ಕೇಂದ್ರ ಸರ್ಕಾರ ಎಲೆಕ್ಟ್ರಿಕ್ ಕಾರು ಮತ್ತು ಇತರ ವಿದ್ಯುತ್ ವಾಹನಗಳ ಬಳಕೆಗೆ ಉತ್ತೇಜನ ನೀಡಲು ಹಲವು ಕ್ರಮಗಳನ್ನು ಕೈಗೊಂಡಿದ್ದರೂ ಈ ವಲಯ ಭಾರತದಲ್ಲಿ ಇನ್ನೂ ಟೇಕಾಫ್ ಆಗುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಕಳೆದ ವರ್ಷವಿಡೀ ಮಾರಾಟವಾದ ಎಲೆಕ್ಟ್ರಿಕ್ ಕಾರುಗಳ ಸಂಖ್ಯೆ ಕೇವಲ 1200 ಎನ್ನುತ್ತವೆ ವರದಿಗಳು. ಪರಿಸರಸ್ನೇಹಿಯಾಗಿದ್ದರೂ ಏಕೆ ಜನ ಖರೀದಿಸುತ್ತಿಲ್ಲ?
ಪೆಟ್ರೋಲ್ ಡೀಸೆಲ್ ಮೇಲಿನ ಅವಲಂಬನೆ ಕಡಿಮೆ ಮಾಡಿಕೊಳ್ಳುವ ಉದ್ದೇಶದಿಂದ ಮತ್ತು ಪರಿಸರಕ್ಕೆ ಕಾರ್ಬನ್ ಡೈಯಾಕ್ಸೈಡ್ ಬಿಡುಗಡೆಯನ್ನು ಕಡಿಮೆ ಮಾಡುವ ಸಲುವಾಗಿ ಕೇಂದ್ರ ಸರ್ಕಾರ ಪರಿಸರಸ್ನೇಹಿ ಎಲೆಕ್ಟ್ರಿಕ್ ಕಾರುಗಳ ಬಳಕೆಯನ್ನು ದೊಡ್ಡ ಪ್ರಮಾಣದಲ್ಲಿಯೇ ಪ್ರೋತ್ಸಾಹಿಸುತ್ತಿದೆ. ಆದರೆ ಇದಕ್ಕೆ ತಕ್ಕಂತೆ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಲು ಗ್ರಾಹಕರು ಮನಸ್ಸು ಮಾಡದಿರುವುದು ಇಡೀ ಉದ್ಯಮದ ಆಮೆಗತಿಗೆ ಕಾರಣವಾಗಿದೆ.
ಪೆಟ್ರೋಲ್-ಡೀಸೆಲ್ ಚಾಲಿತ ಪ್ಯಾಸೆಂಜರ್ ಕಾರ್ ವಿಭಾಗದಲ್ಲಿ ಗ್ರಾಹಕರಿಗೆ ಸಾಕಷ್ಟು ಆಯ್ಕೆಗಳಿವೆ. ಆದರೆ ಎಲೆಕ್ಟ್ರಿಕ್ ಕಾರ್ಗಳಲ್ಲಿ ಸಾಕಷ್ಟು ಆಯ್ಕೆಗಳಿಲ್ಲ. ಸದ್ಯಕ್ಕೆ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬ್ರ್ಯಾಂಡ್ಗಳು ಬೆರಳೆಣಿಕೆಯಷ್ಟು ಕೂಡ ಇಲ್ಲ. ಮಹಿಂದ್ರಾ ಇ-ವೆರಿಟೊ, ಟಾಟಾ ಟಿಗೊರ್ ಇವಿ, ಹ್ಯುಂಡಾಯ್ ಕೋನಾ ಇವಿ ಮತ್ತು ಮಹಿಂದ್ರಾ ಇ20 ಮಾತ್ರ ಈಗಿರುವ ಆಯ್ಕೆಗಳು. ಸಾಕಷ್ಟು ಆಯ್ಕೆಗಳು ಇಲ್ಲದಿರುವುದು ಈ ನಿಧಾನ ಗತಿಯ ಮಾರಾಟಕ್ಕೆ ಕಾರಣ ಎಂದು ಇತ್ತೀಚೆಗೆ ನಡೆಸಿದ ಅಧ್ಯಯನವೊಂದರ ವರದಿಯಿಂದ ದೃಢಪಟ್ಟಿದೆ.
ಮಾರಾಟ ನಿಧಾನ: 2019ರ ಏಪ್ರಿಲ್ನಿಂದ ನವೆಂಬರ್ವರೆಗಿನ ಅವಧಿಯಲ್ಲಿ ದೇಶಾದ್ಯಂತ ಕೇವಲ 1308 ವಿದ್ಯುತ್ ಚಾಲಿತ ವಾಹನಗಳು ಮಾರಾಟವಾಗಿವೆ. ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಕೇವಲ ಶೇಕಡ 0.07ರಷ್ಟು ವೃದ್ಧಿ. ಮಹಿಂದ್ರಾ ಆಂಡ್ ಮಹಿಂದ್ರಾ 513 ಇ-ವೆರಿಟೊ ಮಾರುವಲ್ಲಿ ಯಶಸ್ವಿಯಾಗಿದ್ದರೆ ಟಾಟಾ ಮೋಟರ್ಸ್ನ ಟಿಗೊರ್ 491 ವಾಹನಗಳನ್ನು ಮಾತ್ರ ಮಾರಿದೆ.
ಕಳೆದ ವರ್ಷ ಜುಲೈನಲ್ಲಿ ಬಿಡುಗಡೆಯಾದ ಹ್ಯುಂಡಾಯ್ನ ಕೋನಾ 280 ಮತ್ತು ಮಹಿಂದ್ರಾದ ಇ20 ಇಪ್ಪತೆôದು ವಾಹನಗಳು ಬಿಕರಿಯಾಗಿವೆ. ಇಂತಹ ನೀರಸ ಪ್ರತಿಕ್ರಿಯೆಯ ಹಿನ್ನೆಲೆಯಲ್ಲಿಯೇ ಮಹಿಂದ್ರಾ ಕಂಪನಿ ಇ20 ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯನ್ನೇ ನಿಲ್ಲಿಸಲು ನಿರ್ಧರಿಸಿದೆ. ಕಳೆದ ನವೆಂಬರ್ನಲ್ಲಿ ಕೇವಲ 4 ಕಾರುಗಳು ಮಾರಾಟವಾಗಿರುವುದು ಕಂಪನಿಯನ್ನು ನಿರಾಸೆಗೊಳಿಸಿದೆ. ಇದಕ್ಕೆ ಪ್ರತಿಯಾಗಿ ಇತರ ಕಂಪನಿಗಳ ಎಲೆಕ್ಟ್ರಿಕ್ ಕಾರುಗಳು ಅದೇ ಅವಧಿಯಲ್ಲಿ ತುಸು ಹೆಚ್ಚು ಮಾರಾಟವಾಗಿವೆ. ಮಹಿಂದ್ರಾ ಇ-ವೆರಿಟೊ 79, ಟಾಟಾ ಟಿಗೊರ್ 61, ಹ್ಯುಂಡಾಯ್ ಕೋನಾ 53 ಕಾರುಗಳನ್ನು ಮಾರಾಟ ಮಾಡಿವೆ.
ಕಂಪನಿಗಳಿಗೆ ದೊಡ್ಡ ಸವಾಲು: ಚಾರ್ಜಿಂಗ್ ವ್ಯವಸ್ಥೆ ವ್ಯಾಪಕವಾಗಿ ಇಲ್ಲದ ಕಾರಣ, ಗ್ರಾಹಕರು ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸುವಂತೆ ಮಾಡುವುದು ಕಂಪನಿಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಮುಂದಿನ ಕೆಲವು ತಿಂಗಳುಗಳಲ್ಲಿ ಅಥವಾ ವರ್ಷಗಳಲ್ಲಿ ಪರಿಸ್ಥಿತಿ ಸುಧಾರಿಸಬಹುದು; ಸರ್ಕಾರದಿಂದ ಹೆಚ್ಚು ಹೆಚ್ಚು ಚಾರ್ಜಿಂಗ್ ಸೆಂಟರ್ಗಳ ಸ್ಥಾಪನೆಯಾಗಬಹುದು ಎಂಬ ಆಸೆಯನ್ನು ಕಂಪನಿಗಳು ಇಟ್ಟುಕೊಂಡಿವೆ.
ಭಾರತದ ಎಲೆಕ್ಟ್ರಿ್ಟ್ ಕಾರು ಮಾರುಕಟ್ಟೆ ಬಗ್ಗೆ ಇತ್ತೀಚಿನವರೆಗೂ ಹೆಚ್ಚು ಆಸಕ್ತಿ ವಹಿಸದೆ ಸುಮ್ಮನಿದ್ದ ಮರ್ಸಿಡಿಸ್ ಬೆಂಜ್ ಮತ್ತು ಬಿಎಂಡಬ್ಲ್ಯೂನಂತಹ ದೊಡ್ಡ ಕಂಪನಿಗಳು ಈಗ ಆಸಕ್ತಿ ತೋರಿಸಲು ಶುರು ಮಾಡಿವೆ. ಬಿಎಂಡಬ್ಲ್ಯೂ ತನ್ನ ಲಕ್ಷುರಿ ಎಲೆಕ್ಟ್ರಿಕ್ ಮಿನಿಕೂಪರ್ ಬ್ರ್ಯಾಂಡ್ನಡಿ ಭಾರತದಲ್ಲಿ ಬಿಡುಗಡೆ ಮಾಡುವುದಾಗಿ ಕಳೆದ ತಿಂಗಳು ಘೊಷಿಸಿದೆ. ಪೋರ್ಷ್ ಕೂಡ ತನ್ನ ಇವಿ ಟೈಕಾನ್ ಎಲೆಕ್ಟ್ರಿಕ್ ಕಾರನ್ನು ಈ 2020ರ ಜುಲೈನಲ್ಲಿ ಭಾರತದ ಮಾರುಕಟ್ಟೆಗೆ ಪರಿಚಯಿಸಲು ಉದ್ದೇಶಿಸಿದೆ.
ಚೀನಾ ಒಡೆತನದ ಬ್ರಿಟಿಷ್ ಕಂಪನಿ ಎಂಜಿ ಮೋಟರ್ ಕೂಡ ಎಂಜಿ ಝುಡ್ಎಸ್ ಕಾರನ್ನು 10 ಲಕ್ಷ ರೂ. ಬೆಲೆಯಲ್ಲಿ ಭಾರತೀಯ ಮಾರುಕಟ್ಟೆಗೆ ಪರಿಚಯಿಸಲು ತಯಾರಿ ಮಾಡಿಕೊಂಡಿದೆ. ಆದರೆ ಇದರ ಉತ್ಪಾದನೆಗೆ ಇನ್ನೂ 2-3 ವರ್ಷ ಹಿಡಿಯಬಹುದು. ಇದೇ ಕಂಪನಿ ಈಗಾಗಲೇ ಎಂಜಿ ಝುಡ್ಎಸ್ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಿದೆ. ಎಲೆಕ್ಟ್ರಿಕ್ ಎಸ್ಯುುವಿಯ ಬೆಲೆ 22 ಲಕ್ಷದಿಂದ 25 ಲಕ್ಷ ರೂ.ವರೆಗೆ ಇದೆ.
ಅಮೆರಿಕದಲ್ಲಿ ವಿಶೇಷ ಚಾರ್ಜಿಂಗ್ ಶುಲ್ಕ
ಎಲೆಕ್ಟ್ರಿಕ್ ಕಾರುಗಳಿಗೆ ಚಾರ್ಜಿಂಗ್ ಮಾಡಲು ಅಮೆರಿಕದ ಎಂಟು ರಾಜ್ಯಗಳು ನಿರ್ದಿಷ್ಟ ವಿಶೇಷ ಶುಲ್ಕ ಆಕರಿಸಲು ನಿರ್ಧರಿಸಿವೆ. ಆ ರಾಷ್ಟ್ರದ ಒಟ್ಟು ವಾಹನ ಮಾರಾಟದಲ್ಲಿ ಎಲೆಕ್ಟ್ರಿಕ್ ವಾಹನಗಳ ಪಾಲು ಕೇವಲ ಶೇಕಡ 2ರಷ್ಟಿದ್ದರೂ ಚಾರ್ಜಿಂಗ್ ಶುಲ್ಕ ವಿಧಿಸಲು ಮುಂದಾಗಿರುವುದು ಎಲ್ಲರಲ್ಲಿ ಅಚ್ಚರಿ ಉಂಟು ಮಾಡಿದೆ. ಅನಿಲ ತೆರಿಗೆ ಆದಾಯ ಕಡಿಮೆಯಾಗಿರುವುದರಿಂದ ಉಂಟಾಗಿರುವ ಕೊರತೆಯನ್ನು ಚಾರ್ಜಿಂಗ್ ಶುಲ್ಕದಿಂದ ತುಂಬಿಕೊಳ್ಳುವುದು ಈ ರಾಜ್ಯ ಸರ್ಕಾರಗಳ ಉದ್ದೇಶ ಎನ್ನಲಾಗಿದೆ.
2020 ವಿದ್ಯುತ್ ವಾಹನಗಳ ವರ್ಷ
ಭಾರತದಲ್ಲಿ ಈ ಉದ್ಯಮ ಇನ್ನೂ ಶೈಶವಾವಸ್ಥೆಯಲ್ಲಿದ್ದರೂ ಯೂರೋಪಿಯನ್ ದೇಶಗಳಲ್ಲಿ ಸಾಕಷ್ಟು ವೇಗ ಪಡೆದಿದೆ. ಅಲ್ಲಿನ ಕಾರ್ ಉತ್ಪಾದನಾ ಕಂಪನಿಗಳು 2020ನ್ನು ಎಲೆಕ್ಟ್ರಿಕ್ ಕಾರುಗಳ ವರ್ಷವನ್ನಾಗಿ ಮಾಡಲು ಸಿದ್ಧತೆ ನಡೆಸಿವೆ. ಇದರ ಅಂಗವಾಗಿ ಹೊಸ ಹೊಸ ಮಾಡೆಲ್ಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಉದ್ದೇಶಿಸಿವೆ.
ಮಿನಿ, ವಾಕ್ಸ್ಹಾಲ್ ಕೋರ್ಸಾ, ಫಿಯಟ್ 500 ನಂತಹ ಪ್ರಸಿದ್ಧ ಹೆಸರಿನೊಂದಿಗೆ ಎಲೆಕ್ಟ್ರಿಕ್ ಕಾರುಗಳು ಸದ್ಯದಲ್ಲೇ ದಾಂಗುಡಿ ಇಡಲಿವೆ. ಯೂರೋಪಿಯನ್ ಮಾರುಕಟ್ಟೆಯಲ್ಲಿ ಕೂಡ ಗ್ರಾಹಕರಿಗೆ ಈಗ ಬೆರಳೆಣಿಕೆಯಷ್ಟು ಆಯ್ಕೆಗಳು ಮಾತ್ರ ಇದ್ದು, ಈ ವರ್ಷಾಂತ್ಯದೊಳಗೆ 100ರಿಂದ 175 ಆಯ್ಕೆಗಳು ಸಿಗುವಂತೆ ಮಾಡಲು ಕಂಪನಿಗಳು ಬಯಸಿವೆ. 2025ರ ವೇಳೆಗೆ 330ರಷ್ಟು ಎಲೆಕ್ಟ್ರಿಕ್ ಕಾರ್ ಬ್ರ್ಯಾಂಡ್ಗಳು ಮಾರುಕಟ್ಟೆಯಲ್ಲಿ ಇರಲಿವೆ ಎಂದು ಲಂಡನ್ ಮೂಲದ ಐಎಚ್ಎಸ್ ಮರ್ಕಿಟ್ ಸಂಸ್ಥೆ ತಿಳಿಸಿದೆ.
ಹಿಂದುಳಿಯಲು ಕಾರಣಗಳು
ದುಬಾರಿ ದರ: ಭಾರತದಲ್ಲೇ ತಯಾರಾಗುತ್ತಿದ್ದರೂ ಎಲೆಕ್ಟ್ರಿಕ್ ಕಾರುಗಳ ಬೆಲೆ ಜಾಸ್ತಿ. ಅತಿ ಕಡಿಮೆ ಎಂದರೂ 10 ಲಕ್ಷ ರೂ. ತೆರಬೇಕು. ಒಳ್ಳೆಯ ಕಾರುಗಳಿಗೆ 50 ಲಕ್ಷದವರೆಗೂ ಬೆಲೆ ಇದೆ.
ಮೂಲಸೌಕರ್ಯ: ಎಲೆಕ್ಟ್ರಿಕ್ ಕಾರುಗಳನ್ನು ಚಾರ್ಜ್ ಮಾಡಲು ಭಾರತದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಚಾರ್ಜಿಂಗ್ ಸ್ಟೇಷನ್ಗಳೇ ಇಲ್ಲ. ಅವು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾಪನೆಯಾಗದ ಹೊರತು ಗ್ರಾಹಕರು ಎಲೆಕ್ಟ್ರಿಕ್ ಕಾರುಗಳನ್ನು ಕೊಳ್ಳುವುದಿಲ್ಲ.
ನಿರ್ವಹಣೆ ಸಮಸ್ಯೆ: ಪೆಟ್ರೋಲ್ ಅಥವಾ ಡೀಸೆಲ್ ಕಾರಿಗೆ ಇಂಧನ ಟ್ಯಾಂಕ್ ಫುಲ್ ಮಾಡಿಸಲು ಹೆಚ್ಚೆಂದರೆ 10 ನಿಮಿಷವಾಗಬಹುದು. ಆದರೆ ಎಲೆಕ್ಟ್ರಿಕ್ ಕಾರನ್ನು ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಮಾಡಲು ಗಂಟೆಗಳೇ ಹಿಡಿಯುತ್ತವೆ. ಇತ್ತೀಚೆಗೆ ಸೂಪರ್ಚಾರ್ಜರ್ಗಳು, ಡಿಸಿ ಫಾಸ್ಟ್ ಚಾರ್ಜರ್ಗಳು ಬಂದಿದ್ದರೂ ಅವು ವ್ಯಾಪಕವಾಗಿ ಲಭ್ಯವಾಗುತ್ತಿಲ್ಲ.
ಗ್ರಾಹಕರ ಮನಸ್ಥಿತಿ: ಇತರ ಎಲ್ಲ ವಾಹನಗಳಂತೆ ಎಲೆಕ್ಟ್ರಿಕ್ ವಾಹನಗಳ ಮೇಲೂ ತಾವು ಅವಲಂಬಿತರಾಗಬಹುದು ಎಂಬ ಮನೋಭಾವವೇ ಭಾರತದಲ್ಲಿ ಇನ್ನೂ ಬೆಳೆದಿಲ್ಲ. ಸಂಚಾರದ ಅಗತ್ಯಗಳಿಗೆ ತ್ವರಿತವಾಗಿ ಅವು ಸ್ಪಂದಿಸುತ್ತವೆ ಎಂಬ ನಂಬಿಕೆ ಇನ್ನೂ ಹುಟ್ಟಿಲ್ಲ.