ಅಂಕಣ

ಚಾಚಾ ಒಪ್ಪಿದ ಸಂಘಕ್ಕೆ ಬಚ್ಚಾಗಳ ವಿರೋಧ ಏಕೆ?

(ಲೇಖಕರು ಬಿಜೆಪಿಯ ಹಿರಿಯ ವಕ್ತಾರರು)

‘ಆಪರೇಷನ್ ಸಿಂಧೂರ’- ಭಾರತದ ರಾಜಕೀಯ ನೇತೃತ್ವ ಮತ್ತು ಸೈನಿಕ ಶಕ್ತಿಯನ್ನು ಇಡೀ ವಿಶ್ವಕ್ಕೆ ಮತ್ತೊಮ್ಮೆ ಪರಿಚಯಿಸಿದ ಅಪ್ರತಿಮ ಕಾರ್ಯಾಚರಣೆ. ಈ ಹಿನ್ನೆಲೆಯಲ್ಲಿ ದೇಶದ 79ನೇ ಸ್ವಾತಂತ್ರ್ಯ ದಿನಾಚರಣೆ ಹೆಚ್ಚು ಮಹತ್ವ ಪಡೆದುಕೊಂಡಿತ್ತು. ಆದರೆ ಕೆಲವರ ಅಜ್ಞಾನ ಮತ್ತು ಮೂರ್ಖ ಆಲೋಚನೆಯಿಂದ ಚರ್ಚೆ ಮತ್ತು ಗಮನ ಬೇರೆ ಜಾಡನ್ನೇ ಹಿಡಿಯುವಂತಾಯಿತು!

ಸ್ವಾತಂತ್ರ್ಯಪ್ರಾಪ್ತಿಯ ನಂತರ ಭಾರತ ಹಲವು ತೆರನಾದ ಯುದ್ಧಗಳನ್ನು ಕಂಡಿದೆ ಮತ್ತು ಸಮರ್ಥವಾಗಿ ಎದುರಿಸಿದೆ. ಕೆಲವು ನೇರ ಯುದ್ಧಗಳಾದರೆ ಹಲವು ಛಾಯಾ ಯುದ್ಧಗಳು ಅಥವಾ ಪರೋಕ್ಷ ಯುದ್ಧಗಳು. ಆ ಎಲ್ಲ ತೆರನಾದ ಸನ್ನಿವೇಶ ಮತ್ತು ಸವಾಲುಗಳನ್ನು ದೇಶದ ಅಪ್ರತಿಮ ಯೋಧರು ಅತ್ಯಂತ ಸಮರ್ಥವಾಗಿ ಎದುರಿಸಿದ್ದಾರೆ.

ಕಳೆದ ಏ. 22ರಂದು ಪೆಹಲ್ಗಾಮ್ಲ್ಲಿ ಪಾಕ್ ಪ್ರೇರಿತ ಉಗ್ರರು ನಡೆಸಿದ ನರಮೇಧಕ್ಕೆ ಪ್ರತಿಯಾಗಿ ನಮ್ಮ ಸೈನಿಕರು ನೀಡಿದ ಉತ್ತರ ಮತ್ತು ಆ ಯುದ್ಧದ ಹಿನ್ನೆಲೆ-ಮುನ್ನೆಲೆಯನ್ನು ಇಡೀ ಪ್ರಪಂಚಕ್ಕೆ ಪರಿಚಯಿಸಿದ ರಾಜತಾಂತ್ರಿಕ ರೀತಿ ನೀತಿ ಇದೆಯಲ್ಲ, ಅದನ್ನು ಇಡಿ ಜಗತ್ತು ಮೆಚ್ಚಿದೆ. ಭಾರತದ ಸಮರ್ಥ ನೇತೃತ್ವವನ್ನು ಕೊಂಡಾಡಿದೆ. ಆ ಕಾರಣಕ್ಕೆ ಇಡೀ ದೇಶ ಈ ಸಲದ ಸ್ವಾತಂತ್ರ್ಯೋತ್ಸವವನ್ನು ವಿಶೇಷವಾಗಿ ಆಚರಿಸುವ ಹುಮ್ಮಸ್ಸಿನಲ್ಲಿತ್ತು. ವಾಸ್ತವದಲ್ಲಿ ದೇಶದ ಉದ್ದಗಲಕ್ಕೂ ಅಂಥದ್ದೇ ಉತ್ಸಾಹ, ಉಮೇದಿ ತೋರಿ ಕೋಟಿ ಕೋಟಿ ಪ್ರಜೆಗಳು ಸ್ವಾತಂತ್ರ್ಯ ದಿನವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವ ಇಡೀ ದೇಶದಲ್ಲಿ ಇಂಚು ಇಂಚಿಗೂ ಆಚರಿಸಿದರೂ ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪುಕೋಟೆ ಮೇಲಿನ ಧ್ವಜಾರೋಹಣ ಮತ್ತು ಪ್ರಧಾನಿ ಭಾಷಣಕ್ಕೆ ಎಲ್ಲಿಲ್ಲದ ಮಹತ್ವ.

ನಿರೀಕ್ಷೆಯಂತೆ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ಮೋದಿ ಆಪರೇಷನ್ ಸಿಂಧೂರದಿಂದ ಹಿಡಿದು ಭವಿಷ್ಯದ ಭಾರತದ ಚಿತ್ರಣವನ್ನೂ ದೇಶದ ಮುಂದೆ ಸವಿಸ್ತಾರವಾಗಿ ಹರವಿದರು. ಅನೇಕ ಉತ್ತಮ ಸಂಗತಿಗಳನ್ನು ಉಲ್ಲೇಖಿಸಿದರು. ಅದರಲ್ಲಿ ಆರೆಸ್ಸೆಸ್​ಗೆ ನೂರು ವರ್ಷ ತುಂಬುತ್ತಿರುವ ವಿಶೇಷ ಸನ್ನಿವೇಶದ ಉಲ್ಲೇಖವೂ ಒಂದು. ಕೊಸರು ತೆಗೆಯಲು ಕಾದು ಕುಳಿತಿದ್ದ ಕಾಂಗ್ರೆಸ್​ನ ಕೆಲ ನಾಯಕರಿಗೆ ಅಷ್ಟು ಸಾಕಿತ್ತು. ಪ್ರಧಾನಿ ಭಾಷಣ ಮುಗಿಯುವ ಮುನ್ನವೇ ಕೆಂಪುಕೋಟೆ ಎದುರು ಪ್ರತಿಪಕ್ಷ ನಾಯಕರಿಗೆ ಮೀಸಲಿಟ್ಟ ಆಸನಗಳು ಖಾಲಿಯಾದವು. ಈ ಅಪ್ರಬುದ್ಧ ನಡವಳಿಕೆ ಸ್ವಾತಂತ್ರ್ಯೊತ್ಸವದ ಸಂದರ್ಭದಲ್ಲಿ ತಾವು ದೇಶಕ್ಕೆ, ಸಂವಿಧಾನಕ್ಕೆ, ಧ್ವಜಕ್ಕೆ, ಘನ ಪರಂಪರೆಗೆ ಮಾಡುತ್ತಿರುವ ಅಪಮಾನ ಎಂಬುದನ್ನೂ ಕಾಂಗ್ರೆಸ್ ನಾಯಕರು ಅರಿಯದೇ ಹೋದರು. ಇದು ಅತ್ಯಂತ ಬೇಸರದ ವಿಚಾರ.

ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಕಳೆದ ನೂರು ವರ್ಷಗಳಲ್ಲಿ ದೇಶಕ್ಕಾಗಿ ಆರೆಸ್ಸೆಸ್ ಮಾಡಿದ ಕಾರ್ಯದ ಗುಣಗಾನ ಮಾಡಿದ್ದರ ವಿರುದ್ಧ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಂದ ಹಿಡಿದು ರಾಜ್ಯದ ಕಾಂಗ್ರೆಸ್ ನಾಯಕರವರೆಗೆ ಎಲ್ಲರೂ ತಕರಾರು ತೆಗೆದು ಇದು ಸಂವಿಧಾನ ವಿರೋಧಿ ಕ್ರಮ, ಸಂವಿಧಾನಕ್ಕೆ ಅಪಚಾರ ಎಂದು ಬಡಬಡಾಯಿಸುತ್ತಿದ್ದಾರೆ. ಆ ಮೂಲಕ ಸಂಸತ್ತಿನ ಕಲ್ಪದಿಂದ ಆರಂಭವಾಗಿ ದೇಶದ ಪ್ರಧಾನಿಯ ಸ್ವಾತಂತ್ರ್ಯೊತ್ಸವದ ಭಾಷಣದವರೆಗೆ ಎಲ್ಲವನ್ನೂ ವಿವಾದಕ್ಕೆ ತಿರುಗಿಸಿ ದಿಕ್ಕುತಪ್ಪಿಸುವ ಪ್ರಯತ್ನ ಮುಂದುವರೆಸಿದ್ದಾರೆ. ಪ್ರಧಾನಿ ಕೆಂಪುಕೋಟೆ ಮೇಲಿಂದ ಮಾಡಿದ ಸ್ವಾತಂತ್ರ್ಯೊತ್ಸವದ ಭಾಷಣದಲ್ಲಿ ಆರೆಸ್ಸೆಸ್ ಗುಣಗಾನ ಮಾಡಿದ್ದು ಸಂವಿಧಾನ ವಿರೋಧಿ ಕ್ರಮ ಎಂದು ತೀರ್ಮಾನ ಕೊಡುವ ಮೊದಲು ಒಂದು ಕ್ಷಣ ಶಾಂತವಾಗಿ ಆಲೋಚನೆ ಮಾಡಬೇಕಲ್ಲ? ಆರೆಸ್ಸೆಸ್ ಮಾಡಿದ ಸಂವಿಧಾನ ವಿರೋಧಿ ಅಥವಾ ದೇಶ ವಿರೋಧಿ ಕೆಲಸ ಯಾವುದು?

ಕಳೆದ ನೂರು ವರ್ಷಗಳಲ್ಲಿ ಸ್ವಂತದ್ದೆಲ್ಲವನ್ನೂ ಪಕ್ಕಕ್ಕಿಟ್ಟು ದೇಶಕಾರ್ಯಕ್ಕೋಸ್ಕರ ದೀನ ದುರ್ಬಲರ ಸೇವೆಯನ್ನೇ ಉಸಿರಾಗಿಸಿಕೊಂಡ, ಜೀವನವನ್ನೇ ಸಮರ್ಪಿಸಿದ ಸಹಸ್ರಾರು ಸೈನಿಕ ಸಮಾನ ದೇವದುರ್ಲಭ ಜ್ಯೇಷ್ಠ ಕಾರ್ಯಕರ್ತರನ್ನು ನಿರ್ಮಾಣ ಮಾಡಿದ್ದು ಸಂವಿಧಾನ ವಿರೋಧಿಯೇ? ಜಾತಿ, ಮತ, ಪ್ರಾಂತ, ಭಾಷೆ, ಪಕ್ಷ ಇತ್ಯಾದಿಗಳ ಹೆಸರಲ್ಲಿ ದೇಶ ಒಡೆದುಹೋಗುವುದನ್ನು ತಡೆಯಲು ದೇಶ, ಧರ್ಮ, ಸಂಸ್ಕೃತಿ ಮತ್ತು ಇತಿಹಾಸದ ಬಗ್ಗೆ ಅಭಿಮಾನ ಮೂಡಿಸಿ ದೇಶವನ್ನು ಒಟ್ಟಾಗಿ ಒಂದಾಗಿ ಹಿಡಿದಿಟ್ಟುಕೊಳ್ಳಲು ಅವಿರತ ನೂರು ವರ್ಷಗಳ ಕಾಲ ಕೆಲಸ ಮಾಡಿದ್ದು ಸಂವಿಧಾನ ವಿರೋಧಿಯೇ? ಅತಿವೃಷ್ಟಿ, ಅನಾವೃಷ್ಟಿ, ಭೂಕಂಪ, ದುರಂತಗಳು, ಯುದ್ಧಗಳು ಇತ್ಯಾದಿ ಸಂಭವಿಸಿದಾಗ ಯೋಧ ಸಮಾನವಾಗಿ ದುಡಿಯುವ ಪ್ರೇರಣೆ ನೀಡಿದ್ದು ಸಂವಿಧಾನ ವಿರೋಧಿಯೇ? ದೇಶದ ಉದ್ದಗಲಕ್ಕೂ ಲಕ್ಷಾಂತರ ಸಹಸ್ರಾರು ಸೇವಾ ಕೇಂದ್ರ- ಸೇವಾ ಕಾರ್ಯಗಳ ಮೂಲಕ ಕೋಟ್ಯಂತರ ಜನರಿಗೆ ಶಿಕ್ಷಣ, ಸಂಸ್ಕಾರ, ಅನ್ನ, ವಸತಿ ಕಲ್ಪಿಸಿ ಸಮಾಜದ, ದೇಶದ ಸಶಕ್ತೀಕರಣಕ್ಕೆ ಶ್ರಮಿಸುತ್ತಿರುವುದು ಸಂವಿಧಾನ ವಿರೋಧಿಯೇ? ಯಾವುದು ಸಂವಿಧಾನ ವಿರೋಧಿ? ಯಾರು ಸಂವಿಧಾನ ವಿರೋಧಿಗಳು?

‘ವಸುಧೈವ ಕುಟುಂಬಕಂ, ಕ್ರುಣ್ವಂತೋ ವಿಶ್ವಮರ್ಯಂ’ ಎಂಬ ಮಾತಿನಂತೆ ಇಡೀ ವಿಶ್ವವೇ ಒಂದು ಕುಟುಂಬ, ಭಾರತೀಯತೆಯನ್ನು ಪಸರಿಸಿ ಇಡೀ ಜಗತ್ತನ್ನು ಸುಸಂಸ್ಕೃತರನ್ನಾಗಿ ಮಾಡುವುದಕ್ಕೆ ಆರೆಸ್ಸೆಸ್ ನೂರು ವರ್ಷಗಳಿಂದ ಕೆಲಸ ಮಾಡುತ್ತಿರುವುದು. ಅದಕ್ಕೋಸ್ಕರವೇ ಇಂದು ಜಗತ್ತಿನ ನೂರಾರು ದೇಶಗಳಲ್ಲಿ ಆರೆಸ್ಸೆಸ್ ವಿಶ್ವ ವಿಭಾಗದ ಹತ್ತಾರು ಸಂಘಟನೆಗಳು ಕೆಲಸ ಮಾಡಿ ಆರೆಸ್ಸೆಸ್ ವಿಶ್ವ ಮಾನ್ಯತೆ ಗಳಿಸಿರುವುದು. ಆರೆಸ್ಸೆಸ್ ಇಂದು ಕೇವಲ ಭಾರತದ ಸಂಘಟನೆ ಆಗಿ ಉಳಿದಿಲ್ಲ, ಅದೊಂದು ವೈಶ್ವಿಕ ಸಂಘಟನೆಯಾಗಿ ಬೆಳೆದು ನಿಂತಿದೆ. ಆರೆಸ್ಸೆಸ್​ನ ಕೆಲಸವನ್ನು ಸಮೀಪದಿಂದ ನೋಡಿದ ಮಹಾತ್ಮ ಗಾಂಧಿ, ಡಾ. ಅಂಬೇಡ್ಕರ್ ಅವರೆಲ್ಲ ‘ಇದ್ದರೆ ಹೀಗಿರಬೇಕು, ಆರೆಸ್ಸೆಸ್ ರೀತಿ ಕೆಲಸ ಮಾಡಬೇಕು’ ಎಂದು ಮೆಚ್ಚಿ ಮಾತನಾಡಿದ್ದನ್ನು ರಾಹುಲ್, ಸಿದ್ದರಾಮಯ್ಯ ಅರಿಯದೇ ಹೋದರೆ ಹೇಗೆ? ಜಾತಿ ಮತ್ತು ಅಂತಸ್ತನ್ನು ಪರಿಗಣನೆಗೆ ತೆಗೆದುಕೊಳ್ಳದ ನಿಸ್ವಾರ್ಥ ದೇಶಭಕ್ತ ಸಂಘಟನೆ ಆರೆಸ್ಸೆಸ್ ಎಂದು ಈ ಇಬ್ಬರೂ ಮಹಾನುಭಾವರು ತೀರ್ಪು ಕೊಟ್ಟಿದ್ದಾರೆ. ನಿಮ್ಮದೇ ಕಾಂಗ್ರೆಸ್ ಸರಕಾರಗಳು ಆರೆಸ್ಸೆಸ್ ನಿಷೇಧ ಮಾಡಲು ಹೋದಾಗ ದೇಶದ ಸವೋಚ್ಚ ನ್ಯಾಯಾಲಯ ಬಾರಿಬಾರಿ ಹೇಳಿದ್ದೂ ಇದನ್ನೇ.

ಹುಚ್ಚಪ್ಪಗಳಿರಾ, ಮಾತನಾಡುವ ಮುನ್ನ ಇತಿಹಾಸದ ಜ್ಞಾನ, ಭವಿಷ್ಯದ ಆಲೋಚನೆ ಇಲ್ಲದೇ ಹೋದರೆ ಹೀಗೇ ಅನಾಹುತ ಆಗುವುದು. ಯಾರೋ ಯಕಶ್ಚಿತ್ ವ್ಯಕ್ತಿ ಹೇಳಿದ್ದರೆ ಚಿಂತೆ ಇಲ್ಲ, ಲೋಕಸಭೆಯ ವಿಪಕ್ಷ ನಾಯಕ, ರಾಜ್ಯದ ಮುಖ್ಯಮಂತ್ರಿ ಹೀಗೆ ಮಾಡಿದರೆ ಹೇಗೆ? ಸ್ವಲ್ಪ ಹಿಂದಕ್ಕೆ ಹೋಗಿ ನೋಡೋಣ. ಆಗಷ್ಟೇ 1962ರಲ್ಲಿ ಚೀನಾ ಜತೆಗಿನ ಯುದ್ಧ ಮುಗಿದಿತ್ತು. ಆ ಸಂದರ್ಭದಲ್ಲಿ ಆರೆಸ್ಸೆಸ್ ಸ್ವಯಂಸೇವಕರು ಗೂಢಚಾರರಾಗಿ, ಯೋಧರಾಗಿ ತೋರಿದ ಕರ್ತವ್ಯನಿಷ್ಠೆಯನ್ನು ಮೆಚ್ಚಿದ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು 1963ರ ಜ. 26ರಂದು ನವದೆಹಲಿಯ ರಾಜಪಥದಲ್ಲಿ ನಡೆಯುವ ಗಣರಾಜ್ಯೋತ್ಸವದ ಪರೇಡ್​ನಲ್ಲಿ ಸಂಪೂರ್ಣ ಸಮವಸ್ತ್ರದಲ್ಲಿ (ಆರೆಸ್ಸೆಸ್ ಪರಿಭಾಷೆಯಲ್ಲಿ ಗಣವೇಷ) ಭಾಗವಹಿಸಲು ಅಧಿಕೃತ ಆಹ್ವಾನ ನೀಡಿದ್ದರು. ಅದನ್ನು ಮನ್ನಿಸಿ 3500 ಆರೆಸ್ಸೆಸ್ ಸ್ವಯಂಸೇವಕರು ಗಣರಾಜ್ಯೋತ್ಸವ ಪರೇಡ್​ನಲ್ಲಿ ಭಾಗವಹಿಸಿದ್ದರು. ಇದು ಇತಿಹಾಸದ ಸತ್ಯ. ಇದು ರಾಹುಲ್ ಗಾಂಧಿ ಅವರಿಗೆ ಅರ್ಥ ಆಗದೇ ಹೋಯಿತಲ್ಲ ಎಂಬುದು ಬೇಸರದ ಸಂಗತಿ.

ಪ್ರಧಾನಿ ನರೇಂದ್ರ ಮೋದಿ ಕೆಂಪುಕೋಟೆ ಮೇಲೆ ನಿಂತು ಭಾಷಣ ಮಾಡುವಾಗ ಆರೆಸ್ಸೆಸ್ ಗುಣಗಾನ ಮಾಡಿದ್ದು ಸಂವಿಧಾನ ವಿರೋಧಿ ಆಗುವುದಾದರೆ ಆ ಪ್ರಮಾದವನ್ನು ರಾಹುಲ್ ಗಾಂಧಿಯವರ ಮುತ್ತಾತ, ಅಂದಿನ ಪ್ರಧಾನಿ ನೆಹರು 1963ರಲ್ಲೇ ಮಾಡಿದ್ದರಲ್ಲ. ಆ ಪ್ರಮಾದಕ್ಕೆ ನೀವೇನು ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತೀರಿ? ಜನಜನಿತವಾದ ಒಂದು ಮಾತಿದೆ. ‘ಇತಿಹಾಸ ಅರಿಯದವ ಇತಿಹಾಸ ಸೃಷ್ಟಿಸಲಾರ’ ಎಂದು. ಈಗ ಅದಕ್ಕೆ ಮತ್ತೊಂದು ಸಾಲನ್ನು ನಾವು ಸೇರಿಸಬೇಕಾಗಿದೆ. ಅದೆಂದರೆ ‘ಇತಿಹಾಸ ಅರಿಯದವ ಕರಾಳ ಇತಿಹಾಸವನ್ನೂ ಸೃಷ್ಟಿಸಬಲ್ಲ ಅಪಾಯವಿದೆ’ ಎಂದು. ಇಂಥವರ ಕೈಯಲ್ಲಿ ಸಿಲುಕಿರುವ ಕಾಂಗ್ರೆಸ್ ಬಗ್ಗೆ ನಾವು ಪಶ್ಚಾತ್ತಾಪಡಬೇಕಷ್ಟೆ. ಭಾರತದ ಸಂಸದೀಯ ವ್ಯವಸ್ಥೆಗೆ ಒಂದು ಘನ ಪರಂಪರೆ ಇದೆ. ಘನ ಇತಿಹಾಸವಿದೆ.

ಎಂಥೆಂಥಾ ಮೇಧಾವಿಗಳು ಕೆಲಸ ಮಾಡಿದ ಸಂಸತ್ತಿನಲ್ಲಿ ಇಂದು ಇಂಥ ಅವಿವೇಕಿಗಳ ಪುಂಡಾಟಿಕೆ ನೋಡಬೇಕಾಗಿ ಬಂದಿರುವುದು ನಮ್ಮ ಪಾಲಿನ ದುರಂತ. ಭಾರತದ ಸಂಸತ್ತಿನ ಪಿತಾಮಹ ಎಂದು ಕರೆಸಿಕೊಂಡ ಗಣೇಶ್ ವಾಸುದೇವ್ ಮಾವಲಂಕರ, ಲಾಲ್​ಬಹದ್ದೂರ್ ಶಾಸ್ತ್ರಿ, ಸರ್ದಾರ ವಲ್ಲಭ ಭಾಯಿ ಪಟೇಲ್, ಮಹಾವೀರ ತ್ಯಾಗಿ, ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ. ಆಡ್ವಾಣಿ, ಪಿವಿ ನರಸಿಂಹರಾವ್, ಸುಷ್ಮಾ ಸ್ವರಾಜ್ ಅವರಂಥ ಮಹಾನ್ ಚೇತನಗಳು ಕೆಲಸ ಮಾಡಿದ ಜಾಗದಲ್ಲಿ ಇಂಥವರಾ ಕೂರುವುದು!? ಛೇ.. ಈ ಸಂದರ್ಭದಲ್ಲಿ ಒಂದು ಸನ್ನಿವೇಶವನ್ನು ಉಲ್ಲೇಖಿಸಲೇಬೇಕು.

1961ರ ಡಿಸೆಂಬರ್ 5. ಭಾರತ-ಚೀನಾ ಯುದ್ಧಕ್ಕಿಂತ ಒಂದು ವರ್ಷ ಮೊದಲು ಸಂಸತ್ತಿನಲ್ಲಿ ನಡೆದ ಘಟನೆ. ಅಕ್ಸಾಯ್ ಚಿನ್ ಪ್ರದೇಶದಲ್ಲಿ ಚೀನಾ ಅತಿಕ್ರಮಣದ ಕುರಿತು ಚರ್ಚೆ ನಡೆಯುತ್ತಿತ್ತು. ಆಗ ಪ್ರಧಾನಿ ನೆಹರು ಹೇಳಿದ ಮಾತು. Not a blade of grass grows there, 17000 feet high, inhabitable and even we dont know where it is... ಅಕ್ಸಾಯ್ಚಿನ್ ಪ್ರದೇಶದಲ್ಲಿ ಒಂದು ಹುಲ್ಲು ಕಡ್ಡಿಯೂ ಬೆಳೆಯುವುದಿಲ್ಲ, 17 ಸಾವಿರ ಅಡಿ ಎತ್ತರದಲ್ಲಿದೆ, ಅಷ್ಟಕ್ಕೂ ಅದು ಎಲ್ಲಿದೆ ಎಂಬುದೂ ನಮಗೆ ಗೊತ್ತಿಲ್ಲ ಎಂದು ನೆಹರು ಹೇಳುತ್ತಾರೆ. ಅದನ್ನು ಕೇಳಿ ಕಾಂಗ್ರೆಸ್​ನ ಹಿರಿಯ ಸಂಸದ ಮಹಾವೀರ ತ್ಯಾಗಿ ಕುದ್ದು ಹೋಗುತ್ತಾರೆ. ‘ನನ್ನ ತಲೆ ಮೇಲೆ ಒಂದೂ ಕೂದಲಿಲ್ಲ, ಹಾಗಂತ ಇದು ನಿರರ್ಥಕವೇ?’ ಎಂದು ತೀಕ್ಷ ್ಣಾಗಿ ಪ್ರತಿಕ್ರಿಯಿಸುತ್ತಾರೆ. ನೆಹರು ಮರು ಮಾತನಾಡದೇ ತ್ಯಾಗಿ ಮಾತಿಗೆ ತಲೆದೂಗುತ್ತಾರೆ.

ಕೊನೆ ಪಕ್ಷ ಸಂವಿಧಾನ, ಅದರ ಆಶಯ, ಸಂಸತ್ತಿನ ಘನತೆ ಗೌರವ ಕಾಪಾಡುವ ವಿಚಾರದಲ್ಲಿ, ಸಂವಿಧಾನಾತ್ಮಕ ಸಂಸ್ಥೆಗಳ ಘನತೆ ಗೌರವದ ವಿಷಯದಲ್ಲಿ ರಾಹುಲ್ ಮತ್ತು ಅವರ ತಂಡದ ಸದಸ್ಯರಿಂದ ಇನ್ನು ಮುಂದಾದರೂ ಈ ನಡವಳಿಕೆ ನಿರೀಕ್ಷೆ ಮಾಡುವುದು ಸಾಧುವೇ? ಯೋಚನೆ ಮಾಡಬೇಕಿದೆ.