ಅಂಕಣ

ಮನೆಬಳಕೆ ಎಲ್​ಪಿಜಿ ದುಬಾರಿ ಏಕೆ?; ಸಿಲಿಂಡರ್ ದರ ಈ ಪರಿ ಏರುತ್ತಿರುವುದೇಕೆ?

ಪೆಟ್ರೋಲ್, ಡೀಸೆಲ್ ಬೆಲೆ ಸದ್ಯ ಸ್ಥಿರವಾಗಿದೆಯಾದರೂ, 100 ರೂಪಾಯಿ ದಾಟಿ ಹೊರೆ ಎನಿಸಿದೆ. ಇಂತಹ ಸನ್ನಿವೇಶದಲ್ಲಿ ಮನೆಬಳಕೆಯ ಎಲ್​ಪಿಜಿ ದರ 800 ರೂಪಾಯಿ ದಾಟಿದೆ. ಮನೆಬಳಕೆಯ ಎಲ್​ಪಿಜಿ ಸಿಲಿಂಡರ್ ದರ ಈ ಪರಿ ಏರಿಕೆಯಾಗುತ್ತಿರುವುದೇಕೆ?

| ಉಮೇಶ್​ ಕುಮಾರ್​ ಶಿಮ್ಲಡ್ಕ

ದಿನಕಳೆದಂತೆ ಸಾಮಾನ್ಯ ಜನರ ಬದುಕಿನ ಬವಣೆ ಹೆಚ್ಚುತ್ತ ಸಾಗುತ್ತಿದೆ. ಕಾರಣ ಬೆಲೆ ಏರಿಕೆ. ಆದಾಯ ಇಳಿಕೆ. ಕೋವಿಡ್ ಸಂಕಷ್ಟದ ಸರಪಣಿ ಬಿಗಿಯಾಗಿದೆ ಎಂಬುದು ವಾಸ್ತವ. ಪೆಟ್ರೋಲ್, ಡೀಸೆಲ್ ಬೆಲೆ ಏರುತ್ತ ಸಾಗಿ 100 ರೂಪಾಯಿ ಗಡಿ ದಾಟಿದ್ದು, ಅಗತ್ಯ ವಸ್ತುಗಳ ಬೆಲೆ ಏರುವಂತೆ ಮಾಡಿದೆ. ಈ ನಡುವೆ, ಮನೆಬಳಕೆಯ 14.2 ಕಿಲೋ ತೂಕದ ಎಲ್​ಪಿಜಿ ಸಿಲಿಂಡರ್ ದರ ಕೂಡ 850 ರೂಪಾಯಿ ದಾಟಿದೆ. ವಾಣಿಜ್ಯ ಬಳಕೆಯ 19 ಕಿಲೋ ತೂಕದ ವಾಣಿಜ್ಯ ಬಳಕೆಯ ಎಲ್​ಪಿಜಿ ಸಿಲಿಂಡರ್ ದರ 1,500 ರೂಪಾಯಿ ಮೇಲಿದೆ. ಅಲ್ಲಿಗೆ ಮನೆಬಳಕೆ ಎಲ್​ಪಿಜಿ ಸಿಲಿಂಡರ್ ಮತ್ತು ವಾಣಿಜ್ಯ ಬಳಕೆ ಎಲ್​ಪಿಜಿ ಸಿಲಿಂಡರ್ ದರ ಹೆಚ್ಚು ಕಡಿಮೆ ಹತ್ತಿರ ಹತ್ತಿರ ಬಂದಂತಾಗಿದೆ. ಈ ವಿದ್ಯಮಾನದ ತೆರೆಮರೆಯ ಲೆಕ್ಕಾಚಾರವನ್ನು ಗಮನಿಸುವ ಪ್ರಯತ್ನ ಇಲ್ಲಿದೆ. ದೇಶದಲ್ಲಿ

ಎಲ್​ಪಿಜಿ ದರವನ್ನು ಅಂತಾರಾಷ್ಟ್ರೀಯ ದರಗಳಿಗೆ ಅನುಗುಣವಾಗಿ ನಿಗದಿಪಡಿಸಲಾಗುತ್ತದೆ. ಇದು 2020ರ ಅಕ್ಟೋಬರ್​ನಲ್ಲಿ ಟನ್​ಗೆ 359 ಅಮೆರಿಕ ಡಾಲರ್ ಇದ್ದದ್ದು, 2021ರ ಏಪ್ರಿಲ್​ನಲ್ಲಿ ಟನ್​ಗೆ 607 ಡಾಲರ್ ಆಗಿದೆ. ಭಾರತದ ಎಲ್​ಪಿಜಿ ಅಗತ್ಯದ ಪೈಕಿ ಶೇಕಡ 55 ಪಾಲನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಸಗಟುದರ ಸೂಚ್ಯಂಕದ ಲೆಕ್ಕಾಚಾರದಲ್ಲಿ ಎಲ್​ಪಿಜಿ ಪಾಲು ಶೇಕಡ 0.64 ಇದೆ. ಸಬ್ಸಿಡಿ ನೀಡುವ ಮೂಲಕ ಪೆಟ್ರೋಲಿಯಂ ಉತ್ಪನ್ನಗಳ ದರ ಹೆಚ್ಚಳದ ಹೊರೆ ಜನರ ಮೇಲೆ ಬೀಳದಂತೆ ಸರ್ಕಾರ ನೋಡಿಕೊಳ್ಳುತ್ತಿತ್ತು. ನಮ್ಮ ದೇಶದಲ್ಲಿನ ಎಲ್​ಪಿಜಿ ಮಾರುಕಟ್ಟೆಯ ವ್ಯಾಪ್ತಿಯ ಮಹತ್ವ ಬಿಂಬಿಸಲು ಈ ಲೆಕ್ಕಾಚಾರ ಬುನಾದಿ ಎನಿಸುತ್ತದೆ.

ಸರ್ಕಾರಕ್ಕೆ ಹೊರೆಯಾದ ಸಬ್ಸಿಡಿ!: ಸಾಮಾನ್ಯ ಜನರಿಗೆ ಹೊರೆಯಾಗದಿರಲಿ ಎಂದು ಸರ್ಕಾರ ಪೆಟ್ರೋಲಿಯಂ ಉತ್ಪನ್ನಗಳಿಗೆ ಸಬ್ಸಿಡಿ ನೀಡುತ್ತಿತ್ತು. ಆದರೆ, ಅರ್ಹ ಫಲಾನುಭವಿಗಳಾದ ಸಾಮಾನ್ಯರಿಗೆ ಸಿಗಬೇಕಾಗಿದ್ದ ಸವಲತ್ತುಗಳನ್ನು ‘ಹೊಣೆಗಾರಿಕೆ ಮರೆತ’ ಅನರ್ಹ ಫಲಾನುಭವಿಗಳು ಬೇಕಾಬಿಟ್ಟಿ ಬಳಸಿಕೊಂಡರು. ಸಬ್ಸಿಡಿ ಸರ್ಕಾರಕ್ಕೆ ಹೊರೆಯಾಯಿತು. ವಿಶೇಷವಾಗಿ ಪೆಟ್ರೋಲ್, ಡೀಸೆಲ್ ಮತ್ತು ಸೀಮೆಎಣ್ಣೆ ಹಾಗೂ ಎಲ್​ಪಿಜಿ ಸಬ್ಸಿಡಿ ಪ್ರಮುಖವಾದುದು. ಈ ಹಿಂದೆಯೇ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸಬ್ಸಿಡಿ ಕಡಿತಗೊಳಿಸಿ ಅವುಗಳ ಬೆಲೆ ನಿರ್ಧರಿಸುವ ಹೊಣೆಗಾರಿಕೆಯನ್ನು ಕಂಪನಿಗಳಿಗೇ ಬಿಟ್ಟುಕೊಟ್ಟಿದೆ. ಈಗ ಕೆಳ ಮತ್ತು ಮೇಲ್ಮಧ್ಯಮ ವರ್ಗದವರು ಇದರ ಪರಿಣಾಮವನ್ನು ಎದುರಿಸಬೇಕಾಗಿ ಬಂದಿದೆ.

ಸಬ್ಸಿಡಿ ಹಿಂತೆಗೆತದ ಸುತ್ತ ಮುತ್ತ: ಪೆಟ್ರೋಲ್, ಡೀಸೆಲ್​ಗಳ ಸಬ್ಸಿಡಿ ಕೊನೆಗೊಳಿಸಿ ಮುಕ್ತ ಮಾರುಕಟ್ಟೆಗೆ ಬಿಟ್ಟುಕೊಟ್ಟಂತೆ ಮನೆ ಬಳಕೆಯ ಎಲ್​ಪಿಜಿ ಸಿಲಿಂಡರ್ ಮೇಲಿನ ಸಬ್ಸಿಡಿಯನ್ನೂ ಸಂಪೂರ್ಣವಾಗಿ ಸ್ಥಗಿತಗೊಳಿಸಲು ಸರ್ಕಾರ ಮುಂದಾಗಿದೆ. ಸಬ್ಸಿಡಿ ಹಿಂತೆಗೆತದ ಇತಿಹಾಸವನ್ನು ಗಮನಿಸಿದರೆ, ಜನರಿಗೆ ಹೊರೆಯಾಗಬಾರದು ಎಂಬ ಕಾರಣಕ್ಕೆ ಈ ಹಿಂದಿನ ಕೇಂದ್ರ ಸರ್ಕಾರಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸಬ್ಸಿಡಿ ಹೆಸರಿನಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೆ ಆಯಿಲ್ ಬಾಂಡ್​ಗಳನ್ನು ವಿತರಿಸಿತ್ತು. ಇದರ ಮೌಲ್ಯವೇ 1.31 ಲಕ್ಷ ಕೋಟಿ ರೂಪಾಯಿ. ಇದನ್ನು ಭರಿಸುವ ಕೆಲಸವನ್ನು ಕಳೆದ ಏಳು ವರ್ಷಗಳಿಂದ ಮಾಡುತ್ತ ಬಂದಿರುವುದಾಗಿ ಹಾಲಿ ಸರ್ಕಾರ ಹೇಳಿಕೊಂಡಿದೆ.

ಎಲ್​ಪಿಜಿ ಸಬ್ಸಿಡಿಯ ಸರದಿ ಈಗ: ಪೆಟ್ರೋಲ್, ಡೀಸೆಲ್, ಸೀಮೆಎಣ್ಣೆ ಸಬ್ಸಿಡಿ ಹಿಂತೆಗೆದ ಬಳಿಕ ಈಗ ಎಲ್​ಪಿಜಿ ಸಬ್ಸಿಡಿ ಹಿಂಪಡೆಯುವ ಕೆಲಸವನ್ನು ಸರ್ಕಾರ ಆರಂಭಿಸಿದೆ. 2020ರ ಜೂನ್ ತಿಂಗಳಿಂದಲೇ ಮನೆಬಳಕೆಯ ಎಲ್​ಪಿಜಿ ಸಬ್ಸಿಡಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರ ಜಮೆಯಾಗುತ್ತಿದ್ದುದು ತಪ್ಪಿ ಹೋಗಿದೆ. ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾದಾಗ ಎಲ್​ಪಿಜಿ ಉತ್ಪನ್ನದ ಬೆಲೆಯೂ ಇಳಿಕೆಯಾಗಿತ್ತು. ಹೀಗಾಗಿ ಸರ್ಕಾರ 2020ರ ಮೇ ತಿಂಗಳಲ್ಲೇ ಎಲ್​ಪಿಜಿ ಸಬ್ಸಿಡಿಯನ್ನು ಹಿಂಪಡೆದಿತ್ತು. ಆಗ ಮನೆಬಳಕೆಯ ಎಲ್​ಪಿಜಿ ಸಿಲಿಂಡರ್ ದರ 600 ರೂಪಾಯಿ ಆಸುಪಾಸಿನಲ್ಲೇ ಇತ್ತು. ಹೀಗಾಗಿ 2020ರ ನವೆಂಬರ್ ತನಕ ಸಬ್ಸಿಡಿ ಜಮೆಯಾಗದಿರುವ ಅಂಶ ಮನೆಬಳಕೆ ಎಲ್​ಪಿಜಿ ಬಳಕೆದಾರರ ಗಮನಕ್ಕೇ ಬರಲಿಲ್ಲ.

ಬಿಸಿ ತಟ್ಟಲಾರಂಭಿಸಿದ್ದು ಯಾವಾಗ ?: ಮನೆಬಳಕೆಯ ಎಲ್​ಪಿಜಿ ಸಿಲಿಂಡರ್ ದರ 2021ರ ಫೆಬ್ರವರಿಯಲ್ಲಿ 700 ರೂಪಾಯಿ ಗಡಿ ದಾಟಿದಾಗ ಎಲ್ಲರಿಗೂ ಅದರ ಬಿಸಿ ತಟ್ಟಲಾರಂಭಿಸಿತು. ಮೇ ತಿಂಗಳಲ್ಲಿ ಇದು 800 ರೂಪಾಯಿ ಗಡಿ ದಾಟಿತು. ಈಗ ಕೆಲವು ದಿನಗಳ ಹಿಂದೆ ಇದು 850ರ ಗಡಿ ದಾಟಿ 900 ರೂಪಾಯಿ ಆಸುಪಾಸು ತಲುಪಿದೆ.

ಬೆಲೆ ಏರಿಕೆ ಪರಿಣಾಮ: ಬೆಲೆ ಏರಿಕೆ ಪರಿಣಾಮ ಪ್ರಧಾನಮಂತ್ರಿ ಉಜ್ವಲಾ ಯೋಜನಾ ಸ್ಕೀಮ್ಲ್ಲಿ ಮನೆಬಳಕೆಯ ಎಲ್​ಪಿಜಿ ಸಂಪರ್ಕ ಪಡೆದ 8 ಕೋಟಿ ಫಲಾನುಭವಿಗಳ ಪೈಕಿ 3.2 ಕೋಟಿ ಫಲಾನುಭವಿಗಳು ಸಿಲಿಂಡರ್ ರೀಫಿಲ್ ಮಾಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಇದು ಈ ಹಣಕಾಸು ವರ್ಷದ ಮೊದಲ ತ್ರೖೆಮಾಸಿಕದ ಡೇಟಾದಲ್ಲಿರುವ ಅಂಶ. ಇದೇ ರೀತಿ, 2020 ಮೇ ತಿಂಗಳಿಂದೀಚೆಗೆ ಶೇಕಡ 43.3 ದರ ಏರಿಕೆಯಾದ ಕಾರಣ ಮನೆ ಬಳಕೆಯ ಎಲ್​ಪಿಜಿ ಸಿಲಿಂಡರ್ (14.2 ಕಿಲೋ) ಬಳಕೆ ಪ್ರಮಾಣ ಇಳಿಕೆಯಾಗಿದೆ.

ಪಹಲ್ ಯೋಜನೆ: ಎಲ್​ಪಿಜಿ ಸಬ್ಸಿಡಿಯನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಮಾಡುವ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್​ಫರ್ (ಡಿಬಿಟಿಎಲ್) ಅಥವಾ ಪಹಲ್ ಯೋಜನೆಯನ್ನು ಸರ್ಕಾರ 2013ರ ಜೂನ್ 1ರಂದು ಜಾರಿಗೊಳಿಸಿತು. 2015ರ ಜನವರಿ 1ರ ವೇಳೆಗೆ ಎಲ್ಲ ಗ್ರಾಹಕರೂ ಈ ಯೋಜನೆ ವ್ಯಾಪ್ತಿಗೆ ಸೇರಿದರು. ಇದರಿಂದ ಆದ ಪ್ರಯೋಜನ ಎಂದರೆ 4.49 ಕೋಟಿ ಡುಪ್ಲಿಕೇಟ್, ನಕಲಿ/ಅಸ್ತಿತ್ವದಲ್ಲಿ ಇಲ್ಲದ ನಿಷ್ಕ್ರಿಯ ಎಲ್​ಪಿಜಿ ಸಂಪರ್ಕ ಪತ್ತೆಯಾದವು. ಅಲ್ಲದೆ, 1.08 ಕೋಟಿ ಬಳಕೆದಾರರು ‘ಗಿವ್​ಇಟ್ ಅಪ್’ ಅಭಿಯಾನದಲ್ಲಿ ಭಾಗಿಯಾಗಿ ಸಬ್ಸಿಡಿ ಬಿಟ್ಟುಕೊಟ್ಟಿದ್ದರು. ಅಲ್ಲದೆ, 10 ಲಕ್ಷ ರೂ. ಮೇಲ್ಪಟ್ಟ ವಾರ್ಷಿಕ ಆದಾಯ ಇರುವವರು ಮಾರುಕಟ್ಟೆ ದರ ಪಾವತಿಸಿ ಮನೆಬಳಕೆಯ ಎಲ್​ಪಿಜಿ ಸಿಲಿಂಡರ್ ಖರೀದಿಸಲು ಸರ್ಕಾರ 2015ರಲ್ಲೇ ನಿರ್ದೇಶಿಸಿತ್ತು. ಇದರಿಂದಾಗಿ ಸರ್ಕಾರಕ್ಕೆ 2020ರ ಮಾರ್ಚ್ 31ರ ವೇಳೆಗೆ ಸರ್ಕಾರಕ್ಕೆ 71,301 ಕೋಟಿ ರೂಪಾಯಿ ಉಳಿತಾಯವಾಗಿದೆ.

ಸರ್ಕಾರದ ಉಳಿತಾಯ: ಕೇಂದ್ರ ಸರ್ಕಾರದ ಮುಂಗಡ ಪತ್ರದ ಅಂದಾಜು ಪ್ರಕಾರ ಪ್ರಸಕ್ತ ಹಣಕಾಸು ವರ್ಷದಲ್ಲಿ ಎಲ್​ಪಿಜಿ ಸಬ್ಸಿಡಿಗೆ 14,073 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಕಳೆದ ಹಣಕಾಸು ವರ್ಷದಲ್ಲಿ ಇದು 36,178 ಕೋಟಿ ರೂಪಾಯಿ ಇತ್ತು. ಪಹಲ್ ಯೋಜನೆ ಮೂಲಕ ಕಳೆದ ಹಣಕಾಸು ವರ್ಷ ಎಲ್​ಪಿಜಿ ಸಬ್ಸಿಡಿಗಾಗಿ 25,520 ಕೋಟಿ ರೂಪಾಯಿ ವ್ಯಯಿಸಿತ್ತು. 9,690 ಕೋಟಿ ರೂಪಾಯಿಯನ್ನು ಪ್ರಧಾನಮಂತ್ರಿ ಉಜ್ವಲಾ ಯೋಜನೆಯ ಮೂಲಕ ಬಡವರ ಮನೆಗೆ ಎಲ್​ಪಿಜಿ ಸಂಪರ್ಕ ಒದಗಿಸಲುಖರ್ಚು ಮಾಡಿತ್ತು. ಪಹಲ್​ಗೆ ಈ ವರ್ಷ 12,480 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಪ್ರಧಾನಮಂತ್ರಿ ಉಜ್ವಲಾ ಯೋಜನೆಗೆ ಯಾವುದೇ ಹಣ ಮೀಸಲಿಟ್ಟಿಲ್ಲ.