ಅಂಕಣ

ಬೆಳಗಿನ ಉಪಾಹಾರ ಏಕೆ ಮುಖ್ಯ?; ಉತ್ತಮ ಆರೋಗ್ಯಕ್ಕೆ ರುಚಿ, ಶುಚಿ ಆಹಾರ..

Webdesk - Ravikanth

ಕೆಲವರಿಗೆ ಕೆಲಸದ ಒತ್ತಡ, ಇನ್ನು ಹಲವರಿಗೆ ಸೋಮಾರಿತನ. ಮಾಡಿದ್ದನ್ನು ತಿನ್ನಲೂ ಆಗದಷ್ಟು ಕೆಲಸ ಕೆಲಸ ಕೆಲಸ.... ಹೀಗೆ ಅನೇಕ ಕಾರಣದಿಂದ ಮಹಿಳೆಯರು ಬೆಳಗಿನ ಉಪಾಹಾರ ಸ್ಕಿಪ್ ಮಾಡುವುದೂ ಉಂಟು. ಇನ್ನೇನು ಮನೆ ಕೆಲಸವೆಲ್ಲ ಮುಗಿಸುವುದರೊಳಗೆ ಮಧ್ಯಾಹ್ನವಾಗುತ್ತದೆ. ಎರಡನ್ನೂ ಒಂದೇ ಬಾರಿ ಮಾಡಿದರಾಯಿತು ಎಂದುಕೊಂಡು ಸುಮ್ಮನಾಗುತ್ತಾರೆ. ಆದರೆ ಇದು ಆರೋಗ್ಯದ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂಬುದನ್ನು ಒಮ್ಮೆ ಯೋಚಿಸಿದ್ದೀರಾ? ಪ್ರತಿಯೊಬ್ಬರಿಗೂ ಬೆಳಗಿನ ಉಪಾಹಾರ ಅತಿಮುಖ್ಯ. ಬೆಳಗ್ಗೆ ತಿಂಡಿ ಮಿಸ್ ಮಾಡಿದರೆ ಮುಂದೆ ನೀವೇ ಬೆಲೆ ತೆರಬೇಕಾದೀತು...

| ಡಾ. ಶ್ರೀಲತಾ ಪದ್ಯಾಣ

ಬೆಳಗಿನ ಉಪಾಹಾರ ಮಾಡುವುದರಿಂದ ಹಲವಾರು ಪ್ರಯೋಜನಗಳಿದ್ದು, ಇದರಿಂದ ದೇಹ ಮತ್ತು ಮಿದುಳಿಗೆ ಅಗತ್ಯ ಪೋಷಕಾಂಶ ದೊರೆಯುತ್ತದೆೆ. ಇದು ಹಸಿವು ನಿಯಂತ್ರಿಸಲು ಸಹಾಯ ಮಾಡುತ್ತದೆ. ದಿನವಿಡೀ ಪದೇ ಪದೆ ತಿನ್ನುವ ಹಂಬಲ ಕಡಿಮೆ ಮಾಡುತ್ತದೆ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಬೆಳಗಿನ ಉಪಹಾರದಲ್ಲಿ ಹಣ್ಣು, ತರಕಾರಿ, ಲಿಂಬೆ, ನೀರು, ಸಾಕಷ್ಟು ನಾರು ಇರುವ ಆಹಾರ, ಹಾಲು, ಮೊಸರು ಸೇವಿಸಿದರೆ ರೋಗ ನಿರೋಧಕ ಶಕ್ತಿ ಅತ್ತುತ್ಯಮವಾಗುತ್ತದೆ. ಉಪಾಹಾರ ಸೇವನೆಯಿಂದ ಮಕ್ಕಳಲ್ಲಿ ಉತ್ತಮ ಬೆಳವಣಿಗೆಯೊಂದಿಗೆ, ಏಕಾಗ್ರತೆ ಹೆಚ್ಚಿಸುತ್ತದೆ ಹಾಗೂ ಶೈಕ್ಷಣಿಕ ಕಾರ್ಯಕ್ಷಮತೆ ವೃದ್ಧಿಯಾಗಿ, ದೈಹಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆ ಹೆಚ್ಚಾಗಿ, ಸ್ಥೂಲಕಾಯತೆಯ ಅಪಾಯ ಕಡಿಮೆ ಮಾಡುತ್ತದೆ ಮತ್ತು ಸಂಪೂರ್ಣ ದಿನ ಲವಲವಿಕೆಯಿಂದಿರಲು ಸಹಾಯ ಮಾಡುತ್ತದೆ.

ತಿಂಡಿ ಏನಿದ್ದರೆ ಒಳ್ಳೆಯದು?: ಬೆಳಗಿನ ತಿಂಡಿ ಆರೋಗ್ಯಕರವಾಗಿರಲಿ, ತಿಂಡಿಯಲ್ಲಿ ಹೆಚ್ಚು ಪೊ›ೕಟಿನ್​ಭರಿತ ಆಹಾರಕ್ಕೆ ಆದ್ಯತೆ ಇರಲಿ. ಮೊಳಕೆಭರಿತ ಕಾಳು, ಬೇಳೆಕಾಳು ಬೆರೆಸಿ ತಯಾರಿಸಿದ ತಿಂಡಿಗಳಾದ ಇಡ್ಲಿ, ದೋಸೆ, ಪೊಂಗಲ್ ಉತ್ತಮ. ಬೆಳಗಿನ ಉಪಾಹಾರದಲ್ಲಿ ಪೋಷಕಾಂಶಗಳು ಹೆಚ್ಚಾಗಿರುವಂತೆ ನೋಡಿಕೊಳ್ಳಬೇಕು. ಹಸಿ ತರಕಾರಿ ಹಾಗೂ ಹಣ್ಣುಗಳನ್ನು ತಿನ್ನುವುದು ಹೆಚ್ಚು ಉಪಯುಕ್ತ. ಇದರಿಂದ ದೇಹಕ್ಕೆ ಬೇಕಾಗಿರುವ ಎಲ್ಲ ರೀತಿಯ ವಿಟಮಿನ್, ಲವಣಾಂಶ ಮತ್ತು ನಾರಿನಾಂಶ ದೊರಕುತ್ತದೆ. ಚಪಾತಿ, ಅವಲಕ್ಕಿ, ಮೊಳಕೆಕಾಳು, ಹಣ್ಣುಗಳ ಸಲಾಡ್, ಹಾಲು, ಮೊಸರು, ಇಡ್ಲಿ, ದೋಸೆ, ಪೊಂಗಲ್ ಇತ್ಯಾದಿ ಸೇವಿಸುವುದು ಉತ್ತಮ. ಪ್ರತಿದಿನದ ಉಪಾಹಾರದಲ್ಲಿ ಬದಲಾವಣೆ ಮಾಡುವುದರಿಂದ ವೈವಿಧ್ಯಮಯ ಪೋಷಕಾಂಶಗಳ ಲಭ್ಯತೆ ಆಗುತ್ತದೆ. ತಿಂಡಿಯಲ್ಲಿ ಕರಿದ ಪದಾರ್ಥ, ಮೈದಾ ಹಿಟ್ಟು ಬಳಸಿ ತಯಾರಿಸಿದ ಪದಾರ್ಥ, ಕೃತಕ ಹಣ್ಣಿನ ಜ್ಯೂಸ್, ಮಾಂಸ ಬಳಕೆ ಹಾಗೂ ಹೆಚ್ಚು ಸಿಹಿ ಪದಾರ್ಥ ವರ್ಜಿಸುವುದು ಒಳ್ಳೆಯದು. ಉಪಾಹಾರ ದೇಹದ ಸಂಪೂರ್ಣ ಆರೋಗ್ಯಕ್ಕೆ ತಳಹದಿ ಎನ್ನಬಹುದು. ಹಾಗೆಯೆ ಅಗತ್ಯ ಪೋಷಕಾಂಶ ಒದಗಿಸುವಂತಿದ್ದರೆ ಮಾತ್ರ ಆರೋಗ್ಯಕ್ಕೆ ಸಹಕಾರಿ. ತಯಾರಿಸುವ ಆಹಾರವು ಶುಚಿ ರುಚಿಯೊಂದಿಗೆ ಹಿತ ಮಿತವಾಗಿದ್ದರೆ ಉತ್ತಮ ಆರೋಗ್ಯ ಪಡೆಯಬಹುದು.

ಯಾವಾಗ ಮಾಡಬೇಕು?: ಉಪಾಹಾರ ಹೇಗೆ, ಯಾವಾಗ ಮಾಡಬೇಕು ಎಂದು ತಿಳಿಯುವುದು ಅತಿ ಮುಖ್ಯ. ಬೆಳಗ್ಗೆ ಎದ್ದ ನಂತರ ಎರಡು ಗಂಟೆಯೊಳಗೆ ತಿಂಡಿ ಸೇವಿಸಬೇಕು. ಈ ತಿಂಡಿಯಲ್ಲಿ ಗುಣಮಟ್ಟದ ಸಸಾರಜನಕ ಹಾಗೂ ಅವಶ್ಯಕ ಪೋಷಕಾಂಶ ಇರಬೇಕು. ಬೆಳಗಿನ ಸಮಯದಲ್ಲಿ ನಮ್ಮ ದೇಹಕ್ಕೆ ಶಕ್ತಿ ಅವಶ್ಯಕತೆ ಹೆಚ್ಚಿಗೆ ಇರುತ್ತದೆ ಮತ್ತು ಎಷ್ಟೇ ತಿಂದರೂ ಜೀರ್ಣಿಸಿಕೊಳ್ಳಲು ಸುಲಭ ಕೂಡ. ತಿಂಡಿಯ ಜತೆ ಒಂದು ಬಟ್ಟಲು ಹಸಿ ತರಕಾರಿ, ಹಣ್ಣು ಇದ್ದರೆ ಇನ್ನೂ ಉತ್ತಮ. ಸರಿಯಾದ ಸಮಯಕ್ಕೆ ತಿಂಡಿ ಸೇವನೆ ಮಾಡುವುದು ಅತಿ ಮುಖ್ಯ. ಇದರಿಂದ ಮಿದುಳಿಗೆ ಸರಿಯಾದ ಪ್ರಮಾಣದಲ್ಲಿ ಗ್ಲೂಕೋಸ್ ದೊರೆತು ಸಮರ್ಪಕವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಉಪಾಹಾರ ಸೇವಿಸಿದರೆ ದೇಹಕ್ಕೆ ಶಕ್ತಿ ಸಿಗುತ್ತದೆ. ಇದರಿಂದ ದಿನವಿಡೀ ಉಲ್ಲಾಸದಿಂದ ಕೆಲಸ ಮಾಡಬಹುದು. ಆದರೆ ಸೇವಿಸುವ ಉಪಾಹಾರ ಆರೋಗ್ಯಕರವಾಗಿರಬೇಕು.