಬಲ್ಲದು. ‘ರೆಕ್ಕೆ ಇದ್ದರೆ ಸಾಕೇ...ಹಕ್ಕಿಗೆ ಬೇಕು ಬಾನು’ ಎನ್ನುವ ಹಾಗೆ ಅವರ ಪ್ರತಿಭೆಯನ್ನು ಮುಕ್ತವಾಗಿ ಬೆಳೆಯಲು, ಬೆಳಗಲು ಅನುವು ಮಾಡಿಕೊಡಿ.
ತಮ್ಮದಲ್ಲದ ಮುಖ: ಎಫ್ಬಿಯಲ್ಲಂತೂ ಇಂತಹ ಸಾವಿರಾರು ಉದಾಹರಣೆಗಳನ್ನು ನೋಡಬಹುದು. ಮುಖಪುಸ್ತಕವೆಂಬ ವೇದಿಕೆಯಲ್ಲಿ ತಮ್ಮದಲ್ಲದ ಮುಖ, ಹೆಸರುಗಳಿಂದ ಸಕ್ರಿಯವಾಗಿರುವ ಹೆಣ್ಣುಮಕ್ಕಳ ಬಗ್ಗೆ ಕನಿಕರವೆನಿಸುತ್ತದೆ. ಬೇರೆ ಕಾರಣಗಳೂ ಇರಬಹುದು. ಜತೆಗೆ ಫೇಕ್ ಅಕೌಂಟ್ ತೆಗೆದು ಮೋಸ ಮಾಡುವವರೂ ಇದ್ದಾರೆ, ಅದು ಬೇರೆ ಮಾತು. ಆದರೆ ಓದು ಬರಹದಂತಹ ಸಭ್ಯ ಹವ್ಯಾಸಗಳನ್ನು ಕೀಳಾಗಿ ನೋಡುವ ಇಂತಹ ಜನರ ಬಗ್ಗೆ ಹೇಸಿಗೆ ಎನಿಸುತ್ತದೆ. ಹೀಗೆ ಎಷ್ಟೋ ವಿಷಯಗಳಲ್ಲಿ ತಮ್ಮ ಮನೆಯ ಹೆಣ್ಣುಮಕ್ಕಳ ಆಸಕ್ತಿಯ ವಿಷಯಗಳಿಗೆ ಬಹುತೇಕ ಅಡೆ-ತಡೆ ಬರುವುದು ಮನೆಯವರಿಂದಲೇ. ಅವರೇನೋ ಕನಸು ಕಟ್ಟಿಕೊಂಡಿದ್ದರೆ, ಇವರಿಗೆ ಸರಿ ಎನಿಸಿದ್ದನ್ನೇ ಅವರ ಮೇಲೂ ಹೇರುತ್ತಾರೆ. ಎಲ್ಲವನ್ನೂ ತಮ್ಮ ಮೂಗಿನ ನೇರಕ್ಕೇ ಯೋಚಿಸುತ್ತ ಹೆಣ್ಣುಮಕ್ಕಳ ಆಸೆ ಆಕಾಂಕ್ಷೆಗಳನ್ನು ತುಳಿಯುತ್ತಲೇ ಹೋಗುವ ಇಂತಹ ಗಂಡಸರು ಅವಿದ್ಯಾವಂತರೇನಲ್ಲ. ಚೆನ್ನಾಗಿ ಓದಿ ಉನ್ನತ ಹುದ್ದೆಯಲ್ಲಿ ಇರುವವರೇ. ಆದರೂ ಅದ್ಯಾಕೆ ಈ ಮಟ್ಟಿಗೆ ಸಣ್ಣತನ ತೋರಿಸುತ್ತಾರೋ ಅರಿವಾಗುವುದಿಲ್ಲ.