| ಚೇತನ್ ನಾಡಿಗೇರ
ಒಂದು ಕಡೆ ಕರೊನಾ ಭಯದಿಂದ ಚಿತ್ರಮಂದಿರಗಳಲ್ಲಿ ಪೂರ್ಣಪ್ರಮಾಣದಲ್ಲಿ ಚಿತ್ರಪ್ರದರ್ಶನ ಪ್ರಾರಂಭವಾಗಿಲ್ಲ. ಇನ್ನೊಂದು ಕಡೆ ಒಟಿಟಿಗಳಲ್ಲಿ ಹಲವು ಚಿತ್ರಗಳು ಬಿಡುಗಡೆಯಾಗುತ್ತಿವೆ. ಇದೆಲ್ಲದರಿಂದ ಥೇಟರ್ಗಳಿಗೆ ದೊಡ್ಡ ಅಪಾಯ ಕಾದಿದೆ ಎಂಬ ಆತಂಕ ಸಹಜವಾಗಿಯೇ ಕಾಡುತ್ತಿದೆ. ಆದರೆ, ಇದೆಲ್ಲದರ ನಡುವೆ ಈಗಲೂ ಚಿತ್ರರಂಗ ಮತ್ತು ಪ್ರೇಕ್ಷಕರು ದೊಡ್ಡ ಮಟ್ಟದಲ್ಲಿ ಥೇಟರ್ಗಳನ್ನು ನಂಬಿಕೊಂಡಿದ್ದಾರೆ. ಪೂರ್ಣಪ್ರಮಾಣದಲ್ಲಿ ಚಿತ್ರಪ್ರದರ್ಶನಕ್ಕೆ ಅನುಮತಿ ಸಿಕ್ಕ ಮೇಲೆಯೇ ಚಿತ್ರ ಬಿಡುಗಡೆ ಮಾಡುವುದಕ್ಕೆ ಮುಂದಾಗಿದ್ದಾರೆ. ಇದಕ್ಕೆ ಕಾರಣವೇನು? ಉತ್ತರ ಇಲ್ಲಿದೆ. ಇಷ್ಟು ದಿನ ಇದ್ದ ಊಹಾಪೋಹಗಳು ಕೊನೆಗೂ ನಿಜವಾಗಿವೆ. ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರವಾದ ಎಸ್.ಎಸ್. ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’ ಬಿಡುಗಡೆ ಮುಂದಕ್ಕೆ ಹೋಗುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಸೆ.11ರಂದು ಚಿತ್ರತಂಡವೇ ಚಿತ್ರದ ಬಿಡುಗಡೆಯನ್ನು ಅನಿರ್ದಿಷ್ಟವಾಗಿ ಮುಂದಕ್ಕೆ ಹಾಕಿರುವ ವಿಷಯವನ್ನು ಸಾಮಾಜಿಕ ಜಾಲತಾಣಗಳ ಮೂಲಕ ಅಧಿಕೃತವಾಗಿ ಘೋಷಿಸಿದೆ. ಎರಡನೇ ಲಾಕ್ಡೌನ್ ನಂತರ ಹೀಗೆ ಮುಂದೂಡಲ್ಪಡುತ್ತಿರುವ ಮೂರನೆಯ ಪ್ಯಾನ್ ಇಂಡಿಯಾ ಚಿತ್ರ ಇದು. ಇದಕ್ಕೂ ಮುನ್ನ, ಜುಲೈ 16ರಂದು ಬಿಡುಗಡೆಯಾಗಬೇಕಿದ್ದ ಯಶ್ ಅಭಿನಯದ ‘ಕೆಜಿಎಫ್ 2’ ಚಿತ್ರವನ್ನು ಮುಂದಿನ ವರ್ಷ ಏಪ್ರಿಲ್ಗೆ ಮುಂದೂಡಲಾಗಿದೆ. ಆಗಸ್ಟ್ 19ರಂದು ಬಿಡುಗಡೆಯಾಗಬೇಕಿದ್ದ ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’ ಮುಂದೂಡಲಾಗಿದ್ದು, ಇನ್ನೂ ಹೊಸ ದಿನಾಂಕ ಘೋಷಿಸಲಾಗಿಲ್ಲ. ಈಗ ಜ್ಯೂನಿಯರ್ ಎನ್ಟಿಆರ್ ಮತ್ತು ರಾಮ್ರಣ್ ತೇಜ ಅಭಿನಯದ ‘ಆರ್ಆರ್ಆರ್’ ಚಿತ್ರವೂ ಅದೇ ಹಾದಿ ಹಿಡಿದಿದೆ. ಕಾರಣವೇನು ಎಂದು ಹುಡುಕಹೊರಟರೆ, ಸಿಗುವ ಉತ್ತರ ಅನಿಶ್ಚಿತತೆ.
ಕರೊನಾ ಎರಡನೆಯ ಅಲೆ ನಿಯಂತ್ರಣಕ್ಕೆ ಬಂದಿದೆ. ಆದರೂ ಹಲವು ರಾಜ್ಯಗಳಲ್ಲಿ ವೀಕೆಂಡ್ ಲಾಕ್ಡೌನ್ ಮತ್ತು ನೈಟ್ ಕರ್ಫ್ಯೂ ಜಾರಿಯಲ್ಲಿದೆ. ಅಷ್ಟೇ ಅಲ್ಲ, ಚಿತ್ರಪ್ರದರ್ಶನಕ್ಕೆ ಶೇಕಡ 50ರಷ್ಟು ಹಾಜರಾತಿಗೆ ಮಾತ್ರ ಅನುಮತಿ ನೀಡಲಾಗಿದೆ. ಅದಕ್ಕೆ ಕಾರಣ, ಮೂರನೆಯ ಅಲೆಯ ಭಯ. ಹಾಗಾಗಿ, ಚಿತ್ರಪ್ರದರ್ಶನ ಶುರುವಾಗಿದ್ದರೂ, ಪೂರ್ಣಪ್ರಮಾಣದಲ್ಲಿ ಶುರುವಾಗಿಲ್ಲ. ಎಲ್ಲಿಯವರೆಗೂ ಪರಿಸ್ಥಿತಿ ಸಹಜ ಸ್ಥಿತಿಗೆ ಬರುವುದಿಲ್ಲವೋ ಮತ್ತು ಥೇಟರ್ಗಳಲ್ಲಿ ಶೇ. 100ರಷ್ಟು ಅನುಮತಿ ಸಿಗುವುದಿಲ್ಲವೋ, ಅಲ್ಲಿಯವರೆಗೂ ಚಿತ್ರ ಬಿಡುಗಡೆ ಬೇಡ ಎಂಬ ತೀರ್ವನಕ್ಕೆ ಹಲವು ದೊಡ್ಡ ಮತ್ತು ನಿರೀಕ್ಷಿತ ಚಿತ್ರಗಳ ನಿರ್ವಪಕರು ಬಂದಂತಿದೆ. ಶೇ.70ರಷ್ಟು ಚಿತ್ರತಂಡಗಳು ತಮ್ಮ ಸಿನಿಮಾ ಥೇಟರ್ರಗಳಲ್ಲೇ ಬಿಡುಗಡೆ ಮಾಡುವುದಕ್ಕೆ ಮುಂದಾಗಿವೆ. ಅದಕ್ಕೆ ಕಾರಣವೂ ಇದೆ. ಪ್ಯಾನ್ ಇಂಡಿಯಾ ಚಿತ್ರಗಳು ದೇಶಾದ್ಯಂತ ಬಿಡುಗಡೆಯಾಗುವುದರಿಂದ, ಆ ಚಿತ್ರಗಳಿಗೆ ಪ್ರೇಕ್ಷಕರ ವರ್ಗ ದೊಡ್ಡದಿರುತ್ತದೆ. ಬೇರೆ ಮೂಲಗಳಿಂದ (ಒಟಿಟಿ ಮತ್ತು ಸ್ಯಾಟ್ಲೈಟ್) ಅದೆಷ್ಟೇ ಹಣ ಹರಿದುಬಂದರೂ, ಅದರಿಂದ ಚಿತ್ರತಂಡದವರು ಹಾಕಿದ ಹಣ ವಾಪಸ್ಸು ಮರಳಿಬಂದರೂ, ಥೇಟರ್ಗಳಿಂದ ಬರುವ ಲಾಭಕ್ಕೆ ಸರಿಸಮವಲ್ಲ. ಲಾಭ-ನಷ್ಟದ ವಿಷಯ ಪಕ್ಕಕ್ಕಿಟ್ಟು ನೋಡಿದರೆ, ಥೇಟರ್ಗಳಿಂದ ಚಿತ್ರದ ಕುರಿತಾಗಿ ಒಂದು ಸ್ಪಷ್ಟತೆ ಸಿಗುತ್ತದೆ. ಎಷ್ಟು ಜನ ನೋಡಿದ್ದಾರೆ, ಅವರ ಪ್ರತಿಕ್ರಿಯೆ ಏನು, ಅವರು ಏನು ನಿರೀಕ್ಷಿಸುತ್ತಾರೆ ಎಂಬ ವಿಷಯ ಗೊತ್ತಾಗುತ್ತದೆ. ಆದರೆ, ಒಟಿಟಿ ಅಥವಾ ಟಿವಿ ಚಾನಲ್ನಲ್ಲಿ ಚಿತ್ರಗಳು ಪ್ರಸಾರವಾದರೆ, ಸ್ಪಷ್ಟತೆ ಸಿಗುವುದಿಲ್ಲ.
ಪ್ರಮುಖವಾಗಿ, ಚಿತ್ರಮಂದಿರಗಳಲ್ಲಿ ಒಂದು ಟಿಕೆಟ್ಗೆ ಒಂದು ತಲೆ ಲೆಕ್ಕ. ಆದರೆ, ಟಿವಿ ಮತ್ತು ಒಟಿಟಿಯಲ್ಲಿ ಹಾಗಲ್ಲ. ಒಬ್ಬರು ಚಂದಾದಾರರಾದರೆ, ಅವರ ಲೆಕ್ಕದಲ್ಲಿ ಎಷ್ಟ್ಟು ಜನ ಬೇಕಾದರೂ ನೋಡಬಹುದು. ಹಾಗಾಗಿ, ನಿರ್ದಿಷ್ಟವಾಗಿ ಎಷ್ಟು ಜನ ನೋಡಿರಬಹುದು ಎಂಬ ಲೆಕ್ಕ ಸಿಗುವುದಿಲ್ಲ. ಇನ್ನು, ಎಷ್ಟು ಚಂದಾದಾರರು ನೋಡಿದರು ಎಂಬ ಲೆಕ್ಕ ಒಟಿಟಿಯವರಿಗೆ ಸಿಗುತ್ತದಾದರೂ ಬಹಳಷ್ಟು ಬಾರಿ ಆ ವಿಷಯವನ್ನು ಅವರು ಬಹಿರಂಗಪಡಿಸುವುದಿಲ್ಲ. ಸುಶಾಂತ್ ಸಿಂಗ್ ರಜಪೂತ್ ಅಭಿನಯದ ‘ದಿಲ್ ಬೇಚಾರಾ’ ಚಿತ್ರವನ್ನು ಒಂದೇ ದಿನ ಜಗತ್ತಿನಾದ್ಯಂತ 94 ಮಿಲಿಯನ್ ಜನರು ನೋಡಿದ್ದಾರೆ ಎಂಬ ವಿಷಯವನ್ನು ಬಹಿರಂಗಗೊಳಿಸಲಾಗಿತ್ತು. ಆದರೆ, ಎಲ್ಲ ಚಿತ್ರಗಳ ಕುರಿತಾಗಿ ಆ ವಿಷಯ ಬಹಿರಂಗಗೊಳ್ಳುವುದಿಲ್ಲ. ಆಗಸ್ಟ್ 12ರಂದು ಬಿಡುಗಡೆಯಾಗಿ ಸ್ಟ್ರೀಮ್ ಆಗುತ್ತಿರುವ ‘ಶೇರ್ಷಾ’ ಚಿತ್ರವು, ಅಮೇಜಾನ್ ಪ್ರೖೆಮ್ ಇಂಡಿಯಾದಲ್ಲೇ ಅತೀ ಹೆಚ್ಚು ವೀಕ್ಷಣೆ ಕಂಡ ಸಿನಿಮಾ ಎಂದು ಆ ಸಂಸ್ಥೆ ಹೇಳಿಕೊಂಡಿದೆಯಾದರೂ, ಎಷ್ಟು ವೀಕ್ಷಣೆಯಾಗಿದೆ ಎಂಬ ವಿಷಯ ಬಹಿರಂಗಪಡಿಸಿಲ್ಲ.
ಚಿತ್ರಮಂದಿರಗಳಲ್ಲಿ ಚಿತ್ರ ನೋಡುವ ಅನುಭವವೇ ಬೇರೆ, ಅದು ಖುಷಿ ಕೊಡುವಂಥದ್ದು, ಮೊಬೈಲ್ ಅಥವಾ ಲ್ಯಾಪ್ಟಾಪ್ನಲ್ಲಿ ನೋಡುವ ಸೀಮಿತ ಅನುಭವ ಬೇರೆ. ಎಲ್ಲ ಚಿತ್ರತಂಡದವರು ತಮ್ಮ ಚಿತ್ರ ವಿಭಿನ್ನವಾಗಿ ಬರಲಿ ಎಂದು ಸೌಂಡಿಂಗ್ ಆಗಲೀ, ವಿಷ್ಯುಯಲ್ಗಳಲ್ಲಾಗಲೀ ಸಾಕಷ್ಟು ಪ್ರಯೋಗ ಮಾಡಿರುತ್ತಾರೆ. ಅವೆಲ್ಲದರ ಅನುಭವ ಮೊಬೈಲ್ನಲ್ಲಿ ಆಗುವುದಿಲ್ಲ. ಹಾಗಾಗಿ, ಬಹಳಷ್ಟು ಜನ ಸಿನಿಮಾಗಳನ್ನು ಥೇಟರ್ಗಳಲ್ಲೇ ಬಿಡುಗಡೆ ಮಾಡುವುದಕ್ಕೆ ಎದುರು ನೋಡುತ್ತಿದ್ದಾರೆ. ಹಾಗಾಗಿ, ಕರೊನೋತ್ತರ ದಿನಗಳಲ್ಲಿ ಥೇಟರ್ಗಳಿಗೆ ಜನ ಬರುವುದಿಲ್ಲ ಎಂಬ ನಂಬಿಕೆ ಇದೆಯಾದರೂ, ಚಿತ್ರರಂಗದವರು ಮಾತ್ರ ಚಿತ್ರಮಂದಿರಗಳನ್ನೇ ಬಲವಾಗಿ ನಂಬಿಕೊಂಡಿದ್ದಾರೆ.